ಬೈಬಲ್ ಪುಸ್ತಕ ನಂಬರ್ 47—2 ಕೊರಿಂಥ
ಲೇಖಕ: ಪೌಲ
ಬರೆಯಲ್ಪಟ್ಟ ಸ್ಥಳ: ಮಕೆದೋನ್ಯ
ಬರೆದು ಮುಗಿಸಿದ್ದು: ಸುಮಾರು ಸಾ.ಶ. 55
ಸಮಯವು ಸಾ.ಶ. 55ರ ಬೇಸಗೆಯ ಅಂತ್ಯ ಇಲ್ಲವೆ ಶರತ್ಕಾಲದ ಆರಂಭ ಆಗಿರಬಹುದು. ಅಪೊಸ್ತಲ ಪೌಲನನ್ನು ಚಿಂತಿತನಾಗಿ ಮಾಡಿದ್ದ ಇನ್ನೂ ಕೆಲವು ಸಂಗತಿಗಳು ಕೊರಿಂಥದ ಕ್ರೈಸ್ತ ಸಭೆಯಲ್ಲಿದ್ದವು. ಕೊರಿಂಥದವರಿಗೆ ತನ್ನ ಮೊದಲನೆಯ ಪತ್ರ ಬರೆದು ಕೆಲವೇ ತಿಂಗಳುಗಳು ದಾಟಿದ್ದವು. ತದನಂತರ, ಯೆಹೂದದ ಪವಿತ್ರ ಜನರಿಗೆ ಹಣಸಹಾಯವನ್ನು ಕೂಡಿಸಲು ಮತ್ತು ಕೊರಿಂಥದವರಿಗೆ ಬರೆದ ಪ್ರಥಮ ಪತ್ರಕ್ಕೆ ಅವರ ಪ್ರತಿಕ್ರಿಯೆಯನ್ನು ಪ್ರಾಯಶಃ ಅವಲೋಕಿಸಲು ತೀತನನ್ನು ಕೊರಿಂಥಕ್ಕೆ ಕಳುಹಿಸಲಾಗಿತ್ತು. (2 ಕೊರಿಂ. 8:1-6; 2:13) ಅವರು ಹೇಗೆ ಪ್ರತಿಕ್ರಿಯಿಸಿದ್ದರು? ಅದು ಅವರನ್ನು ಶೋಕ ಮತ್ತು ಪಶ್ಚಾತ್ತಾಪಕ್ಕೆ ನಡೆಸಿತ್ತೆಂದು ತಿಳಿಯುವುದು ಪೌಲನಿಗೆ ಎಷ್ಟು ಸಾಂತ್ವನ ನೀಡಿದ್ದಿರಬೇಕು! ತೀತನು ಪೌಲನಿದ್ದ ಮಕೆದೋನ್ಯಕ್ಕೆ ಈ ಒಳ್ಳೆಯ ವರದಿಯನ್ನು ತಂದಿದ್ದನು ಮತ್ತು ಈಗ ಕೊರಿಂಥದ ತನ್ನ ಪ್ರಿಯ ಜೊತೆ ವಿಶ್ವಾಸಿಗಳಿಗಾಗಿ ಅಪೊಸ್ತಲನ ಹೃದಯವು ಪ್ರೀತಿಯಿಂದ ತುಂಬಿತುಳುಕುತ್ತಿತ್ತು.—7:5-7; 6:11.
2 ಈ ಕಾರಣದಿಂದ ಪೌಲನು ಕೊರಿಂಥದವರಿಗೆ ಪುನಃ ಬರೆದನು. ಈ ಹೃದಯೋಲ್ಲಾಸಕರ ಹಾಗೂ ಶಕ್ತಿಯುತ ಎರಡನೆಯ ಪತ್ರವನ್ನು ಪೌಲನು ಮಕೆದೋನ್ಯದಲ್ಲಿ ಬರೆದು, ತೀತನ ಮೂಲಕ ರವಾನಿಸಿದನೆಂಬುದು ವ್ಯಕ್ತ. (9:2, 4; 8:16-18, 22-24) ಪೌಲನು ಬರೆಯುವಂತೆ ಪ್ರಚೋದಿಸಿದ ವಿಷಯಗಳಲ್ಲಿ ಒಂದು, ಕೊರಿಂಥದವರ ಮಧ್ಯೆ “ಅತಿಶ್ರೇಷ್ಠರಾದ ಅಪೊಸ್ತಲರು” ಅಂದರೆ ಯಾರನ್ನು ಅವನು “ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ” ಎಂದು ಸಹ ಕರೆದಿದ್ದನೊ ಅವರ ಉಪಸ್ಥಿತಿಯಾಗಿತ್ತು. (11:5, 13, 14) ತುಲನಾತ್ಮಕವಾಗಿ ಹೊಸದಾಗಿದ್ದ ಈ ಸಭೆಯ ಆಧ್ಯಾತ್ಮಿಕ ಸುಕ್ಷೇಮವು ಅಪಾಯದಲ್ಲಿತ್ತು ಮತ್ತು ಪೌಲನ ಅಪೊಸ್ತಲತ್ವದ ಅಧಿಕಾರವು ಟೀಕೆಗೆ ಗುರಿಯಾಗಿತ್ತು. ಹೀಗೆ ಅವನ ಎರಡನೆಯ ಪತ್ರವು ಈ ದೊಡ್ಡ ಸಮಸ್ಯೆಯನ್ನು ನಿಭಾಯಿಸಿತು.
3 “ನಾನು ನಿಮ್ಮ ಬಳಿಗೆ ಬರುವದಕ್ಕೆ ಸಿದ್ಧವಾಗಿರುವದು ಇದು ಮೂರನೆಯ ಸಾರಿ” ಎಂದು ಪೌಲನು ಹೇಳಿದ್ದನ್ನು ನಾವು ಗಮನಿಸಬಹುದು. (2 ಕೊರಿಂ. 12:14; 13:1) ಅವನು ತನ್ನ ಪ್ರಥಮ ಪತ್ರವನ್ನು ಬರೆದಾಗ ಅವರನ್ನು ಎರಡನೆಯ ಬಾರಿ ಭೇಟಿ ಮಾಡಲು ಯೋಜಿಸಿದ್ದನು. ಆದರೆ ಅವನು ಸಿದ್ಧನಾಗಿದ್ದರೂ ಈ ‘ಎರಡನೆಯ’ ಭೇಟಿ ಕೈಗೂಡಿ ಬರಲಿಲ್ಲ. (1 ಕೊರಿಂ. 16:5; 2 ಕೊರಿಂ. 1:15) ಹೀಗೆ ವಾಸ್ತವದಲ್ಲಿ, ಪೌಲನು ಈ ಹಿಂದೆ ಒಮ್ಮೆ ಮಾತ್ರ, ಕ್ರೈಸ್ತ ಸಭೆ ಕೊರಿಂಥದಲ್ಲಿ ಸ್ಥಾಪನೆಯಾದ ಸಾ.ಶ. 50-52ರಲ್ಲಿ, 18 ತಿಂಗಳ ಕಾಲ ಅಲ್ಲಿದ್ದನು. (ಅ.ಕೃ. 18:1-18) ಆದರೂ, ಪೌಲನು ತರುವಾಯ ಕೊರಿಂಥವನ್ನು ಇನ್ನೊಂದು ಬಾರಿ ಸಂದರ್ಶಿಸುವ ತನ್ನ ಅಪೇಕ್ಷೆಯನ್ನು ಸಿದ್ಧಿಸಿಕೊಂಡನು. ಅವನು ಪ್ರಾಯಶಃ ಸಾ.ಶ. 56ರಲ್ಲಿ ಮೂರು ತಿಂಗಳ ಕಾಲ ಗ್ರೀಸ್ನಲ್ಲಿದ್ದಾಗ, ಆ ಕಾಲಾವಧಿಯ ಅಲ್ಪಾಂಶವನ್ನಾದರೂ ಕೊರಿಂಥದಲ್ಲಿ ಕಳೆದಿರಬೇಕು. ಮತ್ತು ಅಲ್ಲಿಂದಲೇ ಅವನು ರೋಮಾಪುರದವರಿಗೆ ತನ್ನ ಪತ್ರ ಬರೆದನು.—ರೋಮಾ. 16:1, 23; 1 ಕೊರಿಂ. 1:14.
4 ಎರಡನೆಯ ಕೊರಿಂಥ ಪುಸ್ತಕವನ್ನು, ಒಂದನೆಯ ಕೊರಿಂಥ ಮತ್ತು ಪೌಲನ ಇತರ ಪತ್ರಗಳೊಂದಿಗೆ, ಬೈಬಲಿನ ಅಂಗೀಕೃತ ಪುಸ್ತಕಗಳ ಪಟ್ಟಿಯ ವಿಶ್ವಾಸಾರ್ಹ ಭಾಗವಾಗಿ ಯಾವಾಗಲೂ ಎಣಿಸಲಾಗಿರುತ್ತದೆ. ಇದರಿಂದಾಗಿ ನಾವು ಪುನಃ ಕೊರಿಂಥದ ಸಭೆಯೊಳಗಿನ ಸ್ಥಿತಿಗತಿಯನ್ನು ನೋಡಿ, ಅವರಿಗೂ ನಮಗೂ ಪೌಲನು ಕೊಟ್ಟಿರುವ ಪ್ರೇರಿತ ಸಲಹೆಯಿಂದ ಪ್ರಯೋಜನಹೊಂದಲು ಸಾಧ್ಯವಾಗುತ್ತದೆ.
ಪ್ರಯೋಜನಕರವೇಕೆ?
18 ಎರಡನೆಯ ಕೊರಿಂಥ ಪುಸ್ತಕದಲ್ಲಿ ತೋರಿಸಲಾಗಿರುವಂತೆ ಕ್ರೈಸ್ತ ಶುಶ್ರೂಷೆಗಾಗಿ ಪೌಲನಿಗಿದ್ದ ಕೃತಜ್ಞತೆ ಎಷ್ಟೊಂದು ಉತ್ತೇಜಕವೂ ಪ್ರೋತ್ಸಾಹನೀಯವೂ ಆಗಿದೆ! ನಾವು ಸಹ ಅದನ್ನು ಅವನಂತೆಯೇ ವೀಕ್ಷಿಸೋಣ. ದೇವರಿಂದ ಸಾಕಷ್ಟು ಅರ್ಹತೆ ಪಡೆದಿರುವ ಕ್ರೈಸ್ತ ಶುಶ್ರೂಷಕನು ವಾಕ್ಯವನ್ನು ಮಾರುವವನಲ್ಲ ಬದಲಾಗಿ ಯಥಾರ್ಥ ಸೇವಕನಾಗಿದ್ದಾನೆ. ಅವನನ್ನು ಸೇವೆಗೆ ಅರ್ಹನನ್ನಾಗಿ ಮಾಡುವುದು ಯಾವುದೋ ಲಿಖಿತ ಪ್ರಮಾಣಪತ್ರವಾಗಿರದೆ, ಅವನ ಫಲಭರಿತ ಶುಶ್ರೂಷೆಯೇ ಆಗಿದೆ. ಶುಶ್ರೂಷೆಯು ನಿಶ್ಚಯವಾಗಿ ಮಹಿಮೆಯುಳ್ಳದ್ದಾಗಿದ್ದರೂ, ಅದರಿಂದ ಅವನು ಉಬ್ಬಿಕೊಳ್ಳಲು ಯಾವ ಕಾರಣವೂ ಇಲ್ಲ. ಅಪರಿಪೂರ್ಣ ಮಾನವರಾಗಿರುವ ದೇವರ ಸೇವಕರೆಂಬ ಮಣ್ಣಿನ ಬಲಹೀನ ಪಾತ್ರೆಗಳಲ್ಲಿ ಈ ಸೇವಾ ನಿಕ್ಷೇಪವಿದ್ದರೂ, ಅದಕ್ಕಿರುವ ಶಕ್ತಿಯು ದೇವರಿಂದಲೇ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಹೀಗೆ, ದೇವರ ಶುಶ್ರೂಷಕರಾಗಿರುವ ಮಹಾ ಪದವಿಯನ್ನು ಅಂಗೀಕರಿಸುವುದು ದೈನ್ಯವನ್ನು ಕೇಳಿಕೊಳ್ಳುತ್ತದೆ. ಮತ್ತು “ಕ್ರಿಸ್ತನ ರಾಯಭಾರಿಗಳಾಗಿ” ಸೇವೆಮಾಡುವುದು ದೇವರ ಎಂಥ ಅಪಾರ ದಯೆಯಾಗಿದೆ! ಹಾಗಾದರೆ, ‘ನಾವು ಹೊಂದಿರುವ ದೇವರ ಕೃಪೆಯನ್ನು ವ್ಯರ್ಥಗೊಳಿಸಬಾರದು’ ಎಂಬ ಪೌಲನ ಪ್ರಬೋಧನೆ ಎಷ್ಟು ಸೂಕ್ತವಾಗಿದೆ!—2:14-17; 3:1-5; 4:7; 5:18-20; 6:1.
19 ಪೌಲನು ಕ್ರೈಸ್ತ ಶುಶ್ರೂಷಕರಿಗೆ ನಿಶ್ಚಯವಾಗಿಯೂ ಒಂದು ಉತ್ಕೃಷ್ಟ ಮಾದರಿಯನ್ನು ಒದಗಿಸಿದನು. ಒಂದನೆಯದಾಗಿ, ಅವನು ಪ್ರೇರಿತ ಹೀಬ್ರು ಶಾಸ್ತ್ರಗಳನ್ನು ಬೆಲೆಬಾಳುವ ವಿಷಯವೆಂದೆಣಿಸಿ, ಅದನ್ನು ಅಧ್ಯಯನ ಮಾಡಿದನು, ಪದೇ ಪದೇ ಉಲ್ಲೇಖಿಸಿ, ಪರೋಕ್ಷವಾಗಿ ಸೂಚಿಸಿ ಅನ್ವಯಿಸಿದನು. (2 ಕೊರಿಂ. 6:2, 16-18; 7:1; 8:15; 9:9; 13:1; ಯೆಶಾ. 49:8; ಯಾಜ. 26:12; ಯೆಶಾ. 52:11; ಯೆಹೆ. 20:41; 2 ಸಮು. 7:14; ಹೋಶೇ. 1:10) ಇದಲ್ಲದೆ, ಮೇಲ್ವಿಚಾರಕನಾಗಿದ್ದ ಅವನು ಆ ಹಿಂಡಿಗೆ ಗಾಢವಾದ ಚಿಂತೆಯನ್ನು ತೋರಿಸುತ್ತಾ, “ನಾನಂತೂ ನನಗಿರುವದನ್ನು ನಿಮ್ಮ ಆತ್ಮಸಂರಕ್ಷಣೆಗೋಸ್ಕರ ಅತಿಸಂತೋಷದಿಂದ ವೆಚ್ಚಮಾಡುತ್ತೇನೆ” ಎಂದು ಹೇಳಿದನು. ದಾಖಲೆಯು ಸ್ಪಷ್ಟವಾಗಿ ತೋರಿಸುವಂತೆ ಅವನು ತನ್ನ ಸಹೋದರರ ಪರವಾಗಿ ತನ್ನನ್ನೇ ಅರ್ಪಿಸಿದನು. (2 ಕೊರಿಂ. 12:15; 6:3-10) ಅವನು ಕೊರಿಂಥ ಸಭೆಗೆ ಕಲಿಸಿ, ಪ್ರಬೋಧಿಸಿ, ಸಮಸ್ಯೆಗಳನ್ನು ಬಗೆಹರಿಸುವ ಕೆಲಸದಲ್ಲಿ ದಣಿಯಲಿಲ್ಲ. ಅಂಧಕಾರದೊಂದಿಗೆ ಜೊತೆಗೂಡುವುದರ ವಿರುದ್ಧ ಅವನು ಕೊರಿಂಥದವರಿಗೆ ಸ್ಪಷ್ಟವಾಗಿ ಹೀಗಂದನು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ.” ಅವರ ವಿಷಯದಲ್ಲಿ ಪ್ರೀತಿಪರ ಚಿಂತೆ ಅವನಿಗಿದ್ದುದರಿಂದ, “ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸ”ಹೋದಂತೆ ಅವರ ಮನಸ್ಸು ಮೋಸಹೋಗಬಾರದೆಂದು ಇಷ್ಟಪಟ್ಟನು. ಆದ್ದರಿಂದ “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ,” ಎಂದು ಮನಃಪೂರ್ವಕ ಸಲಹೆಯಿತ್ತನು. ಅವನು “ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು” ಎಂದು ಹೇಳಿ ಅವರನ್ನು ಕ್ರೈಸ್ತ ಉದಾರತೆಗೆ ಹುರಿದುಂಬಿಸಿದನು. ಮತ್ತು ದೇವರ ಅವರ್ಣನೀಯ ಉಚಿತ ವರಕ್ಕಾಗಿ ಅವನು ತಾನೇ ಮನಃಪೂರ್ವಕ ಉಪಕಾರವನ್ನು ವ್ಯಕ್ತಪಡಿಸಿದನು. ಹೀಗೆ ಪೌಲನ ಹೃದಯವೆಂಬ ಮಾಂಸಿಕ ಹಲಗೆಯ ಮೇಲೆ ಕೊರಿಂಥದ ಸಹೋದರರಿಗಾಗಿ ಪ್ರೀತಿಯು ನಿಜವಾಗಿಯೂ ಅಚ್ಚೊತ್ತಲ್ಪಟ್ಟಿತು ಮತ್ತು ಅವರ ಹಿತಕ್ಕಾಗಿ ಅವನು ಮಾಡಿದ ಉದಾರ ಸೇವೆಯು ಒಬ್ಬ ಹುರುಪಿನ, ಪೂರ್ತಿ ಎಚ್ಚತ್ತಿರುವ ಮೇಲ್ವಿಚಾರಕನ ಗುರುತಾಗಿರಬೇಕು. ಇಂದು ಪೌಲನು ನಮಗೆ ಎಂಥ ಉತ್ತಮ ಆದರ್ಶವಾಗಿದ್ದಾನೆ!—6:14; 11:3; 13:5; 9:7, 15; 3:2.
20 “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ” ಆಗಿರುವವನೇ ಪರೀಕ್ಷೆಯ ಸಮಯದಲ್ಲಿ ನಮಗಿರುವ ನಿಜ ಬಲದ ಮೂಲನೆಂದು ತೋರಿಸುತ್ತಾ ಅಪೊಸ್ತಲ ಪೌಲನು ನಮ್ಮ ಮನಸ್ಸುಗಳನ್ನು ಸರಿಯಾದ ಮಾರ್ಗಕ್ಕೆ ನಡೆಸುತ್ತಾನೆ. ನಾವು ಆತನ ನೂತನ ಲೋಕದಲ್ಲಿ ರಕ್ಷಣೆ ಪಡೆಯುವಂತೆ ತಾಳಿಕೊಂಡಿರಲು ಆತನೇ “ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ.” ಪೌಲನು ಮಹಿಮಾಭರಿತ ನಿರೀಕ್ಷೆಗೂ ಕೈತೋರಿಸುತ್ತಾನೆ. ಅದು, ‘ಪರಲೋಕದಲ್ಲಿ ದೇವರಿಂದುಂಟಾದ ಒಂದು ಕಟ್ಟಡ’ ಎಂದೂ ಅದು “ಕೈಯಿಂದ ಕಟ್ಟಿದ ಮನೆಯಾಗಿರದೆ ನಿತ್ಯವಾಗಿರುವಂಥ”ದ್ದೆಂದೂ ಹೇಳಿ ಅವನು ಮುಂದುವರಿಸುವುದು: “ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.” ಪೌಲನಂತೆಯೇ ಸ್ವರ್ಗೀಯ ರಾಜ್ಯಕ್ಕೆ ಬಾಧ್ಯರಾಗುವವರಿಗೆ ಎರಡನೆಯ ಕೊರಿಂಥ ಪುಸ್ತಕದಲ್ಲಿ ಆಶ್ಚರ್ಯಕರವಾದ ಆಶ್ವಾಸನೆಯ ಮಾತುಗಳಿವೆ ಎಂಬುದು ನಿಶ್ಚಯ.—1:3, 4; 5:1, 17.