ತಾಜಾ ಹಾಲಿನಿಂದ ಹಾಲಿನ ಪುಡಿಯ ವರೆಗೆ
ನ್ಯೂ ಸೀಲೆಂಡ್ನ ಎಚ್ಚರ! ಸುದ್ದಿಗಾರರಿಂದ
ಸಾವಿರಾರು ವರ್ಷಗಳಿಂದ ಮತ್ತು ವಿಶೇಷವಾಗಿ ಪ್ರತಿಯೊಂದು ದೇಶದಲ್ಲಿ, ಹಾಲು ಮಾನವ ಆಹಾರದ ಮುಖ್ಯ ಪದಾರ್ಥವಾಗಿದೆ. ಹೆಣ್ಣು ಪ್ರಾಣಿಗಳ ಸ್ತನದಿಂದ ಹಾಲು ಬರುತ್ತದೆ ಮತ್ತು ಅವುಗಳ ಮರಿಗಳಿಗೆ ಅದೇ ಸಂಪೂರ್ಣ ಆಹಾರವಾಗಿದೆ ಎಂಬುದು ನಿಜ. ಇತರ ಸೃಷ್ಟಿಜೀವಿಗಳಿಗೆ ವ್ಯತಿರಿಕ್ತವಾಗಿ, ಮಾನವರು ಬೇರೆ ಬೇರೆ ಜಾತಿಯ ಸಸ್ತನಿಗಳಿಂದ ಈ ಪುಷ್ಟಿಕರವಾದ ಆಹಾರ ಪದಾರ್ಥವನ್ನು ಪಡೆದುಕೊಂಡಿದ್ದಾರೆ. ವಿಶೇಷವಾಗಿ, ಹಸುಗಳು, ಒಂಟೆಗಳು, ಆಡುಗಳು, ಲಾಮಗಳು, ಹಿಮಸಾರಂಗ, ಕುರಿಗಳು, ಮತ್ತು ಎಮ್ಮೆಗಳಿಂದ ಹಾಲನ್ನು ಪಡೆದುಕೊಂಡಿದ್ದಾರೆ. ಜನರು ನೇರವಾಗಿ ಹಾಲನ್ನೇ ಕುಡಿಯುವುದರ ಜೊತೆಗೆ, ಹಾಲಿನ ಉತ್ಪನ್ನಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಬೆಣ್ಣೆ, ಚೀಸ್, ಮೊಸರು, ಮತ್ತು ಐಸ್ ಕ್ರೀಮನ್ನು ತಿನ್ನುವುದರಲ್ಲಿ ಸಹ ಆನಂದಿಸುತ್ತಾರೆ.
ಸಾಮಾನ್ಯವಾಗಿ ಸಿಗುವ ಹಾಲುಗಳಲ್ಲಿ ಒಂದಾದ ಹಸುವಿನ ಹಾಲು, 87 ಪ್ರತಿಶತ ನೀರು ಮತ್ತು 13 ಪ್ರತಿಶತ ಘನವಸ್ತುಗಳಿರುವ ಒಂದು ದ್ರವ ಮಿಶ್ರಣವಾಗಿದೆ. ಈ ಘನವಸ್ತುಗಳಲ್ಲಿ, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ಕೊಬ್ಬುಗಳು, ವಿಟಮಿನ್ಗಳು, ಮತ್ತು ಮೂಳೆಗಳ ಬೆಳವಣಿಗೆಗೆ ಹಾಗೂ ಮೂಳೆಗಳ ಆರೋಗ್ಯಕ್ಕೆ ಅತಿ ಪ್ರಾಮುಖ್ಯವಾಗಿರುವ ಕ್ಯಾಲ್ಸಿಯಮ್ನಂತಹ ಖನಿಜಪದಾರ್ಥಗಳು ಸೇರಿವೆ. ಸಾಮಾನ್ಯವಾಗಿ ಹಸುಗಳು ಅತಿ ಹೆಚ್ಚು ಪುಷ್ಟಿಕರವಾದ ಹಾಲನ್ನು ಉತ್ಪಾದಿಸುವುದಿಲ್ಲ. ಈ ಮೇಲೆ ಪಟ್ಟಿಮಾಡಲ್ಪಟ್ಟಿರುವ ಪ್ರಾಣಿಗಳಲ್ಲಿ, ಕೇವಲ ಹಿಮಸಾರಂಗವು ಮಾತ್ರ ಅತಿ ಹೆಚ್ಚು ಪುಷ್ಟಿಕರವಾದ ಹಾಲನ್ನು ಕೊಡುತ್ತದೆ. ಅಂದರೆ, ಅದರ ಹಾಲಿನಲ್ಲಿ ಸುಮಾರು 37 ಪ್ರತಿಶತ ಘನವಸ್ತುಗಳಿವೆ!
ಯಾವ ಪ್ರಾಣಿಯ ಹಾಲೇ ಆಗಲಿ, ಅದನ್ನು ಫ್ರಿಜ್ನಲ್ಲಿ ಇಡದಿದ್ದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಈ ಸಮಸ್ಯೆಗೆ ಹಾಲಿನ ಪುಡಿಯೇ ಒಂದು ಜನಪ್ರಿಯ ಪರಿಹಾರವಾಗಿದೆ. ಆದರೆ ಹಾಲನ್ನು ಹೇಗೆ ಹಾಲಿನ ಪುಡಿಯನ್ನಾಗಿ ಮಾಡಸಾಧ್ಯವಿದೆ? ನ್ಯೂ ಸೀಲೆಂಡ್ನ ವೈಕಾಟೊದಲ್ಲಿರುವ ಒಂದು ಆಧುನಿಕ ಹಾಲನ್ನು ಸಂಸ್ಕರಿಸುವ ಕಾರ್ಖಾನೆಗೆ ನಾವು ಒಂದು ಚಿಕ್ಕ ಭೇಟಿ ನೀಡೋಣ. ಜಗತ್ತಿನಲ್ಲೇ ಈ ರೀತಿಯ ಅತ್ಯಂತ ದೊಡ್ಡ ಕಾರ್ಖಾನೆಗಳಲ್ಲಿ ಇದು ಒಂದಾಗಿದ್ದು, ಜಗತ್ತಿನಾದ್ಯಂತ ಆಹಾರ ಉದ್ಯಮಕ್ಕಾಗಿ ಪ್ರತಿದಿನ 400 ಟನ್ಗಳಷ್ಟು ಪುಷ್ಟಿಕರವಾದ ಹಾಲಿನ ಪುಡಿಯನ್ನು ಉತ್ಪಾದಿಸುತ್ತದೆ.
ದ್ರವದಿಂದ ಪುಡಿಯ ವರೆಗೆ
ಪ್ರತಿ ದಿನ, ಪಾಲಿಷ್ಮಾಡಲ್ಪಟ್ಟಿರುವ ಸ್ಟೀಲ್ ಟ್ರೇಲರ್ ಟ್ಯಾಂಕ್ಗಳ ಒಂದು ತಂಡವು, ನ್ಯೂ ಸೀಲೆಂಡ್ನ ಹಾಲಿನ ಡೈರಿಗಳಿಂದ ಈ ಕಾರ್ಖಾನೆಗೆ ತಾಜಾ ಹಾಲನ್ನು ತರುತ್ತದೆ. ಅಲ್ಲಿ ಹಾಲನ್ನು ಶಾಖನಿರೋಧಕವಾಗಿರುವ ಕೊಳವೆಯಾಕಾರದ ತೊಟ್ಟಿಯಲ್ಲಿ ತುಂಬಿಸಲಾಗುತ್ತದೆ. ಅಲ್ಲಿಂದ ಹಾಲು ಸ್ಟಾಂಡರ್ಡೈಸೇಷನ್ ಸೆಪರೇಟರ್ಗಳಿಗೆ ಹೋಗುತ್ತದೆ. ಅಲ್ಲಿ ಅದನ್ನು ಕೆನೆ ತೆಗೆದ ಹಾಲು ಮತ್ತು ಕೆನೆ ಆಗಿ ಬೇರ್ಪಡಿಸಲಾಗುತ್ತದೆ ಮತ್ತು ಅಂತಿಮ ಉತ್ಪನ್ನವು ಸರಿಯಾದ ಮಟ್ಟದಲ್ಲಿ ಅಥವಾ ಗಟ್ಟಿಯಾಗಿ ಲಭ್ಯವಾಗುವಂತೆ ಹಾಲಿನೊಂದಿಗೆ ಕೆನೆಯನ್ನು ಪುನಃ ನಿರ್ದಿಷ್ಟ ಪ್ರಮಾಣಗಳಲ್ಲಿ ಮಿಶ್ರಮಾಡಲಾಗುತ್ತದೆ. ಹಾಲಿನ ಪುಡಿಯಾಗಿ ಮಾರ್ಪಡುವ ಮುಂಚೆ, ಆ ಹಾಲು ಸೆಪರೇಟರ್ಗಳಿಂದ ಬಫರ್ ಸ್ಟೋರೇಜ್ಗೆ ಹೋಗುತ್ತದೆ.
ಪ್ಯಾಸ್ಟರ್ ಸಂಸ್ಕರಣೆಯು ಮುಗಿದ ಬಳಿಕ, ಆ ಹಾಲನ್ನು ಗಾಳಿಯಾಡದ ಸ್ಥಳದಲ್ಲಿ ಕುದಿಸಲಾಗುತ್ತದೆ. ಗಾಳಿಯಾಡದ ಸ್ಥಳದಲ್ಲಿ ಏಕೆ ಕುದಿಸಬೇಕು? ಹೆಚ್ಚು ಶಾಖದಿಂದ ಉಂಟಾಗುವ ಯಾವುದೇ ಹಾನಿಯಿಲ್ಲದೆ, ಹಾಲು ತೀರ ಕಡಿಮೆ ಉಷ್ಣತೆಯಲ್ಲಿ ಕುದಿಯುತ್ತಿದೆ ಎಂಬುದು ಇದರಿಂದ ಖಚಿತವಾಗುತ್ತದೆ. ಇಂಗಿಸುವಿಕೆಯ ಈ ಹಂತವು ಮುಗಿದ ಬಳಿಕ, ಹಾಲಿನ ಗಟ್ಟಿಯಾದ ಅಂಶವು ಸರಿಸುಮಾರು 48 ಪ್ರತಿಶತದಷ್ಟಿರುತ್ತದೆ. ಗಟ್ಟಿಯಾದ ಈ ಉತ್ಪನ್ನವು ಈಗ ಅಂತಿಮ ಹಂತವನ್ನು ತಲಪಿದೆ, ಅಂದರೆ ಒಣಗಿಸುವಿಕೆಗೆ ಸಿದ್ಧವಾಗಿದೆ.
ಅನೇಕ ಉಪ್ಪರಿಗೆಗಳುಳ್ಳ ಸ್ಟೀಲ್ ಡ್ರೈಅರ್ (ಶೋಷಕ)ನ ಬಾಯಿಗೆ ಪೈಪ್ಗಳಿಂದ ಗಟ್ಟಿಯಾದ ಹಾಲನ್ನು ಹಾಯಿಸುವ ಮೂಲಕ, ಒಣಗಿಸುವ ಪ್ರಕ್ರಿಯೆಯು ಆರಂಭಗೊಳ್ಳುತ್ತದೆ. ಅಲ್ಲಿ ಡ್ರೈಅರ್ನ ಒಳಗಿರುವ ಬಿಸಿ ಗಾಳಿಯೊಳಗೆ ಹಾಲನ್ನು ತುಂತುರಾಗಿ ಚಿಮುಕಿಸಲಾಗುತ್ತದೆ. ಈಗ ಹಾಲಿನಲ್ಲಿರುವ ತೇವಾಂಶವು 6 ಪ್ರತಿಶತಕ್ಕೆ ಇಳಿಯುತ್ತದೆ, ಮತ್ತು ಅದು ಪುಡಿಯಾಗಿ ಪರಿಣಮಿಸುತ್ತದೆ. ಇನ್ನೊಂದು ಹಂತದಲ್ಲಿ ಇದರ ತೇವಾಂಶವು 3 ಪ್ರತಿಶತಕ್ಕೆ ಇಳಿಯುತ್ತದೆ. ತದನಂತರ ಈ ಪುಡಿಯನ್ನು ನಿಧಾನವಾಗಿ ಆರಿಸಿ, ರವಾನಿಸಲಿಕ್ಕಾಗಿ ಸಿದ್ಧಗೊಳಿಸಲಾಗುತ್ತದೆ. ಇಡೀ ಕಾರ್ಯವಿಧಾನದಲ್ಲಿ, ಹಾಲಿನ ಪೌಷ್ಟಿಕ ಮೌಲ್ಯ ಹಾಗೂ ಸ್ವತವು ಸ್ವಲ್ಪವೂ ಕಳೆದುಹೋಗದಂತೆ ಕಟ್ಟೆಚ್ಚರಿಕೆ ವಹಿಸಲಾಗುತ್ತದೆ.
ತಾಜಾ ಹಾಲು ಸುಲಭವಾಗಿ ಲಭ್ಯವಿರುವಂತಹ ಒಂದು ಸ್ಥಳದಲ್ಲಿ ನೀವು ವಾಸಿಸುತ್ತಿರಬಹುದು. ಆದರೆ ತಾಜಾ ಹಾಲು ಸಿಗುವುದೇ ವಿರಳವಾಗಿರುವ ಸ್ಥಳಗಳಲ್ಲಿ ಅಥವಾ ಅದು ತುಂಬ ದುಬಾರಿಯಾಗಿರುವಂತಹ ಪ್ರತ್ಯೇಕ ಸ್ಥಳಗಳಲ್ಲಿ ಅನೇಕ ಜನರು ವಾಸಿಸುತ್ತಾರೆ. ಹಾಲಿನ ಪುಡಿಯ ಚಮತ್ಕಾರದಿಂದಾಗಿ, ಅವರ ಸಮಸ್ಯೆಗಳು ಸುಲಭವಾಗಿ ಬಗೆಹರಿದಿವೆ. ಅವರು ಕೆಲವೊಂದು ಚಮಚಗಳಷ್ಟು ಹಾಲಿನ ಪುಡಿಯನ್ನು ನೀರಿನಲ್ಲಿ ಕಲಸಿ, ಅದೇ ಪುಡಿಯನ್ನು ಪುನಃ ಹಾಲಾಗಿ ಮಾಡಿಕೊಳ್ಳುತ್ತಾರೆ. ಈ ಹಾಲು ತಾಜಾ ಹಾಲಿನಷ್ಟು ರುಚಿಕರವಾಗಿರದಿದ್ದರೂ, ಇದು ಸಹ ಪುಷ್ಟಿಕರವಾದ ಆಹಾರವಾಗಿ ಕಾರ್ಯನಡಿಸುತ್ತದೆ.
[ಪುಟ 12 ರಲ್ಲಿರುವ ಚೌಕ/ಚಿತ್ರಗಳು]
ಪ್ಯಾಸ್ಟರ್ ಸಂಸ್ಕರಣೆ ಹಾಗೂ ಏಕರೂಪಗೊಳಿಸುವಿಕೆ ಅಂದರೇನು?
ಫ್ರೆಂಚ್ ವಿಜ್ಞಾನಿಯಾಗಿದ್ದ ಲೂಯಿ ಪ್ಯಾಸ್ಟರ್ ಹಾಲು ಕೆಡದಂತೆ ನೋಡಿಕೊಳ್ಳುವ ಒಂದು ವಿಧಾನವನ್ನು ಕಂಡುಹಿಡಿದನು, ಮತ್ತು ಇದಕ್ಕೆ ಪ್ಯಾಸ್ಟರ್ ಸಂಸ್ಕರಣೆ ಎಂದು ಹೆಸರು ಕೊಡಲ್ಪಟ್ಟಿತು. ಈ ವಿಧಾನದಲ್ಲಿ, ಒಂದು ನಿರ್ದಿಷ್ಟ ಉಷ್ಣಾಂಶದ ವರೆಗೆ ಹಾಲನ್ನು ಕಾಯಿಸಿ, ಅನಂತರ ಅದನ್ನು ಬೇಗನೆ ತಣ್ಣಗೆ ಮಾಡಲಾಗುವುದು. ಹೀಗೆ ಮಾಡುವುದರಿಂದ ಅವುಗಳಲ್ಲಿರುವ ಹಾನಿಕರ ಬ್ಯಾಕ್ಟೀರಿಯಗಳು ಸಾಯುತ್ತವೆ, ಮತ್ತು ಕೆಲವು ದಿನಗಳ ವರೆಗೆ ಹಾಲು ಕೆಡುವುದಿಲ್ಲ. ಆದರೂ, ಈ ವಿಧಾನದಲ್ಲಿ ಎಲ್ಲ ಬ್ಯಾಕ್ಟೀರಿಯಗಳು ಸಾಯುವುದಿಲ್ಲ, ಆದುದರಿಂದ ಹಾಲಿನ ಉತ್ಪನ್ನಗಳು ಸಹ ಕೆಲವೇ ದಿನ ಕೆಡದೆ ಉಳಿಯುತ್ತವೆ. ತುಂಬ ಚೆನ್ನಾಗಿ ಪ್ಯಾಸ್ಟರ್ ಸಂಸ್ಕರಣೆ ಮಾಡಲ್ಪಟ್ಟ ಹಾಲನ್ನು, ಫ್ರಿಜ್ನಲ್ಲಿ ಸರಿಯಾದ ಶೀತಲ ಮಟ್ಟದಲ್ಲಿ ಇಡುವುದಾದರೆ, ಅದು ಸುಮಾರು 14 ದಿನಗಳ ವರೆಗೆ ಕೆಡದೆ ಉಳಿಯಬಲ್ಲದು.
ಏಕರೂಪಗೊಳಿಸುವಿಕೆಯು, ಹಾಲಿನಲ್ಲಿರುವ ಕೊಬ್ಬು ಅಥವಾ ಕೆನೆಯ ಕಣಗಳ ಸ್ವರೂಪವನ್ನು ಬದಲಾಯಿಸುತ್ತದೆ. ಇದರಿಂದಾಗಿ ಕೊಬ್ಬಿನ ಕಣಗಳು ಹಾಲಿನ ಮೇಲೆ ಬಂದು, ಕೆನೆಯಾಗಿ ನಿಲ್ಲುವುದಿಲ್ಲ. ಏಕರೂಪಕ್ಕೆ ತರುವ ವಸ್ತುಗಳು, ಕೊಬ್ಬಿನ ಕಣಗಳನ್ನು ದ್ರವ ರೂಪದಲ್ಲಿಯೇ ಉಳಿಯುವಂತಹ ಚಿಕ್ಕ ಪ್ರತ್ಯೇಕ ಘಟಕಗಳನ್ನಾಗಿ ಮಾಡುತ್ತವೆ, ಇದರಿಂದ ಹಾಲು ಪುಷ್ಟಿಕರವಾಗಿ, ಏಕರೂಪದ ಸಾಂದ್ರತೆಯುಳ್ಳದ್ದಾಗಿ, ಗಟ್ಟಿಯಾಗಿಯೂ ಇರುತ್ತದೆ.
[ಕೃಪೆ]
By courtesy of U.S. National Library of Medicine
[ಪುಟ 13 ರಲ್ಲಿರುವ ಚಿತ್ರ]
ಅನೇಕ ಉಪ್ಪರಿಗೆಗಳುಳ್ಳ ಈ ಸ್ಟೀಲ್ ಡ್ರೈಅರ್, ಒಂದು ತಾಸಿಗೆ ಒಂಬತ್ತು ಟನ್ಗಳಿಗಿಂತಲೂ ಹೆಚ್ಚು ಹಾಲನ್ನು ಒಣಗಿಸಬಲ್ಲದು