ನಮ್ಮ ವಾಚಕರಿಂದ
ದಬಾವಣೆಗಾರಿಕೆ—ಹಾನಿಯೇನು? “ಯುವ ಜನರು ಪ್ರಶ್ನಿಸುವುದು . . . ದಬಾವಣೆಗಾರಿಕೆ—ಹಾನಿಯೇನು?” (ಏಪ್ರಿಲ್ 8, 1997) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ಶಾಲೆಯಲ್ಲಿ ತೀರ ದುರ್ಬಲರಾಗಿರುವವರನ್ನು ಎಲ್ಲರೂ ಅವಮಾನಿಸುತ್ತಾರೆ, ಮತ್ತು ಅದನ್ನೇ ಮಾಡುವಂತೆ ನಾನೂ ಪ್ರಚೋದಿಸಲ್ಪಟ್ಟೆ. ಆದರೆ ಮತ್ತೊಬ್ಬ ವ್ಯಕ್ತಿಯ ಸನ್ನಿವೇಶದಲ್ಲಿ ನಮ್ಮನ್ನೇ ಇರಿಸಿಕೊಳ್ಳುವುದರ ಕುರಿತು ಈ ಲೇಖನದಲ್ಲಿ ಕೊಡಲ್ಪಟ್ಟ ಸಲಹೆಯು, ದಬಾವಣೆಮಾಡುವುದನ್ನು ನಿಲ್ಲಿಸುವ ವಿಷಯದಲ್ಲಿ ನನಗೆ ಬಹಳಷ್ಟು ಸಹಾಯಮಾಡಿತು. ನಿಮಗೆ ಮತ್ತೊಮ್ಮೆ ಉಪಕಾರ.
ಎಮ್. ಎನ್., ಫ್ರಾನ್ಸ್
ನಾನು 17 ವರ್ಷ ಪ್ರಾಯದವಳು, ಮತ್ತು ಆ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರ. ಅದು ನನ್ನ ಪ್ರಾರ್ಥನೆಗಳಿಗೆ ಉತ್ತರವಾಗಿದ್ದು, ನನ್ನನ್ನು ನಿಜವಾಗಿಯೂ ಪ್ರೋತ್ಸಾಹಿಸಿತು. ಯೆಹೋವನು ದಬಾವಣೆಗಾರಿಕೆಯನ್ನು ದ್ವೇಷಿಸುತ್ತಾನೆಂಬುದನ್ನು ತಿಳಿದುಕೊಳ್ಳುವುದು, ನನ್ನ ನಡತೆಯಲ್ಲಿ ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ನನಗೆ ಬಹಳವಾಗಿ ಸಹಾಯಮಾಡಿದೆ. ಸುವರ್ಣ ನಿಯಮ ಮತ್ತು ಯೇಸುವಿನ ಮಾದರಿಯು ಸಹ ನನ್ನ ಮೇಲೆ ಪ್ರಭಾವ ಬೀರಿದವು, ಮತ್ತು ನಾನು ಸರಿಯಾಗಿ ಕ್ರಿಯೆಗೈಯುವಂತೆ ಅವು ನನಗೆ ಸಹಾಯಮಾಡಿದವು.
ವಿ. ಟಿ., ಇಟಲಿ
ಇತ್ತೀಚೆಗೆ, ನಿರೀಕ್ಷಣಾಲಯವೊಂದರಲ್ಲಿ ನಾನು ಒಂದು ಎಚ್ಚರ! ಪತ್ರಿಕೆಯನ್ನು ತೆಗೆದುಕೊಂಡು, ಈ ಸುಲಿಖಿತ ಲೇಖನವನ್ನು ನೋಡಿದೆ. ದಬಾವಣೆಗಾರಿಕೆಯು ಉಂಟುಮಾಡಬಲ್ಲ ಶಾಶ್ವತವಾದ ಹಾನಿಯ ಅರಿವು ನನಗೆ ಖಂಡಿತವಾಗಿಯೂ ಆಗುತ್ತದೆ. ನನ್ನ ಅಣ್ಣನು [ನನ್ನನ್ನು, ಅವನ ತಂಗಿಯನ್ನು] ಶಾಬ್ದಿಕವಾಗಿ, ಭಾವನಾತ್ಮಕವಾಗಿ, ಮತ್ತು ಶಾರೀರಿಕವಾಗಿ ಪೀಡಿಸಿದನು. ಅದರ ಕುರಿತು ಕೇಳಲ್ಪಟ್ಟಾಗ ಅವನು ಭುಜ ಎಗರಿಸಿ, ನಕ್ಕು, ಅದೊಂದು ಹುಡುಗಾಟದ ವಿಷಯವೆಂದು ಪ್ರತಿಪಾದಿಸುತ್ತಿದ್ದನು. ನನಗೆ ಹಾಸ್ಯಪ್ರಜ್ಞೆಯಿಲ್ಲದಿರುವುದರಿಂದ ಸಮಸ್ಯೆಯು ನನ್ನದೆಂದು ಅವನು ನನಗೆ ಹೇಳುತ್ತಿದ್ದನು! ನಾನು 13 ವರ್ಷ ಪ್ರಾಯದವಳೂ ಅವನು 15 ವರ್ಷ ಪ್ರಾಯದವನೂ ಆಗಿದ್ದಾಗ, ಅವನು ನನಗೆ ಲೈಂಗಿಕ ಪೀಡನೆಯ ಬೆದರಿಕೆಯನ್ನು ಒಡ್ಡತೊಡಗಿದನು. ಅವನು ಹಿರಿಯನೂ ದೊಡ್ಡವನೂ ಮತ್ತು ಬಹಳಷ್ಟು ಬಲಿಷ್ಠನೂ ಆಗಿದ್ದ ಕಾರಣ, ಅವನ ವಿಷಯವಾಗಿ ನಾನು ಸದಾ ಭಯದಲ್ಲಿ ಜೀವಿಸಿದೆ! ನನ್ನ ಹೆತ್ತವರು ನನ್ನನ್ನು ಎಂದೂ ಸಂರಕ್ಷಿಸಲಿಲ್ಲ. ಜೀವನದ ಗಂಭೀರ ವಿಷಯಗಳನ್ನು ಸಂಬೋಧಿಸಿದಕ್ಕಾಗಿ ಎಚ್ಚರ! ಪತ್ರಿಕೆಗೆ ಉಪಕಾರ. ಇಂತಹ ವಿಷಯಗಳನ್ನು ಸಂಬೋಧಿಸಲು ಧೈರ್ಯಬೇಕೆಂದು ನನಗೆ ಗೊತ್ತು. ಈ ಲೇಖನದಿಂದ ನೀವು ಅನೇಕ ಹೃದಯಗಳನ್ನು ಸ್ಪರ್ಶಿಸಿದ್ದೀರೆಂದು ನನಗನಿಸುತ್ತದೆ.
ಬಿ. ಎಸ್. ಎಮ್., ಅಮೆರಿಕ
ಭೌಗೋಲಿಕ ತೋಟ “ಒಂದು ಭೌಗೋಲಿಕ ತೋಟ—ಕನಸೊ ಭವಿಷ್ಯತ್ಕಾಲದ ವಾಸ್ತವಿಕತೆಯೊ?” (ಮೇ 8, 1997) ಎಂಬ ಸುಲಿಖಿತ ಲೇಖನಮಾಲೆಗಾಗಿ ನಾನು ನಿಮಗೆ ಉಪಕಾರ ಹೇಳಲೇಬೇಕು. ಹೌದು, ತೋಟಗಳು ಮತ್ತು ವರ್ಣಗಳು ನಮ್ಮ ಆರೋಗ್ಯವನ್ನು ಪ್ರಭಾವಿಸಿ, ನಮಗೆ ಸಂತೋಷವಾಗುವಂತೆ ಮಾಡಬಲ್ಲವು. “ಪ್ರಮೋದವನಕ್ಕೆ ಹಿಂದಿರುಗುವ ದಾರಿ” ಎಂಬ ಶೀರ್ಷಿಕೆಯುಳ್ಳ ಭಾಗವನ್ನು ನಾನು ಬಹಳ ಇಷ್ಟಪಟ್ಟೆ. ಆ ಕೆಲವೊಂದು ಮಾತುಗಳು ಬಹಳಷ್ಟು ಉತ್ತೇಜನದಾಯಕವಾಗಿದ್ದವು—‘ಇದೇ ದಾರಿ’ಯೆಂದು ಹೇಳುವ ಒಂದು ಆಮಂತ್ರಣದಂತಿದ್ದವು. ಭವಿಷ್ಯತ್ತಿನಲ್ಲಿ ಭೂಮಿಯನ್ನು ಪ್ರಮೋದವನವಾಗಿ ರೂಪಾಂತರಿಸಲು ಸಹಾಯಮಾಡುತ್ತಾ, ಬೆಳಗ್ಗೆಯಿಂದ ಸಂಜೆಯ ವರೆಗೆ ಕೆಲಸಮಾಡುವುದು ಎಂತಹ ಒಂದು ಆನಂದವಾಗಿರುವುದು! ಬಣ್ಣಹಚ್ಚುವುದು, ಚಿತ್ರಬಿಡಿಸುವುದು, ಮತ್ತು ಕರಕುಶಲಗಳಲ್ಲಿ ನಾನು ಆನಂದಿಸುವುದರಿಂದ, ಪತ್ರಿಕೆಗಳಲ್ಲಿರುವ ಎಲ್ಲ ಚಿತ್ರಗೆಲಸದಲ್ಲಿಯೂ ನಾನು ಉಲ್ಲಾಸಿಸುತ್ತೇನೆ.
ವಿ. ಆರ್., ಆಸ್ಟ್ರೇಲಿಯ
ಆ ಲೇಖನಗಳಿಗಾಗಿ ನಾನು ನಿಮ್ಮನ್ನು ಪ್ರಶಂಸಿಸಲು ಬಯಸುತ್ತೇನೆ. ನಾನು ಅವುಗಳಲ್ಲಿ ಪೂರ್ಣವಾಗಿ ಆನಂದಿಸಿದೆ. ನಾನು ಹೆಚ್ಚುಕಡಿಮೆ 80 ವರ್ಷ ಪ್ರಾಯದವಳು ಮತ್ತು ಈಗಲೂ ನನ್ನ ಅಂಗಳದಲ್ಲಿ ಕೆಲಸಮಾಡಲು ಇಷ್ಟಪಡುತ್ತೇನೆ. ಸ್ಪರ್ಧೆಯೊಂದರಲ್ಲಿ ನನ್ನ ಪುಷ್ಪಗಳು ಹಾಗೂ ತರಕಾರಿಗಳಿಗೆ ಪ್ರಥಮ ಬಹುಮಾನ ಸಿಗದೆ ಇರಬಹುದಾದರೂ, ಮನೆಯ ಹೊರಗಿದ್ದು ಅವುಗಳೊಂದಿಗೆ ಕೆಲಸಮಾಡುವುದು ನನಗಿಷ್ಟ. ಈ ಲೇಖನಗಳನ್ನು ಓದಿದಂದಿನಿಂದ, ಮಾನವರು ತೋಟಗಳಲ್ಲಿ ಕೆಲಸಮಾಡಲು ಇಷ್ಟಪಡುವುದೇಕೆಂಬುದು ನನಗೆ ಹೆಚ್ಚು ಉತ್ತಮವಾಗಿ ಅರ್ಥವಾಗುತ್ತದೆ.
ಆರ್. ಆರ್., ಅಮೆರಿಕ
ಒಂದು ವಿವಾಹವನ್ನು ರಕ್ಷಿಸಸಾಧ್ಯವೊ? “ದಾಂಪತ್ಯದ್ರೋಹದ ನಂತರವೂ ಒಂದು ವಿವಾಹವನ್ನು ರಕ್ಷಿಸಸಾಧ್ಯವೊ?” (ಮೇ 8, 1997) ಎಂಬ ಲೇಖನವನ್ನು ನಾನು ಓದಿದಾಗ, ಯೆಹೋವನು ನನಗೊಂದು ಪತ್ರವನ್ನು ಕಳುಹಿಸಿದ್ದಾನೆಂಬ ಭಾವನೆ ನನ್ನಲ್ಲಿ ಉಂಟಾಯಿತು. ನಾನು ಏನನ್ನು ಅನುಭವಿಸಿದೆನೊ ಅದನ್ನು ಮತ್ತು ನನ್ನಲ್ಲಿ ಉಂಟಾದ ಅನಿಸಿಕೆಗಳನ್ನು ಅದು ನಿಖರವಾಗಿ ವ್ಯಕ್ತಪಡಿಸಿತು. ನನ್ನ ಗಂಡ ಅಪನಂಬಿಗಸ್ತರಾಗಿದ್ದರೂ, ಪ್ರಾಮಾಣಿಕವಾಗಿ ಪಶ್ಚಾತ್ತಾಪಪಟ್ಟರು. ಲೇಖನವು ತಿಳಿಸಿದಂತೆ, ನಾನೊಂದು ಚಂಡಮಾರುತದಲ್ಲಿ ಸಿಕ್ಕಿಕೊಂಡಿರುವ ಅನಿಸಿಕೆ ನನಗಾಯಿತು. ಅವರನ್ನು ಕ್ಷಮಿಸಲು ನಾನು ಆರಿಸಿಕೊಂಡೆನಾದರೂ, ನನ್ನ ವಿಚಾರಗಳ ಕುರಿತಾಗಿ ನಾನು ಕೆಲವೊಮ್ಮೆ ನಾಚಿಕೆಪಟ್ಟುಕೊಂಡೆ. ನನ್ನ ಆಲೋಚನೆಗಳು ಸಂಪೂರ್ಣವಾಗಿ ಸಾಧಾರಣವೂ ನ್ಯಾಯಸಮ್ಮತವೂ ಆಗಿದ್ದವೆಂಬುದನ್ನು ನಾನು ಅರ್ಥಮಾಡಿಕೊಳ್ಳುವಂತೆ ಆ ಲೇಖನವು ನನಗೆ ಸಹಾಯಮಾಡಿತು. ಯೆಹೋವನು ನಮ್ಮ ಪ್ರಯತ್ನಗಳನ್ನು ಬಹಳವಾಗಿ ಆಶೀರ್ವದಿಸಿದ್ದಾನೆ, ಮತ್ತು ನಮ್ಮ ವಿವಾಹವು ಸಂರಕ್ಷಿಸಲ್ಪಟ್ಟಿದೆ.
ಎಲ್. ಪಿ., ಫ್ರಾನ್ಸ್
ನನ್ನ ವಿವಾಹವನ್ನು ರಕ್ಷಿಸಲು ಸಾಧ್ಯವಾಗದಿದ್ದಾಗ್ಯೂ, ನನಗಾದ ಅನಿಸಿಕೆಯನ್ನು ಈ ಲೇಖನವು ನಿಖರವಾಗಿ ವರ್ಣಿಸಿದ ಕಾರಣ ಅದೊಂದು ನಿಜವಾದ ಆಶೀರ್ವಾದವಾಗಿತ್ತು. ಲೇಖನದಲ್ಲಿ ವರ್ಣಿಸಿದಂತಹ ಪ್ರತಿಯೊಂದು ವಿಷಯದೊಂದಿಗೆ ನನ್ನ ಸ್ವಂತ ಸನ್ನಿವೇಶವನ್ನು ನಾನು ಸಂಬಂಧಿಸಸಾಧ್ಯವಿತ್ತು. ಅದರಿಂದ ತದ್ರೀತಿಯ ಪ್ರಯೋಜನವನ್ನು ಪಡೆದುಕೊಂಡಿರುವ ಇತರರ ಪರಿಚಯವೂ ನನಗಿದೆ. ನನ್ನ ಸನ್ನಿವೇಶದಲ್ಲಿರುವ ಒಬ್ಬರಿಗೆ ಹೇಗನಿಸುತ್ತದೆಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೆಂದು ಅನೇಕರು ಕಂಡುಕೊಳ್ಳುವುದರಿಂದ, ಅವರಿಗೆ ಒಳನೋಟವನ್ನು ನೀಡುತ್ತಾ ಈ ಲೇಖನವು ಬಹಳ ಸಹಾಯಕಾರಿಯಾಗಿರುವುದು.
ಎಮ್. ಕೆ., ಐರ್ಲಂಡ್
ಅಪನಂಬಿಗಸ್ತ ಸಂಗಾತಿಯಾಗಿರುವ ಒಬ್ಬ ಅವಿಶ್ವಾಸಿಯನ್ನು ನಾನು ವಿವಾಹವಾಗಿ ಒಂಬತ್ತು ವರ್ಷಗಳು ಅವನೊಂದಿಗಿದ್ದೆ. “ವಿವಾಹವನ್ನು ರಕ್ಷಿಸಸಾಧ್ಯವೊ?” ಎಂಬ ಉಪಶೀರ್ಷಿಕೆಯ ಕೆಳಗಿದ್ದ ಪ್ಯಾರಗ್ರಾಫ್‌ಗಳನ್ನು ನಾನು ಓದಿದಾಗ, ನನ್ನ ಮನಃಸ್ಥಿತಿ ಹೆಚ್ಚು ಉತ್ತಮಗೊಂಡ ಅನಿಸಿಕೆ ನನಗಾಯಿತು. ನನ್ನ ಗಂಡನು ಇನ್ನೊಬ್ಬ ಸ್ತ್ರೀಯೊಂದಿಗಿನ ಸಂಬಂಧವನ್ನು ಮುಂದುವರಿಸುತ್ತಾ, ನಮ್ಮ ವಿವಾಹವನ್ನು ಕಾಪಾಡಿಕೊಳ್ಳಲು ಬಯಸುತ್ತಾನೆ. ನಮ್ಮ ವಿವಾಹಕ್ಕೆ ಒಂದು ಅಂತ್ಯವನ್ನು ನಾನು ಹಾಕುತ್ತಿರುವುದರಿಂದ ನಾನು ಸಂತೋಷಿಸುತ್ತೇನೆ. ಈಗ ನಾನು ಪುನಃ ಜೀವನಾರಂಭವನ್ನು ಮಾಡಿ, ಒಬ್ಬ ಒಂಟಿ ಹೆತ್ತವಳಾಗಿರ ಬೇಕಾಗುತ್ತದೆ.
ಎಮ್. ಎಸ್. ಬಿ., ಟ್ರಿನಿಡಾಡ್
ಸುಂದರವಾದ ಹಾಗೂ ಸಂವೇದನಾಶೀಲ ಲೇಖನಕ್ಕಾಗಿ ನಿಮಗೆ ಉಪಕಾರ. ರಾಜಿಮಾಡಿಕೊಳ್ಳುವುದು ಯಶಸ್ವಿಕರವಾಗಿರುವುದೊ ಇಲ್ಲವೊ ಎಂಬುದನ್ನು ನಿರ್ಧರಿಸುವುದರಲ್ಲಿ ಉಪಯೋಗಿಸಲಿಕ್ಕಾಗಿ ಈ ಬುದ್ಧಿವಾದವು ಅತ್ಯುತ್ತಮವಾಗಿತ್ತು. ನನ್ನ ಗಂಡನು ಅಪನಂಬಿಗಸ್ತನಾಗಿರುವುದಾದರೆ ನಾನೆಂದಿಗೂ ಅವನನ್ನು ಕ್ಷಮಿಸಸಾಧ್ಯವಿಲ್ಲವೆಂದು ನಾನು ಯಾವಾಗಲೂ ಊಹಿಸಿದ್ದೆ. ಅದು ಯಾವಾಗಲೂ ಸರಿಯಾದ ಮನೋಭಾವವಲ್ಲವೆಂಬುದನ್ನು ನಾನು ಈಗ ಗ್ರಹಿಸುತ್ತೇನೆ. ದಾಂಪತ್ಯದ್ರೋಹವು ಸ್ಪಷ್ಟವಾಗಿಯೇ ಸದಾ ಬೆಳೆಯುತ್ತಿರುವ ಸಮಸ್ಯೆಯಾಗಿರುವುದು ಅವಮಾನಕರ, ಆದರೆ ಸ್ವತಃ ಸಹಾಯಮಾಡಿಕೊಳ್ಳುವುದು ಹೇಗೆಂಬುದರ ವಿಷಯದಲ್ಲಿನ ಶಾಸ್ತ್ರೀಯ ಒಳನೋಟಕ್ಕಾಗಿ ನಿಮಗೆ ಉಪಕಾರ. ಯೆಹೋವನ ಮೇಲಿನ ನನ್ನ ಅವಲಂಬನೆಯು, ಅಗಾಧವಾದ ಖಿನ್ನತೆಯನ್ನು ಅನುಭವಿಸುವಾಗ ನನಗೆ ಸಹಾಯಮಾಡಿತು ಮತ್ತು ನನ್ನ ಗಂಡನು ಬಹಳವಾಗಿ ಪಶ್ಚಾತ್ತಾಪಟ್ಟ (ಮತ್ತು ಈಗಲೂ ಪಡುತ್ತಿರುವ) ಕಾರಣ, ಕ್ಷಮಿಸಲು ಬಲವನ್ನು ಕಂಡುಕೊಳ್ಳುವಂತೆ ನನಗೆ ಸಹಾಯಮಾಡಿತು.
ಎಸ್. ಎನ್., ಅಮೆರಿಕ