ನಾನು ಕೊಯ್ಲಿನ ಕಾಲದಲ್ಲಿ ಪ್ರತಿವರ್ತಿಸಿದೆನು
ವಿನ್ರೆಡ್ ರೆಮಿ
“ಬೆಳೆಯು ಬಹಳ, ಕೆಲಸದವರು ಸ್ವಲ್ಪ.” ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದ ಜನರ ಕಡೆಗೆ ಆಳವಾದ ಭಾವನೆಯಿಂದಾಗಿ ನಮ್ಮ ಕರ್ತನಾದ ಯೇಸು ಈ ಮಾತುಗಳನ್ನು ಹೇಳುವಂತೆ ಪ್ರೇರಿಸಲ್ಪಟ್ಟನು. ನಾನು ಕೂಡ ಅಂಥ ಭಾವನೆಯನ್ನು ಅನುಭವಿಸಿದ್ದೇನೆ, ಮತ್ತು ಕಳೆದ 40 ವರ್ಷಗಳಿಂದ, ಕೊಯ್ಲಿನ ಕೆಲಸದ ಕರ್ತನ ಕರೆಗೆ ನಾನು ಯಾವಾಗಲೂ ಅನುಕೂಲವಾಗಿ ಪ್ರತಿವರ್ತಿಸಲು ಪ್ರಯತ್ನಿಸಿದ್ದೇನೆ.—ಮತ್ತಾಯ 9:36, 37.
ಎಲ್ಲಾ ಹುಡುಗಿಯರೇ ಇದ್ದ ಏಳು ಮಕ್ಕಳ ಕುಟುಂಬವೊಂದರಲ್ಲಿ ನಾನು ಪಶ್ಚಿಮ ಆಫ್ರಿಕದಲ್ಲಿ ಜನಿಸಿದೆ. ನಮ್ಮ ಹೆತ್ತವರು ಕೋಮಲತೆಯವರಾಗಿದ್ದರೂ, ಕಟ್ಟುನಿಟ್ಟಿನವರಾಗಿದ್ದರು; ಅವರು ಅತಿ ಧರ್ಮಭೀರುಗಳೂ ಕೂಡ ಆಗಿದ್ದರು. ಪ್ರತಿವಾರ ಚರ್ಚಿಗೆ ಮತ್ತು ಸಂಡೇ ಸ್ಕೂಲ್ (ಭಾನುವಾರದ ಶಾಲೆ) ಹಾಜರಾಗುವದು ಸಂಧಾನಮಾಡಿಕೊಳ್ಳಲಾಗದಂಥದ್ದಾಗಿತ್ತು. ಇದು ನನಗೆ ಒಂದು ಸಮಸ್ಯೆಯಾಗಿರಲಿಲ್ಲ, ಯಾಕಂದರೆ ನಾನು ಆತ್ಮಿಕ ವಿಷಯಗಳನ್ನು ಪ್ರೀತಿಸುತ್ತಿದ್ದೆ. ವಾಸ್ತವದಲ್ಲಿ, 12 ನೆಯ ವರ್ಷ ಪ್ರಾಯದಲ್ಲಿ, ಭಾನುವಾರ ಶಾಲೆಯ ತರಗತಿಗಳನ್ನು ನಡಿಸಲು ನಾನು ನೇಮಕ ಹೊಂದಿದೆ.
ವಿವಾಹ ಮತ್ತು ಸಾಹಸ
ನಾನು 1941 ರಲ್ಲಿ 23 ನೆಯ ವರ್ಷ ವಯಸ್ಸಿನಲ್ಲಿ, ವಸಾಹತು ಕಾರ್ಯದರ್ಶಿಯ ಕಚೇರಿಯಲ್ಲಿ ಒಬ್ಬ ಗುಮಾಸ್ತನಾಗಿದ್ದ ಲಿಕ್ಫೆಲ್ಡ್ ರೆಮಿಯನ್ನು ಮದುವೆಯಾದೆ. ಪ್ರಾಪಂಚಿಕವಾಗಿ ನಾವು ಅನುಕೂಲಸ್ಥರಾಗಿದ್ದೆವು, ಆದರೆ ಸಾಹಸದ ಪ್ರೀತಿ ಮತ್ತು ಪ್ರಾಪಂಚಿಕ ಸಂಪತ್ತನ್ನು ಸಂಗ್ರಹಿಸುವ ಆಶೆಯು ನಮ್ಮನ್ನು 1944 ರಲ್ಲಿ ಲೈಬೀರಿಯಕ್ಕೆ ಕೊಂಡೊಯ್ಯಿತು. ನನ್ನ ಗಂಡನು ಯೆಹೋವನ ಸಾಕ್ಷಿಗಳ ಮಿಷನೆರಿಯಾಗಿದ್ದ ಹೊಯ್ಲ್ ಇರ್ವಿನ್ರನ್ನು ಭೇಟಿಯಾದಾಗ, ಅವನ ಜೀವಿತದಲ್ಲಿ, ಮತ್ತು ಕ್ರಮೇಣ ನನ್ನದರಲ್ಲಿಯೂ ಒಂದು ತಿರುವು ಬಿಂದು 1950 ರಲ್ಲಿ ಬಂತು. ಕೇವಲ ಮೂರು ವಾರಗಳ ಅಭ್ಯಾಸದ ನಂತರ, ಸಾರುವ ಕಾರ್ಯದಲ್ಲಿ ಭಾಗಿಯಾಗಲು ನನ್ನ ಗಂಡನು ಆರಂಭಿಸಿದನು.
ಚರ್ಚಿಗೆ ಹಾಜರಾಗುವದನ್ನು ನನ್ನ ಗಂಡನು ನಿಲ್ಲಿಸಿದ್ದರಿಂದ ನಾನು ಕ್ಷೋಭೆಗೊಂಡೆ. ಎಷ್ಟಾದರೂ, ಅವನು ಒಬ್ಬ ದೃಢನಿಶ್ಚಯದ ಪ್ರಾಟೆಸ್ಟಂಟ್ನಾಗಿದ್ದು, ಲೆಂಟ್ ಕಾಲದಲ್ಲಿಯೂ ಉಪವಾಸ ಮಾಡುವವನಾಗಿದ್ದನು. ಮೊದಲನೆಯ ಬಾರಿ, ಕೈಯಲ್ಲಿ ಒಂದು ಬ್ಯಾಗ್ ಹಿಡಿದುಕೊಂಡು ಅವನು ಸಾರಲು ಹೋಗುವದನ್ನು ನೋಡಿದಾಗ, ನಾನು ಕೋಪೋದ್ರಿಕಳ್ತಾದೆ. “ನಿನಗೆ ತಲೆಯೇನಾದರೂ ಕೆಟ್ಟಿದೆಯಾ?” ನಾನು ಕೇಳಿದೆ. “ನಿನ್ನಂಥ ಗಣ್ಯ ವ್ಯಕ್ತಿ ಆ ಮೂರ್ಖ ಜನರೊಂದಿಗೆ ಸಾರಲು ಹೊರಡುವದು!” ಅವನು ಶಾಂತನಾಗಿದ್ದನು ಮತ್ತು ಈ ಬೈಗುಳದ ಸುರಿಮಳೆಯ ಸಮಯದಲ್ಲಿ ಬುದ್ಧಿಸ್ವಾಧೀನತೆಯುಳ್ಳವನಾಗಿದ್ದನು.
ಮರುದಿನ, ಸಹೋದರ ಇರ್ವಿನ್ ಲಿಕ್ಫೆಲ್ಡ್ನೊಂದಿಗೆ ಅಭ್ಯಾಸಿಸಲು ನಮ್ಮ ಮನೆಗೆ ಭೇಟಿಕೊಟ್ಟರು. ಯಥಾಪ್ರಕಾರ, ನಾನು ಅಭ್ಯಾಸದ ಸಮಯದಲ್ಲಿ ದೂರ ಸರಿದು ನಿಂತಿದ್ದೆ. ನಾನು ಅನಕ್ಷರಸ್ಥಳೋ ಎಂದು ನನಗೆ ಸಹೋದರ ಇರ್ವಿನ್ ಕೇಳಿದ್ದ ಕಾರಣ ಪ್ರಾಯಶಃ ಇದಾಗಿರಬಹುದು. ಏನು? ನಾನು, ಅನಕ್ಷರಸ್ಥಳು? ಎಂಥ ಒಂದು ಅವಮಾನ! ನಾನೆಷ್ಟು ವಿದ್ಯಾವಂತಳು ಎಂದು ಅವನಿಗೆ ನಾನು ತೋರಿಸುವೆ! ಈ ಸುಳ್ಳು ಧರ್ಮವನ್ನು ನಾನು ಹೊರಗೆಡಹುವೆ!
ಸತ್ಯವನ್ನು ಸ್ವೀಕರಿಸುವದು
ಇದಾದ ಸ್ವಲ್ಪವೇ ಸಮಯದೊಳಗೆ, ವಾಸದ ಕೊಠಡಿಯ ಮೇಜಿನ ಮೇಲೆ “ದೇವರು ಸತ್ಯವಂತನೇ ಸರಿ” ಎಂಬ ಪುಸ್ತಕ ನಾನು ಗಮನಿಸಿದೆ. ‘ಎಂಥ ಒಂದು ಅಸಂಬದ್ಧ ಶಿರೋನಾಮ,’ ನಾನು ಯೋಚಿಸಿದೆ. ‘ದೇವರು ಯಾವಾಗಲೂ ಸತ್ಯವಂತನೇ ಆಗಿದ್ದಾನೆ, ಅವನಾಗಿಲ್ಲವೆ?’ ನಾನು ಆ ಪುಸ್ತಕದ ಮೇಲೆ ಕಣ್ಣಾಡಿಸುತ್ತಿದ್ದಂತೆ, ದೂರಲು ಇನ್ನೊಂದು ಕಾರಣವನ್ನು ನಾನು ಬಲುಬೇಗನೆ ಕಂಡುಕೊಂಡೆನು. ಮಾನವನಿಗೆ ಒಂದು ಆತ್ಮ ಇಲ್ಲ, ಬದಲು ಅವನು ಒಂದು ಆತ್ಮ ಆಗಿದ್ದಾನೆ! ಎಂದು ಅದು ಹೇಳಿತ್ತು. ನಾಯಿಗಳು ಮತ್ತು ಬೆಕ್ಕುಗಳು ಕೂಡ ಆತ್ಮಗಳಾಗಿವೆ! ಇದು ನಿಜವಾಗಿಯೂ ನನ್ನನ್ನು ರೇಗಿಸಿತು. ಎಂಥ ‘ಮೂರ್ಖತನದ ಬೋಧನೆ!’ ನಾನು ಎಣಿಸಿದೆ.
ನನ್ನ ಗಂಡನು ಮನೆಗೆ ಬಂದಾಗ, ನಾನು ಅವನನ್ನು ಸಿಟ್ಟಿನಿಂದ ಸಂಧಿಸಿದೆ. “ಈ ವಂಚಕರು, ಮಾನವನಿಗೆ ಒಂದು ಆತ್ಮ ಇಲ್ಲ ಎಂದು ಹೇಳುತ್ತಾರೆ. ಅವರು ಸುಳ್ಳು ಪ್ರವಾದಿಗಳು!” ನನ್ನ ಗಂಡ ಜಗಳ ಮಾಡಲಿಲ್ಲ; ಬದಲಾಗಿ, ಅವನು ಶಾಂತತೆಯಿಂದ ಉತ್ತರಿಸಿದ್ದು: “ವಿನ್ನಿ, ಪ್ರತಿಯೊಂದು ವಿಷಯವೂ ಬೈಬಲಿನಲ್ಲಿ ಇದೆ.” ನಂತರ, ಸಹೋದರ ಇರ್ವಿನ್ರು ನನ್ನ ಸ್ವಂತ ಬೈಬಲಿನಿಂದ, ನಾವು ಆತ್ಮಗಳು ಆಗಿದ್ದೇವೆ ಮತ್ತು ನಮ್ಮ ಆತ್ಮವು ಮರ್ತ್ಯವಾದದ್ದು ಎಂದು ತಾಳ್ಮೆಯಿಂದ ತೋರಿಸಿದಾಗ ನಾನು ಬೆರಗಾದೆನು. (ಯೆಹೆಜ್ಕೇಲ 18:4) ನನಗೆ ವಿಶೇಷವಾಗಿ ಪ್ರಭಾವಿಸಿದ ವಚನವು ಆದಿಕಾಂಡ 2:7 ಆಗಿತ್ತು, ಅಲ್ಲಿ ಹೇಳುವದು: “ಮನುಷ್ಯನು [ಆದಾಮನು] ಬದುಕುವ ಪ್ರಾಣಿ (ಆತ್ಮ, NW ) ಯಾದನು.”
ನಾನು ಎಷ್ಟೊಂದು ತಪ್ಪಿತಸ್ಥಳಾಗಿದ್ದೆ! ವೈದಿಕರಿಂದ ವಂಚಿಸಲ್ಪಟ್ಟಿದ್ದೇನೆಂಬ ಭಾವನೆ ನನ್ನಲ್ಲಿ ಉಂಟಾಯಿತು ಮತ್ತು ಮತ್ತೆಂದಿಗೂ ಚರ್ಚ್ಗೆ ಹಾಜರಾಗಲಿಲ್ಲ. ಬದಲಾಗಿ, ಯೆಹೋವನ ಸಾಕ್ಷಿಗಳ ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭಿಸಿದೆ. ಅವರ ನಡುವಣ ಪ್ರೀತಿಯನ್ನು ನೋಡುವುದು ಎಷ್ಟೊಂದು ಮನತಟ್ಟುವಂಥದ್ದು! ಇದು ನಿಜ ಧರ್ಮವಾಗಿರಲೇಬೇಕು.
ಕೇಪ್ ಪಾಲ್ಮಸ್ನಲ್ಲಿ ಕೊಯ್ಲು ಮಾಡುವದು
ಸುಮಾರು ಮೂರು ತಿಂಗಳುಗಳ ನಂತರ, ನನ್ನ ಗಂಡನಿಗೆ ಅವನ ಕಂಪೆನಿಯಿಂದ ದೊಡ್ಡ ಮೊತ್ತದ ಹಣವನ್ನು ಕದಿಯುವ ಒಂದು ಸಂದರ್ಭ ಒದಗಿ ಬಂತು—ಆದರೆ ಅವನದನ್ನು ಮಾಡಲಿಲ್ಲ. ಅವನ ಸಂಗಾತಿಗಳು ಅವನನ್ನು ಕೆಣಕಿದರು: “ರೆಮಿ, ನೀನೊಬ್ಬ ನಿರ್ಗತಿಕನಾಗಿ ಸಾಯುವಿ.”
ಆದಾಗ್ಯೂ, ಅವನ ಪ್ರಾಮಾಣಿಕತೆಯ ಕಾರಣ, ಅವನಿಗೆ ಭಡ್ತಿ ನೀಡಿ ಕೇಪ್ ಪಾಲ್ಮಸ್ನಲ್ಲಿ ಒಂದು ಹೊಸ ಕಚೇರಿಯನ್ನು ತೆರೆಯಲು ಅವನನ್ನು ಕಳುಹಿಸಲಾಯಿತು. ನಾವು ಉತ್ಸಾಹದಿಂದ ಸಾರಿದೆವು ಮತ್ತು ಕೇವಲ ಎರಡು ತಿಂಗಳುಗಳೊಳಗೆ, ಬೈಬಲಿನ ಸಂದೇಶದಲ್ಲಿ ತೀವ್ರ ಆಸಕ್ತಿ ತೋರಿಸಿದವರ ಒಂದು ಚಿಕ್ಕ ಗುಂಪು ಅಲ್ಲಿ ನಮಗಿತ್ತು. ನಂತರ, ಅವನ ಹೊಸ ಆಫೀಸಿಗೆ ಬೇಕಾದ ಕೆಲವು ಪೂರೈಕೆಗಳಿಗಾಗಿ ರಾಜಧಾನಿಯಾದ ಮನ್ರೊವಿಯಕ್ಕೆ ಲಿಕ್ಫೆಲ್ಡ್ ಹೋದಾಗ, ಅಲ್ಲಿ ಅವನ ದೀಕ್ಷಾಸ್ನಾನವಾಯಿತು. ಕೇಪ್ ಪಾಲ್ಮಸ್ನಲ್ಲಿ ಸತ್ಯದಲ್ಲಿ ಆಸಕ್ತಿ ತೋರಿಸುತ್ತಿದ್ದವರ ಪರಾಮರಿಕೆ ಮಾಡಲು ಸೊಸೈಟಿಯಿಂದ ಸಹಾಯವನ್ನು ಕೂಡ ಅವನು ಕೋರಿದನು.
ಕೇಪ್ ಪಾಲ್ಮಸ್ಗೆ ಸಹೋದರ ಮತ್ತು ಸಹೋದರಿ ಫೌಸ್ಟ್ರನ್ನು ಕಳುಹಿಸುವ ಮೂಲಕ ಸೊಸೈಟಿಯು ಪ್ರತಿವರ್ತನೆ ತೋರಿಸಿತು. ಸಹೋದರಿ ಫೌಸ್ಟ್ಳು ನನಗೆ ಅತ್ಯಮೂಲ್ಯವಾಗಿ ನೆರವಾದಳು, ಮತ್ತು ಡಿಸೆಂಬರ್, 1951 ರಲ್ಲಿ ಯೆಹೋವನಿಗೆ ನನ್ನ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಾಂಕೇತವಾಗಿ ತೋರಿಸಿದೆ. ಈಗ ಎಂದೆಂದಿಗಿಂತಲೂ ಹೆಚ್ಚಾಗಿ, ‘ನಿತ್ಯ ಜೀವಕ್ಕೆ ಫಲವನ್ನು ಕೂಡಿಸಿಡಲು’ ನಾನು ನಿರ್ಧರಿಸಿದ್ದೆ. (ಯೋಹಾನ 4:35, 36) ಏಪ್ರಿಲ್, 1952 ರಲ್ಲಿ ಪಯನೀಯರಳೋಪಾದಿ ಪೂರ್ಣ ಸಮಯದ ಶುಶ್ರೂಷೆಯನ್ನು ನಾನು ತೆಗೆದುಕೊಂಡೆ.
ಯೆಹೋವನಿಂದ ನನ್ನ ಪ್ರಯತ್ನಗಳು ಶೀಘ್ರದಲ್ಲಿಯೇ ಆಶೀರ್ವದಿಸಲ್ಪಟ್ಟವು; ಒಂದು ವರ್ಷದೊಳಗೆ, ಐದು ಮಂದಿ ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ತಲುಪಲು ಸಹಾಯ ಮಾಡಿದೆ. ಅವರಲ್ಲಿ ಒಬ್ಬಳು, ಲೂವಿಸಾ ಮಾಕಿನ್ಟೊಶ್, ಲೈಬಿರಿಯದ ರಾಷ್ಟ್ರಪತಿಗಳಾದ ಡಬ್ಲ್ಯೂ. ವಿ. ಎಸ್. ಟಬ್ಮೆನ್ರ ಸೋದರಬಂಧುವಾಗಿದ್ದಳು. ಅವಳು ದೀಕ್ಷಾಸ್ನಾನ ಪಡೆದುಕೊಂಡಳು ಮತ್ತು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಪ್ರವೇಶಿಸಿದಳು ಮತ್ತು 1984 ರಲ್ಲಿ ಅವಳು ಮೃತಿಹೊಂದುವ ತನಕ, ದೇವರಿಗೆ ನಂಬಿಗಸ್ತಳಾಗಿ ಮುಂದರಿದಳು. ಅನೇಕ ಸಂದರ್ಭಗಳಲ್ಲಿ ಅವಳು ರಾಷ್ಟ್ರಪತಿಗೆ ಸಾಕ್ಷಿಯನ್ನಿತ್ತಿದ್ದಳು.
ಕೆಳ ಬೈಕಾನ್ಗೆ
ಜಿಲ್ಲಾ ಸೇವಕರ ಸಂದರ್ಶನದ ಸಮಯದಲ್ಲಿ, ನನ್ನ ಗಂಡನನ್ನು ಮತ್ತು ನನ್ನನ್ನು ವಿಶೇಷ ಪಯನೀಯರರಾಗುವಂತೆ 1957 ರಲ್ಲಿ ಆಮಂತ್ರಿಸಲಾಯಿತು. ಪ್ರಾರ್ಥನಾಪೂರ್ವಕವಾದ ಚರ್ಚೆಯ ಬಳಿಕ ನಾವು ನೇಮಕವನ್ನು ಸ್ವೀಕರಿಸಿದೆವು. ಲಿಕ್ಫೆಲ್ಡ್ಗೆ ಕೇಪ್ ಪಾಲ್ಮಸ್ನಲ್ಲಿ ಅವನ ಐಹಿಕ ಕೆಲಸದಿಂದ ನಿವೃತ್ತಿಹೊಂದಲು ಕೆಲವು ತಿಂಗಳುಗಳು ಬೇಕಾಗಿದ್ದವು, ಆದುದರಿಂದ ನಾನು ಇಷ್ಟರ ತನಕ ಕೆಲಸಮಾಡಿರದ ಒಂದು ಕ್ಷೇತ್ರವಾದ ಕೆಳ ಬೈಕಾನ್ಗೆ ಮುಂದಾಗಿಯೇ ಕೆಲಸ ಆರಂಭಿಸಲು ಅಲ್ಲಿ ಹೋದೆ.
ಅಲ್ಲಿ ಆಗಮಿಸಿದಾಗ, ಮೆಕ್ಲೇನ್ ಪರಿವಾರದೊಂದಿಗೆ ನಾನು ಉಳುಕೊಳ್ಳುತ್ತಿದ್ದೆ. ಪದ್ಧತಿಯ ಪ್ರಕಾರ, ಮರುದಿನ ನನ್ನನ್ನು ಪಿಲೆ ಕುಲದ ಉಪಮುಖ್ಯಸ್ಥನ ಬಳಿಗೆ ಕೊಂಡೊಯ್ಯಲಾಯಿತು. ಮುಖ್ಯಸ್ಥನು ಮತ್ತು ಅವನ ಕುಟುಂಬವು ನನ್ನನ್ನು ಆದರದಿಂದ ಸುಸ್ವಾಗತಿಸಿತು, ಅವನ ಮನೆಯಲ್ಲಿ ಜನರ ಒಂದು ಚಿಕ್ಕ ಗುಂಪಿಗೆ ನಾನು ಸಾಕ್ಷಿಯನ್ನು ನೀಡಿದೆ. ನಾನು ಆ ದಿನ ಮಾತಾಡಿದ ಜನರಲ್ಲಿ, ಉಪಮುಖ್ಯಸ್ಥನು ಮತ್ತು ಅವನ ಹೆಂಡತಿ ಸಹಿತ ಕಡಿಮೆ ಪಕ್ಷ ಆರು ಮಂದಿ ಕ್ರಮೇಣ ಸಾಕ್ಷಿಗಳಾದರು.
ಬಲುಬೇಗನೆ ಹಾಜರಿಯಲ್ಲಿ ಸುಮಾರು 20 ಮಂದಿಗಳಿಗಿಂತಲೂ ಹೆಚ್ಚಿನ ಮಂದಿಗಳಿದ್ದ ಕಾವಲಿನಬುರುಜು ಅಭ್ಯಾಸವೊಂದನ್ನು ನಡಿಸುವಂತೆ ನಾನು ನಡಿಸಲ್ಪಟ್ಟೆನು. ಯೆಹೋವನ ಮೇಲೆ ನಾನು ಬಲವಾಗಿ ಆತುಕೊಳ್ಳಬೇಕಾಯಿತು, ಮತ್ತು ಅವನ ಕುರಿಗಳ ಜೋಪಾಸಣೆ ಮಾಡಲು ಆತನು ನನಗೆ ಬೇಕಾದ ಬಲವನ್ನೂ ಸಾಮರ್ಥ್ಯವನ್ನೂ ಕೊಟ್ಟನು. ನಾನು ಆಯಾಸದ, ಯಾ ಅಸಮರ್ಥಳೆಂಬ ಭಾವನೆ ಹೊಂದಿದಾಗ, ಪ್ರಾಚೀನ ಕಾಲದ ನಂಬಿಗಸ್ತರನ್ನು, ವಿಶೇಷವಾಗಿ ಯೆಹೋವನ ನಿಯೋಗವನ್ನು ಪೂರೈಸುವದರಲ್ಲಿ ನಿರ್ಭೀತರಾಗಿದ್ದ ದೆಬೋರ ಮತ್ತು ಹುಲ್ದಳನ್ನು ನೆನಪಿಗೆ ತಂದುಕೊಳ್ಳುತ್ತಿದ್ದೆ.—ನ್ಯಾಯಸ್ಥಾಪಕರು 4:4-7; 14-16; 2 ಅರಸುಗಳು 22:14-20.
ಮಾರ್ಚ್ 1958 ರಲ್ಲಿ, ಕೆಳ ಬೈಕಾನ್ನಲ್ಲಿ ಕೇವಲ ಮೂರು ತಿಂಗಳುಗಳನ್ನು ಕಳೆದಾದ ಮೇಲೆ, ಸರ್ಕಿಟ್ ಮೇಲ್ವಿಚಾರಕರಾದ ಜೊನ್ ಶ್ರಕ್ರು ಸಂದರ್ಶನ ಮಾಡುತ್ತಾರೆಂಬ ಸಮಾಚಾರವನ್ನು ತಿಳಿಸುವ ಪತ್ರವನ್ನು ನಾನು ಪಡೆದೆ. ಒಂದು ದೊಡ್ಡ ಗುಂಪು ಕುಳಿತುಕೊಳ್ಳಬಹುದಾದ ಮನೆಯೊಂದರ ನೆಲಮಾಳಿಗೆಯನ್ನು ಬಾಡಿಗೆಗೆ ತಕ್ಕೊಂಡೆನು. ಅನಂತರ ಸಹೋದರ ಜೊನ್ ಶ್ರಕ್ರನ್ನು ಭೇಟಿಯಾಗಲು ಮೇಲಿನ ಬೈಕಾನ್ಗೆ ನಾನು ಪ್ರಯಾಣಿಸಿದೆನು, ಆದರೆ ಅವರು ಬರಲಿಲ್ಲ. ಮಬ್ಬಾಗುವ ತನಕ ಕಾದು, ದಣಿದವಳಾಗಿ ಕೆಳ ಬೈಕಾನ್ಗೆ ನನ್ನ ದಾರಿಯಲ್ಲಿ ನಾನು ಹಿಂತೆರಳಿದೆನು.
ಸುಮಾರು ಮಧ್ಯರಾತ್ರಿಗೆ, ಬಾಗಲನ್ನು ತಟ್ಟುವ ಶಬ್ದವನ್ನು ನಾನು ಕೇಳಿದೆ. ತೆರೆದಾಗ, ನಾನು ಸರ್ಕಿಟ್ ಮೇಲ್ವಿಚಾರಕರನ್ನು ಮಾತ್ರವಲ್ಲ, ನನ್ನ ಗಂಡನನ್ನೂ ನೋಡಿದೆ, ಅವನ ಅನಿರೀಕ್ಷಿತವಾದ ಆಗಮನವು ಚಲೋದಾಗಿ ಸಹೋದರ ಶ್ರಕ್ರೊಂದಿಗೆ ಏಕಕಾಲದಲ್ಲಿ ಸಂಭವಿಸಿತು. ಅವರು ನನ್ನ ಸ್ಥಳವನ್ನು ಕಂಡುಹಿಡಿದದ್ದು ಹೇಗೆ? ಅವರು ಒಬ್ಬ ಬೇಟೆಗಾರನನ್ನು ಭೇಟಿಯಾದರು ಮತ್ತು ಯೆಹೋವನ ಕುರಿತು ಜನರಿಗೆ ಸಾರುವ ಒಬ್ಬ ಹೆಂಗಸನ್ನು ಅವನು ಬಲ್ಲನೊ ಎಂದು ಅವನನ್ನು ಕೇಳಿದರು. “ಹೌದು,” ಅವನು ಉತ್ತರಿಸಿದನು, ಮತ್ತು ನನ್ನ ಮನೆಗೆ ಅವರನ್ನು ಅವನು ಮಾರ್ಗದರ್ಶಿಸಿದನು. ಕೇವಲ ಮೂರು ತಿಂಗಳುಗಳಲ್ಲಿಯೇ, ಕೆಳ ಬೈಕಾನ್ನಲ್ಲಿ ನನ್ನ ಬೆಳಕು ಅಷ್ಟೊಂದು ಉಜ್ವಲವಾಗಿ ಪ್ರಕಾಶಿಸುತ್ತಿದ್ದಕ್ಕಾಗಿ ನಾನೆಷ್ಟು ಆನಂದವನ್ನು ಹೊಂದಿದೆನು!—ಮತ್ತಾಯ 5:14-16.
ಸಹೋದರ ಶ್ರಕ್ರ ಸಂದರ್ಶನದ ಸಮಯದಲ್ಲಿ 40 ಮಂದಿಯ ಉನ್ನತ ಹಾಜರಿಯಲ್ಲಿ ನಾವು ಸಂತೋಷಿಸಿದೆವು. ಸಮಯಾನಂತರ ಒಂದು ವರ್ಧಿಸುತ್ತಿರುವ ಸಭೆಯು ಸ್ಥಾಪನೆಗೊಂಡಿತು, ಮತ್ತು ನಾವೊಂದು ಸುಂದರವಾದ ರಾಜ್ಯ ಸಭಾಗೃಹವನ್ನು ಕಟ್ಟಲು ಸಮರ್ಥರಾದೆವು. ಆದಾಗ್ಯೂ, ಯಾವಾಗಲೂ ಸಂಗತಿಗಳು ನಿರುಪದ್ರವಕಾರಿಯಾಗಿರಲಿಲ್ಲ. ಉದಾಹರಣೆಗೆ, 1963 ರಲ್ಲಿ ಕೊಲ್ಹುನ್ನಲ್ಲಿ ಧಾರ್ಮಿಕ ಹಿಂಸೆಯು ಸ್ಫೋಟಿಸಿತು, ಮತ್ತು ನನ್ನ ಗಂಡನು ದಸ್ತಗಿರಿಮಾಡಲ್ಪಟ್ಟನು ಮತ್ತು ಸೆರೆಮನೆಗೆ ಹಾಕಲ್ಪಟ್ಟನು. ಅವನಿಗೆ ಎಷ್ಟೊಂದು ಕೆಟ್ಟದ್ದಾಗಿ ಹೊಡೆಯಲಾಯಿತೆಂದರೆ, ಅವನನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು.
ಅವನ ಬಿಡುಗಡೆಯಾದ ಸ್ವಲ್ಪ ಸಮಯದೊಳಗೆ, ಅದೇ ವರ್ಷದಲ್ಲಿ ಬಾಂಗ್ದಲ್ಲಿ ಒಂದು ಅಧಿವೇಶನ ನಮಗೆ ಇತ್ತು. ಕೊನೆಯ ದಿನ, ಸೈನಿಕರು ಹಾಜರಾಗಿದ್ದ ಎಲ್ಲರನ್ನು ಆವರಿಸಿದರು ಮತ್ತು ಧ್ವಜಕ್ಕೆ ವಂದಿಸಲು ಆಜ್ಞೆಯನ್ನಿತ್ತರು. ನಾವು ನಿರಾಕರಿಸಿದಾಗ, ಸೈನಿಕರು ನಮ್ಮ ಕೈಗಳನ್ನು ಗಾಳಿಯಲ್ಲಿ ಮೇಲಕ್ಕೆತ್ತಿಹಿಡಿಯಲು ಮತ್ತು ಸೂರ್ಯನನ್ನು ನೇರವಾಗಿ ದಿಟ್ಟಿಸಲು ನಮ್ಮಲ್ಲಿ ಕೆಲವರನ್ನು ಬಲಾತ್ಕರಿಸಿದರು. ಅವರ ಕೋವಿಯ ಹಿಂಬದಿಯಿಂದ ಅವರು ನಮ್ಮನ್ನು ಕೂಡ ಹೊಡೆದರು. ದೇವರಿಗೆ ನನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನೆರವಾಗುವಂತೆ, ನನ್ನಷ್ಟಕ್ಕೆ ನಾನು “ಅವರಿಗೆ ಹೆದರಬೇಡಿರಿ!” ಎಂಬ ರಾಜ್ಯ ಸಂಗೀತವನ್ನು ಹಾಡಿದೆನು. ಅನಂತರ ಸೈನಿಕರು ನಮ್ಮನ್ನು ಒಂದು ಹೊಲಸಾದ ಸೆರೆಮನೆಗೆ ದಬ್ಬಿದರು. ವಿದೇಶಿಯರು ಮೂರು ದಿನಗಳ ನಂತರ ಬಿಡಿಸಲ್ಪಟ್ಟರು, ಮತ್ತು ಲಿಕ್ಫೆಲ್ಡ್ ಮತ್ತು ನಾನು ಸಿಯೆರ ಲಿಯೊನ್ಗೆ ಗಡೀಪಾರು ಮಾಡಲ್ಪಟ್ಟೆವು. ಸ್ಥಳೀಕ ಸಾಕ್ಷಿಗಳು ಮರುದಿನ ಬಿಡುಗಡೆ ಹೊಂದಿದರು.
ಹೆಚ್ಚಿನ ಸುಯೋಗಗಳು ಮತ್ತು ಬಹುಮಾನಗಳು
ದಕ್ಷಿಣ ಸಿಯೆರ ಲಿಯೊನ್ನ ಬೊ ಸಭೆಯೊಂದಿಗೆ ಕೆಲಸ ಮಾಡುವಂತೆ ನಮ್ಮನ್ನು ನೇಮಿಸಲಾಯಿತು. ಅಲ್ಲಿಂದ ನೈಲಾಕ್ಕೆ ವರ್ಗಾಯಿಸಲ್ಪಡುವ ಮೊದಲು ಎಂಟು ವರ್ಷ ನಾವು ಅಲ್ಲಿ ಸೇವೆ ಸಲ್ಲಿಸಿದೆವು. ನೈಲಾದಲ್ಲಿರುವಾಗ, ನನ್ನ ಗಂಡನು ಸಹಾಯಕ ಸರ್ಕಿಟ್ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸಲು ನೇಮಕಹೊಂದಿದನು, ಮತ್ತು ಅವನು ಈ ಸೇವೆಯಲ್ಲಿ ತೊಡಗಿದ್ದಾಗ, ಅವನೊಂದಿಗೆ ಹೋಗುವ ಸುಯೋಗ ನನಗಿತ್ತು. ಅನಂತರ 1970 ರ ಮಧ್ಯಭಾಗದಲ್ಲಿ, ನಮ್ಮನ್ನು ಪೂರ್ವ ಫ್ರೀಟೌನ್ ಸಭೆಗೆ ಮರುನೇಮಕ ಮಾಡಲಾಯಿತು.
ನಾನು ಬೈಬಲ್ ಅಧ್ಯಯನ ಮಾಡಿದ ಅನೇಕರು ಸತ್ಯಾರಾಧನೆಯನ್ನು ತಮ್ಮದಾಗಿ ಸ್ವೀಕರಿಸಿದ್ದನ್ನು ನೋಡುವ ಬಹುಮಾನವನ್ನು ನಾನು ಅನುಭವಿಸಿದ್ದೇನೆ. “ಯೋಗ್ಯತಾಪತ್ರ” ಗಳೋಪಾದಿ ನನಗೆ 60 ಕ್ಕಿಂತಲೂ ಹೆಚ್ಚು ಆತ್ಮಿಕ ಮಕ್ಕಳು ಮತ್ತು ಮೊಮ್ಮಕ್ಕಳು ಇದ್ದಾರೆ. (2 ಕೊರಿಂಥ 3:1) ಅಲ್ಡುರಾ ಪಂಥದ ಪ್ರವಾದಿನಿಯಾಗಿದ್ದ ವಿಕ್ಟೋರಿಯ ಡೈಕ್ಳಂಥ ಕೆಲವರು ಕಠಿಣವಾದ ಬದಲಾವಣೆಗಳನ್ನು ಮಾಡಬೇಕಾಗಿ ಬಂತು. ಅವಳು 1 ಯೋಹಾನ 5:21 ನ್ನು ಪರಿಗಣಿಸಿದ ನಂತರ, ಕೊನೆಗೆ ಅವಳ ಅಂಧಶ್ರದ್ಧೆಯ ಅನೇಕ ವಸ್ತುಗಳನ್ನು ಮತ್ತು ಪೂಜ್ಯಭಾವನಾಶಕ್ತಿಯ ಪದಾರ್ಥಗಳನ್ನು ಬಿಸಾಡಿದಳು. ದೀಕ್ಷಾಸ್ನಾನದ ಮೂಲಕ ತನ್ನ ಸಮರ್ಪಣೆಯನ್ನು ತೋರಿಸಿದಳು ಮತ್ತು ಕ್ರಮೇಣ ಒಬ್ಬ ವಿಶೇಷ ಪಯನೀಯರಳಾಗಿ, ಅವಳ ಅನೇಕ ಸಂಬಂಧಿಕರು ಸತ್ಯವನ್ನು ಸ್ವೀಕರಿಸುವಂತೆ ಸಹಾಯ ಮಾಡಿದಳು.
ಏಪ್ರಿಲ್ 1985 ರಲ್ಲಿ, ನಮ್ಮ 44 ನೆಯ ವಿವಾಹ ವಾರ್ಷಿಕಾಚರಣೆಯ ಕೆಲವೇ ತಿಂಗಳುಗಳ ಮೊದಲು, ಮರಣದಲ್ಲಿ ನನ್ನ ಗಂಡನನ್ನು ನಾನು ಕಳಕೊಂಡೆನು. ಆದರೆ ನಾನು ಏಕಾಂಗಿಯಾಗಿ ಬಿಡಲ್ಪಟ್ಟಿಲ್ಲ. ನನ್ನ ಸಹಾಯಕನಾದ ಯೆಹೋವನನ್ನು ಪೂರ್ಣ ಸಮಯದ ಶುಶ್ರೂಷಕಳಾಗಿ ಸೇವಿಸುವದನ್ನು ನಾನು ಮುಂದರಿಸಿದ್ದೇನೆ. ಮತ್ತು ಅವನನ್ನು ತಿಳಿದುಕೊಳ್ಳಲು ನಾನು ಯಾರಿಗೆ ಸಹಾಯ ಮಾಡಿದ್ದೇನೊ ಅವರೊಂದಿಗೆ ಒಂದು ವಿಶೇಷ ರೀತಿಯ ಬಂಧದ ಭಾವನೆ ನನಗಿದೆ. ವಿಶೇಷ ಅರ್ಥದಲ್ಲಿ ಅವರು ಒಂದು ಕುಟುಂಬವಾಗಿದ್ದಾರೆ. ನಾನು ಅವರನ್ನು ಪ್ರೀತಿಸುತ್ತೇನೆ ಮತ್ತು ಅವರು ನನ್ನನ್ನು ಪ್ರೀತಿಸುತ್ತಾರೆ. ನಾನು ಅಸ್ವಸ್ಥಳಾದಾಗ, ನನ್ನ ಆರೈಕೆಯನ್ನು ಮಾಡಲು ಅವರು ಧಾವಿಸಿ ಬರುತ್ತಾರೆ, ನಿಶ್ಚಯವಾಗಿ ಹಾಗೆಯೇ ನಾನು ಕೂಡ ಅವರಿಗೆ ಸಹಾಯ ಮಾಡುತ್ತೇನೆ.
ಇದೆಲ್ಲವನ್ನೂ ನಾನು ಪುನಃ ಮಾಡಬೇಕಾಗಿದ್ದಲ್ಲಿ, ನಾನು ನನ್ನ ಕುಡುಗೋಲನ್ನು ಸಂತೋಷದಿಂದ ತಕ್ಕೊಳ್ಳುವೆನು ಮತ್ತು ಯೆಹೋವನ ಜೊತೆಕೆಲಸದವಳೋಪಾದಿ ಕೊಯ್ಲಿನ ಕೆಲಸದಲ್ಲಿ ಸೇರುವೆನು ಎಂಬುದರಲ್ಲಿ ಸಂದೇಹವೇ ಇಲ್ಲ.
[ಪುಟ 23 ರಲ್ಲಿರುವ ಚಿತ್ರ]
ವಿನ್ರೆಡ್ ರೆಮಿ ಇಂದು