ಅದರ ಪರಿಣಾಮಗಳೊಂದಿಗೆ ಹೆಣಗಾಡುವುದು
ಆಸ್ಪತ್ರೆಯೊಂದರ ಹಾಸಿಗೆಯಲ್ಲಿ ಲಕ್ವ ಹೊಡೆದ ಕೈಕಾಲುಗಳೊಂದಿಗೆ ಮಲಗಿದ್ದ ಗಿಲ್ಬರ್ಟ್, ತನ್ನ ವೈದ್ಯರಿಗೆ ಕೇಳಿದ್ದು: “ನಾನು ಪುನಃ ಎಂದಾದರೂ ನನ್ನ ಕೈಕಾಲುಗಳನ್ನು ಉಪಯೋಗಿಸಶಕ್ತನೋ?” ಪಂಥಾಹ್ವಾನದಾಯಕ ಉತ್ತರವನ್ನು ಗಿಲ್ಬರ್ಟ್ ಕೇಳಿಸಿಕೊಂಡನು: “ನೀನು ಹೆಚ್ಚು ಪ್ರಯತ್ನವನ್ನು ಮಾಡುವಲ್ಲಿ, ನಿನ್ನ ಕೈಕಾಲುಗಳ ಉಪಯೋಗವನ್ನು ಪುನಃ ಪಡೆದುಕೊಳ್ಳುವುದು ಹೆಚ್ಚು ಸುಲಭ.” “ನಾನು ಸಿದ್ಧನಿದ್ದೇನೆ!” ಎಂದು ಅವನು ಉತ್ತರಿಸಿದನು. 65ರ ಪ್ರಾಯದಲ್ಲಿ, ಶಾರೀರಿಕ ಚಿಕಿತ್ಸೆಯೊಂದಿಗೆ, ಸಕಾರಾತ್ಮಕವಾದ ಹೊರನೋಟವು, ಒಂದು ಗಾಲಿಕುರ್ಚಿಯಿಂದ ವಾಕರ್ಗೆ, ತದನಂತರ ಒಂದು ಕೋಲು ಹಿಡಿದು ನಡೆಯುವುದಕ್ಕೆ ಮತ್ತು ಅಂತಿಮವಾಗಿ ಕೆಲಸಕ್ಕೆ ಪ್ರಗತಿಮಾಡಲು ಸಹಾಯ ಮಾಡಿತು.
“ಇಂದಿನ ಮಸ್ತಿಷ್ಕ ಆಘಾತದ ಅನಂತರದ ಪುನಶ್ಚೇತನಗೊಳಿಸುವಿಕೆಯ ಚಿಕಿತ್ಸೆಗಳಲ್ಲಿ ಹೆಚ್ಚಿನವು, ಮಿದುಳಿನ ಒಂದು ಕ್ಷೇತ್ರವು ಹಾನಿಗೊಂಡಿರುವಲ್ಲಿ, ಆ ಗಾಯಗೊಂಡಿರುವ ಅಂಗಾಂಶದ ಪಾತ್ರವನ್ನು ಮಿದುಳಿನ ಇತರ ಕ್ಷೇತ್ರಗಳು ನಿರ್ವಹಿಸಸಾಧ್ಯವಿದೆ ಎಂಬ ಕಲ್ಪನೆಯನ್ನು ಬೆಂಬಲಿಸುತ್ತವೆ. ಚಿಕಿತ್ಸೆಯ ಒಂದು ಉದ್ದೇಶವು, ಒಳಗೂಡಿರುವ ಈ ಕ್ಷೇತ್ರಗಳ ಸಂಭವನೀಯತೆಯನ್ನು ಪರಿಣಾಮಕಾರಿಯಾಗಿ ವಿಕಸಿಸುವುದು ಮತ್ತು ಮಿದುಳು ಪುನಃ ವ್ಯವಸ್ಥಿತವಾಗಿ ಮಾರ್ಪಾಡಾಗುವಂತೆ ಅನುಮತಿಸಲು ಪ್ರಚೋದನೆಯನ್ನು ಒದಗಿಸುವುದೇ ಆಗಿದೆ” ಎಂದು ವೈನರ್, ಲೀ, ಮತ್ತು ಬೆಲ್ ಎಂಬ ಸಂಶೋಧಕರು ಹೇಳುತ್ತಾರೆ. ಆದರೂ, ಗುಣಹೊಂದುವಿಕೆಯು, ಮಿದುಳಿನಲ್ಲಿನ ಜಾಗ ಮತ್ತು ಮಸ್ತಿಷ್ಕ ಆಘಾತದ ತೀವ್ರತೆ, ಆ ವ್ಯಕ್ತಿಯ ಸಾಮಾನ್ಯ ಆರೋಗ್ಯ, ವೈದ್ಯಕೀಯ ಉಪಚಾರದ ಗುಣಮಟ್ಟ, ಮತ್ತು ಇತರರ ಬೆಂಬಲದಂತಹ ಇನ್ನಿತರ ಅಂಶಗಳಿಂದಲೂ ನಿರ್ಧರಿಸಲ್ಪಡುತ್ತದೆ.
ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲ
ಮೂರು ವರ್ಷಗಳ ವರೆಗೆ ಎರಿಕಳು ಪುನಶ್ಚೇತನಗೊಳಿಸುವಿಕೆಯ ವ್ಯಾಯಾಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಳು. ಅವಳು ನಡೆಯಲು ಮತ್ತು ಅಶಕ್ತವಾದ ತನ್ನ ಎಡಗೈಗೆ ಬದಲಾಗಿ ತನ್ನ ಬಲಗೈಯನ್ನು ಉಪಯೋಗಿಸಲು ಕಲಿತಳು. ಅದರೊಂದಿಗೆ ಹೆಣಗಾಡಲು ಅವಳಿಗೆ ಯಾವುದು ಶಕ್ತಳನ್ನಾಗಿಮಾಡಿತೆಂದು ಅವಳು ಹೇಳುತ್ತಾಳೆ: “ಅತ್ಯಂತ ಪ್ರಾಮುಖ್ಯವಾದ ವಿಷಯವು ಏನೆಂದರೆ, ನನ್ನ ಪತಿಯೂ ನನ್ನ ಸ್ನೇಹಿತರೂ ನನಗೆ ನಿಷ್ಠಾವಂತರಾಗಿ ಉಳಿದರು. ಅವರು ನನ್ನನ್ನು ಪ್ರೀತಿಸಿದರು ಎಂಬುದನ್ನು ತಿಳಿದುಕೊಳ್ಳುವುದೇ ನನಗೆ ಬಲವನ್ನು ಕೊಟ್ಟಿತು, ಮತ್ತು ಪ್ರಯತ್ನವನ್ನು ಬಿಟ್ಟುಬಿಡಬೇಡ ಎಂದು ಅವರು ನನ್ನನ್ನು ಪ್ರೋತ್ಸಾಹಿಸಿದಾಗ, ಅದು ನನಗೆ ಪ್ರಚೋದನೆ ನೀಡಿತು.”
ತಮ್ಮ ಪ್ರಿಯ ಜನರ ಗುಣಹೊಂದುವ ಪ್ರಕ್ರಿಯೆಯಲ್ಲಿ, ಕುಟುಂಬದ ಸದಸ್ಯರು ಸಹಭಾಗಿಗಳಾಗಿ ಪರಿಣಮಿಸುತ್ತಾರೆ. ಅವರು ವೈದ್ಯಕೀಯ ಸಿಬ್ಬಂದಿಯಿಂದ ಪ್ರಶ್ನೆಗಳನ್ನು ಕೇಳಬೇಕು ಮತ್ತು ಈಗಾಗಲೇ ಮಾಡಿರುವ ಪ್ರಗತಿಗಳನ್ನು ಕಳೆದುಕೊಳ್ಳದಿರುವಂತೆ ಮನೆಯಲ್ಲಿಯೇ ಮುಂದುವರಿಸಬೇಕಾಗಿರಬಹುದಾದ ಚಿಕಿತ್ಸೆಗಳನ್ನು ಕೈಕೊಳ್ಳುವ ಅಗತ್ಯವಿದೆ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಂದ ತೋರಿಸಲ್ಪಡುವ ತಾಳ್ಮೆ, ದಯಾಭಾವ, ಅರ್ಥಮಾಡಿಕೊಳ್ಳುವಿಕೆ, ಹಾಗೂ ಮಮತೆಯು, ಮಾತಾಡಲು, ಓದಲು ಮತ್ತು ದೈನಂದಿನ ಜೀವಿತದ ಇನ್ನಿತರ ಕೌಶಲಗಳನ್ನು ಪುನಃ ಕಲಿಯಲು ಬೇಕಾಗಿರುವ ಭದ್ರವಾದ ಭಾವನಾತ್ಮಕ ವಾತಾವರಣವನ್ನು ಒದಗಿಸುತ್ತದೆ.
ಒತ್ತಡವನ್ನು ಹೇರುವುದು ಮತ್ತು ಅತಿಶುಶ್ರೂಷೆಯನ್ನು ಮಾಡುವುದರ ಮಧ್ಯೆ ಸಮತೂಕದಿಂದಿರಲು ಪ್ರಯತ್ನಿಸುತ್ತಾ, ತನ್ನ ಪತ್ನಿಯಾದ ಇಲನಳಿಗೆ ವ್ಯಾಯಾಮ ಹಾಗೂ ಚಿಕಿತ್ಸೆಯೊಂದಿಗೆ ಸಹಾಯ ಮಾಡುತ್ತಾ, ಜಾನ್ ಕಷ್ಟಪಟ್ಟು ಕೆಲಸಮಾಡಿದನು. ಅವನು ತನ್ನ ಕುಟುಂಬದ ಪ್ರಯತ್ನಗಳನ್ನು ಹೀಗೆ ವಿವರಿಸುತ್ತಾನೆ: “ಇಲನಳು ತೀರ ಅಗಾಧವಾದ ಸ್ವಾನುಕಂಪದಲ್ಲಿ ಮುಳುಗಿಹೋಗುವಂತೆ ನಾವು ಬಿಡುತ್ತಿರಲಿಲ್ಲ. ಕೆಲವೊಮ್ಮೆ ನಾವು ಕಠಿನವಾಗಿ ದುಡಿಸುವವರಾಗಿದ್ದೆವು, ಆದರೆ ನಾವು ಯಾವಾಗಲೂ ಅವಳ ದೌರ್ಬಲ್ಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾ, ಸಹಾಯವನ್ನು ನೀಡಿದೆವು. ಅವಳು ತೀರ ಸೂಕ್ಷ್ಮಸಂವೇದಿಯಾಗಿದ್ದಾಳೆ, ಆದುದರಿಂದ ನಾನು ಅವಳಿಗೆ ಒತ್ತಡವನ್ನು ಉಂಟುಮಾಡದಿರಲು ಪ್ರಯತ್ನಿಸುತ್ತೇನೆ.”
ಮಾತಿನ ಚಿಕಿತ್ಸಕರ ಸಹಾಯದಿಂದ ಇಲನಳು ಪುನಃ ಮಾತಾಡುವುದನ್ನು ಕಲಿತಂತೆ, ಜಾನ್ ಅವಳಿಗೆ ಸಹಾಯ ಮಾಡಿದನು. “ಕೆಲಸಗಳನ್ನು ಒಟ್ಟಿಗೆ ಮಾಡುವುದು ಒಂದು ರೀತಿಯ ಪ್ರೋತ್ಸಾಹವಾಗಿರುತ್ತದೆ. ಆದುದರಿಂದ ನಾವು ಒಬ್ಬರಿಗೊಬ್ಬರು ಬೈಬಲನ್ನು ಗಟ್ಟಿಯಾಗಿ ಓದುತ್ತಿದ್ದೆವು. ಇದು ಅವಳ ಮಾತನ್ನು ಉತ್ತಮಗೊಳಿಸಿತು. ಹಾಗೂ, ನಾವು ಯೆಹೋವನ ಸಾಕ್ಷಿಗಳಾಗಿರುವುದರಿಂದ, ಸ್ವಲ್ಪ ಸ್ವಲ್ಪವಾಗಿ ಆರಂಭಿಸಿ, ನಾವು ಶುಶ್ರೂಷೆಯಲ್ಲಿ ಒಳಗೂಡಿದೆವು. ಈ ರೀತಿಯಲ್ಲಿ ಇಲನ್, ಭವಿಷ್ಯತ್ತಿಗಾಗಿ ನಮಗಿರುವ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಯಿತು. ಇಲನಳಿಗೆ ಇದು ತಾನೇ ಒಂದು ಚಿಕಿತ್ಸೆಯಾಗಿತ್ತು.” ಮೂರು ವರ್ಷಗಳ ಅಂತ್ಯದಷ್ಟಕ್ಕೆ, ಇಲನಳು ತುಂಬ ಪ್ರಗತಿಯನ್ನು ಮಾಡಿದ್ದಳು.
ಸ್ನೇಹಿತರು ಕೊಡಸಾಧ್ಯವಿರುವ ಪ್ರೋತ್ಸಾಹ ಹಾಗೂ ಬಲವನ್ನು ಎಂದೂ ಕಡಿಮೆ ಅಂದಾಜುಮಾಡಬಾರದು—ಏಕೆಂದರೆ ಮಸ್ತಿಷ್ಕ ಆಘಾತದಿಂದ ಪಾರಾಗುವವರ ಗುಣಹೊಂದುವಿಕೆಯ ಮೇಲೆ ಅವರು ಭಾರಿ ಪ್ರಭಾವವನ್ನು ಉಂಟುಮಾಡಬಲ್ಲರು. ಮಸ್ತಿಷ್ಕ ಆಘಾತ (ಇಂಗ್ಲಿಷ್) ಎಂಬ ವೈದ್ಯಕೀಯ ಪತ್ರಿಕೆಯು ವರದಿಸಿದ್ದೇನೆಂದರೆ, “ಮಸ್ತಿಷ್ಕ ಆಘಾತದಿಂದ ಪಾರಾಗಿದ್ದು, ಭಾರಿ ಪ್ರಮಾಣದ ಸಾಮಾಜಿಕ ಬೆಂಬಲವನ್ನು ಪಡೆದುಕೊಂಡ ವ್ಯಕ್ತಿಯೊಬ್ಬನಿಗೆ, ಗುಣಹೊಂದುವಿಕೆಯ ಪ್ರಮಾಣವು ತೀವ್ರಗತಿಯದ್ದಾಗಿರುತ್ತದೆ ಮತ್ತು ಕೆಲಸಮಾಡುವುದರಲ್ಲಿನ ಒಟ್ಟು ಅಭಿವೃದ್ಧಿಯು ತೀರ ಹೆಚ್ಚಾಗಿರುತ್ತದೆ—ಹೆಚ್ಚು ಗುರುತರವಾದ ಮಸ್ತಿಷ್ಕ ಆಘಾತವಿರುವ ರೋಗಿಗಳ ನಡುವೆ ಸಹ.”
ತನ್ನ ಸ್ನೇಹಿತರು ಕೊಟ್ಟ ಬೆಂಬಲವನ್ನು ಬರ್ನೀ ತುಂಬ ಹೆಚ್ಚು ಗಣ್ಯಮಾಡಿದನು. ಅವನು ನಮಗೆ ಜ್ಞಾಪಕಹುಟ್ಟಿಸುವುದು: “ಮಸ್ತಿಷ್ಕ ಆಘಾತದೊಂದಿಗೆ ಹೆಣಗಾಡುವುದರಲ್ಲಿ, ಸ್ನೇಹಿತರ ಭೇಟಿಗಳು ಅತ್ಯಾವಶ್ಯಕವಾಗಿವೆ. ಒಂದು ಸಹಾನುಭೂತಿಯ ಸ್ವರ ಮತ್ತು ಕಾಳಜಿವಹಿಸುವ ಮನೋಭಾವವು, ಧೈರ್ಯವನ್ನು ಹೆಚ್ಚಿಸುತ್ತದೆ. ವ್ಯಕ್ತಿಯ ದೌರ್ಬಲ್ಯದ ವಿಷಯದಲ್ಲಿ ಒಬ್ಬನು ಮಾತಾಡುವ ಅಗತ್ಯವಿಲ್ಲವಾದರೂ, ಯಾವುದೇ ಪ್ರಗತಿಯನ್ನು ಗುರುತಿಸುವುದು ತಾನೇ ತುಂಬ ಪ್ರೋತ್ಸಾಹದಾಯಕವಾಗಿರುತ್ತದೆ.” ಮಸ್ತಿಷ್ಕ ಆಘಾತದ ಅನಂತರದ ಪರಿಣಾಮಗಳೊಂದಿಗೆ ಹೆಣಗಾಡುತ್ತಿರುವವರಿಗೆ ಬೆಂಬಲವನ್ನು ಕೊಡಲಿಕ್ಕಾಗಿ ನಾವೆಲ್ಲರೂ ಏನು ಮಾಡಬಹುದು? “ಕೆಲವು ಹೂವುಗಳನ್ನು ಉಡುಗೊರೆಯಾಗಿ ತೆಗೆದುಕೊಂಡುಹೋಗಿ, ಅಥವಾ ಒಂದು ಶಾಸ್ತ್ರೀಯ ವಿಚಾರವನ್ನು ಅಥವಾ ಅನುಭವವನ್ನು ಹಂಚಿಕೊಳ್ಳಿರಿ. ಅದೇ ನನಗೆ ಬಹಳ ಸಹಾಯಕಾರಿಯಾಗಿತ್ತು” ಎಂದು ಬರ್ನೀ ಸಲಹೆ ನೀಡುತ್ತಾನೆ.
ಮಸ್ತಿಷ್ಕ ಆಘಾತದಿಂದ ಪಾರಾದ ವೃದ್ಧೆ ಮೆಲ್ವ, ತನ್ನ ಆತ್ಮಿಕ ಸಹೋದರರಲ್ಲಿ ಒಬ್ಬರು ತನ್ನೊಂದಿಗೆ ಪ್ರಾರ್ಥಿಸುವುದನ್ನು ಸಹಾಯಕರವಾದದ್ದಾಗಿ ಕಂಡುಕೊಂಡಳು. ಗಿಲ್ಬರ್ಟ್ ಸಹ ಹೀಗೆ ವಿವರಿಸುತ್ತಾ ಇದನ್ನು ಶಿಫಾರಸ್ಸು ಮಾಡುತ್ತಾನೆ: “ನೀವು ಯಾರೊಂದಿಗಾದರೂ ಪ್ರಾರ್ಥಿಸುವಾಗ, ನೀವು ನಿಜವಾಗಿಯೂ ಸಾಕಷ್ಟು ಕಾಳಜಿವಹಿಸುತ್ತೀರೆಂಬುದನ್ನು ತೋರಿಸುತ್ತದೆ.” ಪೀಟರನ ಮಸ್ತಿಷ್ಕ ಆಘಾತವು ಅವನಿಗೆ ದುರ್ಬಲ ದೃಷ್ಟಿಯನ್ನು ಉಂಟುಮಾಡಿತು; ಆದುದರಿಂದ ಇತರರು ತನ್ನ ದೌರ್ಬಲ್ಯಗಳನ್ನು ಅರ್ಥಮಾಡಿಕೊಂಡು, ತನಗಾಗಿ ಓದಲು ಸಮಯವನ್ನು ತೆಗೆದುಕೊಳ್ಳುವಾಗ, ಅವನು ಅದನ್ನು ಗಣ್ಯಮಾಡುತ್ತಾನೆ.
ಪುನಶ್ಚೇತನಗೊಳಿಸುವಿಕೆಯ ಚಿಕಿತ್ಸೆಗಾಗಿ ಹೋಗಿಬರಲು ಒಬ್ಬನಿಗೆ ಸಹಾಯ ಮಾಡುವುದು ಸಹ ಪ್ರೀತಿಯ ಭಾವಾಭಿನಯವಾಗಿದೆ. ಮಸ್ತಿಷ್ಕ ಆಘಾತಕ್ಕೆ ಬಲಿಯಾದ ವ್ಯಕ್ತಿಯ ಮನೆಯು ಒಂದು ಸುರಕ್ಷಿತವಾದ ಸ್ಥಳವಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ. ಸಮತೂಕತೆಯು ಒಂದು ಸಮಸ್ಯೆಯಾಗಿರುವಾಗ, ಸತತವಾಗಿ ಬೀಳುವುದು ಒಂದು ಬೆದರಿಕೆಯಾಗಿದೆ. ಉದಾಹರಣೆಗೆ, ಸ್ನೇಹಿತರ ದಯಾಪರ ಸಹಾಯವನ್ನು ಗಿಲ್ಬರ್ಟ್ ಗಣ್ಯಮಾಡಿದನು. ಅವರು ಇನ್ನಿತರ ಸಹಾಯವನ್ನು ನೀಡುವುದರೊಂದಿಗೆ, ಸುರಕ್ಷೆಗಾಗಿ ಸ್ನಾನಗೃಹದಲ್ಲಿ ಒಂದು ಹಿಡಿದುಕೊಳ್ಳುವ ರಾಡನ್ನೂ ಅಳವಡಿಸಿದರು.
ಬೆಂಬಲವನ್ನು ಕೊಡಲು ಕಲಿಯುವುದು
ಮನಃಸ್ಥಿತಿಯ ಏರುಪೇರುಗಳು ಹಾಗೂ ಅಳಬೇಕೆಂಬ ಪ್ರಬಲವಾದ ಪ್ರವೃತ್ತಿಯು, ಮಸ್ತಿಷ್ಕ ಆಘಾತಕ್ಕೆ ಬಲಿಯಾದ ವ್ಯಕ್ತಿಗೆ ಪೇಚಾಟವನ್ನು ಉಂಟುಮಾಡುವಂತಹದ್ದಾಗಿರಸಾಧ್ಯವಿದೆ. ಹಾಗೆಯೇ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಿಲ್ಲದಿರಬಹುದಾದ ಪ್ರೇಕ್ಷಕರನ್ನು ಅದು ತಬ್ಬಿಬ್ಬುಗೊಳಿಸಸಾಧ್ಯವಿದೆ. ಆದರೆ, ಬೆಂಬಲ ನೀಡುವವರಾಗಿರಲು ಕಲಿಯುವ ಮೂಲಕ ಸ್ನೇಹಿತರು, ಅನ್ಯಥಾ ಫಲಿಸಬಹುದಾದ ಪ್ರತ್ಯೇಕತೆಯ ಭಾವದಿಂದ ಮಸ್ತಿಷ್ಕ ಆಘಾತಕ್ಕೆ ಬಲಿಯಾಗುವ ವ್ಯಕ್ತಿಯನ್ನು ಬಚಾವುಮಾಡಬಲ್ಲರು. ಸಾಮಾನ್ಯವಾಗಿ, ಅಳುವ ಸರದಿಗಳು ಕಡಿಮೆಯಾಗುತ್ತವೆ. ಆದರೆ ಕಣ್ಣೀರು ಬರುವಾಗ, ಮೌನವಾಗಿರಿ ಮತ್ತು ನೀವು ಅವರ ಸ್ಥಿತಿಯಲ್ಲಿರುತ್ತಿದ್ದಿದ್ದರೆ ನೀವು ಏನನ್ನು ಕೇಳಲು ಬಯಸುತ್ತಿದ್ದಿರಿ ಎಂಬುದನ್ನು ಹೇಳುತ್ತಾ, ಆ ವ್ಯಕ್ತಿಯ ಬಳಿಯೇ ನಿಲ್ಲಿರಿ.
ಎಲ್ಲಕ್ಕಿಂತಲೂ ಮಿಗಿಲಾಗಿ, ಈ ಹಿಂದೆ ನಿಮಗೆ ಪರಿಚಯವಿದ್ದು, ಯಾರ ದೌರ್ಬಲ್ಯಗಳು ಅವರ ವ್ಯಕ್ತಿತ್ವವನ್ನು ಬದಲಾಯಿಸಿವೆಯೋ ಅಂತಹವರಿಗಾಗಿ ದೈವಿಕ ಪ್ರೀತಿಯನ್ನು ಬೆಳೆಸಿಕೊಳ್ಳಿರಿ. ನಿಮಗೆ ಹೇಗನಿಸುತ್ತದೆ ಎಂಬುದನ್ನು ಅವರು ಗ್ರಹಿಸುವರು, ಮತ್ತು ಪ್ರತಿಯಾಗಿ ಅವರು ನಿಮಗೆ ಕೊಡುವ ಉತ್ತರದ ಮೇಲೆ ಅದು ಪ್ರಭಾವವನ್ನು ಬೀರುವುದು. ಎರಿಕ ಹೇಳುವುದು: “ನಾನು ಪುನಃ ಎಂದಿಗೂ ಹಿಂದಿನ ವ್ಯಕ್ತಿಯಾಗದಿರಬಹುದು. ಆದರೆ ಮಸ್ತಿಷ್ಕ ಆಘಾತಕ್ಕೆ ಬಲಿಯಾದ ಒಬ್ಬ ವ್ಯಕ್ತಿಯಿಂದ ಯಾರೊಬ್ಬರೂ ಅದನ್ನು ನಿರೀಕ್ಷಿಸಬಾರದು. ಸಂಬಂಧಿಕರು ಹಾಗೂ ಸ್ನೇಹಿತರು, ಅವನು ಅಥವಾ ಅವಳು ಹೇಗಿದ್ದಾರೋ ಅದೇ ವ್ಯಕ್ತಿತ್ವದಲ್ಲಿ ಆ ವ್ಯಕ್ತಿಯನ್ನು ಪ್ರೀತಿಸಲು ಕಲಿಯಬೇಕು. ಅವನ ಅಥವಾ ಅವಳ ವ್ಯಕ್ತಿತ್ವವನ್ನು ಅವರು ಜಾಗರೂಕತೆಯಿಂದ ಪರೀಕ್ಷಿಸುವಲ್ಲಿ, ಈ ಹಿಂದೆ ಇದ್ದ ಅತ್ಯಂತ ಆಕರ್ಷಕ ಗುಣಗಳು ಇನ್ನೂ ಇವೆಯೆಂಬುದನ್ನು ಅವರು ಕಂಡುಹಿಡಿಯುತ್ತಾರೆ.”
ಒಬ್ಬರು ಮಾತಾಡಲು ಅಶಕ್ತರಾಗಿರುವಾಗ ಅಥವಾ ಇತರರು ಅವರನ್ನು ಅರ್ಥಮಾಡಿಕೊಳ್ಳದಿರುವಾಗ, ಆತ್ಮಾಭಿಮಾನವು ತೀರ ಹೀನ ಸ್ಥಿತಿಗೆ ಇಳಿಯುತ್ತದೆ. ಅವರೊಂದಿಗೆ ಮಾತಾಡುವ ಪ್ರಯತ್ನವನ್ನು ಮಾಡುವ ಮೂಲಕ, ಯಾರ ಮಾತು ನಷ್ಟಗೊಂಡಿದೆಯೊ ಅವರ ಮಾನಸಿಕ ಬಲವನ್ನು ಸ್ನೇಹಿತರು ದೃಢೀಕರಿಸಸಾಧ್ಯವಿದೆ. ಟಾಕಾಶೀ ಹೇಳುವುದು: “ನಾನು ಹೃದಯದಲ್ಲಿ ಆಲೋಚಿಸುವ ಹಾಗೂ ಭಾವಿಸುವ ವಿಷಯಗಳು ಬದಲಾಗಿಲ್ಲ. ಆದರೂ, ಜನರು ನನ್ನೊಂದಿಗಿನ ಸಂಪರ್ಕವನ್ನು ತೊರೆಯುವ ಪ್ರವೃತ್ತಿಯವರಾಗಿರುತ್ತಾರೆ. ಏಕೆಂದರೆ ನನ್ನೊಂದಿಗೆ ಸಾಮಾನ್ಯವಾದ ಸಂಭಾಷಣೆಯನ್ನು ನಡೆಸಲು ಅವರಿಗೆ ಆಗುವುದಿಲ್ಲ. ಜನರನ್ನು ಸಮೀಪಿಸುವುದು ನನಗೆ ಕಷ್ಟಕರವಾಗಿದೆ, ಆದರೆ ಮಾತಾಡಲಿಕ್ಕಾಗಿ ಯಾರಾದರೊಬ್ಬರು ನನ್ನ ಬಳಿಗೆ ಬರುವಾಗ, ಅದು ತುಂಬ ಪ್ರೋತ್ಸಾಹನೀಯವಾಗಿರುತ್ತದೆ ಮತ್ತು ನನಗೆ ಅತೀವ ಸಂತೋಷವನ್ನು ಉಂಟುಮಾಡುತ್ತದೆ!”
ಮಾತಿನ ದೌರ್ಬಲ್ಯಗಳಿಂದ ಕಷ್ಟಾನುಭವಿಸುವವರಿಗೆ ಬೆಂಬಲ ನೀಡಲು ಹಾಗೂ ಉತ್ತೇಜಿಸಲು, ನಮ್ಮೆಲ್ಲರಿಗೆ ಸಹಾಯ ಮಾಡಸಾಧ್ಯವಿರುವ ಕೆಲವು ಮಾರ್ಗದರ್ಶನಗಳು ಈ ಕೆಳಗಿನಂತಿವೆ.
ಅಧಿಕಾಂಶ ಮಸ್ತಿಷ್ಕ ಆಘಾತಗಳು, ಬುದ್ಧಿಶಕ್ತಿಯ ಮೇಲೆ ಪರಿಣಾಮವನ್ನು ಉಂಟುಮಾಡುವುದಿಲ್ಲ. ಮಸ್ತಿಷ್ಕ ಆಘಾತವನ್ನು ಪಾರಾಗುವ ಅಧಿಕಾಂಶ ಜನರ ಮಾತನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿರಬಹುದಾದರೂ, ಮಾನಸಿಕವಾಗಿ ಅವರು ಜಾಗೃತರಾಗಿರುತ್ತಾರೆ. ಎಂದೂ ಅವರ ಬಗ್ಗೆ ತುಚ್ಛವಾಗಿ ಮಾತಾಡಬೇಡಿ ಅಥವಾ ಅವರೊಂದಿಗೆ ತೊದಲ್ನುಡಿಯಲ್ಲಿ ಮಾತಾಡಬೇಡಿ. ಅವರನ್ನು ಘನತೆಯಿಂದ ಉಪಚರಿಸಿರಿ.
ತಾಳ್ಮೆಯಿಂದ ಕಿವಿಗೊಡಿರಿ. ಒಂದು ಅಭಿಪ್ರಾಯವನ್ನು ಗ್ರಹಿಸಲು ಅಥವಾ ಒಂದು ಶಬ್ದವನ್ನು, ವಾಕ್ಸರಣಿಯನ್ನು, ಅಥವಾ ವಾಕ್ಯವನ್ನು ಪೂರ್ಣಗೊಳಿಸಲು ಅವರಿಗೆ ಸಮಯವು ತಗಲಬಹುದು. ತೀರ ಹೆಚ್ಚು ಕಾಳಜಿವಹಿಸುವ ಕೇಳುಗನೊಬ್ಬನು, ಕೇಳಲು ಆತುರಪಡುವುದಿಲ್ಲ ಎಂಬುದನ್ನು ಜ್ಞಾಪಕದಲ್ಲಿಡಿ.
ನಿಮಗೆ ಅರ್ಥವಾಗದಿದ್ದಲ್ಲಿ ಅರ್ಥವಾಗುತ್ತಿದೆಯೆಂಬಂತೆ ನಟಿಸಬೇಡಿರಿ. ದಯಾಭಾವದಿಂದ ಹೀಗೆ ಒಪ್ಪಿಕೊಳ್ಳಿ: “ಕ್ಷಮಿಸಿ, ನನಗೆ ಅರ್ಥವಾಗುತ್ತಿಲ್ಲ. ಸ್ವಲ್ಪ ಸಮಯದ ಬಳಿಕ ಪುನಃ ಪ್ರಯತ್ನಿಸೋಣ.”
ಸಾಮಾನ್ಯವಾದ ಸ್ವರಭಾರದಿಂದ, ನಿಧಾನವಾಗಿಯೂ ಸ್ಪಷ್ಟವಾಗಿಯೂ ಮಾತಾಡಿರಿ.
ಚಿಕ್ಕ ವಾಕ್ಯಗಳನ್ನೂ ಚಿರಪರಿಚಿತ ಶಬ್ದಗಳನ್ನೂ ಉಪಯೋಗಿಸಿರಿ.
ಹೌದು ಅಥವಾ ಇಲ್ಲ ಎಂಬ ಉತ್ತರವನ್ನು ಹೊರಸೆಳೆಯುವ ಪ್ರಶ್ನೆಗಳನ್ನು ಉಪಯೋಗಿಸಿರಿ, ಮತ್ತು ಉತ್ತರವನ್ನು ಕೊಡುವಂತೆ ಉತ್ತೇಜಿಸಿರಿ. ನಿಮ್ಮ ಮಾತುಗಳನ್ನು ಗ್ರಹಿಸಿಕೊಳ್ಳಲು ಅವರಿಗಾಗದಿರಬಹುದೆಂಬುದನ್ನು ಮನಸ್ಸಿನಲ್ಲಿಡಿರಿ.
ಹಿನ್ನೆಲೆಯ ಶಬ್ದವನ್ನು ಕಡಿಮೆಮಾಡಿರಿ.
ಯೆಹೋವನ ಪ್ರೀತಿಪರ ಬೆಂಬಲದಿಂದ ನಿಭಾಯಿಸುವುದು
ನಿಮ್ಮ ಮಸ್ತಿಷ್ಕ ಆಘಾತದ ಕಾರಣವನ್ನು ತಿಳಿದುಕೊಳ್ಳುವುದು ಪ್ರಮುಖವಾಗಿರುವಾಗ—ಏಕೆಂದರೆ ಅದು ನೀವು ಕ್ರಿಯೆಗೈಯಲು ಹಾಗೂ ನಿಮ್ಮ ಭಾವೀ ಮಸ್ತಿಷ್ಕ ಆಘಾತಗಳ ಅಪಾಯವನ್ನು ಕಡಿಮೆಮಾಡಲು ನಿಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ—ಜೊತೆಗೂಡುವ ಭಯದ ನಿಯಂತ್ರಣವನ್ನು ಪಡೆದುಕೊಳ್ಳುವುದೂ ಪ್ರಮುಖವಾದದ್ದಾಗಿದೆ. ಇಲನ್ ಹೇಳುವುದು: “ಯೆಶಾಯ 41:10ರಲ್ಲಿರುವ ದೇವರ ವಾಕ್ಯವು ನನ್ನನ್ನು ವಿಶೇಷವಾಗಿ ಸಾಂತ್ವನಗೊಳಿಸುತ್ತದೆ. ಅಲ್ಲಿ ಅವನು ಹೇಳುವುದು: ‘ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.’ ನನ್ನನ್ನು ನಿರ್ಭೀತಳನ್ನಾಗಿ ಮಾಡುತ್ತಾ, ಯೆಹೋವನು ನನಗೆ ಅಷ್ಟು ನೈಜವಾಗಿ ಪರಿಣಮಿಸಿದ್ದಾನೆ.”
ಆನಂದನಿಗೆ ಅನಿಸುವ ಹತಾಶೆಯೊಂದಿಗೆ ಹೆಣಗಾಡಲು, ಬೈಬಲು ಅವನಿಗೂ ಸಹಾಯ ಮಾಡುತ್ತದೆ. “ಅದು ನನಗೆ ಸತತವಾಗಿ ಪುನರುಜ್ಜೀವನಗೊಳಿಸಿ, ಚೈತನ್ಯವುಂಟುಮಾಡುವುದರಿಂದ, ಅದು ನನಗೆ ತೀರ ಹೆಚ್ಚು ಬೆಂಬಲವನ್ನು ಒದಗಿಸುತ್ತದೆ.” ಹೀರೋಯೂಕೀಗೆ ಶಾಸ್ತ್ರವಚನಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಅಸಾಧ್ಯವಾದುದರಿಂದ, ಅವುಗಳಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುವುದೆಂಬುದು ಅವನ ಸಮಸ್ಯೆಯಾಗಿತ್ತು. ಅವನು ಹೇಳುವುದು: “ಆಡಿಯೊಕ್ಯಾಸೆಟ್ಗಳಲ್ಲಿ ಬೈಬಲ್ ಪುಸ್ತಕಗಳನ್ನು ಕೇಳಿಸಿಕೊಳ್ಳುವುದರಲ್ಲಿ ನಾನು ಸಾಂತ್ವನವನ್ನು ಕಂಡುಕೊಂಡೆ.”
ಅಪೊಸ್ತಲ ಪೌಲನು ಹೇಳಿದ್ದು: “ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂಥ 12:10) ಪೌಲನು ತನ್ನ ಸ್ವಂತ ಬಲದಿಂದ ಯಾವುದನ್ನು ಮಾಡಲು ಸಾಧ್ಯವಿಲ್ಲದವನಾಗಿದ್ದನೋ ಅದನ್ನು ಪೂರೈಸಲು ಯೆಹೋವನ ಆತ್ಮವು ಅವನಿಗೆ ಸಹಾಯ ಮಾಡಿತು. ಮಸ್ತಿಷ್ಕ ಆಘಾತದಿಂದ ಪಾರಾದವರು ಸಹ, ಆತ್ಮಿಕ ಬಲಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಸಾಧ್ಯವಿದೆ. ಎರಿಕ ವಿವರಿಸುವುದು: “ನಾವು ಆರೋಗ್ಯವಂತರಾಗಿದ್ದು, ಪ್ರತಿಯೊಂದನ್ನೂ ನಮ್ಮ ಸ್ವಂತ ಬಲದಿಂದ ಮಾಡುವಾಗ, ನಮಗೆ ಸಹಾಯ ಮಾಡುವಂತೆ ನಾವು ಯೆಹೋವನಿಗೆ ಹೆಚ್ಚು ಅವಕಾಶವನ್ನು ಕೊಡದಿರಬಹುದು. ಆದರೆ ನನ್ನ ಅಂಗವಿಕಲತೆಯು, ಆತನೊಂದಿಗಿನ ನನ್ನ ಸಂಬಂಧವನ್ನು ತೀರ ವಿಶೇಷವಾದ ರೀತಿಯಲ್ಲಿ ಬಲಪಡಿಸಲು ನನ್ನನ್ನು ಶಕ್ತಳನ್ನಾಗಿಮಾಡಿದೆ.”
ಕಾಳಜಿವಹಿಸುವವರು ಬೆಂಬಲವನ್ನು ಕಂಡುಕೊಳ್ಳುತ್ತಾರೆ
ತಮ್ಮ ಮಹತ್ವಪೂರ್ಣ ಪಾತ್ರದಲ್ಲಿ ಕಾಳಜಿವಹಿಸುವವರಿಗೆ ಬೆಂಬಲದ ಅಗತ್ಯವಿದೆ. ಬೆಂಬಲಕ್ಕಾಗಿ ಅವರು ಎಲ್ಲಿಗೆ ತಿರುಗಸಾಧ್ಯವಿದೆ? ಒಂದು ಸ್ಥಳವು ಯಾವುದೆಂದರೆ ಕುಟುಂಬವೇ ಆಗಿದೆ. ಪ್ರತಿಯೊಬ್ಬ ಸದಸ್ಯನೂ ಕಾಳಜಿವಹಿಸುವ ಹೊರೆಯನ್ನು ಹಂಚಿಕೊಳ್ಳುವ ಅಗತ್ಯವಿದೆ. ಯೋಶೀಕೋಳ ಪುತ್ರರು ಅವಳಿಗೆ ಹೇಗೆ ಭಾವನಾತ್ಮಕ ಬೆಂಬಲವನ್ನು ಕೊಟ್ಟರೆಂಬುದನ್ನು ಅವಳು ಹೇಳುತ್ತಾಳೆ: “ನನ್ನ ಸಮಸ್ಯೆಗಳು ಅವರ ಸಮಸ್ಯೆಗಳಾಗಿದ್ದವೋ ಎಂಬಂತೆ ಅವರು ನನ್ನ ಸಮಸ್ಯೆಗಳಿಗೆ ಕಿವಿಗೊಡುತ್ತಿದ್ದರು.” ಮಸ್ತಿಷ್ಕ ಆಘಾತಕ್ಕೆ ಬಲಿಯಾದ ವ್ಯಕ್ತಿಯೊಬ್ಬನನ್ನು ಹೇಗೆ ನೋಡಿಕೊಳ್ಳಬೇಕು ಹಾಗೂ ತಮ್ಮ ಪ್ರಿಯ ಜನರ ವ್ಯಕ್ತಿತ್ವದಲ್ಲಿನ ಬದಲಾವಣೆಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಕಲಿಯಲಿಕ್ಕಾಗಿ, ತಮಗೆ ಲಭ್ಯವಿರುವ ಎಲ್ಲ ಸಮಾಚಾರವನ್ನು ಕುಟುಂಬದ ಸದಸ್ಯರು ಪಡೆದುಕೊಳ್ಳಬೇಕಾಗಿದೆ.
ಕಾಳಜಿವಹಿಸುವವರಿಗೆ ಇನ್ನೂ ಯಾರು ಬೆಂಬಲವನ್ನು ನೀಡಬಹುದು? ವಿಕ್ಟರ್ನ ಸಹಾಯಕ್ಕಾಗಿ, ಡೇವಿಡ್ ಹಾಗೂ ಅವನ ಕುಟುಂಬವು, ಯೆಹೋವನ ಸಾಕ್ಷಿಗಳ ಸಭೆಯೊಳಗಿನ ತಮ್ಮ ಆತ್ಮಿಕ ಕುಟುಂಬದ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸಿತು: “ನಮ್ಮ ಆವಶ್ಯಕತೆಗೆ ಅವರು ಸ್ಪಂದಿಸಿದರು. ಸರದಿಪ್ರಕಾರವಾಗಿ ಅವರು, ನಮ್ಮ ಪರವಾಗಿ ಇಡೀ ರಾತ್ರಿ ವಿಕ್ಟರ್ನನ್ನು ನೋಡಿಕೊಳ್ಳಲು ಕೆಲವೊಮ್ಮೆ ನಮ್ಮ ಮನೆಗೆ ಬಂದು ಮಲಗುತ್ತಿದ್ದರು.”
ಕಾಳಜಿವಹಿಸುವ ಪ್ರತಿಯೊಬ್ಬನು, ತನ್ನ ಆತ್ಮಿಕ ಕುಟುಂಬದ ಆದರಣೀಯ ಪ್ರೀತಿ ಹಾಗೂ ಬೆಂಬಲವನ್ನು ಅನುಭವಿಸಲು ಬಯಸುತ್ತಾನೆ. ಆದರೆ ಕೆಲವರು ಸಹಾಯಕ್ಕಾಗಿ ಕೇಳಿಕೊಳ್ಳುವುದನ್ನು ಕಷ್ಟಕರವಾದದ್ದಾಗಿ ಕಂಡುಕೊಳ್ಳಬಹುದು. ಹಾರೂಕೋ ವಿವರಿಸುವುದು: “‘ನಿಮಗೆ ಯಾವುದಾದರೂ ವಿಷಯದಲ್ಲಿ ಸಹಾಯವು ಬೇಕಿದ್ದಲ್ಲಿ, ನಮಗೆ ತಿಳಿಸಲು ಹಿಂಜರಿಯಬೇಡಿರಿ’ ಎಂದು ನನಗೆ ಅನೇಕವೇಳೆ ಹೇಳಲಾಗಿದೆ. ಆದರೆ ಪ್ರತಿಯೊಬ್ಬರೂ ಎಷ್ಟು ಕಾರ್ಯಮಗ್ನರಿದ್ದಾರೆಂಬುದನ್ನು ತಿಳಿದವನಾಗಿದ್ದು, ಸಹಾಯವನ್ನು ಕೇಳಲು ನಾನು ಹಿಂಜರಿಯುತ್ತೇನೆ. ‘ನಾನು ನಿಮಗೆ ಸ್ವಚ್ಛಗೊಳಿಸುವ ಕೆಲಸದಲ್ಲಿ ಸಹಾಯ ಮಾಡಬಲ್ಲೆ. ನಿಮಗೆ ಯಾವ ದಿನ ಹೆಚ್ಚು ಅನುಕೂಲಕರವಾಗಿದೆ?’ ‘ನಾನು ನಿಮಗಾಗಿ ಶಾಪಿಂಗ್ ಮಾಡಬಲ್ಲಿ, ಆದುದರಿಂದ ನಾನು ಈಗ ನಿಮ್ಮ ಮನೆಗೆ ಬಂದರೆ ನಿಮಗೆ ತೊಂದರೆಯಿಲ್ಲ ತಾನೆ?’—ಇಂತಹ ನಿರ್ದಿಷ್ಟ ವಿಧಗಳಲ್ಲಿ ಜನರು ಸಹಾಯವನ್ನು ಮಾಡಲು ಮುಂದೆ ಬಂದರೆ, ನಾನು ಅದಕ್ಕಾಗಿ ತುಂಬ ಕೃತಜ್ಞನಾಗಿರುವೆ.”
ಕೆಂಜೀಯ ಪತ್ನಿಗೆ ಮಸ್ತಿಷ್ಕ ಆಘಾತವಾಗಿತ್ತು; ಆದರೂ ಅವಳಿಗೆ ಅಗತ್ಯವಿದ್ದ ಪರಾಮರಿಕೆಯನ್ನು ಒದಗಿಸಲು ಅವನು ಶಕ್ತನಾಗಿದ್ದನು. ಪ್ರಾರ್ಥನೆಯ ಮೂಲಕ ತನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಸಾಧ್ಯವಿದೆ ಎಂಬುದನ್ನು ಅವನು ಕಂಡುಕೊಂಡನು. ಕಾಲಕ್ರಮೇಣ, ಅವನ ಪತ್ನಿಯು ತನ್ನ ಮಾತಾಡುವ ಸಾಮರ್ಥ್ಯವನ್ನು ಕಳೆದುಕೊಂಡಳು, ಮತ್ತು ಇದರೊಂದಿಗೆ, ಯಾರೊಂದಿಗೆ ಮಾತಾಡುತ್ತಿದ್ದನೋ ಆ ಒಬ್ಬ ಸಹಭಾಗಿಯನ್ನೂ ಕೆಂಜೀ ಕಳೆದುಕೊಂಡನು. ಆದರೆ ಅವನು ಪ್ರತಿ ದಿನ ಬೈಬಲನ್ನು ಓದುತ್ತಾನೆ. ಅವನು ಹೇಳುವುದು: “ಮನಸ್ಸಿನಲ್ಲಿ ಜರ್ಜರಿತರಾಗಿದ್ದವರ ಕಡೆಗೆ ಯೆಹೋವನು ತೋರಿಸುವ ಕೋಮಲ ಪರಾಮರಿಕೆಯನ್ನು ಅದು ನನಗೆ ಜ್ಞಾಪಕಹುಟ್ಟಿಸುತ್ತದೆ, ಮತ್ತು ಖಿನ್ನನಾಗಿ, ಒಂಟಿಭಾವವನ್ನು ಅನುಭವಿಸುವುದರಿಂದ ಇದು ನನ್ನನ್ನು ತಡೆದಿದೆ.”
ಭಾವೋದ್ವೇಗಗಳು ನಮ್ಮನ್ನು ತೀರ ಭಾವಪರವಶರನ್ನಾಗಿ ಮಾಡುವಂತೆ ತೋರುವಾಗ, ಯೆಹೋವನ ಆತ್ಮದ ಮೇಲೆ ಆತುಕೊಳ್ಳುವುದು ಸಹಾಯ ಮಾಡಬಲ್ಲದು. ತನ್ನ ಪತಿಯ ಮಸ್ತಿಷ್ಕ ಆಘಾತದ ಬಳಿಕ, ಅವನ ವ್ಯಕ್ತಿತ್ವದ ಬದಲಾವಣೆ ಹಾಗೂ ಕೋಪೋದ್ರಿಕ್ತ ಸಮಯಾವಧಿಗಳೊಂದಿಗೆ ಹೆಣಗಾಡುತ್ತಿದ್ದು, ಯೋಶೀಕೋ ಹೇಳುವುದು: “ಕೆಲವೊಮ್ಮೆ ನನ್ನೆಲ್ಲಾ ಧ್ವನಿಯನ್ನು ಒಟ್ಟುಗೂಡಿಸಿ ಕಿರಿಚಾಡಬೇಕೆಂಬ ಬಲವಾದ ಪ್ರಚೋದನೆ ನನಗಾಗಿದೆ. ಆ ಸಮಯಗಳಲ್ಲಿ ನಾನು ಯಾವಾಗಲೂ ಯೆಹೋವನಿಗೆ ಪ್ರಾರ್ಥಿಸುತ್ತಿದ್ದೆ ಮತ್ತು ಆತನ ಆತ್ಮವು ನನಗೆ ಸಮಾಧಾನವನ್ನು ಉಂಟುಮಾಡುತ್ತಿತ್ತು.” ತನಗೆ ಯೆಹೋವನು ತೋರಿಸಿರುವ ನಿಷ್ಠೆಗಾಗಿರುವ ಗಣ್ಯತೆಯಿಂದ ಅವಳು, ತನ್ನ ಕ್ರೈಸ್ತ ಜೀವಿತದಲ್ಲಿ ಯಾವ ವಿಷಯವೂ ಅಡ್ಡಬರದಂತೆ ನೋಡಿಕೊಳ್ಳುತ್ತಾಳೆ. ಅವಳು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಾಳೆ, ಶುಶ್ರೂಷೆಯಲ್ಲಿ ಒಳಗೂಡುತ್ತಾಳೆ, ಮತ್ತು ವೈಯಕ್ತಿಕ ಬೈಬಲ್ ಅಧ್ಯಯನವನ್ನೂ ಮಾಡುತ್ತಾಳೆ. “ನನ್ನ ಪಾಲನ್ನು ನಾನು ಮಾಡುವುದಾದರೆ, ಯೆಹೋವನು ನನ್ನನ್ನು ಎಂದಿಗೂ ತೊರೆಯುವುದಿಲ್ಲ ಎಂಬುದು ನನಗೆ ಗೊತ್ತಿದೆ” ಎಂದು ಯೋಶೀಕೋ ಹೇಳುತ್ತಾಳೆ.
ವ್ಯಾಕುಲತೆಗಳು ನುಸುಳುವಾಗ, ಯೆಹೋವನು ಯಾವಾಗಲೂ ಕಿವಿಗೊಡಲು ಸಿದ್ಧನಿರುತ್ತಾನೆ. ಯಾರ ಪತಿಯು ಮಸ್ತಿಷ್ಕ ಆಘಾತದಿಂದ ಪಾರಾಗಿದ್ದಾನೋ ಆ ಮಿಡೋರೀ, ಸಾಂಕೇತಿಕವಾಗಿ, ಅವಳು ಸುರಿಸಿರುವ ಕಣ್ಣೀರನ್ನೆಲ್ಲಾ ಯೆಹೋವನು ತನ್ನ “ಬುದ್ದಲಿಯಲ್ಲಿ” ತುಂಬಿಸಿದ್ದಾನೆ ಎಂಬ ವಾಸ್ತವಾಂಶದಲ್ಲಿ ಸಾಂತ್ವನವನ್ನು ಪಡೆದುಕೊಳ್ಳುತ್ತಾಳೆ. (ಕೀರ್ತನೆ 56:8) “ಮರುದಿನದ ವಿಷಯದಲ್ಲಿ ಎಂದೂ ವ್ಯಾಕುಲರಾಗಬೇಡಿ” (NW) ಎಂಬ ಯೇಸುವಿನ ಮಾತುಗಳನ್ನು ಅವಳು ಜ್ಞಾಪಿಸಿಕೊಳ್ಳುತ್ತಾಳೆ. ಅವಳನ್ನುವುದು: “ಹೊಸ ಲೋಕವು ಬರುವ ತನಕ, ತಾಳ್ಮೆಯಿಂದಿರಲು ನಾನು ಮನಸ್ಸು ಮಾಡಿದ್ದೇನೆ.”—ಮತ್ತಾಯ 6:31-34.
ಗಂಭೀರವಾದ ದೌರ್ಬಲ್ಯಗಳನ್ನು ಎದುರಿಸುವುದು
ಮಸ್ತಿಷ್ಕ ಆಘಾತಕ್ಕೆ ಮುಂಚಿನ ಸಾಮರ್ಥ್ಯಗಳನ್ನು ಪುನಃ ಪಡೆದುಕೊಳ್ಳುವುದರಲ್ಲಿ, ತಮ್ಮ ಪುನಶ್ಚೇತನಗೊಳಿಸುವಿಕೆಯ ಚಿಕಿತ್ಸೆಯಲ್ಲಿ ಕೆಲವರು ಗಮನಾರ್ಹವಾಗಿ ಗುಣಹೊಂದುವಿಕೆಯನ್ನು ಅನುಭವಿಸುತ್ತಾರೆಂಬುದು ಸತ್ಯವಾದರೂ, ಇನ್ನಿತರರು ಕೇವಲ ಅಲ್ಪ ಪ್ರಮಾಣದ ಯಶಸ್ಸನ್ನು ಗಳಿಸುತ್ತಾರೆ. ತಮ್ಮ ದೌರ್ಬಲ್ಯಗಳನ್ನು—ಅವು ತೀರ ಗಂಭೀರವಾದವುಗಳೂ, ಬಹಳ ಸಮಯದ ವರೆಗೆ ಉಳಿಯುವಂತಹವುಗಳೂ ಆಗಿರುವಲ್ಲಿ—ಅಂಗೀಕರಿಸುವ ಪಂಥಾಹ್ವಾನವನ್ನು ಎದುರಿಸುವಂತೆ ಇಂತಹವರಿಗೆ ಯಾವುದು ಸಹಾಯ ಮಾಡಬಹುದು?
ಮಸ್ತಿಷ್ಕ ಆಘಾತದ ಕಾರಣದಿಂದ ತನ್ನ ಅಧಿಕಾಂಶ ಚಲನೆಯನ್ನು ಕಳೆದುಕೊಂಡ ಬರ್ನೀ ಉತ್ತರಿಸುವುದು: “ಬರಲಿರುವ ಭೂಪ್ರಮೋದವನದಲ್ಲಿನ ನಿತ್ಯಜೀವದ ಕುರಿತಾದ ನನ್ನ ನಿರೀಕ್ಷೆಯ ಆನಂದ ಮತ್ತು ನನ್ನ ಸ್ವರ್ಗೀಯ ಪಿತನಾದ ಯೆಹೋವನಿಗೆ ಪ್ರಾರ್ಥನೆಯು, ನನ್ನ ದೌರ್ಬಲ್ಯಗಳನ್ನು ಶಾಂತಚಿತ್ತವಾಗಿ ಅಂಗೀಕರಿಸಲು ನನಗೆ ಸಹಾಯ ಮಾಡಿತು.”
ಆ ನಿರೀಕ್ಷೆಯು, ಎರಿಕ ಮತ್ತು ಅವಳ ಪತಿಯಾದ ಗೇಆರ್ಗ್ಗೆ, ಅವಳ ದೌರ್ಬಲ್ಯಗಳನ್ನು ಅಂಗೀಕರಿಸಿ, ಇನ್ನೂ ಜೀವನದಲ್ಲಿ ಆನಂದಿಸುವಂತೆ ಸಹಾಯ ಮಾಡಿತು. ಗೇಆರ್ಗ್ ವಿವರಿಸುವುದು: “ಒಂದು ದಿನ ಸಂಪೂರ್ಣವಾಗಿ ವಾಸಿಯಾಗುವ ದೇವರ ವಾಗ್ದಾನ ನಮಗಿದೆ. ಆದುದರಿಂದ ನಾವು ಅಸಾಮರ್ಥ್ಯದ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದಿಲ್ಲ. ನಿಶ್ಚಯವಾಗಿಯೂ, ಎರಿಕಳ ಆರೋಗ್ಯಕ್ಕಾಗಿ ನಮ್ಮಿಂದ ಮಾಡಸಾಧ್ಯವಿರುವುದನ್ನೆಲ್ಲ ನಾವು ಇನ್ನೂ ಮಾಡುತ್ತೇವೆ. ಆದರೆ ಸ್ನಾಯುಗಳ ಅಪರಿಪೂರ್ಣ ಸುಸಂಘಟನೆಯೊಂದಿಗೆ ಜೀವಿಸಲು ನೀವು ಕಲಿಯಸಾಧ್ಯವಿದೆ ಮತ್ತು ಹೆಚ್ಚು ಸಕಾರಾತ್ಮಕವಾದ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಸಾಧ್ಯವಿದೆ.”—ಯೆಶಾಯ 33:24; 35:5, 6; ಪ್ರಕಟನೆ 21:4.
ಯಾವ ರೋಗಿಗಳಲ್ಲಿ ಗುಣಹೊಂದುವಿಕೆಯು ತೀರ ಪರಿಮಿತವಾಗಿದೆಯೋ ಅವರಿಗೆ, ಕುಟುಂಬದ ಹಾಗೂ ಸ್ನೇಹಿತರ ಬೆಂಬಲವು ಇನ್ನೂ ಹೆಚ್ಚು ಮಹತ್ವದ್ದಾಗಿದೆ. ಸರ್ವ ಆರೋಗ್ಯದ ಸಂಕಟಗಳು ವಾಸಿಮಾಡಲ್ಪಡುವ ದೇವರ ಸಮಯವು ಬರುವ ತನಕ, ಅದರೊಂದಿಗೆ ಹೆಣಗಾಡಲು ಅವರು ಬಲಿಯಾದ ವ್ಯಕ್ತಿಗೆ ಸಹಾಯ ಮಾಡಸಾಧ್ಯವಿದೆ.
ಆರೋಗ್ಯವು ಪುನಸ್ಸ್ಥಾಪಿಸಲ್ಪಡುವಾಗ, ಮಸ್ತಿಷ್ಕ ಆಘಾತಕ್ಕೆ ಬಲಿಯಾದವರಿಗೆ ಹಾಗೂ ಅವರ ಕುಟುಂಬಗಳಿಗೆ, ಒಂದು ದೊಡ್ಡ ಭವಿಷ್ಯತ್ತಿದೆಯೆಂದು ತಿಳಿದಿರುವುದು, ಒಂದೊಂದು ದಿನವೂ ಜೀವಿತದೊಂದಿಗೆ ವ್ಯವಹರಿಸಲು ಅವರನ್ನು ಶಕ್ತರನ್ನಾಗಿ ಮಾಡುತ್ತದೆ. ಹೀಗೆ ಅವರು, ಬೇಗನೆ ಬರಲಿರುವ ದೇವರ ಹೊಸ ಲೋಕದಲ್ಲಿ, ಸರ್ವ ಕಷ್ಟಾನುಭವದಿಂದ ಬಿಡುಗಡೆಯನ್ನು ಪಡೆಯಲಿಕ್ಕಾಗಿ ತಾಳ್ಮೆಯಿಂದ ಕಾಯಸಾಧ್ಯವಿದೆ. (ಯೆರೆಮೀಯ 29:11; 2 ಪೇತ್ರ 3:13) ಈ ಮಧ್ಯೆ, ಯೆಹೋವನ ಕಡೆಗೆ ತಿರುಗಿಕೊಳ್ಳುವವರೆಲ್ಲರೂ, ಮಸ್ತಿಷ್ಕ ಆಘಾತದ ಅಂಗವಿಕಲತೆಯನ್ನುಂಟುಮಾಡುವ ಪರಿಣಾಮಗಳೊಂದಿಗೆ ಹೆಣಗಾಡುವುದರಲ್ಲಿ ಈಗ ಸಹ ಆತನು ತಮಗೆ ಸಹಾಯ ಮಾಡುವನು ಹಾಗೂ ಬೆಂಬಲ ನೀಡುವನೆಂಬ ದೃಢಭರವಸೆಯಿಂದಿರಸಾಧ್ಯವಿದೆ.—ಕೀರ್ತನೆ 33:22; 55:22.
[ಪುಟ 12 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸರ್ವ ಆರೋಗ್ಯದ ಸಂಕಟಗಳು ವಾಸಿಮಾಡಲ್ಪಡುವ ದೇವರ ಸಮಯವು ಬರುವ ತನಕ, ಅದರೊಂದಿಗೆ ಹೆಣಗಾಡಲು ಕುಟುಂಬವೂ ಸ್ನೇಹಿತರೂ ಬಲಿಯಾದ ವ್ಯಕ್ತಿಗೆ ಸಹಾಯ ಮಾಡಸಾಧ್ಯವಿದೆ
[ಪುಟ 10 ರಲ್ಲಿರುವ ಚೌಕ/ಚಿತ್ರಗಳು]
ಮಸ್ತಿಷ್ಕ ಆಘಾತವನ್ನು ತಡೆಗಟ್ಟುವುದು
“ಮಸ್ತಿಷ್ಕ ಆಘಾತದೊಂದಿಗೆ ವ್ಯವಹರಿಸುವ ಅತ್ಯುತ್ತಮ ವಿಧವು, ಅದನ್ನು ತಡೆಗಟ್ಟಲು ಪ್ರಯತ್ನಿಸುವುದೇ ಆಗಿದೆ” ಎಂದು ಡಾ. ಡೇವಿಡ್ ಲವೀನ್ ಹೇಳುತ್ತಾರೆ. ಮತ್ತು ಅಧಿಕಾಂಶ ಮಸ್ತಿಷ್ಕ ಆಘಾತದೊಂದಿಗೆ ಸಂಬಂಧಿಸಿರುವ ಅತಿ ಪ್ರಮುಖ ಅಂಶವು, ಅಧಿಕ ರಕ್ತದೊತ್ತಡವಾಗಿದೆ.
ಅನೇಕ ಜನರಾದರೋ, ಉಪ್ಪು, ಪರಿಪೂರಿತ ಕೊಬ್ಬು, ಮತ್ತು ಕೊಲೆಸ್ಟರಾಲ್ ಕಡಿಮೆಯಿರುವ, ಮತ್ತು ಪೊಟ್ಯಾಷಿಯಮ್ ಅಧಿಕವಿರುವ ಆಹಾರಪಥ್ಯದ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಸಾಧ್ಯವಿದೆ. ಮದ್ಯಸಾರದ ಬಳಕೆಯನ್ನು ಕಡಿಮೆಮಾಡುವುದು ಸಹ ಪ್ರಮುಖವಾದದ್ದಾಗಿರಬಹುದು. ಒಬ್ಬನ ವಯಸ್ಸು ಹಾಗೂ ಮೈಕಟ್ಟಿನ ಮಟ್ಟಕ್ಕೆ ಸೂಕ್ತವಾಗಿರುವ ಕ್ರಮವಾದ ವ್ಯಾಯಾಮ ಕಾರ್ಯಕ್ರಮವು, ತೂಕವನ್ನು ಕಡಿಮೆಮಾಡಲು ಒಬ್ಬನಿಗೆ ಸಹಾಯ ಮಾಡಸಾಧ್ಯವಿದೆ, ಪ್ರತಿಯಾಗಿ ಇದು, ರಕ್ತದೊತ್ತಡವನ್ನು ಕಡಿಮೆಗೊಳಿಸಬಹುದು. ಈಗ ಬೇರೆ ಬೇರೆ ರೀತಿಯ ಔಷಧಗಳು ದೊರಕುವುದರಿಂದ, ವೈದ್ಯನೊಬ್ಬನ ಮೇಲ್ವಿಚಾರಣೆಯ ಕೆಳಗೆ ಔಷಧವನ್ನು ತೆಗೆದುಕೊಳ್ಳಬೇಕಾಗಿರಬಹುದು.
ಪ್ರಧಾನ ರಕ್ತನಾಳದ ಅಪಧಮನಿ ರೋಗವು, ಮಿದುಳಿಗೆ ಹೋಗುವ ಪ್ರಮುಖ ರಕ್ತ ಸರಬರಾಯಿಯ ಮಾರ್ಗವನ್ನು ಕಿರಿದಾಗಿಸುತ್ತದೆ, ಮತ್ತು ಇದು ಮಸ್ತಿಷ್ಕ ಆಘಾತಕ್ಕೆ ಒಂದು ಮುಖ್ಯ ಕಾರಣವಾಗಿದೆ. ಪ್ರಧಾನ ರಕ್ತನಾಳದಲ್ಲಿ ಎಷ್ಟು ಅಡ್ಡಿತಡೆಯುಂಟಾಗಿದೆ ಎಂಬುದರ ಮೇಲೆ ಆಧಾರಿಸಿ, ಅಡ್ಡಿತಡೆಯುಂಟಾದ ಅಪಧಮನಿಗಳನ್ನು ಸರಿಪಡಿಸಲು, ಪ್ರಧಾನ ರಕ್ತನಾಳದ ಬಿಡಿಧಮನಿಯ ತೆಗೆದುಹಾಕುವಿಕೆ (ಎಂಡಾರ್ಟರೆಕ್ಟಮಿ) ಎಂದು ಕರೆಯಲ್ಪಡುವ ಶಸ್ತ್ರಚಿಕಿತ್ಸೆಯು ಸೂಕ್ತವಾಗಿರಬಹುದು. ಅಧ್ಯಯನಗಳು ತೋರಿಸಿವೆಯೇನಂದರೆ, ಯಾರು ಅಡ್ಡಿತಡೆಯುಂಟಾದ ರೋಗಲಕ್ಷಣಗಳನ್ನು ತೋರಿಸುತ್ತಿದ್ದರೋ ಅವರು, ಹಾಗೂ ಯಾರ ಅಪಧಮನಿಗಳು ಗುರುತರವಾಗಿ ಕಿರಿದುಗೊಳಿಸಲ್ಪಟ್ಟಿದ್ದವೋ ಅವರು, ಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ಚಿಕಿತ್ಸೆಯಿಂದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಆದರೂ, ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸಮಸ್ಯೆಗಳೂ ಇರಸಾಧ್ಯವಿದೆ, ಆದುದರಿಂದ ಅದನ್ನು ಜಾಗರೂಕತೆಯಿಂದ ಪರಿಗಣಿಸಬೇಕು.
ಹೃದ್ರೋಗವು ಮಸ್ತಿಷ್ಕ ಆಘಾತದ ಅಪಾಯವನ್ನು ಹೆಚ್ಚಿಸಬಲ್ಲದು. ಹೃತ್ಕರ್ಣದ ಕಂಪನ (ಅಕ್ರಮ ಹೃದಯಬಡಿತ)ವು, ರಕ್ತದ ಹೆಪ್ಪುಗಟ್ಟುವಿಕೆಗಳನ್ನು ಉಂಟುಮಾಡಿ, ಅದು ಮಿದುಳಿಗೆ ಸಾಗುವಂತೆ ಮಾಡಸಾಧ್ಯವಿದೆ. ಹೆಪ್ಪುರೋಧಕಗಳ ಮೂಲಕ ಇದಕ್ಕೆ ಚಿಕಿತ್ಸೆ ನೀಡಸಾಧ್ಯವಿದೆ. ಮಸ್ತಿಷ್ಕ ಆಘಾತದ ಅಪಾಯವನ್ನು ಕಡಿಮೆಮಾಡಲಿಕ್ಕಾಗಿ, ಹೃದಯದ ಇನ್ನಿತರ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸುವ ಅಥವಾ ಔಷಧೋಪಚಾರಗಳನ್ನು ಮಾಡುವ ಅಗತ್ಯವಿರಬಹುದು. ಮಧುಮೂತ್ರ ರೋಗವು ಅತಿ ಹೆಚ್ಚು ಪ್ರಮಾಣದ ಮಸ್ತಿಷ್ಕ ಆಘಾತದ ಸಂಭವಗಳಿಗೆ ಕಾರಣವಾಗಿದೆ, ಆದುದರಿಂದ ಅದನ್ನು ನಿಯಂತ್ರಿಸುವುದು, ಮಸ್ತಿಷ್ಕ ಆಘಾತವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಕ್ಷಣಿಕ ರಕ್ತಕೊರತೆಯ ಹೊಡೆತಗಳು, ಟಿಐಎಗಳು, ಒಂದು ಮಸ್ತಿಷ್ಕ ಆಘಾತವು ಸಂಭವಿಸಬಹುದು ಎಂಬುದಕ್ಕೆ ಸ್ಪಷ್ಟವಾದ ಎಚ್ಚರಿಕೆಗಳಾಗಿವೆ. ಅವುಗಳು ಅಲಕ್ಷಿಸಲ್ಪಡುವುದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ವೈದ್ಯನನ್ನು ಸಂಪರ್ಕಿಸಿ, ಮತ್ತು ಅದರ ಹಿಂದಿರುವ ಕಾರಣದೊಂದಿಗೆ ವ್ಯವಹರಿಸಿರಿ. ಏಕೆಂದರೆ ಟಿಐಎಗಳು ಮಸ್ತಿಷ್ಕ ಆಘಾತದ ಅಪಾಯವನ್ನು ಅತ್ಯಧಿಕಗೊಳಿಸುತ್ತವೆ.
ಸ್ವಸ್ಥಕರವಾದ, ಸಭ್ಯವಾದ ಜೀವನ ಶೈಲಿಯು, ಮಸ್ತಿಷ್ಕ ಆಘಾತವನ್ನು ತಡೆಗಟ್ಟಲು ಹೆಚ್ಚು ನೆರವನ್ನೀಯಬಲ್ಲದು. ಸಮತೂಕವಾದ ಆಹಾರಪಥ್ಯ ಮತ್ತು ಕ್ರಮವಾದ ವ್ಯಾಯಾಮ ಹಾಗೂ ಮದ್ಯಸಾರದ ಬಳಕೆಯನ್ನು ತೀರ ಕಡಿಮೆಯಾಗಿರಿಸುವುದು, ಅಲ್ಲದೆ ಧೂಮಪಾನ ಮಾಡದಿರುವುದು, ಅಪಧಮನಿಗಳನ್ನು ಆರೋಗ್ಯಕರವಾಗಿ ಇಡುತ್ತದೆ ಮತ್ತು ಈಗಾಗಲೇ ಹಾಳಾಗಿರುವ ಅಪಧಮನಿಗಳಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಸಹ ಪ್ರವರ್ಧಿಸಬಹುದು. ಬೇರೆ ಬೇರೆ ಅಧ್ಯಯನಗಳಿಗನುಸಾರ, ತಾಜಾ ಹಣ್ಣುಗಳು, ತರಕಾರಿಗಳು ಹಾಗೂ ಕಾಳುಗಳನ್ನು ಹೆಚ್ಚಾಗಿ ಸೇವಿಸುವುದು, ಮಸ್ತಿಷ್ಕ ಆಘಾತದ ಅಪಾಯವನ್ನು ಕಡಿಮೆಗೊಳಿಸಲು ಸಹಾಯ ಮಾಡಿದೆ.