ಜಗತ್ತನ್ನು ಗಮನಿಸುವುದು
ಆತ್ಮಿಕ ಜ್ಞಾನೋದಯಕ್ಕಾಗಿ ಅನ್ವೇಷಣೆ
“ಈ ಶತಮಾನದ ಅಂತ್ಯವು ಸಮೀಪಿಸುತ್ತಿರುವಂತೆ, ಬ್ರಿಟಿಷರು ತಮ್ಮ ಜೀವನದಲ್ಲಿ ಯಾವುದಾದರೂ ಒಂದು ರೀತಿಯ ಆತ್ಮಿಕತೆಗಾಗಿ ಹುಡುಕಾಡುತ್ತಿದ್ದಾರೆ ಎಂಬುದು, ಅವರಲ್ಲಿ ನಂಬಿಕೆ, ಮಾಂತ್ರಿಕ ವಿದ್ಯೆ ಮತ್ತು ಅಲೌಕಿಕತೆಯ ಕುರಿತ ಪುಸ್ತಕಗಳಿಗಾಗಿರುವ ಹಸಿವಿನಿಂದ ತಿಳಿದುಬರುತ್ತದೆ,” ಎಂದು ದ ಟೈಮ್ಸ್ ವಾರ್ತಾಪತ್ರಿಕೆಯು ಹೇಳುತ್ತದೆ. ಸಾಂಸ್ಕೃತಿಕ ಪ್ರವೃತ್ತಿಗಳು (ಇಂಗ್ಲಿಷ್) ಎಂಬ ವರದಿಯಲ್ಲಿ ಕಾಣಿಸಿಕೊಂಡ ಅಧ್ಯಯನಕ್ಕನುಸಾರ, ಕಳೆದ ಐದು ವರ್ಷಗಳಲ್ಲಿ ಧಾರ್ಮಿಕ ಶೀರ್ಷಿಕೆಗಳಿರುವ ಪುಸ್ತಕಗಳ ಸಂಖ್ಯೆಯು ಶೇಕಡ 83ರಷ್ಟು ಹೆಚ್ಚಾಗಿದೆ. ಹಾಗೆಯೇ ಹೊಸ ಯುಗ ಮತ್ತು ಮಾಂತ್ರಿಕ ವಿದ್ಯೆಯ ಕುರಿತಾದ ಪುಸ್ತಕಗಳ ಮಾರಾಟದಲ್ಲಿ ಶೇಕಡ 75ರಷ್ಟು ಹೆಚ್ಚಳವಿದೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರಕಾಶಿತವಾಗಿರುವ ವಿಜ್ಞಾನದ ಪುಸ್ತಕಗಳ ವ್ಯಾಪಾರವು ಇಳಿತವನ್ನು ಕಂಡಿದೆ. ಅದರಲ್ಲೂ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದ ಪುಸ್ತಕಗಳ ಮಾರಾಟವು ಶೇಕಡ 27ರಷ್ಟು ಇಳಿಮುಖಗೊಂಡಿವೆ. ಈ ಸಂಖ್ಯಾಸೂಚಿಗಳನ್ನು ಪ್ರತಿಬಿಂಬಿಸುತ್ತ, ವರದಿಯ ಸಂಪಾದಕಿ ಸೇರ ಸೆಲ್ವೂಡ್ ಸಲಹೆ ನೀಡಿದ್ದು, “ಈ ಶತಮಾನದ ಅಂತ್ಯದಲ್ಲಿ, ಜನರು ಹೆಚ್ಚು ಅಂತರ್ ದೃಷ್ಟಿಯುಳ್ಳವರಾಗುತ್ತ, ಜೀವನದ ಮುಖ್ಯ ಉದ್ದೇಶವಾದರೂ ಏನು ಎಂಬ ವಿಷಯದಲ್ಲಿ ಕುತೂಹಲಪಡುತ್ತಾರೆ.” ಹಾಗಾದರೆ, ಭೂಪಟ ಮತ್ತು ಖಗೋಲಶಾಸ್ತ್ರದ ಪುಸ್ತಕಗಳ ಮಾರಾಟದಲ್ಲಿ 185 ಪ್ರತಿಶತದಷ್ಟು ಹೆಚ್ಚಳವಾಗಲು ಕಾರಣವೇನು? “ನಿಯತಕ್ರಮವಾಗಿ ಮಾಡುವ ಚಟುವಟಿಕೆಯಿಂದ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುವ ಅಗತ್ಯ”ವನ್ನು ಇದು ಸೂಚಿಸಬಹುದೆಂದು ಅವರು ಹೇಳಿದರು.
ಯೂರೋಪಿನಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಅತಿಕ್ರಮಿಸಲ್ಪಡುತ್ತದೆ
ಅಂತಾರಾಷ್ಟ್ರೀಯ ಹೆಲ್ಸಿಂಕಿ ಒಕ್ಕೂಟವು, “ಸ್ವಾತಂತ್ರ್ಯವನ್ನು ಅತಿಕ್ರಮಿಸಿದ್ದಕ್ಕಾಗಿ ಯೂರೋಪಿನ 19 ದೇಶಗಳ ಮೇಲೆ ಆರೋಪ ಹೊರಿಸಿದೆ,” ಎಂದು ಕ್ಯಾಥೊಲಿಕ್ ಇಂಟರ್‌ನ್ಯಾಷನಲ್ ಪತ್ರಿಕೆಯು ವರದಿಸುತ್ತದೆ. ಈ ಒಕ್ಕೂಟವು ಗಮನಿಸಿದ್ದೇನೆಂದರೆ, ವಿಶೇಷವಾಗಿ ಪ್ರಾಚ್ಯ ಯೂರೋಪ್ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತ ಧಾರ್ಮಿಕ ಜನರ ಮೇಲೆ ಒತ್ತಡವು ತೀವ್ರವಾಗಿದೆ. ಇದರೊಂದಿಗೆ ಯೂರೋಪಿಯನ್ ಸಂಘದ ಹಲವಾರು ಸದಸ್ಯ ರಾಜ್ಯಗಳು, “ಸಾಂಪ್ರದಾಯಿಕ ಧರ್ಮಗಳ ಸ್ಥಾನಮಾನವನ್ನು ಬಲಪಡಿಸಲು ನಿಯಮಗಳನ್ನು ರಚಿಸುತ್ತಿರುವಾಗ, [ಯೆಹೋವನ ಸಾಕ್ಷಿಗಳಂತಹ] ಸಣ್ಣ ಗುಂಪುಗಳನ್ನು ನಿರ್ಬಂಧಿಸುತ್ತಿವೆ” ಎಂದು ಪತ್ರಿಕೆಯು ತಿಳಿಸಿತು. ಈ ಒಕ್ಕೂಟದ ನಿರ್ದೇಶಕರಾದ ಆ್ಯರನ್ ರೋಡ್ಸ್ ಕೂಡಿಸಿದ್ದು: “‘ಪಂಥಾಕ್ರಮಣ’ದ ಬೆದರಿಕೆಗಳು, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರ್ಬಂಧ ಹಾಕುವಂತೆ ಮಾಡಿವೆಯೆಂಬ ಸೂಚನೆಗಳನ್ನು ಪಾಶ್ಚಾತ್ಯ ಸಮಾಜಗಳು ನೀಡುತ್ತವೆ. ನಂಬಿಕೆಯ ಸ್ವಾತಂತ್ರ್ಯವು, ಅಪೇಕ್ಷಣೀಯವಾಗಿರುವ ಅಥವಾ ಅಮೂಲ್ಯವಾಗಿರುವ ಮೌಲ್ಯಗಳ ಮತ್ತು ನಿಯಮಗಳ ಭಾಗವಾಗಿದೆ ಮತ್ತು ಅದು ಎಲ್ಲರಿಗೂ ಸಮಾನವಾಗಿ ಅನ್ವಯಿಸಲ್ಪಡಬೇಕೆಂದು ಜನರು ಅರಿಯುವ ವರೆಗೆ ಈ ಪರಿಸ್ಥಿತಿಯು ಕೆಡುತ್ತಿರುವುದು.”
ಭೂಗೋಲವು ಅತ್ಯಧಿಕ ಉಷ್ಣಾಂಶವನ್ನು ಅನುಭವಿಸಿದ ವರ್ಷ
ಇಸವಿ 1860ರ ನಂತರ ಕಳೆದ ವರ್ಷ, ಅಂದರೆ 1998, ಅತ್ಯಧಿಕ ಉಷ್ಣಾಂಶವನ್ನು ಅನುಭವಿಸಿದ ವರುಷವಾಗಿತ್ತು ಎಂದು ಸೈಯನ್ಸ್ ನ್ಯೂಸ್ ವರದಿಸುತ್ತದೆ. 1961 ಮತ್ತು 1990ರ ನಡುವೆ ಇದ್ದ ಭೂಮಿಯ ಮೇಲ್ಮೈಯ ಸರಾಸರಿ ಉಷ್ಣಾಂಶಕ್ಕಿಂತ, 1998ರಲ್ಲಿದ್ದ ಉಷ್ಣಾಂಶವು 0.58 ಡಿಗ್ರಿ ಸೆಲ್‌ಷಿಯಸ್‌ನಷ್ಟು ಹೆಚ್ಚಾಗಿತ್ತೆಂದು ಅಂದಾಜುಮಾಡಲಾಯಿತು. “ಭೂಗೋಲದ ಹವಾಮಾನದಲ್ಲಿ ಒಂದು ಡಿಗ್ರಿಯ ನೂರನೆಯ ಒಂದಾಂಶದ ಬದಲಾವಣೆಯ ಕುರಿತೂ ಚಿಂತಿತರಾಗಿರುವ ವಾಯುಗುಣ ಶಾಸ್ತ್ರಜ್ಞರಿಗೆ, ಕಳೆದ ವರ್ಷದ ಉಷ್ಣಾಂಶವು ಹಿಮಾಲಯದ ಶಿಖರದಷ್ಟು ಎತ್ತರವಾಗಿರುವಂತೆ ತೋರುತ್ತದೆ,” ಎಂದು ಪತ್ರಿಕೆಯು ಹೇಳುತ್ತದೆ. ವರದಿಯು ಇನ್ನೂ ಗಮನಿಸುವುದೇನೆಂದರೆ, 1990ರಿಂದ, ಅತ್ಯಧಿಕ ಉಷ್ಣಾಂಶದ ಏಳು ವರುಷಗಳು ದಾಖಲಾಗಿವೆ, ಮತ್ತು 1983ರಿಂದ ಅತ್ಯುಚ್ಚ ಉಷ್ಣಾಂಶದ ಎಲ್ಲ ಹತ್ತು ವರ್ಷಗಳು ದಾಖಲಿಸಲ್ಪಟ್ಟವು. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ ಮಂಡಲಿಯ ಜಾನತನ್ ಒವರ್ಪೆಕ್ ಅವರಿಗನುಸಾರ, ಕಳೆದ ಎರಡು ದಶಕಗಳು ಹಿಂದಿನ 1,200 ವರ್ಷಗಳಲ್ಲೇ ಅತ್ಯಧಿಕ ಉಷ್ಣಾಂಶವುಳ್ಳ ದಶಕಗಳಾಗಿದ್ದಿರಬಹುದು. ಲೋಕ ವಾಯುಗುಣಶಾಸ್ತ್ರದ ಸಂಸ್ಥೆಯು ವರದಿಸುವುದೇನಂದರೆ, ಯೂರೋಪ್ ಮತ್ತು ಏಷ್ಯಾ ಖಂಡದ ಉತ್ತರ ಭಾಗಗಳು ಮಾತ್ರ ಈ ಉಷ್ಣಾಂಶದ ಏರುವಿಕೆಯಿಂದ ತಪ್ಪಿಸಿಕೊಂಡಿವೆ. ಅಮೆರಿಕದ ದಕ್ಷಿಣ ರಾಜ್ಯಗಳು ಬೇಸಿಗೆಯ ವಿಪರೀತ ಶಾಖವನ್ನು ಅನುಭವಿಸಿದವು, ಮತ್ತು ಮಧ್ಯ ರಷ್ಯದಲ್ಲಿ ಜೂನ್ ತಿಂಗಳಿನ ಬೇಸಿಗೆಯ ಕಾವು 100ಕ್ಕಿಂತಲೂ ಹೆಚ್ಚು ಜನರನ್ನು ಕೊಂದು, ದೊಡ್ಡ ಬೆಂಕಿಗಳಿಗೆ ನಡಿಸಿತು.
ಹೊಸ ‘ಶೀತಲ ಯುದ್ಧ’
“ಸ್ಲೊವೀನಿಯದವರು ವಿವಿಧ ಪ್ರಕಾರದ ಮತ್ತು ರುಚಿಗಳ ಐಸ್‌ಕ್ರೀಮ್‌ಗಳನ್ನು ಕೊಳ್ಳಲು ಹಾತೊರೆಯುತ್ತಿರುವಾಗ ವ್ಯಾಪಾರಿಗಳು ಐಸ್‌ಕ್ರೀಮ್ ಶೀತಕಗಳನ್ನು ತುಂಬಿಸಿಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಲೀಊಬ್ಲೀಆನದ ಡೇಲೋ ವರದಿಸುತ್ತದೆ. ಆ ವಾರ್ತಾಪತ್ರಿಕೆಗನುಸಾರ, ಸ್ಲೊವೀನಿಯದವರ ಐಸ್‌ಕ್ರೀಮ್ ಸ್ವಾದವು ದಿನೇ ದಿನೇ ತೀವ್ರವಾಗುತ್ತಿದೆ. ಹೇಗೆಂದರೆ, ಇತ್ತೀಚೆಗೆ ಅಲ್ಲಿನ ಐಸ್‌ಕ್ರೀಮ್ ತಯಾರಕರು ತಮ್ಮ ವಾರ್ಷಿಕ ವ್ಯಾಪಾರದಲ್ಲಿ ಶೇಕಡ 22ರಷ್ಟು ಹೆಚ್ಚಳವನ್ನು ದಾಖಲೆಮಾಡಿದರು. ಹೆಚ್ಚಳವು ಇದೇ ಗತಿಯಲ್ಲಿ ಮುಂದುವರಿಯುತ್ತಾ ಹೋದರೆ, ರಾಷ್ಟ್ರ ಮಟ್ಟದಲ್ಲಿ ವಾರ್ಷಿಕವಾಗಿ ಪ್ರತಿಯೊಬ್ಬ ವ್ಯಕ್ತಿಯು 4.3 ಲೀಟರ್ ಐಸ್‌ಕ್ರೀಮ್‌ನ್ನು ಸೇವಿಸಿದರೆ, ಅದು ಕ್ರಮೇಣವಾಗಿ ಪಶ್ಚಿಮ ಯೂರೋಪಿಯನ್ನರು ಸೇವಿಸುವ ಸರಾಸರಿ 5.5 ಲೀಟರು ಐಸ್‌ಕ್ರೀಮ್ ಪ್ರಮಾಣವನ್ನು ಮೀರಿಸುವುದು. ಆದರೂ, ಯೂರೋಪಿನ ಐಸ್‌ಕ್ರೀಮ್ ರೇಸಿನಲ್ಲಿ, ಸ್ವೀಡನಿನವರು ಇನ್ನೂ ಹೆಚ್ಚು ಮುಂದಿದ್ದಾರೆ. ಯೂರೋಮಾನಿಟರ್ ಎಂಬ ವ್ಯಾಪಾರ ಸುದ್ದಿಸಂಗ್ರಹ ಇಲಾಖೆಯ ಗುಂಪಿಗನುಸಾರ, ಸ್ವೀಡನಿನ ಪ್ರತಿ ವ್ಯಕ್ತಿಯು ವರ್ಷಕ್ಕೆ ಸರಾಸರಿ 16 ಲೀಟರಿನಷ್ಟು ಐಸ್‌ಕ್ರೀಮ್ ಅನ್ನು ಸೇವಿಸುತ್ತಾನೆ. ಲೋಕದಾದ್ಯಂತ, ಇದರಲ್ಲಿ ಅಮೆರಿಕನರದ್ದೇ ಮೇಲುಗೈ. ಅಲ್ಲಿ ವರ್ಷಕ್ಕೆ ಪ್ರತಿಯೊಬ್ಬ ವ್ಯಕ್ತಿಯು 20 ಲೀಟರ್‌ಗಳಿಗೂ ಹೆಚ್ಚು ಐಸ್‌ಕ್ರೀಮ್ ಅನ್ನು ಸೇವಿಸುತ್ತಾನೆ.
ಒಂದು “ಅದೃಶ್ಯ ರೋಗ”
“ಅಭಿವೃದ್ಧಿಶೀಲ ದೇಶಗಳಲ್ಲಿ ಅಂದಾಜಿನ ಪ್ರಕಾರ 15ರಿಂದ 1 ಕೋಟಿ 8 ಲಕ್ಷ ಮಕ್ಕಳು, ರಕ್ತದಲ್ಲಿ ಸೀಸದ ಉಚ್ಚ ಪ್ರಮಾಣದಿಂದ ಬಾಧಿತರಾಗಿದ್ದಾರೆ,” ಎಂದು ಪರಿಸರ ವಾರ್ತಾ ಸೇವೆಯು ವರದಿಸುತ್ತದೆ. ಉದಾಹರಣೆಗೆ, ಭಾರತದಲ್ಲಿ ಮಕ್ಕಳ ಬೌದ್ಧಿಕ ಸಾಮರ್ಥ್ಯ ಮತ್ತು ಅವರು ಸೇವಿಸಿರುವ ಸೀಸದ ಪ್ರಮಾಣದ ಮಧ್ಯೆ ಸಂಬಂಧವನ್ನು ಸ್ಥಾಪಿಸಲಾಗಿದೆ. ಡಾಕ್ಟರ್ ಏಬ್ರಹಾಮ್ ಜಾರ್ಜ್‌ರಿಗನುಸಾರ, ಮಕ್ಕಳ “ಮಿದುಳಿನ ಮೇಲೆ ಸೀಸವು ಬೀರುವ ದೀರ್ಘ ಕಾಲದ ಪ್ರಭಾವವು . . . ಅವರು ಬೌದ್ಧಿಕ ಸಾಮರ್ಥ್ಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ,” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಸುತ್ತದೆ. ಭಾರತೀಯ ನಗರಗಳಲ್ಲಿ ಸೀಸದ ವಿಷಪ್ರಯೋಗದ ಮುಖ್ಯ ಮೂಲವು, ವಾಹನಗಳು ಸೀಸದಿಂದ ತುಂಬಿದ ಗ್ಯಾಸೊಲಿನ್ ಅನ್ನು ಈಗಲೂ ಉಪಯೋಗಿಸುತ್ತಿರುವುದೇ ಆಗಿದೆ. ಬಡತನ ಮತ್ತು ಹಸಿವೆಯಂತಹ ಸಮಸ್ಯೆಗಳೊಂದಿಗೆ ಹೋಲಿಸುವಾಗ, ಸೀಸದ ವಿಷಪ್ರಯೋಗವು ತುಲನಾತ್ಮಕವಾಗಿ ಹೆಚ್ಚು ಗಮನಾರ್ಹವಾಗಿ ಇಲ್ಲದಿರುವುದರಿಂದ, ಡಾಕ್ಟರ್ ಜಾರ್ಜ್ ಅದನ್ನು “ಅದೃಶ್ಯ ರೋಗ” ಎಂಬುದಾಗಿ ಕರೆಯುತ್ತಾರೆ.
ನೀರಿನ ಕುರಿತು ಹೆಚ್ಚಿನ ಚಿಂತೆಗಳು
“ನಾವು ಕುಡಿಯುವಂತಹ ನೀರು ಸಂಪೂರ್ಣವಾಗಿ ಕೀಟನಾಶಕಗಳಿಂದ ತುಂಬಿದೆ ಮಾತ್ರವಲ್ಲ ಅದು ಔಷಧವಸ್ತುಗಳಿಂದಲೂ ತುಂಬಿರುವಂತೆ ತೋರುತ್ತದೆ,” ಎಂದು ನ್ಯೂ ಸೈಂಟಿಸ್ಟ್ ಪತ್ರಿಕೆಯು ಹೇಳುತ್ತದೆ. ಔಷಧವಸ್ತುಗಳು ಬೇರೆ ಬೇರೆ ಮೂಲಗಳಿಂದ ಬರುತ್ತವೆ. ಅಗತ್ಯವಿಲ್ಲದ ಔಷಧಗಳನ್ನು ಕೆಲವು ಬಾರಿ ಶೌಚಾಲಯದಲ್ಲಿ ನೀರಿನಿಂದ ತೊಲಗಿಸಲಾಗುತ್ತದೆ. ಇದಕ್ಕೆ ಕೂಡಿಸಿ, ಔಷಧಗಳು ಮೂತ್ರದ ಮೂಲಕ ಹೊರಹೋಗುತ್ತವೆ. “ಮಾನವರಿಗೆ ಮತ್ತು ಪ್ರಾಣಿಗಳಿಗೆ ನೀಡಲಾಗುವ ಹೆಚ್ಚಿನ ಪ್ರತಿಜೀವಕಗಳ ಔಷಧ ಪ್ರಮಾಣದಲ್ಲಿ, 30 ರಿಂದ 90 ಶೇಕಡದಷ್ಟು ಭಾಗವು ಮೂತ್ರದ ಮೂಲಕ ಹೊರಹೋಗುತ್ತದೆ,” ಎಂದು ರಾಯಲ್ ಡೇನಿಷ್ ಸ್ಕೂಲ್ ಆಫ್ ಫಾರ್ಮಸಿಯ ಬೆಂಟ್ ಹೆಲಿಂಗಾ ಸಾಯ್‌ರನ್ಸನ್ ಹೇಳುತ್ತಾರೆ. ರೈತರು ತಮ್ಮ ಹೊಲಗಳಲ್ಲಿ ಪ್ರಾಣಿ ಮೂತ್ರ ಮತ್ತು ಗೊಬ್ಬರವನ್ನು ಕ್ರಮವಾಗಿ ಉಪಯೋಗಿಸಿದ್ದಾರೆ. ಔಷಧಗಳು ಪರಿಸರವನ್ನು ತಲುಪಿದಾಗ, ಅವು ಮೂಲಸ್ಥಿತಿಯಲ್ಲಿರಬಹುದು, ಅಥವಾ ಮಾನವ ಶರೀರದಲ್ಲಿ ಬದಲಾವಣೆ ಹೊಂದಿರುವುದರಿಂದ ಮೂಲಸ್ಥಿತಿಗಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿ ಇಲ್ಲವೆ ವಿಷಕಾರಿಯಾಗಿ ಇರಬಹುದು ಮತ್ತು ನೀರಿನಲ್ಲಿ ಅನೇಕ ವೇಳೆ ಸುಲಭವಾಗಿ ಕರಗುವಂತಹದ್ದಾಗಿ ಇರಬಹುದು. “ನೀರಿನಲ್ಲಿ ನಾವು ಪರೀಕ್ಷಿಸದಿರುವ ಕೆಲವೇ ರಾಸಾಯನಿಕ ಪದಾರ್ಥಗಳ ಗುಂಪುಗಳಲ್ಲಿ ಔಷಧಗಳು ಒಂದು ಗುಂಪಾಗಿವೆ,” ಎಂದು ಬ್ರಿಟನಿನ ಪರಿಸರ ಎಜೆನ್ಸಿಯ ಸ್ಟೀವ್ ಕಿಲೀನ್ ಹೇಳುತ್ತಾರೆ.
ಮಕ್ಕಳ ದುರುಪಯೋಗದ ಬಗ್ಗೆ ಜಾಗೃತಿ ಬೆಳೆಯುತ್ತಿದೆಯೋ?
ಎಲ್ ಯುನೀವೆರ್ಸಾಲ್ ಎಂಬ ಹೆಸರಿನ ಕ್ಯಾರಕಸ್‌ನ ವಾರ್ತಾಪತ್ರಿಕೆಗನುಸಾರ, ವೆನಸ್ವೇಲದಲ್ಲಿ ಲೈಂಗಿಕವಾಗಿ ಪೀಡಿತರಾದ ಮಕ್ಕಳ ಸಂಖ್ಯೆಯು 1980ರಲ್ಲಿ ಪ್ರತಿ 10 ಮಕ್ಕಳಲ್ಲಿ 1ರಿಂದ ಬೆಳೆದು, ಇಂದು ಪ್ರತಿ 10 ಮಕ್ಕಳಲ್ಲಿ 3ರಷ್ಟಾಗಿದೆ. 1980ರಲ್ಲಿ ಲೈಂಗಿಕವಾಗಿ ಪೀಡಿಸಲ್ಪಟ್ಟ ಮಗುವಿನ ಸರಾಸರಿ ಪ್ರಾಯವು 12ರಿಂದ 14ರ ಮಧ್ಯೆ ಇತ್ತು. ಇಂದು ಅನೇಕರು ಮೂರಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಾರೆ. ಇಂತಹ ಭಯಾನಕ ಪಾತಕಗಳ ಮುಖ್ಯ ಅಪರಾಧಿಗಳು ಯಾರಾಗಿದ್ದಾರೆ? ಮಕ್ಕಳನ್ನು ಸಿಹಿ ಮಿಠಾಯಿಗಳಿಂದ ಆಕರ್ಷಿಸಲು ಶಾಲಾ ಮೈದಾನುಗಳಲ್ಲಿ ಅವಿತುಕೊಂಡು ಹೊಂಚುಹಾಕುವ ಕಳ್ಳ ಅಪರಿಚಿತರು ಇವರಾಗಿದ್ದಾರೆಂಬ ವಿಚಾರವು ಸತ್ಯಕ್ಕೆ ದೂರವಾಗಿದೆ. ಅಪರಾಧಿಗಳಲ್ಲಿ 70 ಶೇಕಡದಷ್ಟು ವ್ಯಕ್ತಿಗಳು ಸಂಬಂಧಿಕರು ಅಥವಾ ಕುಟುಂಬದ ಸ್ನೇಹಿತರಾಗಿದ್ದಾರೆಂದು ಎಲ್ ಯುನೀವೆರ್ಸಾಲ್ ವಿವರಿಸುತ್ತದೆ. ಆ ಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು ಮಲಹೆತ್ತವರಾಗಿದ್ದಾರೆ. ಉಳಿದವರು ಸಾಮಾನ್ಯವಾಗಿ, ಅಣ್ಣಂದಿರು, ಸೋದರಸಂಬಂಧಿ ಅಥವಾ ಅಧ್ಯಾಪಕರಂತಹ ಅಧಿಕಾರ ಸ್ಥಾನದಲ್ಲಿರುವವರಾಗಿದ್ದಾರೆ.
ಶಿಕ್ಷಣದ ಬಿಕ್ಕಟ್ಟು
“ಒಂದು ಕೋಟಿ ಇಪ್ಪತ್ತೈದು ಲಕ್ಷ ಮಕ್ಕಳು—ಇವರಲ್ಲಿ ಹೆಚ್ಚಿನವರು ಹುಡುಗಿಯರು—ಶಿಕ್ಷಣವನ್ನು ಪಡೆದುಕೊಳ್ಳದೇ ಇರುವುದರಿಂದ ಮತ್ತು ಇನ್ನೂ ಒಂದು ಕೋಟಿ ಐವತ್ತು ಲಕ್ಷ ಮಕ್ಕಳು ಓದುಬರಹವನ್ನು ಕಲಿತುಕೊಳ್ಳುವ ಮುಂಚೆಯೇ ಶಾಲೆಯನ್ನು ಬಿಡುವುದರಿಂದ, ಅಭಿವೃದ್ಧಿಶೀಲ ದೇಶಗಳು ಶಿಕ್ಷಣದ ಬಿಕ್ಕಟ್ಟನ್ನು ಎದುರಿಸುತ್ತಿವೆ,” ಎಂದು ಇಂಗ್ಲೆಂಡಿನ ನ್ಯೂಸ್ ಅನ್‌ಲಿಮಿಟೆಡ್ ವರದಿಸುತ್ತದೆ. ಸದ್ಯಕ್ಕೆ, ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರತಿ 4 ಪ್ರೌಢರಲ್ಲಿ ಒಬ್ಬನು ಅಥವಾ 8,72,00,000 ಜನರು ಅನಕ್ಷರಸ್ಥರಾಗಿದ್ದಾರೆ. ಅಲ್ಲದೆ, ಅತಿ ಹೆಚ್ಚು ಅನಕ್ಷರಸ್ಥರಿರುವ ದೇಶಗಳು ಧನಿಕ ರಾಷ್ಟ್ರಗಳಿಂದ ಹಣವನ್ನು, ಸಾಲವಾಗಿ ಕೇಳುವಾಗ ಶಿಕ್ಷಣದ ಬಿಕ್ಕಟ್ಟು ಇನ್ನೂ ಉಲ್ಬಣಿಸುತ್ತದೆ. ಏಕೆ? ಏಕೆಂದರೆ ಶಿಕ್ಷಣಕ್ಕಾಗಿ ಅವಶ್ಯವಾಗಿರುವ ಹಣವನ್ನು ಸಾಲಗಳನ್ನು ತೀರಿಸುವ ಉದ್ದೇಶಕ್ಕೆ ಅನೇಕ ಸಲ ಬಳಸಲಾಗುತ್ತದೆ. ಹೀಗೆ ಅನಕ್ಷರತೆಯ ಚಕ್ರವು ಪುನರಾವರ್ತಿಸಲ್ಪಡುತ್ತದೆ ಮತ್ತು ಬಡತನವು ಶಾಶ್ವತವಾಗಿ ಉಳಿಯುವಂತೆ ಇದು ಮಾಡುತ್ತದೆ.