ಜಗತ್ತನ್ನು ಗಮನಿಸುವುದು
ವಿದ್ಯುತ್ ವಿಕಿರಣ ಕ್ರಿಯಾಶಕ್ತ ರತ್ನಗಳು
ಬ್ಯಾಂಗ್‌ಕಾಕ್‌ನ ಒಬ್ಬ ವ್ಯಾಪಾರಿಗೆ ಮಾರಲ್ಪಟ್ಟ ರತ್ನಗಳು, ವಿದ್ಯುತ್ ವಿಕಿರಣ ಕ್ರಿಯಾಶಕ್ತವಾಗಿದ್ದವೆಂದು ತಿಳಿದುಬಂದಾಗ, ಅದೊಂದು ಅಂತಾರಾಷ್ಟ್ರೀಯ ವ್ಯಾಪಾರ ಎಚ್ಚರಿಕೆಯನ್ನೇ ಪ್ರೇರಿಸಿತು. ಒಬ್ಬ ಅನುಭವಸ್ಥ ರತ್ನ ವ್ಯಾಪಾರಿಯಾದ ಸಾಹಾಬೂದೀನ್ ನೀಸಾಬೂದೀನನಿಗೆ, ಒಂದು ವ್ಯಾಪಾರ ವ್ಯವಹಾರವು ಲಾಭದಾಯಕವಾದದ್ದೊ ಇಲ್ಲವೊ ಎಂಬುದು ಚೆನ್ನಾಗಿ ಗೊತ್ತಿದೆ. ಆದುದರಿಂದ ಇಂಡೋನೇಷಿಯದ ಒಬ್ಬ ವ್ಯಾಪಾರಿಯು ಅವನಿಗೆ 50 ಕ್ಯಾಟ್ಸ್‌ಐ (ಒಂದು ರತ್ನ)ಗಳನ್ನು, ಅವುಗಳ ಸಾಮಾನ್ಯ ಬೆಲೆಗಿಂತ ಅತಿ ಅಗ್ಗದ ಬೆಲೆಗೆ ನೀಡಿದಾಗ, ಬ್ಯಾಂಗ್‌ಕಾಕ್‌ನ ವ್ಯಾಪಾರಿಯು ಅವುಗಳನ್ನು ತನ್ನದಾಗಿಸಿಕೊಂಡನು. “ಪ್ರತಿಯೊಂದು ರತ್ನವು ಅಮೂಲ್ಯವೆಂದೆಣಿಸಲ್ಪಟ್ಟ ದಟ್ಟ ಕಂದು ಬಣ್ಣದಾಗಿದ್ದು, ಬೆಕ್ಕಿನ ಸೀಳಲ್ಪಟ್ಟ ಕಣ್ಣಿನಪಾಪೆಯನ್ನು ಹೋಲುವ, ವಿಶಿಷ್ಟಪೂರ್ಣ ಕ್ಷೀರ ಸ್ಫಟಿಕದಂತಹ ರೇಖೆಯಿಂದ ಇಬ್ಬಾಗಿಸಲ್ಪಟ್ಟಿತ್ತು” ಎಂದು ಏಷಿಯವೀಕ್ ವರದಿಸುತ್ತದೆ. ಆದರೆ, ರತ್ನಗಳ ಕಾಂತಿಯು ಬೇರೊಂದು ಮೂಲದಿಂದ ಬರುತ್ತಿತ್ತು. ಅವುಗಳ ಬಣ್ಣವನ್ನು ವರ್ಧಿಸುವ ಮೂಲಕ, ಅವುಗಳ ಮೌಲ್ಯವನ್ನು ಹೆಚ್ಚಿಸಲಿಕ್ಕಾಗಿ ಅವು ವಿಕಿರಣಿಸಲ್ಪಟ್ಟಿದ್ದವು. ಹಾಂಗ್ ಕಾಂಗ್‌ನ ಆಭರಣ ಮಾರುಕಟ್ಟೆಯಲ್ಲಿ ಕಂಡುಕೊಳ್ಳಲ್ಪಟ್ಟ ಮತ್ತೊಂದು ರತ್ನವು, ಏಷಿಯನ್ ವಿಕಿರಣ ಸುರಕ್ಷತಾ ಮಿತಿಯನ್ನು 25ರಷ್ಟು ಬಾರಿ ಮೀರಿರುವುದಾಗಿ ದಾಖಲಿಸಲ್ಪಟ್ಟಿತು. “ಇಲ್ಲಿಯ ವರೆಗೆ, ಸಮಸ್ಯೆಯು ಕ್ಯಾಟ್ಸ್‌ಐ ಹಳದಿಪಚ್ಚೆಯಲ್ಲಿ ಮಾತ್ರ ಕಂಡುಕೊಳ್ಳಲ್ಪಟ್ಟಿದೆ” ಎಂದು ಆ ಪತ್ರಿಕೆಯು ಹೇಳುತ್ತದೆ.
ವಾಚನ ಹವ್ಯಾಸಗಳು
ಸರಾಸರಿಯಾಗಿ ಪ್ರತಿವರ್ಷ ಬ್ರೆಸಿಲ್ ದೇಶದವರು 2.3 ಪುಸ್ತಕಗಳನ್ನು ಓದುತ್ತಾರೆಂದು, ಸಾರ್ನಲ್ ಡೆ ಟಾರ್ಡೆ ವರದಿಸುತ್ತದೆ. ಶಾಲೆ ಬಿಟ್ಟ ತರುವಾಯ, ಬ್ರೆಸಿಲ್‌ವಾಸಿಗಳಲ್ಲಿ ಹೆಚ್ಚಿನವರಿಗೆ ಪುಸ್ತಕಗಳೊಂದಿಗೆ ಯಾವ ಸಂಪರ್ಕವೂ ಇರುವುದಿಲ್ಲ. ಸಾಂಸ್ಕೃತಿಕ ಖಾತೆಯ ಕಾರ್ಯದರ್ಶಿ ಓಟ್ಟಾವ್ಯಾನೊ ಡಿ ಫ್ಯೋರೆ ಹೇಳುವುದು: “ನಿಜವಾದ ಸಮಸ್ಯೆಯೇನೆಂದರೆ, ಬ್ರೆಸಿಲ್‌ನಲ್ಲಿ ಓದಲ್ಪಡುವ ಪುಸ್ತಕಗಳಲ್ಲಿ 60 ಪ್ರತಿಶತದಷ್ಟು ವಾಚನವು” ಮಕ್ಕಳು ಶಾಲೆಯಲ್ಲಿ “ಮಾಡಲೇಬೇಕಾದ ವಾಚನವಾಗಿದೆ. ಉಳಿದ 40 ಪ್ರತಿಶತದಲ್ಲಿ, ಹೆಚ್ಚಿನವು ಧಾರ್ಮಿಕ ಹಾಗೂ ಗೂಢಾರ್ಥದ ಪುಸ್ತಕಗಳು, ಲೈಂಗಿಕ ವಿಷಯಗಳ ಕುರಿತಾದ ಪುಸ್ತಕಗಳು, ಇಲ್ಲವೆ ಸ್ವಸಹಾಯ ನೀಡುವ ಪುಸ್ತಕಗಳಾಗಿವೆ” ಎಂದು ಆ ವಾರ್ತಾಪತ್ರಿಕೆಯು ಹೇಳುತ್ತದೆ. ವಾಚನ ಹವ್ಯಾಸಗಳ ಕುರಿತು ಡಿ ಫ್ಯೊರಾ ಹೇಳುವುದು: “ಮಕ್ಕಳು, ಕುಟುಂಬದಲ್ಲಿ, ಶಾಲೆಯಲ್ಲಿ, ಮತ್ತು ಟಿವಿಯ ಸುತ್ತಲೂ ಒಟ್ಟುಸೇರುತ್ತಾರೆ. ಕುಟುಂಬದಲ್ಲಿ ಓದಲು ಇಷ್ಟಪಡುವವರು ಯಾರೂ ಇಲ್ಲದಿರುವಾಗ, ಅಲ್ಲಿ ಅವರಿಗೆ ಯಾವ ಉತ್ತೇಜನವೂ ಎಂದಿಗೂ ದೊರೆಯಲಾರದು.” ಅವರು ಕೂಡಿಸಿ ಹೇಳುವುದು: “ಟಿವಿಯ ವಿಷಯದಲ್ಲಾದರೊ, ಜನಪ್ರಿಯ ಟಿವಿ ಚ್ಯಾನಲ್‌ಗಳು ವಾಚನ ಹವ್ಯಾಸಗಳನ್ನು ಉತ್ತೇಜಿಸುವುದೇ ಇಲ್ಲ.”
ಸಂಚಾರದಲ್ಲಿ ವರ್ಷಗಳು
ಇಟಲಿಯ ಪ್ರಧಾನ ನಗರಗಳಲ್ಲಿ ವಾಸಿಸುವವರು, ಮನೆಯಿಂದ ಕೆಲಸದ ಸ್ಥಳಕ್ಕೆ ಇಲ್ಲವೆ ಶಾಲೆಗೆ ಹೋಗಿಬಂದು ಪ್ರಯಾಣಿಸುತ್ತಾ ಬಹಳಷ್ಟು ಸಮಯವನ್ನು ವ್ಯಯಿಸುತ್ತಾರೆ. ಎಷ್ಟು ಸಮಯವು ವ್ಯಯಿಸಲ್ಪಡುತ್ತದೆ? ಇಟಾಲಿಯನ್ ಪರಿಸರೀಯ ಒಕ್ಕೂಟವಾದ ಲೇಗಾಮ್‌ಬ್ಯಂಟಿಗನುಸಾರ, ನೇಪಲ್ಸ್‌ನ ಪ್ರಜೆಗಳು ಪ್ರತಿದಿನ 140 ನಿಮಿಷಗಳನ್ನು ಪ್ರಯಾಣಮಾಡುತ್ತಾ ವ್ಯಯಿಸುತ್ತಾರೆ. ನೇಪಲ್ಸ್‌ನ ಒಬ್ಬ ನಿವಾಸಿಯ ಸರಾಸರಿ ಜೀವಮಾನಕಾಲವು 74 ವರ್ಷಗಳೆಂದು ಭಾವಿಸಿಕೊಳ್ಳುವುದಾದರೆ, ಅವನು ತನ್ನ ಜೀವಮಾನದ 7.2 ವರ್ಷಗಳನ್ನು ಸಂಚಾರದಲ್ಲಿ ಕಳೆದುಕೊಳ್ಳುವನು. ಪ್ರತಿದಿನ ಸಂಚಾರಮಾಡುತ್ತಾ 135 ನಿಮಿಷಗಳನ್ನು ವ್ಯಯಿಸುವ ರೋಮ್‌ನ ಒಬ್ಬ ನಿವಾಸಿಯು, 6.9 ವರ್ಷಗಳನ್ನು ಕಳೆದುಕೊಳ್ಳುವನು. ಬೇರೆ ನಗರಗಳಲ್ಲಿನ ಪರಿಸ್ಥಿತಿಯೂ ಹೆಚ್ಚುಕಡಿಮೆ ಅಷ್ಟೇ ಕೆಟ್ಟದ್ದಾಗಿದೆ. ಬಲೋನ್ಯದ ಜನರು 5.9 ವರ್ಷಗಳನ್ನು ಮತ್ತು ಮಿಲನ್‌ನಲ್ಲಿರುವವರು 5.3 ವರ್ಷಗಳನ್ನು ಕಳೆದುಕೊಳ್ಳುವರೆಂದು ಲಾ ರೇಪೂಬ್ಲೀಕಾ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ.
ಬಡತನ ಹಾಗೂ ಪರಿಸರ
ಆರ್ಥಿಕ ಬೆಳವಣಿಗೆಯ ಎದುರಿನಲ್ಲೂ, ಲೋಕವ್ಯಾಪಕವಾಗಿ 130 ಕೋಟಿಗಿಂತಲೂ ಹೆಚ್ಚಿನ ಜನರು, ದಿನಕ್ಕೆ 80 ರೂಪಾಯಿಗಳಿಗಿಂತಲೂ ಕಡಿಮೆ ಹಣದಲ್ಲಿ ಜೀವನ ಸಾಗಿಸುತ್ತಾರೆ. ಬಡತನವು ಪಟ್ಟುಬಿಡದೆ ಮುಂದುವರಿದಿದೆ ಮಾತ್ರವಲ್ಲ, ದಿನೇ ದಿನೇ ಕೆಡುತ್ತಿದೆ ಎಂದು ಯುಎನ್ ವರದಿಯೊಂದು ಹೇಳುತ್ತದೆ. 100 ಕೋಟಿಗಿಂತಲೂ ಹೆಚ್ಚಿನ ಜನರು ಇಂದು, 20, 30, ಅಥವಾ 40 ವರ್ಷಗಳಷ್ಟು ಹಿಂದೆ ಸಂಪಾದಿಸುತ್ತಿದ್ದ ಹಣಕ್ಕಿಂತಲೂ ಕಡಿಮೆ ಸಂಪಾದಿಸುತ್ತಾರೆ. ಇದು ಪ್ರತಿಯಾಗಿ, ಪರಿಸರದ ನಾಶನಕ್ಕೆ ನೆರವು ನೀಡುತ್ತದೆ. ಏಕೆಂದರೆ “ಬಡತನವು, ಯಾವುದೇ ದೀರ್ಘ ಸಮಯದ ಸಂರಕ್ಷಣಾ ಪ್ರಯತ್ನವನ್ನು ಅಡ್ಡಿಪಡಿಸುವ ನೈಸರ್ಗಿಕ ಸಂಪನ್ಮೂಲಗಳ ತತ್‌ಕ್ಷಣದ ಶೋಷಣೆಯನ್ನು ಕೇಳಿಕೊಳ್ಳುತ್ತದೆ” ಎಂದು ಯೂನೆಸ್ಕೋದ ಸೋರ್ಸಸ್ ಪತ್ರಿಕೆಯು ಹೇಳುತ್ತದೆ. “ಪ್ರಸ್ತುತ ಪ್ರಮಾಣಗಳಲ್ಲಿ, ಕ್ಯಾರಿಬೀಅನ್‌ನಲ್ಲಿರುವ ಕಾಡುಗಳು 50ಕ್ಕಿಂತಲೂ ಕಡಿಮೆ ವರ್ಷಗಳಲ್ಲಿ ಸಂಪೂರ್ಣವಾಗಿ ಅಳಿದುಹೋಗಿರುವವು . . . ರಾಷ್ಟ್ರೀಯ ಮಟ್ಟದಲ್ಲಾದರೊ, ಪರಿಸ್ಥಿತಿಯು ಇನ್ನೂ ಕೆಟ್ಟದ್ದಾಗಿದೆ: ಫಿಲಿಪ್ಪೀನ್ಸ್‌ನಲ್ಲಿ 30 ವರ್ಷಗಳು, ಅಫ್ಘಾನಿಸ್ಥಾನ್‌ನಲ್ಲಿ 16 ವರ್ಷಗಳು, ಮತ್ತು ಲೆಬನಾನ್‌ನಲ್ಲಿ 15 ವರ್ಷಗಳಷ್ಟು ಕಾಡು ಉಳಿದಿದೆ.”
ಲಂಚಗಾರಿಕೆಯನ್ನು ಕೊನೆಗೊಳಿಸಲು ಪ್ರಯತ್ನಿಸುವುದು
ಅದು ಚೈನಾದಲ್ಲಿ ಹ್ವೇಲೂ, ಕೆನ್ಯದಲ್ಲಿ ಕೀಟೂ ಕೀಡಾಂಗೋ ಆಗಿದೆ. ಮೆಕ್ಸಿಕೊ ಯೂನಾ ಮಾರ್ಡೀಡಾ ಎಂಬ ಪದವನ್ನು; ರಷ್ಯ ಫಸ್ಯಟ್‌ಕ; ಮತ್ತು ಮಧ್ಯಪೂರ್ವ ದೇಶಗಳು ಬಕ್ಷೀಷ್ ಎಂಬ ಪದವನ್ನು ಉಪಯೋಗಿಸುತ್ತವೆ. ಹಲವಾರು ದೇಶಗಳಲ್ಲಿ, ಲಂಚಗಾರಿಕೆಯು ಜೀವನ ರೀತಿಯಾಗಿದೆ, ಮತ್ತು ಕೆಲವೊಮ್ಮೆ ವ್ಯಾಪಾರ ನಡೆಸಲು, ನಿರ್ದಿಷ್ಟ ವಸ್ತುಗಳನ್ನು ಪಡೆದುಕೊಳ್ಳಲು, ನ್ಯಾಯವನ್ನು ಗಿಟ್ಟಿಸಿಕೊಳ್ಳಲು ಸಹ ಅದು ಏಕೈಕ ವಿಧವಾಗಿದೆ. ಆದರೆ ಇತ್ತೀಚೆಗೆ, ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರಗಳಲ್ಲಿ ಲಂಚಗಾರಿಕೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಿಕ್ಕಾಗಿ, 34 ದೇಶಗಳು ಒಂದು ಒಪ್ಪಂದಕ್ಕೆ ಸಹಿಹಾಕಿವೆ. ಇವುಗಳಲ್ಲಿ ಆರ್ಜೆಂಟೀನ, ಚಿಲಿ, ಬಲ್ಗೇರಿಯ, ಬ್ರೆಸಿಲ್, ಹಾಗೂ ಸ್ಲೋವಾಕಿಯ ದೇಶಗಳ ಜೊತೆಗೆ, ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿಗಾಗಿರುವ ಸಂಸ್ಥೆಯ 29 ಸದಸ್ಯ ದೇಶಗಳು ಸೇರಿವೆ. ಲೋಕದ ಉನ್ನತ ಆರ್ಥಿಕ ಸಂಸ್ಥೆಗಳಾದ, ವರ್ಲ್ಡ್ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸಿನ ನಿಧಿಯು ಸಹ ಅಧಿಕೃತ ಭ್ರಷ್ಟಾಚಾರದ ವಿರುದ್ಧ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿವೆ. 69 ದೇಶಗಳಲ್ಲಿನ 40 ಪ್ರತಿಶತದಷ್ಟು ವ್ಯಾಪಾರಗಳು ಲಂಚಗಳನ್ನು ಕೊಡುತ್ತಿದ್ದವೆಂದು, ವರ್ಲ್ಡ್ ಬ್ಯಾಂಕ್‌ನ ಒಂದು ಸಮೀಕ್ಷೆಯು ತೋರಿಸಿದ ಬಳಿಕ ಈ ಹೆಜ್ಜೆಗಳು ತೆಗೆದುಕೊಳ್ಳಲ್ಪಟ್ಟವು. ಭ್ರಷ್ಟಾಚಾರವನ್ನು ಕಡೆಗಣಿಸುವ ದೇಶಗಳಿಗೆ ನಿಧಿಗಳನ್ನು ನಿಲ್ಲಿಸಿಬಿಡುವ ಕ್ರಮಕ್ಕೆ ಈಗ ಎರಡೂ ಸಂಸ್ಥೆಗಳು ಅನುಮತಿ ನೀಡುತ್ತವೆ.