ನಮ್ಮ ವಾಚಕರಿಂದ
ಮಸ್ತಿಷ್ಕ ಆಘಾತ “ಮಸ್ತಿಷ್ಕ ಆಘಾತದೊಂದಿಗೆ ಹೆಣಗಾಡುವುದು” (ಮಾರ್ಚ್ 8, 1998) ಎಂಬ ಲೇಖನಮಾಲೆಯು, ನನ್ನ ಪ್ರಾರ್ಥನೆಗೆ ಕೊಡಲ್ಪಟ್ಟ ಉತ್ತರವಾಗಿತ್ತು. ಕೆಲವು ವರ್ಷಗಳ ಹಿಂದೆ, ನಾನೂ ನನ್ನ ಪತಿಯೂ ಒಂದು ಕ್ರೈಸ್ತ ಅಧಿವೇಶನಕ್ಕೆ ಹಾಜರಾಗಲು ಹೋಗಿದ್ದಾಗ, ನನ್ನ ಪತಿಗೆ ಮಸ್ತಿಷ್ಕ ಆಘಾತವಾಯಿತು. ಅವರು ನನಗೆ ಒಂದು ಚೀಟಿಯನ್ನು ಬರೆಯಲು ಪ್ರಯತ್ನಿಸುತ್ತಿದ್ದಾಗ, ಅವರ ಕೈ ಕಾಗದದ ಮೇಲಿನಿಂದ ಜಾರಿತು; ಅವರ ದೇಹದ ಇಡೀ ಬಲಭಾಗಕ್ಕೆ ಲಕ್ವಹೊಡೆದಿತ್ತು. ಈ ಲೇಖನವು ನನಗೆ ಎಷ್ಟು ಸಹಾಯ ಮಾಡಿತೆಂದರೆ, ಅದನ್ನು ಮಾತಿನಲ್ಲಿ ವರ್ಣಿಸುವುದು ಅಸಾಧ್ಯ. ಯೆಹೋವನು ನಮ್ಮನ್ನು ಮರೆತುಬಿಟ್ಟಿಲ್ಲ ಎಂಬುದನ್ನು ತಿಳಿಯುವುದು ಎಷ್ಟು ಚೇತೋಹಾರಿಯಾಗಿದೆ.
ಎಫ್. ಎಸ್. ಏಚ್., ಅಮೆರಿಕ
ಈ ಪತ್ರಿಕೆಯನ್ನು ಪಡೆದುಕೊಳ್ಳುವ ಕೆಲವು ತಾಸುಗಳಿಗೆ ಮೊದಲು, ನನಗೆ ಏನಾಗುತ್ತಿದೆ ಎಂಬುದನ್ನು ನನ್ನ ಪತ್ನಿಗೆ ತಿಳಿಸಲು ಎಷ್ಟೇ ಪ್ರಯತ್ನಪಟ್ಟರೂ ಅದು ಪ್ರಯೋಜನವಾಗಲಿಲ್ಲ. ನಾನು ಬಯಸುವ ರೀತಿಯಲ್ಲಿ ನನ್ನ ಬಗ್ಗೆ ವ್ಯಕ್ತಪಡಿಸಿಕೊಳ್ಳಲು ನಾನು ಅಸಮರ್ಥನಾಗಿದ್ದೆ, ಏಕೆಂದರೆ ನನಗೆ ಮಸ್ತಿಷ್ಕ ಆಘಾತವಾಗಿತ್ತು. ಈಗಾಗಲೇ ನಾನು ನಿಮ್ಮ ಪತ್ರಿಕೆಯನ್ನು ಮೂರು ಬಾರಿ ಓದಿದ್ದೇನೆ. ನನ್ನ ಹೆಂಡತಿ ಸಹ ಅದನ್ನು ಓದಿದ್ದಾಳೆ.
ಆರ್. ಸೆಡ್., ಇಟಲಿ
ಅನೇಕ ವರ್ಷಗಳ ವರೆಗೆ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿದ್ದ ನನ್ನ ತಂದೆಯವರು, ಕಳೆದ ವರ್ಷ ಮಸ್ತಿಷ್ಕ ಆಘಾತದಿಂದ ಮೃತರಾದರು. ಈ ಲೇಖನವು, ಸಾಯುವ ಮೊದಲು ಅವರು ವರ್ತಿಸುತ್ತಿದ್ದ ರೀತಿಯನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿತು. ಭಾವನಾತ್ಮಕ ಬದಲಾವಣೆಗಳ ಕುರಿತಾದ ವಿವರಗಳು, ಹಾಗೂ ಮಸ್ತಿಷ್ಕ ಆಘಾತಕ್ಕೆ ಒಳಗಾದ ಒಬ್ಬ ವ್ಯಕ್ತಿಯು ಸಂವಾದಮಾಡಲು ಏಕೆ ಕಷ್ಟಪಡುತ್ತಾನೆ ಎಂಬ ವಿಚಾರವು, ನನ್ನ ತಂದೆಯವರು ಅನುಭವಿಸುತ್ತಿದ್ದ ನೋವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿತು.
ವಿ. ಕೆ., ಅಮೆರಿಕ
ಒಂದು ವರ್ಷದ ಹಿಂದೆ ನನಗೆ ಮಸ್ತಿಷ್ಕ ಆಘಾತವಾಯಿತು, ಆದರೆ ನಾನು ಇನ್ನೂ ನರಳುತ್ತಿದ್ದೇನೆ; ನನ್ನ ಎಡಭಾಗವು ದುರ್ಬಲವಾಗಿದೆ. ಈ ಲೇಖನಗಳು, ಮಸ್ತಿಷ್ಕ ಆಘಾತದ ಕುರಿತಾದ ಗುಪ್ತ ವಿಚಾರಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ಭಯವನ್ನು ಹೋಗಲಾಡಿಸುತ್ತವೆ. ಕೇವಲ ವೃದ್ಧರಿಗೆ ಮಾತ್ರ ಮಸ್ತಿಷ್ಕ ಆಘಾತವಾಗುತ್ತದೆ ಎಂಬುದು ಸುಳ್ಳಾಗಿದೆ. ನನಗೆ ಮಸ್ತಿಷ್ಕ ಆಘಾತವಾದಾಗ, ನಾನು ಕೇವಲ 47 ವರ್ಷ ಪ್ರಾಯದವಳಾಗಿದ್ದೆ.
ಎ. ಎ., ಇಂಗ್ಲೆಂಡ್
ನನ್ನ ಮಗಳಾದ ಲೂಟ್ಸ್ಯ ಎರಡು ತಿಂಗಳಿನವಳಾಗಿದ್ದಾಗ, ಕಾರ್ ಅಪಘಾತವೊಂದರಲ್ಲಿ ಅವಳ ತಲೆಗಾದ ಹೊಡೆತದಿಂದ ಅವಳು ತುಂಬ ಕಷ್ಟವನ್ನು ಅನುಭವಿಸಿದಳು. ಈ ಲೇಖನವು, ಅವಳನ್ನು ಅರ್ಥಮಾಡಿಕೊಳ್ಳಲು ನನಗೆ ತುಂಬ ಸಹಾಯ ಮಾಡಿತು. ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಅವಳು ಅಸಮರ್ಥಳಾಗಿದ್ದಾಳೆ. ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವು ನನಗೆ ಸಹಾಯ ಮಾಡಿತು.
ಎನ್. ಕೆ., ಸ್ಲೊವಾಕಿಯ
ನಾನು ಪುನಶ್ಚೇತನಗೊಳಿಸುವಿಕೆಯಲ್ಲಿ ಸರ್ಟಿಫಿಕೆಟ್ ಪಡೆದಿರುವ ಒಬ್ಬ ರಿಜಿಸ್ಟರ್ಡ್ ನರ್ಸ್ ಆಗಿದ್ದೇನೆ. ಮಸ್ತಿಷ್ಕ ಆಘಾತದಿಂದ ನರಳುತ್ತಿರುವ ಜನರೊಂದಿಗೆ ಕೆಲಸಮಾಡಿರುವ ಅನುಭವ ನನಗೆ ಬಹಳಷ್ಟಿದೆ. ಈ ಲೇಖನದ ಬಗ್ಗೆ ನಾನು ತುಂಬ ಗಣ್ಯಮಾಡುವ ವಿಷಯವೇನೆಂದರೆ, ಮಸ್ತಿಷ್ಕ ಆಘಾತಕ್ಕೆ ಒಳಗಾಗುವ ಜನರ ಕುಟುಂಬಗಳಿಂದ ಅನುಭವಿಸಲ್ಪಡುವ ಕಷ್ಟವನ್ನು ಅದು ಸಹಾನುಭೂತಿಯಿಂದ ವಿವರಿಸಿರುವ ವಿಧವೇ.
ಎಲ್. ಕೆ., ಅಮೆರಿಕ
ನನ್ನ ತಾಯಿಯವರು, ಕ್ಷಣಿಕ ರಕ್ತಕೊರತೆಯ ಆಘಾತವನ್ನು ಅನುಭವಿಸಿದ್ದಾರೆ. ಶಾರೀರಿಕ ದೃಷ್ಟಿಯಲ್ಲಿ ನೋಡುವುದಾದರೆ, ಅವರು ಬಹಳಷ್ಟು ಗುಣಮುಖರಾಗಿದ್ದಾರೆ. ಆದರೆ ಅವರಿಗೆ ಆಳವಾದ ಮಾನಸಿಕ ಕಲೆಗಳಾಗಿವೆ. ಈ ಮುಂಚೆ ಅವರು ಸದೃಢರೂ ಆತ್ಮವಿಶ್ವಾಸವುಳ್ಳವರೂ ಆಗಿದ್ದರು, ಆದರೆ ಈಗ ಅವರು ತುಂಬ ದುರ್ಬಲರಾಗಿದ್ದಾರೆ. ಈ ಅಸ್ವಸ್ಥತೆಯು ಉಂಟುಮಾಡುವಂತಹ ಮಾನಸಿಕ ಪ್ರಭಾವವನ್ನು ತಿಳಿಯಪಡಿಸಿರುವುದಕ್ಕಾಗಿ ನಿಮಗೆ ಉಪಕಾರ.
ಆರ್. ಕೆ., ಇಟಲಿ
ಎರಡು ವರ್ಷಗಳ ಹಿಂದೆ ನನ್ನ ತಾಯಿ ಎರಡು ಬಾರಿ ಮಸ್ತಿಷ್ಕ ಆಘಾತಗಳನ್ನು ಅನುಭವಿಸಿದರು. ಮೊದಲ ಬಾರಿ ಆಘಾತವಾದಾಗ ಅವರು ಜ್ಞಾಪಕಶಕ್ತಿಯನ್ನು ಕಳೆದುಕೊಂಡರು, ಮತ್ತು ಎರಡನೆಯ ಬಾರಿ ಅವರ ಬಲಭಾಗಕ್ಕೆ ಲಕ್ವಹೊಡೆಯಿತು. ಕೆಲವೊಮ್ಮೆ ನಾನು ತಾಳ್ಮೆ ಕಳೆದುಕೊಂಡು ಅವರ ಮೇಲೆ ರೇಗುತ್ತೇನೆ ಹಾಗೂ ಅವರಿಗೆ ದುಃಖವಾಗುವಂತಹ ಮಾತುಗಳನ್ನಾಡುತ್ತೇನೆ. ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ನಿಮ್ಮ ಲೇಖನವು ನನ್ನನ್ನು ಉತ್ತೇಜಿಸಿತು.
ಆರ್. ಟಿ. ಎಸ್., ಬ್ರೆಸಿಲ್