ಏಡ್—ಉಗ್ರರೂಪ ತಾಳುತ್ತಿರುವ ಸಾಂಕ್ರಾಮಿಕ ರೋಗ
ಕ್ಯಾರನ್ ಎಂಬ ಯುವತಿಯು, ಪಶ್ಚಿಮ ಅಮೆರಿಕದಲ್ಲಿ ಬೆಳೆದಳು.a ಅವಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದರಿಂದ, ಯೌವನ ಪ್ರಾಯದಿಂದಲೂ ಅವಳು ಅತ್ಯುತ್ತಮವಾದ ನೈತಿಕ ನಡವಳಿಕೆಯನ್ನು ಕಾಪಾಡಿಕೊಂಡಿದ್ದಳು. 1984ರಲ್ಲಿ, ಅಂದರೆ ಅವಳು 23 ವರ್ಷದವಳಾಗಿದ್ದಾಗ, ಬಿಲ್ ಎಂಬ ವ್ಯಕ್ತಿಯನ್ನು ಮದುವೆಯಾದಳು. ಅವನು ಕೇವಲ ಎರಡು ವರ್ಷಗಳಿಂದ ಒಬ್ಬ ಯೆಹೋವನ ಸಾಕ್ಷಿಯಾಗಿದ್ದನು. ಅವರಿಗೆ ಇಬ್ಬರು ಮಕ್ಕಳಾದರು—ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿ.
1991ರಷ್ಟಕ್ಕೆ, ಅವರ ಪ್ರೀತಿಯು ಬಿಡಿಸಲಾರದ ಬಂಧವಾಗಿತ್ತು. ಮತ್ತು ಅವರ ಕುಟುಂಬ ಸಂತೃಪ್ತವಾಗಿತ್ತು ಹಾಗೂ ಸಂತೋಷದಿಂದಿತ್ತು. ಆದರೆ ಆ ವರ್ಷದ ಕೊನೆಯಲ್ಲಿ, ಬಿಲ್ನ ನಾಲಿಗೆಯ ಮೇಲೆ ಒಂದು ಬಿಳಿಯ ಕಲೆಯು ಕಾಣಿಸಿಕೊಂಡಿತು, ಮತ್ತು ಆ ಕಲೆ ಹೋಗಲೇ ಇಲ್ಲ. ಅವನು ವೈದ್ಯರನ್ನು ಸಂಪರ್ಕಿಸಿದನು.
ಸ್ವಲ್ಪ ಸಮಯಾನಂತರ, ಕ್ಯಾರನ್ ಹಾಗೂ ಮಕ್ಕಳು ಹೊರಗೆ ತರಗೆಲೆಗಳನ್ನು ಗುಡಿಸುತ್ತಿದ್ದರು. ಬಿಲ್ ಮೆಟ್ಟಿಲ ಮೇಲೆ ಕುಳಿತುಕೊಂಡು, ಕ್ಯಾರನ್ಳನ್ನು ಕರೆದು ತನ್ನ ಪಕ್ಕದಲ್ಲಿ ಕೂರಿಸಿಕೊಂಡನು. ಅವಳನ್ನು ಆತ್ಮೀಯವಾಗಿ ಬಳಸಿ ಹಿಡಿದು, ಕಣ್ಣೀರು ತುಂಬಿಕೊಂಡು, ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನ್ನೊಂದಿಗೆ ಸದಾಕಾಲ ಜೀವಿಸಲು ಇಷ್ಟಪಡುತ್ತೇನೆ ಎಂದು ಹೇಳಿದನು. ಹಾಗಾದರೆ ಅವನು ಕಣ್ಣೀರು ಸುರಿಸುತ್ತಿದ್ದದ್ದೇಕೆ? ಏಡ್ಸ್ ರೋಗವನ್ನು ಉಂಟುಮಾಡುವ ಏಚ್ಐವಿ ವೈರಸ್ನಿಂದ ಬಿಲ್ ಸೋಂಕಿತನಾಗಿದ್ದಾನೆ ಎಂದು ವೈದ್ಯರು ಶಂಕಿಸಿದ್ದರು.
ಇಡೀ ಕುಟುಂಬಕ್ಕೇ ವೈದ್ಯಕೀಯ ಪರೀಕ್ಷೆ ನಡೆಸಲ್ಪಟ್ಟಿತು. ಬಿಲ್ ಹಾಗೂ ಕ್ಯಾರನ್ರಿಗೆ ಏಚ್ಐವಿ ವೈರಸ್ ಸೋಂಕಿದೆಯೆಂದು ಪರೀಕ್ಷೆಯು ತೋರಿಸಿತು. ಬಿಲ್ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುವ ಮುಂಚೆ, ಈ ವೈರಸ್ ಅವನಿಗೆ ಸೋಂಕಿತ್ತು; ಈಗ ಅದು ಕ್ಯಾರನ್ಳಿಗೂ ಸೋಂಕಿತ್ತು. ಮಕ್ಕಳನ್ನು ಪರೀಕ್ಷಿಸಿದಾಗ, ಅವರಿಗೆ ಆ ವೈರಸ್ ಸೋಂಕಿಲ್ಲ ಎಂಬುದು ಗೊತ್ತಾಯಿತು. ಮೂರು ವರ್ಷಗಳೊಳಗೆ ಬಿಲ್ ಮೃತಪಟ್ಟನು. ಕ್ಯಾರನ್ ಹೇಳುವುದು: “ನೀವು ತುಂಬ ಪ್ರೀತಿಸುವ ಹಾಗೂ ಸದಾಕಾಲ ಜೀವಿಸಲು ಇಷ್ಟಪಡುವ ಸುಂದರ ವ್ಯಕ್ತಿಯೊಬ್ಬನು, ಈಗ ನಿಧಾನವಾಗಿ ಕೃಶನಾಗುತ್ತಾ, ಬರಿಯ ಮೂಳೆ ಚರ್ಮವಾಗುವುದನ್ನು ನೋಡುವುದು, ನಿಜಕ್ಕೂ ಸಹಿಸಲು ಅಸಾಧ್ಯವಾದ ಅನುಭವವಾಗಿದೆ ಎಂಬುದನ್ನು ಹೇಗೆ ವ್ಯಕ್ತಪಡಿಸಬೇಕೆಂಬುದು ನನಗೆ ಗೊತ್ತಾಗುತ್ತಿಲ್ಲ. ರಾತ್ರಿಹೊತ್ತು ನಾನು ತುಂಬ ಅಳುತ್ತಿದ್ದೆ. ನಮ್ಮ ಹತ್ತನೆಯ ಮದುವೆಯ ಆ್ಯನಿವರ್ಸರಿಯ ಮೂರು ತಿಂಗಳ ಮುಂಚೆ ಬಿಲ್ ನಮ್ಮನ್ನು ಅಗಲಿದರು. ಅವರು ಒಳ್ಳೆಯ ತಂದೆಯೂ, ಸಹೃದಯಿ ಪತಿಯೂ ಆಗಿದ್ದರು.”
ನೀನು ಸಹ ನಿನ್ನ ಪತಿಯನ್ನು ಹಿಂಬಾಲಿಸುವಿ, ಅಂದರೆ ಬೇಗನೆ ಸಾಯುವಿ ಎಂದು ವೈದ್ಯನೊಬ್ಬನು ಕ್ಯಾರನ್ಗೆ ಹೇಳಿದನಾದರೂ, ಅವಳು ಇನ್ನೂ ಬದುಕಿದ್ದಾಳೆ. ಅವಳಿಗೆ ತಗಲಿರುವ ಸೋಂಕು, ಏಡ್ಸ್ ರೋಗದ ಆರಂಭದ ಹಂತವನ್ನು ತಲಪಿದೆ.
ಈಗ ಏಚ್ಐವಿ/ಏಡ್ಸ್ ರೋಗದಿಂದ ನರಳುತ್ತಿರುವ ಸುಮಾರು 3 ಕೋಟಿ ಜನರಲ್ಲಿ ಕ್ಯಾರನ್ ಒಬ್ಬಳಾಗಿದ್ದಾಳೆ. ಈ ಸಂಖ್ಯೆಯು, ಆಸ್ಟ್ರೇಲಿಯ, ಐರ್ಲೆಂಡ್, ಹಾಗೂ ಪ್ಯಾರಗ್ವೈಯಲ್ಲಿರುವ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು ದೊಡ್ಡದಾಗಿದೆ. ಆಫ್ರಿಕದಲ್ಲಿ 2 ಕೋಟಿ 10 ಲಕ್ಷ ಏಡ್ಸ್ ರೋಗಿಗಳಿದ್ದಾರೆ ಎಂದು ಅಂದಾಜುಗಳು ಸೂಚಿಸುತ್ತವೆ. ವಿಶ್ವ ಸಂಸ್ಥೆಯ ಸಂಖ್ಯೆಗಳಿಗನುಸಾರ, 21ನೆಯ ಶತಮಾನದಷ್ಟಕ್ಕೆ ಆ ಸಂಖ್ಯೆಯು, 4 ಕೋಟಿಗೆ ಏರಸಾಧ್ಯವಿದೆ. ಈ ರೋಗವು, ಇತಿಹಾಸದಲ್ಲೇ ಅತಿ ದೊಡ್ಡ ಸಾಂಕ್ರಾಮಿಕ ರೋಗಗಳನ್ನೂ ಮೀರಿಸುತ್ತದೆ ಎಂದು ಯು.ಎನ್. ವರದಿಯೊಂದು ತಿಳಿಸುತ್ತದೆ. ಲೋಕದಲ್ಲಿ ಲೈಂಗಿಕವಾಗಿ ಸಕ್ರಿಯರಾಗಿರುವ 15ರಿಂದ 49 ವರ್ಷ ಪ್ರಾಯದ ವಯಸ್ಕರಲ್ಲಿ, 100ರಲ್ಲಿ ಒಬ್ಬನು ಈಗಾಗಲೇ ಏಚ್ಐವಿಯಿಂದ ಸೋಂಕಿತನಾಗಿದ್ದಾನೆ. ಹತ್ತು ಮಂದಿಯಲ್ಲಿ ಕೇವಲ ಒಬ್ಬರಿಗೆ, ತಮಗೆ ಈ ರೋಗವು ಸೋಂಕಿದೆ ಎಂಬುದು ಗೊತ್ತಾಗುತ್ತದೆ. ಆಫ್ರಿಕದ ಕೆಲವು ಭಾಗಗಳಲ್ಲಿ, 25 ಪ್ರತಿಶತ ವಯಸ್ಕರು ಈ ರೋಗಕ್ಕೆ ತುತ್ತಾಗಿದ್ದಾರೆ.
ಈ ಸಾಂಕ್ರಾಮಿಕ ರೋಗವು, 1981ರಲ್ಲಿ ಆರಂಭವಾಯಿತು. ಅಂದಿನಿಂದ, ಏಡ್ಸ್ನಿಂದಾಗಿ ಸುಮಾರು ಒಂದು ಕೋಟಿ 17 ಲಕ್ಷ ಜನರು ಸತ್ತಿದ್ದಾರೆ ಎಂದು ಅಂದಾಜುಮಾಡಲಾಗಿದೆ. ಕೇವಲ 1997ರಲ್ಲಿಯೇ, ಸುಮಾರು 23 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜುಮಾಡಲಾಗಿದೆ. ಆದರೂ, ಏಡ್ಸ್ನ ವಿರುದ್ಧವಾದ ಈ ಹೋರಾಟದಲ್ಲಿ ಆಶಾವಾದಕ್ಕೆ ಹೊಸ ಕಾರಣಗಳಿವೆ. ಕಳೆದ ಕೆಲವು ವರ್ಷಗಳಲ್ಲಿ, ಸಂಪದ್ಭರಿತ ದೇಶಗಳಲ್ಲಿ ಹೊಸ ಏಡ್ಸ್ ರೋಗಿಗಳ ಸಂಖ್ಯೆಯು ಇಳಿಮುಖವಾಗಿದೆ. ಇದಲ್ಲದೆ, ಆಶಾಜನಕ ಔಷಧಗಳು, ಏಚ್ಐವಿಯಿಂದ ನರಳುತ್ತಿರುವ ಜನರಿಗೆ, ಹೆಚ್ಚು ಉತ್ತಮವಾದ ಆರೋಗ್ಯ ಹಾಗೂ ದೀರ್ಘ ಜೀವನದ ನಿರೀಕ್ಷೆಯನ್ನು ನೀಡುತ್ತಿವೆ.
ಏಡ್ಸ್ ರೋಗವು ಸೋಂಕದಂತೆ ನೀವು ನಿಮ್ಮನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ? ಚಿಕಿತ್ಸೆ ಹಾಗೂ ಲಸಿಕೆಗಳಲ್ಲಿ ಇತ್ತೀಚೆಗೆ ಯಾವ ಪ್ರಗತಿಗಳಾಗಿವೆ? ಈ ರೋಗವು ಎಂದಾದರೂ ನಿಗ್ರಹಿಸಲ್ಪಡುವುದೊ? ಮುಂದಿನ ಲೇಖನದಲ್ಲಿ ಈ ಪ್ರಶ್ನೆಗಳನ್ನು ಉತ್ತರಿಸಲಾಗುವುದು.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳು ಬದಲಾಯಿಸಲ್ಪಟ್ಟಿವೆ.