ಆ್ಯಂಡ್ರೂವಿನಿಂದ ನಾವು ಕಲಿತ ವಿಷಯ
ಕೆಲಸಕ್ಕೆ ನಾನು ವಾಹನವನ್ನು ಚಲಾಯಿಸಿಕೊಂಡು ಹೋದಹಾಗೆ, ಹಿಂದಿನ ಕೆಲವು ದಿನಗಳಲ್ಲಿ ಏನು ಸಂಭವಿಸಿತ್ತೊ ಅದರ ಕುರಿತಾಗಿ ಆಲೋಚಿಸುವುದನ್ನು ಉತ್ಸಾಹಗೊಳಿಸುವಂಥದ್ದಾಗಿ ನಾನು ಕಂಡುಕೊಂಡೆ. ನಾನು ಈಗ ತಾನೇ ಮಗನೊಬ್ಬನ—ನನ್ನ ಎರಡನೆಯ ಮಗುವಿನ—ತಂದೆಯಾಗಿದ್ದೆ. ಇಂದು, ನನ್ನ ಪತ್ನಿಯಾದ ಬೆಟಿ ಜೇನ್ ಮತ್ತು ನಮ್ಮ ಪುಟ್ಟ ಆ್ಯಂಡ್ರೂ ಆಸ್ಪತ್ರೆಯಿಂದ ಮನೆಗೆ ಬರುವವರಿದ್ದಾರೆ.
ಆದಾಗಲೂ, ಅವರು ಬಿಡುಗಡೆಗೊಳಿಸಲ್ಪಡುವ ಮುನ್ನ, ನನ್ನ ಪತ್ನಿಯು ಟೆಲಿಫೋನ್ ಮಾಡಿದಳು. ಆಕೆಯ ಧ್ವನಿಯಲ್ಲಿ ಕಳವಳದ ಒಂದು ನಾದವಿತ್ತು. ನಾನು ತ್ವರೆಯಾಗಿ ಆಸ್ಪತ್ರೆಗೆ ಹೋದೆ. “ಏನೋ ಆಗಿದೆ!” ಎಂಬುದು ಅವಳ ಅಭಿವಂದನೆಯಾಗಿತ್ತು. ಪೀಡಿಯಾಟ್ರಿಕ್ ಸಲಹಾವೈದ್ಯರೊಂದಿಗೆ ವೈದ್ಯರ ಹಿಂದಿರುಗುವಿಕೆಗಾಗಿ ಕಾಯುತ್ತಾ, ನಾವು ಒಟ್ಟಿಗೆ ಕುಳಿತೆವು.
ಸಲಹಾವೈದ್ಯರ ಪ್ರಥಮ ಹೇಳಿಕೆಯು ಮನಸ್ಸನ್ನು ತೀರ ಕಲಕುವಂಥ ವಾರ್ತೆಯಾಗಿತ್ತು. ಆಕೆಯು ಹೇಳಿದ್ದು: “ನಿಮ್ಮ ಮಗನಿಗೆ ಡೌನ್ಸ್ ಸಿಂಡ್ರೋಮ್ ಇದೆಯೆಂಬುದರ ಕುರಿತು ನಾವು ಪೂರ್ಣವಾಗಿ ಖಾತ್ರಿಯುಳ್ಳವರಾಗಿದ್ದೇವೆ.” ನಮ್ಮ ಮಗ ಬಹುಶಃ ಬುದ್ಧಿಮಾಂದ್ಯನಾಗಿರುವನೆಂದು ಅವರು ವಿವರಿಸಿದರು. ಕಾರ್ಯತಃ ಅವರ ಯಾವುದೇ ಹೆಚ್ಚಿನ ವಿವರಣೆಯು ಒಳಹೊಗಲಿಲ್ಲ. ನನ್ನ ಸ್ತಂಭೀಕರಿಸಲ್ಪಟ್ಟ ಮೆದುಳು ಸಕಲ ಶ್ರವಣ ಚಾಲಕಶಕ್ತಿಗಳನ್ನು ವಿಚ್ಛಿನ್ನಗೊಳಿಸಿತ್ತು. ಆದರೆ ದೃಷ್ಟಿಗೋಚರ ಚಿತ್ರಗಳು ಮನಸ್ಸಿನಲ್ಲಿ ಮೂಡುವುದನ್ನು ಮುಂದುವರಿಸಿದವು.
ಅವರು ಆ್ಯಂಡ್ರೂವನ್ನು ಎತ್ತಿ, ಏನೋ ಆಗಿದೆ ಎಂಬ ನಿಜತ್ವಕ್ಕೆ ಅವರನ್ನು ಎಚ್ಚರಿಸಿದ್ದ ವಿಷಯಗಳಲ್ಲಿ ಒಂದಕ್ಕೆ ನಮ್ಮ ಗಮನವನ್ನು ಸೆಳೆದರು. ಮಗುವಿನ ತಲೆ ಬಳಕುತ್ತಾ ಜೋಲಾಡಿತು. ಸ್ನಾಯು ದೇಹಾರೋಗ್ಯದ ಈ ಕೊರತೆಯು ನವಜನಿತ ಡೌನ್ಸ್ ಸಿಂಡ್ರೋಮ್ ಶಿಶುಗಳ ವಿಶಿಷ್ಟ ಲಕ್ಷಣವಾಗಿತ್ತು. ಸಲಹಾವೈದ್ಯರೊಂದಿಗಿನ ಮುಂದಿನ ಅಧಿವೇಶನದಲ್ಲಿ, ಅರಿತುಕೊಳ್ಳಲಿಕ್ಕಿರುವ ನಮ್ಮ ಸಾಮರ್ಥ್ಯವು ಎಷ್ಟು ನಿಧಾನವಾಗಿ ಹಿಂದಿರುಗಿತೋ ಅಷ್ಟು ನಿಧಾನವಾಗಿ ನಮ್ಮ ಮನಸ್ಸುಗಳನ್ನು ತುಂಬಿದ ಅನೇಕ ಪ್ರಶ್ನೆಗಳನ್ನು ನಾವು ಅವರಿಗೆ ಕೇಳಿದೆವು. ಅವನು ಎಷ್ಟರ ಮಟ್ಟಿಗೆ ಅಸಮರ್ಥನಾಗಿರಬಹುದು? ನಾವು ಏನನ್ನು ನಿರೀಕ್ಷಿಸಬಲ್ಲೆವು? ನಾವು ಅವನಿಗೆ ಎಷ್ಟು ಕಲಿಸಬಲ್ಲೆವು? ಅವನು ಕಲಿಯಲು ಎಷ್ಟು ಸಾಮರ್ಥ್ಯವುಳ್ಳವನಾಗಿರಬಹುದು? ನಮ್ಮ ಅನೇಕ ಪ್ರಶ್ನೆಗಳಿಗೆ ಉತ್ತರಗಳು, ಅವನು ಜೀವಿಸುವ ಪರಿಸರದ ಹಾಗೂ ಅವನ ಅಂತರ್ಗತ ಸಾಮರ್ಥ್ಯಗಳ ಮೇಲೆ ಆಧರಿಸುವವು ಎಂಬುದಾಗಿ ಅವರು ವಿವರಿಸಿದರು.
ಅಂದಿನಿಂದ 20ಕ್ಕಿಂತಲೂ ಹೆಚ್ಚು ವರ್ಷಗಳಲ್ಲಿ, ಅವನು ಪಡೆಯಲು ಯೋಗ್ಯನಾಗಿರುವ ಪ್ರೀತಿ ಮತ್ತು ವಾತ್ಸಲ್ಯವನ್ನು ಕೊಡಲು ಹಾಗೂ ನಮಗೆ ಹಂಚಸಾಧ್ಯವಿರುವ ಸಕಲವನ್ನು ಅವನಿಗೆ ಕಲಿಸಲು ನಾವು ಪ್ರಯತ್ನಿಸಿದ್ದೇವೆ. ಆದರೆ ಹಿಂದಿರುಗಿ ನೋಡುವಾಗ, ಅದು ಪೂರ್ತಿಯಾಗಿ ಕೇವಲ ಕೊಡುವ ಒಂದು ವ್ಯಾಯಾಮ ಆಗಿರಲಿಲ್ಲವೆಂಬುದನ್ನು ನಾವು ಈಗ ಗ್ರಹಿಸುತ್ತೇವೆ.
ಸ್ವಸ್ಥ ಬುದ್ಧಿವಾದ
ಆ್ಯಂಡ್ರೂವಿನ ಉಪಸ್ಥಿತಿಗೆ ಹೊಂದಿಕೊಳ್ಳಲು ನಮಗೆ ಸಮಯವಿರುವ ಮುನ್ನ, ತಮ್ಮ ಸ್ವಂತ ಪರೀಕ್ಷೆಗಳನ್ನು ತಾಳಿಕೊಂಡದ್ದರಿಂದ ಅವರು ಸಂಗ್ರಹಿಸಿದ್ದ ಬುದ್ಧಿವಾದವನ್ನು ಪ್ರೀತಿಪರ ಸ್ನೇಹಿತರು ನಮಗೆ ಕೊಟ್ಟರು. ಅವರು ಒಳ್ಳೆಯದನ್ನು ಅಭಿಪ್ರಯಿಸಿದರೂ, ನಿರೀಕ್ಷಿಸಬಹುದಾದಂತೆ, ಎಲ್ಲ ಬುದ್ಧಿವಾದವು ವಿವೇಕಯುತವಾಗಿ ಅಥವಾ ಉಪಯುಕ್ತವಾಗಿ ಪರಿಣಮಿಸಲಿಲ್ಲ. ಹಾಗಿದ್ದರೂ, ಪರೀಕ್ಷೆಯ ವರ್ಷಗಳಾನಂತರ, ಅವರ ಬುದ್ಧಿವಾದವು ವಿವೇಕದ ಎರಡು ಅತ್ಯಮೂಲ್ಯ ಹನಿಗಳಾಗಿ ಸಾಂದ್ರಗೊಳಿಸಲ್ಪಟ್ಟಿತು.
ಆ್ಯಂಡ್ರೂ ನಿಜವಾಗಿಯೂ ಮಾಂದ್ಯನಾಗಿಲ್ಲವೆಂದು ಹೇಳುವ ಮೂಲಕ ಕೆಲವರು ನಮ್ಮನ್ನು ಸಂತೈಸಲು ಪ್ರಯತ್ನಿಸಿದರು. ಆದರೆ ತದನಂತರ ಹಳೆಯ ಸ್ನೇಹಿತನೊಬ್ಬನು ಬುದ್ಧಿಹೇಳಿದ್ದು: “ಅದನ್ನು ಅಲ್ಲಗಳೆಯದಿರಿ! ಎಷ್ಟು ಬೇಗ ನೀವು ಅವನ ದೌರ್ಬಲ್ಯಗಳನ್ನು ಅಂಗೀಕರಿಸುತ್ತಿರೋ, ಅಷ್ಟು ಬೇಗ ನೀವು ನಿಮ್ಮ ನಿರೀಕ್ಷಣೆಗಳನ್ನು ಮಾರ್ಪಡಿಸಿಕೊಳ್ಳುವಿರಿ ಮತ್ತು ಅವನಿರುವಂತೆ ಅವನೊಂದಿಗೆ ಕಾರ್ಯನಡೆಸಲು ಪ್ರಾರಂಭಿಸುವಿರಿ.”
ಪ್ರತಿಕೂಲ ಪರಿಸ್ಥಿತಿಯೊಂದಿಗಿನ ವ್ಯವಹರಿಸುವಿಕೆಯಲ್ಲಿ ನಾವು ಕಲಿತಂತಹ ಅತಿ ಮುಖ್ಯವಾದ ಪಾಠಗಳಲ್ಲಿ ಅದು ಒಂದಾಗಿ ಪರಿಣಮಿಸಿತು. ಸ್ವೀಕೃತ ಮನೋಭಾವನೆಯಿರದ ತನಕ ಯಾವ ಮನಸ್ವಸ್ಥತೆಯೂ ಇರಸಾಧ್ಯವಿಲ್ಲ. ಅಲ್ಲಗಳೆಯುವಿಕೆಯು ಅನೇಕವೇಳೆ ಸಹಜ ಪ್ರವೃತ್ತಿ ಆಗಿದೆಯಾದರೂ, ಅಲ್ಲಗಳೆಯುವಿಕೆಯು ಎಷ್ಟು ದೀರ್ಘಕಾಲ ಪಟ್ಟುಹಿಡಿಯುತ್ತದೋ, ಅಷ್ಟು ದೀರ್ಘಕಾಲ ನಾವು ವಿಷಯದೊಂದಿಗೆ ನಿಭಾಯಿಸುವುದನ್ನು ಮತ್ತು ‘ಎಲ್ಲ ಮನುಷ್ಯರಿಗೆ ಸಂಭವಿಸುವ ಮುಂಗಾಣದ ಘಟನೆಗಳ’ ಮಿತಿಗಳೊಳಗೆ ಕಾರ್ಯನಡೆಸುವುದನ್ನು ಮುಂದೂಡುತ್ತೇವೆ.—ಪ್ರಸಂಗಿ 9:11, NW.
ಗತ ವರ್ಷಗಳಲ್ಲಿ ಸಾಮಾನ್ಯ ಶಾಲಾ ಪಠ್ಯಕ್ರಮದೊಂದಿಗೆ ನಿಭಾಯಿಸಲಿಕ್ಕಾಗದ ಅಥವಾ ಚಿಕಿತ್ಸಾ ಶಿಕ್ಷಣ ಕ್ರಮದೊಳಗಿರುವ ಮಕ್ಕಳನ್ನು ಹೊಂದಿರುವ ಹೆತ್ತವರನ್ನು ನಾವು ಭೇಟಿಯಾದಾಗ, ಎಷ್ಟೊಂದು ಮಕ್ಕಳು ವಾಸ್ತವವಾಗಿ ಮಾಂದ್ಯರಾಗಿರಬಹುದು ಅಥವಾ ಇತರ ರೀತಿಯಲ್ಲಿ ಅಸಮರ್ಥರಾಗಿರಬಹುದು ಎಂಬುದರ ಕುರಿತು ನಾವು ಅನೇಕವೇಳೆ ಆಶ್ಚರ್ಯಗೊಂಡಿದ್ದೇವೆ. ಅವರಲ್ಲಿ ಕೆಲವರು “ಅಗೋಚರವಾಗಿ ಅಂಗವಿಕಲರಾಗಿರುವವರ”—ಆ್ಯಂಡ್ರೂಗೆ ಅಸದೃಶವಾಗಿ ಯಾವ ಗೋಚರವಾಗುವ ಶಾರೀರಿಕ ಭಿನ್ನತೆಯಿಲ್ಲದಿರುವ ಮತ್ತು ಸಾಮಾನ್ಯ ಮಕ್ಕಳಂತೆ ಕಾಣುವವರ—ನಡುವೆ ಇರಸಾಧ್ಯವಿದೆಯೋ? ಡೌನ್ಸ್ ಸಿಂಡ್ರೋಮ್ ಅನ್ನು ಹೊಂದಿರುವ ವ್ಯಕ್ತಿಗಳನ್ನು ಸುಲಭವಾಗಿ ಗುರುತುಹಿಡಿಯಸಾಧ್ಯವಿದೆ. ಆದರೆ ಅಸಾಮರ್ಥ್ಯಗಳ ಇತರ ಬಗೆಗಳಿಗೆ ಪ್ರತ್ಯಕ್ಷ ಸೂಚನೆಗಳಿರುವುದಿಲ್ಲ. ಎಷ್ಟು ಜನ ಹೆತ್ತವರು ನೈಜವಲ್ಲದ ನಿರೀಕ್ಷಣೆಗಳಿಗೆ ಅಂಟಿಕೊಂಡು ಪ್ರತಿಯೊಬ್ಬರಿಗೆ ರೇಗಿಸುವಿಕೆಯನ್ನು ಉಂಟುಮಾಡುತ್ತಾ, ತಮ್ಮ ಮಕ್ಕಳ ದೌರ್ಬಲ್ಯಗಳ ಅಂಗೀಕರಿಸುವಿಕೆಯನ್ನು ನಿರಾಕರಿಸುತ್ತಾರೆ?—ಕೊಲೊಸ್ಸೆ 3:21ನ್ನು ಹೋಲಿಸಿರಿ.
ನಮ್ಮ ಅನುಭವವು ಸಮರ್ಥಿಸಿದ ಬುದ್ಧಿವಾದದ ಎರಡನೆಯ ಅಂಶವು ಇದಾಗಿದೆ: ನಿಮ್ಮ ಮಗುವನ್ನು ಅಧಿಕಾಂಶ ಜನರು ಹೇಗೆ ನೋಡುತ್ತಾರೆಂಬುದನ್ನು ಅಂತಿಮವಾಗಿ ನೀವು ನಿರ್ಧರಿಸುವಿರಿ. ನೀವು ಅವನನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತೀರೋ ಹಾಗೆಯೇ ಇತರರು ಸಹ ಅವನನ್ನು ನೋಡಿಕೊಳ್ಳುವುದು ಸಂಭವನೀಯ.
ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಅಂಗವಿಕಲರಾಗಿರುವವರ ಕಡೆಗಿರುವ ಜನರ ಮನೋಭಾವನೆಯಲ್ಲಿ ಹಿಂದಿನ ಕೆಲವು ದಶಕಗಳಲ್ಲಿ ಹೆಚ್ಚಿನ ವಿಷಯವು ಬದಲಾಗಿದೆ. ಆದರೆ ಈ ಬದಲಾವಣೆಗಳು ಸ್ವತಃ ಅಸಮರ್ಥರಾದ ಕೆಲವು ವ್ಯಕ್ತಿಗಳಿಂದ, ಅವರ ಸಂಬಂಧಿಕರಿಂದ, ಮತ್ತು ಇತರ ವೃತ್ತಿನಿರತರಲ್ಲದ ಹಾಗೂ ವೃತ್ತಿನಿರತ ಪಕ್ಷವಾದಿಗಳಿಂದ ಹುರಿದುಂಬಿಸಲ್ಪಟ್ಟಿವೆ. ಅನೇಕ ಹೆತ್ತವರು ತಮ್ಮ ಸಂತಾನವನ್ನು ಶಾಲೆಗೆ ಸೇರಿಸಿ ಸಾಂಸ್ಥೀಕರಿಸಲು ಧೈರ್ಯದಿಂದ ತಿರಸ್ಕರಿಸಿದ್ದಾರೆ ಮತ್ತು ಪರಿಣಾಮವಾಗಿ ಅಂಗವಿಕಲ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂಬುದರ ಮೇಲಿರುವ ಸ್ಥಾಪಿತ ಅಭಿಪ್ರಾಯವನ್ನು ತಿದ್ದಿದ್ದಾರೆ. ಐವತ್ತು ವರ್ಷಗಳ ಹಿಂದೆ, ಡೌನ್ಸ್ ಸಿಂಡ್ರೋಮ್ನ ವೈದ್ಯಕೀಯ ಪಠ್ಯಪುಸ್ತಕಗಳಲ್ಲಿ ಹೆಚ್ಚು ಪುಸ್ತಕಗಳು ಮಾನಸಿಕವಾಗಿ ಅಂಗವಿಕಲರಾಗಿರುವವರ ಆರೈಕೆಗಾಗಿರುವ ಆಶ್ರಯಾಲಯದಿಂದ ಸಂಗ್ರಹಿಸಲ್ಪಟ್ಟ ದತ್ತಾಂಶದ ಮೇಲೆ ಆಧರಿಸಿದ್ದವು. ಅನೇಕವೇಳೆ ಹೆತ್ತವರು ಮತ್ತು ಇತರರು ಹೊಸ ಮಾರ್ಗಗಳನ್ನು ಹಿಡಿದಿರುವ ಕಾರಣ, ಇಂದು ನಿರೀಕ್ಷಣೆಗಳು ಸಂಪೂರ್ಣವಾಗಿ ನವೀಕರಿಸಲ್ಪಟ್ಟಿವೆ.
ಅಧಿಕ ಸಹಾನುಭೂತಿಯನ್ನು ಕಲಿಯುವುದು
ನಾವು ಯಥಾರ್ಥವಾಗಿ ಸಹಾನುಭೂತಿಯುಳ್ಳವರಾಗಿದ್ದೇವೆ ಎಂಬುದಾಗಿ ಯೋಚಿಸುವುದರಿಂದ ನಮ್ಮನ್ನು ನಾವೇ ಎಷ್ಟು ಸುಲಭವಾಗಿ ಮೋಸಗೊಳಿಸಿಕೊಳ್ಳಬಲ್ಲೆವು ಎಂಬುದು ಸೋಜಿಗದ ಸಂಗತಿಯಾಗಿದೆ. ಆದರೆ ನಾವು ವೈಯಕ್ತಿಕವಾಗಿ ಒಳಗೂಡದ ಹೊರತು, ಅನೇಕ ಸಮಸ್ಯೆಗಳ ಕುರಿತಾಗಿ ನಮ್ಮ ಅರಿಯುವ ಸಾಮರ್ಥ್ಯವು ಅನೇಕವೇಳೆ ಬಾಹ್ಯತೋರಿಕೆಯದ್ದಾಗಿರಬಹುದು.
ಅನನುಕೂಲ ಸ್ಥಿತಿಯಲ್ಲಿರುವ ವ್ಯಕ್ತಿಗಳು ಅನೇಕವೇಳೆ ತಮ್ಮ ಪರಿಸ್ಥಿತಿಗಳ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದಿರುವುದಿಲ್ಲವೆಂಬುದನ್ನು ಗ್ರಹಿಸಲು ಆ್ಯಂಡ್ರೂವಿನ ಪರಿಸ್ಥಿತಿಯು ನಮ್ಮನ್ನು ಒತ್ತಾಯಪಡಿಸಿದೆ. ವಾಸ್ತವದಲ್ಲಿ, ದುರ್ಬಲರ, ಮಂದಗತಿಯುಳ್ಳವರ, ಮತ್ತು ವೃದ್ಧರ ಕಡೆಗೆ ನಿಜವಾಗಿಯೂ ನನ್ನ ಮನೋಭಾವನೆಯೇನಾಗಿದೆ? ಎಂಬ ಪ್ರಶ್ನೆಯನ್ನು ನಾವು ಎದುರಿಸುವಂತೆ ಅದು ಮಾಡಿದೆ.
ಅನೇಕವೇಳೆ ಆ್ಯಂಡ್ರೂವಿನೊಂದಿಗೆ ನಾವು ಒಂದು ಸಾರ್ವಜನಿಕ ಸ್ಥಳಕ್ಕೆ ಹೋಗಿದ್ದು, ಅಲ್ಲಿ ಅವನನ್ನು ನಮ್ಮ ಕುಟುಂಬದ ಒಬ್ಬ ಸಂಪೂರ್ಣ ಸದಸ್ಯನೋಪಾದಿ ನೋಡುವ ನಮ್ಮ ಅಲಜ್ಜಿತ ಅಂಗೀಕರಿಸುವಿಕೆಯನ್ನು ಗಮನಿಸುತ್ತಾ, ನಮ್ಮ ಹತ್ತಿರಬಂದು ತಮ್ಮ ಗೋಪ್ಯವಾದ ಹೊರೆಗಳನ್ನು ಹಂಚಿಕೊಂಡ ಅಪರಿಚಿತರಿದ್ದಾರೆ. ಅದು ಅವರ ಸಮಸ್ಯೆಗಳೊಂದಿಗೆ ನಾವು ಅನುಭೂತಿಯನ್ನು ತೋರಿಸಬಲ್ಲೆವೆಂಬುದನ್ನು ಅವರಿಗೆ ಆ್ಯಂಡ್ರೂವಿನ ಉಪಸ್ಥಿತಿಯು ಪುನರಾಶ್ವಾಸನೆಯನ್ನಿತ್ತಿತೋ ಎಂಬಂತಿತ್ತು.
ಪ್ರೀತಿಯ ಶಕ್ತಿ
ನಮಗೆ ಆ್ಯಂಡ್ರೂ ಕಲಿಸಿರುವ ಅತಿ ಪ್ರಾಮುಖ್ಯವಾದ ಪಾಠಗಳಲ್ಲಿ ಅತಿ ದೊಡ್ಡದು, ಪ್ರೀತಿ ಕೇವಲ ಬುದ್ಧಿಶಕ್ತಿಯ ಒಂದು ಕಾರ್ಯವಾಗಿರುವುದಿಲ್ಲ ಎಂಬುದೇ. ನಾನು ವಿವರಿಸುವಂತೆ ಬಿಡಿರಿ. ಯೆಹೋವನ ಸಾಕ್ಷಿಗಳಾಗಿ ನಮ್ಮ ಆರಾಧನೆಯ ಆಧಾರಭೂತಗಳಲ್ಲಿ ಒಂದು, ನಿಜ ಕ್ರೈಸ್ತತ್ವವು ಕುಲ, ಸಮಾಜ, ಮತ್ತು ರಾಜಕೀಯ ವಿಭಜನೆಗಳನ್ನು ಮತ್ತು ಅವಿಚಾರಾಭಿಪ್ರಾಯಗಳನ್ನು ಜಯಿಸುತ್ತದೆ ಎಂಬುದೇ. ಈ ತತ್ವದಲ್ಲಿ ಭರವಸೆಯುಳ್ಳವರಾಗಿದ್ದು, ಆ್ಯಂಡ್ರೂ ನಮ್ಮ ಆತ್ಮಿಕ ಸಹೋದರ ಮತ್ತು ಸಹೋದರಿಯರಿಂದ ಅಂಗೀಕರಿಸಲ್ಪಡುವನೆಂದು ನಮಗೆ ತಿಳಿದಿತ್ತು. ಆರಾಧನಾ ಕಾರ್ಯಕ್ರಮದಾದ್ಯಂತ ಗೌರವಪೂರ್ವಕವಾಗಿ ಕುಳಿತುಕೊಳ್ಳುವುದನ್ನು ಅವನಿಂದ ನಿರೀಕ್ಷಿಸುವುದು ಅವಾಸ್ತವಿಕತೆಯೆಂದು ಹೇಳಿದ ವೃತ್ತಿನಿರತರ ಬುದ್ಧಿವಾದವನ್ನು ತಿರಸ್ಕರಿಸುತ್ತಾ, ಅವನ ಜನ್ಮದಂದಿನಿಂದ ಅವನು ನಮ್ಮೊಂದಿಗೆ ಕೂಟಗಳಿಗೆ ಮತ್ತು ನಮ್ಮ ಸಾರುವ ಚಟುವಟಿಕೆಯಲ್ಲಿ ಮನೆಯಿಂದ ಮನೆಗೆ ಸಹ ಜತೆಗೂಡುವಂತೆ ನಾವು ನೋಡಿಕೊಂಡಿದ್ದೇವೆ. ನಿರೀಕ್ಷಿಸಿದಂತೆ, ಸಭೆಯು ಅವನನ್ನು ದಯೆಯಿಂದ ಮತ್ತು ಅನುಕಂಪದಿಂದ ನೋಡಿಕೊಳ್ಳುತ್ತದೆ.
ಆದರೆ ಇದಕ್ಕೆ ಅತೀತವಾಗಿ ಹೋಗುವವರು ಇದ್ದಾರೆ. ಅವನಿಗಾಗಿ ವಿಶೇಷ ಮಮತೆಯನ್ನು ಅವರು ಹೊಂದಿದ್ದಾರೆ. ತನ್ನ ಕುಂದಿರುವ ಬುದ್ಧಿಶಕ್ತಿಯಿಂದ, ಸಂಪೂರ್ಣವಾಗಿ ಕುಗ್ಗಿಸಲಾಗದ ಒಂದು ವಿಶೇಷ ಸಾಮರ್ಥ್ಯದಿಂದ ಆ್ಯಂಡ್ರೂ ಇದನ್ನು ಗ್ರಹಿಸುವಂತೆ ತೋರುತ್ತದೆ. ಈ ವ್ಯಕ್ತಿಗಳೊಂದಿಗೆ ತನ್ನ ಸ್ವಾಭಾವಿಕ ಸಂಕೋಚ ಪ್ರವೃತ್ತಿಯನ್ನು ಅವನು ಸುಲಭವಾಗಿ ಜಯಿಸುತ್ತಾನೆ, ಮತ್ತು ಕೂಟಗಳ ಅಂತ್ಯದಲ್ಲಿ ಅವನು ಅವರೆಡೆಗೆ ನೇರವಾಗಿ ಹೋಗುತ್ತಾನೆ. ಅವನಿಗೆ ಒಂದು ವಿಶೇಷವಾದ ಮಮತೆಯನ್ನು ತೋರಿಸುವವರನ್ನು ವಿವೇಚಿಸಲು—ಒಂದು ಗುಂಪಿನಲ್ಲಿ ಕೂಡ—ಶಕ್ತನಾಗಿರುವ ಅವನ ಹುಟ್ಟರಿವಿನ ಸಾಮರ್ಥ್ಯವನ್ನು ನಾವು ಪದೇ ಪದೇ ಗಮನಿಸಿದ್ದೇವೆ.
ಅವನ ಪ್ರೀತಿಯ ಪ್ರದರ್ಶಿಸುವಿಕೆಯ ಸಂಬಂಧದಲ್ಲಿ ಅದೇ ವಿಷಯವು ನಿಜವಾಗಿ ಪರಿಣಮಿಸಿದೆ. ಆ್ಯಂಡ್ರೂ ಶಿಶುಗಳಿಗೆ, ವೃದ್ಧ ಜನರಿಗೆ, ಮತ್ತು ಮುದ್ದಿನ ಪ್ರಾಣಿಗಳಿಗೆ ಬಹಳ ಸೌಮ್ಯವುಳ್ಳವನಾಗಿದ್ದಾನೆ. ಕೆಲವೊಮ್ಮೆ, ನಮಗೆ ಗೊತ್ತಿಲ್ಲದ ಯಾರೋ ಒಬ್ಬರ ಶಿಶುವನ್ನು ಅವನು ಹಿಂದುಮುಂದು ನೋಡದೆ ಸಮೀಪಿಸುವಾಗ, ಆ್ಯಂಡ್ರೂ ಉದ್ದೇಶಪೂರ್ವಕವಿಲ್ಲದೆ ಬಹಳ ಒರಟಿನಿಂದ ಆಟವಾಡುವಲ್ಲಿ ಮಗುವನ್ನು ರಕ್ಷಿಸಲಿಕ್ಕೆ ಸಿದ್ಧರಾಗಿ, ನಾವು ಅವನ ಬಳಿಯಲ್ಲೇ ಇರುತ್ತೇವೆ. ಆದರೂ ಒಬ್ಬ ಮೊಲೆಯುಣಿಸುವ ತಾಯಿ ಎಷ್ಟು ಕೋಮಲವಾಗಿ ಮಗುವನ್ನು ಸ್ಪರ್ಶಿಸುವಳೋ ಅಷ್ಟೇ ಕೋಮಲವಾಗಿ ಅವನು ಮಗುವನ್ನು ಸ್ಪರ್ಶಿಸುವುದನ್ನು ನಾವು ಗಮನಿಸಿದಾಗ ನಮ್ಮ ಭಯಗಳಿಗಾಗಿ ನಾವು ಎಷ್ಟೊಂದು ಸಲ ಲಜ್ಜಿತರಾಗಿದ್ದೇವೆ!
ನಾವು ಕಲಿತಿರುವ ಪಾಠಗಳು
ತೋರಿಕೆಯಲ್ಲಿ ಡೌನ್ಸ್ ಸಿಂಡ್ರೋಮ್ ಮಕ್ಕಳೆಲ್ಲರೂ ಒಂದೇ ರೀತಿಯಾಗಿರುವ ಕಾರಣ, ಅವರೆಲ್ಲರೂ ತದ್ರೀತಿಯ ವ್ಯಕ್ತಿತ್ವಗಳನ್ನು ಹೊಂದಿರಬಹುದೆಂದು ನಾವು ನಿರೀಕ್ಷಿಸಿದ್ದೆವು. ಹಾಗಿದ್ದರೂ, ಒಬ್ಬರು ಇನ್ನೊಬ್ಬರಿಗಿಂತ ಅವರು ತಮ್ಮ ಕುಟುಂಬಕ್ಕೆ ಹೆಚ್ಚು ಹೋಲಿಕೆಯನ್ನು ಹೊಂದಿರುತ್ತಾರೆಂಬುದನ್ನು ನಾವು ಬೇಗನೆ ಕಲಿತೆವು. ಪ್ರತಿಯೊಬ್ಬರು ಒಂದು ಅಸದೃಶವಾದ ವ್ಯಕ್ತಿತ್ವವನ್ನು ಪಡೆದಿದ್ದಾರೆ.
ಅನೇಕ ಇತರ ಯೌವನಸ್ಥರಂತೆ, ಆ್ಯಂಡ್ರೂ ಪರಿಶ್ರಮದ ಕೆಲಸದಲ್ಲಿ ಆನಂದಿಸುವುದಿಲ್ಲ. ಆದರೆ ಕಾರ್ಯವೊಂದರೆಡೆಗೆ ಪದೇ ಪದೇ ಅದು ಒಂದು ಹವ್ಯಾಸವಾಗುವ ತನಕ ಅವನನ್ನು ನಡೆಸಿಕೊಂಡು ಹೋಗಲು ನಮಗೆ ತಾಳ್ಮೆ ಮತ್ತು ಸಹನೆಯಿರುವುದಾದರೆ, ಅದು ಇನ್ನುಮುಂದೆ ಅವನಿಗೆ ಒಂದು ಕೆಲಸದಂತೆ ತೋರುವುದಿಲ್ಲವೆಂಬುದನ್ನು ನಾವು ಕಂಡುಕೊಂಡೆವು. ಮನೆಯಲ್ಲಿನ ಅವನ ಸಣ್ಣಪುಟ್ಟ ಕೆಲಸಗಳು ಈಗ ಸ್ವಾಭಾವಿಕ ಲಕ್ಷಣವಾಗಿ ಪರಿಣಮಿಸಿವೆ, ಮತ್ತು ಹೆಚ್ಚಿನ ಸಣ್ಣಪುಟ್ಟ ಕೆಲಸಗಳು ಮಾತ್ರ ಕೆಲಸವೆಂಬುದಾಗಿ ಪರಿಗಣಿಸಲ್ಪಡುತ್ತವೆ.
ಆ್ಯಂಡ್ರೂವಿನ ಜೀವನದ ಅವಧಿಯಲ್ಲಿ ನಾವು ಕಲಿತಿರುವಂಥ ಪಾಠಗಳ ಕುರಿತಾಗಿ ನಾವು ಹಿಂದಿರುಗಿ ನೋಡುವಾಗ, ಒಂದು ಆಸಕ್ತಿಕರ ವಿರೋಧಾಭಾಸವು ತಲೆದೋರುತ್ತದೆ. ಆ್ಯಂಡ್ರೂವಿನ ಬೆಳೆಸುವಿಕೆಯಲ್ಲಿ ಕಾರ್ಯತಃ ನಾವು ಕಲಿತ ಎಲ್ಲ ತತ್ವಗಳು ನಮ್ಮ ಇತರ ಮಕ್ಕಳೊಂದಿಗೆ ಮತ್ತು ಇಡೀ ಜನರೊಂದಿಗಿನ ನಮ್ಮ ಸಂಬಂಧಗಳಿಗೆ ಸಮನಾಗಿ ಅನ್ವಯಿಸುವವುಗಳಾಗಿ ಪರಿಣಮಿಸಿದವು.
ಉದಾಹರಣೆಗಾಗಿ, ನಮ್ಮಲ್ಲಿ ಯಾರು ಯಥಾರ್ಥ ಪ್ರೀತಿಗೆ ಸಕಾರಾತ್ಮಕವಾಗಿ ಪ್ರತಿವರ್ತಿಸುವುದಿಲ್ಲ? ನಿಮಗಿರುವುದಕ್ಕಿಂತ ತೀರಾ ಭಿನ್ನವಾಗಿರುವ ಸಾಮರ್ಥ್ಯಗಳುಳ್ಳ ಅಥವಾ ಅನುಭವವುಳ್ಳ ಯಾರೋ ಒಬ್ಬರೊಂದಿಗೆ ನೀವೆಂದಾದರೂ ಅಶ್ಲಾಘನೀಯವಾಗಿ ಹೋಲಿಸಲ್ಪಡುವುದಾದರೆ, ಅದು ಅನ್ಯಾಯವೂ ಆಶಾಭಂಗವೂ ಆಗಿದೆಯೆಂದು ನೀವು ಕಂಡುಕೊಳ್ಳುವುದಿಲ್ಲವೋ? ಕಟ್ಟಕಡೆಗೆ, ನಮ್ಮಲ್ಲಿ ಅನೇಕರಿಗೆ ಆರಂಭದಲ್ಲಿ ಅಹಿತಕರವಾಗಿದ್ದ ಕೆಲಸಗಳು, ಅವುಗಳೊಂದಿಗೆ ಅಂಟಿಕೊಳ್ಳುವಂತೆ ನಾವು ಶಿಸ್ತನ್ನು ಹೊಂದಿದಾಗ, ಕ್ರಮೇಣವಾಗಿ ಸಹನೀಯವಾಗಿ, ಸಂತೃಪ್ತಕರವಾಗಿ ಕೂಡ ಪರಿಣಮಿಸಿದ್ದು ನಿಜವಾಗಿರುವುದಿಲ್ಲವೋ?
ನಾವು ನಮ್ಮ ಮಾನವ ಮುನ್ನರಿವಿನ ಕೊರತೆಯಲ್ಲಿ ಆ್ಯಂಡ್ರೂವಿನ ಬಗ್ಗೆ ಅನೇಕ ಬಾರಿ ಕಣ್ಣೀರನ್ನು ಸುರಿಸಿರುವುದಾದರೂ, ನಾವು ಅನೇಕ ಹರ್ಷಗಳನ್ನು—ಚಿಕ್ಕದ್ದೂ ದೊಡ್ಡದ್ದೂ—ಸಹ ಹಂಚಿಕೊಂಡಿದ್ದೇವೆ. ಮತ್ತು ಆ್ಯಂಡ್ರೂಗೆ ಸಂಪೂರ್ಣವಾಗಿ ಅಸಂಬಂಧಿತವಾಗಿರುವ ಕ್ಷೇತ್ರಗಳಲ್ಲಿ ಅವನ ಕಾರಣದಿಂದ ನಾವು ಬೆಳೆದಿದ್ದೇವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಜೀವನದ ಯಾವುದೇ ಅನುಭವವು—ಎಷ್ಟೇ ಕಷ್ಟಕರವಾದದ್ದಾಗಲಿ—ಅಸಮಾಧಾನದಿಂದ ಕೂಡಿದ ವ್ಯಕ್ತಿಗಳನ್ನಾಗಿ ರೂಪಿಸುವ ಬದಲು, ಅತ್ಯುತ್ತಮ ವ್ಯಕ್ತಿಗಳನ್ನಾಗಿ ನಮ್ಮನ್ನು ರೂಪಿಸಲಿಕ್ಕೆ ಸಾಮರ್ಥ್ಯವನ್ನು ಹೊಂದಿದೆಯೆಂದು ನಾವು ಕಲಿತೆವು.
ನಮಗೆ ಅತ್ಯಂತ ಪ್ರಾಮುಖ್ಯವಾದ ಯಾವುದೋ ಇನ್ನೊಂದು ವಿಷಯವಿದೆ. ನಾವು ಆ್ಯಂಡ್ರೂವಿನ ಅಸಾಮರ್ಥ್ಯದ ವ್ಯತಿರಿಕ್ತತೆಯನ್ನು ನೋಡುವ ಮಹಾ ಸಂದರ್ಭವನ್ನು ಮುಂಭಾವಿಸುವಾಗ, ನಾವು ಅತಿ ಹೆಚ್ಚಿನ ಆಹ್ಲಾದವನ್ನು ಪಡೆಯುತ್ತೇವೆ. ದೇವರ ನೀತಿಯುಕ್ತ ನೂತನ ಲೋಕದಲ್ಲಿ ಬಲು ಬೇಗನೇ ಕುರುಡರು, ಕಿವುಡರು, ಕುಂಟರು ಮತ್ತು ಮೂಕರು ಎಲ್ಲರು ಪ್ರಜ್ವಲಿಸುವ ಆರೋಗ್ಯಕ್ಕೆ ಪುನಃಸ್ಥಾಪಿಸಲ್ಪಡುವರು ಎಂಬುದಾಗಿ ಬೈಬಲ್ ವಾಗ್ದಾನಿಸುತ್ತದೆ. (ಯೆಶಾಯ 35:5, 6; ಮತ್ತಾಯ 15:30, 31) ಮಾನವಕುಲವು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ವಿಕಸನಗೊಂಡ ಹಾಗೆ ಮನಸ್ಸಿನ ಮತ್ತು ದೇಹದ ವಾಸಿಮಾಡುವಿಕೆಯನ್ನು ಸಾಕ್ಷಾತ್ತಾಗಿ ಗಮನಿಸುವುದರಲ್ಲಿ ಆಗ ನಾವೆಲ್ಲರು ಅನುಭವಿಸುವ ಹರ್ಷವನ್ನು ಕಲ್ಪಿಸಿಕೊಳ್ಳಿರಿ! (ಕೀರ್ತನೆ 37:11, 29)—ದತ್ತಲೇಖನ.
[ಪುಟ 23 ರಲ್ಲಿರುವ ಚೌಕ]
ಅಂಗವಿಕಲತೆಯ ಮಟ್ಟಗಳು
ಕೆಲವು ಪರಿಣತರು ಡೌನ್ಸ್ ಸಿಂಡ್ರೋಮ್ ವ್ಯಕ್ತಿಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸುತ್ತಾರೆ. (1) ಶಿಕ್ಷಣಾರ್ಹರು (ಮಿತವಾಗಿ): ಪರಿಗಣನಾರ್ಹವಾದ ವ್ಯಾಸಂಗಕ್ಕೆ ಸಂಬಂಧಿಸಿದ ನೈಪುಣ್ಯಗಳನ್ನು ಪಡೆಯಸಾಧ್ಯವಿರುವವರು. ಈ ಗುಂಪು ನಟರು ಅಥವಾ ಉಪನ್ಯಾಸಕರೂ ಆಗಿ ಪರಿಣಮಿಸಿರುವ ಕೆಲವರನ್ನು ಒಳಗೂಡುತ್ತದೆ. ಕೆಲವರು ಕನಿಷ್ಠ ಮೇಲ್ವಿಚಾರಣೆಯೊಂದಿಗೆ ಸ್ವತಂತ್ರವಾಗಿ ಜೀವಿಸುವುದರಲ್ಲಿ ಸಾಫಲ್ಯವನ್ನು ಪಡೆದಿದ್ದಾರೆ. (2) ತರಬೇತನ್ನು ಪಡೆಯಬಲ್ಲವರು (ಸೌಮ್ಯ): ನಿರ್ದಿಷ್ಟ ಪ್ರಾಯೋಗಿಕ ನೈಪುಣ್ಯಗಳನ್ನು ಕಲಿಯಲಿಕ್ಕೆ ಸಮರ್ಥರಾಗಿರುವವರು. ಸ್ವಲ್ಪ ಮಟ್ಟಿಗೆ ತಾವೇ ಆರೈಕೆಯನ್ನು ಮಾಡಿಕೊಳ್ಳಲು ಅವರಿಗೆ ಕಲಿಸಿಕೊಡಸಾಧ್ಯವಿರುವುದಾದರೂ, ಹೆಚ್ಚಿನ ಮೇಲ್ವಿಚಾರಣೆಯು ಅಗತ್ಯವಾಗಿದೆ. (3) ಪರಮ (ವಿಪರೀತ): ಅತ್ಯಂತ ಹೆಚ್ಚಿನ ಮೇಲ್ವಿಚಾರಣೆಯ ಅಗತ್ಯವಿರುವ, ಒಂದು ಅತ್ಯಲ್ಪ ಕಾರ್ಯವನ್ನು ಮಾಡುವ ಗುಂಪು.
ಆ್ಯಂಡ್ರೂವಿನ ಕುರಿತಾಗಿ ಏನು? “ತರಬೇತನ್ನು ಪಡೆಯಬಲ್ಲ” ಎಂಬುದಾಗಿ ಪಟ್ಟಿಮಾಡಲ್ಪಟ್ಟ ವರ್ಗದಲ್ಲಿ ಅವನು ಒಳಗೂಡುತ್ತಾನೆಂಬುದನ್ನು ನಾವು ಈಗ ಕಂಡುಕೊಂಡಿದ್ದೇವೆ.