ಅಧ್ಯಾಯ 13
ದೃಷ್ಟಿ ಸಂಪರ್ಕ
ನಮ್ಮ ಕಣ್ಣುಗಳು ಮನೋಭಾವಗಳನ್ನೂ ಭಾವಾವೇಶಗಳನ್ನೂ ತಿಳಿಯಪಡಿಸುತ್ತವೆ. ಅವು ಆಶ್ಚರ್ಯವನ್ನೂ ಭಯವನ್ನೂ ಸೂಚಿಸಬಹುದು. ಅವು ಸಹಾನುಭೂತಿ ಅಥವಾ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಕೆಲವೊಮ್ಮೆ, ಅವು ಸಂಶಯವನ್ನು ತೋರಿಸಬಹುದು ಅಥವಾ ದುಃಖದ ರುಜುವಾತನ್ನು ಕೊಡಬಹುದು. ಅತಿಯಾದ ಕಷ್ಟಾನುಭವಕ್ಕೊಳಗಾಗಿದ್ದ ತನ್ನ ದೇಶಬಾಂಧವರ ವಿಷಯದಲ್ಲಿ ಒಬ್ಬ ವೃದ್ಧನು ಹೇಳಿದ್ದು: “ನಾವು ಕಣ್ಣುಗಳ ಮೂಲಕ ಮಾತಾಡುತ್ತೇವೆ.”
ನಾವು ಕಣ್ಣುಗಳನ್ನು ಎಲ್ಲಿ ಕೇಂದ್ರೀಕರಿಸುತ್ತೇವೆಂಬ ಆಧಾರದ ಮೇಲೆ ಇತರರು ನಮ್ಮ ಕುರಿತು ಮತ್ತು ನಾವೇನು ಹೇಳುತ್ತೇವೊ ಅದರ ಕುರಿತು ತೀರ್ಮಾನಕ್ಕೆ ಬರಬಹುದು. ಅನೇಕ ಸಂಸ್ಕೃತಿಗಳಲ್ಲಿ, ತಮ್ಮೊಂದಿಗೆ ಸ್ನೇಹಭಾವದ ದೃಷ್ಟಿ ಸಂಪರ್ಕವನ್ನಿಟ್ಟುಕೊಳ್ಳುವವನ ಮೇಲೆ ಜನರು ಭರವಸೆಯನ್ನಿಡುತ್ತಾರೆ. ಪ್ರತಿಕೂಲವಾಗಿ, ಒಬ್ಬನು ಯಾರೊಂದಿಗೆ ಮಾತಾಡುತ್ತಿದ್ದಾನೋ ಅವನನ್ನು ನೇರವಾಗಿ ದೃಷ್ಟಿಸುವ ಬದಲು, ತನ್ನ ಪಾದಗಳನ್ನೊ ಬೇರೆ ಯಾವುದೇ ವಸ್ತುವನ್ನೋ ನೋಡುವವನ ಪ್ರಾಮಾಣಿಕತೆಯನ್ನೂ ಸಾಮರ್ಥ್ಯವನ್ನೂ ಅವರು ಸಂಶಯಿಸಬಹುದು. ಇನ್ನು ಕೆಲವು ಸಂಸ್ಕೃತಿಗಳು ತೀಕ್ಷ್ಣವಾದ ದೃಷ್ಟಿ ಸಂಪರ್ಕವನ್ನು, ಅಸಭ್ಯ, ಆಕ್ರಮಣಶೀಲ ಅಥವಾ ಪಂಥಾಹ್ವಾನದಾಯಕವಾಗಿ ಪರಿಗಣಿಸುತ್ತವೆ. ಇದು ವಿಶೇಷವಾಗಿ ಭಿನ್ನ ಲಿಂಗಜಾತಿಯವರೊಂದಿಗೆ ಅಥವಾ ಒಬ್ಬ ಮುಖಂಡನೊಂದಿಗೆ ಅಥವಾ ಒಂದು ದೊಡ್ಡ ಸ್ಥಾನದಲ್ಲಿರುವಂಥ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ ನಿಜವಾಗಿದೆ. ಮತ್ತು ಕೆಲವು ಪ್ರದೇಶಗಳಲ್ಲಿ, ಚಿಕ್ಕ ಪ್ರಾಯದ ವ್ಯಕ್ತಿಯು ತನಗಿಂತಲೂ ಹಿರಿಯನಾಗಿರುವವನನ್ನು ನೇರವಾಗಿ ನೋಡಿ ಮಾತಾಡುವುದನ್ನು ಅಗೌರವವಾದದ್ದೆಂದು ವೀಕ್ಷಿಸಲಾಗುತ್ತದೆ.
ಆದರೆ ಇದು ಅವಮಾನಕರವಾಗಿಲ್ಲದಿರುವಲ್ಲಿ, ಒಂದು ಪ್ರಧಾನ ಹೇಳಿಕೆಯನ್ನು ಮಾಡುವಾಗ ಒಬ್ಬ ವ್ಯಕ್ತಿಯನ್ನು ನೇರವಾಗಿ ದೃಷ್ಟಿಸುವುದು, ಆ ಹೇಳಿಕೆಗೆ ಹೆಚ್ಚಿನ ಒತ್ತನ್ನು ಕೊಡಬಲ್ಲದು. ಅದನ್ನು, ಭಾಷಣಕಾರನ ನಿಶ್ಚಿತಾಭಿಪ್ರಾಯದ ರುಜುವಾತಾಗಿ ವೀಕ್ಷಿಸಬಹುದು. “ಯಾರಿಗೆ ರಕ್ಷಣೆಯಾದೀತು”? ಎಂದು ಯೇಸುವಿನ ಶಿಷ್ಯರು ಅತ್ಯಾಶ್ಚರ್ಯದಿಂದ ಕೇಳಿದಾಗ, ಯೇಸು ಹೇಗೆ ಪ್ರತಿಕ್ರಿಯಿಸಿದನು ಎಂಬುದನ್ನು ಗಮನಿಸಿರಿ. “ಯೇಸು ಅವರನ್ನು ದೃಷ್ಟಿಸಿ ನೋಡಿ—ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ” ಎಂದು ಹೇಳಿದನೆಂದು ಬೈಬಲು ವರದಿಸುತ್ತದೆ. (ಓರೆ ಅಕ್ಷರಗಳು ನಮ್ಮವು.) (ಮತ್ತಾ. 19:25, 26) ಅಪೊಸ್ತಲ ಪೌಲನು ತನ್ನ ಸಭಿಕರ ಪ್ರತಿವರ್ತನೆಯನ್ನು ಚೆನ್ನಾಗಿ ಅವಲೋಕಿಸಿದನೆಂದೂ ಶಾಸ್ತ್ರವಚನಗಳು ತೋರಿಸುತ್ತವೆ. ಒಂದು ಸಂದರ್ಭದಲ್ಲಿ, ಪೌಲನು ಮಾತಾಡುತ್ತಿದ್ದಾಗ ಹುಟ್ಟುಕುಂಟನಾಗಿದ್ದವನೊಬ್ಬನು ಅಲ್ಲಿ ಹಾಜರಿದ್ದನು. ಅಪೊಸ್ತಲರ ಕೃತ್ಯಗಳು 14:9, 10 ಹೇಳುವುದು: “ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು. ಪೌಲನು ಅವನನ್ನು ಸ್ಥಿರವಾಗಿ ನೋಡಿ ವಾಸಿಯಾಗುವದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು—ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ ಎಂದು ಮಹಾಧ್ವನಿಯಿಂದ ಹೇಳಿದನು.”—ಓರೆ ಅಕ್ಷರಗಳು ನಮ್ಮವು.
ಕ್ಷೇತ್ರ ಶುಶ್ರೂಷೆಗಾಗಿ ಸಲಹೆಗಳು. ನೀವು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ, ಜನರನ್ನು ಸಮೀಪಿಸುವುದರಲ್ಲಿ ಸ್ನೇಹಪರರೂ ಹಾರ್ದಿಕ ಭಾವವುಳ್ಳವರೂ ಆಗಿರಿ. ಸೂಕ್ತವಾಗಿರುವಲ್ಲಿ, ಸಂಭಾಷಣೆಯನ್ನು ಆರಂಭಿಸಲಿಕ್ಕಾಗಿ ಪರಸ್ಪರ ಆಸಕ್ತಿಯಿರುವ ಒಂದು ವಿಷಯದ ಕುರಿತು ಆಲೋಚನಾ ಪ್ರೇರಕ ಪ್ರಶ್ನೆಗಳನ್ನು ಕೇಳಿರಿ. ಹೀಗೆ ಮಾಡುವಾಗ, ನೀವು ದೃಷ್ಟಿ ಸಂಪರ್ಕವನ್ನು ಮಾಡಲು ಪ್ರಯತ್ನಿಸಿರಿ ಅಥವಾ ಕಡಿಮೆಪಕ್ಷ ಆ ವ್ಯಕ್ತಿಯ ಮುಖವನ್ನು ಗೌರವಪೂರ್ಣವಾದ ರೀತಿಯಲ್ಲಿ ಮತ್ತು ದಯಾಭಾವದಿಂದ ನೋಡಿರಿ. ಆಂತರಿಕ ಹರ್ಷವನ್ನು ತಿಳಿಯಪಡಿಸುವಂಥ ಕಣ್ಣುಗಳುಳ್ಳ ಒಬ್ಬನ ಮುಖದ ಮೇಲೆ ತೋರಿಬರುವ ನಸುನಗೆಯು ತುಂಬ ಆಕರ್ಷಣೀಯವಾಗಿರುತ್ತದೆ. ಅಂತಹ ಮುಖಭಾವವು ಆ ವ್ಯಕ್ತಿಗೆ ನೀವು ಎಂತಹ ವ್ಯಕ್ತಿಯಾಗಿದ್ದೀರೆಂಬುದರ ಬಗ್ಗೆ ಹೆಚ್ಚನ್ನು ತಿಳಿಸಿ, ನೀವು ಮಾತಾಡುವಾಗ ಅವನು ಹೆಚ್ಚು ಹಾಯಾಗಿರುವಂತೆ ಸಹಾಯಮಾಡುವುದು.
ಒಬ್ಬ ವ್ಯಕ್ತಿಯ ಕಣ್ಣಿನಲ್ಲಿ ವ್ಯಕ್ತವಾಗುವಂಥ ಭಾವನೆಯನ್ನು ಸೂಕ್ತವಾಗಿರುವಾಗಲೆಲ್ಲಾ ಗಮನಿಸುವುದು, ಒಂದು ಸನ್ನಿವೇಶವನ್ನು ಹೇಗೆ ನಿಭಾಯಿಸುವುದೆಂಬುದಕ್ಕೆ ನಿಮಗೆ ಸೂಚನೆಗಳನ್ನು ಕೊಡಬಹುದು. ಒಬ್ಬನು ಸಿಟ್ಟುಗೊಂಡಿರುವಲ್ಲಿ ಅಥವಾ ಅವನಿಗೆ ನಿಜವಾಗಿಯೂ ಆಸಕ್ತಿ ಇಲ್ಲದಿರುವಲ್ಲಿ, ನೀವು ಅದನ್ನು ನೋಡಲು ಶಕ್ತರಾಗಿರಬಹುದು. ಅವನಿಗೆ ನೀವು ಹೇಳುವುದು ಅರ್ಥವಾಗದಿರುವಲ್ಲಿ, ಅದು ನಿಮಗೆ ತಿಳಿದುಬರಬಹುದು. ಅವನು ತಾಳ್ಮೆಗೆಡುತ್ತಿರುವುದಾದರೆ, ನೀವು ಸಾಮಾನ್ಯವಾಗಿ ಅದನ್ನು ತಿಳಿಯಶಕ್ತರಾಗುವಿರಿ. ಅವನಿಗೆ ತುಂಬ ಆಸಕ್ತಿಯಿರುವಲ್ಲಿ, ಅದೂ ಸ್ಪಷ್ಟವಾಗುವುದು. ಅವನ ಕಣ್ಣುಗಳಲ್ಲಿರುವ ಭಾವನೆಯು, ನಿಮ್ಮ ವೇಗವನ್ನು ಹೊಂದಿಸಿಕೊಳ್ಳಲು, ಅವನನ್ನು ಸಂಭಾಷಣೆಯಲ್ಲಿ ಒಳಗೂಡಿಸಲಿಕ್ಕಾಗಿ ಹೆಚ್ಚಿನ ಪ್ರಯತ್ನವನ್ನು ಮಾಡಲು, ಚರ್ಚೆಯನ್ನು ಮುಗಿಸಲು, ಅಥವಾ ಸಾಧ್ಯವಿರುವಲ್ಲಿ, ಬೈಬಲ್ ಅಧ್ಯಯನವನ್ನು ನಡೆಸುವ ವಿಧವನ್ನು ಪ್ರತ್ಯಕ್ಷಾಭಿನಯದಿಂದ ತೋರಿಸಲು ನಿಮ್ಮನ್ನು ಎಚ್ಚರಿಸಬಹುದು.
ನೀವು ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಭಾಗವಹಿಸುತ್ತಿರಲಿ ಇಲ್ಲವೆ ಮನೆ ಬೈಬಲ್ ಅಧ್ಯಯನವನ್ನು ನಡೆಸುತ್ತಿರಲಿ, ನೀವು ಯಾರೊಂದಿಗೆ ಮಾತಾಡುತ್ತಿದ್ದೀರೋ ಅವರೊಂದಿಗೆ ಗೌರವಾರ್ಹವಾದ ರೀತಿಯಲ್ಲಿ ದೃಷ್ಟಿ ಸಂಪರ್ಕವನ್ನಿಟ್ಟುಕೊಳ್ಳಲು ಪ್ರಯತ್ನಿಸಿರಿ. ಆದರೂ, ಅವರನ್ನು ಎವೆಯಿಕ್ಕದೆ ದುರುಗುಟ್ಟಿ ನೋಡಬೇಡಿ, ಏಕೆಂದರೆ ಇದು ಅವರನ್ನು ಪೇಚಾಟಕ್ಕೊಳಪಡಿಸಬಹುದು. (2 ಅರ. 8:11) ಬದಲಾಗಿ ಸ್ವಾಭಾವಿಕವಾದ, ಸ್ನೇಹಪರತೆಯಿಂದ ಆ ವ್ಯಕ್ತಿಯ ಮುಖವನ್ನು ಪದೇ ಪದೇ ನೋಡುತ್ತಿರಿ. ಅನೇಕ ದೇಶಗಳಲ್ಲಿ, ಇದು ಯಥಾರ್ಥವಾದ ಆಸಕ್ತಿಯ ಭಾವನೆಯನ್ನು ತೋರಿಸುತ್ತದೆ. ಹೌದು, ನೀವು ಬೈಬಲಿನಿಂದ ಇಲ್ಲವೆ ಇತರ ಸಾಹಿತ್ಯಗಳಿಂದ ಓದುವಾಗ, ನಿಮ್ಮ ಕಣ್ಣು ಮುದ್ರಿತ ಪುಟದ ಮೇಲಿರುತ್ತದೆ. ಆದರೆ ಒಂದು ವಿಷಯವನ್ನು ಒತ್ತಿಹೇಳುವಾಗ, ನೀವು ಆ ವ್ಯಕ್ತಿಯನ್ನು ನೇರವಾಗಿ, ಆದರೆ ಸಂಕ್ಷಿಪ್ತವಾಗಿ ನೋಡಲು ಬಯಸಬಹುದು. ನೀವು ಓದುತ್ತಿರುವಾಗ ನಡುನಡುವೆ ತಲೆಯೆತ್ತಿ ನೋಡುವುದಾದರೆ, ಇದು ಸಹ ನಿಮ್ಮ ವಾಚನಕ್ಕೆ ಅವನ ಪ್ರತಿಕ್ರಿಯೆಯನ್ನು ನೀವು ಅವಲೋಕಿಸಲು ಶಕ್ತರನ್ನಾಗಿ ಮಾಡುವುದು.
ಆರಂಭದಲ್ಲಿ, ಲಜ್ಜೆಯಿಂದಾಗಿ ನಿಮಗೆ ದೃಷ್ಟಿ ಸಂಪರ್ಕ ಮಾಡುವುದು ಕಷ್ಟಕರವಾಗಿರುವಲ್ಲಿ, ಪ್ರಯತ್ನವನ್ನು ಬಿಟ್ಟುಬಿಡಬೇಡಿರಿ. ರೂಢಿಮಾಡಿಕೊಳ್ಳುವಲ್ಲಿ, ತಕ್ಕದಾದ ದೃಷ್ಟಿ ಸಂಪರ್ಕವು ಸ್ವಾಭಾವಿಕವಾಗಿ ಪರಿಣಮಿಸುವುದು ಮತ್ತು ಇತರರೊಂದಿಗೆ ಸಂವಾದಿಸುವ ನಿಮ್ಮ ಪರಿಣಾಮಕಾರಿತ್ವವನ್ನು ಅದು ಇನ್ನಷ್ಟು ವರ್ಧಿಸುವುದು.
ಒಂದು ಭಾಷಣವನ್ನು ಕೊಡುವಾಗ. ಯೇಸು ತನ್ನ ಪರ್ವತ ಪ್ರಸಂಗವನ್ನು ಆರಂಭಿಸುವುದಕ್ಕೆ ಮೊದಲು, “ಆತನು ತನ್ನ ಶಿಷ್ಯರ ಕಡೆಗೆ ಕಣ್ಣೆತ್ತಿನೋಡಿ”ದನೆಂದು ಬೈಬಲು ಹೇಳುತ್ತದೆ. (ಲೂಕ 6:20) ಅವನ ಮಾದರಿಯಿಂದ ಪಾಠವನ್ನು ಕಲಿಯಿರಿ. ನೀವು ಒಂದು ಗುಂಪಿನ ಮುಂದೆ ಮಾತಾಡಲಿರುವಾಗ, ಅವರಿಗೆ ಮುಖಮಾಡಿ ನಿಂತು, ಮಾತಾಡತೊಡಗುವ ಮೊದಲು ಕೆಲವು ಸೆಕೆಂಡುಗಳ ವರೆಗೆ ನಿಲ್ಲಿರಿ. ಅನೇಕ ಕಡೆಗಳಲ್ಲಿ, ಸಭೆಯಲ್ಲಿ ಕೆಲವರೊಂದಿಗೆ ದೃಷ್ಟಿ ಸಂಪರ್ಕವನ್ನಿಟ್ಟುಕೊಳ್ಳುವುದು ಇದರಲ್ಲಿ ಸೇರಿರುತ್ತದೆ. ಈ ಸಂಕ್ಷಿಪ್ತ ವಿಳಂಬವು ನಿಮ್ಮ ಆರಂಭದ ಹೆದರಿಕೆಯನ್ನು ಜಯಿಸಲು ನಿಮಗೆ ಸಹಾಯಮಾಡಬಹುದು. ಇದು ಸಭಿಕರು ಸಹ ನಿಮ್ಮ ಮುಖವು ತೋರಿಸುವ ಮನೋಭಾವ ಅಥವಾ ಭಾವಾವೇಶಕ್ಕೆ ತಮ್ಮನ್ನು ಹೊಂದಿಸಿಕೊಳ್ಳುವಂತೆ ಸಹಾಯಮಾಡುವುದು. ಇದಕ್ಕೆ ಕೂಡಿಸಿ, ನಿಮ್ಮ ಈ ಕ್ರಿಯೆಯು, ಸಭಿಕರು ತಮ್ಮ ಸ್ಥಳಗಳಲ್ಲಿ ಮೌನವಾಗಿ ಕುಳಿತುಕೊಂಡು ನಿಮಗೆ ಗಮನಕೊಡಲು ಸಿದ್ಧರಾಗುವಂತೆಯೂ ಸಮಯಾವಕಾಶವನ್ನು ನೀಡುವುದು.
ನಿಮ್ಮ ಭಾಷಣದ ಸಮಯದಲ್ಲಿ, ಸಭಿಕರ ಕಡೆಗೆ ನೋಡಿರಿ. ಅವರನ್ನು ಕೇವಲ ಒಂದು ಗುಂಪಾಗಿ ನೋಡಬೇಡಿ. ಅದರಲ್ಲಿರುವ ಒಬ್ಬೊಬ್ಬ ವ್ಯಕ್ತಿಯನ್ನು ನೋಡಲು ಪ್ರಯತ್ನಿಸಿ. ಹೆಚ್ಚುಕಡಿಮೆ ಎಲ್ಲ ಸಂಸ್ಕೃತಿಗಳಲ್ಲಿ, ಒಬ್ಬ ಸಾರ್ವಜನಿಕ ಭಾಷಣಕಾರನು ಸ್ವಲ್ಪ ಮಟ್ಟಿಗಾದರೂ ದೃಷ್ಟಿ ಸಂಪರ್ಕವನ್ನು ಇಟ್ಟುಕೊಳ್ಳಬೇಕೆಂದು ನಿರೀಕ್ಷಿಸಲಾಗುತ್ತದೆ.
ನಿಮ್ಮ ಸಭಿಕರನ್ನು ನೋಡುವುದರಲ್ಲಿ, ಸಭೆಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪುನರಾವೃತ್ತವಾಗಿ ಕಣ್ಣನ್ನು ಚಲಿಸುವುದಕ್ಕಿಂತ ಹೆಚ್ಚಿನದ್ದು ಸೇರಿದೆ. ಸಭಿಕರಲ್ಲಿ ಒಬ್ಬನೊಂದಿಗೆ ಗೌರವಪೂರ್ವಕವಾದ ದೃಷ್ಟಿ ಸಂಪರ್ಕವನ್ನಿಟ್ಟು, ಸೂಕ್ತವಾಗಿರುವಲ್ಲಿ ಅವನ ಕಡೆಗೇ ನೋಡುತ್ತಾ ಒಂದು ಇಡೀ ವಾಕ್ಯವನ್ನು ಹೇಳಿರಿ. ಬಳಿಕ ಇನ್ನೊಬ್ಬನನ್ನು ನೋಡಿ, ಅವನಿಗೆ ಒಂದೆರಡು ವಾಕ್ಯಗಳನ್ನು ಹೇಳಿರಿ. ಒಬ್ಬನಿಗೆ ಮುಜುಗರವಾಗುವಷ್ಟು ಸಮಯ ಅವನನ್ನು ನೋಡುತ್ತಾ ಇರಬೇಡಿ. ಮತ್ತು ಇಡೀ ಸಭೆಯಲ್ಲಿ ಕುಳಿತಿರುವ ಕೆಲವರಿಗೆ ಮಾತ್ರ ಗಮನಕೊಡಬೇಡಿ. ಈ ರೀತಿಯಲ್ಲಿ ಇಡೀ ಸಭೆಯ ಮೇಲೆ ನಿಮ್ಮ ದೃಷ್ಟಿಯನ್ನು ಹರಿಸುತ್ತಾ ಹೋಗಿರಿ. ಆದರೆ ನೀವು ಒಬ್ಬನನ್ನು ನೋಡಿ ಮಾತಾಡುತ್ತಿರುವಾಗ, ಅವನೊಂದಿಗೆ ನಿಜವಾಗಿಯೂ ಮಾತಾಡಿರಿ ಮತ್ತು ಅವನ ಪ್ರತಿಕ್ರಿಯೆಯನ್ನು ನೋಡಿರಿ, ಆ ಬಳಿಕ ಇನ್ನೊಬ್ಬನ ಕಡೆಗೆ ದೃಷ್ಟಿಯನ್ನು ಹೊರಳಿಸಿರಿ.
ನಿಮ್ಮ ಟಿಪ್ಪಣಿಯ ಮೇಲೆ ನೀವು ಕೇವಲ ಕಣ್ಣಿನ ಚಲನೆಯಿಂದ ಕ್ಷಣನೋಟ ಬೀರಸಾಧ್ಯವಾಗುವಂತೆ, ಅದನ್ನು ಭಾಷಣಕಾರನ ಸ್ಟ್ಯಾಂಡಿನ ಮೇಲೆಯೊ, ನಿಮ್ಮ ಕೈಯಲ್ಲಿಯೊ ಅಥವಾ ನಿಮ್ಮ ಬೈಬಲಿನಲ್ಲಿಯೊ ಇಡಿರಿ. ಟಿಪ್ಪಣಿಯನ್ನು ನೋಡಲಿಕ್ಕಾಗಿ ಇಡೀ ತಲೆಯನ್ನು ಚಲಿಸುವುದು ಅವಶ್ಯವಾದರೆ, ಸಭಾ ಸಂಪರ್ಕಕ್ಕೆ ಧಕ್ಕೆ ಬರುವುದಂತೂ ಖಂಡಿತ. ನೀವು ಎಷ್ಟು ಬಾರಿ ನಿಮ್ಮ ಟಿಪ್ಪಣಿಯನ್ನು ನೋಡುತ್ತೀರಿ ಮತ್ತು ಯಾವಾಗ ನೋಡುತ್ತೀರಿ ಎಂಬುದನ್ನು ಪರಿಗಣಿಸಬೇಕು. ನಿಮ್ಮ ಭಾಷಣವನ್ನು ಪರಮಾವಧಿಗೇರಿಸುತ್ತಿರುವಾಗ ನೀವು ಟಿಪ್ಪಣಿಯನ್ನು ನೋಡುತ್ತಿರುವುದಾದರೆ, ನಿಮ್ಮ ಸಭಿಕರ ಪ್ರತಿಕ್ರಿಯೆಯನ್ನು ನೋಡಲು ನೀವು ವಿಫಲರಾಗುತ್ತೀರಿ ಮಾತ್ರವಲ್ಲ, ನಿಮ್ಮ ಭಾಷಣವು ಸ್ವಲ್ಪ ಮಟ್ಟಿಗೆ ಅದರ ಪ್ರಭಾವವನ್ನೂ ಕಳೆದುಕೊಳ್ಳುವುದು. ಅದೇ ರೀತಿಯಲ್ಲಿ, ನಿಮ್ಮ ಟಿಪ್ಪಣಿಯನ್ನು ನೀವು ಸತತವಾಗಿ ನೋಡುತ್ತಿರುವಲ್ಲಿ, ಸಭಾ ಸಂಪರ್ಕವನ್ನು ಕಳೆದುಕೊಳ್ಳುವಿರಿ.
ನೀವು ಇನ್ನೊಬ್ಬನಿಗೆ ಚೆಂಡನ್ನು ಎಸೆಯುವುದಾದರೆ, ಅದನ್ನು ಅವನು ಹಿಡಿಯುತ್ತಾನೊ ಇಲ್ಲವೊ ಎಂಬುದನ್ನು ನೋಡಲು ಪ್ರಯತ್ನಿಸುತ್ತೀರಿ. ನಿಮ್ಮ ಭಾಷಣದಲ್ಲಿರುವ ಪ್ರತಿಯೊಂದು ವಿಚಾರವು, ನಿಮ್ಮ ಸಭೆಗೆ ನೀವು ಎಸೆಯುವ ಪ್ರತ್ಯೇಕ “ಎಸೆತ” ಆಗಿದೆ. ಅವರು ಅದನ್ನು “ಹಿಡಿದಿದ್ದಾರೊ” ಎಂಬುದು ಅವರ ಪ್ರತಿಕ್ರಿಯೆಯಿಂದ, ಅಂದರೆ ಅವರು ಹೌದೆಂದು ತಲೆ ಅಲ್ಲಾಡಿಸುವುದು, ಅವರ ನಸುನಗೆ, ಹಾಗೂ ಅವರ ಲಕ್ಷ್ಯಭರಿತ ನೋಟದಿಂದ ಸೂಚಿಸಲ್ಪಡಬಹುದು. ನೀವು ಸರಿಯಾದ ದೃಷ್ಟಿ ಸಂಪರ್ಕವನ್ನು ಇಟ್ಟುಕೊಳ್ಳುವಲ್ಲಿ, ನಿಮ್ಮ ವಿಚಾರಗಳು “ಹಿಡಿಯಲ್ಪಡುತ್ತಿವೆ” ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮಗೆ ಸಹಾಯವಾಗುವುದು.
ಸಭೆಯ ಮುಂದೆ ಓದುವ ನೇಮಕ ನಿಮಗೆ ಸಿಕ್ಕಿರುವುದಾದರೆ, ಓದುವ ಸಮಯದಲ್ಲಿ ನೀವು ಸಭಿಕರನ್ನು ನೋಡಲು ಪ್ರಯತ್ನಿಸಬೇಕೊ? ನಿಮ್ಮ ಬೈಬಲ್ ವಾಚನವನ್ನು ಸಭಿಕರು ಅನುಸರಿಸುತ್ತಿರುವುದಾದರೆ, ನೀವು ಅವರನ್ನು ನೋಡುತ್ತೀರೊ ಇಲ್ಲವೊ ಎಂಬುದು ಅವರಲ್ಲಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಆದರೆ ಸಭಿಕರನ್ನು ನೋಡುವುದು ನಿಮ್ಮ ವಾಚನವನ್ನು ಉತ್ತೇಜಿಸಬಲ್ಲದು, ಏಕೆಂದರೆ ಅದು ಅವರ ಪ್ರತಿಕ್ರಿಯೆಯ ವಿಷಯದಲ್ಲಿ ನೀವು ತೀರ ಎಚ್ಚತ್ತಿರುವಂತೆ ಮಾಡುವುದು. ಮತ್ತು ಸಭಿಕರಲ್ಲಿ ಕೆಲವರು ಬೈಬಲನ್ನು ಉಪಯೋಗಿಸದೇ ಇದ್ದು, ಅವರ ಮನಸ್ಸು ಅಲೆದಾಡುತ್ತಿರುವಲ್ಲಿ, ವಾಚಕನೊಂದಿಗೆ ಅವರಿಗಾಗುವ ದೃಷ್ಟಿ ಸಂಪರ್ಕವು ಪುನಃ ಓದುವ ವಿಷಯಭಾಗದ ಕಡೆಗೆ ಗಮನ ಹರಿಸುವಂತೆ ಅವರಿಗೆ ಸಹಾಯಮಾಡಬಹುದು. ಆದರೆ ಸಂಕ್ಷಿಪ್ತವಾಗಿ ಮಾತ್ರ ಹಾಗೆ ಮೇಲೆ ನೋಡಲು ನಿಮಗೆ ಸಾಧ್ಯವಾಗುವುದು. ನೀವು ಓದುವಾಗ ತಡವರಿಸುವಂಥ ರೀತಿಯಲ್ಲಿ ಅದನ್ನು ಮಾಡಬಾರದು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಗಲ್ಲವನ್ನು ಎದೆಯ ಕಡೆಗೆ ಬಗ್ಗಿಸಿ ಓದುವ ಬದಲು ನಿಮ್ಮ ಬೈಬಲನ್ನು ಕೈಯಲ್ಲಿ ಹಿಡಿದುಕೊಂಡು ತಲೆಯೆತ್ತಿ ಓದುವುದೇ ಉತ್ತಮ.
ಕೆಲವೊಮ್ಮೆ, ಅಧಿವೇಶನದ ಭಾಷಣವೊಂದನ್ನು ಹಸ್ತಪ್ರತಿಯಿಂದ ಓದಿ ಕೊಡುವಂತೆ ಹಿರಿಯರನ್ನು ಆಮಂತ್ರಿಸಲಾಗುತ್ತದೆ. ಇದನ್ನು ಫಲಕಾರಿಯಾಗಿ ಮಾಡಲು ಅನುಭವ, ಜಾಗರೂಕ ತಯಾರಿ ಮತ್ತು ತುಂಬ ಪ್ರ್ಯಾಕ್ಟಿಸ್ ಮಾಡುವ ಅಗತ್ಯವಿದೆ. ಹಸ್ತಪ್ರತಿಯ ಉಪಯೋಗವು ಸಭಿಕರೊಂದಿಗೆ ಮಾಡುವ ದೃಷ್ಟಿ ಸಂಪರ್ಕವನ್ನು ಮಿತಗೊಳಿಸುತ್ತದೆ ಎಂಬುದು ನಿಜ. ಆದರೆ ಭಾಷಣಕಾರನು ಚೆನ್ನಾಗಿ ತಯಾರಿ ಮಾಡಿರುವುದಾದರೆ, ಪುಟದ ಮೇಲೆ ತಾನು ಎಲ್ಲಿ ಓದುತ್ತಿದ್ದೇನೆ ಎಂಬುದನ್ನು ಮರೆಯದೆ, ಆಗಾಗ ಸಭಿಕರನ್ನು ನೋಡಲು ಶಕ್ತನಾಗಿರಬೇಕು. ಅವನು ಹಾಗೆ ಮಾಡುವುದರಿಂದ, ಸಭಿಕರ ಗಮನವನ್ನು ಭಾಷಣದ ಮೇಲೆ ಇಡುವಂತೆ ಅವರಿಗೆ ಸಹಾಯ ದೊರಕುವುದು ಮತ್ತು ಕೊಡಲ್ಪಡುತ್ತಿರುವ ಪ್ರಾಮುಖ್ಯ ಆತ್ಮಿಕ ಮಾಹಿತಿಯಿಂದ ಅವರು ಪೂರ್ಣ ಪ್ರಯೋಜನ ಪಡೆಯುವಂತೆ ಮಾಡುವುದು.