ದೇವರ ಆರೈಕೆಯಿಂದ ನಾನು ಪ್ರಯೋಜನ ಹೊಂದಿದ ವಿಧ
ಮೇ 18, 1963ರ ಮುಂಜಾನೆಯಂದು ನಾನು ಎಂದಿಗಿಂತಲೂ ಹೆಚ್ಚು ಸಂತೋಷಿತಳಾಗಿ ಎದ್ದೆ. ಅದು ಒಂದು ಮನೋಹರವಾದ, ಬೆಚ್ಚಗೆನ ಬಿಸಿಲಿನ ದಿನದ ಆರಂಭವಾಗಿತ್ತು. ಆದರೆ ಆ ದಿನ ನನಗೆ ಯಾಕಷ್ಟು ವಿಶೇಷವಾಗಿತ್ತೆಂದು ನಾನು ವಿವರಿಸುವ ಮುಂಚೆ, ನನ್ನ ಕುರಿತಾಗಿ ಸ್ವಲ್ಪ ವಿಷಯವನ್ನು ನಿಮಗೆ ಹೇಳಲು ಅನುಮತಿಸಿರಿ.
1932, ಮೇ 20ರಂದು, ಅಮೆರಿಕ ಪೆನ್ಸಿಲ್ವೇನಿಯದ, ಫಿಲಡೆಲ್ಫಿಯದಲ್ಲಿ ನಾಲ್ಕು ಹೆಣ್ಣು ಮಕ್ಕಳ ಒಂದು ಕುಟುಂಬದಲ್ಲಿ ಕಿರಿಯ ಹುಡುಗಿಯಾಗಿ, ನಾನು ಜನಿಸಿದೆ. ನಾನು ಎರಡು ವರ್ಷ ಪ್ರಾಯದವಳಾಗಿದ್ದಾಗ ನನ್ನ ತಾಯಿ ಸತ್ತರು, ಮತ್ತು ನಾನು ಐದು ವರ್ಷ ಪ್ರಾಯದವಳಾಗಿದ್ದಾಗ ತಂದೆಯವರು ಪುನಃ ಮದುವೆಯಾದರು. ಸಮಯಾನಂತರ ನಮ್ಮ ಕುಟುಂಬಕ್ಕೆ ಆರು ಕಿರಿಯ ಸಹೋದರಸಹೋದರಿಯರು ಕೂಡಿಸಲ್ಪಟ್ಟರು. ನಾವು ಬ್ಯಾಪಿಸ್ಟ್ಗ್ಟಳಾಗಿದೆವ್ದು, ಮತ್ತು ಒಂದು ಸಮಯದಲ್ಲಿ ನಾನು ಒಬ್ಬ ಸಂಡೇ ಸ್ಕೂಲ್ ಶಿಕ್ಷಕಿಯಾಗುವ ಕುರಿತಾಗಿಯೂ ಯೋಚಿಸಿದೆ.
ನಾನು ಸಂಧಿವಾತದೊಂದಿಗೆ ಜನಿಸಿದ್ದೆ, ಇದು ತುಂಬ ಕಷ್ಟಕರವಾದ ಬಾಲ್ಯಕ್ಕೆ ನೆರವು ನೀಡಿತು. ವರ್ಷಗಳು ಸಂದಂತೆ ನನ್ನ ಪರಿಸ್ಥಿತಿ ಹೆಚ್ಚು ಕೆಡುವುದೆಂದು ಒಬ್ಬ ವೈದ್ಯರು ನಾನು ಒಂಬತ್ತು ವರ್ಷ ವಯಸ್ಸಿನವಳಾಗಿದ್ದಾಗ ನನಗೆ ಹೇಳಿದರು. ದುಃಖಕರವಾಗಿ ಅವರ ಮುನ್ನುಡಿಯು ಸತ್ಯವಾಗಿ ಪರಿಣಮಿಸಿತು. ನಾನು 14 ವರ್ಷ ವಯಸ್ಸಿನವಳಾದಷ್ಟಕ್ಕೆ, ನಾನು ಇನ್ನು ಮೇಲೆ ನಡೆಯಲಶಕ್ತಳಾದೆ. ಕಟ್ಟಕಡೆಗೆ ನನ್ನ ಕೈಗಳು, ಪಾದಗಳು ಮತ್ತು ಕಾಲುಗಳು ಸಂಪೂರ್ಣವಾಗಿ ಕುಂಟಾದವು, ಮತ್ತು ನನ್ನ ಟೊಂಕಗಳು ಸೆಡೆದುಕೊಂಡವು. ನನ್ನ ಬೆರಳುಗಳು ಎಷ್ಟು ವಿಕಾರವಾದವೆಂದರೆ, ನನಗೆ ಬರೆಯಲು ಅಥವಾ ವಸ್ತುಗಳನ್ನು ಎತ್ತಿಕೊಳ್ಳುವುದು ಸಹ ಕಷ್ಟಕರವಾಗಿತ್ತು. ನನ್ನ ಪರಿಸ್ಥಿತಿಯ ಕಾರಣದಿಂದಾಗಿ, ನಾನು ಸಾರ್ವಜನಿಕ ಶಾಲೆಗೆ ಹಿಂದಿರುಗಲಶಕ್ತಳಾದೆ.
14ನೆಯ ವಯಸ್ಸಿನಲ್ಲಿ ನಾನು ಆಸ್ಪತ್ರೆಗೆ ದಾಖಲು ಮಾಡಲ್ಪಟ್ಟಾಗ ನಾನು ಸಂತೋಷಿತಳಾಗಿದ್ದೆ ಯಾಕಂದರೆ, ಅವರಿಗೆ ಸಹಾಯ ಮಾಡಲಿಕ್ಕಾಗಿ ಚಿಕ್ಕಪುಟ್ಟ ವಿಷಯಗಳನ್ನು ಮಾಡಲು ದಾದಿಯರು ನನಗೆ ಅನುಮತಿಸುತ್ತಿದ್ದರು. ನಾನು ಈ ಕೆಲಸವನ್ನು ತುಂಬ ಆನಂದಿಸಿದೆ. ಆನಂತರ, ನಾನು ಒಬ್ಬಳೇ ಎದ್ದು ಕುಳಿತುಕೊಳ್ಳಲಾರದ ಸ್ಥಿತಿಯನ್ನು ತಲಪಿದೆ. ನನಗೆ ಸಹಾಯ ಮಾಡಲು ಅವರು ಮಾಡಬಹುದಾದ್ದದ್ದೇನೂ ಇರಲಿಲ್ಲವೆಂದು ವೈದ್ಯರು ನನ್ನ ಹೆತ್ತವರಿಗೆ ಹೇಳಿದರು, ಆದುದರಿಂದ ಆಸ್ಪತ್ರೆಯಲ್ಲಿ ಮೂರು ತಿಂಗಳುಗಳನ್ನು ಕಳೆದ ಬಳಿಕ, ನನ್ನನ್ನು ಮನೆಗೆ ಕಳುಹಿಸಲಾಯಿತು.
ಮುಂದಿನ ಎರಡು ವರ್ಷಗಳಲ್ಲಿ, ನಾನು 16 ವರ್ಷ ವಯಸ್ಸಿನವಳಾಗುವ ತನಕ, ಮಂಚದಲ್ಲಿ ಬಿದ್ದುಕೊಂಡಿರುವದಕ್ಕಿಂತ ಹೆಚ್ಚೇನನ್ನೂ ನಾನು ಮಾಡಲಿಲ್ಲ. ಸ್ವಲ್ಪ ಖಾಸಗಿ ವ್ಯಾಸಂಗವನ್ನು ಒದಗಿಸಲಾಯಿತು, ಆದರೆ ನಂತರ ನನ್ನ ಪರಿಸ್ಥಿತಿಯು ಹದಗೆಟ್ಟಿತು. ನನಗೆ, ನನ್ನ ಬಲಬದಿಯ ಕಾಲಿನ ಹರಡಿನಲ್ಲಿ ಒಂದು ಹುಣ್ಣು, ಹಾಗೂ ಸಂಧಿವಾತ ಜ್ವರ ಬಂತು, ಮತ್ತು ಇದು ನಾನು ಆಸ್ಪತ್ರೆಗೆ ಹಿಂದಿರುಗುವುದನ್ನು ಅವಶ್ಯಪಡಿಸಿತು. ಅಲ್ಲಿ ನಾನು 17 ವರ್ಷ ಪ್ರಾಯದವಳಾದೆ. ಪುನಃ ಒಮ್ಮೆ ನಾನು ಆಸ್ಪತ್ರೆಯಲ್ಲಿ ಮೂರು ತಿಂಗಳು ಉಳಿದೆ. ನಾನು ಮನೆಗೆ ಹಿಂದಿರುಗಿದಾಗ, ಇನ್ನು ಮುಂದೆ ಖಾಸಗಿ ವ್ಯಾಸಂಗಕ್ಕೆ ಅರ್ಹಳಾಗಿರಲಿಲ್ಲ.
ನಾನು 20 ವರ್ಷವನ್ನು ಸಮೀಪಿಸುತ್ತಿದ್ದಂತೆ, ನಾನು ತುಂಬ ಸಂಕಟಕ್ಕೆ ಈಡಾದೆ ಮತ್ತು ನನ್ನ ಹೆಚ್ಚಿನ ಸಮಯವನ್ನು ಅಳುವುದರಲ್ಲಿ ಕಳೆದೆ. ಒಬ್ಬ ದೇವರಿದ್ದಾನೆಂದು ನನಗೆ ತಿಳಿದಿತ್ತು, ಮತ್ತು ನನಗೆ ಸಹಾಯ ಮಾಡಲು ನಾನು ಅನೇಕ ಸಲ ಆತನಿಗೆ ಪ್ರಾರ್ಥಿಸಿದೆ.
ಭವಿಷ್ಯತ್ತಿಗಾಗಿ ಒಂದು ನಿರೀಕ್ಷೆ
ನನ್ನ ಕಾಲಿನ ಹರಡಿಗಾಗಿ ಹೆಚ್ಚಿನ ಚಿಕಿತ್ಸೆಯನ್ನು ಪಡೆಯಲು ಫಿಲಡೆಲ್ಫಿಯ ಜನರಲ್ ಆಸ್ಪತ್ರೆಯಲ್ಲಿದ್ದಾಗ, ಮಿರ್ಯಮ್ ಕೆಲುಮ್ ಎಂಬ ಹೆಸರಿನ ಒಬ್ಬ ಎಳೆಯ ಹುಡುಗಿಯೊಂದಿಗೆ ನಾನು ಕೋಣೆಯಲ್ಲಿ ಭಾಗಿಯಾದೆ. ನಾವು ಸ್ನೇಹಿತರಾದೆವು. ಮಿರ್ಯಮಳ ಸಹೋದರಿ ಕ್ಯಾತರಿನ್ ಮೈಲ್ಸ್ ಭೇಟಿ ನೀಡಿದಾಗ, ಅವಳು ನನ್ನೊಂದಿಗೆ ಬೈಬಲಿನಿಂದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಳು. ನಾನು ಆಸ್ಪತ್ರೆಯಿಂದ ಬಿಡುಗಡೆ ಮಾಡಲ್ಪಟ್ಟಾಗ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದ ಕ್ಯಾತರಿನ್ಳೊಂದಿಗೆ ಸಂಪರ್ಕವಿಡಲು ನಾನು ಯಾವಾಗಲೂ ಹೇಗಾದರೂ ಶಕ್ತಳಾದೆ.
ಅಸಂತೋಷಕರವಾಗಿ, ನನ್ನ ಮಲತಾಯಿ ನನ್ನನ್ನು ಹೆಚ್ಚು ಇಷ್ಟಪಡುತ್ತಿರಲಿಲ್ಲ. ನಾನು 25 ವರ್ಷ ವಯಸ್ಸಿನವಳಾದಾಗ ನನ್ನ ಅಕ್ಕಂದಿರಲ್ಲಿ ಒಬ್ಬಳ ಮನೆಯಲ್ಲಿ ಜೀವಿಸಲು ಸ್ಥಳಾಂತರಿಸಿದೆ, ಮತ್ತು ಕ್ಯಾತರಿನ್ ಸಹ ಆಕಸ್ಮಿಕವಾಗಿ ತಿರುವಿನಲ್ಲಿದ್ದ ಒಂದು ಮನೆಗೆ ಸ್ಥಳಾಂತರಿಸಿದಳು. ನಾನು ಅವಳಿಗೆ ಫೋನ್ ಮಾಡಿದೆ, ಮತ್ತು ಅವಳು ದೇವರು ಸತ್ಯವಂತನೇ ಸರಿ (ಇಂಗ್ಲಿಷ್) ಪುಸ್ತಕವನ್ನು ಒಂದು ಅಧ್ಯಯನ ನೆರವಾಗಿ ಉಪಯೋಗಿಸುತ್ತಾ, ನನ್ನೊಂದಿಗೆ ಬೈಬಲನ್ನು ಅಧ್ಯಯನಿಸಲು ಆರಂಭಿಸಿದಳು. ನಾನು ಯಾವಾಗಲೂ ಕುಂಟಿಯಾಗಿಯೇ ಇರೆನು, ಮತ್ತು ಒಂದು ದಿನ ಎಲ್ಲಾ ದುಷ್ಟತನವು ತೆಗೆದುಹಾಕಲ್ಪಡುವುದೆಂಬದನ್ನು ಕಲಿಯುವುದು ಎಷ್ಟೊಂದು ಆನಂದದಾಯಕವಾಗಿತ್ತು! (ಜ್ಞಾನೋಕ್ತಿ 2:21, 22; ಯೆಶಾಯ 35:5, 6) ಪುನರುತ್ಥಾನದ ನಿರೀಕ್ಷೆ ಮತ್ತು ನನ್ನ ತಾಯಿಯನ್ನು ಪುನಃ ನೋಡುವ ಪ್ರತೀಕ್ಷೆಯೊಂದಿಗೆ, ಈ ಸತ್ಯಗಳು ನನ್ನನ್ನು ಆಕರ್ಷಿಸಿದವು.—ಅ. ಕೃತ್ಯಗಳು 24:15.
ನಾನು ಆಗಲೇ ಯೆಹೋವನ ಸಾಕ್ಷಿಗಳ ಕೂಟಗಳನ್ನು ಹಾಜರಾಗಲು ಆರಂಭಿಸಿದೆ. ಕ್ಯಾತರಿನಳ ಗಂಡನು ನನ್ನನ್ನು ಅವರ ಕಾರಿಗೆ ಎತ್ತಿಕೊಂಡು ಹೋಗಿ ರಾಜ್ಯ ಸಭಾಗೃಹಕ್ಕೆ ಕರೆದೊಯ್ಯುತ್ತಿದ್ದರು. ನಾನು ಕೂಟಗಳಿಗೆ ಹೋದಾಗ, ನನಗೆ ತೋರಿಸಲ್ಪಟ್ಟ ಪ್ರೀತಿಯಿಂದಾಗಿ ನಾನು ಪ್ರೋತ್ಸಾಹಿಸಲ್ಪಟ್ಟಿರುವ ಅನಿಸಿಕೆಯಾಗುತ್ತಿತ್ತು.
ಅಡಚಣೆಗಳನ್ನು ಜಯಿಸುವುದು
ದುಃಖಕರವಾಗಿ, ನನ್ನ ಅಕ್ಕ ಮತ್ತು ಅವಳ ಗಂಡನು ಬೇರ್ಪಟ್ಟರು, ಇದು ನಾನು ಪುನಃ ಒಮ್ಮೆ ನನ್ನ ತಂದೆ ಮತ್ತು ಮಲತಾಯಿಯೊಂದಿಗೆ ಜೀವಿಸುವುದನ್ನು ಅವಶ್ಯಪಡಿಸಿತು. ನನ್ನ ಮಲತಾಯಿಯು ಯೆಹೋವನ ಸಾಕ್ಷಿಗಳನ್ನು ತುಂಬ ವಿರೋಧಿಸುತ್ತಿದ್ದುದರಿಂದ, ನಾನು 1958ರಿಂದ 1963ರ ತನಕ ಬೈಬಲನ್ನು ಗುಪ್ತವಾಗಿ ಅಧ್ಯಯನಿಸಬೇಕಾಯಿತು. ಯೆಹೋವನ ಸಾಕ್ಷಿಗಳಲ್ಲಿ ಯಾರೊಬ್ಬರೂ ಮನೆಯೊಳಗೆ ಬರುವಂತೆ ಅವರು ಅನುಮತಿಸತ್ತಿರಲಿಲ್ಲ. ನಾನು ಬೇರೆ ಬೇರೆಯವರೊಂದಿಗೆ ಟೆಲಿಫೋನಿನ ಮೂಲಕ ಅಥವಾ ನಾನು ಆಸ್ಪತ್ರೆಯಲ್ಲಿರುತ್ತಿದ್ದಾಗ ಅಧ್ಯಯನಿಸುತ್ತಿದ್ದೆ.
ನನ್ನ ಮಲತಾಯಿಯು ಕೆಲವೊಮ್ಮೆ ನನ್ನನ್ನು ಉಣ್ಣಿಸಲು ಅಥವಾ ಸ್ನಾನ ಮಾಡಿಸಲು ನಿರಾಕರಿಸುತ್ತಿದ್ದುದು ಇನ್ನೊಂದು ಅಡಚಣೆಯಾಗಿತ್ತು. ಒಮ್ಮೆ ಅವರು ನನ್ನ ಕೂದಲನ್ನು ಎಂಟು ತಿಂಗಳುಗಳ ತನಕ ತೊಳೆಯಲಿಲ್ಲ. ಅವರು ಮೊದಲು ಸಮ್ಮತಿಸದಂತಹ ಯಾವುದೇ ಟಪಾಲನ್ನು ನಾನು ಓದುವಂತೆ ಸಹ ಅವರು ಅನುಮತಿಸತ್ತಿರಲಿಲ್ಲ. ಆದಾಗಲೂ, ಯೆಹೋವನ ಆರೈಕೆಯು ವ್ಯಕ್ತವಾಗಿತ್ತು, ಏಕಂದರೆ ನನ್ನ ಟಪಾಲು ಅವನ ಮನೆಗೆ ಕಳುಹಿಸಲ್ಪಡುವಂತೆ ನನ್ನ ತಮ್ಮನು ಅನುಮತಿಸಿದನು. ಈ ಏರ್ಪಾಡು ನಾನು ಯಾರೊಂದಿಗೆ ಪತ್ರ ವ್ಯವಹಾರ ಮಾಡುತ್ತಿದ್ದೆನೋ, ಆ ಪ್ಯಾಟ್ ಸ್ಮಿತ್ ಎಂಬ ಒಬ್ಬ ಕ್ರೈಸ್ತ ಸಹೋದರಿಯು ನನ್ನೊಂದಿಗೆ ಸಂಪರ್ಕವನ್ನಿಡಲು ಮತ್ತು ನನಗೆ ಆತ್ಮಿಕ ಪ್ರೋತ್ಸಾಹವನ್ನು ನೀಡಲು ಶಕ್ತಳಾಗುವಂತೆ ಮಾಡಿತು. ನನ್ನ ತಮ್ಮನು ನನಗೆ ಬರುತ್ತಿದ್ದ ಅವಳ ಪತ್ರಗಳನ್ನು ಗುಟ್ಟಾಗಿ ತರುತ್ತಿದ್ದನು; ನಾನು ಅವುಗಳಿಗೆ ಉತ್ತರ ನೀಡುತ್ತಿದ್ದೆ, ಮತ್ತು ಅವನು ನನ್ನ ಪತ್ರಗಳನ್ನು ಗುಟ್ಟಾಗಿ ಹೊರಗೆ ಕೊಂಡೊಯ್ಯುತ್ತಿದ್ದನು.
1963ರಲ್ಲಿ, ನಾನು ಆಸ್ಪತ್ರೆಗೆ ಹಿಂದಿರುಗಬೇಕಾಯಿತು, ಮತ್ತು ಪ್ಯಾಟ್ ಸ್ಮಿತ್ ನನ್ನೊಂದಿಗೆ ಅಲ್ಲಿ ಅಧ್ಯಯನಿಸುವುದನ್ನು ಮುಂದುವರಿಸಿದಳು. ಒಂದು ದಿನ ಅವಳು ಬಂದು ನನಗೆ ಕೇಳಿದಳು: “ನಮ್ಮ ಸರ್ಕಿಟ್ ಸಮ್ಮೇಳನದಲ್ಲಿ ನೀನು ದೀಕ್ಷಾಸ್ನಾನ ಹೊಂದಲು ಇಷ್ಟಪಡುತ್ತೀಯೋ?”
“ಹೌದು!” ಎಂದು ನಾನು ಉತ್ತರಿಸಿದೆ.
ನಾನು ರೀಹಾಬಿಲಿಟೆಷನ್ ವಾರ್ಡ್ನಲ್ಲಿದ್ದೆ ಮತ್ತು ಒಂದು ದಿನದ ಬಿಡುತಿ ಪತ್ರವನ್ನು ಪಡೆಯಸಾಧ್ಯವಿತ್ತು. ಸರ್ಕಿಟ್ ಸಮ್ಮೇಳನದ ದಿನದಂದು, ಇತರ ಸಾಕ್ಷಿಗಳೊಂದಿಗೆ ಪ್ಯಾಟ್, ನನ್ನನ್ನು ಕರೆದುಕೊಂಡು ಹೋಗಲು ಬಂದಳು. ನಾನು ದೀಕ್ಷಾಸ್ನಾನ ಹೊಂದಲಿಕ್ಕಾಗಿ ಸಹೋದರರು ನನ್ನನ್ನು ಒಂದು ತಡಕೆಯ ಮೇಲಿನಿಂದ ಎತ್ತಿಹಾಕಿ ನೀರಿನಲ್ಲಿ ಮುಳುಗಿಸಬೇಕಾಯಿತು. ಈಗ ನಾನು ಯೆಹೋವನ ಸೇವಕರಲ್ಲಿ ಒಬ್ಬಳಾಗಿದ್ದೆ! ಅದು ಮೇ 18, 1963 ಆಗಿತ್ತು, ನಾನು ಎಂದೂ ಮರೆಯದಿರುವ ಒಂದು ದಿನ!
ನರ್ಸಿಂಗ್ ಹೋಮ್ಗಳೊಳಗೆ ಮತ್ತು ಹೊರಗೆ
ನವಂಬರ್ನಲ್ಲಿ ನಾನು ಆಸ್ಪತ್ರೆಯನ್ನು ಬಿಡಬೇಕಾಗಿತ್ತು. ನಾನು ಮನೆಗೆ ಹೋಗಲು ಬಯಸಲಿಲ್ಲ ಯಾಕಂದರೆ ಅಲ್ಲಿ ಯೆಹೋವನಿಗೆ ನನ್ನ ಸೇವೆಯು ಸೀಮಿತವಾಗಿರುವದೆಂದು ನನಗೆ ತಿಳಿದಿತ್ತು. ಆದದರಿಂದ ನಾನು ಒಂದು ನರ್ಸಿಂಗ್ ಹೋಮನ್ನು ಪ್ರವೇಶಿಸಲು ಏರ್ಪಾಡುಗಳನ್ನು ಮಾಡಿದೆ. ಅಲ್ಲಿ ನಾನು, ಸಾಕ್ಷಿಗಳಿಗೆ ಮನೆ ಮನೆಯ ಶುಶ್ರೂಷೆಯಲ್ಲಿ ಸಂಪರ್ಕಿಸಲು ಕಷ್ಟಕರವಾಗುತ್ತಿದ್ದ ಜನರಿಗೆ ಪತ್ರಗಳನ್ನು ಬರೆಯುವ ಮೂಲಕ ಶುಶ್ರೂಷೆಯಲ್ಲಿ ಪಾಲು ತೆಗೆದುಕೊಳ್ಳಲಾರಂಭಿಸಿದೆ. ನಾನು ವಾರ್ತಾಪತ್ರಿಕೆಗಳಲ್ಲಿನ ಶ್ರದ್ಧಾಂಜಲಿಯ ಅಂಕಣಗಳನ್ನು ಸಹ ಓದುತ್ತಿದ್ದೆ ಮತ್ತು ಇತ್ತೀಚೆಗೆ ಸತ್ತವರ ಸಂಬಂಧಿಕರಿಗೆ, ಬೈಬಲಿನಿಂದ ಸಾಂತ್ವನದಾಯಕ ವಚನಗಳನ್ನು ಸೇರಿಸುತ್ತಾ ಬರೆಯುತ್ತಿದ್ದೆ.
ಅನಂತರ, ಮೇ 1964ರಲ್ಲಿ ನನ್ನ ಹಿರಿಯ ಅಕ್ಕ ಮತ್ತು ಅವಳ ಗಂಡನೊಂದಿಗೆ ಜೀವಿಸಲು, ನಾನು ನ್ಯೂ ಯಾರ್ಕ್ ನಗರಕ್ಕೆ ಸ್ಥಳಾಂತರಿಸಿದೆ. ಅವನು ನನಗೆ ನನ್ನ ಪ್ರಥಮ ಗಾಲಿಕುರ್ಚಿಯನ್ನು ತಂದುಕೊಟ್ಟನು, ಮತ್ತು ನಾನು ಕೂಟಗಳನ್ನು ಹಾಜರಾಗಲು ಆರಂಭಿಸಿದೆ. ನ್ಯೂ ಯಾರ್ಕ್ ನಗರದಲ್ಲಿದ್ದಾಗ, ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನನ್ನ ಪ್ರಥಮ ಭಾಷಣವನ್ನು ಕೊಡುವುದು ಎಂತಹ ಒಂದು ಆನಂದವಾಗಿತ್ತು!
1965ರ ಆದಿಭಾಗದಲ್ಲಿ, ಫಿಲಡೆಲ್ಫಿಯದಲ್ಲಿದ್ದ ಕೆಲವು ಸ್ನೇಹಿತರು ಅವರೊಂದಿಗೆ ಎರಡು ವಾರಗಳನ್ನು ಕಳೆಯುವಂತೆ ನನ್ನನ್ನು ಕೇಳಿಕೊಂಡರು. ನಾನು ಫಿಲಡೆಲ್ಫಿಯದಲ್ಲಿದ್ದಾಗ, ನನ್ನ ಅಕ್ಕ, ಅವಳು ಇನ್ನು ಮುಂದೆ ನನ್ನನ್ನು ಬಯಸುವುದಿಲ್ಲವೆಂದೂ ನಾನು ಎಲ್ಲಿ ಇದ್ದೇನೋ ಅಲ್ಲಿಯೇ ಉಳಿಯುವಂತೆ ಹೇಳುತ್ತಾ ಪತ್ರ ಬರೆದಳು. ಒಂದು ನರ್ಸಿಂಗ್ ಹೋಮನ್ನು ಪುನಃ ಪ್ರವೇಶಿಸುವಂತೆ ನಾನು ಏರ್ಪಡಿಸಿದೆ. ಅಲ್ಲಿ ಜೀವಿಸುತ್ತಿದಾಗ್ದ ನಾನು ಕೂಟಗಳಿಗೆ ಹಾಜರಾಗುವುದನ್ನು ಮತ್ತು ಪತ್ರಗಳನ್ನು ಬರೆಯುವ ಮೂಲಕ ಜನರಿಗೆ ಸಾಕ್ಷಿ ಕೊಡುವುದನ್ನು ಮುಂದುವರಿಸಿದೆ. ಈ ಸಮಯದಲ್ಲೇ ನಾನು ಆಕ್ಸಿಲಿಯರಿ ಪಯನೀಯರ್ ಕಾರ್ಯವೆಂದು ಯಾವುದನ್ನು ಕರೆಯಲಾಗುತ್ತದೋ, ಅದರಲ್ಲಿ ಭಾಗವಹಿಸುವ ಮೂಲಕ ನನ್ನ ಶುಶ್ರೂಷೆಯನ್ನು ವಿಸ್ತರಿಸಲು ಶಕ್ತಳಾದೆ.
ಪ್ರೀತಿಯುಳ್ಳ ಆರೈಕೆಯ ಗ್ರಾಹಕಳು
ಫಿಲಡೆಲ್ಫಿಯದಲ್ಲಿದ್ದ ಯೆಹೋವನ ಸಾಕ್ಷಿಗಳ ವೆಸ್ಟ್ ಕಾಂಗ್ರಿಗೇಷನ್ನಿಂದ ಕೊಡಲ್ಪಟ್ಟ ನೆರವು, ಯೆಹೋವನ ಆರೈಕೆಯ ಒಂದು ಹೆಚ್ಚಿನ ಸೂಚಕವಾಗಿತ್ತು. ನನ್ನನ್ನು ಕ್ರೈಸ್ತ ಕೂಟಗಳಿಗೆ ಕರೆದೊಯ್ಯುವದಕ್ಕೆ ಕೂಡಿಸಿ, ನನ್ನ ಶುಶ್ರೂಷೆಗಾಗಿ ನನಗೆ ಬೇಕಾಗಿದ್ದ ಲೇಖನ ಸಾಮಗ್ರಿ ಮತ್ತು ಇತರ ಸರಬರಾಯಿಗಳನ್ನು ಅವರು ನನಗೆ ಒದಗಿಸಿದರು.
ಒಬ್ಬ ಕ್ರೈಸ್ತ ಸಹೋದರಿ ಹಾಗೂ ಒಬ್ಬ ನಿವೃತ್ತ ದಾದಿಯಾಗಿದ್ದ ಮಾಡ್ ವಾಶಿಂಗ್ಟನ್ರೊಂದಿಗೆ ನಾನು ಜೀವಿಸಲು ಏರ್ಪಾಡುಗಳು ಮಾಡಲ್ಪಟ್ಟಾಗ, ಯೆಹೋವನ ಆರೈಕೆಯ ಇನ್ನೂ ಹೆಚ್ಚಿನ ಸಾಕ್ಷ್ಯವು 1970ರಲ್ಲಿ ಸಂಭವಿಸಿತು. ಅವರು ಆ ಸಮಯದಲ್ಲಿ 70ನೇ ವಯಸ್ಸನ್ನು ಸಮೀಪಿಸುತ್ತಿದ್ದರೂ, ಮುಂದಿನ ಎರಡು ವರ್ಷಗಳ ವರೆಗೆ, ಅವರು ಇನ್ನು ಮುಂದೆ ಅದನ್ನು ಮಾಡಲು ಅಶಕ್ತರಾಗುವ ತನಕ ಸಿದ್ಧಮನಸ್ಸಿನಿಂದ ನನ್ನನ್ನು ಪರಾಮರಿಸಿದರು.
ನಾನು ಮಾಡ್ರೊಂದಿಗೆ ಇದ್ದಾಗ, ಫಿಲಡೆಲ್ಫಿಯದಲ್ಲಿದ್ದ ರಿಡ್ಜ್ ಕಾಂಗ್ರಿಗೇಷನಿನ ಸಹೋದರರು, ನಾನು ಎಲ್ಲಾ ಕೂಟಗಳನ್ನು ಹಾಜರಾಗಲು ಶಕ್ತಳಾಗುವುದನ್ನು ಖಚಿತಪಡಿಸಲು ಶ್ರದ್ಧಾಪೂರ್ವಕವಾಗಿ ಕೆಲಸಮಾಡಿದರು. ಇದು ಅವರು ಒಂದು ವಾರದಲ್ಲಿ ಮೂರು ಸಲ ನನ್ನನ್ನು ಮೂರು ಮೆಟ್ಟಲಸಾಲುಗಳ ಮೇಲೆ ಕೆಳಗೆ ಕೊಂಡೊಯ್ಯುವುದನ್ನು ಅವಶ್ಯಪಡಿಸಿತು. ನಾನು ಕೂಟಗಳಿಗೆ ಹೋಗುವಂತೆ ನನಗೆ ಇಷ್ಟು ನಂಬಿಗಸ್ತಿಕೆಯಿಂದ ಸಹಾಯ ಮಾಡಿದವರಿಗೆ ನಾನೆಷ್ಟು ಆಭಾರಿಯಾಗಿದ್ದೇನೆ!
1972ರಲ್ಲಿ, ಸಹೋದರಿ ವಾಶಿಂಗ್ಟನ್ರಿಗೆ ನನ್ನನ್ನು ಇನ್ನು ಮುಂದೆ ಪರಾಮರಿಸುವುದು ಅಸಾಧ್ಯವಾದಾಗ, ನಾನು ನನ್ನ ಸ್ವಂತ ವಾಸದ ಕೋಣೆಯನ್ನು ಪಡೆಯಲು ನಿರ್ಧರಿಸಿದೆ. ರಿಡ್ಜ್ ಕಾಂಗ್ರಿಗೇಷನಿನ ಕ್ರೈಸ್ತ ಸಹೋದರಿಯರ ಸ್ವ-ತ್ಯಾಗದ ಸಹಾಯ ಮತ್ತು ಪ್ರೀತಿಯಿಲ್ಲದೆ ಈ ಅಳವಡಿಸುವಿಕೆಯು ಸಾಧ್ಯವಾಗುತ್ತಿರಲಿಲ್ಲ. ನನ್ನನ್ನು ಉಣ್ಣಿಸಲು, ಸ್ನಾನ ಮಾಡಿಸಲು ಮತ್ತು ನನ್ನ ವೈಯಕ್ತಿಕ ಅಗತ್ಯತೆಗಳಿಗಾಗಿ ಪರಾಮರಿಸುವಂತೆ ಅವರು ಏರ್ಪಾಡುಗಳನ್ನು ಮಾಡಿದರು. ಇತರರು ಖರೀದಿ ಮತ್ತು ಇತರ ಆವಶ್ಯಕವಾದ ಸಂಗತಿಗಳ ಕಾಳಜಿ ವಹಿಸುವ ಮೂಲಕ ಸಹಾಯ ಮಾಡಿದರು.
ಪ್ರತಿ ಬೆಳಗ್ಗೆ ನನ್ನನ್ನು ಉಣ್ಣಿಸಲು ಮತ್ತು ದಿನಕ್ಕಾಗಿ ಉಡುಪನ್ನು ತೊಡಿಸಲು ಸಹೋದರಿಯರು ಬೇಗನೇ ಆಗಮಿಸುತ್ತಿದ್ದರು. ನನ್ನ ಗಾಲಿಕುರ್ಚಿಯಲ್ಲಿ ಕೂರುವಂತೆ ನನಗೆ ನೆರವು ನೀಡಿದ ಬಳಿಕ, ಅವರು ನನ್ನನ್ನು ವಾಸದ ಕೋಣೆಯ ಒಂದು ಚಿಕ್ಕ ಮೂಲೆಯಲ್ಲಿ, ಒಂದು ಕಿಟಿಕಿಯ ಬಳಿಯಲ್ಲಿರುವ ನನ್ನ ಮೇಜಿನ ಹತ್ತಿರ ದೂಡಿಕೊಂಡು ಹೋಗುತ್ತಿದ್ದರು. ಟೆಲಿಫೋನನ್ನು ಉಪಯೋಗಿಸುವ ಮೂಲಕ ಮತ್ತು ಪತ್ರಗಳನ್ನು ಬರೆಯುವ ಮೂಲಕ ಶುಶ್ರೂಷೆಯಲ್ಲಿ ತೊಡಗುತ್ತಾ ನಾನು ಅಲ್ಲಿ ಕುಳಿತುಕೊಂಡಿರುತ್ತಿದ್ದೆ. ನನ್ನ ವಾಸದ ಕೋಣೆಯ ಈ ಕ್ಷೇತ್ರವನ್ನು ನಾನು ಹಲವಾರು ದೇವಪ್ರಭುತ್ವ ದೃಶ್ಯಗಳೊಂದಿಗೆ ಅಲಂಕರಿಸಿದರ್ದಿಂದ ನಾನು ಅದನ್ನು ಪ್ರಮೋದವನ ಮೂಲೆ (ಪ್ಯಾರಡೈಸ್ ಕಾರ್ನರ್) ಎಂದು ಕರೆಯುತ್ತಿದ್ದೆ. ರಾತ್ರಿಗೆ ನನ್ನನ್ನು ಮಂಚದ ಮೇಲೆ ಹಾಕಲು ಯಾರಾದರೂ ಬರುವ ತನಕ ನಾನು ಇಡೀ ದಿನವನ್ನು ನನ್ನ ಶುಶ್ರೂಷೆಯಲ್ಲಿ ಕಳೆಯುತ್ತಿದ್ದೆ.
1974ರಲ್ಲಿ ನಾನು ಆಸ್ಪತ್ರೆಯನ್ನು ಪ್ರವೇಶಿಸುವಂತೆ ನನ್ನ ಆರೋಗ್ಯವು ಅವಶ್ಯಪಡಿಸಿತು. ನಾನು ಅಲ್ಲಿದ್ದಾಗ, ರಕ್ತವನ್ನು ತೆಗೆದುಕೊಳ್ಳುವಂತೆ ವೈದ್ಯರು ನನ್ನ ಮೇಲೆ ಒತ್ತಡ ಹಾಕಲು ಪ್ರಯತ್ನಿಸಿದರು. ನನ್ನ ಸ್ಥಿತಿಯು ಉತ್ತಮಗೊಂಡ ನಂತರ, ಸುಮಾರು ಒಂದು ವಾರದ ಬಳಿಕ, ವೈದ್ಯರಲ್ಲಿ ಇಬ್ಬರು ನನ್ನನ್ನು ಭೇಟಿಮಾಡಲು ಬಂದರು. “ಓ, ನನಗೆ ನಿಮ್ಮಿಬ್ಬರ ನೆನಪಿದೆ” ಎಂದು ನಾನು ಅವರಿಗೆ ಹೇಳಿದೆ. “ನಾನು ರಕ್ತವನ್ನು ತೆಗೆದುಕೊಳ್ಳುವಂತೆ ನೀವು ನನಗೆ ಮನಗಾಣಿಸಲು ಪ್ರಯತ್ನಿಸಿದಿರಿ.”
“ಹೌದು, ಆದರೆ ಅದು ಸಫಲವಾಗಲಿಕ್ಕಿಲ್ಲವೆಂದು ನಮಗೆ ತಿಳಿದಿತ್ತು” ಎಂದು ಅವರು ಹೇಳಿದರು. ಪುನರುತ್ಥಾನ ಮತ್ತು ಪ್ರಮೋದವನ ಭೂಮಿಯ ಕುರಿತಾದ ಬೈಬಲಿನ ವಾಗ್ದಾನದ ಕುರಿತಾಗಿ ವೈದ್ಯರಿಗೆ ಒಂದು ಸಾಕ್ಷಿಯನ್ನು ಕೊಡಲು ನನಗೆ ಒಂದು ಅವಕಾಶವಿತ್ತು.—ಕೀರ್ತನೆ 37:29; ಯೋಹಾನ 5:28, 29.
ನಾನು ಏಕಾಂಗಿಯಾಗಿ ಜೀವಿಸಿದ ಪ್ರಥಮ ಹತ್ತು ವರ್ಷಗಳಲ್ಲಿ, ನಾನು ಕ್ರೈಸ್ತ ಕೂಟಗಳನ್ನು ಹಾಜರಾಗಲು ಶಕ್ತಳಾಗಿದ್ದೆ. ನಾನು ಅಸ್ವಸ್ಥಳಾಗಿರುವ ಸಮಯಗಳನ್ನು ಬಿಟ್ಟು ನಾನು ಎಂದೂ ಅವುಗಳನ್ನು ತಪ್ಪಿಸಲಿಲ್ಲ. ಹವಾಮಾನವು ಕೆಟ್ಟದ್ದಾಗಿರುತ್ತಿದ್ದಲ್ಲಿ, ಸಹೋದರಸಹೋದರಿಯರು ನನ್ನ ಕಾಲುಗಳನ್ನು ಒಂದು ಕಂಬಳಿಯಲ್ಲಿ ಸುತ್ತಿಕೊಂಡು ಒಣಗಿರುವಂತೆ ಇಡಲು ಅವುಗಳನ್ನು ಮುಚ್ಚಿಡುತ್ತಿದ್ದರು. ಸಂದರ್ಭ ಬಂದಂತೆ ಒಬ್ಬ ಸಂಚರಣ ಮೇಲ್ವಿಚಾರಕರು ನನ್ನನ್ನು ನೋಡಲು ಬರುತ್ತಿದ್ದರು. ಅವರ ಭೇಟಿಗಳಲ್ಲಿ, ಟೆಲಿಫೋನನ್ನು ಉಪಯೋಗಿಸುವ ಮೂಲಕ ನಾನು ನಡಿಸುತ್ತಿದ್ದ ಬೈಬಲ್ ಅಭ್ಯಾಸದಲ್ಲಿ ಅವರು ನನ್ನ “ಜೊತೆಹೋಗುತ್ತಿದ್ದರು.” ಇವು ನನಗೆ ಅತೀ ಆನಂದದ ಸಮಯಗಳಾಗಿದ್ದವು.
ಕೆಡುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸುವುದು
1982ರಲ್ಲಿ, ನಾನು ಇನ್ನು ಮುಂದೆ ಮಂಚದಿಂದ ಕೆಳಗಿಳಿಯಲಾರದ ಒಂದು ಬಿಂದುವನ್ನು ತಲಪಿದೆ. ನಾನು ಕೂಟಗಳನ್ನು ಹಾಜರಾಗಲು ಸಾಧ್ಯವಿರಲಿಲ್ಲ, ಇಲ್ಲವೇ 17 ವರ್ಷಗಳಿಂದ ನಾನು ಸತತವಾಗಿ ಮಾಡಿದ್ದಂತಹ ಪಯನೀಯರ್ ಸೇವೆಯನ್ನು ಮಾಡಲು ಸಾಧ್ಯವಿರಲಿಲ್ಲ. ಈ ಪರಿಸ್ಥಿತಿಗಳು ನನಗೆ ತುಂಬಾ ದುಃಖವನ್ನು ತಂದವು ಮತ್ತು ನಾನು ಅನೇಕ ಸಲ ಅಳುತ್ತಿದ್ದೆ. ಆದಾಗಲೂ ಯೆಹೋವನ ಆರೈಕೆಯು ವ್ಯಕ್ತವಾಗಿತ್ತು—ನನ್ನ ಚಿಕ್ಕ ವಾಸದ ಕೋಣೆಯಲ್ಲಿ ಒಂದು ಸಭಾ ಪುಸ್ತಕಾಭ್ಯಾಸವನ್ನು ಇಡಲು ಕ್ರೈಸ್ತ ಹಿರಿಯರು ಏರ್ಪಡಿಸಿದರು. ಈ ಒದಗಿಸುವಿಕೆಗಾಗಿ ನಾನಿನ್ನೂ ಎಷ್ಟು ಅಭಾರಿಯಾಗಿದ್ದೇನೆ!
ನಾನು ಇಡೀ ದಿವಸ ನನ್ನ ಮಂಚಕ್ಕೆ ನಿರ್ಬಂಧಿಸಲ್ಪಟ್ಟು ನನ್ನ ಮೇಜಿನ ಹತ್ತಿರ ಹೋಗಲು ಅಶಕ್ತಳಾದುದರಿಂದ, ನನ್ನ ಎದೆಯ ಮೇಲೆ ನಾನು ಇಡುತ್ತಿದ್ದ ಒಂದು ಕಾಗದದ ತುಂಡಿನ ಮೇಲೆ ಬರೆಯುವುದನ್ನು ಅಭ್ಯಾಸ ಮಾಡಲು ಆರಂಭಿಸಿದೆ. ಮೊದಲು ನನ್ನ ಬರವಣಿಗೆಯನ್ನು ಓದಲಾಗುತ್ತಿರಲಿಲ್ಲ, ಆದರೆ ತುಂಬ ಅಭ್ಯಾಸದೊಂದಿಗೆ, ಅದು ಓದಲಾಗುವಷ್ಟು ಸ್ಪಷ್ಟವಾಗಿಯಿತು. ಸ್ವಲ್ಪ ಸಮಯಕ್ಕೆ, ಪತ್ರಗಳನ್ನು ಬರೆಯುವ ಮೂಲಕ ನಾನು ಪುನಃ ಒಂದು ಸಾಕ್ಷಿಯನ್ನು ಕೊಡಲು ಶಕ್ತಳಾದೆ ಮತ್ತು ಇದು ನನಗೆ ಸ್ವಲ್ಪ ಮಟ್ಟಗೆ ಆನಂದವನ್ನು ತಂದಿತು. ಅಸಂತೋಷಕರವಾಗಿ, ನನ್ನ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿದೆ, ಮತ್ತು ನಾನು ಶುಶ್ರೂಷೆಯ ಈ ಕ್ಷೇತ್ರದಲ್ಲಿ ಇನ್ನು ಮುಂದೆ ಭಾಗವಹಿಸಲು ಅಶಕ್ತಳಾಗಿರುವೆ.
1982ರಿಂದ ನಾನು ಒಂದು ಜಿಲ್ಲಾ ಅಧಿವೇಶನವನ್ನು ಶಾರೀರಿಕವಾಗಿ ಹಾಜರಾಗಲು ಶಕ್ತಳಾಗದಿದ್ದರೂ, ಅಧಿವೇಶನದ ಸಮಯದಲ್ಲಿ ಸಂದರ್ಭದ ಹುಮ್ಮಸ್ಸಿನೊಳಗೆ ಸೇರಲು ಪ್ರಯತ್ನಿಸುತ್ತೇನೆ. ಒಬ್ಬ ಕ್ರೈಸ್ತ ಸಹೋದರಿಯು ನನಗೆ ಒಂದು ಲಪೆಲ್ ಕಾರ್ಡನ್ನು ತಂದು ಅದನ್ನು ನನ್ನ ಮೇಲುಡುಪಿಗೆ ಸಿಕ್ಕಿಸುತ್ತಾಳೆ. ಮತ್ತು, ಫಿಲಡೆಲ್ಫಿಯದಲ್ಲಿರುವ ವೆಟರನ್ಸ್ ಸ್ಟೇಡಿಯಮ್ನಲ್ಲಿ ನಡಿಯುತ್ತಿರುವ ಒಂದು ಬೇಸ್ಬಾಲ್ ಆಟಕ್ಕೆ ನಾನು ಟೆಲಿವಿಷನನ್ನು ಹಾಕುತ್ತೇನೆ ಮತ್ತು ನಮ್ಮ ಅಧಿವೇಶನಗಳು ಅಲ್ಲಿ ನಡಿಯುತ್ತಿದ್ದಾಗ ನಾನು ಎಲ್ಲಿ ಕುಳಿತುಕೊಳ್ಳುತ್ತಿದ್ದೆ ಎಂಬದನ್ನು ನೆನಸುತ್ತೇನೆ. ನಾನು ಎಲ್ಲಕ್ಕೆ ಕಿವಿಗೊಡಲಾಗುವಂತೆ ಸಾಮಾನ್ಯವಾಗಿ, ಯಾರಾದರೂ ಅಧಿವೇಶನದ ಕಾರ್ಯಕ್ರಮವನ್ನು ರೆಕಾರ್ಡು ಮಾಡುತ್ತಾರೆ.
ಬಿಟ್ಟುಕೊಡದಿರುವುದು
ನಾನು ಹಿಂದೆ ಶುಶ್ರೂಷೆಯಲ್ಲಿ ಮಾಡುತ್ತಿದ್ದಷ್ಟನ್ನು ಮಾಡಲು ಶಕ್ತಳಾಗದಿದ್ದರೂ, ಬೈಬಲ್ ಸತ್ಯಗಳ ಕುರಿತಾಗಿ ಜನರೊಂದಿಗೆ ಮಾತಾಡುವುದರ ಕುರಿತಾಗಿ ನಾನು ಇನ್ನೂ ಪ್ರಜ್ಞೆಯುಳ್ಳವಳಾಗಿದ್ದೇನೆ. ಪಯನೀಯರ್ ಸೇವೆಯನ್ನು ಮಾಡಲು ಮತ್ತು ಅನೇಕ ಆಸಕ್ತರು ಬೈಬಲನ್ನು ಅಭ್ಯಾಸಿಸುವಂತೆ ಸಹಾಯ ಮಾಡಲು ಶಕ್ತಳಾಗಿರುವುದು ಆನಂದದ ಒಂದು ಮೂಲವಾಗಿರುತ್ತದೆ. ಕಳೆದ 22 ವರ್ಷಗಳಿಂದ ಒಬ್ಬಳೇ ಜೀವಿಸುವುದು ಸುಲಭವಾಗಿರದಿದ್ದರೂ, ಯಾವುದೇ ಅಡಚಣೆಯಿಲ್ಲದೆ ಯೆಹೋವನನ್ನು ಸೇವಿಸುವ, ನಾನು ಮನೆಯಲ್ಲಿ ಉಳಿದಿದ್ದಲ್ಲಿ ಮಾಡಲು ಅಶಕ್ತಳಾಗಿರುತಿದ್ತುದ್ದನ್ನು ಮಾಡುವ ಸ್ವಾತಂತ್ರ್ಯವನ್ನು ನಾನು ಆನಂದಿಸಿದ್ದೇನೆ.
ನನ್ನ ಸ್ವಂತ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಲು ಶ್ರದ್ಧೆಯಿಂದ ಕಾರ್ಯನಡಿಸುವ ಅಗತ್ಯವನ್ನು ಸಹ ನಾನು ಕಂಡಿದ್ದೇನೆ. ನನಗೆ ಸಹಾಯ ಮಾಡಲು ಮುಂದೆ ಬಂದಂತಹವರಿಗೆ ನಿರ್ದೇಶನವನ್ನು ಕೊಡುತ್ತಿರುವಾಗ ಕೆಲವೊಮ್ಮೆ ನನ್ನ ನುಡಿಗಳು ಯಾವಾಗಲೂ ವಿನಯಶೀಲತೆಯಿಂದ ನುಡಿಯಲ್ಪಟ್ಟಿಲ್ಲ. (ಕೊಲೊಸ್ಸೆ 4:6) ಈ ವಿಷಯದಲ್ಲಿ ನಾನು ಉತ್ತಮಗೊಳ್ಳಲು ನನಗೆ ಸಹಾಯ ಮಾಡುವಂತೆ ನಾನು ಯೆಹೋವನಿಗೆ ಪ್ರಾರ್ಥಿಸುವುದನ್ನು ಮುಂದುವರಿಸುತ್ತಿದ್ದೇನೆ. ವರ್ಷಗಳಲ್ಲೆಲ್ಲಾ ನನ್ನನ್ನು ಸಹಿಸಿಕೊಂಡುಹೋದವರೆಲ್ಲರಿಂದ ಪ್ರದರ್ಶಿಸಲ್ಪಟ್ಟ ತಾಳ್ಮೆ ಮತ್ತು ಕ್ಷಮಿಸುವ ಆತ್ಮಕ್ಕಾಗಿ ನಾನು ನಿಜವಾಗಿಯೂ ಅಭಾರಿಯಾಗಿದ್ದೇನೆ. ಅವರ ಪ್ರೀತಿಪೂರ್ವಕ ನೆರವು ಒಂದು ಅಶೀರ್ವಾದವಾಗಿದೆ, ಅದಕ್ಕಾಗಿ ನಾನು ಅವರಿಗೆ ಮತ್ತು ಯೆಹೋವನಿಗೆ ಕೃತಜ್ಞಳಾಗಿದ್ದೇನೆ.
ಹಲವಾರು ವರ್ಷಗಳಿಂದ ನಾನು ಕೂಟಗಳನ್ನು ಹಾಜರಾಗಲು ಶಾರೀರಿಕವಾಗಿ ಅಶಕ್ತಳಾಗಿದ್ದರೂ—ಅಂದಿನಿಂದ ನಾನು ಕೇವಲ ಒಮ್ಮೆ ಆಸ್ಪತ್ರೆಗೆ ಹೋಗುವದನ್ನು ಬಿಟ್ಟು ನನ್ನ ವಾಸದ ಕೋಣೆಯಿಂದ ಹೊರಗೆ ಹೋಗಿಲ್ಲ—ನಾನು ಇನ್ನೂ ಆನಂದಿತಳು ಮತ್ತು ಸಂತೋಷಿತಳು ಆಗಿದ್ದೇನೆ. ನಾನು ಕೆಲವೊಮ್ಮೆ ಖಿನ್ನಳಾಗುತ್ತೇನೆಂಬದು ಒಪ್ಪತಕ್ಕ ವಿಷಯ, ಆದರೆ ನಾನು ಆ ಸ್ಥಿತಿಯಿಂದ ಹೊರ ಬರುವಂತೆ ಯೆಹೋವನು ನನಗೆ ಸಹಾಯ ಮಾಡುತ್ತಾನೆ. ರಾಜ್ಯ ಸಭಾಗೃಹಕ್ಕೆ ಜೋಡಿಸಲ್ಪಟ್ಟಿರುವ ಒಂದು ಟೆಲಿಫೋನಿನ ಮೂಲಕ ನಾನು ಈಗ ಕೂಟಗಳನ್ನು ಆಲಿಸುವುದರಲ್ಲಿ ಆನಂದಿಸುತ್ತೇನೆ. ಪ್ರಾರ್ಥನೆ ಮತ್ತು ಆತನ ಮೇಲೆ ಭರವಸೆಯಿಡುವ ಮೂಲಕ ಯೆಹೋವನಲ್ಲಿ ಆತುಕೊಳ್ಳುವದರಿಂದ, ನನಗೆ ಎಂದೂ ಏಕಾಂಗಿಯಾಗಿರುವ ಅನಿಸಿಕೆಯಾಗಿಲ್ಲ. ಹೌದು, ಯೆಹೋವನ ಆರೈಕೆಯಿಂದ ಪ್ರಯೋಜನ ಹೊಂದಿದ್ದೇನೆಂದು ನಾನು ನಿಜವಾಗಿಯೂ ಹೇಳಬಲ್ಲೆ.—ಸಿಲೆಸ್ಟ್ ಜೋನ್ಸ್ ಹೇಳಿದಂತೆ
[ಪುಟ 34 ರಲ್ಲಿರುವ ಚಿತ್ರ]
ನಾನು ಶುಶ್ರೂಷೆಯಲ್ಲಿ ತೊಡಗುತ್ತಿದ್ದ ಈ ಕ್ಷೇತ್ರವನ್ನು ಪ್ರಮೋದವನ ಮೂಲೆಯೆಂದು ಕರೆದೆ