ನೋಯುವ ಪಾದಗಳಿಗೆ ನೆರವು
“ನನ್ನ ಪಾದಗಳು ನನ್ನನ್ನು ಕೊಲ್ಲುತ್ತಿವೆ!” ಇದು ಅತಿಶಯೋಕ್ತಿಯೆಂಬುದು ವ್ಯಕ್ತ. ಆದರೂ ಅಮೆರಿಕದಲ್ಲಿ ನೋಯುವ ಪಾದಗಳ ಸಮಸ್ಯೆಯು, ಸಾವಿರಾರು ಮಂದಿ ಪಾದ ವಿಶೇಷಜ್ಞರನ್ನು ವ್ಯವಹಾರದಲ್ಲಿಟ್ಟುಕೊಳ್ಳುವಷ್ಟು ಗುರುತರವಾಗಿದೆ.
ತಾನು 14 ವರ್ಷಗಳಲ್ಲಿ ಮಾಡಿದ 2,000ಕ್ಕೂ ಹೆಚ್ಚು ಪಾದ ಶಸ್ತ್ರಚಿಕಿತ್ಸೆಗಳನ್ನು ಪುನರ್ವಿಮರ್ಶಿಸಿದ ಬಳಿಕ, ಡಾ. ಮೈಕಲ್ ಕಾಗ್ಲಿನ್ ಎಂಬ ಒಬ್ಬ ಅಸ್ಥಿರೋಗ ಚಿಕಿತ್ಸಕರು ಚಕಿತಗೊಳಿಸುವ ಶೋಧವನ್ನು ಮಾಡಿದರು. ಅವರು ಹೇಳುವುದು: “ನಂಬಲಸಾಧ್ಯವಾಗುವಂತೆ, ಹೆಚ್ಚುಕಡಮೆ ಈ ಎಲ್ಲ ಶಸ್ತ್ರಚಿಕಿತ್ಸೆಗಳು ಹೆಂಗಸರದ್ದಾಗಿದ್ದವು ಎಂಬುದನ್ನು ನಾನು ಕಂಡುಕೊಂಡೆ.” ಪಾದ ಸಮಸ್ಯೆಗಳಿಗೆ ವಿಶೇಷವಾಗಿ ಸ್ತ್ರೀಯರೇಕೆ ಪ್ರವೃತ್ತರಾಗಿರುತ್ತಾರೆ?
ಅಳತೆ, ಫ್ಯಾಷನ್ ಮತ್ತು ಪಾದಗಳು
ಮುನ್ನೂರ ಐವತ್ತಾರು ಮಂದಿ ಸ್ತ್ರೀಯರ ಒಂದು ಸಮೀಕ್ಷೆ, 10ರಲ್ಲಿ ಸುಮಾರು 9 ಮಂದಿ ತಮ್ಮ ಪಾದಗಳಿಗಿಂತ ಸರಾಸರಿ ಒಂದು ಫುಲ್ ಸೈಸ್ ತೀರ ಕಿರಿದಾದ ಪಾದರಕ್ಷೆಗಳನ್ನು ಧರಿಸಿದ್ದರೆಂಬುದನ್ನು ಕಂಡುಕೊಂಡಿತು! ಸ್ತ್ರೀಯರ ಪಾದರಕ್ಷೆಗಳು ತಯಾರಿಸಲ್ಪಡುವ ವಿಧದಲ್ಲಿಯೇ ಸಮಸ್ಯೆಯ ಒಂದು ಅಂಶವು ಅಡಗಿದೆ. ಅಸ್ಥಿರೋಗ ಚಿಕಿತ್ಸಕಿ ಫ್ರಾನ್ಸೆಸ್ಕ ಥಾಮ್ಸನ್ ವಿವರಿಸುವುದು: “ಮೋಚಿಗಳು ಈಗ ಅಗಲಕಿರಿದಾದ ಹಿಮ್ಮಡಿ ಮತ್ತು ಹೆಚ್ಚು ಅಗಲವಾದ ಮುನ್‌ಪಾದವನ್ನು ಮಾಡಬಲ್ಲ ಸಂಯೋಜಿತ ಪಾದಾಕಾರ ಅಚ್ಚು (ಸ್ಪ್ಲಿಟ್ ಲಾಸ್ಟ್)ಗಳನ್ನು ಉಪಯೋಗಿಸುವುದಿಲ್ಲ.”a
ಹೀಗೆ, ಪಾದರಕ್ಷೆಗಳನ್ನು ಧರಿಸಿ ಪರೀಕ್ಷಿಸುವಾಗ, ಮುಂಬದಿ ಹಾಯಾಗಿ ಒಳಸೇರುವಾಗ ಹಿಮ್ಮಡಿ ಸಡಿಲವಾಗಿರುತ್ತದೆ. ಆದರೆ ಹಿಮ್ಮಡಿ ಹಿತಕರವಾಗಿರುವಾಗ, ಮುಂಬದಿ ಬಿಗಿಯಾಗಿರುತ್ತದೆ ಎಂದು ಅನೇಕ ಮಂದಿ ಸ್ತ್ರೀಯರು ಕಂಡುಕೊಳ್ಳುತ್ತಾರೆ. ಇತರರು ಬಿಗಿಯಾದ ಮುಂಬದಿಯಿರುವ ಹಿತಕರವಾದ ಹಿಮ್ಮಡಿಯನ್ನು ಆರಿಸಿಕೊಳ್ಳುತ್ತಾರೆ. ಇಲ್ಲದಿರುವಲ್ಲಿ ಪ್ರತಿ ಬಾರಿ ಹೆಜ್ಜೆಯಿಡುವುದು ಹಿಮ್ಮಡಿಯಿಂದ ಜಾರುವುದನ್ನು ಅರ್ಥೈಸೀತು.
ಪಾದದ ಮುಂಭಾಗವನ್ನು ಒಂದು ಅಗಲಕಿರಿದಾದ ಮುನ್ನಡಿ ಮುಚ್ಚಿಗೆ (ಟೋ ಬಾಕ್ಸ್)ಯೊಳಕ್ಕೆ ತುರುಕುವುದೇ ಸಾಕಷ್ಟು ಅಹಿತಕರ. ಆದರೆ ವಿನ್ಯಾಸಕರು ಪಾದರಕ್ಷೆಯ ಹಿಮ್ಮಡಿಯನ್ನು ಕೆಲವು ಸೆಂಟಿಮೀಟರುಗಳಷ್ಟು ಎತ್ತರಿಸುತ್ತಾರೆ. ಇದು ಫ್ಯಾಷನ್‌ದಾಯಕವೆಂದು ಎಣಿಸಲ್ಪಡುವುದಾದರೂ, ಎತ್ತರವಿರುವ ಹಿಮ್ಮಡಿ ಪಾದರಕ್ಷೆಯು, ಪಾದದ ಉಬ್ಬಿನ ಮೇಲೆ ಎಲ್ಲ ಒತ್ತಡವನ್ನು ಹಾಕಿ, ಆಗಲೇ ತೀರ ಅಗಲಕಿರಿದಾಗಿರಬಹುದಾದ ಮುಚ್ಚಿಗೆಯೊಳಕ್ಕೆ ಪಾದವು ಮುಂದುವರಿಯುವಂತೆ ಒತ್ತಡವನ್ನು ಹಾಕುತ್ತದೆ. ಪಾದವೈದ್ಯರಾದ ಡಾ. ಡೇವಿಡ್ ಗ್ಯಾರೆಟ್ ವಾದಿಸುವುದು: “ಆರೋಗ್ಯಕರವಾದ ಎತ್ತರ ಹಿಮ್ಮಡಿಯ ಪಾದರಕ್ಷೆ ಎಂಬುದೇ ಇಲ್ಲ.” ಎತ್ತರದ ಹಿಮ್ಮಡಿಗಳು ಅಂತಿಮವಾಗಿ ಅದನ್ನು ಹಾಕಿಕೊಂಡವರ ಪಾದಗಳು, ಕಣಕಾಲುಗಳು, ಮೀನಖಂಡಗಳು, ಮೊಣಕಾಲುಗಳು ಮತ್ತು ಬೆನ್ನಿಗೆ ಹಾನಿಯನ್ನುಂಟುಮಾಡುತ್ತವೆಂದು ಕೆಲವರು ಹೇಳುತ್ತಾರೆ. ಅವು ಕಾಲುಸ್ನಾಯುಗಳನ್ನು ಮತ್ತು ಸ್ನಾಯುರಜ್ಜುಗಳನ್ನು ಕಿರಿದಾಗಿಸಬಲ್ಲವು. ಇದು ವಿಶೇಷವಾಗಿ ಓಟಗಾರರನ್ನು ಗಂಭೀರವಾದ ಹಾನಿಗಳಿಗೆ ಒಳಗಾಗುವಂತೆ ಮಾಡಬಲ್ಲದು.
ಒಬ್ಬಾಕೆ ಸ್ತ್ರೀಯ ಪಾದ, ಅದು ಅನುಭವಿಸುವ ಅಪಪ್ರಯೋಗಕ್ಕೆ ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ. ವಾಸ್ತವವೇನಂದರೆ, ವರ್ಷಗಳು ಗತಿಸಿದಷ್ಟಕ್ಕೆ ಪಾದದ ಮುಂಭಾಗಕ್ಕೆ ಮಾತ್ರ—ವ್ಯಕ್ತಿಯು ಪ್ರಾಪ್ತವಯಸ್ಕನಾದ ಮೇಲೆಯೂ—ಅಗಲಗೊಳ್ಳುವ ಪ್ರವೃತ್ತಿಯಿರುತ್ತದೆ. ಆದರೆ ಹಿಮ್ಮಡಿಗೆ ಆ ಪ್ರವೃತ್ತಿಯಿಲ್ಲ. ಡಾ. ಥಾಮ್ಸನ್ ಹೇಳುವುದು: “ಹಿಮ್ಮಡಿಗಿರುವುದು ಒಂದು ಎಲುಬು ಮಾತ್ರ. ಮತ್ತು ಅದು 84ರ ವಯಸ್ಸಿನಲ್ಲಿಯೂ 14ರ ವಯಸ್ಸಿನಲ್ಲಿದ್ದಷ್ಟೇ ಅಗಲಕಿರಿದಾಗಿರುತ್ತದೆ.” ಇದು ಒಬ್ಬ ಸ್ತ್ರೀಗೆ, ಹಿಮ್ಮಡಿಯಿಂದ ಕಾಲ್ಬೆರಳಿನ ತನಕ ಹಿತಕರವಾಗಿ ಹೊಂದಿಕೊಳ್ಳುವ ಪಾದರಕ್ಷೆಯನ್ನು ಕಂಡುಹಿಡಿಯುವುದನ್ನು ಇನ್ನೂ ಹೆಚ್ಚು ಕಷ್ಟಕರವನ್ನಾಗಿ ಮಾಡುತ್ತದೆ.
ಖರೀದಿಸಲು ಸೂಚನೆಗಳು
ತಮ್ಮ ಪಾದರಕ್ಷೆಗಳ ಅಳತೆ ಮತ್ತು ಫ್ಯಾಷನ್, ಸ್ತ್ರೀಯರಿಗೆ ಪ್ರತಿಕೂಲವಾಗಿ ಕೆಲಸಮಾಡುವುದರಿಂದ, ಅವರು ನೋಯುವ ಪಾದಗಳನ್ನು ಹೇಗೆ ತಡೆಗಟ್ಟಸಾಧ್ಯವಿದೆ? ಇದಕ್ಕೆ ಉತ್ತರವು ಪಾದರಕ್ಷೆಯ ಅಂಗಡಿಯಲ್ಲಿ ಆರಂಭಗೊಳ್ಳುತ್ತದೆ. ಕೆಲವು ಮಂದಿ ಪರಿಣತರು ಈ ಕೆಳಗಿನದ್ದನ್ನು ಶಿಫಾರಸ್ಸು ಮಾಡುತ್ತಾರೆ:
● ದಿನಾಂತ್ಯದ ಸಮಯದಲ್ಲಿ, ನಿಮ್ಮ ಪಾದಗಳು ತುಸು ಊದಿಕೊಂಡಿರುವಾಗ ಪಾದರಕ್ಷೆ ಕೊಳ್ಳಲು ಹೋಗಿರಿ.
● ಎರಡೂ ಪಾದರಕ್ಷೆಗಳನ್ನು ಹಾಕಿನೋಡಿರಿ—ಒಂದನ್ನೇ ಅಲ್ಲ.
● ಹಿಮ್ಮಡಿ ಸುಖಕರವಾಗಿ ಒಳಸೇರಿರುತ್ತದೆಂದೂ ಮುಂಭಾಗದ ಮುಚ್ಚಿಗೆಯ ಉದ್ದ, ಅಗಲ ಮತ್ತು ಎತ್ತರಗಳು ಸಾಕಷ್ಟಿವೆಯೆಂಬುದನ್ನು ನಿಶ್ಚಯ ಮಾಡಿಕೊಳ್ಳಿರಿ.
● ಅಂಗಡಿಯಲ್ಲಿ ದಪ್ಪನೆಯ ಜಮಖಾನೆಯಿದ್ದು, ಬಿಗಿಯಾಗಿರುವ ಪಾದರಕ್ಷೆಗಳೂ ಆ ಕ್ಷಣ ಹಿತಕರವಾಗಿ ಅನಿಸಬಹುದೆಂಬುದನ್ನು ಪರಿಗಣಿಸಿರಿ.
● ಕಪ್ಪುಮೆರುಗಿನ ಚರ್ಮ (ಪೇಟೆಂಟ್ ಲೆದರ್) ಅಥವಾ ಸಿಂಥೆಟಿಕ್ ವಸ್ತುಗಳಿಂದ ಮಾಡಿರುವ ಪಾದರಕ್ಷೆಗಳನ್ನು ವರ್ಜಿಸಿರಿ. ಮೆದು ಚರ್ಮ ಅಥವಾ ಹದಮಾಡಿಲ್ಲದ ಚರ್ಮಕ್ಕೆ ಅಸದೃಶವಾಗಿ, ಅಂತಹ ವಸ್ತುಗಳು ನೀವು ನಡೆಯುವಾಗ ಹಿಗ್ಗುವುದಿಲ್ಲ.
● ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ನೀವು ಕೊಳ್ಳುವಲ್ಲಿ, ಇನ್ನೂ ಹೆಚ್ಚು ಮೆತ್ತೆ ತುಂಬಲು (ಪ್ಯಾಡಿಂಗ್) ಚರ್ಮದ ಒಳಅಟ್ಟೆ (ಇನ್‌ಸೋಲ್)ಯನ್ನು ಪ್ರಯೋಗಿಸಿ ನೋಡಿ. ಆ ಹಿಮ್ಮಡಿಗಳನ್ನು ಸ್ವಲ್ಪ ಸಮಯ ಮಾತ್ರ ಧರಿಸಿರಿ. ದಿನದಲ್ಲಿ ಆಗಾಗ ಕಡಿಮೆ ಎತ್ತರವಿರುವ ಹಿಮ್ಮಡಿಯುಳ್ಳ ಪಾದರಕ್ಷೆಗಳಿಗೆ ಬದಲಾಯಿಸಿರಿ.
ಈ ಮೇಲಿನ ವಿಷಯಗಳಿಗೆ ಸೇರಿಸಿ, ಖರೀದಿಯ ಸಮಯದಲ್ಲಿ ಪಾದರಕ್ಷೆಗಳು ನಿಮಗೆ ಹಾಯಾಗಿ ಅನಿಸಬೇಕೆಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಸವೆಯಿಸಿ ಹಾಯಾಗಿಸುವ ಸಮಯವೆಂಬುದಿಲ್ಲ. ಡಾ. ಕಾಗ್ಲಿನ್ ಎಚ್ಚರಿಕೆ ನೀಡುವುದು: “ಕಚ್ಚುವ ಪಾದರಕ್ಷೆ ಸವೆಯಿಸಿದ ಬಳಿಕ ಉತ್ತಮಗೊಳ್ಳುವುದೆಂದು ಮಾರಾಟಗಾರನು ನಿಮಗೆ ಮನಗಾಣಿಸುವಂತೆ ಎಂದಿಗೂ, ಎಂದಿಗೂ ಬಿಡಬೇಡಿ. ಸವೆದು ಗಾಯವಾಗುವುದು ನಿಮ್ಮ ಪಾದವೇ.”
ನಿಮಗಿರುವ ಆಯ್ಕೆಯು ಹಾಯಾಗಿರುವ ಹಿಮ್ಮಡಿಯೊಂದಿಗೆ ಬಿಗಿಯಾಗಿರುವ ಮುಂಭಾಗ ಅಥವಾ ಹಾಯಾಗಿರುವ ಮುಂಭಾಗದೊಂದಿಗೆ ಸಡಿಲವಾದ ಹಿಮ್ಮಡಿ—ಇವು ಮಾತ್ರ ಆಗಿರುವುದಾದರೆ ಆಗೇನು? ಸರಿಪಡಿಸಲು ಯಾವುದು ಹೆಚ್ಚು ಸುಲಭವೆಂದು ನೀವು ನಿರ್ಣಯಿಸಬೇಕು ಎಂದು, ಪಾದವೈದ್ಯೆಯಾದ ಡಾ. ಆನೂ ಗೋಎಲ್ ಹೇಳುತ್ತಾರೆ. ಅವರು ಹೇಳುವುದು: “ಇದನ್ನು ಮಾಡುವ ಎರಡು ವಿಧಗಳಿವೆ. ಒಂದನೆಯದಾಗಿ, ಮುಂಭಾಗದಲ್ಲಿ ಸಾಕಷ್ಟು ಅಗಲವಿರುವ ಪಾದರಕ್ಷೆಗಳನ್ನು ಖರೀದಿಸಿ, ಹಿಮ್ಮಡಿ ಹಿತಕರವಾಗಿರುವಂತೆ ಮೆತ್ತೆಗಳನ್ನು ನೀವು ಒಳಸೇರಿಸಬಲ್ಲಿರಿ. . . . ಎರಡನೆಯ ಉಪಾಯವು ಹಿತಕರವಾದ ಭದ್ರ ಹಿಮ್ಮಡಿಯ ಪಾದರಕ್ಷೆಯನ್ನು ಖರೀದಿಸಿ, ಅದರ ಮುಂಭಾಗವನ್ನು ಹಿಗ್ಗುವಂತೆ ಮಾಡುವುದು. ಆದರೆ ಸಾಮಾನ್ಯವಾಗಿ, ಚರ್ಮದ ಪಾದರಕ್ಷೆಗಳಿಗೆ ಮಾತ್ರ ಹೀಗೆ ಮಾಡಸಾಧ್ಯವಿದೆ.”
ಅನೇಕ ಮಂದಿ ಸ್ತ್ರೀಯರು ದಿನಕ್ಕೆ 15 ಕಿಲೋಮೀಟರ್‌ಗಳಷ್ಟು ನಡೆಯುತ್ತಾರೆಂದು ಅಂದಾಜು ಮಾಡಲಾಗುತ್ತದಾದುದರಿಂದ, ಅವರು ತಮ್ಮ ಪಾದರಕ್ಷೆಗಳನ್ನು ಪರೀಕ್ಷಿಸುವುದು ಒಳ್ಳೆಯದು. ಅಮೆರಿಕನ್ ಹೆಲ್ತ್ ಪತ್ರಿಕೆ ಹೇಳುವಂತೆ, “ಪಾದಗಳನ್ನು ಹೆಚ್ಚು ಗೌರವದಿಂದ ಕಾಣುವ ಮೂಲಕ—ವಿಶೇಷವಾಗಿ ಸರಿಯಾದ ಗಾತ್ರದ ಪಾದರಕ್ಷೆಗಳನ್ನು ಧರಿಸಿ—ನೀವು ಹೆಚ್ಚಿನ ಪಾದ ಸಮಸ್ಯೆಗಳನ್ನು, ಅವು ಎಂದಿಗೂ ಸಂಭವಿಸುವುದರಿಂದ ತಡೆಗಟ್ಟುವಿರಿ.”
[ಪಾದಟಿಪ್ಪಣಿ]
a “ಲಾಸ್ಟ್” ಎಂದರೆ ಪಾದರಕ್ಷೆ ರೂಪಿಸಲ್ಪಡುವ ಪಾದಾಕಾರದ ಅಚ್ಚು.
[ಪುಟ 29 ರಲ್ಲಿರುವ ಚೌಕ]
ನಾಲ್ಕು ಸಾಮಾನ್ಯ ಪಾದ ಸಮಸ್ಯೆಗಳು
ಹೆಬ್ಬೆಟ್ಟೂತಗಳು. ಹೆಬ್ಬೆಟ್ಟೂತವೆಂದರೆ, ದೊಡ್ಡ ಕಾಲ್ಬೆರಳಿನ ಅಡಿಯಲ್ಲಿರುವ ಊತ. ಆನುವಂಶಿಕವಾಗಿಲ್ಲದ್ದಾಗಿರುವಾಗ, ಹೆಬ್ಬೆಟ್ಟೂತಗಳು ಬಿಗಿ ಹಿಡಿತದ ಅಥವಾ ಎತ್ತರ ಹಿಮ್ಮಡಿಯ ಪಾದರಕ್ಷೆಗಳಿಂದಾಗಿ ಉಂಟಾಗಬಹುದು. ಕಾವು ಅಥವಾ ಮಂಜುಗಡ್ಡೆಯನ್ನು ಅದರ ಮೇಲಿಡುವುದು ನೋವಿನಿಂದ ತಾತ್ಕಾಲಿಕ ಶಮನವನ್ನು ಕೊಡಬಲ್ಲದು, ಆದರೆ ಹೆಬ್ಬೆಟ್ಟೂತದ ಖಾಯಂ ನಿವಾರಣೆಗೆ ಶಸ್ತ್ರಚಿಕಿತ್ಸೆ ಅಗತ್ಯ.
ಇಕ್ಕುಳ ಸುತ್ತಿಗೆ ಕಾಲ್ಬೆರಳುಗಳು. ಕೆಳಗಡೆ ಬಗ್ಗಿರುವ ಕಾಲ್ಬೆರಳುಗಳು ಪಾದದ ಮುಂಭಾಗದ ಮೇಲೆ ವಿಪರೀತ ಒತ್ತಡವನ್ನು ಹಾಕುವ ಪಾದರಕ್ಷೆಗಳ ಕಾರಣ ಉಂಟಾಗಬಹುದು. ಈ ವಿಕೃತ ರಚನೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು.
ಒತ್ತುಗಂಟು. ತಿಕ್ಕಾಟ ಮತ್ತು ಒತ್ತಡದಿಂದ ಕಾಲ್ಬೆರಳಿನಲ್ಲಿ ಉಂಟಾಗುವ ಶಂಕುವಿನಾಕಾರದ ಊತಗಳು ಕೆಲವು ಬಾರಿ ತೀರ ಅಗಲಕಿರಿದಾದ ಪಾದರಕ್ಷೆಗಳನ್ನು ತೊಡುವುದರ ಪರಿಣಾಮವಾಗಿರುತ್ತವೆ. ಗೃಹೌಷಧಗಳು ತಾತ್ಕಾಲಿಕ ಶಮನವನ್ನು ಕೊಡಬಹುದಾದರೂ, ಘರ್ಷಣೆಯನ್ನುಂಟುಮಾಡುವ ವಿಕೃತಗೊಂಡಿರುವ ಕಾಲ್ಬೆರಳುಗಳನ್ನು ಸರಿಪಡಿಸಲು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.
ಜಡ್ಡುಗಳು. ಪುನರಾವರ್ತಿಸುವ ಘರ್ಷಣೆಯಿಂದ ಪಾದವನ್ನು ರಕ್ಷಿಸಲಿಕ್ಕಾಗಿ ಉಂಟಾಗಿರುವ ದಪ್ಪವಾದ, ಸತ್ತಚರ್ಮದ ಪದರಗಳು. ಬೆಚ್ಚಗಿನ ನೀರು ಮತ್ತು ಎಪ್ಸಮ್ ಲವಣಗಳಲ್ಲಿ ತೋಯಿಸುವುದು, ಅವನ್ನು ಮೃದುಮಾಡಬಲ್ಲದು. ಆದರೆ ಅವನ್ನು ಕತ್ತರಿಸಲು ಪ್ರಯತ್ನಿಸಬೇಡಿ. ಅದು ಸೋಂಕನ್ನು ಉಂಟುಮಾಡಬಹುದು.
[ಪುಟ 29 ರಲ್ಲಿರುವ ಚಿತ್ರ ಕೃಪೆ]
The Complete Encyclopedia of Illustration/ಜೆ. ಜಿ. ಹೆಕ್