ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bsi08-1 ಪು. 27-29
  • ಬೈಬಲ್‌ ಪುಸ್ತಕ ನಂಬರ್‌ 49—ಎಫೆಸ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಪುಸ್ತಕ ನಂಬರ್‌ 49—ಎಫೆಸ
  • “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ (ಮತ್ತಾಯ—ಕೊಲೊಸ್ಸೆ)
  • ಉಪಶೀರ್ಷಿಕೆಗಳು
  • ಪ್ರಯೋಜನಕರವೇಕೆ?
“ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ (ಮತ್ತಾಯ—ಕೊಲೊಸ್ಸೆ)
bsi08-1 ಪು. 27-29

ಬೈಬಲ್‌ ಪುಸ್ತಕ ನಂಬರ್‌ 49—ಎಫೆಸ

ಲೇಖಕ: ಪೌಲ

ಬರೆಯಲ್ಪಟ್ಟ ಸ್ಥಳ: ರೋಮ್‌

ಬರೆದು ಮುಗಿಸಿದ್ದು: ಸುಮಾರು ಸಾ.ಶ. 60-61

ನೀವು ಸೆರೆಮನೆಯಲ್ಲಿದ್ದೀರೆಂದು ಭಾವಿಸಿರಿ. ಕ್ರೈಸ್ತ ಮಿಷನೆರಿಯಾಗಿದ್ದು ನೀವು ಹುರುಪಿನ ಕಾರ್ಯದಲ್ಲಿ ತೊಡಗಿದ ಕಾರಣ ಈ ಹಿಂಸೆಗೊಳಗಾಗಿದ್ದೀರಿ. ಈಗ ನಿಮಗೆ ಪ್ರಯಾಣ ಮಾಡುವುದೂ, ಸಭೆಗಳನ್ನು ಬಲಪಡಿಸಲು ಅವುಗಳಿಗೆ ಭೇಟಿ ಕೊಡುವುದೂ ಅಸಾಧ್ಯವಾಗಿರುವುದರಿಂದ ಏನು ಮಾಡುವಿರಿ? ನಿಮ್ಮ ಸಾರೋಣದಿಂದಾಗಿ ಕ್ರೈಸ್ತರಾಗಿದ್ದವರಿಗೆ ನೀವು ಪತ್ರಬರೆಯಬಹುದಲ್ಲವೇ? ನಿಮ್ಮ ಸ್ಥಿತಿಗತಿ ಹೇಗಿದೆಯೊ ಎಂಬುದರ ಕುರಿತು ಅವರು ಪ್ರಾಯಶಃ ಚಿಂತಿಸುತ್ತಿರಬಹುದಲ್ಲವೇ ಮತ್ತು ಅವರಿಗೆ ಪ್ರೋತ್ಸಾಹನೆಯ ಅಗತ್ಯವಿರಬಹುದು ಅಲ್ಲವೆ? ಅದು ನಿಜವೆಂಬುದು ನಿಶ್ಚಯ! ಆದಕಾರಣ ನೀವು ಬರೆಯಲಾರಂಭಿಸುತ್ತೀರಿ. ಅಪೊಸ್ತಲ ಪೌಲನು ಪ್ರಥಮ ಬಾರಿ ರೋಮ್‌ನಲ್ಲಿ, ಸಾ.ಶ. 59-61ರಲ್ಲಿ ಸೆರೆಯಲ್ಲಿದ್ದಾಗ ಮಾಡಿದ್ದನ್ನೇ ನೀವು ಈಗ ಮಾಡುತ್ತಿದ್ದೀರಿ. ಅವನು ಕೈಸರನಿಗೆ ಅಪೀಲು ಮಾಡಿದ್ದನು, ಮತ್ತು ಅವನು ವಿಚಾರಣೆಗಾಗಿ ಕಾಯುತ್ತಿದ್ದು ಪಹರೆಯಲ್ಲಿದ್ದರೂ ಕೆಲವು ವಿಷಯಗಳಲ್ಲಿ ಅವನಿಗೆ ಸ್ವಾತಂತ್ರ್ಯವಿತ್ತು. ಹೀಗೆ ಪೌಲನು “ಎಫೆಸದವರಿಗೆ” ತನ್ನ ಪತ್ರವನ್ನು ರೋಮ್‌ನಿಂದ, ಪ್ರಾಯಶಃ ಸಾ.ಶ. 60 ಅಥವಾ 61ರಲ್ಲಿ ಬರೆದು, ಅದನ್ನು ಒನೇಸಿಮನ ಜೊತೆಯಲ್ಲಿದ್ದ ತುಖಿಕನೊಂದಿಗೆ ಕಳುಹಿಸಿದನು.—ಎಫೆ. 6:21; ಕೊಲೊ. 4:7-9.

2 ಪೌಲನು ಅತಿ ಆರಂಭದ ಮಾತಿನಲ್ಲಿಯೇ ತಾನೇ ಲೇಖಕನೆಂದು ಗುರುತಿಸಿಕೊಂಡು, ನಾಲ್ಕು ಬಾರಿ ತಾನು ‘ಕ್ರಿಸ್ತ ಯೇಸುವಿನ ಸೆರೆಯವನು’ ಎಂದು ಹೇಳುತ್ತಾನೆ ಅಥವಾ ಪರೋಕ್ಷವಾಗಿ ಸೂಚಿಸುತ್ತಾನೆ. (ಎಫೆ. 1:1; 3:1, 13; 4:1; 6:20) ಇದನ್ನು ಬರೆದವನು ಪೌಲನಲ್ಲ ಎಂಬ ವಾದಗಳು ನಿಷ್ಫಲಗೊಂಡಿವೆ. ಸುಮಾರು ಸಾ.ಶ. 200ರದ್ದು ಎಂದು ನಂಬಲಾಗಿರುವ ಚೆಸ್ಟರ್‌ ಬೀಟೀ ಪಪೈರಸ್‌ ನಂ. 2 (P46)ರಲ್ಲಿ, ಪೌಲನ ಪತ್ರಗಳು ಸೇರಿರುವ ಹಸ್ತಾಕ್ಷರಗ್ರಂಥದ 86 ಹಾಳೆಗಳಿವೆ. ಆ ಹಾಳೆಗಳಲ್ಲಿ ಎಫೆಸದವರಿಗೆ ಬರೆದ ಪತ್ರವೂ ಸೇರಿದ್ದು, ಆ ಸಮಯದಲ್ಲಿ ಅದು ಅವನ ಪತ್ರಗಳೊಂದಿಗೆ ಸೇರಿಸಲ್ಪಟ್ಟಿತ್ತೆಂದು ತೋರಿಸುತ್ತದೆ.

3 ಕ್ರೈಸ್ತ ಧರ್ಮದ ಆದಿ ಲೇಖಕರು ಪೌಲನು ಆ ಪತ್ರವನ್ನು ಬರೆದನೆಂದೂ, ಅದು “ಎಫೆಸದವರಿಗೆ” ಬರೆಯಲ್ಪಟ್ಟಿತೆಂದೂ ದೃಢಪಡಿಸುತ್ತಾರೆ. ದೃಷ್ಟಾಂತಕ್ಕೆ, ಸಾ.ಶ. ಎರಡನೆಯ ಶತಮಾನದ ಐರನೇಯಸ್‌ ಎಂಬವನು ಎಫೆಸ 5:30ನ್ನು ಹೀಗೆ ಉದ್ಧರಿಸುತ್ತಾನೆ: “ಧನ್ಯ ಪೌಲನು ಎಫೆಸದವರಿಗೆ ಬರೆದ ಪತ್ರದಲ್ಲಿ ಹೇಳುವಂತೆ, ನಾವು ಅವನ [ಕ್ರಿಸ್ತನ] ಶರೀರದ ಅಂಗಗಳಾಗಿದ್ದೇವೆ.” ಅದೇ ಸಮಯದಲ್ಲಿದ್ದ ಅಲೆಗ್ಸಾಂಡ್ರಿಯದ ಕ್ಲೆಮೆಂಟ್‌ ಎಂಬವನು ಎಫೆಸ 5:21ನ್ನು ಉದ್ಧರಿಸಿ ಹೀಗಂದನು: “ಇದೇ ಕಾರಣಕ್ಕಾಗಿ, ಎಫೆಸದರಿಗೆ ಬರೆದ ಪತ್ರದಲ್ಲಿಯೂ ಅವನು ಬರೆಯುವುದು, ದೇವರ ಭಯದಲ್ಲಿ ಒಬ್ಬರಿಗೊಬ್ಬರು ಅಧೀನರಾಗಿರಿ.” ಮೂರನೆಯ ಶತಮಾನದ ಪೂರ್ವಾರ್ಧದಲ್ಲಿ ಬರೆದ ಆರಜನ್‌, ಎಫೆಸ 1:4ನ್ನು ಹೀಗೆ ಹೇಳುತ್ತ ಉದ್ಧರಿಸುತ್ತಾನೆ: “ಎಫೆಸದವರಿಗೆ ಬರೆದ ಪತ್ರದಲ್ಲಿ ಅಪೊಸ್ತಲನು ಸಹ ಅದೇ ಭಾಷೆಯನ್ನು ಉಪಯೋಗಿಸುತ್ತ, ಲೋಕದ ಅಸ್ತಿವಾರಕ್ಕೆ ಮೊದಲು ಆತನು ನಮ್ಮನ್ನು ಆರಿಸಿಕೊಂಡನು.”a ಆದಿ ಕ್ರೈಸ್ತ ಸಭೆಯ ಇತಿಹಾಸದ ಇನ್ನೊಬ್ಬ ತಜ್ಞನಾದ ಯುಸೀಬಿಯಸ್‌ (ಸುಮಾರು ಸಾ.ಶ. 260-342), ಬೈಬಲ್‌ ಪುಸ್ತಕಗಳ ಅಂಗೀಕೃತ ಪಟ್ಟಿಯಲ್ಲಿ ಎಫೆಸ ಪುಸ್ತಕವನ್ನು ಸೇರಿಸುತ್ತಾನೆ ಮತ್ತು ಕ್ರೈಸ್ತ ಧರ್ಮದ ಆದಿ ಲೇಖಕರಲ್ಲಿ ಹೆಚ್ಚಿನವರು ಎಫೆಸ ಪುಸ್ತಕವನ್ನು ಪ್ರೇರಿತ ಶಾಸ್ತ್ರಗಳ ಭಾಗವೆಂದು ಸೂಚಿಸುತ್ತಾರೆ.b

4 ಚೆಸ್ಟರ್‌ ಬೀಟೀ ಪಪೈರಸ್‌, ವ್ಯಾಟಿಕನ್‌ ಹಸ್ತಪ್ರತಿ ನಂ. 1209 ಮತ್ತು ಸೈನಾಯ್ಟಿಕ್‌ ಹಸ್ತಪ್ರತಿ, ಅಧ್ಯಾಯ 1 ವಚನ 1ರಲ್ಲಿ “ಎಫೆಸದಲ್ಲಿ” ಎಂಬ ಪದವನ್ನು ಬಿಟ್ಟುಬಿಡುತ್ತದೆ ಮತ್ತು ಹೀಗೆ ಆ ಪತ್ರವು ತಲಪಬೇಕಾದ ಸ್ಥಳವನ್ನು ಸೂಚಿಸುವುದಿಲ್ಲ. ಈ ನಿಜತ್ವ ಮತ್ತು ಎಫೆಸದಲ್ಲಿರುವ ವ್ಯಕ್ತಿಗಳಿಗೆ ವಂದನೆಯನ್ನು ಕಳುಹಿಸದಿರುವ ವಿಷಯವು (ಪೌಲನು ಅಲ್ಲಿ ಮೂರು ವರ್ಷ ಕೆಲಸ ಮಾಡಿದ್ದರೂ) ಆ ಪತ್ರವನ್ನು ಬೇರೆಲ್ಲಿಗಾದರೂ ಕಳುಹಿಸಲಿಕ್ಕಾಗಿ ಬರೆದಿರಬಹುದು ಅಥವಾ ಅದು ಎಫೆಸವೂ ಸೇರಿರುವ ಏಷ್ಯಾ ಮೈನರ್‌ನ ಸಭೆಗಳಿಗೆ ಕಳುಹಿಸಿದ ಸುತ್ತೋಲೆ ಆಗಿದ್ದಿರಬಹುದು ಎಂದು ಕೆಲವರು ಭಾವಿಸುವಂತೆ ಮಾಡಿದೆ. ಆದರೂ ಬೇರೆ ಹೆಚ್ಚಿನ ಹಸ್ತಪ್ರತಿಗಳು “ಎಫೆಸದಲ್ಲಿ” ಎಂಬ ಪದವನ್ನು ಸೇರಿಸಿರುತ್ತವೆ ಮತ್ತು ನಾವು ಈ ಮೇಲೆ ಗಮನಿಸಿರುವಂತೆ, ಕ್ರೈಸ್ತ ಧರ್ಮದ ಆದಿ ಲೇಖಕರು ಇದನ್ನು ಎಫೆಸದವರಿಗೆ ಬರೆದ ಪತ್ರವಾಗಿ ಅಂಗೀಕರಿಸಿದ್ದಾರೆ.

5 ಈ ಪತ್ರದ ಉದ್ದೇಶವನ್ನು ತಿಳಿಯಲು ಸ್ಪಲ್ಪ ಹಿನ್ನೆಲೆ ಮಾಹಿತಿ ನಮಗೆ ಸಹಾಯ ಮಾಡುವುದು. ಈ ಸಾಮಾನ್ಯ ಶಕದ ಆದಿ ಶತಮಾನದಲ್ಲಿ ಎಫೆಸವು ಮಾಟ, ಮಂತ್ರ, ಜ್ಯೋತಿಷ್ಯ ಮತ್ತು ಫಲವಂತಿಕೆಯ ಅರ್ತೆಮೀ ದೇವಿಯ ಆರಾಧನೆಗೆ ಪ್ರಸಿದ್ಧವಾಗಿತ್ತು.c ಆ ದೇವಿಯ ಪ್ರತಿಮೆಯ ಸುತ್ತಲೂ ಒಂದು ಭವ್ಯವಾದ ದೇವಸ್ಥಾನವನ್ನು ಕಟ್ಟಲಾಗಿತ್ತು ಮತ್ತು ಇದನ್ನು ಪ್ರಾಚೀನ ಲೋಕದ ಏಳು ಅದ್ಭುತಗಳಲ್ಲಿ ಒಂದಾಗಿ ಎಣಿಸಲಾಗುತ್ತಿತ್ತು. ಆ ನಿವೇಶನದ 19ನೇ ಶತಮಾನದ ಭೂಶೋಧಕ್ಕನುಸಾರ, ಆ ದೇವಸ್ಥಾನವನ್ನು 240 ಅಡಿ ಅಗಲ ಮತ್ತು 418 ಅಡಿ ಉದ್ದದ ಎತ್ತರ-ನೆಲದ ಮೇಲೆ ಕಟ್ಟಲಾಗಿತ್ತು. ದೇವಸ್ಥಾನವು ತಾನೇ ಸುಮಾರು 164 ಅಡಿ ಅಗಲ ಮತ್ತು 343 ಅಡಿ ಉದ್ದವಾಗಿತ್ತು. ಇದರಲ್ಲಿದ್ದ 100 ಅಮೃತಶಿಲೆಯ ಕಂಬಗಳಲ್ಲಿ ಪ್ರತಿಯೊಂದು 55 ಅಡಿ ಎತ್ತರವಾಗಿದ್ದವು. ಅದರ ಚಾವಣಿಯು ಅಮೃತಶಿಲೆಯ ದೊಡ್ಡ ಹಾಸುಬಿಲ್ಲೆಗಳಿಂದ ಆವರಿಸಲ್ಪಟ್ಟಿತ್ತು. ಸಂದುಗಳನ್ನು ಜೋಡಿಸಲು ಗಾರೆಯ ಬದಲಿಗೆ ಚಿನ್ನವನ್ನು ಬಳಸಲಾಗಿತ್ತೆಂದು ಹೇಳಲಾಗುತ್ತದೆ. ಈ ದೇವಸ್ಥಾನವು ಭೂಮಿಯ ಸರ್ವ ಕಡೆಗಳಿಂದ ಪ್ರವಾಸಿಗಳನ್ನು ಆಕರ್ಷಿಸುತ್ತಿತ್ತು ಮತ್ತು ಉತ್ಸವ ಸಮಯಗಳಲ್ಲಿ ನೂರಾರು ಸಾವಿರ ಜನ ಸಂದರ್ಶಕರು ನಗರದಲ್ಲಿ ಕೂಡಿ ಬರುತ್ತಿದ್ದರು. ಎಫೆಸದ ಅಕ್ಕಸಾಲಿಗರು ಯಾತ್ರಿಕರಿಗೆ ಅರ್ತೆಮೀಯ ಬೆಳ್ಳಿಯ ಚಿಕ್ಕ ಗುಡಿಗಳನ್ನು ಮಾರುವುದರಲ್ಲಿ ಲಾಭಕರ ವ್ಯಾಪಾರವನ್ನು ನಡೆಸುತ್ತಿದ್ದರು.

6 ಪೌಲನು ತನ್ನ ಎರಡನೆಯ ಮಿಷನೆರಿ ಪ್ರಯಾಣದಲ್ಲಿ ಅಲ್ಪ ಸಮಯ ಸಾರುವುದಕ್ಕಾಗಿ ಎಫೆಸದಲ್ಲಿ ತಂಗಿದ ಬಳಿಕ ಅಕ್ವಿಲ ಮತ್ತು ಪ್ರಿಸ್ಕಿಲ್ಲರೊಂದಿಗೆ ಕೆಲಸವನ್ನು ಮುಂದುವರಿಸಲು ಅಲ್ಲಿಂದ ಹೊರಟನು. (ಅ.ಕೃ. 18:18-21) ಅವನು ತನ್ನ ಮೂರನೆಯ ಮಿಷನೆರಿ ಪ್ರಯಾಣದಲ್ಲಿ ಹಿಂದಿರುಗಿ ಬಂದು ಅಲ್ಲಿ ಸುಮಾರು ಮೂರು ವರ್ಷಕಾಲ ಕ್ರೈಸ್ತತ್ವ ಎಂಬ ‘ಮಾರ್ಗದ’ ವಿಷಯದಲ್ಲಿ ಅನೇಕರಿಗೆ ಸಾರಿ, ಕಲಿಸಿದನು. (ಅ.ಕೃ. 19:8-10; 20:31) ಎಫೆಸದಲ್ಲಿದ್ದಾಗ ಪೌಲನು ಕಷ್ಟಪಟ್ಟು ಕೆಲಸ ಮಾಡಿದನು. ಬೈಬಲ್‌ ಸಮಯಗಳಲ್ಲಿ ದೈನಂದಿನ ಜೀವನ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಏ. ಇ. ಬೆಯ್ಲೀ ಬರೆಯುವುದು: “ಪೌಲನ ಸಾಮಾನ್ಯ ಪದ್ಧತಿಯು ಸೂರ್ಯೋದಯದಿಂದ ಹಿಡಿದು ಬೆಳಗ್ಗೆ 11ರ ತನಕ ತನ್ನ ಕಸಬಿನಲ್ಲಿ ಕಳೆಯುವುದಾಗಿತ್ತು. (ಅ.ಕೃ. 20:34, 35) ಅಷ್ಟರಲ್ಲಿ ತುರನ್ನನು ತನ್ನ ಬೋಧನೆಯನ್ನು ಮುಗಿಸಿದ್ದನು. ಬಳಿಕ ಬೆಳಗ್ಗೆ 11ರಿಂದ ಮಧ್ಯಾಹ್ನ 4ರ ತನಕ ಆ ಸಭಾಗೃಹದಲ್ಲಿ ಸಾರಿ ಹೇಳುತ್ತ, ಸಹಾಯಕರೊಂದಿಗೆ ಸಮಾಲೋಚನೆಯಲ್ಲಿ ತೊಡಗುತ್ತಿದ್ದನು. . . . ತರುವಾಯ ಕೊನೆಯದಾಗಿ ಮನೆಯಿಂದ ಮನೆಗೆ ಸುವಾರ್ತೆಯನ್ನು ಮಧ್ಯಾಹ್ನ 4ರಿಂದ ಹಿಡಿದು ರಾತ್ರಿ ತುಂಬ ಹೊತ್ತಿನ ವರೆಗೆ ಸಾರುತ್ತಿದ್ದನು. (ಅ.ಕೃ. 20:20, 21, 31) ಊಟಕ್ಕೆ ಮತ್ತು ಮಲಗಲಿಕ್ಕೆ ಅವನಿಗೆ ಸಮಯವೆಲ್ಲಿತ್ತೋ ಎಂಬುದು ಸೋಜಿಗದ ಸಂಗತಿ.”—1943, ಪುಟ 308.

7 ಪೌಲನು ಹುರುಪಿನಿಂದ ಸಾರುತ್ತಿದ್ದಾಗ, ಆರಾಧನೆಯಲ್ಲಿ ವಿಗ್ರಹಗಳ ಬಳಕೆಯನ್ನು ಬಯಲಿಗೆಳೆದನು. ಇದು, ವಿಗ್ರಹಗಳನ್ನು ತಯಾರಿಸಿ ಮಾರುವ ಅಕ್ಕಸಾಲಿಗ ದೇಮೇತ್ರಿಯನಂಥ ಜನರನ್ನು ಕೋಪಕ್ಕೆಬ್ಬಿಸಿತು. ಇದರಿಂದ ಉಂಟಾದ ಗಲಭೆಯ ಕಾರಣ ಪೌಲನು ಕೊನೆಗೆ ಆ ನಗರವನ್ನು ಬಿಟ್ಟು ಹೋಗಬೇಕಾಯಿತು.—ಅ.ಕೃ. 19:23–20:1.

8 ಅವನು ಈಗ ಸೆರೆಮನೆಯಲ್ಲಿರುವಾಗ ಎಫೆಸ ಸಭೆಯು ಎದುರಿಸಿದ ಸಮಸ್ಯೆಗಳ ವಿಷಯದಲ್ಲಿ ಚಿಂತಿಸುತ್ತಿದ್ದಾನೆ. ಈ ಸಭೆಯವರ ಸುತ್ತಲೂ ವಿಧರ್ಮಿ ಆರಾಧಕರಿದ್ದರು ಮತ್ತು ಭಯವಿಸ್ಮಯ ಹುಟ್ಟಿಸುವ ಅರ್ತೆಮೀಯ ದೇವಸ್ಥಾನವಿತ್ತು. ಈಗ ಅಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೆ, ಯೆಹೋವನು ತನ್ನ ಆತ್ಮದ ಮೂಲಕ ನಿವಾಸಿಸುವ “ಪರಿಶುದ್ಧ ದೇವಾಲಯ” ಅವರೇ ಆಗಿದ್ದಾರೆ ಎಂದು ಪೌಲನು ಕೊಟ್ಟ ಸೂಕ್ತ ದೃಷ್ಟಾಂತದ ಅಗತ್ಯವಿತ್ತು ನಿಸ್ಸಂದೇಹ. (ಎಫೆ. 2:21) ಯೇಸು ಕ್ರಿಸ್ತನ ಮೂಲಕ ಐಕ್ಯ ಮತ್ತು ಶಾಂತಿಯನ್ನು ಪುನಸ್ಸ್ಥಾಪಿಸಲಿರುವ ದೇವರ ಆಡಳಿತದ (ತನ್ನ ಮನೆವಾರ್ತೆಯ ವಿಚಾರಗಳನ್ನು ನಿರ್ವಹಿಸುವ ಆತನ ವಿಧ) ಕುರಿತಾದ ‘ಪವಿತ್ರ ರಹಸ್ಯವು’ (NW) ಎಫೆಸದವರಿಗೆ ಪ್ರಕಟವಾದದ್ದು, ನಿಸ್ಸಂದೇಹವಾಗಿಯೂ ಅವರಿಗೆ ಮಹಾ ಸ್ಫೂರ್ತಿಯನ್ನೂ ಸಾಂತ್ವನವನ್ನೂ ಕೊಟ್ಟಿತ್ತು. (1:9, 10) ಕ್ರಿಸ್ತನಲ್ಲಿ ಯೆಹೂದ್ಯ ಮತ್ತು ಅನ್ಯನ ಐಕ್ಯವನ್ನು ಪೌಲನು ಒತ್ತಿಹೇಳುತ್ತಾನೆ. ಅವನು ಒಂದಾಗುವಿಕೆ ಮತ್ತು ಏಕತೆಯ ಬಗ್ಗೆ ಅವರಿಗೆ ಬುದ್ಧಿಹೇಳುತ್ತಾನೆ. ಹೀಗೆ ನಾವೀಗ ಈ ಪುಸ್ತಕದ ಉದ್ದೇಶ, ಮೌಲ್ಯ ಮತ್ತು ದೈವಪ್ರೇರಣೆಯನ್ನು ಮಾನ್ಯ ಮಾಡಬಲ್ಲೆವು.

ಪ್ರಯೋಜನಕರವೇಕೆ?

16 ಎಫೆಸದವರಿಗೆ ಬರೆದ ಪತ್ರವು ಕ್ರೈಸ್ತ ಜೀವನದ ಹೆಚ್ಚುಕಡಮೆ ಪ್ರತಿಯೊಂದು ಅಂಶವನ್ನೂ ಸ್ಪರ್ಶಿಸುತ್ತದೆ. ಇಂದಿನ ಲೋಕದಲ್ಲಿ ಹೆಚ್ಚುತ್ತಿರುವ ಕ್ಲೇಶಕರ ಸಮಸ್ಯೆಗಳು ಮತ್ತು ಅಪರಾಧಗಳನ್ನು ನೋಡುವಲ್ಲಿ, ದೇವಭಕ್ತಿಯ ಜೀವನವನ್ನು ನಡೆಸಲು ಬಯಸುವವರಿಗೆ ಪೌಲನ ಸ್ವಸ್ಥ ಹಾಗೂ ಪ್ರಾಯೋಗಿಕ ಸಲಹೆಯು ನಿಜವಾಗಿಯೂ ಪ್ರಯೋಜನಕರವಾಗಿದೆ. ಮಕ್ಕಳು ಹೆತ್ತವರೊಂದಿಗೆ ಮತ್ತು ಹೆತ್ತವರು ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು? ಗಂಡನ ಕಡೆಗೆ ಹೆಂಡತಿಯ ಜವಾಬ್ದಾರಿ ಮತ್ತು ಹೆಂಡತಿಯ ಕಡೆಗೆ ಗಂಡನ ಜವಾಬ್ದಾರಿಗಳೇನು? ಈ ದುಷ್ಟ ಲೋಕದಲ್ಲಿ ಸಭೆಯಲ್ಲಿರುವ ವ್ಯಕ್ತಿಗಳು ಪ್ರೀತಿಯ ಐಕ್ಯವನ್ನು ಮತ್ತು ಕ್ರೈಸ್ತ ಶುದ್ಧತೆಯನ್ನು ಕಾಪಾಡಿಕೊಳ್ಳಲು ಏನು ಮಾಡತಕ್ಕದ್ದು? ಪೌಲನ ಸಲಹೆಯು ಈ ಎಲ್ಲ ಪ್ರಶ್ನೆಗಳನ್ನು ಆವರಿಸುತ್ತದೆ ಮತ್ತು ನೂತನ ಕ್ರೈಸ್ತ ವ್ಯಕ್ತಿತ್ವವನ್ನು ಧರಿಸುವುದರಲ್ಲಿ ಏನು ಒಳಗೊಂಡಿದೆ ಎಂಬುದನ್ನು ಅವನು ತೋರಿಸುತ್ತಾನೆ. ಎಫೆಸ ಪುಸ್ತಕದ ಅಧ್ಯಯನದ ಮೂಲಕ ದೇವರಿಗೆ ಮೆಚ್ಚಿಕೆಯಾದ ಮತ್ತು “ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ” ನಿರ್ಮಿಸಲ್ಪಟ್ಟಿರುವ ಸ್ವಭಾವಕ್ಕಾಗಿ ಎಲ್ಲರೂ ನಿಜ ಗಣ್ಯತೆಯನ್ನು ಗಳಿಸಶಕ್ತರಾಗುವರು.—4:24-32; 6:1-4; 5:3-5, 15-20, 22-33.

17 ಸಭೆಯಲ್ಲಿ ಅಧಿಕಾರ ಸ್ಥಾನಗಳ ಮತ್ತು ಕಾರ್ಯನಿರ್ದೇಶಗಳ ಉದ್ದೇಶವನ್ನು ಸಹ ಈ ಪತ್ರಿಕೆ ತೋರಿಸುತ್ತದೆ. “ದೇವಜನರನ್ನು ಯೋಗ್ಯಸ್ಥಿತಿಗೆ” ಅಂದರೆ ಪ್ರೌಢತೆಗೆ “ತರುವ ಕೆಲಸಕ್ಕೋಸ್ಕರವೂ ಸಭೆಯ ಸೇವೆಗೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೋಸ್ಕರವೂ” ಇದಾಗಿತ್ತು. ಈ ಸಭಾ ಏರ್ಪಾಡುಗಳಲ್ಲಿ ಪೂರ್ಣವಾಗಿ ಸಹಕರಿಸುವ ಮೂಲಕ ಕ್ರೈಸ್ತನು ‘ಪ್ರೀತಿಯಿಂದ ಬೆಳೆದು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ಐಕ್ಯವನ್ನು’ ಹೊಂದಬಲ್ಲನು.—4:12, 13, 15.

18 ಎಫೆಸದವರಿಗೆ ಬರೆದ ಈ ಪತ್ರವು ಆ ಆದಿ ಸಭೆಗೆ “ಕ್ರಿಸ್ತನ ವಿಷಯವಾದ ಮರ್ಮದ” ಕುರಿತ ತಿಳಿವಳಿಕೆಯನ್ನು ಹರಿತಗೊಳಿಸಿತು. ವಿಶ್ವಾಸಿಗಳಾದ ಯೆಹೂದ್ಯರೊಂದಿಗೆ “ಅನ್ಯಜನರು” ಸಹ “ಬಾಧ್ಯರೂ,” “ಒಂದೇ ದೇಹದೊಳಗಣ ಅಂಗಗಳೂ” “ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ” ಇದ್ದಾರೆಂದು ಇಲ್ಲಿ ಸ್ಪಷ್ಟ ಮಾಡಲ್ಪಟ್ಟಿತು. ಅನ್ಯರ ಮತ್ತು ಯೆಹೂದ್ಯರ ಮಧ್ಯೆ ಅಡ್ಡಗೋಡೆಯಾಗಿದ್ದ ‘ಆಜ್ಞೆಗಳುಳ್ಳ ಧರ್ಮಶಾಸ್ತ್ರವು’ ಕೆಡವಲ್ಪಟ್ಟಿತ್ತು ಮತ್ತು ಈಗ ಕ್ರಿಸ್ತನ ರಕ್ತದ ಮೂಲಕ ಎಲ್ಲರೂ ಪವಿತ್ರಜನರ ಜೊತೆ ನಾಗರಿಕರೂ ದೇವರ ಮನೆವಾರ್ತೆಯ ಸದಸ್ಯರೂ ಆಗಿದ್ದರು. ವಿಧರ್ಮಿ ಅರ್ತೆಮೀ ದೇವಸ್ಥಾನಕ್ಕೆ ತೀರ ವ್ಯತಿರಿಕ್ತವಾಗಿ ಇವರು, ಯೆಹೋವ ದೇವರು ತನ್ನ ಆತ್ಮದ ಮೂಲಕವಾಗಿ ನಿವಾಸಿಸುವ ಸ್ಥಳ ಅಂದರೆ ಆತನ “ಪರಿಶುದ್ಧ ದೇವಾಲಯ”ವಾಗಿ ಕ್ರಿಸ್ತ ಯೇಸುವಿನೊಂದಿಗೆ ಕಟ್ಟಲ್ಪಡುತ್ತಿದ್ದರು.—3:4, 6; 2:14, 15, 21.

19 ‘ಪವಿತ್ರ ರಹಸ್ಯದ’ ಸಂಬಂಧದಲ್ಲಿ, “ಭೂಪರಲೋಕಗಳಲ್ಲಿರುವ [ಆ ರಾಜ್ಯಕ್ಷೇತ್ರದಲ್ಲಿ ಭೂಮಿಯ ಮೇಲೆ ಜೀವಿಸುವವರೂ, ಸ್ವರ್ಗೀಯ ರಾಜ್ಯಕ್ಕಾಗಿ ಆರಿಸಲ್ಪಟ್ಟವರೂ] ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ” ಕೂಡಿಸುವ ಒಂದು ಆಡಳಿತದ ಬಗ್ಗೆಯೂ ಪೌಲನು ಮಾತಾಡಿದನು. ಹೀಗೆ ಶಾಂತಿ ಮತ್ತು ಐಕ್ಯವನ್ನು ಪುನಸ್ಸ್ಥಾಪಿಸುವ ದೇವರ ಉದ್ದೇಶವನ್ನು ಎತ್ತಿ ತೋರಿಸಲಾಗಿದೆ. ಈ ಸಂಬಂಧದಲ್ಲಿ, ಯಾರ ಮನೋನೇತ್ರಗಳು ಬೆಳಗಿಸಲ್ಪಟ್ಟಿದ್ದವೊ ಆ ಎಫೆಸದವರ ಪರವಾಗಿ ಪೌಲನು, ದೇವರು ಅವರನ್ನು ಯಾವ ನಿರೀಕ್ಷೆಗೆ ಕರೆದಿದ್ದಾನೊ ಆ ನಿರೀಕ್ಷೆಯನ್ನು ಅವರು ಪೂರ್ಣವಾಗಿ ಗ್ರಹಿಸುವಂತೆಯೂ, ಆ ಪವಿತ್ರ ಜನರ ‘ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬದನ್ನು’ ಅವರು ನೋಡುವಂತೆಯೂ ಪ್ರಾರ್ಥಿಸಿದನು. ಆ ಮಾತುಗಳು ಅವರ ನಿರೀಕ್ಷೆಯಲ್ಲಿ ಅವರನ್ನು ಬಹಳವಾಗಿ ಪ್ರೋತ್ಸಾಹಿಸಿದ್ದಿರಬೇಕು. ಮತ್ತು ಎಫೆಸದವರಿಗೆ ಬರೆದ ಪ್ರೇರಿತ ಪತ್ರವು, ನಾವು ಎಲ್ಲದರಲ್ಲಿ “ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ” ಇಂದಿನ ವರೆಗೂ ಸಭೆಯ ಭಕ್ತಿಯನ್ನು ವರ್ಧಿಸುತ್ತ ಹೋಗುತ್ತದೆ.—1:9-11, 18; 3:19.

[ಪಾದಟಿಪ್ಪಣಿಗಳು]

a ಬೈಬಲ್‌ ಪುಸ್ತಕಗಳ ಮೂಲ ಮತ್ತು ಇತಿಹಾಸ, (ಇಂಗ್ಲಿಷ್‌) 1868, ಸಿ. ಇ. ಸ್ಟೋವ್‌, ಪುಟ 357.

b ನ್ಯೂ ಬೈಬಲ್‌ ಡಿಕ್ಷನೆರಿ, ಎರಡನೆಯ ಆವೃತ್ತಿ, 1986, ಸಂಪಾದಕ ಜೆ.ಡಿ. ಡಗ್ಲಸ್‌, ಪುಟ 175.

c ಶಾಸ್ತ್ರಗಳ ಒಳನೋಟ, (ಇಂಗ್ಲಿಷ್‌) ಸಂ. 1, ಪುಟ 182.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ