ಬೈಬಲ್ ಪುಸ್ತಕ ನಂಬರ್ 46—1 ಕೊರಿಂಥ
ಲೇಖಕ: ಪೌಲ
ಬರೆಯಲ್ಪಟ್ಟ ಸ್ಥಳ: ಎಫೆಸ
ಬರೆದು ಮುಗಿಸಿದ್ದು: ಸುಮಾರು ಸಾ.ಶ. 55
ಕೊರಿಂಥವು “ಹೆಸರುವಾಸಿಯಾದ ಮತ್ತು ಭೋಗಲಾಲಸೆಯ ನಗರವಾಗಿದ್ದು, ಪೌರಸ್ತ್ಯ ಮತ್ತು ಪಾಶ್ಚಾತ್ಯ ದುರಾಚಾರಗಳ ಮಿಲನಸ್ಥಳವಾಗಿತ್ತು.”a ಪೆಲಪನೀಸಸ್ ಮತ್ತು ಐರೋಪ್ಯ ಗ್ರೀಸ್ನ ಮಧ್ಯದಲ್ಲಿರುವ ಕಿರಿದಾದ ಭೂಸಂಧಿಯಲ್ಲಿ ನೆಲೆಸಿದ್ದ ಕೊರಿಂಥವು ಪ್ರಧಾನ ಭೂಭಾಗಕ್ಕೆ ನಡೆಸುವ ಮುಖ್ಯಮಾರ್ಗವಾಗಿತ್ತು. ಅಪೊಸ್ತಲ ಪೌಲನ ದಿನಗಳಲ್ಲಿ, ಅದರಲ್ಲಿದ್ದ 4 ಲಕ್ಷದಷ್ಟು ಜನಸಂಖ್ಯೆಯನ್ನು ರೋಮ್, ಅಲೆಗ್ಸಾಂಡ್ರಿಯ ಮತ್ತು ಸಿರಿಯದ ಅಂತಿಯೋಕ್ಯ ಮಾತ್ರ ಮೀರಿಸಿತ್ತು. ಕೊರಿಂಥದ ಪೂರ್ವದಲ್ಲಿ ಇಜೀಯನ್ ಸಮುದ್ರವೂ ಪಶ್ಚಿಮದಲ್ಲಿ ಕೊರಿಂಥ ಕೊಲ್ಲಿ ಮತ್ತು ಅಯೋನಿಯನ್ ಸಮುದ್ರವೂ ಇವೆ. ಹೀಗೆ ಅಖೀಯ ಪ್ರಾಂತ್ಯದ ರಾಜಧಾನಿಯಾಗಿದ್ದ ಕೊರಿಂಥವು, ಕೆಂಕ್ರೆಯ ಮತ್ತು ಲಿಖೀಯಮ್ ಎಂಬ ತನ್ನ ಎರಡು ರೇವುಗಳಿಂದಾಗಿ ವ್ಯಾಪಾರದ ಪ್ರಾಮುಖ್ಯ ಕೇಂದ್ರವಾಗಿತ್ತು. ಅದು ಗ್ರೀಕ್ ಕಲಿಕೆಯ ಕೇಂದ್ರವೂ ಆಗಿತ್ತು. “ಅದರ ಸಂಪತ್ತು ಎಷ್ಟು ಹೆಸರುವಾಸಿ ಆಗಿತ್ತೆಂದರೆ ಅದು ಮನೆಮಾತಾಗಿತ್ತು; ಅದರ ನಿವಾಸಿಗಳ ಭೋಗಲಾಲಸೆಯೂ ಸ್ವೇಚ್ಛಾಚಾರವೂ ಅಷ್ಟೇ ಹೆಸರಾಂತವಾಗಿತ್ತು.”b ಅದರ ವಿಧರ್ಮಿ ಧಾರ್ಮಿಕ ಪದ್ಧತಿಗಳಲ್ಲಿ ಅಫ್ರಡೈಟಿಯ (ರೋಮನ್ ವೀನಸ್ಳ ಪ್ರತಿರೂಪ) ಆರಾಧನೆಯು ಒಳಗೂಡಿತ್ತು. ವಿಷಯಲಂಪಟತ್ವವು ಕೊರಿಂಥದ ಆರಾಧನೆಯ ಒಂದು ಭಾಗವಾಗಿತ್ತು.
2 ಅಪೊಸ್ತಲ ಪೌಲನು ಸಾ.ಶ. 50ರಲ್ಲಿ ಪ್ರಯಾಣ ಮಾಡಿದ್ದು, ಏಳಿಗೆಯ ಸ್ಥಿತಿಯಲ್ಲಿದ್ದರೂ ನೈತಿಕವಾಗಿ ಕುಸಿದಿದ್ದ ರೋಮನ್ ಜಗತ್ತಿನ ಈ ನಗರಕ್ಕೇ. ಅವನು ಅಲ್ಲಿ 18 ತಿಂಗಳು ತಂಗಿದ್ದಾಗ ಅಲ್ಲಿ ಕ್ರೈಸ್ತ ಸಭೆಯೊಂದು ಸ್ಥಾಪಿಸಲ್ಪಟ್ಟಿತು. (ಅ.ಕೃ. 18:1-11) ತಾನು ಕ್ರಿಸ್ತನ ಸುವಾರ್ತೆಯನ್ನು ಮೊದಲಾಗಿ ಸಾರಿದ್ದ ಈ ವಿಶ್ವಾಸಿಗಳ ಕಡೆಗೆ ಎಷ್ಟೊಂದು ಪ್ರೀತಿ ಪೌಲನಿಗಿತ್ತು! ಅವರೊಂದಿಗೆ ಅವನಿಗಿದ್ದ ಆಧ್ಯಾತ್ಮಿಕ ಬಂಧವನ್ನು ಅವನು ಪತ್ರದ ಮೂಲಕ ಹೀಗೆ ಜ್ಞಾಪಕ ಹುಟ್ಟಿಸುತ್ತಾನೆ: “ನಿಮಗೆ ಕ್ರಿಸ್ತನಲ್ಲಿ ಉಪಾಧ್ಯಾಯರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹುಮಂದಿ ಇಲ್ಲ; ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದೆನು.”—1 ಕೊರಿಂ. 4:15.
3 ಕೊರಿಂಥದ ಕ್ರೈಸ್ತರ ಆಧ್ಯಾತ್ಮಿಕ ಹಿತಕ್ಕಾಗಿ ಪೌಲನಿಗಿದ್ದ ಗಾಢವಾದ ಚಿಂತೆ, ಅವನು ತನ್ನ ಮೂರನೆಯ ಮಿಷನೆರಿ ಪ್ರಯಾಣದಲ್ಲಿದ್ದಾಗ ಅವರಿಗೆ ತನ್ನ ಪ್ರಥಮ ಪತ್ರವನ್ನು ಬರೆಯುವಂತೆ ಪ್ರೇರಿಸಿತು. ಅವನು ಕೊರಿಂಥವನ್ನು ಬಿಟ್ಟು ಕೆಲವು ವರುಷಗಳು ಸಂದಿದ್ದವು. ಈಗ ಸಮಯ ಸುಮಾರು ಸಾ.ಶ. 55 ಆಗಿತ್ತು. ಪೌಲನು ಎಫೆಸದಲ್ಲಿದ್ದನು. ಸಾಧಾರಣಮಟ್ಟಿಗೆ ಹೊಸದಾಗಿದ್ದ ಕೊರಿಂಥದ ಸಭೆಯಿಂದ ಅವನಿಗೆ ಒಂದು ಪತ್ರ ಬಂದಿತ್ತೆಂದು ವ್ಯಕ್ತ. ಮತ್ತು ಅದಕ್ಕೆ ಉತ್ತರ ಅಗತ್ಯವಿತ್ತು. ಅಲ್ಲದೆ, ಗೊಂದಲವನ್ನುಂಟುಮಾಡಿದ ವರದಿಗಳು ಪೌಲನಿಗೆ ತಲುಪಿದ್ದವು. (7:1; 1:11; 5:1; 11:18) ಈ ವರದಿಗಳು ಅವನಿಗೆ ಎಷ್ಟೊಂದು ಮನೋವೇದನೆ ತಂದವೆಂದರೆ ಅಪೊಸ್ತಲನು ಅವರ ಪತ್ರದ ಪ್ರಶ್ನೆಗೆ ತನ್ನ ಪುಸ್ತಕದ ಏಳನೆಯ ಅಧ್ಯಾಯದ ಆರಂಭದ ತನಕವೂ ಸೂಚಿಸಲಿಲ್ಲ. ವಿಶೇಷವಾಗಿ ತಾನು ಪಡೆದಿದ್ದ ವರದಿಗಳ ಕಾರಣ ಪೌಲನು ಕೊರಿಂಥದ ಜೊತೆ ಕ್ರೈಸ್ತರಿಗೆ ಬರೆಯುವ ನಿರ್ಬಂಧಕ್ಕೊಳಗಾದನು.
4 ಆದರೆ ಪೌಲನು ಕೊರಿಂಥದವರಿಗೆ ತನ್ನ ಮೊದಲ ಪತ್ರವನ್ನು ಎಫೆಸದಿಂದ ಬರೆದನೆಂದು ನಮಗೆ ತಿಳಿಯುವುದು ಹೇಗೆ? ಒಂದನೆಯದಾಗಿ, ತನ್ನ ಪತ್ರವನ್ನು ವಂದನೆಗಳೊಂದಿಗೆ ಮುಗಿಸುವಾಗ, ಅಪೊಸ್ತಲನು ಅಕ್ವಿಲ ಮತ್ತು ಪ್ರಿಸ್ಕ (ಪ್ರಿಸ್ಕಿಲ್ಲ)ರನ್ನು ಸೇರಿಸುತ್ತಾನೆ. (16:19) ಅವರು ಕೊರಿಂಥದಿಂದ ಎಫೆಸಕ್ಕೆ ಹೋಗಿದ್ದರೆಂದು ಅ. ಕೃತ್ಯಗಳು 18:18, 19 ತೋರಿಸುತ್ತದೆ. ಅಕ್ವಿಲ ಮತ್ತು ಪ್ರಿಸ್ಕಿಲ್ಲ ಅಲ್ಲಿ ಜೀವಿಸುತ್ತಿದ್ದುದರಿಂದ ಮತ್ತು ಪೌಲನು ಅವರನ್ನು ಒಂದನೆಯ ಕೊರಿಂಥದವರಿಗೆ ಬರೆದ ಪತ್ರದ ಸಮಾಪ್ತಿಯ ವಂದನೆಗಳಲ್ಲಿ ಸೇರಿಸುವುದರಿಂದ, ಅವನು ಆ ಪತ್ರ ಬರೆದಾಗ ಎಫೆಸದಲ್ಲಿ ಇದ್ದಿರಬೇಕು. ಆದರೂ, ಯಾವ ಅನಿಶ್ಚಿತತೆಯನ್ನೂ ಕೊಡದಿರುವ ವಿಷಯವು, ಪೌಲನು 1 ಕೊರಿಂಥ 16:8ರಲ್ಲಿ ಮಾಡಿರುವ ಹೇಳಿಕೆಯೇ: “ಪಂಚಾಶತ್ತಮ ದಿನದ ಹಬ್ಬದ ತನಕ ಎಫೆಸದಲ್ಲಿ ಇರುವೆನು.” ಆದಕಾರಣ, ಪೌಲನು ಎಫೆಸದಲ್ಲಿ ತನ್ನ ವಾಸದ ಕೊನೆಯಲ್ಲಿ ಒಂದನೆಯ ಕೊರಿಂಥ ಪುಸ್ತಕವನ್ನು ಬರೆದನೆಂದು ವ್ಯಕ್ತವಾಗುತ್ತದೆ.
5 ಕೊರಿಂಥದವರಿಗೆ ಬರೆದ ಒಂದನೆಯ ಮತ್ತು ಎರಡನೆಯ ಪತ್ರ ಸಹ ವಿಶ್ವಾಸಾರ್ಹವೆಂಬುದರಲ್ಲಿ ಸಂದೇಹವಿಲ್ಲ. ಆದಿಕ್ರೈಸ್ತರು ಈ ಪತ್ರಗಳನ್ನು ಪೌಲನದ್ದೆಂದು ಪರಿಗಣಿಸಿ ಅವನ್ನು ಅಂಗೀಕೃತ ಪುಸ್ತಕಗಳಲ್ಲಿ ಒಂದಾಗಿ ಅಂಗೀಕರಿಸಿ, ತಮ್ಮ ಸಂಗ್ರಹಗಳಲ್ಲಿ ಸೇರಿಸಿದರು. ವಾಸ್ತವದಲ್ಲಿ, ಸುಮಾರು ಸಾ.ಶ. 95ರಲ್ಲಿ ರೋಮ್ನಿಂದ ಕೊರಿಂಥಕ್ಕೆ ಬರೆಯಲಾದ ಒಂದನೆಯ ಕ್ಲೆಮೆಂಟ್ ಎಂಬ ಪತ್ರದಲ್ಲಿ, ಒಂದನೇ ಕೊರಿಂಥ ಪತ್ರಕ್ಕೆ ಪರೋಕ್ಷವಾಗಿ ಸೂಚಿಸಿ ಕಡಮೆ ಪಕ್ಷ ಆರು ಬಾರಿಯಾದರೂ ಅದನ್ನು ಉದ್ಧರಿಸಲಾಗಿತ್ತೆಂದು ಹೇಳಲಾಗಿದೆ. ಒಂದನೇ ಕೊರಿಂಥ ಪುಸ್ತಕಕ್ಕೆ ಸೂಚಿಸಿ ಮಾತಾಡುತ್ತ, ಕ್ಲೆಮೆಂಟ್ ಪತ್ರದ ಓದುಗರು ‘ಧನ್ಯ ಅಪೊಸ್ತಲ ಪೌಲನ ಪತ್ರವನ್ನು ಅಂಗೀಕರಿಸಬೇಕೆಂದು’ ಲೇಖಕನು ಪ್ರೋತ್ಸಾಹಿಸುತ್ತಾನೆ.c ಒಂದನೆಯ ಕೊರಿಂಥ ಪುಸ್ತಕವನ್ನು ಜಸ್ಟಿನ್ ಮಾರ್ಟರ್, ಅಥೆನಾಗೊರಸ್, ಐರನೀಯಸ್ ಮತ್ತು ಟೆರ್ಟಲ್ಯನ್ ಎಂಬವರು ಸಹ ನೇರವಾಗಿ ಉದ್ಧರಿಸುತ್ತಾರೆ. ಒಂದನೆಯ ಮತ್ತು ಎರಡನೆಯ ಕೊರಿಂಥದವರಿಗೆ ಬರೆದ ಪತ್ರಗಳು ಸೇರಿರುವ ಒಂದು ಸಂಚಯ ಅಥವಾ ಸಂಗ್ರಹವು “ಒಂದನೆಯ ಶತಮಾನದ ಕೊನೆಯ ದಶಕದಲ್ಲಿ ರಚಿಸಲ್ಪಟ್ಟು ಪ್ರಕಟಿಸಲ್ಪಟ್ಟಿತು” ಎಂಬುದಕ್ಕೆ ಬಲವಾದ ಪುರಾವೆಯಿದೆ.d
6 ಕೊರಿಂಥದವರಿಗೆ ಪೌಲನು ಬರೆದ ಮೊದಲನೆಯ ಪತ್ರವು, ಕೊರಿಂಥ ಸಭೆಯೊಳಗಿನ ಸ್ಥಿತಿಯನ್ನು ನೋಡುವ ಸಂದರ್ಭವನ್ನು ನಮಗೆ ಒದಗಿಸುತ್ತದೆ. ಈ ಕ್ರೈಸ್ತರಿಗೆ ಎದುರಿಸಲು ಸಮಸ್ಯೆಗಳೂ ಬಗೆಹರಿಸಲು ಪ್ರಶ್ನೆಗಳೂ ಇದ್ದವು. ಕೆಲವರು ಮನುಷ್ಯರನ್ನು ಅನುಸರಿಸುತ್ತಿದ್ದುದರಿಂದ ಸಭೆಯೊಳಗೆ ಪಕ್ಷಗಳಿದ್ದವು. ಲೈಂಗಿಕ ಅನೈತಿಕತೆಯ ತಲ್ಲಣಗೊಳಿಸುವ ಒಂದು ಪ್ರಕರಣ ಎದ್ದು ಬಂದಿತ್ತು. ಕೆಲವರು ಧಾರ್ಮಿಕವಾಗಿ ವಿಭಜಿತವಾಗಿದ್ದ ಕುಟುಂಬಗಳಲ್ಲಿ ಜೀವಿಸುತ್ತಿದ್ದರು. ಅವರು ತಮ್ಮ ಅವಿಶ್ವಾಸಿ ಜೊತೆಗಳೊಂದಿಗೆ ಜೀವಿಸಬೇಕೊ ಇಲ್ಲವೆ ಪ್ರತ್ಯೇಕವಾಸ ಮಾಡಬೇಕೊ? ವಿಗ್ರಹಗಳಿಗೆ ನೈವೇದ್ಯ ಮಾಡಿದ ಮಾಂಸವನ್ನು ತಿನ್ನುವ ವಿಷಯದಲ್ಲಿ ಏನು? ಅವರು ಅದರಲ್ಲಿ ಪಾಲಿಗರಾಗಬೇಕೊ? ಕೂಟಗಳನ್ನು ನಡೆಸುವ ಮತ್ತು ಕರ್ತನ ಸಂಧ್ಯಾಭೋಜನದ ವಿಷಯದಲ್ಲಿ ಕೊರಿಂಥದವರಿಗೆ ಸಲಹೆ ಬೇಕಾಗಿತ್ತು. ಸಭೆಯಲ್ಲಿ ಸ್ತ್ರೀಯರ ಸ್ಥಾನವೇನು? ಪುನರುತ್ಥಾನವನ್ನು ಅಲ್ಲಗಳೆಯುವವರೂ ಸಭೆಯಲ್ಲಿದ್ದರು. ಸಮಸ್ಯೆಗಳೋ ಅನೇಕವಿದ್ದವು. ಆದರೆ ಅಪೊಸ್ತಲನು ವಿಶೇಷವಾಗಿ ಕೊರಿಂಥದವರನ್ನು ಆಧ್ಯಾತ್ಮಿಕವಾಗಿ ಪುನಸ್ಸ್ಥಾಪಿಸುವುದರಲ್ಲಿ ಆಸಕ್ತನಾಗಿದ್ದನು.
7 ಪೂರ್ವಕಾಲದ ಕೊರಿಂಥ ಸಭೆಯೊಳಗಿದ್ದ ಸ್ಥಿತಿಗತಿಗೆ ಮತ್ತು ಹೊರಗಣ ಪರಿಸರದಲ್ಲಿದ್ದ ಸಮೃದ್ಧಿ ಹಾಗೂ ವಿಷಯಲಂಪಟತ್ವಕ್ಕೆ ಆಧುನಿಕ ಸಮಾನಾಂತರತೆಗಳಿವೆ. ಇದರಿಂದಾಗಿಯೇ, ಪೌಲನು ದೈವಿಕ ಪ್ರೇರಣೆಯಿಂದ ಬರೆದ ಅಪ್ಪಟ ಸಲಹೆಯು ನಮ್ಮ ಗಮನ ಸೆಳೆಯುತ್ತದೆ. ಪೌಲನು ಹೇಳಿದ ವಿಷಯಗಳು ನಮ್ಮ ಸ್ವಂತ ದಿನಗಳಿಗೆ ಎಷ್ಟು ಅರ್ಥಪೂರ್ಣ ಆಗಿವೆ ಎಂದರೆ, ಕೊರಿಂಥದ ತನ್ನ ಪ್ರಿಯ ಸೋದರಸೋದರಿಯರಿಗೆ ಅವನು ಬರೆದ ಪ್ರಥಮ ಪತ್ರಕ್ಕೆ ನಾವು ತುಂಬ ಗಮನಕೊಡುವುದು ನಮಗೆ ನಿಶ್ಚಯವಾಗಿ ಪ್ರಯೋಜನಕರ. ಆ ಕಾಲದ ಮನೋಭಾವ ಮತ್ತು ನಿವೇಶನವನ್ನು ಈಗ ನೆನಪಿಗೆ ತನ್ನಿ. ಪೂರ್ವದ ಕೊರಿಂಥದ ತನ್ನ ಜೊತೆವಿಶ್ವಾಸಿಗಳಿಗೆ ಪೌಲನು ಬರೆದ ಮನೋಭೇದಕ, ಪ್ರಚೋದಕ ಹಾಗೂ ಪ್ರೇರಿತ ಮಾತುಗಳನ್ನು ವಿಮರ್ಶಿಸುವಾಗ ಕೊರಿಂಥದ ಆ ಕ್ರೈಸ್ತರಂತೆ ನಿಮ್ಮನ್ನೇ ಪರೀಕ್ಷಿಸಿಕೊಳ್ಳಿ.
ಪ್ರಯೋಜನಕರವೇಕೆ?
23 ಅಪೊಸ್ತಲ ಪೌಲನ ಈ ಪತ್ರದಲ್ಲಿ ಹೀಬ್ರು ಶಾಸ್ತ್ರದಿಂದ ಮಾಡಿದ ಅನೇಕ ಉದ್ಧರಣೆಗಳು ಆ ಶಾಸ್ತ್ರಗಳ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಲು ಅತಿ ಪ್ರಯೋಜನಕಾರಿ. ಮೋಶೆಯ ಅಧಿಕಾರದ ಕೆಳಗಿದ್ದ ಇಸ್ರಾಯೇಲ್ಯರು ಆಧ್ಯಾತ್ಮಿಕ ದೊಡ್ಡ ಬಂಡೆಯಿಂದ ಕುಡಿದರೆಂದೂ ಅದು ಕ್ರಿಸ್ತನೆಂದೂ ಪೌಲನು ಹತ್ತನೆಯ ಅಧ್ಯಾಯದಲ್ಲಿ ಹೇಳುತ್ತಾನೆ. (1 ಕೊರಿಂ. 10:4; ಅರಣ್ಯ. 20:11) ಬಳಿಕ ಅವನು, ಮೋಶೆಯ ಅಧಿಕಾರದ ಕೆಳಗಿದ್ದ ಇಸ್ರಾಯೇಲ್ಯರು ಮಾಡಿದಂತೆ ಹಾನಿಕರ ವಿಷಯಗಳನ್ನು ಆಶಿಸುವುದರ ವಿಪತ್ಕಾರಕ ಪರಿಣಾಮವನ್ನು ಸೂಚಿಸಿ ಹೇಳುವುದು: “ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ.” ಆದುದರಿಂದ ನಾವೆಂದಿಗೂ ಬೀಳಲಾರೆವೆಂದು ನೆನಸುತ್ತ ನಮ್ಮನ್ನೇ ಅವಲಂಬಿಸದಿರೋಣ! (1 ಕೊರಿಂ. 10:11, 12; ಅರಣ್ಯ. 14:2; 21:5; 25:9) ಅವನು ಪುನಃ ಧರ್ಮಶಾಸ್ತ್ರದಿಂದ ಒಂದು ದೃಷ್ಟಾಂತವನ್ನು ತಿಳಿಸುತ್ತಾನೆ. ಕರ್ತನ ಸಂಧ್ಯಾಭೋಜನದಲ್ಲಿ ಪಾಲಿಗರು ಯೆಹೋವನ ಮೇಜಿನಲ್ಲಿ ಯೋಗ್ಯವಾಗಿ ಹೇಗೆ ಪಾಲಿಗರಾಗಬೇಕೆಂಬುದನ್ನು ತೋರಿಸಲು ಇಸ್ರಾಯೇಲಿನಲ್ಲಿ ಮಾಡಲಾಗುತ್ತಿದ್ದ ಸಮಾಧಾನಯಜ್ಞಗಳಿಗೆ ಸೂಚಿಸುತ್ತಾನೆ. ಬಳಿಕ, ಕಟುಕರ ಅಂಗಡಿಯಲ್ಲಿ ಮಾರಲಾಗುವ ಮಾಂಸ ತಿನ್ನುವುದು ಯೋಗ್ಯವೆಂಬ ತನ್ನ ವಾದವನ್ನು ಬೆಂಬಲಿಸಲು ಅವನು, “ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಅದರ ನಿವಾಸಿಗಳೂ ಆತನವೇ,” ಎಂಬ ಕೀರ್ತನೆ 24:1ರ ಮಾತುಗಳನ್ನು ಉದ್ಧರಿಸುತ್ತಾನೆ.—1 ಕೊರಿಂ. 10:18, 21, 26; ವಿಮೋ. 32:6; ಯಾಜ. 7:11-15.
24 “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥ” ವಿಷಯಗಳ ಶ್ರೇಷ್ಠತೆಯನ್ನೂ “ಜ್ಞಾನಿಗಳ ಯೋಚನೆಗಳ” ವ್ಯರ್ಥತೆಯನ್ನೂ ತೋರಿಸುವಾಗ, ಪೌಲನು ಪುನಃ ಹೀಬ್ರು ಶಾಸ್ತ್ರಗಳನ್ನು ಉದ್ಧರಿಸುತ್ತಾನೆ. (1 ಕೊರಿಂ. 2:9; 3:20; ಯೆಶಾ. 64:4; ಕೀರ್ತ. 94:11) ಅಧ್ಯಾಯ 5ರಲ್ಲಿ, ತಪ್ಪಿತಸ್ಥರನ್ನು ಬಹಿಷ್ಕರಿಸುವ ತನ್ನ ಸಲಹೆಗಳಿಗೆ ಆಧಾರವಾಗಿ, “ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು” ಎಂಬ ಯೆಹೋವನ ನಿಯಮವನ್ನು ಅವನು ಉದ್ಧರಿಸುತ್ತಾನೆ. (ಧರ್ಮೋ. 17:7) ಸುವಾರ್ತಾ ಸೇವೆ ಮಾಡುತ್ತ ಜೀವನೋಪಾಯ ಮಾಡಲು ತನಗಿರುವ ಹಕ್ಕನ್ನು ಚರ್ಚಿಸುವಾಗ, ಪೌಲನು ಪುನಃ ಮೋಶೆಯ ಧರ್ಮಶಾಸ್ತ್ರದಿಂದಲೇ ಉದ್ಧರಿಸಿ, ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದೆಂದೂ ಆಲಯದಲ್ಲಿ ಸೇವೆಮಾಡುತ್ತಿರುವ ಲೇವಿಯರಿಗೆ ಯಜ್ಞವೇದಿಯಿಂದ ಯಜ್ಞದ ಒಂದು ಭಾಗವು ಕೊಡಲ್ಪಡಬೇಕು ಎಂಬ ವಿಷಯಗಳನ್ನು ಸೂಚಿಸುತ್ತಾನೆ.—1 ಕೊರಿಂ. 9:8-14; ಧರ್ಮೋ. 25:4; 18:1.
25 ಪೌಲನು ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರದಿಂದ ಎಷ್ಟು ಪ್ರಯೋಜನಕರ ಪ್ರೇರಿತ ಸಲಹೆಯನ್ನು ನಾವು ಪಡೆದಿರುತ್ತೇವೆ! ಆದುದರಿಂದ ಸಭೆಯಲ್ಲಿ ಪಕ್ಷಭೇದಗಳ ವಿರುದ್ಧ ಮತ್ತು ಮನುಷ್ಯರನ್ನು ಹಿಂಬಾಲಿಸುವ ವಿರುದ್ಧ ಕೊಡಲಾಗಿರುವ ಸಲಹೆಯನ್ನು ಮನನ ಮಾಡಿರಿ. (ಅಧ್ಯಾಯಗಳು 1-4) ಅನೈತಿಕತೆಯ ಪ್ರಕರಣವನ್ನು ಮತ್ತು ಸಭೆಯಲ್ಲಿ ಸದ್ಗುಣ ಹಾಗೂ ಶುದ್ಧತೆಯ ಅಗತ್ಯವನ್ನು ಪೌಲನು ಹೇಗೆ ಒತ್ತಿಹೇಳಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. (ಅಧ್ಯಾಯಗಳು 5, 6) ಅವಿವಾಹಿತ ಸ್ಥಿತಿ, ವಿವಾಹ ಮತ್ತು ಪ್ರತ್ಯೇಕವಾಸದ ಬಗ್ಗೆ ಅವನ ಪ್ರೇರಿತ ಬುದ್ಧಿವಾದದ ಕುರಿತು ಚಿಂತಿಸಿರಿ. (ಅಧ್ಯಾಯ 7) ವಿಗ್ರಹಗಳಿಗೆ ಅರ್ಪಿಸಿದ ಆಹಾರದ ಕುರಿತ ಚರ್ಚೆ ಹಾಗೂ ಇತರರನ್ನು ಮುಗ್ಗರಿಸುವುದರ ಕುರಿತ ಎಚ್ಚರಿಕೆ ಮತ್ತು ವಿಗ್ರಹಾರಾಧನೆಯ ಬಲೆಗೆ ಬೀಳುವುದು—ಇವನ್ನು ಹೇಗೆ ಪ್ರಭಾವಶಾಲಿಯಾಗಿ ವಿವರಿಸಲಾಗಿದೆ ಎಂಬುದರ ಕುರಿತು ಯೋಚಿಸಿರಿ. (ಅಧ್ಯಾಯಗಳು 8-10) ಯೋಗ್ಯ ಅಧೀನತೆಯ ಕುರಿತ ಬುದ್ಧಿವಾದ, ಆಧ್ಯಾತ್ಮಿಕ ವರಗಳ ಚರ್ಚೆ ಮತ್ತು ಪ್ರೀತಿಯೆಂಬ ಗುಣದ ಶ್ರೇಷ್ಠತೆ ಹಾಗೂ ಬಾಳಿಕೆಯ ಬಗ್ಗೆ ಅತಿ ವ್ಯಾವಹಾರಿಕ ಚರ್ಚೆ—ಇವುಗಳ ಪುನರ್ವಿಮರ್ಶೆಯನ್ನು ಕೊಡಲಾಗಿದೆ. ಮತ್ತು ಕ್ರೈಸ್ತ ಕೂಟಗಳಲ್ಲಿ ಇರಬೇಕಾದ ಕ್ರಮಬದ್ಧತೆಗೆ ಅಪೊಸ್ತಲನು ಎಷ್ಟೊಂದು ಮಹತ್ವವನ್ನು ಕೊಡುತ್ತಾನೆ! (ಅಧ್ಯಾಯಗಳು 11-14) ಪುನರುತ್ಥಾನದ ವಿಷಯದಲ್ಲಿ ಎಷ್ಟು ಅದ್ಭುತಕರ ಪ್ರತಿವಾದವನ್ನು ಅವನು ಪ್ರೇರಣೆಯಿಂದ ಬರೆದನು! (ಅಧ್ಯಾಯ 15) ಇವೆಲ್ಲವೂ ಮತ್ತು ಇನ್ನೂ ಹೆಚ್ಚು ವಿಷಯಗಳು ನಮ್ಮ ಮನೋನೇತ್ರಗಳ ಮುಂದಿದ್ದು, ನಮ್ಮ ದಿನಗಳ ಕ್ರೈಸ್ತರಿಗೆ ಅತ್ಯಮೂಲ್ಯವು!
26 ಈ ಪತ್ರವು, ದೇವರ ರಾಜ್ಯದ ಕುರಿತ ಬೈಬಲಿನ ಮಹಿಮಾಭರಿತ ಮುಖ್ಯ ವಿಷಯದ ಬಗ್ಗೆ ನಮಗಿರುವ ತಿಳಿವಳಿಕೆಗೆ ಬಹಳಷ್ಟನ್ನು ಕೂಡಿಸುತ್ತದೆ. ಅನೀತಿವಂತರು ದೇವರ ರಾಜ್ಯವನ್ನು ಪ್ರವೇಶಿಸುವುದಿಲ್ಲವೆಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಕೊಡುತ್ತದೆ; ಮತ್ತು ಒಬ್ಬನನ್ನು ಅದಕ್ಕೆ ಅಯೋಗ್ಯನನ್ನಾಗಿ ಮಾಡುವ ಅನೇಕ ದುಷ್ಕೃತ್ಯಗಳನ್ನು ಹೆಸರಿಸುತ್ತದೆ. (1 ಕೊರಿಂ. 6:9, 10) ಆದರೆ ಅತಿ ಪ್ರಾಮುಖ್ಯವಾಗಿ, ಪುನರುತ್ಥಾನಕ್ಕೂ ದೇವರ ರಾಜ್ಯಕ್ಕೂ ಇರುವ ಸಂಬಂಧವನ್ನು ಇದು ವಿವರಿಸುತ್ತದೆ. ಪುನರುತ್ಥಾನದ “ಪ್ರಥಮಫಲವಾದ” ಕ್ರಿಸ್ತನು, “ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವದು ಅವಶ್ಯ.” ತರುವಾಯ, ಮರಣವು ಸೇರಿ ಎಲ್ಲ ಶತ್ರುಗಳನ್ನು ಅವನು ನಿರ್ಮೂಲ ಮಾಡುವಾಗ “ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿ” ಕೊಡುವನು. “ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.” ಅಂತಿಮವಾಗಿ, ಕ್ರಿಸ್ತನು ತನ್ನ ಪುನರುತ್ಥಿತ ಆಧ್ಯಾತ್ಮಿಕ ಸಹೋದರರ ಜೊತೆಯಲ್ಲಿ ಸರ್ಪದ ತಲೆಯನ್ನು ಪೂರ್ಣವಾಗಿ ಜಜ್ಜುವಾಗ, ಏದೆನಿನಲ್ಲಿ ಮಾಡಲಾಗಿದ್ದ ರಾಜ್ಯ ವಾಗ್ದಾನವನ್ನು ನೆರವೇರಿಸುವನು. ಸ್ವರ್ಗೀಯ ರಾಜ್ಯದಲ್ಲಿ ಯೇಸು ಕ್ರಿಸ್ತನೊಂದಿಗೆ ನಿರ್ಲಯತ್ವದಲ್ಲಿ ಭಾಗಿಗಳಾಗುವವರ ಪುನರುತ್ಥಾನದ ಪ್ರತೀಕ್ಷೆಯೋ ಮಹತ್ವದ್ದಾಗಿರುವುದು. ಈ ಪುನರುತ್ಥಾನದ ನಿರೀಕ್ಷೆಯ ಆಧಾರದಿಂದಲೇ ಪೌಲನು ಬುದ್ಧಿಹೇಳುವದು: “ಆದದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.”—1 ಕೊರಿಂ. 15:20-28, 58; ಆದಿ. 3:15; ರೋಮಾ. 16:20.
[ಪಾದಟಿಪ್ಪಣಿಗಳು]
a ಹ್ಯಾಲೀಸ್ ಬೈಬಲ್ ಹ್ಯಾಂಡ್ಬುಕ್, 1988, ಏಚ್. ಏಚ್. ಹ್ಯಾಲೀ, ಪುಟ 593.
b ಸ್ಮಿಥ್ಸ್ ಡಿಕ್ಷನೆರಿ ಆಫ್ ದ ಬೈಬಲ್, 1863, ಸಂ. 1, ಪುಟ 353.
c ದಿ ಇಂಟರ್ಪ್ರಿಟರ್ಸ್ ಬೈಬಲ್, ಸಂ. 10, 1953, ಪುಟ 13.
d ದಿ ಇಂಟರ್ಪ್ರಿಟರ್ಸ್ ಬೈಬಲ್, ಸಂ. 9, 1954, ಪುಟ 356.