ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 12/8 ಪು. 26-27
  • ಪ್ರಾಣಿ ಹಿಂಸೆ—ತಪ್ಪೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಾಣಿ ಹಿಂಸೆ—ತಪ್ಪೊ?
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪ್ರಾಣಿ ಹಿಂಸೆ ಮಾಡುವುದು ಏಕೆ ತಪ್ಪಾಗಿದೆ?
  • ಪ್ರಾಣಿಗಳಿಗೆ ಮುಕ್ತಿ
  • ಪ್ರಾಣಿಗಳು ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಮಾಂಸ ತಿನ್ನುವುದು ತಪ್ಪಾಗಿದೆಯೋ?
    ಎಚ್ಚರ!—1997
  • ಭವಿಷ್ಯತ್ತಿನ ವಿಷಯವೇನು?
    ಎಚ್ಚರ!—1992
ಎಚ್ಚರ!—1998
g98 12/8 ಪು. 26-27

ಬೈಬಲಿನ ದೃಷ್ಟಿಕೋನ

ಪ್ರಾಣಿ ಹಿಂಸೆ—ತಪ್ಪೊ?

ಮಧ್ಯ ಅಮೆರಿಕದ ಒಂದು ಕ್ರೀಡಾಂಗಣದಲ್ಲಿ ಎಲ್ಲರ ದೃಷ್ಟಿಯು, ಕೆಂಪು ಹಾಗೂ ಬಿಳಿಯ ಬಣ್ಣದ ಎರಡು ಹುಂಜಗಳ ಮೇಲೆ ನೆಟ್ಟಿದೆ. ತನ್ನ ಕಾಲಿಗೆ ಕಟ್ಟಲ್ಪಟ್ಟಿರುವ ಕ್ಷೌರದ ಕತ್ತಿಯಷ್ಟು ಹರಿತವಾದ ಬ್ಲೇಡಿನಿಂದ, ಕೆಂಪು ಹುಂಜವು ಬಿಳಿಯ ಹುಂಜಕ್ಕೆ ಒಂದು ಏಟು ಹೊಡೆಯುತ್ತದೆ. ಒಬ್ಬ ನ್ಯಾಯದರ್ಶಿಯು ಎರಡೂ ಹುಂಜಗಳನ್ನು ಎತ್ತಿಕೊಳ್ಳುತ್ತಾನೆ. ಆ ಬಿಳಿಯ ಹುಂಜವು ಈಗ ಶಕ್ತಿಹೀನವಾಗಿ ಸತ್ತುಬಿದ್ದಿದೆ, ಮತ್ತು ರಕ್ತವು ತೊಟ್ಟಿಕ್ಕುತ್ತಿದೆ. ಕೋಳಿಕಾಳಗವು ಮುಗಿಯಿತು.

ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ, ಎರಡು ಬೀಜದ ಕುದುರೆಗಳು ಪರಸ್ಪರ ಕಾಳಗ ನಡೆಸಲಿಕ್ಕಾಗಿ ಕಳದಲ್ಲಿ ಬಿಡಲ್ಪಟ್ಟಿವೆ. ಈ ಎರಡು ಕುದುರೆಗಳು, ಕಿವಿಗಳು, ಕತ್ತು, ಮೂತಿ, ಹಾಗೂ ದೇಹದ ಇನ್ನಿತರ ಅಂಗಗಳ ಮೇಲೆ ಹೊಡೆತವನ್ನು ತಿನ್ನುತ್ತಿರುವಂತಹ ಭಯಂಕರ ದೃಶ್ಯವನ್ನು ಪ್ರೇಕ್ಷಕರು ನೋಡುತ್ತಿದ್ದಾರೆ. ಎರಡೂ ಕುದುರೆಗಳು ಪ್ರದರ್ಶನ ಸ್ಥಳದಿಂದ ಜೀವಂತವಾಗಿ ಹೊರಗೆ ಬರುತ್ತವಾದರೂ, ಅವುಗಳಲ್ಲಿ ಯಾವುದಾದರೂ ಒಂದು ಅಂಗಹೀನಮಾಡಲ್ಪಟ್ಟಿರುತ್ತದೆ ಅಥವಾ ಕುರುಡಾಗಿರುತ್ತದೆ ಇಲ್ಲದಿದ್ದರೆ ದೊಡ್ಡ ಗಾಯಗಳಾಗಿದ್ದು, ಕಾಲಕ್ರಮೇಣ ಅದು ಸಾಯುತ್ತದೆ.

ರಷ್ಯದಲ್ಲಿ, ಎರಡು ನಾಯಿಗಳು ಒಂದರ ಮೇಲೊಂದು ಬಿದ್ದು ಕಾದಾಡುತ್ತಿವೆ. ಸ್ವಲ್ಪ ಸಮಯದೊಳಗೆ, ಅವುಗಳ ಕಣ್ಣುಗಳು ಕೀಳಲ್ಪಟ್ಟಿರುತ್ತವೆ, ಕಿವಿಗಳು ಕಿತ್ತುಹೋಗಿರುತ್ತವೆ, ಮತ್ತು ಅವು ಸೀಳುಗಾಯದಿಂದ ರಕ್ತ ಸುರಿಸುತ್ತಾ, ಊನಗೊಂಡ ಕಾಲುಗಳಿಂದ ಸುತ್ತಾಡುತ್ತಿರುತ್ತವೆ.

ಅನೇಕ ಶತಮಾನಗಳಿಂದ ಮನುಷ್ಯನು, ಕ್ರೀಡೆಯ ಹೆಸರಿನಲ್ಲಿ, ಅನೇಕವೇಳೆ ಜೂಜಾಟದ ಪ್ರಚೋದನೆಯಿಂದ, ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿಯ ವಿರುದ್ಧ ಕಾಳಗಕ್ಕೆ ಒಡ್ಡಿದ್ದಾನೆ. ಗೂಳಿಕಾಳಗ, ನರಿಬೇಟೆಗಳು, ಮತ್ತು ಜೇಡರಹುಳುವಿನ ಕಾಳಗವನ್ನು ಸಹ ಈ ಪಟ್ಟಿಗೆ ಸೇರಿಸಸಾಧ್ಯವಿದೆ. ಇದಲ್ಲದೆ, ವಿಜ್ಞಾನದ ಹೆಸರಿನಲ್ಲಿ ಅನೇಕ ಪ್ರಾಣಿಗಳು ಕಷ್ಟವನ್ನು ಅನುಭವಿಸುತ್ತಿವೆ. ಇನ್ನೂ ಹೆಚ್ಚಾಗಿ, ಅಸಂಖ್ಯಾತ ಪ್ರಾಣಿಗಳು ತಮ್ಮ ಯಜಮಾನರಿಂದ ಅಲಕ್ಷಿಸಲ್ಪಟ್ಟು—ಉದ್ದೇಶಪೂರ್ವಕವಾಗಿ ಅಥವಾ ಇನ್ನಿತರ ಕಾರಣಗಳಿಂದ—ಕಷ್ಟಪಡುತ್ತಿವೆ.

ಕೆಲವು ದೇಶಗಳಲ್ಲಿ, ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳುವ ಹಾಗೂ ಅವುಗಳ ಕಡೆಗೆ ಕ್ರೂರವಾಗಿ ವರ್ತಿಸುವುದನ್ನು ನಿಷೇಧಿಸುವಂತಹ ನಿಯಮಗಳು ವಿಧಿಸಲ್ಪಟ್ಟಿವೆ. 1641ರಷ್ಟು ಹಿಂದೆ, ಮಾಸಾಚುಸೆಟ್ಸ್‌ ಬೇ ಕಾಲೊನಿಯು “ಹಕ್ಕುಗಳ ಕೈಪಿಡಿ”ಯನ್ನು ರಚಿಸಿತು; ಅದು ಹೇಳಿದ್ದು: “ಸಾಮಾನ್ಯವಾಗಿ ಮನುಷ್ಯನ ಉಪಯೋಗಕ್ಕಾಗಿ ಇರುವ ಯಾವುದೇ ಪಶುವಿನ ಮೇಲೆ, ಯಾರೊಬ್ಬರೂ ದಬ್ಬಾಳಿಕೆ ನಡೆಸಲು ಇಲ್ಲವೆ ಹಿಂಸಿಸಲು ಪ್ರಯತ್ನಿಸಬಾರದು.” ಅಂದಿನಿಂದ, ನಿಯಮವು ಜಾರಿಗೆ ಬಂದು, ಪ್ರಾಣಿ ಹಿಂಸೆಯನ್ನು ತಡೆಗಟ್ಟಲಿಕ್ಕಾಗಿ ಅನೇಕ ಸಂಘಗಳನ್ನು ಸ್ಥಾಪಿಸಲಾಗಿದೆ.

ಆದರೂ, ಮೇಲೆ ಉದಾಹರಿಸಲ್ಪಟ್ಟಿರುವಂತಹ ಪ್ರಾಣಿ ಕಾಳಗಗಳನ್ನು ನಡೆಸುವ ಅನೇಕರು, ಸ್ವತಃ ತಾವೇ ಪ್ರಾಣಿ ಹಿಂಸೆಯನ್ನು ಮಾಡುತ್ತಿದ್ದೇವೆಂಬುದನ್ನು ಗ್ರಹಿಸುವುದಿಲ್ಲ. ಯಾರು ಪಾಶವೀಯ ರೀತಿಯಲ್ಲಿ ಪ್ರಾಣಿಗಳನ್ನು ಕೊಲ್ಲುತ್ತಾರೋ ಅವರು, ತಾವು ಆ ಪ್ರಾಣಿಗಳನ್ನು ಪ್ರೀತಿಸುತ್ತೇವೆಂದು ವಾದಿಸುತ್ತಾರೆ. ಆಹಾರಕ್ಕಾಗಿ ಉಪಯೋಗಿಸಲ್ಪಡುವ ಯಾವುದೇ ಕೋಳಿಗಿಂತ ತಮ್ಮ ಕೋಳಿಗಳು ಹೆಚ್ಚು ಕಾಲ ಬದುಕುತ್ತವೆ ಎಂದು ಹುಂಜಕಾಳಗವನ್ನು ಇಷ್ಟಪಡುವವರು ವಾದಿಸುತ್ತಾರಾದರೂ, ಇದು ಬಾಯಿಮಾತಿನ ಸಮಾಧಾನವಾಗಿದೆ ಅಲ್ಲವೆ?

ಪ್ರಾಣಿ ಹಿಂಸೆ ಮಾಡುವುದು ಏಕೆ ತಪ್ಪಾಗಿದೆ?

ನಾವು ಪ್ರಾಣಿಗಳಿಂದ ಪ್ರಯೋಜನ ಪಡೆದುಕೊಳ್ಳುವಂತೆ ಯೆಹೋವನು ಅನುಮತಿಸುತ್ತಾನೆ. ನಮ್ಮ ಆಹಾರಕ್ಕಾಗಿ ಹಾಗೂ ಉಡುಪಿಗಾಗಿ ಅಥವಾ ಯಾವುದೇ ಹಾನಿಯಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ಪ್ರಾಣಿಗಳನ್ನು ಕೊಲ್ಲುವಂತೆ ಬೈಬಲ್‌ ಮೂಲತತ್ವವು ನಮಗೆ ಅನುಮತಿ ನೀಡುತ್ತದೆ. (ಆದಿಕಾಂಡ 3:21; 9:3; ವಿಮೋಚನಕಾಂಡ 21:28) ಏನೇ ಆಗಲಿ, ದೇವರ ದೃಷ್ಟಿಯಲ್ಲಿ ಜೀವವು ಪವಿತ್ರವಾದದ್ದಾಗಿದೆ. ಪ್ರಾಣಿಗಳ ಮೇಲೆ ನಮಗೆ ಕೊಡಲ್ಪಟ್ಟಿರುವ ಒಡೆತನವನ್ನು ನಾವು ಸಮತೂಕವಾದ ರೀತಿಯಲ್ಲಿ ಉಪಯೋಗಿಸಬೇಕು; ಹಾಗಿರುವಲ್ಲಿ ಮಾತ್ರ ನಾವು ಜೀವಕ್ಕೆ ಗೌರವವನ್ನು ತೋರಿಸುತ್ತೇವೆ. ನಿಮ್ರೋದನೆಂಬ ಒಬ್ಬ ಮನುಷ್ಯನ ಕುರಿತು ಬೈಬಲು ಖಂಡಿಸಿ ಮಾತಾಡುತ್ತದೆ. ಕೇವಲ ಭೋಗವಿಲಾಸಕ್ಕಾಗಿ ಅವನು ಪ್ರಾಣಿಗಳನ್ನು ಬಹುಶಃ ಮನುಷ್ಯರನ್ನೂ ಕೊಲ್ಲುತ್ತಿದ್ದನೆಂಬುದು ಸುವ್ಯಕ್ತ.—ಆದಿಕಾಂಡ 10:9.

ಪ್ರಾಣಿಗಳ ಬಗ್ಗೆ ಯೆಹೋವನು ತೋರಿಸುವ ಕಾಳಜಿಯ ಕುರಿತು ಯೇಸು ಈ ರೀತಿ ಹೇಳಿದನು: “ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತುಹೋಗುವದಿಲ್ಲ.” (ಲೂಕ 12:6) ಇದಲ್ಲದೆ, ಒಂದು ಪಟ್ಟಣದಲ್ಲಿ ದುಷ್ಟ ಜನರೇ ತುಂಬಿದ್ದು, ತದನಂತರ ಅವರು ಪಶ್ಚಾತ್ತಾಪಪಟ್ಟಾಗ, ಆ ಪಟ್ಟಣವನ್ನು ನಾಶಪಡಿಸುವ ತನ್ನ ಆಲೋಚನೆಯನ್ನು ಬದಲಾಯಿಸುತ್ತಾ ದೇವರು ಹೇಳಿದ್ದು: “ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತು ಸಾವಿರ ನರಪ್ರಾಣಿಗಳೂ ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ.” (ಯೋನ 4:11) ಅಗತ್ಯವಿದ್ದಾಗ ಉಪಯೋಗಿಸಿ, ಅಗತ್ಯವಿಲ್ಲದಿದ್ದಾಗ ಬಿಸಾಡುವ ಒಂದು ವಸ್ತುವಿನೋಪಾದಿ ಆತನು ಪ್ರಾಣಿಗಳನ್ನು ಪರಿಗಣಿಸಲಿಲ್ಲ ಎಂಬುದು ಖಂಡಿತ.

ದೇವರು ಇಸ್ರಾಯೇಲ್ಯರಿಗೆ ನಿಯಮಗಳನ್ನು ವಿಧಿಸಿದಾಗ, ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳುವುದರ ಕುರಿತು ಆತನು ಅವರಿಗೆ ಕಲಿಸಿದನು. ತಪ್ಪಿಸಿಕೊಂಡಿರುವ ಒಂದು ಪ್ರಾಣಿಯನ್ನು ಅದರ ಒಡೆಯನಿಗೆ ಹಿಂದಿರುಗಿಸುವಂತೆ ಮತ್ತು ಕಷ್ಟದಲ್ಲಿರುವ ಪ್ರಾಣಿಗಳಿಗೆ ಸಹಾಯ ಮಾಡುವಂತೆ ಆತನು ಅಗತ್ಯಪಡಿಸಿದನು. (ವಿಮೋಚನಕಾಂಡ 23:4, 5) ಮಾನವರಂತೆಯೇ ಪ್ರಾಣಿಗಳು ಸಹ ಸಬ್ಬತ್‌ ದಿನದ ವಿಶ್ರಾಂತಿಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ಏರ್ಪಾಡು ಮಾಡಲಾಗಿತ್ತು. (ವಿಮೋಚನಕಾಂಡ 23:12) ಬೇಸಾಯಕ್ಕಾಗಿ ಉಪಯೋಗಿಸಲ್ಪಡುವ ಪ್ರಾಣಿಗಳನ್ನು ಯೋಗ್ಯವಾದ ರೀತಿಯಲ್ಲಿ ಉಪಚರಿಸಲಿಕ್ಕಾಗಿಯೂ ಅನೇಕ ನಿಯಮಗಳು ಕೊಡಲ್ಪಟ್ಟಿದ್ದವು. (ಧರ್ಮೋಪದೇಶಕಾಂಡ 22:10; 25:4) ಪ್ರಾಣಿಗಳನ್ನು ಕೇವಲ ಸ್ವಪ್ರಯೋಜನಕ್ಕಾಗಿ ಉಪಯೋಗಿಸಬಾರದಾಗಿತ್ತು, ಬದಲಾಗಿ ಅವುಗಳನ್ನು ಚೆನ್ನಾಗಿ ನೋಡಿಕೊಂಡು ಕಾಪಾಡಬೇಕಾಗಿತ್ತು.

ಜ್ಞಾನೋಕ್ತಿ 12:10 ದೇವರ ದೃಷ್ಟಿಕೋನವನ್ನು ಸ್ಪಷ್ಟವಾಗಿ ತಿಳಿಸುತ್ತದೆ: “ಶಿಷ್ಟನು ತನ್ನ ದನದ ಕ್ಷೇಮವನ್ನು ಲಕ್ಷಿಸುತ್ತಾನೆ; ದುಷ್ಟನ ವಾತ್ಸಲ್ಯವೋ ಕ್ರೂರತನವೇ.” ಒಂದು ಬೈಬಲ್‌ ವ್ಯಾಖ್ಯಾನವು ಈ ವಚನವನ್ನು ಈ ರೀತಿ ಭಾಷಾಂತರಿಸುತ್ತದೆ: “ಒಬ್ಬ ನೀತಿವಂತನು ತನ್ನ ದಯಾಭಾವವನ್ನು ಮೂಕ ಪ್ರಾಣಿಗಳ ಕಡೆಗೂ ತೋರಿಸುತ್ತಾನೆ, ಆದರೆ ತಾನು ತುಂಬ ವಾತ್ಸಲ್ಯ ತೋರಿಸುತ್ತೇನೆ ಎಂದು ಒಬ್ಬ ದುಷ್ಟನು ಆಲೋಚಿಸುವಾಗಲೂ, ಅವನು ತುಂಬ ಕ್ರೂರಿಯಾಗಿರುತ್ತಾನೆ.”—ವಿಲಿಯಮ್‌ ಮ್ಯಾಕ್‌ಡೊನಾಲ್ಡ್‌ರಿಂದ ಬರೆಯಲ್ಪಟ್ಟ ಬಿಲೀವರ್ಸ್‌ ಬೈಬಲ್‌ ಕಾಮೆಂಟರಿ.

ನೀತಿವಂತನು ಪ್ರಾಣಿಗಳಿಗೆ ಕರುಣೆ ತೋರಿಸುತ್ತಾನೆ ಮತ್ತು ಅವುಗಳ ಆವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸುತ್ತಾನೆ. ಒಬ್ಬ ದುಷ್ಟನು ಬಾಯಿಮಾತಿನಲ್ಲಿ ಪ್ರಾಣಿಗಳಿಗೆ ಪ್ರೀತಿಯನ್ನು ವ್ಯಕ್ತಪಡಿಸಬಹುದು, ಆದರೆ ಕಾರ್ಯಗಳಲ್ಲಿ ಅವನ “ವಾತ್ಸಲ್ಯ”ವು ನಿಜವಾಗಿಯೂ ಕ್ರೂರವಾದದ್ದಾಗಿದೆ. ಅವನ ಮನಸ್ಸಿನಲ್ಲಿರುವ ಸ್ವಾರ್ಥ ಉದ್ದೇಶವು ಅವನ ಕೃತ್ಯಗಳಲ್ಲಿ ತೋರಿಬರುತ್ತದೆ. ಹಣವನ್ನು ಗೆಲ್ಲುವ ನಿರೀಕ್ಷೆಯಿಂದ, ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿಯ ವಿರುದ್ಧ ಕಾಳಗಕ್ಕೆ ಸಿದ್ಧಪಡಿಸುವವರ ವಿಷಯದಲ್ಲಿ ಇದು ಎಷ್ಟು ಸತ್ಯವಾಗಿದೆ!

ಪ್ರಾಣಿಗಳಿಗೆ ಮುಕ್ತಿ

ಮನುಷ್ಯನು “ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡು”ವುದು ದೇವರ ಮೂಲ ಉದ್ದೇಶವಾಗಿತ್ತೆಂಬುದು ನಿಜ. (ಆದಿಕಾಂಡ 1:28) ಆ ಉದ್ದೇಶದಲ್ಲಿ ಪ್ರಾಣಿ ಹಿಂಸೆ ಮಾಡುವುದು ಖಂಡಿತವಾಗಿಯೂ ಒಳಗೂಡಿಲ್ಲ. ಪ್ರಾಣಿಗಳನ್ನು ಅಮಾನುಷವಾಗಿ ಉಪಚರಿಸುವುದು ಸದಾ ಹೀಗೆಯೇ ಮುಂದುವರಿಯುವುದಿಲ್ಲ. ಅನಾವಶ್ಯಕವಾದ ಎಲ್ಲ ಕಷ್ಟಾನುಭವವನ್ನು ದೇವರು ನಿಲ್ಲಿಸುವನು ಎಂದು ನಂಬುವುದಕ್ಕೆ ನಮಗೆ ಕಾರಣವಿದೆ. ಹೇಗೆ?

ದುಷ್ಟರನ್ನು ಹಾಗೂ ಕ್ರೂರ ಜನರನ್ನು ಇಲ್ಲದಂತೆಮಾಡುವ ವಾಗ್ದಾನವನ್ನು ಆತನು ಮಾಡಿದ್ದಾನೆ. (ಜ್ಞಾನೋಕ್ತಿ 2:22) ಪ್ರಾಣಿಗಳ ಕುರಿತು ಹೋಶೇಯ 2:18 ಹೀಗೆ ಹೇಳುತ್ತದೆ: “ಆ ಕಾಲದಲ್ಲಿ ನಾನು ನನ್ನ ಜನರಿಗಾಗಿ ಭೂಜಂತುಗಳಿಗೂ ಆಕಾಶಪಕ್ಷಿಗಳಿಗೂ ನೆಲದ ಕ್ರಿಮಿಕೀಟಗಳಿಗೂ ನಿಬಂಧನೆಮಾಡಿ . . . ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.” ಶಾಂತಿಭರಿತ ಪರಿಸ್ಥಿತಿಗಳು, ಯಥಾರ್ಥ ಮಾನವರಿಗೆ ಮಾತ್ರವಲ್ಲ, ಪ್ರಾಣಿಗಳಿಗೆ ಸಹ ಪ್ರಯೋಜನವನ್ನು ಉಂಟುಮಾಡುವಂತಹ ಆ ಸಮಯದಲ್ಲಿ ಜೀವಿಸುವುದು ಎಷ್ಟು ಆಶ್ಚರ್ಯಕರವಾಗಿರುವುದು!

[ಪುಟ 26 ರಲ್ಲಿರುವ ಚಿತ್ರ]

“ಒಂದು ಹಳ್ಳಿಯಲ್ಲಿ ಗೂಳಿಕಾಳಗ,” ಫ್ರಾನ್ಸಿಸ್ಕೊ ಗೋಯ ಅವರಿಂದ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ