ಬೈಬಲ್ ಪುಸ್ತಕ ನಂಬರ್ 17—ಎಸ್ತೇರಳು
ಲೇಖಕ: ಮೊರ್ದೆಕೈ
ಬರೆಯಲ್ಪಟ್ಟ ಸ್ಥಳಗಳು: ಶೂಷನ್, ಏಲಾಮ್
ಬರೆದು ಮುಗಿಸಿದ್ದು: ಸುಮಾರು ಸಾ.ಶ.ಪೂ. 475
ಆವರಿಸಲ್ಪಟ್ಟ ಕಾಲ: ಸಾ.ಶ.ಪೂ. 493-ಸುಮಾರು ಸಾ.ಶ.ಪೂ. 475
ಸರಳ ರೀತಿಯಲ್ಲಿ ಹೇಳಬೇಕಾದರೆ, ಇದು ಪಾರಸಿಯ ಅರಸನಾದ—ಕೆಲವರು ಸರ್ಕ್ಸೀಸ್ I ಎಂದು ಅಭಿಪ್ರಯಿಸುವ ಅಹಷ್ವೇರೋಷನ ಕಥೆ. ಇವನ ಅವಿಧೇಯ ಪತ್ನಿ ವಷ್ಟಿಯ ಸ್ಥಾನವನ್ನು ಮೊರ್ದೆಕೈಯ ಚಿಕ್ಕಪ್ಪನ ಮಗಳಾಗಿದ್ದ ಎಸ್ತೇರಳೆಂಬ ಯೆಹೂದ್ಯೆಗೆ ಕೊಡಲಾಗುತ್ತದೆ. ಅಗಾಗನ ವಂಶದ ಹಾಮಾನನು ಮೊರ್ದೆಕೈಯನ್ನು ಮತ್ತು ಎಲ್ಲ ಯೆಹೂದ್ಯರನ್ನು ವಧಿಸಲು ಒಳಸಂಚು ಮಾಡುತ್ತಾನೆ, ಆದರೆ ಅವನನ್ನು ಅವನೇ ಸಿದ್ಧಮಾಡಿದ ಗಲ್ಲುಮರಕ್ಕೆ ನೇತುಹಾಕಲಾಗುತ್ತದೆ. ಅದೇ ಸಮಯದಲ್ಲಿ ಮೊರ್ದೆಕೈಯನ್ನು ಪ್ರಧಾನಮಂತ್ರಿಯಾಗಿ ಮಾಡಲಾಗುತ್ತದೆ ಮತ್ತು ಯೆಹೂದ್ಯರು ಪಾರಾಗುತ್ತಾರೆ.
2 ಎಸ್ತೇರ ಪುಸ್ತಕವು ಪ್ರೇರಿತವೂ ಅಲ್ಲ, ಪ್ರಯೋಜನಕರವೂ ಅಲ್ಲ ಬದಲಿಗೆ ಅದೊಂದು ಸೊಗಸಾದ ದಂತಕಥೆಯಷ್ಟೇ ಎಂದು ಹೇಳಬಯಸುವವರು ಇದ್ದಾರೆಂಬುದು ನಿಶ್ಚಯ. ಆ ಪುಸ್ತಕದಲ್ಲಿ ದೇವರ ಹೆಸರು ಇಲ್ಲದೆ ಇರುವುದರಿಂದ ಅವರು ಹಾಗೆಂದು ವಾದಿಸುತ್ತಾರೆ. ದೇವರ ಹೆಸರು ಅದರಲ್ಲಿ ನೇರವಾಗಿ ತಿಳಿಸಲ್ಪಟ್ಟಿಲ್ಲ ಎಂಬುದು ಸತ್ಯವಾದರೂ, ಹೀಬ್ರು ಗ್ರಂಥಪಾಠದಲ್ಲಿ ಚತುರಕ್ಷರಿಯ (ಟೆಟ್ರಗ್ರ್ಯಾಮಟಾನ್ನ) ಒಂದು ಪದ್ಯಬಂಧವಿದೆ, ಅಂದರೆ ಅನುಕ್ರಮವಾಗಿ ಬರುವ ನಾಲ್ಕು ಪದಗಳಲ್ಲಿ ಪ್ರಥಮಾಕ್ಷರಗಳು YHWH (ಹೀಬ್ರು, יהוה) ಆಗಿವೆ ಮತ್ತು ಇದು ಯೆಹೋವನ ನಾಮದ ಸಂಕ್ಷಿಪ್ತ ರೂಪವಾಗಿದೆ. ಈ ರೀತಿಯಲ್ಲಿ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ತೋರಿಬರುತ್ತವೆ. ಈ ಪ್ರಥಮಾಕ್ಷರಗಳನ್ನು ಕಡಮೆಪಕ್ಷ ಮೂರು ಪುರಾತನ ಹೀಬ್ರು ಗ್ರಂಥಪಾಠಗಳಲ್ಲಿ ವಿಶೇಷವಾಗಿ ಎದ್ದುಕಾಣುವಂತೆ ಮಾಡಲಾಗಿದೆ ಮಾತ್ರವಲ್ಲ, ಮ್ಯಾಸರ ಎಂಬ ಹೀಬ್ರು ಗ್ರಂಥಪಾಠದ ಟಿಪ್ಪಣಿಯಲ್ಲಿ ಕೆಂಪು ಅಕ್ಷರಗಳಿಂದ ಗುರುತಿಸಲಾಗಿದೆ ಕೂಡ. ಇದಲ್ಲದೆ, ಎಸ್ತೇರಳು 7:5ರಲ್ಲಿ, “ನಾನು ಆಗಿ ಪರಿಣಮಿಸುವೆನು” ಎಂಬ ದೈವಿಕ ಪ್ರಕಟನೆಯ ಮೇಲೆ ಒಂದು ಪದ್ಯಬಂಧ ಇದೆಯೆಂದೂ ವ್ಯಕ್ತವಾಗುತ್ತದೆ.—ನೂತನ ಲೋಕ ಭಾಷಾಂತರದಲ್ಲಿ ಎಸ್ತೇರಳು 1:20; 5:4, 13; 7:7 ಹಾಗೂ 7:5ರ ಪಾದಟಿಪ್ಪಣಿಗಳನ್ನು ನೋಡಿ.
3 ಮೊರ್ದೆಕೈ ಯೆಹೋವನ ಧರ್ಮಶಾಸ್ತ್ರವನ್ನು ಅಂಗೀಕರಿಸಿದನು ಮಾತ್ರವಲ್ಲ, ಅದಕ್ಕೆ ವಿಧೇಯನೂ ಆದನೆಂದು ಇಡೀ ದಾಖಲೆಯಲ್ಲಿ ಎತ್ತಿತೋರಿಸಲ್ಪಟ್ಟಿದೆ. ಅವನು ಪ್ರಾಯಶಃ ಅಮಾಲೇಕ್ಯನಾಗಿದ್ದ ಒಬ್ಬ ಮನುಷ್ಯನಿಗೆ ಅಡ್ಡಬಿದ್ದು ಸನ್ಮಾನಿಸಲು ನಿರಾಕರಿಸಿದನು; ದೇವರು ಅಮಾಲೇಕ್ಯರನ್ನು ನಾಶಕ್ಕಾಗಿ ಗುರುತಿಸಿಟ್ಟಿದ್ದನು. (ಎಸ್ತೇ. 3:1, 5; ಧರ್ಮೋ. 25:19; 1 ಸಮು. 15:3) ಎಸ್ತೇರಳು 4:14ರಲ್ಲಿ ತಿಳಿಸಲ್ಪಟ್ಟಿರುವ ಮೊರ್ದೆಕೈಯ ಮಾತುಗಳು, ಅವನು ಯೆಹೋವನ ಕೈಯಿಂದ ವಿಮೋಚನೆಯನ್ನು ಎದುರುನೋಡುತ್ತಿದ್ದನೆಂದೂ ಆಗ ನಡೆಯುತ್ತಿದ್ದ ಘಟನೆಗಳಲ್ಲಿ ದೈವಿಕ ನಿರ್ದೇಶನವಿದೆ ಎಂಬ ನಂಬಿಕೆ ಅವನಿಗಿತ್ತೆಂದೂ ಸೂಚಿಸುತ್ತವೆ. ಅರಸನ ಬಳಿಗೆ ಹೋಗುವ ಮೊದಲು ಎಸ್ತೇರಳು ಮತ್ತು ಇತರ ಯೆಹೂದ್ಯರು ಮೂರು ದಿನಗಳ ವರೆಗೆ ಮಾಡಿದ ಉಪವಾಸವು ದೇವರ ಮೇಲೆ ಅವರು ಹೊಂದಿಕೊಂಡಿದ್ದನ್ನು ತೋರಿಸುತ್ತದೆ. (ಎಸ್ತೇ. 4:16) ಎಸ್ತೇರಳು ಅಂತಃಪುರಪಾಲಕನಾಗಿದ್ದ ಹೇಗೈಯ ದಯೆಗೆ ಪಾತ್ರಳಾದುದು, ಮತ್ತು ಅರಸನು ನಿದ್ರಾರಹಿತನಾಗಿದ್ದ ರಾತ್ರಿ ಅಧಿಕೃತ ದಾಖಲೆಗಳನ್ನು ತರಲು ಹೇಳಿ, ಮೊರ್ದೆಕೈಯು ಹಿಂದೊಮ್ಮೆ ಮಾಡಿದ್ದ ಸುಕೃತ್ಯಕ್ಕಾಗಿ ಸನ್ಮಾನಿಸಲ್ಪಟ್ಟಿರಲಿಲ್ಲವೆಂದು ಕಂಡುಹಿಡಿದಂಥದ್ದು ದೇವರು ಸಂಗತಿಗಳನ್ನು ಕುಶಲ ರೀತಿಯಲ್ಲಿ ನಿರ್ದೇಶಿಸುತ್ತಿದ್ದನೆಂಬುದನ್ನು ತೋರಿಸಿದವು. (ಎಸ್ತೇ. 2:8, 9; 6:1-3; ಇದಕ್ಕೆ ಜ್ಞಾನೋಕ್ತಿ 21:1 ಹೋಲಿಸಿ.) “ಉಪವಾಸಪ್ರಲಾಪದಿನಗಳ” ವಿಷಯದಲ್ಲಿ ಮಾತಾಡುವಾಗ ಅದು ಪ್ರಾರ್ಥನೆಯನ್ನು ಸೂಚಿಸುತ್ತದೆಂಬುದು ನಿಸ್ಸಂದೇಹ.—ಎಸ್ತೇ. 9:31.
4 ಈ ದಾಖಲೆ ಅಧಿಕೃತವೂ ವಾಸ್ತವಿಕವೂ ಆಗಿದೆಯೆಂಬುದನ್ನು ಅನೇಕ ವಾಸ್ತವಾಂಶಗಳು ಸಾಬೀತುಪಡಿಸುತ್ತವೆ. ಯೆಹೂದಿ ಜನರು ಆ ಪುಸ್ತಕವನ್ನು ಅಂಗೀಕರಿಸಿದ್ದರು ಮತ್ತು ಅದನ್ನು “ಉರುಳೆ; ಸುರುಳಿ” ಎಂಬ ಅರ್ಥವಿರುವ ಮೆಘಿಲಾ ಎಂದಷ್ಟೇ ಕರೆಯುತ್ತಿದ್ದರು. ಇದನ್ನು ಎಜ್ರನು ಹೀಬ್ರು ಪುಸ್ತಕಗಳ ಅಂಗೀಕೃತ ಪಟ್ಟಿಯಲ್ಲಿ ಸೇರಿಸಿರುವಂತೆ ತೋರುತ್ತದೆ. ಕಟ್ಟುಕಥೆಯಾಗಿರುತ್ತಿದ್ದಲ್ಲಿ ಅವನದನ್ನು ಖಂಡಿತವಾಗಿಯೂ ತಿರಸ್ಕರಿಸಿಬಿಡುತ್ತಿದ್ದನು. ಎಸ್ತೇರಳ ದಿನಗಳಲ್ಲಾದ ಆ ಮಹಾ ವಿಮೋಚನೆಯನ್ನು ಯೆಹೂದ್ಯರು ಇಂದಿನ ತನಕವೂ ಪೂರೀಮ್ ಅಥವಾ ಚೀಟುಹಾಕುವ ಹಬ್ಬದ ಮೂಲಕ ಆಚರಿಸುತ್ತಾರೆ. ಈ ಪುಸ್ತಕವು ಪಾರಸಿಯರ ನಡೆವಳಿ ಮತ್ತು ಪದ್ಧತಿಗಳನ್ನು ಸಜೀವವಾದ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ ಮತ್ತು ಇವು ಇತಿಹಾಸದ ಜ್ಞಾತ ವಾಸ್ತವಾಂಶಗಳಿಗೂ ಪ್ರಾಕ್ತನಶಾಸ್ತ್ರದ ಕಂಡುಹಿಡಿತಗಳಿಗೂ ಹೊಂದಿಕೆಯಲ್ಲಿದೆ. ದೃಷ್ಟಾಂತಕ್ಕೆ, ಪಾರಸಿಯರು ಒಬ್ಬ ವ್ಯಕ್ತಿಯನ್ನು ಹೇಗೆ ಸನ್ಮಾನಿಸುತ್ತಿದ್ದರೆಂಬುದನ್ನು ಎಸ್ತೇರ ಪುಸ್ತಕವು ನಿಷ್ಕೃಷ್ಟವಾಗಿ ವರ್ಣಿಸುತ್ತದೆ. (6:8) ಎಸ್ತೇರ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಅರಸನ ಅರಮನೆಯ ಕುರಿತಾದ ಅತಿ ಚಿಕ್ಕ ವಿವರವೂ ನಿಷ್ಕೃಷ್ಟವೆಂದು ಪ್ರಾಕ್ತನಶಾಸ್ತ್ರೀಯ ಭೂಶೋಧನೆಗಳು ತೋರಿಸಿವೆ.a—5:1, 2.
5 ಈ ನಿಷ್ಕೃಷ್ಟತೆಯನ್ನು ಆ ವೃತ್ತಾಂತದ ಇತರ ವಿಷಯಗಳಲ್ಲೂ ಗಮನಿಸಬಹುದು. ಆಸ್ಥಾನಾಧಿಕಾರಿಗಳನ್ನು ಮತ್ತು ಸೇವಕರ ಹೆಸರುಗಳನ್ನು ಜಾಗರೂಕತೆಯಿಂದ ಪಟ್ಟಿಮಾಡಲಾಗಿದೆ. ಹಾಮಾನನ ಹತ್ತು ಮಂದಿ ಪುತ್ರರ ಹೆಸರುಗಳನ್ನು ಸಹ ಕೊಡಲಾಗಿದೆ. ಮೊರ್ದೆಕೈ ಮತ್ತು ಎಸ್ತೇರಳ ವಂಶಾವಳಿಯನ್ನು ಬೆನ್ಯಾಮೀನನ ಕುಲದ ಕೀಷನ ವರೆಗೆ ಹಿಂದೆಹೋಗುತ್ತಾ ಪತ್ತೆಹಚ್ಚಲಾಗಿದೆ. (2:5-7) ಪಾರಸಿಯ ಸರಕಾರದ ಅಧಿಕೃತ ದಾಖಲೆಗಳ ಕುರಿತು ಸೂಚಿಸಿ ಮಾತಾಡಲಾಗಿದೆ. (2:23; 6:1; 10:2) ಈ ಪುಸ್ತಕದ ಭಾಷೆ ಅನಂತರದ ಹೀಬ್ರು ಆಗಿದ್ದು, ಅದರಲ್ಲಿ ಅನೇಕ ಪಾರಸಿಯ ಮತ್ತು ಅರಮಾಯ ಪದಗಳನ್ನು ಹಾಗೂ ಅಭಿವ್ಯಕ್ತಿಗಳನ್ನು ಕೂಡಿಸಲಾಗಿದೆ. ಈ ಶೈಲಿ ಪೂರ್ವಕಾಲವೃತ್ತಾಂತಗಳು, ಎಜ್ರ ಮತ್ತು ನೆಹೆಮೀಯ ಪುಸ್ತಕಗಳ ಶೈಲಿಗೆ ಸದೃಶವಾಗಿದೆ. ಹೀಗೆ ಅದು ಬರೆಯಲ್ಪಟ್ಟಿದ್ದ ಸಮಯಾವಧಿಗೆ ಸಂಪೂರ್ಣವಾಗಿ ಹೊಂದಿಕೆಯಲ್ಲಿದೆ.
6 ಎಸ್ತೇರ ಪುಸ್ತಕದ ಘಟನೆಗಳು ಬಲಾಢ್ಯವಾದ ಪಾರಸಿಯ ಸಾಮ್ರಾಜ್ಯವು ಪರಮಾವಧಿಗೇರಿದ್ದ ದಿನಗಳಲ್ಲಿ ನಡೆದವೆಂದೂ ಅವು ಅಹಷ್ವೇರೋಷನ (ಸರ್ಕ್ಸೀಸ್ I) ಆಳ್ವಿಕೆಯ 18 ವರುಷಗಳನ್ನು ಆವರಿಸುತ್ತವೆಂದೂ ಅಭಿಪ್ರಯಿಸಲಾಗಿದೆ. ಸುಮಾರು ಸಾ.ಶ.ಪೂ. 475ರ ವರೆಗೆ ವಿಸ್ತರಿಸುವ ಈ ಸಮಯಾವಧಿಗೆ ಗ್ರೀಕ್, ಪಾರಸಿಯ ಮತ್ತು ಬಾಬಿಲೋನ್ಯ ಮೂಲಗಳು ಸಾಕ್ಷ್ಯಕೊಡುತ್ತವೆ.b ಒಬ್ಬ ಪ್ರತ್ಯಕ್ಷಸಾಕ್ಷಿ ಹಾಗೂ ಈ ವೃತ್ತಾಂತದಲ್ಲಿನ ದೊಡ್ಡ ಪಾತ್ರಧಾರಿಯೂ ಆದ ಮೊರ್ದೆಕೈ ಈ ಪುಸ್ತಕದ ಲೇಖಕನಾಗಿರುವುದು ಹೆಚ್ಚು ಸಂಭವನೀಯ; ಅದರ ಹತ್ತಿರಪರಿಚಯದ ಹಾಗೂ ವಿವರವಾದ ವೃತ್ತಾಂತವು, ಈ ಲೇಖಕನು ಈ ಘಟನೆಗಳು ನಡೆದ ಕಾಲದಲ್ಲಿ ಶೂಷನ್ ಅರಮನೆಯಲ್ಲಿ ಇದ್ದಿರಬೇಕೆಂದು ತೋರಿಸುತ್ತದೆ.c ಮೊರ್ದೆಕೈ ಬಗ್ಗೆ ಇನ್ನಾವ ಬೈಬಲ್ ಪುಸ್ತಕದಲ್ಲಿ ಹೇಳಲ್ಪಟ್ಟಿಲ್ಲವಾದರೂ, ಅವನು ಇತಿಹಾಸದ ಒಬ್ಬ ವಾಸ್ತವಿಕ ವ್ಯಕ್ತಿಯಾಗಿದ್ದನೆಂಬ ವಿಷಯದಲ್ಲಿ ಯಾವ ಸಂದೇಹವೂ ಇಲ್ಲ. ಆಸಕ್ತಿಕರವಾಗಿ, ತಾರೀಖು ನಮೂದಿಸಲ್ಪಟ್ಟಿರದ ಒಂದು ಬೆಣೆಲಿಪಿಯನ್ನು ಕಂಡುಹಿಡಿಯಲಾಗಿದೆ. ಅದು ಒಂದನೆಯ ಸರ್ಕ್ಸೀಸ್ನ ಆಳ್ವಿಕೆಯಲ್ಲಿ ಸೂಸ (ಶೂಷನ್) ಆಸ್ಥಾನದಲ್ಲಿ ಮಾರ್ದೂಕ (ಮೊರ್ದೆಕೈ?)ನೆಂಬವನು ಉನ್ನತಾಧಿಕಾರಿಯಾಗಿರುವುದಾಗಿ ಸೂಚಿಸುತ್ತದೆಂದು ಜರ್ಮನಿಯ ಎ. ಅಂಗ್ನಾಡ್ ಎಂಬವರು ವರ್ಣಿಸುತ್ತಾರೆ.d ಎಸ್ತೇರ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಘಟನೆಗಳ ದಾಖಲೆಯನ್ನು ಆ ಘಟನೆಗಳು ಸಂಭವಿಸಿದ ಬಳಿಕ ಕೂಡಲೇ ಅಂದರೆ ಸಾ.ಶ.ಪೂ. 475ರಲ್ಲಿ ಮೊರ್ದೆಕೈ ಶೂಷನ್ನಲ್ಲಿದ್ದಾಗಲೇ ಅವನು ಬರೆದು ಮುಗಿಸಿದನೆಂಬುದು ನಿಸ್ಸಂಶಯ.
ಪ್ರಯೋಜನಕರವೇಕೆ?
16 ಬೈಬಲ್ ಲೇಖಕರಲ್ಲಿ ಯಾವನೂ ಎಸ್ತೇರಳು ಪುಸ್ತಕದಿಂದ ನೇರವಾಗಿ ಉದ್ಧರಣೆಮಾಡದಿದ್ದರೂ, ಈ ಪುಸ್ತಕವು ಮಿಕ್ಕ ಪ್ರೇರಿತ ಶಾಸ್ತ್ರಗಳಿಗೆ ಪೂರ್ಣ ಹೊಂದಿಕೆಯಲ್ಲಿದೆ. ವಾಸ್ತವದಲ್ಲಿ, ತರುವಾಯ ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ತಿಳಿಸಲ್ಪಟ್ಟಿರುವ ಮತ್ತು ಯೆಹೋವನ ಆರಾಧಕರಿಗೆ ಎಲ್ಲ ಯುಗಗಳಲ್ಲಿ ಅನ್ವಯಿಸುವ ಕೆಲವು ಬೈಬಲ್ ಮೂಲತತ್ತ್ವಗಳ ಉತ್ಕೃಷ್ಟ ಉದಾಹರಣೆಗಳನ್ನು ಅದು ಒದಗಿಸುತ್ತದೆ. ಈ ಕೆಳಗಣ ವಚನಗಳ ಅಧ್ಯಯನವು ಇದನ್ನು ತೋರಿಸುವುದು ಮಾತ್ರವಲ್ಲ, ಈ ಅಧ್ಯಯನವು ಕ್ರೈಸ್ತ ನಂಬಿಕೆ ವರ್ಧಕವೂ ಆಗಿರುವುದು: ಎಸ್ತೇರಳು 4:5—ಫಿಲಿಪ್ಪಿ 2:4; ಎಸ್ತೇರಳು 9:22—ಗಲಾತ್ಯ 2:10. ಯೆಹೂದ್ಯರು ರಾಜನ ನಿಯಮವನ್ನು ಪಾಲಿಸುವುದಿಲ್ಲವೆಂದು ಹೊರಿಸಲ್ಪಟ್ಟ ಆಪಾದನೆಯು ಆದಿ ಕ್ರೈಸ್ತರ ಮೇಲೆ ಹೊರಿಸಲ್ಪಟ್ಟ ಆಪಾದನೆಗೆ ಹೋಲಿಕೆಯಾಗಿದೆ. (ಎಸ್ತೇರಳು 3:8, 9; ಅ. ಕೃತ್ಯಗಳು 16:21; 25:7) ಯೆಹೋವನ ನಿಜ ಸೇವಕರು ಇಂತಹ ಆಪಾದನೆಗಳನ್ನು ಮೊರ್ದೆಕೈ, ಎಸ್ತೇರಳು ಮತ್ತು ಅವರ ಜೊತೆ ಯೆಹೂದ್ಯರಂತೆ ನಿರ್ಭೀತಿಯಿಂದ ಮತ್ತು ತಮ್ಮ ವಿಮೋಚನೆಗಾಗಿ ದೈವಿಕ ಶಕ್ತಿಯ ಮೇಲೆ ಪ್ರಾರ್ಥನಾಪೂರ್ವಕವಾಗಿ ಹೊಂದಿಕೊಳ್ಳುತ್ತ ಎದುರಿಸುತ್ತಾರೆ.—ಎಸ್ತೇರಳು 4:16; 5:1, 2; 7:3-6; 8:3-6; 9:1, 2.
17 ಕ್ರೈಸ್ತರಾಗಿರುವ ನಾವು, ನಮ್ಮ ಸನ್ನಿವೇಶವು ಮೊರ್ದೆಕೈ ಮತ್ತು ಎಸ್ತೇರಳದ್ದಕ್ಕಿಂತ ಭಿನ್ನವಾಗಿದೆ ಎಂದು ನೆನಸಬಾರದು. ನಾವು ಸಹ ಪರಕೀಯವಾದ ಒಂದು ಲೋಕದಲ್ಲಿ ‘ಮೇಲಧಿಕಾರಿಗಳ’ ಅಧಿಕಾರದ ಕೆಳಗೆ ಜೀವಿಸುತ್ತಿದ್ದೇವೆ. ನಾವು ಯಾವುದೇ ದೇಶದಲ್ಲಿ ಜೀವಿಸುತ್ತಿರಲಿ, ನಿಯಮಪಾಲಕ ಪ್ರಜೆಗಳಾಗಿ ಜೀವಿಸುವುದು ನಮ್ಮ ಬಯಕೆ. ಆದರೆ ಅದೇ ಸಮಯದಲ್ಲಿ, ನಾವು ‘ಕೈಸರನದ್ದನ್ನು ಕೈಸರನಿಗೆ ಮತ್ತು ದೇವರದ್ದನ್ನು ದೇವರಿಗೆ ಕೊಡುವುದರ’ ನಡುವಣ ಸರಿಯಾದ ಗಡಿಯನ್ನು ನಿರ್ಧರಿಸಬೇಕು. (ರೋಮಾ. 13:1; ಲೂಕ 20:25) ಪ್ರಧಾನಿ ಮೊರ್ದೆಕೈ ಮತ್ತು ರಾಣಿ ಎಸ್ತೇರಳು ತಮ್ಮ ಲೌಕಿಕ ಕರ್ತವ್ಯಗಳನ್ನು ಶ್ರದ್ಧೆ ಹಾಗೂ ವಿಧೇಯತೆಯಿಂದ ಪಾಲಿಸುವುದರಲ್ಲಿ ಉತ್ತಮ ಮಾದರಿಯನ್ನಿಟ್ಟರು. (ಎಸ್ತೇ. 2:21-23; 6:2, 3, 10; 8:1, 2; 10:2) ಆದರೆ, ಅಗಾಗನ ವಂಶದವನಾಗಿದ್ದ ನೀಚ ಹಾಮಾನನಿಗೆ ಅಡ್ಡಬೀಳಬೇಕೆಂಬ ರಾಜಾಜ್ಞೆಗೆ ವಿಧೇಯನಾಗುವ ವಿಷಯದಲ್ಲಿ ಮೊರ್ದೆಕೈ ಗೆರೆಯನ್ನು ಎಳೆದನು ಅಂದರೆ ಮಿತಿಹಾಕಿದನು. ಅಲ್ಲದೆ, ಹಾಮಾನನು ಯೆಹೂದ್ಯರನ್ನು ನಾಶಗೊಳಿಸಲು ಒಳಸಂಚುಮಾಡಿದಾಗ, ನ್ಯಾಯ ದೊರೆಯಲಿಕ್ಕಾಗಿ ಕಾನೂನುಬದ್ಧ ರೀತಿಯಲ್ಲಿ ಬಿನ್ನಹ ಮಾಡುವಂತೆ ಮೊರ್ದೆಕೈ ಏರ್ಪಡಿಸಿದನು.—3:1-4; 5:9; 4:6-8.
18 ಎಸ್ತೇರಳು ಪುಸ್ತಕವು ‘ದೇವಪ್ರೇರಿತವೂ ಪ್ರಯೋಜನಕರವೂ’ ಆಗಿದ್ದು ಪವಿತ್ರ ಬೈಬಲಿನ ಭಾಗವಾಗಿದೆ ಎಂದು ಎಲ್ಲ ರುಜುವಾತು ತೋರಿಸುತ್ತದೆ. ದೇವರನ್ನು ಅಥವಾ ಆತನ ಹೆಸರನ್ನು ನೇರವಾಗಿ ತಿಳಿಸದಿದ್ದರೂ ಅದು ನಮಗೆ ನಂಬಿಕೆಯ ಅಪ್ಪಟ ಮಾದರಿಗಳನ್ನು ಒದಗಿಸುತ್ತದೆ. ಮೊರ್ದೆಕೈ ಮತ್ತು ಎಸ್ತೇರಳು—ಇವರು ಒಬ್ಬ ಕಥೆಗಾರನ ಬರಿ ಕಲ್ಪನೆಯ ವ್ಯಕ್ತಿಗಳಾಗಿರಲಿಲ್ಲ; ಅವರು ಯೆಹೋವ ದೇವರ ನೈಜ ಸೇವಕರು, ರಕ್ಷಿಸಲು ಯೆಹೋವನಿಗಿರುವ ಶಕ್ತಿಯಲ್ಲಿ ಸಂಪೂರ್ಣ ಭರವಸೆಯಿದ್ದ ವ್ಯಕ್ತಿಗಳು ಆಗಿದ್ದರು. ಅವರು ಪರದೇಶವೊಂದರಲ್ಲಿ ‘ಮೇಲಧಿಕಾರಿಗಳ’ ಕೆಳಗಿದ್ದರೂ, ದೇವಜನರ ಮತ್ತು ಅವರ ಆರಾಧನೆಯ ಅಭಿರುಚಿಗಳನ್ನು ಸಮರ್ಥಿಸಲು ಸಕಲ ಕಾನೂನುಬದ್ಧ ಮಾರ್ಗಗಳನ್ನು ಉಪಯೋಗಿಸಿದರು. ನಾವು ಇಂದು, ವಿಮೋಚನೆಯನ್ನು ತರುವ ದೇವರ ರಾಜ್ಯದ ‘ಸುವಾರ್ತೆಯನ್ನು [ಕಾನೂನುರೀತ್ಯ] ಸಮರ್ಥಿಸಿ ದೃಢಪಡಿಸುವಾಗ’ ಅವರ ಮಾದರಿಗಳನ್ನು ಅನುಸರಿಸಸಾಧ್ಯವಿದೆ.—ಫಿಲಿ. 1:7, NW.
[ಪಾದಟಿಪ್ಪಣಿಗಳು]
a ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 1, ಪುಟ 764; ಸಂಪುಟ 2, ಪುಟಗಳು 327-31.
b ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟಗಳು 613-16.
c ಮೆಕ್ಲಿಂಟಕ್ ಆ್ಯಂಡ್ ಸ್ಟ್ರಾಂಗ್ಸ್ ಸೈಕ್ಲಪೀಡಿಯ, 1981 ಪುನರ್ಮುದ್ರಣ, ಸಂಪುಟ III, ಪುಟ 310.
d ಎ. ಅಂಗ್ನಾಡ್, “Keilinschriftliche Beiträge zum Buch Esra und Ester,” Zeitschrift für die alttestamentliche Wissenschaft, LVIII (1940-41), ಪುಟಗಳು 240-4.