ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 3/8 ಪು. 4-8
  • ಮಸ್ತಿಷ್ಕ ಆಘಾತ—ಅದರ ಕಾರಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಸ್ತಿಷ್ಕ ಆಘಾತ—ಅದರ ಕಾರಣ
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅದರ ಪರಿಣಾಮಗಳು
  • ಸಂವಾದಿಸುವ ಸಮಸ್ಯೆಗಳು
  • ಭಾವನಾತ್ಮಕ ಹಾಗೂ ವ್ಯಕ್ತಿತ್ವ ಬದಲಾವಣೆಗಳು
  • ಕುಟುಂಬ ಸದಸ್ಯರು ಸಹ ಬಲಿಪಶುಗಳಾಗುತ್ತಾರೆ
  • ಅದರ ಪರಿಣಾಮಗಳೊಂದಿಗೆ ಹೆಣಗಾಡುವುದು
    ಎಚ್ಚರ!—1998
  • ನಮ್ಮ ವಾಚಕರಿಂದ
    ಎಚ್ಚರ!—1998
  • ಮಸ್ತಿಷ್ಕ ಆಘಾತ!
    ಎಚ್ಚರ!—1998
  • ಜಗತ್ತನ್ನು ಗಮನಿಸುವುದು
    ಎಚ್ಚರ!—1999
ಇನ್ನಷ್ಟು
ಎಚ್ಚರ!—1998
g98 3/8 ಪು. 4-8

ಮಸ್ತಿಷ್ಕ ಆಘಾತ—ಅದರ ಕಾರಣ

“ದೇಹದ ಅತ್ಯಂತ ಸೂಕ್ಷ್ಮ ಅಂಗವು ಮಿದುಳಾಗಿದೆ” ಎಂದು, ಕೆನಡದ ಲಂಡನ್ನಿನ ವೆಸ್ಟರ್ನ್‌ ಆಂಟಾರಿಯೊ ವಿಶ್ವವಿದ್ಯಾನಿಲಯದ ನರಶಾಸ್ತ್ರಜ್ಞರಾದ ಡಾ. ವ್ಲಾಡೀಮಿರ್‌ ಹಾಕಿನ್‌ಸ್ಕೀ ಹೇಳುತ್ತಾರೆ. ಇದು ದೇಹದ ಒಟ್ಟು ತೂಕದ ಕೇವಲ 2 ಪ್ರತಿಶತದಷ್ಟಿದೆ. ಈ ಮಿದುಳು 1,000 ಕೋಟಿ ನರಜೀವಕೋಶಗಳನ್ನು ಒಳಗೊಂಡಿದೆ. ಈ ನರಜೀವಕೋಶಗಳು ಪ್ರತಿಯೊಂದು ಆಲೋಚನೆ, ಚಲನೆ, ಮತ್ತು ಸಂವೇದನೆಗಳನ್ನು ಉಂಟುಮಾಡಲಿಕ್ಕಾಗಿ, ಸತತವಾಗಿ ಪರಸ್ಪರ ಸಂಪರ್ಕಿಸುತ್ತವೆ. ಶಕ್ತಿಗಾಗಿ ಆಮ್ಲಜನಕ ಹಾಗೂ ಗ್ಲೂಕೋಸಿನ ಮೇಲೆ ಅವಲಂಬಿಸಿದ್ದು, ಅಪಧಮನಿ ರಕ್ತನಾಳಗಳ ಜಟಿಲ ವ್ಯವಸ್ಥೆಯ ಮೂಲಕ, ಮಿದುಳು ಸತತವಾದ ಸರಬರಾಯಿಯನ್ನು ಪಡೆಯುತ್ತದೆ.

ಹಾಗಿದ್ದರೂ, ಕೇವಲ ಕೆಲವೇ ಸೆಕೆಂಡುಗಳ ವರೆಗೆ, ಮಿದುಳಿನ ಯಾವುದೇ ಪರಿಮಿತ ಭಾಗಕ್ಕೆ ಆಮ್ಲಜನಕದ ಸರಬರಾಯಿಯು ಇಲ್ಲದಿರುವಾಗ, ಸೂಕ್ಮವಾದ ನರಜೀವಕೋಶಗಳ ಕೆಲಸಗಳು ದುರ್ಬಲಗೊಳಿಸಲ್ಪಡುತ್ತವೆ. ಕೆಲವೊಂದು ನಿಮಿಷಗಳಿಗಿಂತ ಹೆಚ್ಚಿನ ಸಮಯದ ವರೆಗೆ ಇದು ಮುಂದುವರಿಯುವಲ್ಲಿ, ಮಿದುಳಿಗೆ ಹಾನಿಯುಂಟಾಗುತ್ತದೆ. ಮತ್ತು ಮಿದುಳಿನ ಜೀವಕೋಶಗಳು ಸಾಯುತ್ತವೆ ಹಾಗೂ ಅವುಗಳೊಂದಿಗೆ ಅವು ನಿಯಂತ್ರಿಸುವ ಕೆಲಸಗಳೂ ನಿಂತುಹೋಗುತ್ತವೆ. ಈ ಸ್ಥಿತಿಯನ್ನು ರಕ್ತಕೊರತೆ ಎಂದು ಕರೆಯಲಾಗುತ್ತದೆ—ಇದು ಪ್ರಮುಖವಾಗಿ ಅಪಧಮನಿ ರಕ್ತನಾಳಗಳಲ್ಲಿ ತಡೆಯಾಗಿರುವುದರಿಂದ ಉಂಟಾಗುವ ಆಮ್ಲಜನಕದ ಕೊರತೆಯಾಗಿದೆ. ಆಮ್ಮಜನಕದ ಅಭಾವವು, ರಾಸಾಯನಿಕ ಪ್ರತಿಕ್ರಿಯೆಗಳ ಮಾರಕ ಧಾರೆಯನ್ನು ಉಂಟುಮಾಡುವಾಗ, ಮಿದುಳಿನ ಜೀವಕೋಶದ ಮೇಲೆ ಇನ್ನೂ ಹೆಚ್ಚಿನ ಹಾನಿಯು ಉಂಟುಮಾಡಲ್ಪಡುತ್ತದೆ. ಇದರ ಪರಿಣಾಮವೇ ಮಸ್ತಿಷ್ಕ ಆಘಾತವಾಗಿದೆ. ರಕ್ತನಾಳಗಳಲ್ಲಿ ಬಿರುಕುಂಟಾಗಿ, ಮಿದುಳನ್ನು ರಕ್ತದಿಂದ ಮುಳುಗಿಸಿ, ಅದಕ್ಕೆ ಜೊತೆಗೂಡುವ ನಾಳಮಾರ್ಗಗಳಿಗೆ ತಡೆಯುಂಟುಮಾಡುವಾಗಲೂ ಮಸ್ತಿಷ್ಕ ಆಘಾತವು ಸಂಭವಿಸುತ್ತದೆ. ಇದು ಸ್ನಾಯುಗಳಿಗೆ ಹೋಗುವ ರಾಸಾಯನಿಕ ಹಾಗೂ ವಿದ್ಯುತ್‌ ಹರಿವುಗಳಿಗೆ ಭಂಗವನ್ನುಂಟುಮಾಡಿ, ಮಿದುಳಿನ ಅಂಗಾಂಶಕ್ಕೆ ಹಾನಿಯನ್ನು ಉಂಟುಮಾಡುತ್ತದೆ.

ಅದರ ಪರಿಣಾಮಗಳು

ಪ್ರತಿಯೊಂದು ಮಸ್ತಿಷ್ಕ ಆಘಾತವು ಭಿನ್ನವಾಗಿರುತ್ತದೆ, ಮತ್ತು ಬಹುಮಟ್ಟಿಗೆ ಅಮಿತವಾಗಿರುವ ರೀತಿಗಳಲ್ಲಿ ಮಸ್ತಿಷ್ಕ ಆಘಾತಗಳು ವ್ಯಕ್ತಿಗಳನ್ನು ಬಾಧಿಸಬಲ್ಲದು. ಒಂದು ಮಸ್ತಿಷ್ಕ ಆಘಾತದ ಪ್ರತಿಯೊಂದು ಸಂಭವನೀಯ ಪರಿಣಾಮದಿಂದ ಯಾರೊಬ್ಬರೂ ನರಳುವುದಿಲ್ಲವಾದರೂ, ತೀಕ್ಷ್ಣತೆಯಿಲ್ಲದ ಹಾಗೂ ಸ್ವಲ್ಪವೇ ಗಮನಿಸಸಾಧ್ಯವಿರುವುದರಿಂದ ಹಿಡಿದು, ಗುರುತರವಾದ ಹಾಗೂ ವೇದನಾಭರಿತವಾಗಿ ಸ್ಪಷ್ಟವಾಗುವ ಹಂತದ ವರೆಗೂ ಅದರ ಪ್ರಭಾವಗಳು ಇರಬಹುದು. ಮಿದುಳಿನ ಯಾವ ಭಾಗದಲ್ಲಿ ಮಸ್ತಿಷ್ಕ ಆಘಾತವು ಸಂಭವಿಸುತ್ತದೋ ಅದು, ದೇಹಕ್ಕೆ ಸಂಬಂಧಿಸಿದ ಯಾವ ಕೆಲಸಗಳು ಕುಂಠಿತಗೊಳಿಸಲ್ಪಟ್ಟಿವೆ ಎಂಬುದನ್ನು ನಿರ್ಧರಿಸುತ್ತದೆ.

ಸಾಮಾನ್ಯವಾದ ಒಂದು ಬಾಧೆಯು ಯಾವುದೆಂದರೆ, ಕೈಕಾಲುಗಳ ಬಲಹೀನತೆ ಅಥವಾ ಪಾರ್ಶ್ವವಾಯು ಬಡಿತವೇ. ಸಾಮಾನ್ಯವಾಗಿ, ಇದು ದೇಹದ ಒಂದೇ ಭಾಗಕ್ಕೆ—ಅಂದರೆ, ಮಸ್ತಿಷ್ಕ ಆಘಾತವು ಎಲ್ಲಿ ಸಂಭವಿಸುತ್ತದೋ ಆ ಮಿದುಳಿನ ಭಾಗದ ವಿರುದ್ಧ ದಿಕ್ಕಿಗಿರುವ ಭಾಗಕ್ಕೆ—ಸೀಮಿತವಾಗಿದೆ. ಹೀಗೆ, ಮಿದುಳಿನ ಬಲಭಾಗದ ಹಾನಿಯು, ಎಡಭಾಗದ ಪಾರ್ಶ್ವವಾಯುವಿನಲ್ಲಿ ಫಲಿಸುತ್ತದೆ, ಮತ್ತು ಮಿದುಳಿನ ಎಡಭಾಗದ ಹಾನಿಯು, ಬಲಭಾಗದ ಪಾರ್ಶ್ವವಾಯುವಿನಲ್ಲಿ ಫಲಿಸುತ್ತದೆ. ಕೆಲವು ವ್ಯಕ್ತಿಗಳು ತಮ್ಮ ಕೈಕಾಲುಗಳನ್ನು ಪುನಃ ಉಪಯೋಗಿಸಲಾರಂಭಿಸಬಹುದಾದರೂ, ತಮ್ಮ ಪ್ರತಿಯೊಂದು ಕೈಕಾಲುಗಳು ತಮ್ಮದೇ ಆದ ದಿಕ್ಕಿನಲ್ಲಿ ಚಲಿಸುವಂತೆ ತೋರುವ ಮಟ್ಟಕ್ಕೆ ಮಾತ್ರ ತಮ್ಮ ಸ್ನಾಯುಗಳು ಅಲ್ಲಾಡುತ್ತವೆಂಬುದನ್ನು ಅವರು ಕಂಡುಕೊಳ್ಳುತ್ತಾರೆ. ಆ ಆಘಾತಕ್ಕೆ ಬಲಿಯಾದ ವ್ಯಕ್ತಿಯು, ತನ್ನ ಸಮತೂಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾ ಇರುವ ಒಬ್ಬ ಅನನುಭವಿ ಸ್ಕೇಟರ್‌ನಂತೆ ಕಾಣುತ್ತಾನೆ. ನ್ಯೂ ಯಾರ್ಕ್‌ ವಿಶ್ವವಿದ್ಯಾನಿಲಯದ ವೈದ್ಯಕೀಯ ಕೇಂದ್ರದ ಡಾ. ಡೇವಿಡ್‌ ಲವೀನ್‌ ಹೇಳುವುದು: “ಮಸ್ತಿಷ್ಕ ಆಘಾತಕ್ಕೆ ಬಲಿಯಾದವರು, ತಮ್ಮ ಕೈಕಾಲು ಚಲಿಸುತ್ತಿದೆಯೋ ಇಲ್ಲವೋ ಮತ್ತು ಅದು ಯಾವ ದಿಕ್ಕಿನಲ್ಲಿದೆ ಎಂಬುದನ್ನು ಅವರಿಗೆ ತಿಳಿಯಪಡಿಸುವಂತಹ ರೀತಿಯ ಒಂದು ಸಂವೇದನೆಯನ್ನು ಕಳೆದುಕೊಂಡಿದ್ದಾರೆ.”

ಮಸ್ತಿಷ್ಕ ಆಘಾತದಿಂದ ಪಾರಾಗಿರುವವರಲ್ಲಿ 15 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ, ಅನಿರೀಕ್ಷಿತವಾಗಿ ಫಿಟ್ಸ್‌ಗೆ ಒಳಗಾಗುತ್ತಾರೆ. ಇದು ಸಾಮಾನ್ಯವಾಗಿ ಮೂರ್ಛೆತಪ್ಪಿದ ಅವಧಿಗಳಲ್ಲಿ, ಹತೋಟಿಮೀರಿದ ಅಲುಗಾಟಗಳಲ್ಲಿ ಪರಿಣಮಿಸುತ್ತದೆ. ಇದಲ್ಲದೆ, ನೋವಾಗುವುದು ಮತ್ತು ಸಂವೇದನೆಗಳಲ್ಲಿ ಬದಲಾವಣೆಗಳಾಗುವುದು ಸರ್ವಸಾಮಾನ್ಯವಾಗಿದೆ. ಮಸ್ತಿಷ್ಕ ಆಘಾತದಿಂದ ಪಾರಾಗಿದ್ದು, ತನ್ನ ಕೈಕಾಲುಗಳಲ್ಲಿ ಸತತವಾಗಿ ಜಡತೆಯನ್ನು ಅನುಭವಿಸುತ್ತಿರುವವನೊಬ್ಬನು ಹೇಳುವುದು: “ಕೆಲವು ರಾತ್ರಿಗಳಲ್ಲಿ ನನ್ನ ಕಾಲುಗಳಿಗೆ ಏನಾದರೂ ತಗಲಿ, ನಾನು ಎದ್ದು ಕೂತುಕೊಂಡದ್ದಿದೆ, ಏಕೆಂದರೆ ನನಗೆ ವಿದ್ಯುತ್‌ ಷಾಕ್‌ಗಳನ್ನು ಕೊಡಲಾಗುತ್ತಿದೆಯೋ ಎಂಬಂತೆ ತೋರುತ್ತದೆ.”

ಮಸ್ತಿಷ್ಕ ಆಘಾತದ ಪರಿಣಾಮವು, ದ್ವಿದೃಷ್ಟಿ (ಎರಡೆರಡಾಗಿ ಕಾಣಿಸುವುದು) ಹಾಗೂ ನುಂಗುವಿಕೆಯೊಂದಿಗಿನ ಸಮಸ್ಯೆಗಳನ್ನು ಒಳಗೊಳ್ಳಬಹುದು. ಬಾಯಿ ಹಾಗೂ ಗಂಟಲಿನ ಸಂವೇದನಾ ಕೇಂದ್ರಗಳಿಗೆ ಹಾನಿಯುಂಟಾಗಿರುವಲ್ಲಿ, ಜೊಲ್ಲುಸುರಿಸುವಿಕೆಯಂತಹ ಇನ್ನೂ ಹೆಚ್ಚಿನ ಅವಮಾನಕರ ನಡೆವಳಿಗಳು ಮಸ್ತಿಷ್ಕ ಆಘಾತಕ್ಕೆ ಬಲಿಯಾದವರಿಂದ ಅನುಭವಿಸಲ್ಪಡಸಾಧ್ಯವಿದೆ. ಐದು ಜ್ಞಾನೇಂದ್ರಿಯಗಳಲ್ಲಿ ಯಾವುದಾದರೂ ಬಾಧಿಸಲ್ಪಡಸಾಧ್ಯವಿದೆ. ಇದು ದರ್ಶನ, ಶ್ರವಣ, ಘ್ರಾಣ, ರಸನ, ಮತ್ತು ಸ್ಪರ್ಶದಲ್ಲಿ ತೊಂದರೆಯನ್ನು ಉಂಟುಮಾಡಸಾಧ್ಯವಿದೆ.

ಸಂವಾದಿಸುವ ಸಮಸ್ಯೆಗಳು

ಮಬ್ಬಾದ ಬೆಳಕಿರುವ ಒಂದು ಬೀದಿಯಲ್ಲಿ, ಭಾರಿ ಗಾತ್ರದ ಇಬ್ಬರು ಅಪರಿಚಿತರು ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆಂದು ಊಹಿಸಿಕೊಳ್ಳಿರಿ. ಹಿಂದಿರುಗಿ ಕಣ್ಣುಹಾಯಿಸಿದಾಗ, ಅವರು ನಿಮ್ಮ ಕಡೆಗೆ ಧಾವಿಸಿಬರುತ್ತಿರುವುದನ್ನು ನೀವು ನೋಡುತ್ತೀರಿ. ನೀವು ಸಹಾಯಕ್ಕಾಗಿ ಕಿರುಚಲು ಪ್ರಯತ್ನಿಸುತ್ತೀರಿ, ಆದರೆ ಧ್ವನಿಯೇ ಹೊರಬರುವುದಿಲ್ಲ! ಅಂತಹ ಒಂದು ಸನ್ನಿವೇಶದಲ್ಲಿ ನಿಮಗಾಗುವ ನಿಸ್ಸಹಾಯಕ ಆಶಾಭಂಗವನ್ನು ನೀವು ಊಹಿಸಿಕೊಳ್ಳಬಲ್ಲಿರೊ? ಮಸ್ತಿಷ್ಕ ಆಘಾತಕ್ಕೆ ಬಲಿಯಾದ ಅನೇಕರು, ತತ್‌ಕ್ಷಣವೇ ತಮ್ಮ ಮಾತಾಡುವ ಸಾಮರ್ಥ್ಯವನ್ನು ಕಳೆದುಕೊಂಡಾಗ, ಅವರು ಇದೇ ರೀತಿಯ ಆಶಾಭಂಗವನ್ನು ಅನುಭವಿಸುತ್ತಾರೆ.

ಸಾಂಕೇತಿಕವಾಗಿ ಸ್ನೇಹಿತರು ಹಾಗೂ ಕುಟುಂಬದಿಂದ ಪ್ರತ್ಯೇಕಿಸಲ್ಪಟ್ಟಿದ್ದು, ಆಲೋಚನೆಗಳು, ಭಾವನೆಗಳು, ನಿರೀಕ್ಷೆಗಳು, ಹಾಗೂ ಭಯಗಳನ್ನು ಕುರಿತು ಸಂವಾದಿಸಲು ಅಸಮರ್ಥರಾಗಿರುವುದು, ಮಸ್ತಿಷ್ಕ ಆಘಾತದ ಅತ್ಯಂತ ವಿಧ್ವಂಸಕ ಪರಿಣಾಮಗಳಲ್ಲಿ ಒಂದಾಗಿದೆ. ಮಸ್ತಿಷ್ಕ ಆಘಾತದಿಂದ ಪಾರಾದವನೊಬ್ಬನು ಇದನ್ನು ಈ ರೀತಿಯಲ್ಲಿ ವಿವರಿಸಿದನು: “ಪ್ರತಿ ಬಾರಿ ನಾನು ನನ್ನನ್ನು ವ್ಯಕ್ತಪಡಿಸಿಕೊಳ್ಳಲು ಪ್ರಯತ್ನಿಸಿದಾಗಲೂ, ಮಾತೇ ಹೊರಬರಲಿಲ್ಲ. ಮೌನವಾಗಿ ಉಳಿಯುವಂತೆ ನಾನು ಒತ್ತಾಯಿಸಲ್ಪಟ್ಟೆ ಮತ್ತು ಶಾಬ್ದಿಕ ಅಥವಾ ಲಿಖಿತ ಮಾರ್ಗದರ್ಶನಗಳನ್ನು ಅನುಸರಿಸಲೂ ಸಾಧ್ಯವಾಗಲಿಲ್ಲ. ಶಬ್ದಗಳು . . . ನನ್ನ ಸುತ್ತಲಿದ್ದ ಜನರು ಒಂದು ವಿದೇಶಿ ಭಾಷೆಯನ್ನು ಮಾತಾಡಿದರೋ ಎಂಬಂತೆ ಧ್ವನಿಸಿದವು. ನಾನು ಭಾಷೆಯನ್ನು ಗ್ರಹಿಸಲೂ ಸಾಧ್ಯವಾಗಲಿಲ್ಲ ಅಥವಾ ಭಾಷೆಯನ್ನು ಉಪಯೋಗಿಸಲೂ ಸಾಧ್ಯವಾಗಲಿಲ್ಲ.”

ಚಾರ್ಲ್ಸ್‌ನಾದರೊ ತನ್ನ ಬಳಿ ಮಾತಾಡಲ್ಪಡುತ್ತಿದ್ದ ಪ್ರತಿಯೊಂದು ವಿಷಯವನ್ನೂ ಅರ್ಥಮಾಡಿಕೊಂಡನು. ಆದರೆ ಪ್ರತ್ಯುತ್ತರ ನೀಡುವುದರ ಕುರಿತು ಅವನು ಬರೆಯುವುದು: “ನಾನು ಹೇಳಲು ಬಯಸಿದ ಶಬ್ದಗಳನ್ನು ನಿರ್ದಿಷ್ಟ ರೀತಿಯಲ್ಲಿ ರೂಪಿಸುತ್ತಿದ್ದೆ, ಆದರೆ ಅವು ಅಸ್ತವ್ಯಸ್ತವಾಗಿ ಹಾಗೂ ಅಭಾಸವಾಗಿ ಹೊರಬಂದವು. ಆ ಹಂತದಲ್ಲಿ ನನಗೆ, ನಾನು ನನ್ನಲ್ಲಿಯೇ ಸಿಲುಕಿಕೊಂಡಂತೆ ಅನಿಸುತ್ತಿತ್ತು.” ಮಸ್ತಿಷ್ಕ ಆಘಾತ: ಒಬ್ಬ ಒಡೆಯನ ಕೈಪಿಡಿ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ, ಆರ್ಥರ್‌ ಜೋಸೆಫ್ಸ್‌ ವಿವರಿಸುವುದು: “ಮಾತಾಡುವ ಸಮಯದಲ್ಲಿ ಒಂದು ನೂರಕ್ಕಿಂತಲೂ ಹೆಚ್ಚು ವಿಭಿನ್ನ ಸ್ನಾಯುಗಳು ನಿಯಂತ್ರಿಸಲ್ಪಡುತ್ತವೆ ಹಾಗೂ ಸುಸಂಘಟಿಸಲ್ಪಡುತ್ತವೆ. ಮತ್ತು ಈ ಸ್ನಾಯುಗಳಲ್ಲಿ ಪ್ರತಿಯೊಂದು ಸ್ನಾಯು, ಸರಾಸರಿ ಒಂದು ನೂರಕ್ಕಿಂತಲೂ ಹೆಚ್ಚು ನ್ಯೂರಾನ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. . . . ಒಂದು ಸೆಕೆಂಡು ಮಾತಾಡಲಿಕ್ಕಾಗಿ, ದಿಗ್ಭ್ರಮೆ ಹಿಡಿಸುವ 1,40,000 ನರಗಳ ಮತ್ತು ಸ್ನಾಯುಗಳ ಘಟನಾವಳಿಗಳ ಅಗತ್ಯವಿದೆ. ಈ ಸ್ನಾಯುಗಳನ್ನು ನಿಯಂತ್ರಿಸುತ್ತಿರುವ ಮಿದುಳಿನ ಒಂದು ಭಾಗಕ್ಕೆ ಉಂಟಾಗುವ ಹಾನಿಯು, ಅಭಾಸವಾದ ಮಾತಿನಲ್ಲಿ ಫಲಿಸಬಹುದಾಗಿರುವಲ್ಲಿ, ಅದು ಒಂದು ವಿಸ್ಮಯವಾಗಿದೆಯೊ?”

ಮಾತಿನ ಕ್ಷೇತ್ರದಲ್ಲಿ ಅನೇಕ ಪ್ರತಿಬಂಧಕ ಘಟನೆಗಳು, ಮಸ್ತಿಷ್ಕ ಆಘಾತದಿಂದ ಉಂಟುಮಾಡಲ್ಪಡುತ್ತವೆ. ಉದಾಹರಣೆಗಾಗಿ, ಮಾತಾಡಲು ಸಾಧ್ಯವಿಲ್ಲದ ವ್ಯಕ್ತಿಯೊಬ್ಬನು ಹಾಡಲು ಶಕ್ತನಾಗಿರಬಹುದು. ಇನ್ನೊಬ್ಬನು, ಬೇಕಾದಾಗ ಅಲ್ಲ, ಬದಲಾಗಿ ಮನಸ್ಸಿನ ಆವೇಗಕ್ಕನುಸಾರ ಥಟ್ಟನೆ ಮಾತಾಡಿಬಿಡಬಹುದು, ಅಥವಾ ಇನ್ನೊಂದು ಕಡೆಯಲ್ಲಿ, ಎಡೆಬಿಡದೆ ಮಾತಾಡುತ್ತಾ ಇರಬಹುದು. ಇನ್ನಿತರರು, ಶಬ್ದಗಳನ್ನು ಅಥವಾ ವಾಕ್ಸರಣಿಗಳನ್ನು ಪುನಃ ಪುನಃ ಹೇಳುತ್ತಾರೆ ಅಥವಾ ಅಸಂಬದ್ಧವಾಗಿ—ಅವರು ಇಲ್ಲ ಎಂದು ಹೇಳಲು ಹೌದು ಎಂದು ಹೇಳುತ್ತಾರೆ ಮತ್ತು ಹೌದು ಎಂದು ಹೇಳಲು ಇಲ್ಲ ಎಂದು ಹೇಳುತ್ತಾರೆ—ಶಬ್ದಗಳನ್ನು ಉಪಯೋಗಿಸುತ್ತಾರೆ. ತಾವು ಉಪಯೋಗಿಸಲು ಬಯಸುವ ಶಬ್ದಗಳು ಕೆಲವರಿಗೆ ಗೊತ್ತಿರುತ್ತವೆ, ಆದರೆ ಅವುಗಳನ್ನು ಹೇಳುವಂತೆ, ಬಾಯಿ, ತುಟಿಗಳು ಹಾಗೂ ನಾಲಿಗೆಯನ್ನು ಮಿದುಳು ಪ್ರಚೋದಿಸುವುದಿಲ್ಲ. ಅಥವಾ ಸ್ನಾಯುವಿನ ದೌರ್ಬಲ್ಯದಿಂದಾಗಿ ಅವರು ಅಸ್ಪಷ್ಟವಾಗಿ ಉಚ್ಚರಿಸಿ ಮಾತಾಡುವವರಾಗಿಬಹುದು. ಕೆಲವರು ಮಾತಾಡುವ ಸಮಯದಲ್ಲಿ ಮಧ್ಯೆ ಮಧ್ಯೆ ಉದ್ರಿಕ್ತರಾಗಬಹುದು.

ಮಸ್ತಿಷ್ಕ ಆಘಾತದ ಇನ್ನೊಂದು ಹಾನಿಯು, ಭಾವನಾತ್ಮಕ ಸ್ಥಿತಿಯನ್ನು ನಿಯಂತ್ರಿಸುವ ಮಿದುಳಿನ ಭಾಗದ ಒಂದು ನಷ್ಟವಾಗಿರಬಹುದು. ಇದರ ಫಲಿತಾಂಶವು, ನೀರಸವಾಗಿ ಧ್ವನಿಸುವ ಮಾತಾಗಿರಸಾಧ್ಯವಿದೆ. ಅಥವಾ ಮಸ್ತಿಷ್ಕ ಆಘಾತಕ್ಕೆ ಒಳಗಾದ ವ್ಯಕ್ತಿಗೆ, ಇತರರ ಭಾವನಾತ್ಮಕ ಸ್ಥಿತಿಯನ್ನು ಗ್ರಹಿಸುವುದರಲ್ಲಿ ತೊಂದರೆಯಿರಬಹುದು. ಇವುಗಳಂತಹ ಹಾಗೂ ಈ ಮೇಲೆ ತಿಳಿಸಿರುವಂತಹ ಸಂವಾದದ ತಡೆಗಟ್ಟುಗಳು, ಪತಿ ಹಾಗೂ ಪತ್ನಿಯಂತಹ ಕುಟುಂಬ ಸದಸ್ಯರ ಮಧ್ಯೆ ಬಿರುಕನ್ನು ಉಂಟುಮಾಡಬಲ್ಲವು. ಗೇಆರ್ಗ್‌ ವಿವರಿಸುವುದು: “ಮಸ್ತಿಷ್ಕ ಆಘಾತವು ಮುಖಭಾವಗಳು ಹಾಗೂ ಭಾವಾಭಿನಯಗಳನ್ನು—ಒಟ್ಟಿನಲ್ಲಿ ಇಡೀ ವ್ಯಕ್ತಿತ್ವದ ಮೇಲೆ—ಬಾಧಿಸುವ ಕಾರಣ, ಥಟ್ಟನೆ ನಮ್ಮ ಸಂಬಂಧವು ಈ ಮುಂಚಿನಂತೆ ಸಮರಸವಾಗಿ ಮುಂದುವರಿಯಲಿಲ್ಲ. ಸಂಪೂರ್ಣವಾಗಿ ಭಿನ್ನಳೇ ಆದ ಹೆಂಡತಿಯು ನನಗಿದ್ದಾಳೆ, ಅವಳನ್ನು ನಾನು ಪುನಃ ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ನನಗನಿಸಿತು.”

ಭಾವನಾತ್ಮಕ ಹಾಗೂ ವ್ಯಕ್ತಿತ್ವ ಬದಲಾವಣೆಗಳು

ಅನುಚಿತವಾದ ಮನಃಸ್ಥಿತಿ ಏರುಪೇರುಗಳು, ಕಣ್ಣೀರಿನ ಅಥವಾ ನಗುವಿನ ಭಾವೋದ್ರೇಕಗಳು, ವಿಪರೀತ ಕೋಪ, ಅಸಂಗತವಾದ ಸಂದೇಹಾಸ್ಪದ ಭಾವನೆಗಳು, ಮತ್ತು ಭಾವಪರವಶಗೊಳಿಸುವ ದುಃಖಭಾವಗಳು, ಮಸ್ತಿಷ್ಕ ಆಘಾತದಿಂದ ಪಾರಾದವರು ಹಾಗೂ ಅವರ ಕುಟುಂಬಗಳು ಹೆಣಗಾಡಬೇಕಾಗಿರಬಹುದಾದ ದಿಗ್ಭ್ರಮೆಹಿಡಿಸುವ ಭಾವನಾತ್ಮಕ ಹಾಗೂ ವ್ಯಕ್ತಿತ್ವ ವ್ಯತ್ಯಾಸಗಳ ಒಂದು ಭಾಗವಾಗಿವೆ.

ಗಿಲ್ಬರ್ಟ್‌ ಎಂಬ ಹೆಸರಿನ ಮಸ್ತಿಷ್ಕ ಆಘಾತಕ್ಕೆ ಒಳಗಾದ ವ್ಯಕ್ತಿಯು ಹೇಳುವುದು: “ಕೆಲವೊಮ್ಮೆ, ನಾನು ಭಾವುಕನಾಗುತ್ತೇನೆ. ತೀರ ಚಿಕ್ಕಪುಟ್ಟ ವಿಷಯಕ್ಕಾಗಿ ನಗುತ್ತೇನೆ ಅಥವಾ ಅಳುತ್ತೇನೆ. ಯಾವಾಗಲಾದರೊಮ್ಮೆ, ನಾನು ನಗುವಾಗ, ‘ನೀನು ಏಕೆ ನಗುತ್ತಾ ಇದ್ದೀ?’ ಎಂದು ಯಾರಾದರೊಬ್ಬರು ಕೇಳುತ್ತಾರೆ, ಮತ್ತು ನಾನು ನಿಜವಾಗಿಯೂ ಅವರಿಗೆ ಕಾರಣವನ್ನು ಹೇಳಲಾಗುವುದಿಲ್ಲ.” ಈ ಸಮಸ್ಯೆ, ಇದರೊಂದಿಗೆ ಸಮತೂಕವನ್ನು ಕಾಪಾಡಿಕೊಳ್ಳುವುದು, ಮತ್ತು ಸ್ವಲ್ಪ ಕುಂಟುನಡೆಯನ್ನೂ ಅನುಭವಿಸುವ ಸಮಸ್ಯೆಗಳು, ಗಿಲ್ಬರ್ಟ್‌ ಹೀಗೆ ಹೇಳುವಂತೆ ಪ್ರವರ್ಧಿಸಿದವು: “ಮಸ್ತಿಷ್ಕ ಆಘಾತಕ್ಕೆ ಮೊದಲು ನಾನು ಯಾವ ವ್ಯಕ್ತಿಯಾಗಿದ್ದೆನೋ ಅದೇ ವ್ಯಕ್ತಿ ನಾನಲ್ಲ, ನಾನು ಬೇರೆ ಯಾವುದೋ ದೇಹದಲ್ಲಿ ಇದ್ದೇನೆ, ನಾನು ಬೇರೊಬ್ಬ ವ್ಯಕ್ತಿಯೇ ಆಗಿದ್ದೇನೆ ಎಂಬಂತಹ ಅನಿಸಿಕೆ ನನಗಾಗುತ್ತದೆ.”

ಮನಸ್ಸು ಹಾಗೂ ದೇಹದಲ್ಲಿ ವ್ಯತ್ಯಾಸವನ್ನುಂಟುಮಾಡುವಂತಹ ದೌರ್ಬಲ್ಯಗಳೊಂದಿಗೆ ಜೀವಿಸುತ್ತಿರುವುದರಿಂದ, ಅಧಿಕಾಂಶ ಜನರು ಭಾವನಾತ್ಮಕವಾಗಿ ಭಾರಿ ಬದಲಾವಣೆಯನ್ನು ಅನುಭವಿಸುತ್ತಾರೆ. ಹೀರೋಯೂಕೀಗೆ ಆದ ಮಸ್ತಿಷ್ಕ ಆಘಾತವು, ಅವನಿಗೆ ಮಾತಿನ ಅಡಚಣೆಯನ್ನು ಮತ್ತು ಸ್ವಲ್ಪಮಟ್ಟಿಗೆ ಪಾರ್ಶ್ವವಾಯುವನ್ನೂ ಉಂಟುಮಾಡಿತು. ಅವನು ಹೇಳಿಕೆ ನೀಡುವುದು: “ಬಹಳಷ್ಟು ಸಮಯವು ಗತಿಸಿದ ಬಳಿಕವೂ, ನನಗೆ ಹೆಚ್ಚು ಗುಣವಾಗಲಿಲ್ಲ. ನಾನು ಈ ಮುಂಚಿನಂತೆ ನನ್ನ ಕೆಲಸವನ್ನು ಮುಂದುವರಿಸಲು ಶಕ್ತನಾಗುವುದಿಲ್ಲವೆಂಬುದನ್ನು ಗ್ರಹಿಸುತ್ತಾ, ನಾನು ಹತಾಶ ಸ್ಥಿತಿಗೆ ಇಳಿದೆ. ನಾನು ವಿಷಯಗಳನ್ನೂ ಜನರನ್ನೂ ದೂಷಿಸಲಾರಂಭಿಸಿದೆ. ಮತ್ತು ನನ್ನ ಭಾವನೆಗಳು ಸ್ಫೋಟಗೊಳ್ಳುತ್ತವೋ ಎಂಬ ಅನಿಸಿಕೆ ನನಗಾಯಿತು. ನಾನು ಒಬ್ಬ ಪುರುಷನಂತೆ ವರ್ತಿಸಲಿಲ್ಲ.”

ಮಸ್ತಿಷ್ಕ ಆಘಾತಕ್ಕೆ ಬಲಿಯಾದವರಿಗೆ, ಭಯ ಹಾಗೂ ಚಿಂತೆಗಳು ಸರ್ವಸಾಮಾನ್ಯವಾಗಿವೆ. ಇಲನ್‌ ಹೇಳಿಕೆ ನೀಡುವುದು: “ನನ್ನ ತಲೆಯಲ್ಲಿ, ಭಾವೀ ಮಸ್ತಿಷ್ಕ ಆಘಾತದ ಬಗ್ಗೆ ಎಚ್ಚರಿಕೆ ನೀಡಸಾಧ್ಯವಿರುವ ಒತ್ತಡವನ್ನು ನಾನು ಅನುಭವಿಸುವಾಗ, ನನಗೆ ಅಭದ್ರತೆಯ ಅನಿಸಿಕೆಗಳಾಗುತ್ತವೆ. ನಾನು ನನ್ನನ್ನು ನಕಾರಾತ್ಮಕವಾಗಿ ಯೋಚಿಸಲು ಬಿಡುವಲ್ಲಿ, ನಾನು ನಿಜವಾಗಿಯೂ ಭಯಭೀತಳಾಗುತ್ತೇನೆ.” ತಾನು ಅನುಭವಿಸುವ ಚಿಂತೆಯನ್ನು ರಾನ್‌ ಹೀಗೆ ವಿವರಿಸುತ್ತಾನೆ: “ಕೆಲವೊಮ್ಮೆ ಸರಿಯಾದ ತೀರ್ಮಾನಗಳಿಗೆ ಬರುವುದು ತೀರ ಅಸಾಧ್ಯವಾಗಿರುತ್ತದೆ. ಎರಡು ಅಥವಾ ಮೂರು ಚಿಕ್ಕಪುಟ್ಟ ಸಮಸ್ಯೆಗಳನ್ನು ಏಕಕಾಲದಲ್ಲಿ ಬಗೆಹರಿಸುವುದು ನನ್ನನ್ನು ಆಶಾಭಂಗಗೊಳಿಸುತ್ತದೆ. ನಾನು ವಿಷಯಗಳನ್ನು ಎಷ್ಟು ಬೇಗ ಮರೆಯುತ್ತೇನೆಂದರೆ, ಕೆಲವೊಮ್ಮೆ ಕೆಲವು ನಿಮಿಷಗಳ ಹಿಂದೆ ಮಾಡಿದ ಒಂದು ನಿರ್ಣಯವನ್ನು ಜ್ಞಾಪಿಸಿಕೊಳ್ಳಲು ಆಗುವುದಿಲ್ಲ. ಇದರ ಫಲಿತಾಂಶವಾಗಿ, ನಾನು ತುಂಬ ತಪ್ಪುಗಳನ್ನು ಮಾಡುತ್ತೇನೆ, ಮತ್ತು ಇದು ನನಗೆ ಹಾಗೂ ಇತರರಿಗೆ ಪೇಚಾಟವನ್ನು ಉಂಟುಮಾಡುವಂತಹದ್ದಾಗಿರುತ್ತದೆ. ಕೆಲವೇ ವರ್ಷಗಳಲ್ಲಿ ನಾನು ಹೇಗಿರುವೆ? ನಾನು ಬುದ್ಧಿಪೂರ್ವಕವಾಗಿ ಸಂಭಾಷಿಸಲು ಅಥವಾ ಕಾರನ್ನು ಡ್ರೈವ್‌ಮಾಡಲು ಶಕ್ತನಾಗಿರುವೆನೊ? ನಾನು ನನ್ನ ಹೆಂಡತಿಗೆ ಒಂದು ಹೊರೆಯಾಗಿ ಪರಿಣಮಿಸುವೆನೊ?”

ಕುಟುಂಬ ಸದಸ್ಯರು ಸಹ ಬಲಿಪಶುಗಳಾಗುತ್ತಾರೆ

ವಿಧ್ವಂಸಕ ಪರಿಣಾಮಗಳೊಂದಿಗೆ ಹೋರಾಡಬೇಕಾಗಿರುವವರು, ಮಸ್ತಿಷ್ಕ ಆಘಾತಕ್ಕೆ ಒಳಗಾಗಿರುವ ಬಲಿಪಶುಗಳು ಮಾತ್ರವೇ ಆಗಿರುವುದಿಲ್ಲವೆಂಬುದನ್ನು ಅವಲೋಕಿಸಸಾಧ್ಯವಿದೆ. ಅವರ ಕುಟುಂಬಗಳು ಸಹ ಹೋರಾಡುತ್ತವೆ. ಕೆಲವು ವಿದ್ಯಮಾನಗಳಲ್ಲಿ, ಒಂದು ಸಮಯದಲ್ಲಿ ಸ್ಪಷ್ಟವಾಗಿ ಉಚ್ಚರಿಸುತ್ತಾ, ಸಮರ್ಥವಾಗಿದ್ದ ವ್ಯಕ್ತಿಯೊಬ್ಬನು, ತಮ್ಮ ಕಣ್ಣುಗಳ ಮುಂದೆಯೇ ಥಟ್ಟನೆ ಕ್ಷೀಣಿಸುವುದನ್ನು, ಅವಲಂಬಿತ ಶಿಶುವಿನಂತಹ ಸ್ಥಿತಿಗೆ ಇಳಿಯುವುದನ್ನು ನೋಡುವುದರ ಭೀಕರ ಆಘಾತದೊಂದಿಗೆ ಅವರು ಹೆಣಗಾಡಬೇಕಾಗುತ್ತದೆ. ಕುಟುಂಬದ ಸದಸ್ಯರು ಅಪರಿಚಿತ ಪಾತ್ರಗಳನ್ನು ವಹಿಸಿಕೊಳ್ಳಬೇಕಾಗಿರಬಹುದಾದ ಸಮಯದಲ್ಲಿ, ಅವರ ಸಂಬಂಧಗಳಲ್ಲಿ ಒಡಕು ಉಂಟಾಗಸಾಧ್ಯವಿದೆ.

ಆ ದುರಂತಮಯ ಪರಿಣಾಮಗಳನ್ನು, ಹಾರೂಕೋ ಈ ರೀತಿಯಲ್ಲಿ ತಿಳಿಸುತ್ತಾಳೆ: “ನನ್ನ ಪತಿ ಬಹುಮಟ್ಟಿಗೆ ಪ್ರತಿಯೊಂದು ಪ್ರಮುಖ ವಿಚಾರದ ಕುರಿತಾದ ತಮ್ಮ ಜ್ಞಾಪಕಶಕ್ತಿಯನ್ನು ಕಳೆದುಕೊಂಡರು. ಅವರು ನಡೆಸುತ್ತಿದ್ದ ಒಂದು ಕಂಪೆನಿಯನ್ನು ನಾವು ಅನಿರೀಕ್ಷಿತವಾಗಿ ತೊರೆಯಬೇಕಾಯಿತು ಮತ್ತು ನಮ್ಮ ಮನೆ ಹಾಗೂ ನಮ್ಮ ಸ್ವತ್ತುಗಳನ್ನು ನಾವು ಕಳೆದುಕೊಂಡೆವು. ನನ್ನನ್ನು ತೀರ ನೋಯಿಸಿದ ವಿಷಯವು ಯಾವುದೆಂದರೆ, ನಾನು ನನ್ನ ಪತಿಯೊಂದಿಗೆ ಮುಕ್ತವಾಗಿ ಮಾತಾಡಲು ಅಥವಾ ಅವರ ಹತ್ತಿರ ಸಲಹೆ ಕೇಳಲು ಅಶಕ್ತಳಾದದ್ದೇ. ಅದು ರಾತ್ರಿಯೊ ಹಗಲೊ ಎಂಬ ವಿಷಯದಲ್ಲಿ ಅವರು ಗೊಂದಲಗೊಂಡಿರುವುದರಿಂದ, ರಾತ್ರಿಯಲ್ಲಿ ಅಗತ್ಯವಿರುವ ರಕ್ಷಣಾತ್ಮಕ ಡೈಅಪರ್‌ಗಳನ್ನು ಅವರು ಅನೇಕವೇಳೆ ಕಳಚಿಹಾಕುತ್ತಾರೆ. ಅವರು ಆ ಸ್ಥಿತಿಗೆ ಇಳಿಯುವ ಸಮಯ ಬರುವುದೆಂದು ನಮಗೆ ತಿಳಿದಿತ್ತಾದರೂ, ಅವರ ಸ್ಥಿತಿಯ ವಾಸ್ತವಿಕತೆಯನ್ನು ಅಂಗೀಕರಿಸುವುದು ನಮಗೆ ಇನ್ನು ಕೂಡ ಕಷ್ಟಕರವಾಗಿದೆ. ನಮ್ಮ ಸನ್ನಿವೇಶವು ಸಂಪೂರ್ಣವಾಗಿ ತದ್ವಿರುದ್ಧವಾಗಿದೆ, ಅದರಲ್ಲಿ ಈಗ ನನ್ನ ಮಗಳೂ ನಾನೂ ನನ್ನ ಪತಿಯ ಪಾಲಕರಾಗಿದ್ದೇವೆ.”

“ಮಸ್ತಿಷ್ಕ ಆಘಾತಕ್ಕೆ ಒಳಗಾಗಿರುವವರನ್ನು ನೀವು ಎಷ್ಟೇ ಪ್ರೀತಿಸುವುದಾದರೂ, ಅವರನ್ನು ನೋಡಿಕೊಳ್ಳುವುದು, ಕೆಲವೊಮ್ಮೆ ನಿಮಗೆ ಚಿಟ್ಟುಹಿಡಿಸುವಂತಹದ್ದಾಗಿರಸಾಧ್ಯವಿದೆ” ಎಂದು, ಮಸ್ತಿಷ್ಕ ಆಘಾತಗಳು: ಕುಟುಂಬಗಳಿಗೆ ತಿಳಿದಿರಬೇಕಾದ ವಿಷಯ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಇಲೇನ್‌ ಫಾಂಟ್ಲ್‌ ಶಿಂಬರ್ಗ್‌ ಹೇಳುತ್ತಾರೆ. “ಒತ್ತಡ ಹಾಗೂ ಜವಾಬ್ದಾರಿಗಳು ಕಡಿಮೆಯಾಗುವುದೇ ಇಲ್ಲ.” ಕೆಲವೊಂದು ವಿದ್ಯಮಾನಗಳಲ್ಲಿ, ಕೆಲವು ಕುಟುಂಬ ಸದಸ್ಯರು ತೋರಿಸುವ ಅತ್ಯುಚ್ಚ ಮಟ್ಟದ ಕಾಳಜಿಯು, ಆ ಕಾಳಜಿವಹಿಸುವವರ ಆರೋಗ್ಯ, ಭಾವನೆಗಳು, ಹಾಗೂ ಆತ್ಮಿಕತೆಗೆ ಹಾನಿಕರವಾಗಿರಸಾಧ್ಯವಿದೆ. ತನ್ನ ತಾಯಿಯ ಮಸ್ತಿಷ್ಕ ಆಘಾತವು, ತನ್ನ ಜೀವಿತದ ಮೇಲೆ ಭೀಕರವಾದ ಪರಿಣಾಮವನ್ನು ಬೀರಿತೆಂದು ಮಾರಿಯ ವಿವರಿಸುತ್ತಾಳೆ: “ನಾನು ಪ್ರತಿ ದಿನ ಅವಳನ್ನು ಭೇಟಿಮಾಡುತ್ತೇನೆ, ಮತ್ತು ಅವಳೊಂದಿಗೆ ಓದಿ, ಪ್ರಾರ್ಥಿಸುವ ಮೂಲಕ ಆತ್ಮಿಕವಾಗಿ ಅವಳ ಭಕ್ತಿವೃದ್ಧಿಮಾಡಲು ಪ್ರಯತ್ನಿಸುತ್ತೇನೆ. ಮತ್ತು ಪ್ರೀತಿ, ಆಲಿಂಗನಗಳು, ಮತ್ತು ಮುತ್ತುಗಳ ಮಹಾಪೂರವನ್ನೇ ಹರಿಸುತ್ತೇನೆ. ನಾನು ಮನೆಗೆ ಬಂದಾಗ, ಭಾವನಾತ್ಮಕವಾಗಿ ದಣಿದುಹೋಗಿರುತ್ತೇನೆ—ಕೆಲವು ದಿನಗಳಲ್ಲಿ ಎಷ್ಟರ ಮಟ್ಟಿಗೆ ದಣಿದುಹೋಗಿರುತ್ತೇನೆಂದರೆ, ನಾನು ವಾಂತಿಯನ್ನೂ ಮಾಡಿಕೊಳ್ಳುತ್ತೇನೆ.”

ಕಾಳಜಿವಹಿಸುವ ಕೆಲವರು ಹೆಣಗಾಡಬೇಕಾದ ಅತ್ಯಂತ ಕಷ್ಟಕರ ಸಂಗತಿಯು, ವರ್ತನೆಯಲ್ಲಿನ ಬದಲಾವಣೆಯಾಗಿದೆ. ನರ ಮತ್ತು ಮನಸ್ಸಿನ ಶಾಸ್ತ್ರಜ್ಞರಾದ ಡಾ. ರಾನಲ್ಡ್‌ ಕಾಲ್‌ವಾನ್ಯೋ ಎಚ್ಚರ! ಪತ್ರಿಕೆಗೆ ಹೇಳುವುದು: “ಮಸ್ತಿಷ್ಕದ ತೊಗಟೆಯ ಕಾರ್ಯಗಳ—ಅಂದರೆ, ಒಬ್ಬ ವ್ಯಕ್ತಿಯು ಹೇಗೆ ಆಲೋಚಿಸುತ್ತಾನೆ, ಹೇಗೆ ತನ್ನ ಜೀವಿತವನ್ನು ನಡೆಸುತ್ತಾನೆ, ತನ್ನ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹೇಗೆ ತೋರಿಸುತ್ತಾನೆ—ಮೇಲೆ ಪರಿಣಾಮವನ್ನು ಬೀರುವಂತಹ ಒಂದು ರೋಗವು ನಿಮಗಿದ್ದಾಗ, ನಾವು ಆ ವ್ಯಕ್ತಿಯ ವ್ಯಕ್ತಿತ್ವದೊಂದಿಗೇ ವ್ಯವಹರಿಸುತ್ತಿದ್ದೇವೆ. ಆದುದರಿಂದ, ಕೆಲವು ವಿಧಗಳಲ್ಲಿ, ಸಂಭವಿಸುವ ಮನಶ್ಶಾಸ್ತ್ರಸಂಬಂಧವಾದ ದೌರ್ಬಲ್ಯಗಳು, ನಿಜವಾಗಿಯೂ ಒಂದು ರೀತಿಯಲ್ಲಿ ಕುಟುಂಬದ ಜಗತ್ತನ್ನೇ ನಾಟಕೀಯವಾಗಿ ಬದಲಾಯಿಸಿಬಿಡುತ್ತವೆ.” ಯೋಶೀಕೋ ಹೇಳುವುದು: “ನನ್ನ ಪತಿ ತನ್ನ ಅನಾರೋಗ್ಯದ ಬಳಿಕ ಸಂಪೂರ್ಣವಾಗಿ ಬದಲಾಗಿರುವಂತೆ ತೋರುತ್ತದೆ. ತೀರ ಚಿಕ್ಕ ವಿಷಯಕ್ಕಾಗಿಯೂ ಥಟ್ಟನೆ ಕೋಪಗೊಳ್ಳುತ್ತಾರೆ. ಆ ಸಮಯಗಳಲ್ಲಿ ನಾನು ನಿಜವಾಗಿಯೂ ದುಃಖಪಡುತ್ತೇನೆ.”

ಅನೇಕವೇಳೆ, ಕುಟುಂಬದ ಹೊರಗಿರುವವರಿಂದ ವ್ಯಕ್ತಿತ್ವದ ಬದಲಾವಣೆಗಳು ಅರ್ಥಮಾಡಿಕೊಳ್ಳದೆ ಇರಲ್ಪಡಬಹುದು. ಆದುದರಿಂದ, ಕಾಳಜಿವಹಿಸುವ ಕೆಲವರಿಗೆ ಪ್ರತ್ಯೇಕಿಸಲ್ಪಟ್ಟ ಮತ್ತು ತಮ್ಮ ಹೊರೆಗಳನ್ನು ಒಂಟಿಯಾಗಿಯೇ ಹೊರುತ್ತಿರುವ ಅನಿಸಿಕೆಯಾಗುತ್ತದೆ. ಮೀಡೋರೀ ವಿವರಿಸುವುದು: “ಮಸ್ತಿಷ್ಕದ ಆಘಾತಗಳು, ನನ್ನ ಪತಿಗೆ ಮಾನಸಿಕ ಹಾಗೂ ಭಾವನಾತ್ಮಕ ಅಸಾಮರ್ಥ್ಯಗಳನ್ನು ತಂದೊಡ್ಡಿವೆ. ಅವರಿಗೆ ಪ್ರೋತ್ಸಾಹದ ಅಗತ್ಯವು ತುಂಬ ಇದೆಯಾದರೂ, ಅದರ ಕುರಿತಾಗಿ ಅವರು ಯಾರೊಂದಿಗೂ ಮಾತಾಡುವುದಿಲ್ಲ ಮತ್ತು ತಮ್ಮಷ್ಟಕ್ಕೇ ಕಷ್ಟವನ್ನು ಅನುಭವಿಸುತ್ತಾರೆ. ಆದುದರಿಂದ ಅವರ ಭಾವನೆಗಳನ್ನು ನಿರ್ವಹಿಸುವ ಕೆಲಸ ನನ್ನ ಮೇಲಿದೆ. ಪ್ರತಿ ದಿನ ನನ್ನ ಪತಿಯ ಮನಃಸ್ಥಿತಿಯನ್ನು ಗಮನಿಸುವುದು, ನನ್ನನ್ನು ಚಿಂತಿತಳನ್ನಾಗಿ, ಕೆಲವೊಮ್ಮೆ ಭಯಭೀತಳನ್ನಾಗಿಯೂ ಮಾಡಿದೆ.”

ಮಸ್ತಿಷ್ಕ ಆಘಾತದಿಂದ ಪಾರಾಗಿರುವ ಅನೇಕರು ಹಾಗೂ ಅವರ ಕುಟುಂಬಗಳು, ತಮ್ಮ ಜೀವಿತಗಳಲ್ಲಿ ಅದು ತರುವ ಬದಲಾವಣೆಗಳೊಂದಿಗೆ ಹೇಗೆ ಹೆಣಗಾಡಿವೆ? ಮಸ್ತಿಷ್ಕ ಆಘಾತದ ಅಂಗವಿಕಲಗೊಳಿಸುವ ಪರಿಣಾಮಗಳಿಂದ ಕಷ್ಟಾನುಭವಿಸುವವರಿಗೆ, ನಮ್ಮಲ್ಲಿ ಪ್ರತಿಯೊಬ್ಬರೂ ಯಾವ ವಿಧಗಳಲ್ಲಿ ಬೆಂಬಲ ನೀಡಬಹುದು? ನಮ್ಮ ಮುಂದಿನ ಲೇಖನವು ಅದನ್ನು ವಿವರಿಸುತ್ತದೆ.

[ಪುಟ 8 ರಲ್ಲಿರುವ ಚೌಕ/ಚಿತ್ರಗಳು]

ಎಚ್ಚರಿಕೆಯ ಸೂಚನೆಗಳು

• ಅನಿರೀಕ್ಷಿತವಾದ ಬಲಹೀನತೆ, ಜಡತೆ, ಅಥವಾ ಮುಖ, ಕೈ, ಅಥವಾ ಕಾಲಿಗೆ ಲಕ್ವ ಹೊಡೆಯುವುದು—ವಿಶೇಷವಾಗಿ ದೇಹದ ಒಂದು ಭಾಗಕ್ಕೆ

• ತತ್‌ಕ್ಷಣವೇ ದೃಷ್ಟಿಯು ಮಂಜಾಗುತ್ತದೆ ಅಥವಾ ಮಬ್ಬಾಗುತ್ತದೆ, ವಿಶೇಷವಾಗಿ ಒಂದು ಕಣ್ಣಿನಲ್ಲಿ; ದ್ವಿದೃಷ್ಟಿಯ (ಎರಡೆರಡಾಗಿ ಕಾಣಿಸುವುದು) ಸಂಭವ

• ಸರಳವಾದ ವಾಕ್ಯಗಳನ್ನು ಮಾತಾಡುವುದರಲ್ಲಿ ಅಥವಾ ಅರ್ಥಮಾಡಿಕೊಳ್ಳುವುದರಲ್ಲಿ ಸಹ ಕಷ್ಟವನ್ನು ಕಂಡುಕೊಳ್ಳುವುದು

• ತಲೆಸುತ್ತುವಿಕೆ ಅಥವಾ ಸಮತೂಕತೆ ಇಲ್ಲವೆ ಸುಸಂಘಟನೆಯ ಕೊರತೆ, ವಿಶೇಷವಾಗಿ ಇದರೊಂದಿಗೆ ಇನ್ನೊಂದು ರೋಗಲಕ್ಷಣವಿರುವಾಗ

ಕಡಿಮೆ ಸಾಮಾನ್ಯ ರೋಗಲಕ್ಷಣಗಳು

• ಅನಿರೀಕ್ಷಿತವಾದ, ವಿವರಿಸಲಸಾಧ್ಯವಾದ, ಮತ್ತು ತೀವ್ರವಾದ ತಲೆನೋವು—ಕೆಲವೊಮ್ಮೆ “ಹಿಂದೆಂದೂ ಅನುಭವಿಸಿರದಷ್ಟು ವಿಪರೀತ ತಲೆನೋವು” ಎಂದು ವರ್ಣಿಸಲ್ಪಟ್ಟಿದೆ

• ಥಟ್ಟನೆ ಪಿತ್ತೋದ್ರೇಕವಾಗುವುದು ಮತ್ತು ಜ್ವರ—ಇದು ವೈರಸ್‌ಸಂಬಂಧವಾದ ರೋಗಕ್ಕಿಂತ ಭಿನ್ನವಾಗಿದೆ, ಏಕೆಂದರೆ ಇದು ಅತಿ ಬಿರುಸಾಗಿ ದಾಳಿಯಿಡುತ್ತದೆ (ಅನೇಕ ದಿವಸಗಳಿಗೆ ಬದಲಾಗಿ ಕ್ಷಣಗಳು ಅಥವಾ ತಾಸುಗಳಲ್ಲೇ ಉಂಟಾಗಸಾಧ್ಯವಿದೆ)

• ಸ್ವಲ್ಪ ಸಮಯದ ವರೆಗೆ ಪ್ರಜ್ಞಾಹೀನ ಸ್ಥಿತಿಯಿರುತ್ತದೆ ಅಥವಾ ಸ್ವಲ್ಪ ಕಾಲಾವಧಿಯ ವರೆಗೆ ಕಡಿಮೆ ಅರಿವಿರುತ್ತದೆ (ತಲೆತಿರುಗಿ ಬೀಳುವಿಕೆ, ಗೊಂದಲ, ಸ್ನಾಯುಗಳ ಸೆಳೆತ, ಕೋಮ ಸ್ಥಿತಿ)

ರೋಗಲಕ್ಷಣಗಳನ್ನು ಅಲಕ್ಷಿಸದಿರಿ

ಡಾ. ಡೇವಿಡ್‌ ಲವೀನ್‌ ಹುರಿದುಂಬಿಸುವುದೇನೆಂದರೆ, ರೋಗಲಕ್ಷಣಗಳು ಕಂಡುಬರುವಾಗ, ಆ ರೋಗಿಯು “ಸಾಧ್ಯವಾದಷ್ಟು ಬೇಗನೆ ಆಸ್ಪತ್ರೆಯ ತುರ್ತುಚಿಕಿತ್ಸಾ ವಾರ್ಡಿಗೆ ಹೋಗಬೇಕು. ಮಸ್ತಿಷ್ಕ ಆಘಾತವು ಆರಂಭವಾದ ಮೊದಲ ಕೆಲವು ತಾಸುಗಳೊಳಗೆ ಅದಕ್ಕೆ ಚಿಕಿತ್ಸೆ ನಡೆಸುವಲ್ಲಿ, ಅದರ ಹಾನಿಯನ್ನು ಕಡಿಮೆಗೊಳಿಸಸಾಧ್ಯವಿದೆ ಎಂಬುದಕ್ಕೆ ಪುರಾವೆಯಿದೆ.”

ಕೆಲವೊಮ್ಮೆ ರೋಗಲಕ್ಷಣಗಳು ಕೇವಲ ಸ್ವಲ್ಪ ಕಾಲಾವಧಿಯ ವರೆಗೆ ಮಾತ್ರ ಗೋಚರವಾಗಿ, ತದನಂತರ ಇಲ್ಲದೆಹೋಗಬಹುದು. ಈ ಸಂಭವಗಳನ್ನು, ಟಿಐಎಗಳು ಅಥವಾ ಕ್ಷಣಿಕ ರಕ್ತಕೊರತೆಯ ಹೊಡೆತಗಳು ಎಂದು ಕರೆಯಲಾಗುತ್ತದೆ. ಅವುಗಳನ್ನು ಅಲಕ್ಷಿಸದಿರಿ, ಏಕೆಂದರೆ ಅವು ಗುರುತರವಾದ ಮಸ್ತಿಷ್ಕ ಆಘಾತದ ಅಪಾಯಗಳನ್ನು ಸೂಚಿಸಬಹುದು, ಮತ್ತು ಅದರ ಅನಂತರ ಭಾರಿ ಮಸ್ತಿಷ್ಕ ಆಘಾತವು ಸಂಭವಿಸಬಹುದು. ಒಬ್ಬ ವೈದ್ಯನು ಅದರ ಕಾರಣಗಳಿಗೆ ಔಷಧ ನೀಡಿ, ಭಾವೀ ಮಸ್ತಿಷ್ಕ ಆಘಾತದ ಅಪಾಯವನ್ನು ಕಡಿಮೆಗೊಳಿಸಲು ಸಹಾಯ ಮಾಡಬಲ್ಲನು.

ಅಮೆರಿಕದ ಇಂಗಲ್‌ವುಡ್‌, ಕಾಲೆರಾಡೊ, ರಾಷ್ಟ್ರೀಯ ಮಸ್ತಿಷ್ಕ ಆಘಾತ ಸಂಘದಿಂದ ಒದಗಿಸಲ್ಪಟ್ಟ ಮಾರ್ಗದರ್ಶನಗಳಿಂದ ತೆಗೆದುಕೊಳ್ಳಲಾಗಿದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ