ಜಗತ್ತನ್ನು ಗಮನಿಸುವುದು
ಅಪಾಯಕಾರಿ ಅಪಾರ್ಥಗಳು
1977ರಲ್ಲಿ ಒಂದು ಚಿಕ್ಕ ಶಬ್ದದ ಅರ್ಥದ ವಿಷಯವಾದ ಒಂದು ಅಪಾರ್ಥವು, ಜಗತ್ತಿನ ಅತ್ಯಂತ ಕೆಟ್ಟ ವಿಮಾನ ವಿಪತ್ತಿನಲ್ಲಿ ಒಂದು ಪಾತ್ರವನ್ನು ವಹಿಸಿತೆಂದು, ದಿ ಯೂರೋಪಿಯನ್ ಎಂಬ ವಾರ್ತಾಪತ್ರವು ವರದಿಸುತ್ತದೆ. ಬೋಯಿಂಗ್ 747 ವಿಮಾನದ ಒಬ್ಬ ಡಚ್ ವಿಮಾನಚಾಲಕನು, ತಾನು “ಟೇಕ್-ಆಫ್‌ನಲ್ಲಿದ್ದೇನೆ” ಎಂದು ರೇಡಿಯೋ ಮೂಲಕ ತಿಳಿಸಿದನು. ಇದನ್ನು ಕನೆರಿ ಐಲೆಂಡ್ಸ್‌ನಲ್ಲಿನ ಟಿನೆರೀಫೆನ ವಾಯು-ಸಂಚಾರ ನಿಯಂತ್ರಕನು, ವಿಮಾನವು ನಿಂತಿದೆಯೆಂದು ಅರ್ಥಮಾಡಿಕೊಂಡನು. ಆದರೆ ಆ ವಿಮಾನಚಾಲಕನು, ತನ್ನ ವಿಮಾನವು ದಟ್ಟವಾಗಿ ಮಬ್ಬುಗೊಂಡಿರುವ ರನ್‌ವೇಯಲ್ಲಿ ವೇಗದ ಪ್ರಮಾಣವನ್ನು ಹೆಚ್ಚಿಸುತ್ತಿದೆ ಮತ್ತು ಇನ್ನೇನು ಟೇಕ್-ಆಫ್ ಮಾಡಲಿದೆ ಎಂದು ಅರ್ಥೈಸಿದ್ದನು. ಇದರ ಪರಿಣಾಮವಾಗಿ, ಆ ವಿಮಾನವು ಇನ್ನೊಂದು 747 ವಿಮಾನಕ್ಕೆ ಢಿಕ್ಕಿಹೊಡೆದು, 583 ಜನರನ್ನು ಕೊಂದಿತು. ತದ್ರೀತಿಯಲ್ಲಿ, ಭಾರತದ ದೆಹಲಿಯ ಹತ್ತಿರದಲ್ಲಿ 1996ರ ನಡು ಆಕಾಶದಲ್ಲಿನ ಢಿಕ್ಕಿಹೊಡೆತಕ್ಕೆ, ನ್ಯೂನವಾದ ಭಾಷಾ ಕೌಶಲಗಳು ಸಹಾಯಕ ಕಾರಣವಾಗಿದ್ದವು. ಆ ಢಿಕ್ಕಿಯಲ್ಲಿ 349 ಮಂದಿ ಮೃತಪಟ್ಟರು. ಗಂಭೀರವಾದ ತಪ್ಪುಗಳು ವಿರಳವಾಗಿರುವುದಾದರೂ ಮತ್ತು ವಿಮಾನ ತಂಡಗಳು ಆದರ್ಶ ಆಕಾಶಯಾನ ಇಂಗ್ಲಿಷ್ ಭಾಷೆಯಲ್ಲಿ ತೀವ್ರ ತರಬೇತಿಯನ್ನು ಪಡೆಯುವುದಾದರೂ, ಕೆಲವು ವಿಮಾನ ತಂಡಗಳಿಗೆ ಕೇವಲ ವಿಶೇಷವಾದ ಆಕಾಶಯಾನ ಪದಗಳು ತಿಳಿದಿವೆ. ಒಂದು ತುರ್ತುಪರಿಸ್ಥಿತಿಯು ಸಂಭವಿಸುವಾಗ, ಅವರು ತಮ್ಮ ಭಾಷಾ ಕೌಶಲಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಸರಿಯಾದ ಆಕಾಶಯಾನ ಸಂವಾದವನ್ನು ಖಚಿತಪಡಿಸಲು, ವಿಮಾನಚಾಲಕರ ಕೋಣೆಯಲ್ಲಿ ಕಂಪ್ಯೂಟರ್ ತಂತ್ರಜ್ಞಾನವನ್ನು ಸೇರಿಸುವಂತೆ ಪರಿಣತರು ಶಿಫಾರಸ್ಸು ಮಾಡುತ್ತಾರೆ.
ನಿಷಿದ್ಧ ಅಮಲೌಷಧದ ಲೋಕವ್ಯಾಪಕ ಬಳಕೆ
ಎಲ್ಲ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಉತ್ಪನ್ನ ಆದಾಯದಲ್ಲಿ 8 ಪ್ರತಿಶತದಷ್ಟು ಆದಾಯವು, ನಿಷಿದ್ಧ ಅಮಲೌಷಧಗಳಿಂದಾಗಿದೆ. ಇದು ಒಂದು ವರ್ಷಕ್ಕೆ ಸುಮಾರು 40,000 ಕೋಟಿ ಡಾಲರುಗಳು ಎಂದು ಒಂದು ಯುಎನ್ ವರದಿ ಹೇಳುತ್ತದೆ. 332 ಪುಟಗಳ ವರದಿಯು, ನಿಷಿದ್ಧ ಅಮಲೌಷಧಗಳ ಲೋಕವ್ಯಾಪಕ ಹೊಡೆತದ ಕುರಿತ ಪ್ರಥಮ ವ್ಯಾಪಕವಾದ ಅಧ್ಯಯನವಾಗಿದೆ. ಲೋಕದ ಜನಸಂಖ್ಯೆಯಲ್ಲಿ ಬಹುಮಟ್ಟಿಗೆ 2.5 ಪ್ರತಿಶತ—ಸುಮಾರು 14 ಕೋಟಿ ಜನರು—ಮಾರಿವಾನಾ ಅಥವಾ ಅದರ ನಿಷ್ಪನ್ನವಾಗಿರುವ ಗಾಂಜವನ್ನು ಸೇದುತ್ತಾರೆ. ಮೂರು ಕೋಟಿ ಜನರು, ಆ್ಯಂಫೆಟಮೀನ್ ರೀತಿಯ ಉತ್ತೇಜಕಗಳನ್ನು ಬಳಸುತ್ತಾರೆ, 1.3 ಕೋಟಿ ಮಂದಿ, ಒಂದಲ್ಲ ಒಂದು ರೀತಿಯ ಕೊಕೇನನ್ನು ಬಳಸುತ್ತಾರೆ ಮತ್ತು 80 ಲಕ್ಷ ಮಂದಿ ಹೆರೋಯಿನನ್ನು ಬಳಸುತ್ತಾರೆ. ನಿಯಮವನ್ನು ಜಾರಿಗೆ ತರುವ ಏಜೆನ್ಸಿಗಳು, ಸಾವಿರಾರು ಟನ್ನುಗಳ ಮಾರಿವಾನಾ, ಕೊಕೇನ್, ಹೆರೋಯಿನ್ ಮತ್ತು ಮಾರ್ಫಿನನ್ನು ವಶಪಡಿಸಿಕೊಂಡಿರುವುದಾದರೂ, ಇನ್ನೂ ಹೆಚ್ಚಿನದ್ದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕೊಕೇನನ್ನು ಅಡ್ಡಗಟ್ಟುವ ಪ್ರಮಾಣಗಳು, 30 ಪ್ರತಿಶತ ಮತ್ತು ಹೆರೋಯಿನ್‌ಗಾಗಿರುವ ಪ್ರಮಾಣವು 10ರಿಂದ 15 ಪ್ರತಿಶತ ಮಾತ್ರ ಎಂದು ಆ ವರದಿಯು ಹೇಳಿತು. ಅಂತಾರಾಷ್ಟ್ರೀಯ ಅಮಲೌಷಧ ಕಾರ್ಯಾಚರಣೆಗಳು ತೀರ ಜಟಿಲವಾಗಿರುತ್ತವೆ. “ಸಮಸ್ಯೆಯು ಎಷ್ಟು ಭೌಗೋಲಿಕ ರೀತಿಯದ್ದಾಗಿದೆಯೆಂದರೆ, ಅದರೊಂದಿಗೆ ಒಂದೊಂದು ದೇಶವು ವ್ಯವಹರಿಸಲು ಸಾಧ್ಯವಿಲ್ಲ” ಎಂದು ಯುಎನ್ ಅಮಲೌಷಧ ನಿಯಂತ್ರಣ ಕಾರ್ಯಕ್ರಮದ ಡೈರೆಕ್ಟರ್ ಜನರಲ್ ಜಾರ್ಜೊ ಜಾಕೊಮೆಲಿ ಹೇಳುತ್ತಾರೆ.
ರಿಮೋಟ್ ಕಂಟ್ರೋಲ್ ಯಾರ ಕೈಯಲ್ಲಿದೆ?
ಇಟಲಿಯಲ್ಲಿರುವ ಯ್ಯೂರಿಸ್ಪಿಸ್ (ರಾಜಕೀಯ, ಆರ್ಥಿಕ ಮತ್ತು ಸಮಾಜ ವಿಜ್ಞಾನಕ್ಕಾಗಿರುವ ಸಂಸ್ಥೆ)ನಲ್ಲಿನ ಸಂಶೋಧಕರು, ಟಿವಿ ವೀಕ್ಷಿಸುವ ಹವ್ಯಾಸಗಳ ಕುರಿತ ಒಂದು ಅಧ್ಯಯನದ ಫಲಿತಾಂಶಗಳನ್ನು ಇತ್ತೀಚೆಗೆ ಪ್ರಕಾಶಿಸಿದರು. ಬಹುಮಟ್ಟಿಗೆ 2,000 ಇಟಾಲ್ಯನ್ ಕುಟುಂಬಗಳು ಸಂದರ್ಶಿಸಲ್ಪಟ್ಟವು. ಬೇರೆ ಪ್ರಶ್ನೆಗಳ ನಡುವೆ, ಕುಟುಂಬದಲ್ಲಿ ಯಾರು ಸಂಭವತಃ ಟಿವಿಯ ರಿಮೋಟ್ ಕಂಟ್ರೋಲ್—ವಾರ್ತಾಪತ್ರದ ಒಂದು ಲೇಖನದಲ್ಲಿ ಇದನ್ನು ಕುಟುಂಬದಲ್ಲಿನ ಆಧುನಿಕ ದಿನದ ಅಧಿಕಾರದ ಕೋಲು ಎಂದು ಹೆಸರಿಸಲಾಗಿದೆ—ಅನ್ನು ಹಿಡಿದು ನಿಯಂತ್ರಿಸುತ್ತಾರೆ ಎಂದು ಕೇಳಲಾಯಿತು. ಹೆಚ್ಚಿನ ಸಂದರ್ಭಗಳಲ್ಲಿ, ತಂದೆಯು ನಿಯಂತ್ರಿಸುವವನು ಎಂದು ತಿಳಿಸಲ್ಪಟ್ಟಿತು. ಚ್ಯಾನೆಲ್‌ಗಳನ್ನು ಬದಲಾಯಿಸುವ ವಿಷಯಕ್ಕೆ ಬರುವಾಗ, ಮಕ್ಕಳು ನಿರ್ಣಯವನ್ನು ಮಾಡುವವರಾಗಿ ಎರಡನೆಯ ಸ್ಥಾನದಲ್ಲಿದ್ದರು. ಕುಟುಂಬದಲ್ಲಿ ರಿಮೋಟ್ ಕಂಟ್ರೋಲ್ ಅನ್ನು ಹಿಡಿಯುವ ಅಧಿಕಾರದ ಹೋರಾಟದಲ್ಲಿ ತಾಯಿಯು ಕೊನೆಯವಳಾಗಿದ್ದಳು.
ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ
“ಕಳೆದ 20 ವರ್ಷಗಳೊಳಗೆ, ಸಂಪೂರ್ಣವಾಗಿ ಹೊಸದಾಗಿರುವ ಮತ್ತು ತೀರ ಸಾಂಕ್ರಾಮಿಕವಾಗಿರುವ 30 ಕಾಯಿಲೆಗಳು ಕಾಣಿಸಿಕೊಂಡಿವೆ” ಎಂದು, ನಾಸೌವಿಶೆ ನಾಯೆ ಪ್ರೆಸೆ ವರದಿಸುತ್ತದೆ. ಈಬೋಲಾ, ಏಯ್ಡ್ಸ್, ಮತ್ತು ಹೆಪಟೈಟಿಸ್ ಸಿಯಂತಹ ಈ ರೋಗಗಳಲ್ಲಿ ಹೆಚ್ಚಿನ ರೋಗಗಳಿಗೆ ಯಾವುದೇ ಔಷಧವಿಲ್ಲ. ಇನ್ನೂ ಹೆಚ್ಚಾಗಿ, ಮಲೇರಿಯಾ, ಕಾಲರಾ, ಮತ್ತು ಕ್ಷಯರೋಗದಂತಹ ಸಾಂಕ್ರಾಮಿಕ ರೋಗಗಳೂ ಹೆಚ್ಚುತ್ತಿವೆ. ಯಾಕೆ? ವಿಶ್ವ ಆರೋಗ್ಯ ಸಂಸ್ಥೆಗನುಸಾರ (ಡಬ್ಲ್ಯೂಏಚ್‌ಓ), “ಹೆಚ್ಚೆಚ್ಚು ವೈರಸ್‌ಗಳು ಪ್ರತಿಜೀವಕಗಳನ್ನು ತಡೆಯಲು ಶಕ್ತವಿರುವವುಗಳಾಗಿ ಪರಿಣಮಿಸುತ್ತಿರುವುದರಿಂದ, ಅನೇಕ ಕಾಯಿಲೆಗಳು ಪುನಃ ತೋರಿಬರುತ್ತವೆ. ಹೊಸ ಪ್ರತಿಜೀವಕಗಳನ್ನು ವಿಕಸಿಸುವುದು ತೀರ ದುಬಾರಿಯಾಗಿರುವುದರಿಂದ, ಹೊಸ ಪ್ರತಿಜೀವಕಗಳನ್ನು ಕಡಿಮೆ ಉತ್ಪಾದಿಸಲಾಗುತ್ತದೆ.” ಈ ಪ್ರವೃತ್ತಿಯನ್ನು ವಿಪರ್ಯಸ್ತಗೊಳಿಸುವ ಪ್ರಯತ್ನದಲ್ಲಿ, “ಹೊಸ ಪ್ರತಿಜೀವಕಗಳು ಮತ್ತು ಸಾಂಕ್ರಾಮಿಕ ರೋಗಗಳನ್ನು ಪರಿಶೀಲಿಸುವ ಉತ್ತಮಗೊಂಡಿರುವ ವಿಧಾನಗಳ ವಿಕಸನದಲ್ಲಿ ಹೆಚ್ಚು ಹಣವನ್ನು ಬಂಡವಾಳವಾಗಿ ಹೂಡಲು” ಡಬ್ಲ್ಯೂಏಚ್‌ಓ ಸರಕಾರಗಳಿಗೆ ಮತ್ತು ಔಷಧ ಕಂಪೆನಿಗಳಿಗೆ ಅಪೀಲು ಮಾಡಿದೆ. 1996ರಲ್ಲಿ ಸಾಂಕ್ರಾಮಿಕ ರೋಗಗಳಿಂದ ಸಂಭವಿಸಿರುವ ಭೌಗೋಲಿಕ ಮರಣ ಸಂಖ್ಯೆಯು ಸುಮಾರು 5.5 ಕೋಟಿಯಾಗಿತ್ತು.
“ಪವಿತ್ರ ನಗರ”ದ ಕ್ಷೀಣಿಸುತ್ತಿರುವ ಭಕ್ತಿ
ಅದನ್ನು ಪವಿತ್ರ ನಗರವೆಂದು ಕರೆಯಲಾಗುತ್ತದಾದರೂ ಮತ್ತು ಅದಕ್ಕೆ ಕ್ಯಾಥೊಲಿಕ್ ಚರ್ಚಿನ ಮುಖ್ಯಸ್ಥನು ಬಿಷಪನಾಗಿರುವುದಾದರೂ, ರೋಮ್ ನಗರವು, ಕೆಲವರು ನೆನಸುವಷ್ಟು ಧಾರ್ಮಿಕ ಶ್ರದ್ಧೆಯುಳ್ಳ ನಗರವಾಗಿರುವುದಿಲ್ಲ. ರೋಮ್‌ನ ತರ್ಡ್ ಯೂನಿವರ್ಸಿಟಿಯಿಂದ ನಡೆಸಲ್ಪಟ್ಟ ಒಂದು ರಾಷ್ಟ್ರೀಯ ಸಮೀಕ್ಷೆಗನುಸಾರ, ಎಲ್ಲ ಇಟ್ಯಾಲಿಯನರಲ್ಲಿ ಸುಮಾರು 10 ಪ್ರತಿಶತ ಮಂದಿ ತಿಳಿಸುವುದೇನೆಂದರೆ, ಅವರಿಗೆ ಕ್ರೈಸ್ತತ್ವದಲ್ಲಿ ಆಸಕ್ತಿ “ಇಲ್ಲವೇ ಇಲ್ಲ.” ಆದರೆ ರೋಮ್‌ನಲ್ಲಿ ಈ ಸಂಖ್ಯೆಯು 19 ಪ್ರತಿಶತಕ್ಕೆ ಏರುತ್ತದೆ. ರೋಮ್ ಜನರಲ್ಲಿ 21 ಪ್ರತಿಶತ ಜನರಿಗೆ ಕ್ಯಾಥೊಲಿಕ್ ಚರ್ಚಿನಲ್ಲಿ “ಕೊಂಚ” ಆಸಕ್ತಿಯಿದೆಯೆಂದು, ಲಾ ರೇಪೂಬ್ಲಿಕಾ ಎಂಬ ವಾರ್ತಾಪತ್ರವು ತಿಳಿಸುತ್ತದೆ. ಇನ್ನೊಂದು ಕಡೆ, ಕೇವಲ 10 ಪ್ರತಿಶತ ಮಂದಿ ಧರ್ಮದಲ್ಲಿ ತುಂಬ ಆಸಕ್ತಿಯುಳ್ಳವರಾಗಿದ್ದಾರೆ. ಸಮಾಜಶಾಸ್ತ್ರಜ್ಞ ರೋಬೆರ್ಟೊ ಚೀಪ್ರಿಯಾನೀಗನುಸಾರ, ರೋಮ್‌ನ 4 ಜನರಲ್ಲಿ ಕೇವಲ ಒಬ್ಬ ವ್ಯಕ್ತಿ, ಮನೋಭಾವಗಳು ಮತ್ತು ವರ್ತನೆಯ ಕುರಿತಾದ ಚರ್ಚಿನ ಆಜ್ಞೆಗಳನ್ನು ನಿಕಟವಾಗಿ ಅನುಸರಿಸುತ್ತಾನೆ.
ಟಿಬಿ ರೋಗವು ಭಾರತವನ್ನು ಬಾಧಿಸುತ್ತದೆ
ಕ್ಷಯರೋಗ (ಟಿಬಿ)ದ ಜೀವಾಣುವನ್ನು ನಿಯಂತ್ರಿಸಲು ಮಾಡಲ್ಪಡುವ ವಿಸ್ತೃತ ಪ್ರಯತ್ನಗಳ ಎದುರಿನಲ್ಲೂ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಏಚ್‌ಓ) ಹೇಳುವುದೇನೆಂದರೆ, ಭಾರತದಲ್ಲಿನ ಪ್ರತಿ ಇಬ್ಬರು ವಯಸ್ಕರಲ್ಲಿ ಒಬ್ಬನು ಅದರಿಂದ ಸೋಂಕಿತನಾಗಿದ್ದಾನೆ. ಭಾರತದ 90 ಕೋಟಿಗಿಂತಲೂ ಹೆಚ್ಚಿನ ಜನರ ನಡುವೆ, ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚು ಮಂದಿ, ಪ್ರತಿ ವರ್ಷ ಸಕ್ರಿಯವಾದ ಟಿಬಿಯನ್ನು ವಿಕಸಿಸಿಕೊಳ್ಳುತ್ತಾರೆ ಮತ್ತು 5,00,000 ಮಂದಿ ಅದರಿಂದಾಗಿ ಸಾಯುತ್ತಾರೆ, ಎಂಬುದಾಗಿ ದಿ ಏಷ್ಯನ್ ಏಜ್ ಎಂಬ ವಾರ್ತಾಪತ್ರವು ವರದಿಸುತ್ತದೆ. ಡಬ್ಲ್ಯೂಏಚ್‌ಓಗನುಸಾರ, ಸೋಂಕಿತ ವ್ಯಕ್ತಿಗಳ ಸಂಖ್ಯೆ ಮತ್ತು ಆ ರೋಗದಿಂದ ಸೋಂಕಿತರಾಗುವ ಫಲಸ್ವರೂಪ ಗಂಡಾಂತರವು, ವಿಪರೀತವಾಗಿ ದೊಡ್ಡದಾಗಿದೆ. ಟಿಬಿಯನ್ನು ಸೋಂಕಿಸಿಕೊಳ್ಳುವವರು, ಅದು ಉಂಟುಮಾಡುವಂತಹ ಅಸ್ವಸ್ಥತೆಯನ್ನು ನಿಭಾಯಿಸುವ ಸಮಸ್ಯೆಯನ್ನು ಎದುರಿಸಬೇಕು ಮಾತ್ರವಲ್ಲ, ಸಾಮಾನ್ಯವಾಗಿ ಆ ರೋಗದೊಂದಿಗೆ ಜೋಡಿಸಲ್ಪಟ್ಟಿರುವ ಕಳಂಕದೊಂದಿಗೂ ಜೀವಿಸಬೇಕು. ಇದು ನೆರೆಹೊರೆಯವರ, ಧಣಿಗಳ, ಮತ್ತು ಸಹಕರ್ಮಿಗಳ ತಿರಸ್ಕಾರಕ್ಕೆ ನಡಿಸಸಾಧ್ಯವಿದೆ. ಟಿಬಿಯಿರುವುದಾಗಿ ಕಂಡುಕೊಳ್ಳಲಾಗುವ ಯುವ ವಧುಗಳನ್ನು ಅನೇಕವೇಳೆ, ಮಕ್ಕಳನ್ನು ಹೆರಲು ಅಯೋಗ್ಯರೆಂದೆಣಿಸುತ್ತಾ ಅವರನ್ನು ಹೆತ್ತವರ ಬಳಿಗೆ ಹಿಂದೆ ಕಳುಹಿಸಲಾಗುತ್ತದೆ.
ಪರಿಕರ್ತನ ಮಾಡಲ್ಪಟ್ಟ ಹುಡುಗಿಯರು, ಹದಿವಯಸ್ಕ ಜನನಗಳು
“ಪ್ರತಿ ವರ್ಷ ಸುಮಾರು 20 ಲಕ್ಷ ಹುಡುಗಿಯರು ಪರಿಕರ್ತನ ಮಾಡಲ್ಪಡುತ್ತಾರೆ” ಎಂದು, ಮಕ್ಕಳ ಆರೋಗ್ಯ, ಪೌಷ್ಟಿಕತೆ, ಮತ್ತು ಶಿಕ್ಷಣದ ಕುರಿತಾದ ವಿಶ್ವ ಸಂಸ್ಥೆಯ ಮಕ್ಕಳ ನಿಧಿಯ ಪ್ರಕಾಶನವಾದ, ರಾಷ್ಟ್ರಗಳ ಪ್ರಗತಿ (ಇಂಗ್ಲಿಷ್)ಯ 1996ರ ಮುದ್ರಣವು ತಿಳಿಸುತ್ತದೆ. “ಎಲ್ಲ ಪರಿಕರ್ತನಗಳಲ್ಲಿ ಇಥಿಯೋಪಿಯ, ಈಜಿಪ್ಟ್, ಕೆನ್ಯ, ನೈಜೀರಿಯ, ಸುಡಾನ್ ಮತ್ತು ಸೋಮಾಲಿಯದಲ್ಲಿ 75% ನಡೆಸಲ್ಪಡುತ್ತದೆ. ಜಿಬೂಟಿ ಮತ್ತು ಸೋಮಾಲಿಯದಲ್ಲಿ 98% ಹುಡುಗಿಯರಿಗೆ ಪರಿಕರ್ತನ ಮಾಡಲ್ಪಡುತ್ತದೆ.” ಆ ವಿಧಾನಗಳು, ಸೋಂಕು, ನೋವನ್ನಲ್ಲದೆ, ದೀರ್ಘ ಸಮಯದ ರಕ್ತಸ್ರಾವ, ಬಂಜೆತನ, ಮತ್ತು ಮರಣವನ್ನು ಉಂಟುಮಾಡಸಾಧ್ಯವಿದೆ. “ಪರಿಕರ್ತನವನ್ನು ಯಾವ ಧರ್ಮವೂ ಆವಶ್ಯಕವೆನ್ನುವುದಿಲ್ಲ. ಅದು ಕನ್ಯತ್ವವನ್ನು ಸಂರಕ್ಷಿಸಲು, ವಿವಾಹಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಲೈಂಗಿಕತೆಯನ್ನು ನಿಗ್ರಹಿಸಲು ವಿನ್ಯಾಸಿಸಲ್ಪಟ್ಟಿರುವ ಒಂದು ಸಂಪ್ರದಾಯವಾಗಿದೆ” ಎಂದು ಆ ವರದಿಯು ತಿಳಿಸುತ್ತದೆ. ಮಹಿಳೆಯರ ಹಕ್ಕುಗಳು ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಯೊಂದಿಗೆ ಸಂಬಂಧಿಸಿರುವ ಗುಂಪುಗಳು ಮತ್ತು ಸಂಸ್ಥೆಗಳು, ಆ ಆಚರಣೆಯನ್ನು ಬಹಿಷ್ಕೃತವೆಂದು ಘೋಷಿಸಲಿಕ್ಕಾಗಿ ಸರಕಾರಗಳ ಮೇಲೆ ಒತ್ತಡವನ್ನು ಹಾಕುತ್ತಿವೆ.
ಇನ್ನೊಂದು ವರದಿಯು ತೋರಿಸುವುದೇನೆಂದರೆ, ಅನೇಕ ದೇಶಗಳಲ್ಲಿ ಹದಿವಯಸ್ಕ ಜನನಗಳು, ಪಟ್ಟುಬಿಡದ ಸಮಸ್ಯೆಯಾಗಿವೆ. ಉದಾಹರಣೆಗಾಗಿ ಔದ್ಯಮೀಕೃತ ಲೋಕದಲ್ಲಿ ಅಮೆರಿಕಕ್ಕೆ ಅತಿ ಉಚ್ಚವಾದ ಪ್ರಮಾಣವಿದೆ: 15ರಿಂದ 19 ವಯಸ್ಸಿನ ಪ್ರತಿ 1,000 ಹುಡುಗಿಯರಲ್ಲಿ ಪ್ರತಿ ವರ್ಷ 64 ಜನನಗಳು. ಜಪಾನಿನಲ್ಲಿ, ಪ್ರತಿ ವರ್ಷ ನಾಲ್ಕು ಜನನಗಳೊಂದಿಗೆ ತೀರ ಕಡಿಮೆ ಪ್ರಮಾಣವಿದೆ. ಹದಿವಯಸ್ಕ ಜನನಗಳು, ಒಬ್ಬ ಯುವ ಸ್ತ್ರೀಯ ವಿಕಸನ, ಶಿಕ್ಷಣ, ಮತ್ತು ಅವಕಾಶಗಳನ್ನು ಬಾಧಿಸುತ್ತವೆ ಮಾತ್ರವಲ್ಲ, ಅವು ಶಿಶುಗಳಿಗೂ ನ್ಯೂನ ಆರೈಕೆ, ಬಡತನ ಮತ್ತು ಒಂದು ಅಸ್ಥಿರ ಪರಿಸರದಂತಹ ಸಮಸ್ಯೆಗಳನ್ನು ತರಬಹುದು.
ಮಾಲಿನ್ಯ ಮತ್ತು ಬಾಲ್ಯಾವಸ್ಥೆಯ ಕ್ಯಾನ್ಸರ್
22,400 ಬ್ರಿಟಿಷ್ ಮಕ್ಕಳ 27 ವರ್ಷಗಳ ಅಧ್ಯಯನವನ್ನು ವಿಶ್ಲೇಷಿಸಿದ ಅನಂತರ, ಸಾಂಕ್ರಾಮಿಕ ರೋಗ ವಿಜ್ಞಾನಿಗಳ ಒಂದು ತಂಡವು ಕಂಡುಕೊಂಡದ್ದೇನೆಂದರೆ, ಮಾಲಿನ್ಯದ ಒಂದು ಮೂಲದಿಂದ ಐದು ಕಿಲೊಮೀಟರುಗಳ ಅಂತರದೊಳಗೆ ಜನಿಸಿದಂತಹ ಎಳೆಯರು, ಇತರ ಮಕ್ಕಳಿಗಿಂತ ಲ್ಯೂಕೇಮಿಯಾ ಮತ್ತು ಇತರ ಬಾಲ್ಯಾವಸ್ಥೆಯ ಕ್ಯಾನ್ಸರ್‌ಗಳಿಂದ ಸಾಯುವ ಅಪಾಯವು 20 ಪ್ರತಿಶತ ಹೆಚ್ಚು. ಯಾವುದರಿಂದ ಬಾಲ್ಯಾವಸ್ಥೆಯ ಕ್ಯಾನ್ಸರ್‌ನ ವೃದ್ಧಿಗೊಂಡಿರುವ ರೋಗಸ್ಥಿತಿಗಳು ಉಂಟುಮಾಡಲ್ಪಟ್ಟಿವೆಯೊ ಆ “ತೀರ ಸಂಭವನೀಯ ಕಾರ್ಯಗತಿಯು,” ವಾಯುವಾಹಿ ಮಲಿನಕಾರಕಗಳಿಗೆ ಒಡ್ಡುವಿಕೆಯಾಗಿದೆ ಎಂದು ಲಂಡನಿನ ದ ಟೈಮ್ಸ್ ವರದಿಸುತ್ತದೆ. ಅದನ್ನುಂಟುಮಾಡುವಂತಹ ಮಲಿನಕಾರಕಗಳು, ಪೆಟ್ರೋಲಿನ ಹೊಗೆಗಳು ಅಥವಾ ಎಣ್ಣೆ ಶೋಧನಾಗಾರಗಳು, ಮೋಟಾರುವಾಹನ ಫ್ಯಾಕ್ಟರಿಗಳು, ನ್ಯೂಕ್ಲಿಯರೇತರ ಶಕ್ತಿ ಸ್ಥಾವರಗಳು, ಲೋಹದ ಕಾರ್ಖಾನೆಗಳು, ಮತ್ತು ಸಿಮೆಂಟ್ ಕಾರ್ಖಾನೆಗಳಂತಹ ಉದ್ಯಮಿ ಕಾರ್ಖಾನೆಗಳಿಂದ ಹೊರಚಿಮ್ಮಲ್ಪಡುವ ಇತರ ಬಾಷ್ಪೀಕೃತ ಜೈವಿಕ ರಾಸಾಯನಿಕಗಳಾಗಿವೆಯೆಂದು ತೋರುತ್ತದೆ. ಮೋಟಾರುಮಾರ್ಗಗಳು ಮತ್ತು ರೈಲುಮಾರ್ಗಗಳ ನಾಲ್ಕು ಕಿಲೊಮೀಟರುಗಳ ಅಂತರದೊಳಗೆ ಹುಟ್ಟಿರುವ ಮಕ್ಕಳಲ್ಲಿ, ಕ್ಯಾನ್ಸರ್‌ನಿಂದಾಗಿ ಹೆಚ್ಚಿನ ಮರಣಗಳಿದ್ದವೆಂದೂ ಆ ಅಧ್ಯಯನವು ವರದಿಸುತ್ತದೆ. ಪೆಟ್ರೋಲ್ ಮತ್ತು ಡೀಸಲ್ ಇಂಧನಗಳು ಬಹುಶಃ ಅದಕ್ಕೆ ಕಾರಣವಾಗಿವೆಯೆಂದು ಆ ವರದಿಯ ಲೇಖಕರು ಹೇಳುತ್ತಾರೆ.
ರಕ್ತ ಮತ್ತು ಏಚ್‌ಐವಿ ಸೋಂಕು
ಲೋಕವ್ಯಾಪಕವಾಗಿ ಏಚ್‌ಐವಿ/ಏಯ್ಡ್ಸ್‌ನಿಂದ ಸೋಂಕಿತರಾಗಿರುವ ಸುಮಾರು 2.2 ಕೋಟಿ ಜನರಲ್ಲಿ, 90 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ ಅಭಿವೃದ್ಧಿಶೀಲ ದೇಶಗಳಲ್ಲಿ ಜೀವಿಸುತ್ತಾರೆ. “ಅಭಿವೃದ್ಧಿಶೀಲ ದೇಶಗಳಲ್ಲಿ ಹೊಸ ಏಚ್‌ಐವಿ ಸೋಂಕುಗಳಲ್ಲಿ 10 ಪ್ರತಿಶತದಷ್ಟು, ರಕ್ತಪೂರಣಗಳಿಂದ ಉಂಟುಮಾಡಲ್ಪಡುತ್ತದೆ” ಎಂದು ಲಂಡನ್ ಕೇಂದ್ರಿತ ಮಾಹಿತಿ ಸಂಸ್ಥೆಯಾದ ಪಾನಾಸ್ ವರದಿಸುತ್ತದೆ. ಅನೇಕ ದೇಶಗಳಲ್ಲಿ, ರಕ್ತದ ಸರಬರಾಯಿಗಳು ಸುರಕ್ಷಿತವಾಗಿಲ್ಲ, ಯಾಕಂದರೆ ಏಚ್‌ಐವಿಗಾಗಿರುವ ಪ್ರಯೋಗಶಾಲಾ ಪರೀಕ್ಷೆಗಳು ಪೂರ್ಣವಾಗಿ ಭರವಸಯೋಗ್ಯವಾಗಿಲ್ಲ. ದೃಷ್ಟಾಂತಕ್ಕಾಗಿ ಪಾಕಿಸ್ತಾನದಲ್ಲಿ, ಎಲ್ಲ ರಕ್ತದ ಬ್ಯಾಂಕ್‌ಗಳಲ್ಲಿ ಅರ್ಧಕ್ಕಿಂತ ಕಡಿಮೆ ಬ್ಯಾಂಕ್‌ಗಳಲ್ಲಿ ಏಚ್‌ಐವಿಯನ್ನು ಪರೀಕ್ಷಿಸುವ ಸಲಕರಣೆಯಿದೆ. ಫಲಸ್ವರೂಪವಾಗಿ, ಎಲ್ಲ ಹೊಸ ಏಚ್‌ಐವಿ ಸೋಂಕುಗಳಲ್ಲಿ 12 ಪ್ರತಿಶತ, ರಕ್ತಪೂರಣಗಳಿಂದ ಉಂಟುಮಾಡಲ್ಪಟ್ಟಿವೆ. ಏಯ್ಡ್ಸ್‌ನ ಪ್ರಥಮ ರೋಗಸ್ಥಿತಿಗಳು ಸುಮಾರು 15 ವರ್ಷಗಳ ಹಿಂದೆ ವರದಿಸಲ್ಪಟ್ಟಂದಿನಿಂದ, ಲೋಕವ್ಯಾಪಕವಾಗಿ ಸುಮಾರು ಮೂರು ಕೋಟಿ ಜನರು ಆ ರೋಗವನ್ನು ಉಂಟುಮಾಡುವ ವೈರಸಾದ ಏಚ್‌ಐವಿಯನ್ನು ಅಂಟಿಸಿಕೊಂಡಿದ್ದಾರೆ.
ಹದಿವಯಸ್ಸಿನ ಸಂಭೋಗ
ನೈಜೀರಿಯನ್ ವಾರ್ತಾಪತ್ರವಾದ ವೀಕ್‌ಎಂಡ್ ಕಾನ್‌ಕಾರ್ಡ್‌ಗನುಸಾರ, “ನೈಜೀರಿಯದ ತರುಣರು, ಲೋಕದಲ್ಲಿ ಲೈಂಗಿಕವಾಗಿ ಅತಿ ಸಕ್ರಿಯರಾಗಿರುವ ವ್ಯಕ್ತಿಗಳಲ್ಲಿ ಸೇರಿದ್ದಾರೆ” ಎಂಬುದನ್ನು ಇತ್ತೀಚಿನ ಒಂದು ಅಧ್ಯಯನವು ಕಂಡುಕೊಂಡಿತು. 14ರಿಂದ 19ನೆಯ ವಯಸ್ಸಿನ ನಡುವಣ ಹುಡುಗರಲ್ಲಿ 68 ಪ್ರತಿಶತ ಮತ್ತು ಹುಡುಗಿಯರಲ್ಲಿ 43 ಪ್ರತಿಶತ ಮಂದಿ, “ಪ್ರೌಢಾವಸ್ಥೆಯ ಆರಂಭದ ಸ್ವಲ್ಪ ಸಮಯದ ನಂತರವೇ” ಸಂಭೋಗ ನಡೆಸಿರುವುದಾಗಿ ಒಪ್ಪಿಕೊಂಡರು. ಇದು ಅನೇಕ ಅನಪೇಕ್ಷಿತ ಗರ್ಭಧಾರಣೆಗಳಿಗೆ ನಡಿಸಿದೆ. “ನೈಜೀರಿಯದಲ್ಲಿ 19 ವರ್ಷ [ಪ್ರಾಯದ] ಯುವ ಸ್ತ್ರೀಯರ ಮರಣಗಳಲ್ಲಿ 71 ಪ್ರತಿಶತವು, ಗರ್ಭಪಾತದ ಜಟಿಲತೆಗಳಿಗೆ ಸಂಬಂಧಿಸಿತ್ತು” ಎಂಬುದನ್ನು ಒಂದು ಪ್ರತ್ಯೇಕ ಅಧ್ಯಯನವು ತೋರಿಸುತ್ತದೆಂದು ಕಾನ್‌ಕಾರ್ಡ್ ಹೇಳುತ್ತದೆ.
ಕೈಗಳನ್ನು ತೊಳೆದುಕೊಳ್ಳುವ ಬಿಕ್ಕಟ್ಟು
ಫ್ರೆಂಚ್ ವೈದ್ಯಕೀಯ ವಾರ್ತಾಪತ್ರವಾದ ಲ ಕೋಟೀಡ್ಯಾನ್ ಡ್ಯೂ ಮೇಡಸ್ಯಾನ್‌ನ ಒಂದು ಇತ್ತೀಚಿನ ಲೇಖನವು, ಹೆಚ್ಚುತ್ತಿರುವಂತೆ ತೋರುವಂತಹ ಒಂದು ಚಿಂತಾಜನಕ ಪ್ರವೃತ್ತಿಯನ್ನು ಎತ್ತಿತೋರಿಸುತ್ತದೆ—ತಿನ್ನುವ ಮುಂಚೆ ಅಥವಾ ಪಾಯಿಖಾನೆಯನ್ನು ಬಳಸಿದ ಬಳಿಕ ಕೈಗಳನ್ನು ತೊಳೆದುಕೊಳ್ಳದೆ ಇರುವುದು. ಡಾ. ಫ್ರೇಡೇರೀಕ್ ಸಾಲ್ಡ್‌ಮಾನ್‌ಗನುಸಾರ, ವೈಯಕ್ತಿಕ ನೈರ್ಮಲ್ಯದ ಈ ಕೊರತೆಯು, ಒಂದು ಪ್ರಧಾನ ಆಹಾರಪಥ್ಯವು ಅಪಾಯಕರವಾಗಿರುವಂತೆ ಮತ್ತು ಒಂದು ವ್ಯಾಪಕವಾದ ಸಮಸ್ಯೆಯಾಗಿರುವಂತೆ ತೋರಬಹುದು. ಇಂಗ್ಲೆಂಡಿನ ಊಟವಸತಿ ತಂಗುದಾಣಗಳಲ್ಲಿನ ಕಡಲೆಬೀಜಗಳ ಬಟ್ಟಲುಗಳಲ್ಲಿ 12 ವಿಭಿನ್ನ ಮೂಲಗಳಿಂದ ಬಂದ ಮೂತ್ರದ ಜಾಡುಗಳನ್ನು ಕಂಡುಕೊಂಡ ಒಂದು ವರದಿಯನ್ನು ಆ ಲೇಖನವು ಉಲ್ಲೇಖಿಸುತ್ತದೆ. ಅಮೆರಿಕದ ಒಂದು ಶಾಲೆಯಲ್ಲಿನ ಇನ್ನೊಂದು ಅಧ್ಯಯನವು, ಒಬ್ಬ ಶಿಕ್ಷಕನಿಂದ ಮೇಲ್ವಿಚಾರಣೆಮಾಡಲ್ಪಟ್ಟ ಕ್ರಮವಾದ ಕೈಗಳ ತೊಳೆದುಕೊಳ್ಳುವಿಕೆಯು, ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದು, ಶಾಲೆಗೆ ಗೈರುಹಾಜರಾಗುವ ಮಕ್ಕಳ ಸಂಖ್ಯೆಯನ್ನು 51 ಪ್ರತಿಶತ ಕಡಿಮೆಗೊಳಿಸಿತು ಮತ್ತು ಉಸಿರಾಟದ ಸಮಸ್ಯೆಗಳಿಂದಾಗಿ ಗೈರುಹಾಜರಾಗುವವರ ಸಂಖ್ಯೆಯನ್ನು 23 ಪ್ರತಿಶತ ಕಡಿಮೆಗೊಳಿಸಿತು ಎಂಬುದನ್ನು ಪ್ರಕಟಪಡಿಸಿತು. ಮಕ್ಕಳಿಗೆ ಅಂತಹ ನೈರ್ಮಲ್ಯದ ಮೂಲ ನಿಯಮಗಳನ್ನು ಶೈಶವದಿಂದ ಕಲಿಸುವ ಮಹತ್ವವನ್ನು ಒತ್ತಿಹೇಳುತ್ತಾ ಆ ಲೇಖನವು ಸಮಾಪ್ತಿಗೊಂಡಿತು.
ಆನೆ ಸಂವಾದ
ಒಂದು ಆನೆಯ ಧ್ವನಿ ತಂತುಗಳು ಎಷ್ಟು ದೊಡ್ಡದಾಗಿವೆಯೆಂದರೆ, ಅವು ಉತ್ಪಾದಿಸುವ ಧ್ವನಿಗಳ ಮೂಲ ಆವರ್ತನದ ಸಂಖ್ಯೆ, ಪ್ರತಿ ಸೆಕೆಂಡಿಗೆ 20 ಆವರ್ತನ (ಸೈಕಲ್)ಗಳು ಅಥವಾ ಕಡಮೆ ಆಗಿದೆ—ಮಾನವ ಶ್ರವಣಶಕ್ತಿಯ ವ್ಯಾಪ್ತಿಗಿಂತ ತೀರ ಕಡಿಮೆ. ಅಂತಹ ಗಾಢವಾದ ಧ್ವನಿಗಳು ಚೆನ್ನಾಗಿ ಪ್ರವಹಿಸುತ್ತವೆ ಮತ್ತು ಒಂದೂವರೆ ಕಿಲೊಮೀಟರುಗಳಷ್ಟು ದೂರದಲ್ಲಿರುವ ಆನೆಗಳು ಅವುಗಳನ್ನು ಗುರುತಿಸಬಲ್ಲವು. ಅವು ಕುಟುಂಬ ಸದಸ್ಯ ಆನೆಗಳ ಮತ್ತು ಅವುಗಳ ಗುಂಪಿನೊಂದಿಗಿರುವ ಆನೆಗಳ ಸಂಕೇತಗಳಿಗೆ ಪ್ರತಿಕ್ರಿಯಿಸುತ್ತಾ, 150ರಷ್ಟು ಭಿನ್ನ ಕರೆಗಳನ್ನೂ ಗುರುತಿಸಬಲ್ಲವು. ಸಾಮಾನ್ಯವಾಗಿ ಆನೆಗಳು ಅಪರಿಚಿತರ ಕರೆಗಳನ್ನು ಅಲಕ್ಷಿಸುತ್ತವೆ ಅಥವಾ ಅವುಗಳನ್ನು ಕೇಳುವಾಗ ಕೆರಳುತ್ತವೆ. ಕೆನ್ಯದಲ್ಲಿನ ಆ್ಯಂಬೊಸೆಲಿ ನ್ಯಾಷನಲ್ ಪಾರ್ಕ್‌ನಲ್ಲಿನ ಸಂಶೋಧನಾ ಅಧ್ಯಯನಗಳ ಬಳಿಕ, ಬ್ರಿಟನ್‌ನ ಸಸೆಕ್ಸ್ ವಿಶ್ವವಿದ್ಯಾನಿಲಯದ ಪ್ರಾಣಿ ವರ್ತನಾತಜ್ಞೆ ಡಾ. ಕ್ಯಾರನ್ ಮಕೋಮ್ ವಿವರಿಸಿದ್ದೇನೆಂದರೆ, “ಧ್ವನಿ ಸಂವಾದದ ಅಂತಹ ವಿಸ್ತೃತ ಜಾಲಗಳು ಇತರ ಯಾವುದೇ ಸಸ್ತನಿಯಲ್ಲಿ ಪ್ರದರ್ಶಿಸಲ್ಪಟ್ಟಿಲ್ಲ” ಎಂದು ಲಂಡನಿನ ದ ಟೈಮ್ಸ್ ವರದಿಸುತ್ತದೆ.