ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bsi06 ಪು. 11-14
  • ಬೈಬಲ್‌ ಪುಸ್ತಕ ನಂಬರ್‌ 18—ಯೋಬ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಪುಸ್ತಕ ನಂಬರ್‌ 18—ಯೋಬ
  • “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ (2 ಪೂರ್ವಕಾಲವೃತ್ತಾಂತ—ಯೆಶಾಯ)
  • ಉಪಶೀರ್ಷಿಕೆಗಳು
  • ಪ್ರಯೋಜನಕರವೇಕೆ?
“ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ (2 ಪೂರ್ವಕಾಲವೃತ್ತಾಂತ—ಯೆಶಾಯ)
bsi06 ಪು. 11-14

ಬೈಬಲ್‌ ಪುಸ್ತಕ ನಂಬರ್‌ 18—ಯೋಬ

ಲೇಖಕ: ಮೋಶೆ

ಬರೆಯಲ್ಪಟ್ಟ ಸ್ಥಳ: ಅರಣ್ಯ

ಬರೆದು ಮುಗಿಸಿದ್ದು: ಸುಮಾರು ಸಾ.ಶ.ಪೂ. 1473

ಆವರಿಸಲ್ಪಟ್ಟ ಕಾಲ: ಸಾ.ಶ.ಪೂ. 1657 ಮತ್ತು 1473ರ ನಡುವಣ 140ಕ್ಕೂ ಹೆಚ್ಚು ವರುಷಗಳು

ಪ್ರೇರಿತ ಶಾಸ್ತ್ರಗಳ ಅತಿ ಹಳೆಯ ಪುಸ್ತಕಗಳಲ್ಲಿ ಒಂದು! ಅತ್ಯಂತ ಗೌರವದಿಂದ ಕಾಣಲಾಗುವ ಮತ್ತು ಅನೇಕ ಸಲ ಉದ್ಧರಿಸಲಾಗುವ ಒಂದು ಪುಸ್ತಕವಾದರೂ, ಮಾನವಕುಲವು ಅತಿ ಕಡಮೆ ಅರ್ಥಮಾಡಿಕೊಂಡಿರುವ ಪುಸ್ತಕ. ಈ ಪುಸ್ತಕವನ್ನು ಏಕೆ ಬರೆಯಲಾಯಿತು ಮತ್ತು ಇದು ನಮಗೆ ಇಂದು ಯಾವ ರೀತಿಯಲ್ಲಿ ಮೌಲ್ಯವುಳ್ಳದ್ದಾಗಿದೆ? ಉತ್ತರವು, ಯೋಬ ಎಂಬ ಹೆಸರಿನ ಅರ್ಥದಲ್ಲಿ ಸೂಚಿತವಾಗಿದೆ. ಆ ಹೆಸರಿನ ಅರ್ಥ, “ಹಗೆತನದ ಗುರಿ” ಎಂದಾಗಿದೆ. ಹೌದು, ಈ ಪುಸ್ತಕವು ಎರಡು ಪ್ರಮುಖ ಪ್ರಶ್ನೆಗಳನ್ನು ಚರ್ಚಿಸುತ್ತದೆ: ನಿರ್ದೋಷಿಗಳು ಕಷ್ಟಾನುಭವಿಸುವುದೇಕೆ? ದೇವರು ಭೂಮಿಯ ಮೇಲೆ ದುಷ್ಟತನವನ್ನು ಅನುಮತಿಸುವುದೇಕೆ? ಈ ಪ್ರಶ್ನೆಗಳಿಗಾಗಿರುವ ಉತ್ತರವನ್ನು, ಯೋಬನ ಕಷ್ಟಾನುಭವಗಳ ಮತ್ತು ಅವನ ಮಹಾ ಸಹನೆಯ ದಾಖಲೆಯನ್ನು ಪರಿಗಣಿಸುವುದರಿಂದ ಕಂಡುಕೊಳ್ಳಲಿಕ್ಕಿದ್ದವೆ. ಇದರಲ್ಲಿರುವುದೆಲ್ಲವೂ ಯೋಬನು ವಿಜ್ಞಾಪಿಸಿಕೊಂಡಂತೆಯೇ ಬರೆದಿಡಲ್ಪಟ್ಟಿದೆ.—ಯೋಬ 19:23, 24.

2 ಯೋಬ ಎಂಬ ಹೆಸರು, ತಾಳ್ಮೆ ಮತ್ತು ಸಹನೆಗೆ ಉಪಯೋಗಿಸಲ್ಪಡುವ ಸಮಾನಾರ್ಥಕ ಪದವಾಗಿಬಿಟ್ಟಿದೆ. ಆದರೆ ಯೋಬ ಎಂಬ ವ್ಯಕ್ತಿಯೊಬ್ಬನು ನಿಜವಾಗಿಯೂ ಇದ್ದನೊ? ಸಮಗ್ರತೆಯ ಈ ಅಚ್ಚ ಮಾದರಿಯನ್ನು ಇತಿಹಾಸದ ಪುಟಗಳಿಂದ ಅಳಿಸಿಹಾಕಲು ಪಿಶಾಚನು ಮಾಡಿದ ಸಕಲ ಪ್ರಯತ್ನಗಳ ಎದುರಿನಲ್ಲಿಯೂ ಉತ್ತರವು ಸ್ಪಷ್ಟ. ಯೋಬನು ಒಬ್ಬ ವಾಸ್ತವ ವ್ಯಕ್ತಿಯಾಗಿದ್ದನು! ಯೆಹೋವನು ಅವನನ್ನು ತನ್ನ ಸಾಕ್ಷಿಗಳಾಗಿದ್ದ ನೋಹ ಮತ್ತು ದಾನಿಯೇಲರೊಂದಿಗೆ ಹೆಸರಿಸುತ್ತಾನೆ. ಮತ್ತು ಈ ನೋಹ ಹಾಗೂ ದಾನಿಯೇಲರ ಅಸ್ತಿತ್ವವನ್ನು ಯೇಸು ಕ್ರಿಸ್ತನೇ ಅಂಗೀಕರಿಸಿದ್ದಾನೆ. (ಯೆಹೆ. 14:14, 20; ಇದಕ್ಕೆ ಮತ್ತಾಯ 24:15, 37ನ್ನು ಹೋಲಿಸಿ.) ಪುರಾತನ ಹೀಬ್ರು ಜನಾಂಗವು ಯೋಬನನ್ನು ಒಬ್ಬ ವಾಸ್ತವ ವ್ಯಕ್ತಿಯಾಗಿ ವೀಕ್ಷಿಸಿತು. ಕ್ರೈಸ್ತ ಲೇಖಕ ಯಾಕೋಬನು ಯೋಬನ ತಾಳ್ಮೆಯ ಮಾದರಿಯ ಕಡೆಗೆ ಗಮನಸೆಳೆಯುತ್ತಾನೆ. (ಯಾಕೋ. 5:11) ವಾಸ್ತವ ಜೀವನದ ಮಾದರಿಯು ಮಾತ್ರವೇ, ಎಲ್ಲ ಪರಿಸ್ಥಿತಿಗಳಲ್ಲಿಯೂ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ದೇವರ ಆರಾಧಕರು ನಿಜವಾಗಿಯೂ ನಂಬುವಂತೆ ಮಾಡಬಲ್ಲದೇ ಹೊರತು ಒಂದು ಕಾಲ್ಪನಿಕ ಮಾದರಿಯಲ್ಲ. ಇದಲ್ಲದೆ, ಯೋಬ ಪುಸ್ತಕದಲ್ಲಿ ದಾಖಲೆಯಾಗಿರುವ ಸಂಭಾಷಣೆಗಳಲ್ಲಿರುವ ತೀವ್ರತೆ ಮತ್ತು ಭಾವಪೂರಿತತೆಯು ಆಗ ಇದ್ದ ಸನ್ನಿವೇಶವು ಎಷ್ಟು ನೈಜವಾಗಿತ್ತೆಂಬುದಕ್ಕೆ ಸಾಕ್ಷಿ ನೀಡುತ್ತದೆ.

3 ಯೋಬನ ಪುಸ್ತಕವು ವಿಶ್ವಾಸಾರ್ಹ ಮತ್ತು ಪ್ರೇರಿತವೆಂಬುದು, ಪುರಾತನಕಾಲದ ಹೀಬ್ರು ಜನರು ಇದನ್ನು ಯಾವಾಗಲೂ ತಮ್ಮ ಬೈಬಲ್‌ನ ಅಂಗೀಕೃತ ಪುಸ್ತಕಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಿದ್ದ ವಿಷಯದಿಂದ ರುಜುವಾಗುತ್ತದೆ. ಅವರು ಹೀಗೆ ಮಾಡಿದ್ದು ಒಂದು ಗಮನಾರ್ಹ ವಾಸ್ತವಾಂಶವಾಗಿದೆ, ಏಕೆಂದರೆ ಯೋಬನು ಒಬ್ಬ ಇಸ್ರಾಯೇಲ್ಯನಾಗಿರಲಿಲ್ಲ. ಯೆಹೆಜ್ಕೇಲ ಮತ್ತು ಯಾಕೋಬ ಈ ಪುಸ್ತಕಕ್ಕೆ ಸೂಚಿಸಿರುವುದಲ್ಲದೆ, ಅಪೊಸ್ತಲ ಪೌಲನೂ ಈ ಪುಸ್ತಕದಿಂದ ಉದ್ಧರಿಸಿದ್ದಾನೆ. (ಯೋಬ 5:13; 1 ಕೊರಿಂ. 3:19, 20) ಈ ಪುಸ್ತಕವು ದೇವಪ್ರೇರಿತವೆಂಬುದಕ್ಕೆ ಬಲವಾದ ಸಾಕ್ಷ್ಯವು, ಅದು ವಿಜ್ಞಾನಗಳ ರುಜುವಾಗಿರುವ ನಿಜತ್ವಗಳೊಂದಿಗೆ ಆಶ್ಚರ್ಯಕರವಾಗಿ ಹೊಂದಿಕೆಯಲ್ಲಿರುವುದೇ. ಭೂಮಿಯನ್ನು ಎತ್ತಿಹಿಡಿಯಲಾಗಿರುವ ವಿಧದ ಕುರಿತು ಅತಿ ವಿಚಿತ್ರ ವಿಚಾರಗಳು ಪೂರ್ವಿಕರಿಗಿದ್ದಾಗ, ಯೆಹೋವನು “ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗ ಹಾಕಿದ್ದಾನೆ” ಎಂಬುದು ಯೋಬನಿಗೆ ಹೇಗೆ ತಾನೇ ತಿಳಿದಿರಸಾಧ್ಯವಿತ್ತು? (ಯೋಬ 26:7) ಒಂದು ದೊಡ್ಡ ಕಡಲಾಮೆಯ ಮೇಲೆ ನಿಂತಿರುವ ಆನೆಗಳು ಭೂಮಿಯನ್ನು ಎತ್ತಿಹಿಡಿದಿವೆ ಎಂಬುದು ಪುರಾತನಕಾಲದ ಒಂದು ವೀಕ್ಷಣವಾಗಿತ್ತು. ಹೀಗಿರುವಲ್ಲಿ, ಯೋಬನ ಪುಸ್ತಕದಲ್ಲಿ ಅಂತಹ ಅಜ್ಞಾನದ ಮಾತು ಏಕಿಲ್ಲ? ಸೃಷ್ಟಿಕರ್ತನಾದ ಯೆಹೋವನು ಪ್ರೇರಣೆ ಮೂಲಕ ಸತ್ಯವನ್ನು ತಿಳಿಯಪಡಿಸಿದ್ದರಿಂದಲೇ ಎಂಬುದು ಸುವ್ಯಕ್ತ. ಭೂಮಿ ಮತ್ತು ಅದರ ಅದ್ಭುತಗಳ, ತಮ್ಮ ಪ್ರಾಕೃತಿಕ ವಾಸಸ್ಥಾನಗಳಲ್ಲಿರುವ ಕಾಡುಮೃಗಗಳ ಮತ್ತು ಪಕ್ಷಿಗಳ ಬೇರೆ ಅನೇಕ ವರ್ಣನೆಗಳು ಎಷ್ಟು ನಿಷ್ಕೃಷ್ಟವಾಗಿವೆಯೆಂದರೆ, ಯೋಬನ ಪುಸ್ತಕದ ಗ್ರಂಥಕರ್ತನೂ ಪ್ರೇರಕನೂ ಆದ ಯೆಹೋವ ದೇವರು ಮಾತ್ರ ಆ ವರ್ಣನೆಗಳನ್ನು ಕೊಡಸಾಧ್ಯವಿತ್ತು.a

4 ಯೋಬನು ಊಚ್‌ನಲ್ಲಿ ಜೀವಿಸುತ್ತಿದ್ದನು. ಇದು ಕೆಲವು ಮಂದಿ ಭೂಗೋಳಶಾಸ್ತ್ರಜ್ಞರಿಗನುಸಾರ, ಉತ್ತರ ಅರೇಬಿಯದಲ್ಲಿ ಏದೋಮ್ಯರು ನೆಲೆಸಿದ್ದ ಪ್ರದೇಶಕ್ಕೆ ಹತ್ತಿರದಲ್ಲಿ ಮತ್ತು ಅಬ್ರಹಾಮನ ಸಂತತಿಗೆ ವಾಗ್ದಾನಿಸಲಾಗಿದ್ದ ಪ್ರದೇಶದ ಪೂರ್ವದಿಕ್ಕಿನಲ್ಲಿತ್ತು. ಶೆಬದವರು ದಕ್ಷಿಣಕ್ಕೂ ಕಸ್ದೀಯರು ಪೂರ್ವಕ್ಕೂ ಇದ್ದರು. (1:1, 3, 15, 17) ಯೋಬನಿಗೆ ಬಂದ ಪರೀಕ್ಷೆಗಳು, ಅಬ್ರಹಾಮನ ದಿನಗಳು ಕಳೆದು ದೀರ್ಘಕಾಲ ಸಂದ ಬಳಿಕವಾಗಿತ್ತು. ಯೋಬನಂತಹ ‘ನಿರ್ದೋಷಿಯೂ ಯಥಾರ್ಥಚಿತ್ತನೂ ಭೂಲೋಕದಲ್ಲಿ ಎಲ್ಲಿಯೂ ಸಿಕ್ಕದಿದ್ದಂತಹ’ ಕಾಲ ಅದಾಗಿತ್ತು. (1:8) ಅದು, ಗಮನಾರ್ಹವಾದ ನಂಬಿಕೆಯ ಪುರುಷನಾಗಿದ್ದ ಯೋಸೇಫನ ಮರಣ (ಸಾ.ಶ.ಪೂ. 1657) ಮತ್ತು ಮೋಶೆಯು ಸಮಗ್ರತೆಯ ಹಾದಿಯನ್ನು ಪ್ರವೇಶಿಸಿದ ಸಮಯದ ಮಧ್ಯದಲ್ಲಿನ ಕಾಲವಾಗಿತ್ತೆಂದು ತೋರಿಬರುತ್ತದೆ. ಇಸ್ರಾಯೇಲ್ಯರು ಐಗುಪ್ತದ ದೆವ್ವಾರಾಧನೆಯಿಂದ ಕಲುಷಿತರಾಗಿದ್ದ ಈ ಸಮಯಾವಧಿಯಲ್ಲಿ ಯೋಬನು ಶುದ್ಧಾರಾಧನೆಯಲ್ಲಿ ಅತ್ಯುತ್ಕೃಷ್ಟನಾಗಿದ್ದನು. ಅಲ್ಲದೆ, ಯೋಬ ಒಂದನೆಯ ಅಧ್ಯಾಯದಲ್ಲಿ ಹೇಳಲಾಗಿರುವ ಆಚಾರಗಳು ಮತ್ತು ದೇವರು ಯೋಬನನ್ನು ಸತ್ಯಾರಾಧಕನಾಗಿ ಅಂಗೀಕರಿಸಿದಂಥ ಸಂಗತಿಯು, ದೇವರು ಇಸ್ರಾಯೇಲಿನೊಂದಿಗೆ ಮಾತ್ರ ಧರ್ಮಶಾಸ್ತ್ರಾನುಸಾರ ವ್ಯವಹರಿಸಲಾರಂಭಿಸಿದ ಸಾ.ಶ.ಪೂ. 1513ರ ಅನಂತರದ ಸಮಯವನ್ನು ತೋರಿಸುವ ಬದಲು ಮೂಲಪಿತೃಗಳ ಕಾಲವನ್ನು ಸೂಚಿಸುತ್ತದೆ. (ಆಮೋ. 3:2; ಎಫೆ. 2:12) ಹೀಗೆ, ಯೋಬನ ದೀರ್ಘಾಯುಷ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಲ್ಲಿ, ಈ ಪುಸ್ತಕವು ಸಾ.ಶ.ಪೂ. 1657 ಮತ್ತು ಮೋಶೆಯು ಮರಣಹೊಂದಿದ ಸಾ.ಶ.ಪೂ. 1473ನೇ ವರುಷದ ನಡುವಿನ ಒಂದು ಅವಧಿಯನ್ನು ಆವರಿಸುತ್ತದೆಂದು ತೋರುತ್ತದೆ. ಯೋಬನು ಮರಣಹೊಂದಿದ ಸ್ವಲ್ಪಕಾಲದ ಬಳಿಕ ಮತ್ತು ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆದಾಡುತ್ತಿದ್ದ ಸಮಯದಲ್ಲಿ ಮೋಶೆಯು ಈ ಪುಸ್ತಕವನ್ನು ಬರೆದು ಮುಗಿಸಿದನು.—ಯೋಬ 1:8; 42:16, 17.

5 ಲೇಖಕನು ಮೋಶೆಯೇ ಎಂದು ನಾವು ಹೇಳುವುದೇಕೆ? ಏಕೆಂದರೆ, ಯೆಹೂದಿ ಹಾಗೂ ಆದಿ ಕ್ರೈಸ್ತ ವಿದ್ವಾಂಸರಿಗಿದ್ದ ಅತಿ ಹಳೆಯ ಸಂಪ್ರದಾಯಾನುಸಾರ ಮೋಶೆಯೇ ಲೇಖಕನಾಗಿರುತ್ತಾನೆ. ಯೋಬನ ಪುಸ್ತಕದಲ್ಲಿ ಬಳಸಲ್ಪಟ್ಟಿರುವ ಹುರುಪಿನ ಅಧಿಕೃತ ಹೀಬ್ರು ಪದ್ಯಶೈಲಿಯಿಂದ, ಆರಂಭದಲ್ಲಿ ಇದನ್ನು ಹೀಬ್ರುವಿನಲ್ಲಿ ರಚಿಸಲಾಗಿತ್ತು ಎಂಬುದು ವ್ಯಕ್ತವಾಗುತ್ತದೆ, ಮತ್ತು ಇದು ಮೋಶೆಯ ಭಾಷೆಯಾಗಿತ್ತು. ಆ್ಯರಬಿಕ್‌ನಂತಹ ಇನ್ನೊಂದು ಭಾಷೆಯಿಂದ ಇದು ತರ್ಜುಮೆಯಾಗಿರಲು ಸಾಧ್ಯವಿರಲಿಲ್ಲ. ಇದಲ್ಲದೆ, ಇದರಲ್ಲಿರುವ ಗದ್ಯಭಾಗಗಳು ಬೈಬಲಿನ ಬೇರೆ ಯಾವ ಭಾಗಕ್ಕಿಂತಲೂ ಹೆಚ್ಚಾಗಿ ಪ್ರಥಮ ಗ್ರಂಥ ಪಂಚಕಕ್ಕೆ (ಪೆಂಟಟ್ಯೂಕ್‌) ಹೆಚ್ಚು ಹೋಲಿಕೆಯನ್ನು ಹೊಂದಿರುತ್ತವೆ. ಇದರ ಲೇಖಕನು, ಮೋಶೆಯಂತೆ ಒಬ್ಬ ಇಸ್ರಾಯೇಲ್ಯನೇ ಆಗಿರಬೇಕು, ಏಕೆಂದರೆ “ದೈವೋಕ್ತಿಗಳು [ಯೆಹೂದ್ಯರ] ವಶಕ್ಕೆ” ಒಪ್ಪಿಸಲ್ಪಟ್ಟಿದ್ದವು. (ರೋಮಾ. 3:1, 2) ಮೋಶೆ ವಯಸ್ಕನಾದ ಮೇಲೆ, ಊಚ್‌ ದೇಶದಿಂದ ಹೆಚ್ಚು ದೂರದಲ್ಲಿರದ ಮಿದ್ಯಾನಿನಲ್ಲಿ 40 ವರುಷಗಳನ್ನು ಕಳೆದನು. ಯೋಬ ಪುಸ್ತಕದಲ್ಲಿ ದಾಖಲೆಯಾಗಿರುವ ಸವಿವರವಾದ ಮಾಹಿತಿಯನ್ನು ಮೋಶೆ ಅಲ್ಲಿಂದ ಪಡೆದಿರುವ ಸಾಧ್ಯತೆಯಿದೆ. ತರುವಾಯ, ಇಸ್ರಾಯೇಲ್ಯರ 40 ವರುಷಗಳ ಅರಣ್ಯ ಪ್ರಯಾಣದ ಸಮಯದಲ್ಲಿ ಮೋಶೆಯು ಯೋಬನ ಸ್ವದೇಶದ ಹತ್ತಿರದಿಂದ ಹಾದುಹೋದಾಗ, ಅವನು ಪುಸ್ತಕದ ಕೊನೆಯ ವಿವರಣೆಗಳನ್ನು ತಿಳಿದುಕೊಂಡು ಅವನ್ನು ದಾಖಲೆಮಾಡಿರುವುದು ಸಂಭಾವ್ಯ.

6 ದ ನ್ಯೂ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ ಗ್ರಂಥಕ್ಕನುಸಾರ, ಯೋಬನ ಪುಸ್ತಕವನ್ನು ಅನೇಕವೇಳೆ, “ಜಗತ್ತಿನ ಸಾಹಿತ್ಯ ಕ್ಷೇತ್ರದ ಅತ್ಯುತ್ತಮ ಕೃತಿಗಳಲ್ಲಿ ಒಂದು” ಎಂದು ಎಣಿಸಲಾಗುತ್ತದೆ.b ಆದರೂ, ಈ ಪುಸ್ತಕವು ಸಾಹಿತ್ಯದ ಅತ್ಯುತ್ತಮ ಕೃತಿಗಿಂತಲೂ ಹೆಚ್ಚಿನದ್ದಾಗಿದೆ. ಯೆಹೋವನ ಶಕ್ತಿ, ನ್ಯಾಯ, ವಿವೇಕ ಮತ್ತು ಪ್ರೀತಿಯನ್ನು ಘನತೆಗೇರಿಸುವ ವಿಷಯದಲ್ಲಿ ಯೋಬ ಪುಸ್ತಕವು ಬೈಬಲಿನ ಪುಸ್ತಕಗಳಲ್ಲಿ ಗಮನಾರ್ಹವಾದದ್ದಾಗಿದೆ. ವಿಶ್ವದ ಮುಂದಿರುವ ಪ್ರಧಾನ ವಿವಾದಾಂಶವನ್ನು ಇದು ಅತಿ ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. ಬೈಬಲಿನ ಇತರ ಪುಸ್ತಕಗಳಲ್ಲಿ, ವಿಶೇಷವಾಗಿ ಆದಿಕಾಂಡ, ವಿಮೋಚನಕಾಂಡ, ಪ್ರಸಂಗಿ, ಲೂಕ, ರೋಮಾಪುರ ಮತ್ತು ಪ್ರಕಟನೆಯಲ್ಲಿ ಹೇಳಲ್ಪಟ್ಟಿರುವ ಬಹಳಷ್ಟು ವಿಷಯಗಳ ಮೇಲೆ ಅದು ಬೆಳಕನ್ನು ಚೆಲ್ಲುತ್ತದೆ. (ಯೋಬ 1:6-12; 2:1-7ನ್ನು ಆದಿಕಾಂಡ 3:15; ವಿಮೋಚನಕಾಂಡ 9:16; ಲೂಕ 22:31, 32; ರೋಮಾಪುರ 9:16-19 ಮತ್ತು ಪ್ರಕಟನೆ 12:9ರೊಂದಿಗೆ ಹೋಲಿಸಿರಿ; ಅದೇ ರೀತಿಯಲ್ಲಿ ಯೋಬ 1:21; 24:15; 21:23-26; 28:28ನ್ನು ಅನುಕ್ರಮವಾಗಿ ಪ್ರಸಂಗಿ 5:15; 8:11; 9:2, 3; 12:13ರೊಂದಿಗೆ ಹೋಲಿಸಿ.) ಜೀವನದ ಕುರಿತ ಅನೇಕ ಪ್ರಶ್ನೆಗಳಿಗೆ ಅದು ಉತ್ತರಗಳನ್ನು ಒದಗಿಸುತ್ತದೆ. ಅದು ದೇವರ ಪ್ರೇರಿತ ವಾಕ್ಯದ ಅವಿಭಾಜ್ಯ ಭಾಗವಾಗಿರುವುದು ನಿಶ್ಚಯ, ಮತ್ತು ಆ ವಾಕ್ಯವನ್ನು ಪ್ರಯೋಜನಕರವಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಇದು ಬಹಳಷ್ಟು ಸಹಾಯಮಾಡುತ್ತದೆ.

ಪ್ರಯೋಜನಕರವೇಕೆ?

39 ಯೋಬನ ಪುಸ್ತಕವು ಯೆಹೋವನನ್ನು ಘನತೆಗೇರಿಸಿ, ಆತನ ಅಗಮ್ಯ ವಿವೇಕ ಮತ್ತು ಶಕ್ತಿಗೆ ಸಾಕ್ಷಿ ನೀಡುತ್ತದೆ. (12:12, 13; 37:23) ಈ ಒಂದೇ ಪುಸ್ತಕದಲ್ಲಿ ದೇವರನ್ನು 31 ಬಾರಿ ಸರ್ವಶಕ್ತನೆಂದು ಕರೆಯಲಾಗಿದೆ. ಇದು ಬೈಬಲಿನ ಉಳಿದ ಎಲ್ಲ ಭಾಗಗಳಲ್ಲಿರುವುದಕ್ಕಿಂತ ಅತಿ ಹೆಚ್ಚು ಬಾರಿಯಾಗಿದೆ. ಈ ವೃತ್ತಾಂತವು ದೇವರ ಶಾಶ್ವತತೆ ಮತ್ತು ಘನತೆಗೇರಿಸಲ್ಪಟ್ಟ ಸ್ಥಾನವನ್ನು (10:5; 36:4, 22, 26; 40:2; 42:2), ಹಾಗೂ ಆತನ ನ್ಯಾಯ, ಪ್ರೀತಿಪೂರ್ವಕವಾದ ದಯೆ ಮತ್ತು ಕರುಣೆಯನ್ನು (36:5-7; 10:12; 42:12) ಕೊಂಡಾಡುತ್ತದೆ. ಅದು ಮಾನವನ ರಕ್ಷಣೆಗಿಂತ ಹೆಚ್ಚಾಗಿ ಯೆಹೋವನ ನಿರ್ದೋಷೀಕರಣವನ್ನು ಒತ್ತಿಹೇಳುತ್ತದೆ. (33:12; 34:10, 12; 35:2; 36:24; 40:8) ಇಸ್ರಾಯೇಲಿನ ದೇವರಾದ ಯೆಹೋವನು ಯೋಬನ ದೇವರೂ ಆಗಿದ್ದಾನೆಂದು ಅದು ತೋರಿಸುತ್ತದೆ.

40 ಯೋಬ ಪುಸ್ತಕದಲ್ಲಿನ ದಾಖಲೆಯು ದೇವರ ಸೃಷ್ಟಿಕಾರ್ಯವನ್ನು ಹೊಗಳಿ ವರ್ಣಿಸುತ್ತದೆ. (38:4–39:30; 40:15, 19; 41:1; 35:10) ಮನುಷ್ಯನು ಮಣ್ಣಿನಿಂದ ಮಾಡಲ್ಪಟ್ಟು ಮಣ್ಣಿಗೆ ಹಿಂದಿರುಗುತ್ತಾನೆಂಬ ಆದಿಕಾಂಡದ ಹೇಳಿಕೆಗೆ ಇದು ಹೊಂದಿಕೆಯಲ್ಲಿದೆ. (ಯೋಬ 10:8, 9; ಆದಿ. 2:7; 3:19) “ವಿಮೋಚಕ,” “ಈಡು” [ವಿಮೋಚನಾ ಮೌಲ್ಯ] ಮತ್ತು ‘ಪುನಃ ಬದುಕುವುದು’ ಎಂಬ ಪದಗಳನ್ನು ಉಪಯೋಗಿಸುತ್ತ, ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಪ್ರಧಾನ ಬೋಧನೆಗಳ ಮುನ್ನೋಟವನ್ನು ಇದು ಕೊಡುತ್ತದೆ. (ಯೋಬ 19:25; 33:24; 14:13, 14) ಪ್ರವಾದಿಗಳೂ ಕ್ರೈಸ್ತ ಲೇಖಕರೂ ಈ ಪುಸ್ತಕದ ಅನೇಕ ಅಭಿವ್ಯಕ್ತಿಗಳನ್ನು ತೆಗೆದುಕೊಂಡಿದ್ದಾರೆ ಇಲ್ಲವೆ ಅದಕ್ಕೆ ಸಮಾನವಾದ ಅಭಿವ್ಯಕ್ತಿಗಳನ್ನು ಬಳಸಿದ್ದಾರೆ. ಉದಾಹರಣೆಗೆ, ಯೋಬ 7:17—ಕೀರ್ತನೆ 8:4; ಯೋಬ 9:24—1 ಯೋಹಾನ 5:19; ಯೋಬ 10:8—ಕೀರ್ತನೆ 119:73; ಯೋಬ 12:25—ಧರ್ಮೋಪದೇಶಕಾಂಡ 28:29; ಯೋಬ 24:23—ಜ್ಞಾನೋಕ್ತಿ 15:3; ಯೋಬ 26:8—ಜ್ಞಾನೋಕ್ತಿ 30:4; ಯೋಬ 28:12, 13, 15-19—ಜ್ಞಾನೋಕ್ತಿ 3:13-15; ಯೋಬ 39:30—ಮತ್ತಾಯ 24:28.c

41 ಯೆಹೋವನು ನಮ್ಮಿಂದ ಬಯಸುವ ನೀತಿಯ ಜೀವನಮಟ್ಟಗಳನ್ನು ಅನೇಕ ಭಾಗಗಳಲ್ಲಿ ಕೊಡಲಾಗಿದೆ. ಈ ಪುಸ್ತಕವು ಪ್ರಾಪಂಚಿಕತೆಯನ್ನು (ಯೋಬ 31:24, 25), ವಿಗ್ರಹಾರಾಧನೆಯನ್ನು (31:26-28), ವ್ಯಭಿಚಾರವನ್ನು (31:9-12), ಬೇರೊಬ್ಬರು ಅಧೋಗತಿಗಿಳಿಯುವಾಗ ಹಿಗ್ಗುವುದನ್ನು (31:29), ಅನ್ಯಾಯ ಮತ್ತು ಪಕ್ಷಪಾತವನ್ನು (31:13; 32:21), ಸ್ವಾರ್ಥವನ್ನು (31:16-21), ಹಾಗೂ ಅಪ್ರಾಮಾಣಿಕತೆ ಮತ್ತು ಸುಳ್ಳು ಹೇಳುವುದನ್ನು (31:5) ಬಲವಾಗಿ ಖಂಡಿಸುತ್ತಾ, ಈ ವಿಷಯಗಳನ್ನು ಮಾಡುವವನು ದೇವರ ಮೆಚ್ಚಿಕೆಯನ್ನೂ ನಿತ್ಯಜೀವವನ್ನೂ ಪಡೆಯಲಾರನೆಂದು ತೋರಿಸುತ್ತದೆ. ಎಲೀಹು ಆಳವಾದ ಗೌರವ ಮತ್ತು ಅಭಿಮಾನಮಿತಿಯೊಂದಿಗೆ ನಿಸ್ಸಂಕೋಚಭಾವ, ಧೈರ್ಯ ಹಾಗೂ ದೇವರನ್ನು ಘನಪಡಿಸುವ ವಿಷಯದಲ್ಲಿ ಉತ್ತಮ ಮಾದರಿಯಾಗಿದ್ದಾನೆ. (32:2, 6, 7, 9, 10, 18-20; 33:6, 33) ಯೋಬನು ಸ್ವತಃ ತಲೆತನವನ್ನು ನಿರ್ವಹಿಸಿದ ರೀತಿ, ತನ್ನ ಕುಟುಂಬದ ಕುರಿತು ತೋರಿಸಿದ ಚಿಂತೆ ಮತ್ತು ಅವನು ತೋರಿಸಿದ ಅತಿಥಿಸತ್ಕಾರವು ಸಹ ಉತ್ತಮ ಪಾಠವನ್ನು ಒದಗಿಸುತ್ತದೆ. (1:5; 2:9, 10; 31:32) ಆದರೂ, ಯೋಬನು ಅತಿ ಹೆಚ್ಚಾಗಿ ಜ್ಞಾಪಿಸಲ್ಪಡುವುದು ಅವನ ಸಮಗ್ರತೆಪಾಲನೆ ಮತ್ತು ತಾಳ್ಮೆಯ ಸಹಿಷ್ಣುತೆಗಾಗಿಯೇ. ಸಕಲ ಯುಗಗಳಾದ್ಯಂತ ಮತ್ತು ವಿಶೇಷವಾಗಿ ನಂಬಿಕೆಯನ್ನು ಪರೀಕ್ಷಿಸುವ ನಮ್ಮ ಈ ಸಮಯದಲ್ಲಿ ಅವನು ದೇವರ ಸೇವಕರಿಗೆ ನಂಬಿಕೆವರ್ಧಕ ಬುರುಜಾಗಿ ಪರಿಣಮಿಸಿರುವ ಮಾದರಿಯನ್ನಿಟ್ಟಿದ್ದಾನೆ. “ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು [ಯೆಹೋವನು] ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು [ಯೆಹೋವನು] ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.”—ಯಾಕೋ. 5:11.

42 ಯಾರಿಗೆ ರಾಜ್ಯದ ವಾಗ್ದಾನಗಳು ಕೊಡಲ್ಪಟ್ಟಿದ್ದವೊ ಆ ಅಬ್ರಹಾಮನ ಸಂತಾನದವರಲ್ಲಿ ಯೋಬನು ಒಬ್ಬನಾಗಿರಲಿಲ್ಲವಾದರೂ, ಅವನ ಸಮಗ್ರತೆಯ ಕುರಿತಾದ ದಾಖಲೆಯು ಯೆಹೋವನ ರಾಜ್ಯದ ಉದ್ದೇಶಗಳ ಬಗ್ಗೆ ತಿಳಿವಳಿಕೆಯನ್ನು ಬಹಳಷ್ಟು ಸ್ಪಷ್ಟೀಕರಿಸುತ್ತದೆ. ಈ ಪುಸ್ತಕವು ದೈವಿಕ ದಾಖಲೆಯ ಆವಶ್ಯಕ ಭಾಗವಾಗಿದೆ ಏಕೆಂದರೆ, ಪರಮಾಧಿಕಾರಿಯಾದ ಯೆಹೋವನ ಕಡೆಗಿನ ಮಾನವನ ಸಮಗ್ರತೆಯನ್ನು ಒಳಗೊಂಡಿರುವ ದೇವರ ಮತ್ತು ಸೈತಾನನ ಮಧ್ಯೆ ಇರುವ ಮೂಲಭೂತ ವಿವಾದಾಂಶವನ್ನು ಅದು ಪ್ರಕಟಪಡಿಸುತ್ತದೆ. ಭೂಮಿ ಮತ್ತು ಮನುಷ್ಯರಿಗಿಂತಲೂ ಮೊದಲೇ ಸೃಷ್ಟಿಸಲ್ಪಟ್ಟಿದ್ದ ದೇವದೂತರು ಸಹ ಪ್ರೇಕ್ಷಕರಾಗಿದ್ದಾರೆಂದು ಮತ್ತು ಅವರು ಈ ಭೂಮಿಯ ಕುರಿತಾಗಿಯೂ ಆ ವಿವಾದಾಂಶದ ಪರಿಣಾಮದಲ್ಲಿಯೂ ತೀರ ಆಸಕ್ತರಾಗಿದ್ದಾರೆಂದು ಅದು ತೋರಿಸುತ್ತದೆ. (ಯೋಬ 1:6-12; 2:1-5; 38:6, 7) ಯೋಬನ ದಿನಗಳಿಗಿಂತ ಮೊದಲೇ ಈ ವಿವಾದಾಂಶ ಅಸ್ತಿತ್ವದಲ್ಲಿತ್ತೆಂದೂ ಸೈತಾನನು ಒಬ್ಬ ನೈಜ ಆತ್ಮ ವ್ಯಕ್ತಿಯೆಂದೂ ಅದು ಸೂಚಿಸುತ್ತದೆ. ಯೋಬನ ಪುಸ್ತಕವನ್ನು ಬರೆದವನು ಮೋಶೆಯೇ ಆಗಿದ್ದರೆ, ಇದು ಬೈಬಲಿನ ಹೀಬ್ರು ಗ್ರಂಥಪಾಠದಲ್ಲೇ ಹಾಸ್‌ಸಾಟಾನ್‌ (ಸೈತಾನ) ಎಂಬ ಪದದ ಪ್ರಥಮ ತೋರಿಬರುವಿಕೆಯಾಗಿದ್ದು, “ಪುರಾತನ ಸರ್ಪವು” ಯಾರಾಗಿದ್ದನೆಂಬುದನ್ನು ಹೆಚ್ಚು ಸ್ಪಷ್ಟವಾಗಿ ಗುರುತಿಸುತ್ತದೆ. (ಯೋಬ 1:6, NW ಪಾದಟಿಪ್ಪಣಿ; ಪ್ರಕ. 12:9) ಮಾನವನ ಮೇಲೆ ಬರುವ ಕಷ್ಟಸಂಕಟ, ರೋಗ ಮತ್ತು ಮರಣಕ್ಕೆ ದೇವರು ಕಾರಣನಲ್ಲವೆಂದೂ ಈ ಪುಸ್ತಕವು ರುಜುಪಡಿಸುತ್ತದೆ. ನೀತಿವಂತರು ಹಿಂಸಿಸಲ್ಪಡುತ್ತಿರುವಾಗ ದುಷ್ಟರೂ ದುಷ್ಟತನವೂ ಏಕೆ ಮುಂದುವರಿಯುವಂತೆ ಅನುಮತಿಸಲಾಗಿದೆ ಎಂಬುದನ್ನು ಅದು ವಿವರಿಸುತ್ತದೆ. ಈ ವಿವಾದಾಂಶವನ್ನು ಅದರ ಅಂತಿಮ ಪರಿಹಾರಕ್ಕೆ ನಡೆಸಲು ಯೆಹೋವನು ಆಸಕ್ತನಾಗಿದ್ದಾನೆಂದೂ ಅದು ತೋರಿಸುತ್ತದೆ.

43 ದೇವರ ರಾಜ್ಯಾಳಿಕೆಯಲ್ಲಿ ಜೀವಿಸಬಯಸುವವರೆಲ್ಲರೂ ತಮ್ಮ ಸಮಗ್ರತೆಯ ಮಾರ್ಗದ ಮೂಲಕ ‘ದೂರುಗಾರನಾದ’ ಸೈತಾನನಿಗೆ ಉತ್ತರಕೊಡಲೇ ಬೇಕಾಗಿರುವ ಸಮಯವು ಇದೇ ಆಗಿದೆ. (ಪ್ರಕ. 12:10, 11) ಸಮಗ್ರತೆಪಾಲಕರು ‘ಆಶ್ಚರ್ಯಕರವಾದ ಪರಿಶೋಧನೆಗಳ’ ಮಧ್ಯೆಯೂ ದೇವರ ನಾಮವು ಪವಿತ್ರೀಕರಿಸಲ್ಪಡುವಂತೆ ಮತ್ತು ಆತನ ರಾಜ್ಯವು ಬಂದು ಸೈತಾನನನ್ನೂ ಅವನ ಅಣಕಿಸುವ ಸಂತಾನವೆಲ್ಲವನ್ನೂ ಜಜ್ಜಿಬಿಡುವಂತೆ ಪ್ರಾರ್ಥಿಸುತ್ತ ಇರಬೇಕು. ಅದು ಸಂಭವಿಸುವ ಸಮಯ ದೇವರ “ಯುದ್ಧಕದನಗಳ ದಿನ”ವಾಗಿರುವುದು ಮತ್ತು ಅದರ ಬಳಿಕ, ಯೋಬನು ಪಾಲುಗಾರನಾಗಲು ನಿರೀಕ್ಷಿಸಿದ ಉಪಶಮನ ಮತ್ತು ಆಶೀರ್ವಾದಗಳು ಅನುಸರಿಸಿ ಬರುವವು.—1 ಪೇತ್ರ 4:12; ಮತ್ತಾ. 6:9, 10; ಯೋಬ 38:22; 14:13-15.

[ಪಾದಟಿಪ್ಪಣಿಗಳು]

a ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌, ಸಂಪುಟ 1, ಪುಟಗಳು 280-1, 663, 668, 1166; ಸಂಪುಟ 2, ಪುಟಗಳು 562-3.

b 1987, ಸಂಪುಟ 6, ಪುಟ 562.

c ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌, ಸಂಪುಟ 2, ಪುಟ 83.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ