ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 12/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಫಾರ್ಮಿನ ಬೆಳೆಗಳಲ್ಲಿ ಕಡಿಮೆ ಪೌಷ್ಟಿಕಾಂಶವಿದೆಯೆ?
  • ದುಷ್ಕೃತ್ಯ ಹಾಗೂ ಜಾತಿವಾದ
  • ಅಪರೂಪದ ಜಿಂಕೆಯು ಚೀನಾದಲ್ಲಿ ಪುನಃ ಕಣ್ಣಿಗೆ ಬಿದ್ದಿದೆ
  • ಗಂಗಾ ನದಿ ತೀರದಲ್ಲಿ ಹಬ್ಬ
  • “ಲೋಕಕ್ಕೆ ಬೆಂಕಿಹಿಡಿದ ವರ್ಷ”
  • ಹೆಚ್ಚು ಕ್ಯಾಲ್ಸಿಯಮ್‌ನ ಅಗತ್ಯವಿದೆ
  • ಕ್ಷುಲ್ಲಕ ಮರಣ
  • ರೋಗಿಗಳ ಬಳಿಯೇ ಕದಿಯುವುದು
  • ಕಿವಿಯ ಗುರುತುಗಳು
  • ಧನ ನಿಮ್ಮ ಧಣಿಯೊ ದಾಸನೊ?
    ಎಚ್ಚರ!—2009
  • ಖರ್ಚಿಗೆ ಕಡಿವಾಣ! ಹೇಗೆ?
    ಎಚ್ಚರ!—2014
  • ಜಗತ್ತನ್ನು ಗಮನಿಸುವುದು
    ಎಚ್ಚರ!—2004
ಎಚ್ಚರ!—1998
g98 12/8 ಪು. 28-29

ಜಗತ್ತನ್ನು ಗಮನಿಸುವುದು

ಫಾರ್ಮಿನ ಬೆಳೆಗಳಲ್ಲಿ ಕಡಿಮೆ ಪೌಷ್ಟಿಕಾಂಶವಿದೆಯೆ?

ಮಣ್ಣು ಖಾಲಿಯಾಗುತ್ತಿರುವುದರಿಂದ, ಇಂದು ದೊರೆಯುತ್ತಿರುವ ಹಣ್ಣುಗಳು ಹಾಗೂ ತರಕಾರಿಗಳಲ್ಲಿ ಕಡಿಮೆ ಪೌಷ್ಟಿಕಾಂಶವಿದೆಯೆ? ಮಣ್ಣಿನ ವಿಜ್ಞಾನಿಗಳಿಗನುಸಾರ, ಉತ್ತರವು ಇಲ್ಲ ಎಂದಾಗಿದೆ. ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯ ಬರ್ಕ್‌ಲೆ ವೆಲ್‌ನೆಸ್‌ ಲೆಟರ್‌ ಹೀಗೆ ಹೇಳುತ್ತದೆ: “ಸಸ್ಯಗಳಲ್ಲಿರುವ ಜೀವಸ್ವತಗಳು, ಸ್ವತಃ ಸಸ್ಯಗಳಿಂದಲೇ ಉತ್ಪತ್ತಿ ಮಾಡಲ್ಪಟ್ಟಿರುತ್ತವೆ.” ಆದುದರಿಂದ, ಸಸ್ಯಕ್ಕೆ ಅಗತ್ಯವಾದ ಖನಿಜಪದಾರ್ಥಗಳು ಮಣ್ಣಿನಲ್ಲಿ ಇಲ್ಲದಿರುವುದಾದರೆ, ಸಸ್ಯಗಳು ಸರಿಯಾಗಿ ಬೆಳೆಯುವುದಿಲ್ಲ. ಆ ಸಸ್ಯವು ಹೂಗಳನ್ನು ಬಿಡದಿರಬಹುದು, ಅಥವಾ ಬಾಡಿಹೋಗಿ ಸಾಯಲೂಬಹುದು. ಈ ರೀತಿ ಸಂಭವಿಸುವುದನ್ನು ತಡೆಗಟ್ಟಲಿಕ್ಕಾಗಿ ಮತ್ತು ಮಣ್ಣಿನಲ್ಲಿ ಪುನಃ ಖನಿಜಪದಾರ್ಥಗಳನ್ನು ಸೇರಿಸಲಿಕ್ಕಾಗಿ, ರೈತರು ಕೃತಕ ಗೊಬ್ಬರಗಳನ್ನು ಉಪಯೋಗಿಸುತ್ತಾರೆ. ವೆಲ್‌ನೆಸ್‌ ಲೆಟರ್‌ ಹೇಳುವುದು: “ನೀವು ಕೊಂಡುಕೊಳ್ಳುವ ಹಣ್ಣುಗಳು ಹಾಗೂ ತರಕಾರಿಗಳು ಸಾರವತ್ತಾಗಿ ಕಂಡುಬರುವಲ್ಲಿ, ಅವುಗಳಲ್ಲಿ ಖಂಡಿತವಾಗಿಯೂ ಪೌಷ್ಟಿಕಾಂಶಗಳು ಇವೆ ಎಂದು ನೀವು ಖಾತ್ರಿಯಿಂದಿರಸಾಧ್ಯವಿದೆ.”

ದುಷ್ಕೃತ್ಯ ಹಾಗೂ ಜಾತಿವಾದ

ಗ್ರೀಸ್‌ನಲ್ಲಿ ಇತ್ತೀಚೆಗೆ ದುಷ್ಕೃತ್ಯವು ಹೆಚ್ಚಿದ್ದು, ಪೂರ್ವ ಯೂರೋಪಿನಿಂದ ಹಾಗೂ ಬಾಲ್ಕನ್‌ನಿಂದ, ಹೆಚ್ಚಾಗಿ ಅಲ್ಬೇನಿಯದಿಂದ ಆಶ್ರಿತರು ಹಾಗೂ ವಲಸೆಗಾರರು ಪ್ರವಾಹದೋಪಾದಿ ಒಳಬರುತ್ತಿರುವುದೇ ಇದಕ್ಕೆ ಕಾರಣವೆಂದು ಕೆಲವರು ಅವರ ಮೇಲೆ ದೋಷಾಪರಾಧ ಹೊರಿಸಿದ್ದಾರೆ. ಟು ವೀಮ ವಾರ್ತಾಪತ್ರಿಕೆಯ ಅಂಕಣಕಾರನಾದ ರೀಕಾರ್ಡೊಸ್‌ ಸೊಮರೀಟಿಸ್‌ ಹೇಳುವುದೇನೆಂದರೆ, ದುಷ್ಕೃತ್ಯ

ವು ಹೆಚ್ಚುತ್ತಿರುವುದರ ಬಗ್ಗೆ ಇರುವ ಚಿಂತೆಯು, ಒಂದು ರೀತಿಯ “ವಿದೇಶೀಯರ ದ್ವೇಷ”ವನ್ನು ಉಂಟುಮಾಡಿದೆ ಮತ್ತು ಆ ದೇಶದಲ್ಲಿರುವ ವಿದೇಶೀಯರ ವಿರುದ್ಧ “ಜಾತಿವಾದಿಗಳು ರೋಷಾವೇಶ”ಗೊಳ್ಳುವಂತೆ ಮಾಡಿದೆ. ಆದರೂ, ವಿದೇಶೀಯರು ಗ್ರೀಕರಿಗಿಂತಲೂ ಹೆಚ್ಚು ಅಪರಾಧಗಳಲ್ಲಿ ಒಳಗೂಡುವುದಿಲ್ಲ ಎಂಬುದು ರುಜುವಾಗಿದೆ. ಉದಾಹರಣೆಗಾಗಿ, “100ರಲ್ಲಿ 96 ದುಷ್ಕೃತ್ಯಗಳು [ಗ್ರೀಕರಿಂದ] ನಡೆಸಲ್ಪಡುತ್ತವೆ” ಎಂಬುದನ್ನು ಸಮೀಕ್ಷೆಗಳು ತೋರಿಸುತ್ತವೆ ಎಂದು ವಾರ್ತಾಪತ್ರಿಕೆಗಳು ವರದಿಸುತ್ತವೆ. “ಈ ಅಪರಾಧಗಳು ‘ಜಾತಿವಾದ’ದ ಕಾರಣದಿಂದ ಅಲ್ಲ, ಬದಲಾಗಿ ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿಂದ ನಡೆಸಲ್ಪಟ್ಟಿವೆ” ಎಂದು ಸೊಮರೀಟಿಸ್‌ ವಾದಿಸುತ್ತಾರೆ. ಗ್ರೀಸ್‌ನಲ್ಲಿ, ದುಷ್ಕೃತ್ಯದ ಕುರಿತಾದ ತಮ್ಮ ಕೊಂಕು ವರದಿಗಳ ಮೂಲಕ, ವಾರ್ತಾಮಾಧ್ಯಮಗಳು “ಉದ್ದೇಶಪೂರ್ವಕವಾಗಿ ವಿದೇಶೀಯರ ದ್ವೇಷ ಹಾಗೂ ಜಾತಿವಾದವನ್ನು ಜನರಲ್ಲಿ ಬೆಳೆಸುತ್ತಿರುವುದರಿಂದ,” ಸೊಮರೀಟಿಸ್‌ ವಾರ್ತಾಮಾಧ್ಯಮಗಳ ಮೇಲೆಯೂ ದೋಷಾರೋಪಹೊರಿಸುತ್ತಾರೆ.

ಅಪರೂಪದ ಜಿಂಕೆಯು ಚೀನಾದಲ್ಲಿ ಪುನಃ ಕಣ್ಣಿಗೆ ಬಿದ್ದಿದೆ

“ಐವತ್ತು ವರ್ಷಗಳ ಹಿಂದೆಯೇ ಅಳಿದುಹೋಗಿದೆಯೆಂದು ನೆನಸಲಾಗಿದ್ದ ಟಿಬೆಟನ್‌ ಕೆಂಪು ಜಿಂಕೆಯು, ಟಿಬೆಟ್‌ ಸ್ವಾಧಿಕಾರದ ಪ್ರಾಂತದಲ್ಲಿರುವ ಶಾನ್ನನ್‌ ಪ್ರಿಫೆಕ್ಚರ್‌ನಲ್ಲಿ ಪುನಃ ಕಣ್ಣಿಗೆ ಬಿದ್ದಿದೆ” ಎಂದು ಚೈನಾ ಟುಡೇ ಪತ್ರಿಕೆಯು ವರದಿಸುತ್ತದೆ. ತುಂಬ ಬೆಲೆಬಾಳುವ ಜಿಂಕೆಯ ಕವಲುಗೊಂಬುಗಳಿಗಾಗಿ ಬೇಟೆಗಾರರು ಜಿಂಕೆಗಳನ್ನು ಬೇಟೆಯಾಡುತ್ತಿದ್ದ ಕಾರಣ, ಸುಮಾರು 1.2 ಮೀಟರ್‌ಗಳಷ್ಟು ಎತ್ತರವಿದ್ದು, 110 ಕಿಲೊಗ್ರಾಮ್‌ಗಳಷ್ಟು ತೂಕವಿರುವ ಈ ಕೆಂಪು ಜಿಂಕೆಗಳ ಸಂಖ್ಯೆಯು ಗತ ವರ್ಷಗಳಲ್ಲಿ ಬಹಳಷ್ಟು ಕಡಿಮೆಯಾಯಿತು. ಯುದ್ಧ ಹಾಗೂ ಪರಿಸರೀಯ ಬದಲಾವಣೆಯಿಂದಾಗಿಯೂ ಈ ಕೆಂಪು ಜಿಂಕೆಗಳು ಸಾವನ್ನಪ್ಪಿದವು. ಈ ಸುಂದರ ಜಿಂಕೆಗಳಲ್ಲಿ 200ಕ್ಕಿಂತಲೂ ಕಡಿಮೆ ಜಿಂಕೆಗಳು ಇನ್ನೂ ಬದುಕಿವೆಯೆಂದು ಅಂದಾಜುಮಾಡಲಾಗಿದ್ದು, ಅವುಗಳನ್ನು ಅಪಾಯಕ್ಕೊಳಗಾಗಿರುವ ಜಾತಿಯೆಂದು ಗುರುತಿಸಲಾಗಿದೆ.

ಗಂಗಾ ನದಿ ತೀರದಲ್ಲಿ ಹಬ್ಬ

ಏಪ್ರಿಲ್‌ ತಿಂಗಳಿನಲ್ಲಿ, ಕುಂಭಮೇಳ ಅಥವಾ ಮಡಕೆ ಹಬ್ಬವು ತನ್ನ ಪರಮಾವಧಿಯನ್ನು ಮುಟ್ಟುವಾಗ, ಲಕ್ಷಾಂತರ ಮಂದಿ ಹಿಂದೂಗಳು, ಗಂಗಾ ನದಿಯಲ್ಲಿ ಮುಳುಗಿ ಏಳುತ್ತಾರೆ. ಕುಂಭಮೇಳವು ಮೂರು ತಿಂಗಳುಗಳ ವರೆಗೆ ನಡೆಯುವ ಹಿಂದೂ ಹಬ್ಬವಾಗಿದೆ. ಇದು ಅಮರತ್ವದ ವರದ ಜ್ಞಾಪಕಾರ್ಥವಾಗಿ ಆಚರಿಸಲ್ಪಡುತ್ತದೆ. ಈ ಹಬ್ಬವು ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಒಂದು ಪುರಾಣ ಕಥೆಗನುಸಾರ, ಸ್ವರ್ಗದಲ್ಲಿ ಅಮೃತದ ಕುಂಭವನ್ನು ಸ್ವಾಧೀನಪಡಿಸಿಕೊಳ್ಳಲಿಕ್ಕಾಗಿ ದೇವತೆಗಳೂ ರಾಕ್ಷಸರೂ ಕಾದಾಡುತ್ತಿದ್ದಾಗ, ಅಮರತ್ವವನ್ನು ನೀಡುವ ಅಮೃತವು ಭೂಮಿಯ ಮೇಲೆ ನಾಲ್ಕು ಸ್ಥಳಗಳಲ್ಲಿ ಬಿತ್ತು; ಭಾರತದ ಆ ನಾಲ್ಕು ನಗರಗಳಲ್ಲಿ, ಒಂದಾದ ಬಳಿಕ ಇನ್ನೊಂದು ನಗರದಲ್ಲಿ ಇದು ಜರುಗುತ್ತದೆ. ಗತ ಸಮಯಗಳಲ್ಲಿ, ಭಾರತದ ಪವಿತ್ರ ನದಿಗಳಲ್ಲಿ ಸ್ನಾನಮಾಡಲು ಅನೇಕ ಜನರು ಮುನ್ನುಗ್ಗುತ್ತಿದ್ದು, ಅದರ ಫಲಿತಾಂಶವಾಗಿ ಅವರಲ್ಲಿ ಅನೇಕರು ಕೊಲ್ಲಲ್ಪಟ್ಟರು.

“ಲೋಕಕ್ಕೆ ಬೆಂಕಿಹಿಡಿದ ವರ್ಷ”

“1997ನೆಯ ಇಸವಿಯನ್ನು ಲೋಕಕ್ಕೆ ಬೆಂಕಿಹಿಡಿದ ವರ್ಷವಾಗಿ ಸ್ಮರಿಸಿಕೊಳ್ಳಲಾಗುವುದು” ಎಂದು, ವರ್ಲ್ಡ್‌ ವೈಡ್‌ ಫಂಡ್‌ ಫಾರ್‌ ನೇಚರ್‌ ಇಂಟರ್‌ನ್ಯಾಷನಲ್ಸ್‌ ಫಾರೆಸ್ಟ್‌ ಪ್ರೋಗ್ರ್ಯಾಮ್‌ನ ಮುಖ್ಯಸ್ಥರಾದ ಸಾನ್‌-ಪಾಲ್‌ ಸಾನ್‌ರನೊ ಪ್ರತಿಪಾದಿಸುತ್ತಾರೆ. ಅಂಟಾರ್ಕ್‌ಟಿಕವನ್ನು ಬಿಟ್ಟು ಪ್ರತಿಯೊಂದು ಭೂಖಂಡದಲ್ಲಿ ತುಂಬ ಬೆಂಕಿಯ ಅನಾಹುತಗಳಾಗಿವೆ. ಉದಾಹರಣೆಗಾಗಿ, ಇಂಡೊನೇಶಿಯ ಹಾಗೂ ಬ್ರೆಸಿಲ್‌ನಲ್ಲಿ, ಸ್ವಿಟ್ಸರ್ಲೆಂಡ್‌ನ ಭೂಕ್ಷೇತ್ರದಷ್ಟು ವಿಸ್ತಾರವಾದ ಅಮೂಲ್ಯ ಕಾಡುಪ್ರದೇಶಗಳನ್ನು ನಾಶಮಾಡಲಾಗಿದೆ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ವ್ಯವಸಾಯದ ಉದ್ದೇಶದಿಂದ ಕಾಡುಗಳನ್ನು ಕೃಷಿಭೂಮಿಯನ್ನಾಗಿ ಪರಿವರ್ತಿಸಿರುವುದು ಒಂದು ಕಾರಣವಾಗಿದೆ, ಮತ್ತು ಎಲ್‌ ನೀನೊ ಎಂದು ಪ್ರಸಿದ್ಧವಾಗಿರುವ ಒಂದು ಅಸಾಮಾನ್ಯ ವಿದ್ಯಮಾನದಿಂದ ಉಂಟುಮಾಡಲ್ಪಡುವ, ಹವಾಮಾನದ ವೈಪರೀತ್ಯಗಳ ಫಲಿತಾಂಶವಾಗಿರುವ ಶುಷ್ಕತೆಯು ಇನ್ನೊಂದು ಕಾರಣವಾಗಿದೆ. ಅಗೆದುತೆಗೆದ ಉರುವಲುಗಳನ್ನು ಉರಿಸುವುದರಿಂದ ಉಂಟಾಗುವ ಭಾರಿ ಪ್ರಮಾಣದ ಇಂಗಾಲದ ಡೈಆಕ್ಸೈಡ್‌, ವಾಯು ಮಾಲಿನ್ಯಕ್ಕೆ ಹೆಚ್ಚನ್ನು ಕೂಡಿಸುತ್ತದೆ ಮತ್ತು ಭೌಗೋಳಿಕ ಕಾವೇರುವಿಕೆಯ ಅಪಾಯವನ್ನು ಅಧಿಕಗೊಳಿಸುತ್ತದೆ ಎಂದು, ಲಂಡನಿನ ದ ಇಂಡಿಪೆಂಡೆಂಟ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಶ್ರೀ. ಸಾನ್‌ರನೊ ಹೀಗೆ ಎಚ್ಚರಿಕೆ ನೀಡುತ್ತಾರೆ: “ನಾವು ನಾಶನದ ವಿಷಮಚಕ್ರವನ್ನು ಸೃಷ್ಟಿಸುತ್ತಿದ್ದೇವೆ; ಅಧಿಕಗೊಂಡಿರುವ ಬೆಂಕಿಯು, ಹವಾಮಾನದಲ್ಲಿನ ಬದಲಾವಣೆಗಳ ಫಲಿತಾಂಶವಾಗಿ ಉಂಟಾಗಿದೆ ಮತ್ತು ಈ ಬದಲಾವಣೆಗೆ ಸಹಾಯ ನೀಡುವ ಅಂಶವೂ ಆಗಿದೆ.”

ಹೆಚ್ಚು ಕ್ಯಾಲ್ಸಿಯಮ್‌ನ ಅಗತ್ಯವಿದೆ

“ಯುವ ಜನರ ಎಲುಬು ಬೆಳೆಯುವ ಕಾರಣ, ಅವರಿಗೆ ಅತಿ ಹೆಚ್ಚು ಕ್ಯಾಲ್ಸಿಯಮ್‌ನ ಅಗತ್ಯವಿದೆ” ಎಂದು ಗೆಸುಂಟ್‌ಹೈಟ್‌ ಇನ್‌ ವೋರ್ಟ್‌ ಊಂಟ್‌ ಬಿಲ್ಟ್‌ (ಶಬ್ದ ಹಾಗೂ ಚಿತ್ರದಲ್ಲಿ ಆರೋಗ್ಯ) ಎಂಬ ಜರ್ಮನ್‌ ವಾರ್ತಾಪತ್ರಿಕೆಯು ಎಚ್ಚರಿಸುತ್ತದೆ. ಪ್ರತಿ ದಿನ 1,200 ಮಿಲಿಗ್ರಾಮ್‌ಗಳಷ್ಟು ಕ್ಯಾಲ್ಸಿಯಮ್‌ ಅನ್ನು ಸೇವಿಸುವಂತೆ ಶಿಫಾರಸ್ಸು ಮಾಡಲಾಗಿದೆಯಾದರೂ, ಜರ್ಮನಿಯಲ್ಲಿರುವ 15ರಿಂದ 19 ವರ್ಷ ಪ್ರಾಯದ ಯುವತಿಯರಲ್ಲಿ 56 ಪ್ರತಿಶತ ಮಂದಿ ಮತ್ತು ಯುವಕರಲ್ಲಿ 75 ಪ್ರತಿಶತ ಮಂದಿ ಈ ಮಟ್ಟವನ್ನು ತಲಪುತ್ತಾರೆ. “ಯೂರೋಪಿನಾದ್ಯಂತ ಯುವತಿಯರಿಗೆ ಕ್ಯಾಲ್ಸಿಯಮ್‌ನ ಸರಬರಾಯಿ ಸಾಕಷ್ಟು ದೊರಕುತ್ತಿಲ್ಲ” ಎಂದು, ಎಲುಬುಕ್ಷಯಕ್ಕಾಗಿರುವ ಯೂರೋಪಿಯನ್‌ ಸಂಸ್ಥೆಯ ಮರೀ ಫ್ರೇಸರ್‌ ಹೇಳುತ್ತಾರೆ. ಭವಿಷ್ಯತ್ತಿನಲ್ಲಿ ಉಂಟಾಗುವ ಹಾನಿಯು ಈಗ ಗೊತ್ತಾಗದಿರುವುದಾದರೂ, ಕ್ಯಾಲ್ಸಿಯಮ್‌ ಕೊರತೆಯು ವೃದ್ಧಾಪ್ಯದಲ್ಲಿ ಎಲುಬುಕ್ಷಯವನ್ನು ಉಂಟುಮಾಡಬಹುದು. “ಚೀಸ್‌, ಹಾಲು, ಮೊಸರು, ಎಳ್ಳು, ಅಮರಾಂತ್‌ ಬೀಜಗಳು, ಸೋಯಬೀನ್ಸ್‌, ಹಸಿರು ತರಕಾರಿಗಳು, ಬಾದಾಮಿ, ಮತ್ತು ಮೀನು, ಕ್ಯಾಲ್ಸಿಯಮ್‌-ಸಮೃದ್ಧ ಆಹಾರ ಪದಾರ್ಥಗಳಾಗಿವೆ” ಎಂದು ಆ ಲೇಖನವು ಹೇಳುತ್ತದೆ.

ಕ್ಷುಲ್ಲಕ ಮರಣ

“ಚಲನ ಚಿತ್ರಗಳು ಹಾಗೂ ಟಿವಿಗಳು, ವೀರತನ (ಹೀರೊಯಿಸಮ್‌)ವನ್ನು ಉತ್ತೇಜಿಸುತ್ತವೆ. ಆದರೆ ಮಕ್ಕಳು ಮರಣವನ್ನು ಕ್ಷಲ್ಲಕವಾಗಿ ಪರಿಗಣಿಸುವುದನ್ನು ಹೆತ್ತವರು ಹಾಗೂ ಶಿಕ್ಷಕರು ತಡೆಗಟ್ಟಬೇಕು” ಎಂದು ಸೂರ್‌ನಾಲ್‌ ಡೂ ಬ್ರಾಸೀಲ್‌ ವಿವರಿಸುತ್ತದೆ. ರಿಯೊ ಡಿ ಜನೈರೊದಲ್ಲಿ ನಡೆಸಲ್ಪಟ್ಟ ಒಂದು ಅಧ್ಯಯನವು ತೋರಿಸುವುದೇನೆಂದರೆ, 13 ವರ್ಷ ಪ್ರಾಯಕ್ಕಿಂತಲೂ ಚಿಕ್ಕ ಮಕ್ಕಳಿಂದ 10 ಪ್ರತಿಶತದಷ್ಟು ದುಷ್ಕೃತ್ಯ

ಗಳು ನಡೆಸಲ್ಪಡುತ್ತವೆ. “ಬಂದೂಕುಗಳನ್ನು ಇಟ್ಟುಕೊಂಡಿದ್ದು, ತಮ್ಮ ಸಹಪಾಠಿಗಳ ಮೇಲೆ ಆಕ್ರಮಣಮಾಡಿ, ಅವರನ್ನು ಅಂಗವಿಕಲಗೊಳಿಸಿ, ಕೊಲ್ಲುವ ಹಾಗೂ ತಮಗಿಂತಲೂ ಚಿಕ್ಕ ಪ್ರಾಯದ ಮಕ್ಕಳ ವಿರುದ್ಧ ಲೈಂಗಿಕ ದುರಾಚಾರವನ್ನು ನಡಿಸುವಂತಹ ಮಕ್ಕಳೇ ಇವರಾಗಿದ್ದಾರೆ” ಎಂದು ಆ ಲೇಖನವು ತಿಳಿಸುತ್ತದೆ. ಮನೋರೋಗ ಶಾಸ್ತ್ರಜ್ಞರಾದ ಆಲ್‌ಫ್ರೆಡೂ ಕಾಸ್‌ಟ್ರೂ ನೆಟೂ ಹೀಗೆ ಹೇಳುತ್ತಾರೆ: “ಸ್ಪರ್ಧೆಯನ್ನು ಪ್ರೋತ್ಸಾಹಿಸುವ ಹಾಗೂ ಒಬ್ಬನು ತಾನು ಬಯಸುವ ವಸ್ತುವನ್ನು ತನ್ನದಾಗಿ ಮಾಡಿಕೊಳ್ಳಲಿಕ್ಕಾಗಿ ಇನ್ನೊಬ್ಬನನ್ನು ಕೊಲ್ಲಸಾಧ್ಯವಿದೆ ಎಂಬುದನ್ನು ಚಲನ ಚಿತ್ರಗಳಲ್ಲಿ ತೋರಿಸುವಂತಹ, ಈಗ ಅಸ್ತಿತ್ವದಲ್ಲಿರುವ ಒಂದು ಸಂಸ್ಕೃತಿಯು, ಈ ಮಕ್ಕಳ ಮಾನಸಿಕ ಗೊಂದಲವನ್ನು ಹೆಚ್ಚಿಸುತ್ತದೆ ವಿನಾ ಅದನ್ನು ಕಡಿಮೆಗೊಳಿಸುವುದಿಲ್ಲ.” ಬಂದೂಕುಗಳಿಗೆ ಬದಲಾಗಿ ಶಿಕ್ಷಣಸಂಬಂಧವಾದ ಆಟಿಕೆಗಳನ್ನು ಶಿಫಾರಸ್ಸು ಮಾಡುತ್ತಾ, ಶಿಕ್ಷಕಿಯಾದ ಸೂಸೆಫ ಪೆಕ್‌ ಹೇಳುವುದೇನೆಂದರೆ, “ಎಲ್ಲರನ್ನೂ ಕೊಲ್ಲುತ್ತಿರುವ ಹೀರೊನ ಪ್ರತಿರೂಪವು ಕೇವಲ ಮೋಜಾಗಿದೆ, ಅದು ನಿಜವಲ್ಲ ಮತ್ತು ಆಯುಧಗಳು ಒಬ್ಬನ ಸ್ಥಾನಮಾನದ ಅಥವಾ ಶಕ್ತಿಯ ಸಂಕೇತಗಳಾಗಿಲ್ಲ, ಬದಲಾಗಿ ಜನರನ್ನು ಕೊಲ್ಲುವ ಆಯುಧಗಳಾಗಿವೆ” ಎಂಬುದನ್ನು ಮಕ್ಕಳಿಗೆ ತಿಳಿಯಪಡಿಸುವುದು ಅತ್ಯಗತ್ಯವಾಗಿದೆ.

ರೋಗಿಗಳ ಬಳಿಯೇ ಕದಿಯುವುದು

ಜರ್ಮನಿಯ ಆಸ್ಪತ್ರೆಗಳಿಗೆ ಕಳ್ಳರು ದಾಳಿಮಾಡುತ್ತಿದ್ದಾರೆ. “ಕೊಲೋನ್‌ನಲ್ಲಿರುವ ವಿಶ್ವವಿದ್ಯಾನಿಲಯದ ಆಸ್ಪತ್ರೆಗಳಲ್ಲಿಯೇ, ಒಂದು ವರ್ಷಕ್ಕೆ ಸುಮಾರು ಮುನ್ನೂರು ಕಳ್ಳತನಗಳು ವರದಿಸಲ್ಪಡುತ್ತವೆ” ಎಂದು ಎಮ್ಸ್‌ಡೆಟನರ್‌ ಟಾಗಬ್ಲಾಟ್‌ ವಾರ್ತಾಪತ್ರಿಕೆಯು ವರದಿಸುತ್ತದೆ. “ಕೈಯಲ್ಲಿ ಒಂದು ಹೂಗುಚ್ಛ, ತುಟಿಯಂಚಿನಲ್ಲಿ ಒಂದು ಹೂನಗೆ—ಇಷ್ಟಿದ್ದರೆ ಸಾಕು, ಆಸ್ಪತ್ರೆಗೆ ನುಗ್ಗುವ ಕಳ್ಳನಿಗೆ ಕೊಳ್ಳೆ ಸಿಗುವುದು ಖಂಡಿತ.” ರೋಗಿಗಳನ್ನು ಭೇಟಿಮಾಡುವವರ ವೇಷದಲ್ಲಿ ಒಳನುಗ್ಗಿ, ರೋಗಿಯ ಹಾಸಿಗೆಯ ಬಳಿಯಿರುವ ಟೇಬಲ್‌ನಿಂದ ಆರಂಭಿಸಿ, ಬಟ್ಟೆಯನ್ನು ತೂಗುಹಾಕುವ ಜಾಗದ ವರೆಗೂ ಅವರು ಮುಂದುವರಿಯುತ್ತಾರೆ. ವಿಶೇಷವಾಗಿ ವೃದ್ಧ ರೋಗಿಗಳು ಕಳ್ಳರ ಕೆಲಸವನ್ನು ಸುಗಮಗೊಳಿಸುತ್ತಾರೆ. ಉದಾಹರಣೆಗಾಗಿ, ಒಬ್ಬ ವೃದ್ಧ ವ್ಯಕ್ತಿಯು, ಆಸ್ಪತ್ರೆಯಲ್ಲಿ ತನ್ನ ಬೆಡ್ಡಿನ ಕೆಳಗೆ ಅನೇಕ ಸಾವಿರ ಡಾಯಿಚ್‌ಮಾರ್ಕ್‌ನ (ಜರ್ಮನಿಯ ಹಣ) ನಾಣ್ಯಗಳನ್ನು ಇಟ್ಟಿರುವುದು ಕಂಡುಬಂತು. ರೋಗಿಗಳನ್ನು ಭೇಟಿಮಾಡುವ ಸಮಯದ ಬಗ್ಗೆ ಯಾವುದೇ ನಿರ್ಬಂಧವಿಲ್ಲದಿರುವುದರಿಂದ, ಕಳ್ಳರಿಗೆ ಬಹಳಷ್ಟು ಸ್ವಾತಂತ್ರ್ಯ ಸಿಗುತ್ತದೆ, ಮತ್ತು ಯಾವುದೇ ಅಡೆತಡೆಯಿಲ್ಲದೆ ಯಾರು ಬೇಕಾದರೂ ಆಸ್ಪತ್ರೆಯನ್ನು ಪ್ರವೇಶಿಸಸಾಧ್ಯವಿದೆ. ಆದುದರಿಂದ, ರೋಗಿಗಳು ತಮ್ಮ ಹಣವನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ಆಸ್ಪತ್ರೆಯಲ್ಲಿ ಸುರಕ್ಷಿತ ಜಾಗದಲ್ಲಿಟ್ಟು ಬೀಗಹಾಕುವಂತೆ ಅಥವಾ ಯಾರ ಬಳಿಯಾದರೂ ಕೊಟ್ಟು ಅದನ್ನು ಸುರಕ್ಷಿತವಾಗಿಡುವಂತೆ ಎಚ್ಚರಿಕೆ ನೀಡಲಾಗಿದೆ.

ಕಿವಿಯ ಗುರುತುಗಳು

ಇತ್ತೀಚೆಗೆ ಲಂಡನಿನಲ್ಲಿ ಒಬ್ಬ ಕನ್ನಗಳ್ಳನ ಅಪರಾಧ ನಿರ್ಣಯವು ಮಾಡಲ್ಪಟ್ಟಾಗ, ಅವನ ಅಪರಾಧವನ್ನು ಪತ್ತೆಹಚ್ಚಲು ಸಹಾಯ ಮಾಡಿದ್ದು ಅವನ ಕಿವಿಯೇ ಆಗಿತ್ತು. ಹೇಗೆ? ತಾನು ಕಳ್ಳತನಮಾಡುತ್ತಿದ್ದ ಸ್ಥಳದಲ್ಲಿ ಎಂದೂ ಬೆರಳಿನ ಗುರುತು ಬೀಳದಂತೆ ಈ ಕಳ್ಳನು ತುಂಬ ಜಾಗ್ರತೆ ವಹಿಸುತ್ತಿದ್ದನು. ಆದರೆ ಕನ್ನಹಾಕುವ ಮೊದಲು, ಆ ಮನೆಯೊಳಗೆ ಯಾರಾದರೂ ಇದ್ದಾರೋ ಎಂಬುದನ್ನು ಕಂಡುಕೊಳ್ಳಲಿಕ್ಕಾಗಿ ಅವನು ಕಿಟಕಿಯ ಹತ್ತಿರ ಅಥವಾ ಬೀಗದ ಕೈಹಾಕುವ ತೂತಿನ ಬಳಿ ತನ್ನ ಕಿವಿಯಿಡುವ ರೂಢಿ ಅವನಿಗಿತ್ತು. “ಬೆರಳಿನ ಗುರುತುಗಳಂತೆಯೇ ಕಿವಿಯ ಗುರುತುಗಳು ಅಸಾಮಾನ್ಯವಾಗಿವೆ” ಎಂದು, ಸ್ಕಾಟ್ಲೆಂಡ್‌ನ ಗ್ಲಾಸ್‌ಗೊ ವಿಶ್ವವಿದ್ಯಾನಿಲಯದಲ್ಲಿ ನ್ಯಾಯಸ್ಥಾನದ ರೋಗಶಾಸ್ತ್ರಜ್ಞರಾಗಿರುವ ಪ್ರೊಫೆಸರ್‌ ಪೀಟರ್‌ ವೆನಸಸ್‌ ಹೇಳುತ್ತಾರೆ. ಆದರೂ, ಬೆರಳಿನ ಗುರುತುಗಳಿಗೆ ಅಸದೃಶವಾಗಿ, ಕೂದಲು ಹಾಗೂ ಉಗುರುಗಳಂತೆ ಕಿವಿಗಳು ಸಹ ಜೀವನದಾದ್ಯಂತ ಬೆಳೆಯುತ್ತಾ ಇರುತ್ತವೆ ಎಂದು, ಲಂಡನಿನ ದ ಡೈಲಿ ಟೆಲಿಗ್ರಾಫ್‌ ವರದಿಸುತ್ತದೆ. ಏನೇ ಆಗಲಿ, ನಮ್ಮ ಕಿವಿಗಳು ಯಾವುದೇ ಗಾತ್ರದಲ್ಲಿರಲಿ, ಅವು ಅಸಾಮಾನ್ಯವಾಗಿವೆ—ಈ ಕನ್ನಗಳ್ಳನ ಕಿವಿಗಳಂತೆ—ಎಂಬುದು ಪೊಲೀಸರಿಗೆ ಗೊತ್ತಿದೆ. ಬ್ರಿಟನಿನಲ್ಲಿ, ಕಿವಿಯ ಗುರುತಿನ ಆಧಾರದ ಮೇಲೆ ಅಪರಾಧ ನಿರ್ಣಯಿಸಲ್ಪಟ್ಟಿರುವ ಅಪರಾಧಿಗಳಲ್ಲಿ ಅವನೇ ಮೊತ್ತಮೊದಲಿಗನಾಗಿದ್ದಾನೆ, ಮತ್ತು ಐದು ಬಾರಿ ಕನ್ನಗಳ್ಳತನವನ್ನು ಮಾಡಿದ್ದೇನೆಂದು ಅವನು ಒಪ್ಪಿಕೊಂಡಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ