ಬೈಬಲ್ ಪುಸ್ತಕ ನಂಬರ್ 45—ರೋಮಾಪುರ
ಲೇಖಕ: ಪೌಲ
ಬರೆಯಲ್ಪಟ್ಟ ಸ್ಥಳ: ಕೊರಿಂಥ
ಬರೆದು ಮುಗಿಸಿದ್ದು: ಸುಮಾರು ಸಾ.ಶ. 56
ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ನಾವು, ಮೊದಲು ಯೆಹೂದಿ ಕ್ರೈಸ್ತರ ತೀಕ್ಷ್ಣ ಹಿಂಸಕನಾಗಿದ್ದ ಪೌಲನು ಯೆಹೂದ್ಯೇತರ ಜನರಿಗೆ ಕ್ರಿಸ್ತನ ಹುರುಪಿನ ಅಪೊಸ್ತಲನಾಗುವುದನ್ನು ನೋಡಿದೆವು. ರೋಮಾಪುರದವರಿಗೆ ಬರೆಯಲಾದ ಈ ಪುಸ್ತಕದಿಂದ ನಾವು, ಈ ಮಾಜಿ ಫರಿಸಾಯನೂ ಆದರೆ ಈಗ ದೇವರ ನಂಬಿಗಸ್ತ ಸೇವಕನೂ ಆದ ಪೌಲನು ಬರೆಯುವಂತೆ ಪವಿತ್ರಾತ್ಮವು ಪ್ರೇರಿಸಿದ ಬೈಬಲ್ನ 14 ಪುಸ್ತಕಗಳನ್ನು ಆರಂಭಿಸುತ್ತೇವೆ. ರೋಮಾಪುರದವರಿಗೆ ಅವನು ಪತ್ರ ಬರೆಯುವಷ್ಟರಲ್ಲಿ ಪೌಲನು ಎರಡು ದೀರ್ಘ ಸಾರುವ ಸಂಚಾರಗಳನ್ನು ಆಗಲೇ ಮುಗಿಸಿ, ಮೂರನೆಯದ್ದನ್ನೂ ಮುಗಿಸಲಿದ್ದನು. ಅವನು ಬೇರೆ ಐದು ಪ್ರೇರಿತ ಪತ್ರಗಳನ್ನೂ ಬರೆದಿದ್ದನು: ಥೆಸಲೊನೀಕದವರಿಗೆ ಬರೆದ ಒಂದನೆಯ ಮತ್ತು ಎರಡನೆಯ ಪತ್ರಗಳು, ಗಲಾತ್ಯದವರಿಗೆ ಮತ್ತು ಕೊರಿಂಥದವರಿಗೆ ಬರೆದ ಒಂದನೆಯ ಮತ್ತು ಎರಡನೆಯ ಪತ್ರಗಳು. ಆದರೂ ನಮ್ಮ ಆಧುನಿಕ ಬೈಬಲ್ಗಳಲ್ಲಿ ಬೇರೆ ಪತ್ರಗಳಿಗಿಂತ ಮೊದಲು ರೋಮಾಪುರದವರಿಗೆ ಬರೆದ ಪತ್ರ ಕಂಡುಬರುವುದು ತಕ್ಕದ್ದಾಗಿದೆ, ಏಕೆಂದರೆ ಪೌಲನು ಯಾವ ಎರಡು ವರ್ಗಗಳಿಗೆ ಸಾರಿದನೊ ಆ ಯೆಹೂದ್ಯರ ಮತ್ತು ಯೆಹೂದ್ಯೇತರರ ಮಧ್ಯೆ ಇರುವ ಹೊಸ ಸಮಾನತೆಯನ್ನು ಅದು ವಿವರವಾಗಿ ಚರ್ಚಿಸುತ್ತದೆ. ದೇವರು ತನ್ನ ಜನರೊಂದಿಗೆ ವ್ಯವಹರಿಸುವುದರಲ್ಲಿ ಉಂಟಾದ ಬದಲಾವಣೆಯನ್ನು ವಿವರಿಸಿ, ಸುವಾರ್ತೆಯು ಯೆಹೂದ್ಯೇತರರಿಗೂ ಸಾರಲ್ಪಡುವುದೆಂದು ಪ್ರೇರಿತ ಹೀಬ್ರು ಶಾಸ್ತ್ರಗಳು ಬಹುಕಾಲದ ಹಿಂದೆಯೇ ಮುಂತಿಳಿಸಿದ್ದನ್ನು ಅದು ತೋರಿಸುತ್ತದೆ.
2 ಪೌಲನು ತೆರ್ತ್ಯನನ್ನು ಕಾರ್ಯದರ್ಶಿಯಾಗಿ ಉಪಯೋಗಿಸುತ್ತ, ಹೀಬ್ರು ಶಾಸ್ತ್ರಗಳ ದಿಗ್ಭ್ರಮೆಗೊಳಿಸುವ ಸಂಖ್ಯೆಯ ಉದ್ಧರಣೆಗಳಿಗೆ ಕ್ಷಿಪ್ರ ವಾದಗಳನ್ನು ಹೆಣೆದು ಈ ಪುಸ್ತಕವನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಅತಿ ಪ್ರಬಲ ಪುಸ್ತಕಗಳಲ್ಲಿ ಒಂದಾಗಿ ಮಾಡುತ್ತಾನೆ. ಯೆಹೂದ್ಯರಿಂದಲೂ ಗ್ರೀಕರಿಂದಲೂ ಕೂಡಿದ್ದ ಒಂದನೆಯ ಶತಮಾನದ ಕ್ರೈಸ್ತ ಸಭೆಯಲ್ಲಿ ಎದ್ದ ಸಮಸ್ಯೆಗಳನ್ನು ಪೌಲನು ಗಮನಾರ್ಹ ಭಾಷಾಶೈಲಿಯಲ್ಲಿ ಚರ್ಚಿಸುತ್ತಾನೆ. ಯೆಹೂದ್ಯರು ಅಬ್ರಹಾಮನ ವಂಶಜರಾಗಿದ್ದ ಕಾರಣ ಅವರಿಗೆ ಸಭೆಯಲ್ಲಿ ಆದ್ಯತೆ ಕೊಡಬೇಕಿತ್ತೊ? ಮೋಶೆಯ ಧರ್ಮಶಾಸ್ತ್ರದಿಂದ ಸ್ವತಂತ್ರರಾಗಿದ್ದ ಪ್ರೌಢ ಕ್ರೈಸ್ತರಿಗೆ ಹಳೆಯ ಪದ್ಧತಿಗಳನ್ನು ಇನ್ನೂ ಅನುಸರಿಸುತ್ತಿದ್ದ ಬಲಹೀನ ಯೆಹೂದಿ ಸಹೋದರರನ್ನು ಮುಗ್ಗರಿಸಿ ಬೀಳಿಸುವ ಹಕ್ಕಿತ್ತೊ? ಈ ಪುಸ್ತಕದಲ್ಲಿ ಪೌಲನು, ದೇವರ ಮುಂದೆ ಯೆಹೂದ್ಯರೂ ಯೆಹೂದ್ಯೇತರರೂ ಸಮಾನರೆಂದು ಮತ್ತು ಜನರು ನೀತಿವಂತರೆಂದು ನಿರ್ಣಯಿಸಲ್ಪಡುವುದು ಮೋಶೆಯ ಧರ್ಮಶಾಸ್ತ್ರದಿಂದಲ್ಲ, ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವ ಹಾಗೂ ದೇವರ ಅಪಾರ ದಯೆಯ ಕಾರಣದಿಂದಲೇ ಎಂದು ಸ್ಥಿರವಾಗಿ ಸ್ಥಾಪಿಸಿದನು. ಅದೇ ಸಮಯದಲ್ಲಿ ಕ್ರೈಸ್ತರು ತಮ್ಮ ಮೇಲಿರುವ ವಿವಿಧ ಅಧಿಕಾರಿಗಳಿಗೆ ಯೋಗ್ಯ ಅಧೀನತೆ ತೋರಿಸಬೇಕೆಂದೂ ದೇವರು ಅಪೇಕ್ಷಿಸುತ್ತಾನೆ.
3 ರೋಮನ್ ಸಭೆ ಹೇಗೆ ಆರಂಭಗೊಂಡಿತು? ಸಾ.ಶ.ಪೂ. 63ರಲ್ಲಿ ಸೇನಾಪತಿ ಪಾಂಪೀ ಯೆರೂಸಲೇಮನ್ನು ವಶಪಡಿಸಿಕೊಂಡ ಸಮಯದಿಂದಲಾದರೂ ರೋಮ್ನಲ್ಲಿ ಯೆಹೂದಿ ಸಮಾಜದವರು ದೊಡ್ಡ ಪ್ರಮಾಣದಲ್ಲಿದ್ದರು. ಸಾ.ಶ. 33ರಲ್ಲಿ ಆ ಯೆಹೂದ್ಯರಲ್ಲಿ ಕೆಲವರು ಯೆರೂಸಲೇಮಲ್ಲಿ ಪಂಚಾಶತ್ತಮಕ್ಕೆ ಬಂದಿದ್ದರೆಂದು ಮತ್ತು ಸುವಾರ್ತೆ ಸಾರಲ್ಪಡುವುದನ್ನು ಕೇಳಿದರೆಂದು ಅಪೊಸ್ತಲರ ಕೃತ್ಯಗಳು 2:10 ಸ್ಪಷ್ಟವಾಗಿ ಹೇಳುತ್ತದೆ. ಕ್ರೈಸ್ತತ್ವಕ್ಕೆ ಪರಿವರ್ತಿತರಾದ ಆ ಪ್ರವಾಸಿಗಳು ಅಪೊಸ್ತಲರಿಂದ ಕಲಿತುಕೊಳ್ಳಲಿಕ್ಕಾಗಿ ಅಲ್ಲಿಯೇ ಉಳಿದುಕೊಂಡು, ಬಳಿಕ ರೋಮ್ನಿಂದ ಬಂದಿದ್ದವರು ಅಲ್ಲಿಗೆ ಹಿಂದಿರುಗಿದರೆಂಬುದರಲ್ಲಿ ಸಂಶಯವಿಲ್ಲ. ಕೆಲವರು ಪ್ರಾಯಶಃ ಯೆರೂಸಲೇಮಿನಲ್ಲಿ ಹಿಂಸೆ ಆರಂಭಗೊಂಡಾಗ ಹಿಂದೆ ಹೋಗಿದ್ದಿರಬಹುದು. (ಅ.ಕೃ. 2:41-47; 8:1, 4) ಅಲ್ಲದೆ, ಅಂದಿನ ಜನರು ತುಂಬ ಪ್ರವಾಸ ಮಾಡುವವರಾಗಿದ್ದರು. ಪೌಲನಿಗೆ ರೋಮ್ ಸಭೆಯ ಅನೇಕ ಸದಸ್ಯರ ಆಪ್ತ ಪರಿಚಯವಿದ್ದ ಕಾರಣವನ್ನು ಇದು ವಿವರಿಸುತ್ತದೆ. ಅವರಲ್ಲಿ ಕೆಲವರು ಪೌಲನ ಸಾರೋಣದ ಫಲವಾಗಿ ಗ್ರೀಸ್ನಲ್ಲಿ ಅಥವಾ ಏಷಿಯದಲ್ಲಿ ಸುವಾರ್ತೆಯನ್ನು ಕೇಳಿದ್ದಿರಬಹುದು.
4 ಈ ಸಭೆಯ ಬಗ್ಗೆ ಪ್ರಥಮ ಭರವಸಾರ್ಹ ಮಾಹಿತಿಯು ಪೌಲನ ಪತ್ರದಲ್ಲಿ ಕಂಡುಬರುತ್ತದೆ. ಈ ಸಭೆಯಲ್ಲಿ ಯೆಹೂದಿ ಕ್ರೈಸ್ತರೂ ಯೆಹೂದ್ಯೇತರ ಕ್ರೈಸ್ತರೂ ಇದ್ದರೆಂದೂ ಅವರ ಹುರುಪು ಪ್ರಶಂಸಾರ್ಹವಾಗಿತ್ತೆಂದೂ ಇದರಿಂದ ವ್ಯಕ್ತವಾಗುತ್ತದೆ. ಅವನು ಅವರಿಗನ್ನುವುದು: “ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ” ಬಂದಿದೆ ಮತ್ತು “ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧ”ವಾಗಿದೆ. (ರೋಮಾ. 1:8; 16:19) ಸೂಟೋನಿಯಸ್ ಎಂಬವನು ಎರಡನೆಯ ಶತಮಾನದಲ್ಲಿ ಬರೆಯುತ್ತ, ಕ್ಲೌದಿಯ ಚಕ್ರವರ್ತಿಯ ಆಳ್ವಿಕೆಯ ಸಮಯದಲ್ಲಿ (ಸಾ.ಶ. 41-54) ಯೆಹೂದ್ಯರನ್ನು ರೋಮ್ನಿಂದ ಗಡೀಪಾರು ಮಾಡಲಾಗಿತ್ತು ಎಂದು ಹೇಳುತ್ತಾನೆ. ಆದರೂ ಅವರು ತರುವಾಯ ಹಿಂದಿರುಗಿ ಬಂದರೆಂಬುದನ್ನು, ರೋಮ್ನಲ್ಲಿ ಅಕ್ವಿಲ ಮತ್ತು ಪ್ರಿಸ್ಕಿಲ್ಲ ಇದ್ದದ್ದು ತೋರಿಸುತ್ತದೆ. ಇವರು, ಕ್ಲೌದಿಯನ ಆಜ್ಞೆಯ ಪ್ರಕಾರ ರೋಮ್ ನಗರವನ್ನು ಬಿಟ್ಟುಬಂದಾಗ ಪೌಲನು ಕೊರಿಂಥದಲ್ಲಿ ಸಂಧಿಸಿದ್ದ ಯೆಹೂದ್ಯರಾಗಿದ್ದರು. ಆದರೆ ಪೌಲನು ರೋಮ್ನ ಸಭೆಗೆ ಬರೆದಾಗ ಅವರು ತಿರುಗಿ ರೋಮ್ನಲ್ಲಿದ್ದರು.—ಅ.ಕೃ. 18:2; ರೋಮಾ. 16:3.
5 ಈ ಪತ್ರದ ವಿಶ್ವಾಸಾರ್ಹತೆಯು ಸ್ಥಿರವಾಗಿ ಸ್ಥಾಪಿಸಲ್ಪಟ್ಟಿರುತ್ತದೆ. ಅದರ ಪೀಠಿಕೆ ತಿಳಿಸುವಂತೆ ಇದು, “ಯೇಸು ಕ್ರಿಸ್ತನ ದಾಸನೂ ಅಪೊಸ್ತಲನಾಗುವದಕ್ಕೆ ಕರೆಯಲ್ಪಟ್ಟವನೂ . . . ಆಗಿರುವ ಪೌಲನು ರೋಮಾಪುರದಲ್ಲಿ ದೇವರಿಗೆ ಪ್ರಿಯರೂ ದೇವಜನರಾಗುವದಕ್ಕೆ ಕರೆಯಲ್ಪಟ್ಟವರೂ ಆಗಿರುವವರೆಲ್ಲರಿಗೆ” ಬರೆದ ಪತ್ರವಾಗಿದೆ. (ರೋಮಾ. 1:1, 2) ಅದರ ಬಾಹ್ಯ ರುಜುವಾತು ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಸಂಬಂಧದಲ್ಲಿ ದೊರೆತಿರುವವುಗಳಲ್ಲಿ ಅತಿ ಆದಿಯದ್ದಾಗಿದೆ. ಪೇತ್ರನು ಪ್ರಾಯಶಃ ಆರರಿಂದ ಎಂಟು ವರುಷಗಳ ತರುವಾಯ ಬರೆದ ತನ್ನ ಪ್ರಥಮ ಪತ್ರದಲ್ಲಿ ಇದಕ್ಕೆ ಹೋಲುವ ಎಷ್ಟೋ ಅಭಿವ್ಯಕ್ತಿಗಳನ್ನು ಬಳಸುವುದರಿಂದ ಅನೇಕ ವಿದ್ವಾಂಸರು ಅವನು ರೋಮಾಪುರದವರಿಗೆ ಬರೆದ ಪತ್ರದ ಒಂದು ಪ್ರತಿಯನ್ನು ಈ ಮೊದಲೇ ನೋಡಿದ್ದನೆಂದು ಅಭಿಪ್ರಯಿಸುತ್ತಾರೆ. ರೋಮಾಪುರದವರಿಗೆ ಬರೆದ ಪತ್ರವು ಪೌಲನ ಬರಹಗಳ ಭಾಗವಾಗಿ ಎಣಿಸಲಾಗಿತ್ತೆಂಬುದು ಸ್ಪಷ್ಟ ಮತ್ತು ಇದನ್ನು, ಪ್ರಥಮ ಶತಮಾನದ ಕೊನೆಯ ಭಾಗದಲ್ಲಿ ಅಥವಾ ಎರಡನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ ರೋಮ್ನ ಕ್ಲೆಮೆಂಟ್, ಸ್ಮುರ್ನದ ಪಾಲಿಕಾರ್ಪ್ ಮತ್ತು ಆ್ಯಂಟಿಯೋಕ್ನ ಇಗ್ನೇಷ್ಯಸ್ ಉದ್ಧರಿಸಿದ್ದರು.
6 ರೋಮಾಪುರದವರಿಗೆ ಬರೆದ ಪುಸ್ತಕವು, ಪೌಲನ ಎಂಟು ಪತ್ರಗಳೊಂದಿಗೆ ಚೆಸ್ಟರ್ ಬೀಟೀ ಪಪೈರಸ್ ನಂ. 2 (P46) ಎಂಬ ಹಸ್ತಾಕ್ಷರಗ್ರಂಥದಲ್ಲಿ ಕಂಡುಬರುತ್ತದೆ. ಬಹಳ ಹಿಂದಿನ ಈ ಹಸ್ತಾಕ್ಷರಗ್ರಂಥದ ಸಂಬಂಧದಲ್ಲಿ, ಸರ್ ಫ್ರೆಡ್ರಿಕ್ ಕೆನ್ಯನ್ ಎಂಬವರು ಬರೆದುದು: “ಇಲ್ಲಿ ನಮಗೆ, ಮೂರನೆಯ ಶತಮಾನದ ಆದಿಭಾಗದಲ್ಲಿ ಬರೆಯಲ್ಪಟ್ಟಿತೆಂದು ವ್ಯಕ್ತವಾಗುವ, ಪೌಲನ ಪತ್ರಗಳ, ಸುಮಾರಾಗಿ ಪೂರ್ತಿಗೊಳಿಸಲ್ಪಟ್ಟ ಹಸ್ತಪ್ರತಿಗಳಿವೆ.”a ಈ ಚೆಸ್ಟರ್ ಬೀಟೀ ಗ್ರೀಕ್ ಬಿಬ್ಲಿಕಲ್ ಪಪೈರಿಗಳು, ಸಾ.ಶ. ನಾಲ್ಕನೆಯ ಶತಮಾನದ, ಪ್ರಸಿದ್ಧ ಸೈನಾಯ್ಟಿಕ್ ಹಸ್ತಪ್ರತಿ ಮತ್ತು ವ್ಯಾಟಿಕನ್ ಹಸ್ತಪ್ರತಿ ನಂ. 1209—ಇವೆರಡಕ್ಕಿಂತಲೂ ಹೆಚ್ಚು ಹಳೆಯದ್ದಾಗಿವೆ. ಇವುಗಳಲ್ಲೂ ರೋಮಾಪುರ ಪುಸ್ತಕ ಸೇರಿದೆ.
7 ರೋಮಾಪುರದವರಿಗೆ ಬರೆದ ಪತ್ರ ಯಾವಾಗ ಮತ್ತು ಎಲ್ಲಿ ಬರೆಯಲ್ಪಟ್ಟಿತು? ಈ ಪತ್ರವನ್ನು ಗ್ರೀಸ್ನಲ್ಲಿ, ಬಹುಮಟ್ಟಿಗೆ ಕೊರಿಂಥದಲ್ಲಿ, ಪೌಲನು ತನ್ನ ಮೂರನೆಯ ಮಿಷನೆರಿ ಪ್ರಯಾಣದ ಅಂತ್ಯಭಾಗದಲ್ಲಿ, ಕೆಲವು ತಿಂಗಳು ಅಲ್ಲಿದ್ದಾಗ ಬರೆದನೆಂಬ ವಿಷಯದಲ್ಲಿ ಬೈಬಲ್ ವ್ಯಾಖ್ಯಾನಕಾರರಲ್ಲಿ ಯಾವದೇ ಅಸಮ್ಮತಿಯೂ ಇಲ್ಲ. ಈ ಪುಸ್ತಕದ ಆಂತರಿಕ ಸಾಕ್ಷ್ಯವು ಅದು ಕೊರಿಂಥದಲ್ಲಿ ಬರೆಯಲ್ಪಟ್ಟಿತ್ತೆಂದು ತೋರಿಸುತ್ತದೆ. ಪೌಲನು ಅಲ್ಲಿಯ ಸಭೆಯ ಸದಸ್ಯನಾಗಿದ್ದ ಗಾಯ ಎಂಬವನ ಮನೆಯಿಂದ ಇದನ್ನು ಬರೆದು, ಸಮೀಪದ ಕೊರಿಂಥದ ರೇವು ಪಟ್ಟಣವಾದ ಕೆಂಕ್ರೆಯ ಸಭೆಯ ಫೊಯಿಬೆಯನ್ನು ಶಿಫಾರಸ್ಸು ಮಾಡುತ್ತಾನೆ. ಫೊಯಿಬೆಯೇ ಈ ಪತ್ರವನ್ನು ರೋಮ್ಗೆ ಕೊಂಡೊಯ್ದಳೆಂಬುದು ವ್ಯಕ್ತ. (ರೋಮಾ. 16:1, 23; 1 ಕೊರಿಂ. 1:14) ರೋಮಾಪುರ 15:23 (NW)ರಲ್ಲಿ ಪೌಲನು, “ಈ ಪ್ರದೇಶಗಳಲ್ಲಿ ನಾನು ಸೇವೆಮಾಡಿರದ ಯಾವ ಕ್ಷೇತ್ರವೂ ಇಲ್ಲ” ಎಂದು ಬರೆದು, ಮುಂದಿನ ವಚನದಲ್ಲಿ, ತಾನು ತನ್ನ ಮಿಷನೆರಿ ಕೆಲಸವನ್ನು ಪಶ್ಚಿಮ ದಿಕ್ಕಿಗೆ, ಅಂದರೆ ಸ್ಪೇನ್ ದೇಶದ ಕಡೆಗೆ ವಿಸ್ತರಿಸಲು ಯೋಜಿಸಿದ್ದಾನೆಂದು ಹೇಳುತ್ತಾನೆ. ಅವನು ತನ್ನ ಮೂರನೆಯ ಪ್ರಯಾಣದಂತ್ಯದಲ್ಲಿ ಅಂದರೆ ಸಾ.ಶ. 56ರ ಆರಂಭದಲ್ಲಿ ಹೀಗೆ ಬರೆಯಶಕ್ತನಾಗಿದ್ದನು.
ಪ್ರಯೋಜನಕರವೇಕೆ?
20 ರೋಮಾಪುರದವರಿಗೆ ಬರೆದ ಪತ್ರವು ದೇವರಲ್ಲಿ ನಂಬಿಕೆಯಿಡುವುದಕ್ಕೆ ನ್ಯಾಯಸಮ್ಮತ ಆಧಾರವನ್ನು ಕೊಡುತ್ತಾ ಹೇಳುವುದು: “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” ಇದಕ್ಕಿಂತಲೂ ಹೆಚ್ಚಾಗಿ, ಇದು ಆತನ ನೀತಿಯನ್ನು ಹೊಗಳುತ್ತ, ಆತನ ಮಹಾ ಕರುಣೆ ಮತ್ತು ಅಪಾರ ದಯೆಯನ್ನು ತಿಳಿಯಪಡಿಸುತ್ತದೆ. ಇದನ್ನು ಎಣ್ಣೇ ಮರದ ದೃಷ್ಟಾಂತದ ಮೂಲಕ ಸೊಗಸಾಗಿ ನಮ್ಮ ಗಮನಕ್ಕೆ ತರಲಾಗಿದೆ. ಇದರಲ್ಲಿ, ಸ್ವಾಭಾವಿಕವಾಗಿ ಬೆಳೆದುಬಂದ ರೆಂಬೆಗಳು ಕಡಿಯಲ್ಪಟ್ಟು ಕಾಡುರೆಂಬೆಗಳನ್ನು ಕಸಿಕಟ್ಟಲಾಗುತ್ತದೆ. ದೇವರ ಈ ಕಾಠಿಣ್ಯ ಮತ್ತು ದಯೆಯ ಬಗ್ಗೆ ಚಿಂತನೆ ಮಾಡುತ್ತ ಪೌಲನು ಉದ್ಗರಿಸುವುದು: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವದಕ್ಕೆ ಎಷ್ಟೋ ಅಸಾಧ್ಯ!”—1:20; 11:33.
21 ಈ ಸಂಬಂಧದಲ್ಲಿಯೇ ರೋಮಾಪುರದವರಿಗೆ ಬರೆದ ಈ ಪುಸ್ತಕವು ದೇವರ ಪವಿತ್ರ ರಹಸ್ಯದ ಮುಂದಿನ ಬೆಳವಣಿಗೆಯನ್ನು ವಿವರಿಸುತ್ತದೆ. ಕ್ರೈಸ್ತ ಸಭೆಯಲ್ಲಿ ಇನ್ನು ಮೇಲೆ ಯೆಹೂದ್ಯ, ಅನ್ಯನೆಂಬ ಭೇದವಿಲ್ಲ; ಎಲ್ಲ ಜನಾಂಗಗಳವರು ಯೇಸು ಕ್ರಿಸ್ತನ ಮೂಲಕ ಯೆಹೋವನ ಅಪಾರ ದಯೆಯಲ್ಲಿ ಭಾಗಿಗಳಾಗಬಹುದು. “ದೇವರಿಗೆ ಪಕ್ಷಪಾತವಿಲ್ಲ.” “ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ.” “ಯೆಹೂದ್ಯನಿಗೂ ಗ್ರೀಕನಿಗೂ ಹೆಚ್ಚುಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತ; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ.” ಇವರೆಲ್ಲರೂ ನೀತಿವಂತರೆಂದು ಎಣಿಸಲ್ಪಡುವುದು ಕ್ರಿಯೆಗಳಿಂದಲ್ಲ, ನಂಬಿಕೆಯಿಂದಲೇ.—2:11, 29; 10:12; 3:28.
22 ಈ ಪತ್ರದಲ್ಲಿ ರೋಮ್ನ ಕ್ರೈಸ್ತರಿಗಿರುವ ಪ್ರಾಯೋಗಿಕ ಸಲಹೆಯು, ಹೊರಗೆ ಲೋಕದಲ್ಲಿ ತದ್ರೀತಿಯ ಸಮಸ್ಯೆಗಳನ್ನು ಎದುರಿಸುವ ಇಂದಿನ ಕ್ರೈಸ್ತರಿಗೂ ಅಷ್ಟೇ ಪ್ರಯೋಜನಕರವಾಗಿದೆ. ಹೊರಗಿನವರನ್ನು ಸೇರಿಸಿ, “ಎಲ್ಲರ ಸಂಗಡ ಸಮಾಧಾನದಿಂದಿರಿ” ಎಂದು ಕ್ರೈಸ್ತರಿಗೆ ಬುದ್ಧಿಹೇಳಲಾಗಿದೆ. ಪ್ರತಿಯೊಬ್ಬನೂ ‘ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಬೇಕು.’ ಏಕೆಂದರೆ ಇದು ದೇವರ ಏರ್ಪಾಡಾಗಿದೆ. ಅವರಿಗೆ ಭಯಪಡಬೇಕಾದವರು ನಿಯಮಪಾಲಕರಲ್ಲ, ಬದಲಾಗಿ ಕೆಟ್ಟ ಕೃತ್ಯಗಳನ್ನು ನಡೆಸುವವರೇ. ಕ್ರೈಸ್ತರು ಶಿಕ್ಷೆಯ ಭಯದಿಂದ ಮಾತ್ರವಲ್ಲ, ಕ್ರೈಸ್ತ ಮನಸ್ಸಾಕ್ಷಿಯ ಕಾರಣದಿಂದಲೂ ನಿಯಮಪಾಲಿಸಬೇಕು. ಹೀಗೆ ಅವರು ತಮ್ಮ ತೆರಿಗೆಯನ್ನು ತೆರುತ್ತ, ಸಲ್ಲಿಸತಕ್ಕದ್ದನ್ನು ಸಲ್ಲಿಸುತ್ತ, ಕರ್ತವ್ಯಗಳನ್ನು ಪೂರೈಸುತ್ತಾ, ‘ಒಬ್ಬರನ್ನೊಬ್ಬರು ಪ್ರೀತಿಸುವುದನ್ನು’ ಬಿಟ್ಟು ಬೇರಾರಿಗೂ ಇನ್ನಾವ ಋಣವೂ ಇಲ್ಲದವರಾಗಿರಬೇಕು. ಪ್ರೀತಿಯು ಧರ್ಮಪ್ರಮಾಣವನ್ನು ನೆರವೇರಿಸುತ್ತದೆ.—12:17-21; 13:1-10.
23 ಬಹಿರಂಗ ಸಾಕ್ಷಿಕೊಡುವ ವಿಷಯಕ್ಕೆ ಪೌಲನು ಒತ್ತುಕೊಟ್ಟು ಮಾತಾಡುತ್ತಾನೆ. ಒಬ್ಬನು ನೀತಿಗಾಗಿ ನಂಬಿಕೆಯನ್ನು ಬೆಳೆಸುವುದು ಹೃದಯದಿಂದಾದರೂ, ರಕ್ಷಣೆಗಾಗಿ ಬಹಿರಂಗ ಘೋಷಣೆ ಮಾಡುವುದು ಬಾಯಿಂದಲೇ. ‘ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.’ ಆದರೆ ಇದು ಸಂಭವಿಸಬೇಕಾದರೆ, ಸಾರಿ ಹೇಳುವವರು ಹೋಗಿ “ಶುಭದ ಸುವಾರ್ತೆಯನ್ನು” ಸಾರುವುದು ಅಗತ್ಯ. ಯಾರ ಧ್ವನಿಯು “ಲೋಕದ ಕಟ್ಟಕಡೆಯ ವರೆಗೂ” ಹೋಗಿರುತ್ತದೊ ಅಂಥವರಲ್ಲಿ ನಾವೂ ಇರುವಲ್ಲಿ ನಾವು ಧನ್ಯರೇ ಸರಿ! (10:13, 15, 18) ಮತ್ತು ಈ ಸಾರುವ ಕೆಲಸದ ಸಿದ್ಧತೆಯಾಗಿ, ಪೌಲನಿಗೆ ಪ್ರೇರಿತ ಶಾಸ್ತ್ರದ ಪರಿಚಯ ಎಷ್ಟಿತ್ತೊ ಅಷ್ಟೇ ಪರಿಚಯವುಳ್ಳವರಾಗಿರಲು ಪ್ರಯತ್ನಿಸೋಣ. ಏಕೆಂದರೆ ಇದೊಂದೇ ಭಾಗದಲ್ಲಿ (10:11-21) ಅವನು ಹೀಬ್ರು ಶಾಸ್ತ್ರದಿಂದ ಅನೇಕಾನೇಕ ಉದ್ಧರಣೆಗಳನ್ನು ಮಾಡುತ್ತಾನೆ. (ಯೆಶಾ. 28:16; ಯೋವೇ. 2:32; ಯೆಶಾ. 52:7; 53:1; ಕೀರ್ತ. 19:4; ಧರ್ಮೋ. 32:21; ಯೆಶಾ. 65:1, 2) “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು” ಎಂದು ಅವನು ಹೇಳಸಾಧ್ಯವಿತ್ತು.—ರೋಮಾ. 15:4.
24 ಕ್ರೈಸ್ತ ಸಭೆಯೊಳಗೆ ಇರಬೇಕಾದ ಸಂಬಂಧಗಳ ಬಗ್ಗೆ ಅತ್ಯುತ್ತಮ ಪ್ರಾಯೋಗಿಕ ಸಲಹೆ ಈ ಪುಸ್ತಕದಲ್ಲಿದೆ. ಸಭೆಯವರ ಜನಾಂಗೀಯ, ಕುಲಸಂಬಂಧ ಅಥವಾ ಸಾಮಾಜಿಕ ಹಿನ್ನೆಲೆ ಯಾವುದೇ ಆಗಿದ್ದರೂ, ಎಲ್ಲರೂ ತಮ್ಮ ಮನಸ್ಸುಗಳನ್ನು ಮಾರ್ಪಡಿಸಿ, “ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ” ಆಗಿರುವ ವಿಷಯಗಳಿಗನುಸಾರ ದೇವರಿಗೆ ಪವಿತ್ರ ಸೇವೆ ಸಲ್ಲಿಸಬೇಕು. (11:17-22; 12:1, 2) ರೋಮಾಪುರ 12:3-16ರಲ್ಲಿ ಪೌಲನು ಕೊಟ್ಟ ಸಲಹೆಯಾದ್ಯಂತ ಎಂಥ ವ್ಯಾವಹಾರಿಕ ವಿವೇಕಶೀಲತೆ ವ್ಯಕ್ತವಾಗುತ್ತದೆ! ಕ್ರೈಸ್ತ ಸಭೆಯಲ್ಲಿ ಎಲ್ಲರಲ್ಲಿ ಹುರುಪು, ದೈನ್ಯಭಾವ ಮತ್ತು ಕೋಮಲ ಮಮತೆಯನ್ನು ಹಬ್ಬಿಸುವ ಉತ್ಕೃಷ್ಟ ಸಲಹೆಯು ಇಲ್ಲಿರುವುದು ನಿಶ್ಚಯ. ಒಡಕುಗಳನ್ನು ಉಂಟುಮಾಡುವವರನ್ನು ಗಮನಿಸಿ, ಅವರಿಂದ ದೂರವಿರುವುದು ಮಾತ್ರವಲ್ಲ, ಸಭೆಯಲ್ಲಿ ಒಳ್ಳೇ ಸಹವಾಸಗಳಿಂದ ಬರುವ ಪರಸ್ಪರ ಆನಂದ ಮತ್ತು ಚೈತನ್ಯಗಳ ಬಗ್ಗೆಯೂ ಅಂತಿಮ ಅಧ್ಯಾಯಗಳಲ್ಲಿ ಮಾತಾಡುತ್ತಾನೆ.—16:17-19; 15:7, 32.
25 ಕ್ರೈಸ್ತರಾಗಿರುವ ನಾವು, ಒಬ್ಬರೊಂದಿಗೆ ಒಬ್ಬರಿಗಿರುವ ಸಂಬಂಧವನ್ನು ಎಚ್ಚರಿಕೆಯಿಂದ ಗಮನಿಸುತ್ತ ಮುಂದುವರಿಯಬೇಕು. “ಯಾಕಂದರೆ ತಿನ್ನುವದೂ ಕುಡಿಯುವದೂ ದೇವರ ರಾಜ್ಯವಲ್ಲ; ನೀತಿಯೂ ಸಮಾಧಾನವೂ ಪವಿತ್ರಾತ್ಮನಿಂದಾಗುವ ಆನಂದವೂ ಆಗಿದೆ.” (14:17) ಈ ನೀತಿ, ಶಾಂತಿ ಮತ್ತು ಆನಂದವು ವಿಶೇಷವಾಗಿ “ಕ್ರಿಸ್ತನೊಂದಿಗೆ ಬಾಧ್ಯರು” ಆಗಿರುವ ಮತ್ತು ಸ್ವರ್ಗೀಯ ರಾಜ್ಯದಲ್ಲಿ ಅವನೊಂದಿಗೆ “ಮಹಿಮೆಯಲ್ಲಿ” ಭಾಗಿಗಳಾಗುವವರ ಪಾಲು. ಏದೆನ್ ತೋಟದಲ್ಲಿ ಕೊಡಲಾಗಿದ್ದ ರಾಜ್ಯ ವಾಗ್ದಾನದ ನೆರವೇರಿಕೆಯ ವಿಷಯದಲ್ಲಿ ಈ ಪುಸ್ತಕವು ಮುಂದಿನ ಹೆಜ್ಜೆಯೊಂದನ್ನು ತಿಳಿಸುವ ರೀತಿಯನ್ನು ಗಮನಿಸಿರಿ. ಅದನ್ನುವುದು: “ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು.” (ರೋಮಾ. 8:17; 16:20; ಆದಿ. 3:15) ಈ ಮಹಾ ಸತ್ಯಗಳನ್ನು ನಂಬುವವರಾಗಿರುವ ನಾವು, ಆನಂದ ಮತ್ತು ಶಾಂತಿಯಿಂದ ತುಂಬಿ ನಿರೀಕ್ಷೆಯಲ್ಲಿ ಸಮೃದ್ಧರಾಗಿರೋಣ. ರಾಜ್ಯ ಸಂತಾನದೊಂದಿಗೆ ಜಯಶಾಲಿಗಳಾಗುವ ದೃಢನಿಶ್ಚಯ ನಮ್ಮದಾಗಿರಲಿ. ಏಕೆಂದರೆ ಮೇಲಣ ಆಕಾಶದಲ್ಲಿ ಮತ್ತು ಕೆಳಗಣ ಭೂಮಿಯಲ್ಲಿರುವ ಯಾವುದೂ, ‘ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರದು.’—ರೋಮಾ. 8:39; 15:13.
[ಪಾದಟಿಪ್ಪಣಿ]
a ನಮ್ಮ ಬೈಬಲ್ ಮತ್ತು ಹಳೆಯ ಕಾಲದ ಹಸ್ತಪ್ರತಿಗಳು (ಇಂಗ್ಲಿಷ್), 1958, ಪುಟ 188.