ಯೆಹೋವನ ಸಾಕ್ಷಿಗಳು ಎಚ್ಚರವಾಗಿರುತ್ತಾ ಇರುವ ಕಾರಣ
“ಎಚ್ಚರವಾಗಿರುತ್ತಾ ಇರ್ರಿ . . . ಏಕೆಂದರೆ ನಿಮ್ಮ ಕರ್ತನು ಯಾವಾಗ ಬರುತ್ತಿದ್ದಾನೆಂದು ನಿಮಗೆ ತಿಳಿದಿಲ್ಲ.”—ಮತ್ತಾಯ 24:42,
1. “ಎಚ್ಚರವಾಗಿರುತ್ತಾ ಇರ್ರಿ” ಎಂಬ ಬುದ್ಧಿವಾದವು ಯಾರಿಗೆ ಅನ್ವಯವಾಗುತ್ತದೆ?
ದೇವರ ಪ್ರತಿಯೊಬ್ಬ ಸೇವಕನಿಗೆ—ಯುವ ಜನರಾಗಿರಲಿ ಯಾ ವೃದ್ಧರಾಗಿರಲಿ, ಹೊಸದಾಗಿ ಸಮರ್ಪಿತರಾಗಿರಲಿ ಯಾ ಸೇವೆಯ ಒಂದು ದೀರ್ಘ ದಾಖಲೆ ಇದ್ದವರಾಗಿರಲಿ—ಬೈಬಲಿನ ಈ ಬುದ್ಧಿವಾದವು ಅನ್ವಯವಾಗುತ್ತದೆ: “ಎಚ್ಚರವಾಗಿರ್ರಿ”! (ಮತ್ತಾಯ 24:42) ಇದು ಏಕೆ ಪ್ರಾಮುಖ್ಯವಾಗಿದೆ?
2, 3. (ಎ) ಯಾವ ಸೂಚನೆಯನ್ನು ಯೇಸು ಸ್ಪಷ್ಟವಾಗಿಗಿ ವಿವರಿಸಿದನು, ಮತ್ತು ಪ್ರವಾದನೆಯ ನೆರವೇರಿಕೆಯು ಏನನ್ನು ತೋರಿಸಿದೆ? (ಬಿ) ಮತ್ತಾಯ 24:42 ರಲ್ಲಿ ನಿರ್ದೇಶಿಸಲ್ಪಟ್ಟ ಯಾವ ಪರಿಸ್ಥಿತಿಯು ನಮ್ಮ ನಂಬಿಕೆಯ ನಿಷ್ಕಾಪಟ್ಯವನ್ನು ಪರೀಕ್ಷಿಸುತ್ತದೆ, ಮತ್ತು ಹೇಗೆ?
2 ಭೂಮಿಯಲ್ಲಿ ತನ್ನ ಶುಶ್ರೂಷೆಯ ಸಮಾಪ್ತಿಯಲ್ಲಿ, ಯೇಸು ರಾಜ್ಯಾಧಿಕಾರದಲ್ಲಿ ತನ್ನ ಅದೃಶ್ಯ ಸಾನ್ನಿಧ್ಯದ ಸೂಚನೆಯ ಕುರಿತು ಮುಂತಿಳಿಸಿದನು. (ಮತ್ತಾಯ, ಅಧ್ಯಾಯಗಳು 24 ಮತ್ತು 25) ತನ್ನ ರಾಜವೈಭವದ ಸಾನ್ನಿಧ್ಯದ ಸಮಯದ ಕುರಿತು ಆತನು ಸ್ಪಷ್ಟವಾಗಿಗಿ ವಿವರಿಸುತ್ತಾನೆ—ಮತ್ತು 1914 ರಲ್ಲಿ ಪರಲೋಕದಲ್ಲಿ ರಾಜನಂತೆ ಉಪಸ್ಥಿತನಾಗಿದ್ದಾನೆಂದು ಪ್ರವಾದನೆಯ ನೆರವೇರಿಕೆಯಲ್ಲಿರುವ ಘಟನೆಗಳು ತೋರಿಸುತ್ತವೆ. ಬಳಿಕ ನಮ್ಮ ನಂಬಿಕೆಯ ನಿಷ್ಕಾಪಟ್ಯವನ್ನು ಪರೀಕ್ಷಿಸುವ ಒಂದು ಪರಿಸ್ಥಿತಿಯನ್ನು ಸಹ ಆತನು ನಿರ್ದೇಶಿಸಿದ್ದಾನೆ. ಮಹಾ ಸಂಕಟದಲ್ಲಿ ಸದ್ಯದ ದುಷ್ಟ ವ್ಯವಸ್ಥೆಯನ್ನು ನಾಶಪಡಿಸಲು, ಸಂಹಾರಕನೋಪಾದಿ ಆತನು ಕ್ರಿಯೆಯಲ್ಲಿ ತೊಡಗುವ ಸಮಯಕ್ಕೆ ಇದು ಸಂಬಂಧಿಸಿತ್ತು, ಆದುದರಿಂದ ಯೇಸು ಅಂದದ್ದು: “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” ಅದನ್ನೇ ಮನಸ್ಸಿನಲ್ಲಿಟ್ಟವನಾಗಿ ಆತನಂದದ್ದು: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.”—ಮತ್ತಾಯ 24:36, 42.
3 ಮಹಾ ಸಂಕಟವು ಆರಂಭವಾಗುವ ದಿನದ ವಿಷಯವೂ ಗಳಿಗೆ ವಿಷಯವೂ ನಮಗೆ ತಿಳಿಯದಿರುವುದು, ನಾವು ಕ್ರೈಸ್ತರೆಂದು ಸಮರ್ಥಿಸ ಬೇಕಾದರೆ, ಪ್ರತಿ ದಿನ ನಿಜ ಕ್ರೈಸ್ತರಾಗಿ ನಾವು ಜೀವಿಸ ಬೇಕೆಂಬುದನ್ನು ಅವಶ್ಯಪಡಿಸುತ್ತದೆ. ಮಹಾ ಸಂಕಟವು ಬರುವಾಗ, ನಿಮ್ಮ ಜೀವಿತವನ್ನು ನೀವು ಉಪಯೋಗಿಸುತ್ತಿರುವ ರೀತಿಯು, ಕರ್ತನ ಮೆಚ್ಚಿಕೆಯನ್ನು ಪಡೆಯುವುದೊ? ಅಥವಾ ಮರಣವು ಪ್ರಥಮವಾಗಿ ಬರುವುದಾದರೆ, ನಿಮ್ಮ ಪ್ರಸ್ತುತ ಜೀವಿತದ ಅಂತ್ಯದ ವರೆಗೆ ಯೆಹೋವನನ್ನು ನಿಷ್ಠೆಯಿಂದ ಸೇವಿಸಿರುವ ಒಬ್ಬನು ಎಂದು ಆತನು ನಿಮ್ಮನ್ನು ಜ್ಞಾಪಿಸಿಕೊಳ್ಳುವನೊ?—ಮತ್ತಾಯ 24:13; ಪ್ರಕಟನೆ 2:10.
ಆರಂಭದ ಕ್ರೈಸ್ತರು ಎಚ್ಚರಿಕೆಯಿಂದಿರಲು ಪ್ರಯತ್ನಿಸಿದರು
4. ಆತ್ಮಿಕ ಎಚ್ಚರಿಕೆಯ ಕುರಿತಾದ ಯೇಸುವಿನ ಮಾದರಿಯಿಂದ ನಾವೇನನ್ನು ಕಲಿಯಸಾಧ್ಯವಿದೆ?
4 ಆತ್ಮಿಕ ಎಚ್ಚರಿಕೆಯ ಕುರಿತು ಯೇಸು ಕ್ರಿಸ್ತನು ತಾನೆ ಅತ್ಯುತ್ತಮವಾದ ಮಾದರಿಯನ್ನಿಟ್ಟನು. ಆತನು ಪದೇ ಪದೇ ಮತ್ತು ಉದ್ರಿಕ್ತನಾಗಿ ತನ್ನ ತಂದೆಗೆ ಪ್ರಾರ್ಥಿಸಿದನು. (ಲೂಕ 6:12; 22:42-44) ಶೋಧನೆಗಳಿಂದ ಎದುರಿಸಲ್ಪಟ್ಟಾಗ, ಶಾಸ್ತ್ರಗಳಲ್ಲಿರುವ ಮಾರ್ಗದರ್ಶನೆಯ ಮೇಲೆ ಆತನು ಹೆಚ್ಚಾಗಿ ಆತುಕೊಂಡನು. (ಮತ್ತಾಯ 4:3-10; 26:52-54) ಯೆಹೋವನು ಆತನಿಗೆ ನೇಮಿಸಿದ ಕೆಲಸದಿಂದ ಅಪಕರ್ಶಿತನಾಗುವಂತೆ ಆತನು ಬಿಟ್ಟುಕೊಡಲಿಲ್ಲ. (ಲೂಕ 4:40-44; ಯೋಹಾನ 6:15) ಯೇಸುವಿನ ಹಿಂಬಾಲಕರೆಂದು ತಮ್ಮನ್ನು ವೀಕ್ಷಿಸಿಕೊಳ್ಳುವವರು ಅವನಂತೆಯೇ ಜಾಗರೂಕರಾಗಿರುವರೊ?
5. (ಎ) ಆತ್ಮಿಕ ಸಮತೂಕವನ್ನು ಕಾಪಾಡಿಕೊಳ್ಳುವುದರಲ್ಲಿ ಯೇಸುವಿನ ಅಪೊಸ್ತಲರಿಗೆ ಏಕೆ ಸಮಸ್ಯೆಗಳಿದ್ದವು? (ಬಿ) ತನ್ನ ಪುನರುತ್ಥಾನದ ಬಳಿಕ ಯೇಸು ತನ್ನ ಅಪೊಸ್ತಲರಿಗೆ ಯಾವ ಸಹಾಯವನ್ನು ಮಾಡಿದನು?
5 ಕೆಲವೊಮ್ಮೆ, ಯೇಸುವಿನ ಅಪೊಸ್ತಲರು ಸಹ ಅಧೈರ್ಯಗೊಂಡರು. ತೀವ್ರಾಭಿಲಾಷೆ ಮತ್ತು ತಪ್ಪು ಕಲ್ಪನೆಗಳ ಫಲಿತಾಂಶವಾಗಿ, ಅವರು ಆಶಾಭಂಗವನ್ನು ಎದುರಿಸಬೇಕಾಯಿತು. (ಲೂಕ 19:11; ಅ. ಕೃತ್ಯಗಳು 1:6) ಅವರು ಯೆಹೋವನ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವುದಕ್ಕೆ ಮೊದಲೇ, ಅನಿರೀಕ್ಷಿತ ಶೋಧನೆಗಳು ಅವರನ್ನು ಗೊಂದಲಕ್ಕೀಡುಮಾಡಿದವು. ಹೀಗೆ, ಯೇಸು ಸೆರೆಹಿಡಿಯಲ್ಪಟ್ಟಾಗ, ಆತನ ಅಪೊಸ್ತಲರು ಪಲಾಯನಗೈದರು. ಬಳಿಕ ಆ ರಾತ್ರಿ ಪೇತ್ರನು, ಕ್ರಿಸ್ತನನ್ನು ತಿಳಿದಿದ್ದರೂ, ಭಯದಿಂದ ಪುನಃ ಪುನಃ ಅಲ್ಲಗಳೆದನು. “ಎಚ್ಚರವಾಗಿ ಪ್ರಾರ್ಥಿಸುತ್ತಿರ್ರಿ” ಎಂಬ ಯೇಸುವಿನ ಸಲಹೆಯನ್ನು ಅಪೊಸ್ತಲರು ಇನ್ನೂ ಹೃದಯಕ್ಕೆ ತೆಗೆದುಕೊಂಡಿರಲಿಲ್ಲ. (ಮತ್ತಾಯ 26:41, 55, 56, 69-75, NW.) ತನ್ನ ಪುನರುತ್ಥಾನದ ಬಳಿಕ, ಯೇಸು ಅವರ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಶಾಸ್ತ್ರಗಳನ್ನು ಉಪಯೋಗಿಸಿದನು. (ಲೂಕ 24:44-48) ಮತ್ತು ಅವರಲ್ಲಿ ಕೆಲವರು, ಅವರಿಗೆ ವಹಿಸಲ್ಪಟ್ಟ ಶುಶ್ರೂಷೆಯನ್ನು ದ್ವಿತೀಯ ಸ್ಥಾನದಲ್ಲಿಡಬಹುದೆಂದು ತೋರಿಬಂದಾಗ, ಹೆಚ್ಚು ಪ್ರಾಮುಖ್ಯ ಕೆಲಸದಲ್ಲಿ ತಮ್ಮನ್ನು ಕೇಂದ್ರೀಕರಿಸಿಕೊಳ್ಳಲು ಯೇಸು ಅವರ ಪ್ರೇರಕ ಶಕ್ತಿಯನ್ನು ಬಲಪಡಿಸಿದನು.—ಯೋಹಾನ 21:15-17.
6. ಯಾವ ಎರಡು ಪಾಶಗಳ ವಿರುದ್ಧ ಯೇಸು ಮುಂಚಿತವಾಗಿಯೇ ತನ್ನ ಶಿಷ್ಯರಿಗೆ ಎಚ್ಚರಿಸಿದ್ದನು?
6 ಈ ಮುಂಚೆ, ಅವರು ಲೋಕದ ಭಾಗವಾಗಿರಬಾರದೆಂದು ಯೇಸು ತನ್ನ ಶಿಷ್ಯರನ್ನು ಎಚ್ಚರಿಸಿದ್ದನು. (ಯೋಹಾನ 15:19) ಒಬ್ಬರ ಮೇಲೆ ಇನ್ನೊಬ್ಬರು ದೊರೆತನ ಮಾಡದೆ ಸಹೋದರರಂತೆ ಸೇರಿ ಸೇವೆಮಾಡುವಂತೆ ಸಹ ಅವನು ಅವರಿಗೆ ಸಲಹೆ ನೀಡಿದನು. (ಮತ್ತಾಯ 20:25-27; 23:8-12) ಆತನ ಸಲಹೆಗೆ ಅವರು ಕಿವಿಗೊಟ್ಟರೂ? ಆತನು ಅವರಿಗೆ ಕೊಟ್ಟ ಕೆಲಸವನ್ನು ಅವರು ಪ್ರಥಮವಾಗಿಟ್ಟರೊ?
7, 8. (ಎ) ಯೇಸುವಿನ ಬುದ್ಧಿವಾದವನ್ನು ಅವರು ತೆಗೆದುಕೊಂಡರೆಂದು, ಪ್ರಥಮ ಶತಮಾನದ ಕ್ರೈಸ್ತರಿಂದ ಮಾಡಲ್ಪಟ್ಟ ದಾಖಲೆಯು ಹೇಗೆ ತೋರಿಸುತ್ತದೆ? (ಬಿ) ಸಂತತವಾದ ಆತ್ಮಿಕ ಎಚ್ಚರ ಯಾಕೆ ಪ್ರಾಮುಖ್ಯವಾಗಿತ್ತು?
7 ಅಪೊಸ್ತಲರು ಜೀವಂತರಾಗಿದ್ದ ತನಕ, ಅವರು ಸಭೆಯನ್ನು ಸಂರಕ್ಷಿಸಿದರು. ಆದಿ ಕ್ರೈಸ್ತರು ರೋಮನ್ ಸಾಮ್ರಾಜ್ಯದ ರಾಜಕೀಯ ಕಾರ್ಯಗಳಲ್ಲಿ ಒಳಗೊಳ್ಳಲಿಲ್ಲ ಮತ್ತು ಅವರಿಗೆ ಘನತೆಯ ಪುರೋಹಿತ ವರ್ಗವು ಇರಲಿಲ್ಲವೆಂದು ಇತಿಹಾಸವು ಸಾಕ್ಷ್ಯ ನೀಡುತ್ತದೆ. ಇನ್ನೊಂದು ಕಡೆಯಲ್ಲಿ, ಅವರು ದೇವರ ರಾಜ್ಯದ ಉತ್ಸುಕ ಘೋಷಕರಾಗಿದ್ದರು. ಪ್ರಥಮ ಶತಮಾನದ ಅಂತ್ಯದೊಳಗೆ, ಅವರು ಇಡೀ ರೋಮನ್ ಸಾಮ್ರಾಜ್ಯದಲ್ಲಿ ಸಾಕ್ಷಿನೀಡಿ, ಏಷಿಯಾ, ಯೂರೋಪ್, ಮತ್ತು ಉತ್ತರ ಆಫ್ರಿಕದಲ್ಲಿ ಶಿಷ್ಯರನ್ನು ಮಾಡಿದರು.—ಕೊಲೊಸ್ಸೆ 1:23.
8 ಹಾಗಿದ್ದರೂ, ಸಾರುವಿಕೆಯಲ್ಲಿನ ಆ ಸಾಧನೆಗಳು ಇನ್ನು ಮುಂದೆ ಆತ್ಮಿಕವಾಗಿ ಎಚ್ಚರವಾಗಿರುವ ಯಾವುದೇ ಅಗತ್ಯವಿಲ್ಲವೆಂಬ ಅರ್ಥವನ್ನು ಕೊಡಲಿಲ್ಲ. ಯೇಸುವಿನ ಮುಂತಿಳಿಸಲಾದ ಬರೋಣವು ದೂರದ ಭವಿಷ್ಯತ್ತಿನಲ್ಲಿ ಸಂಭವಿಸಲಿತ್ತು. ಮತ್ತು ಸಭೆಯು ಸಾ.ಶ. ಎರಡನೆಯ ಶತಮಾನವನ್ನು ಪ್ರವೇಶಿಸಿದಂತೆ, ಕ್ರೈಸ್ತರ ಆತ್ಮಿಕತೆಯನ್ನು ಅಪಾಯಕ್ಕೆ ಸಿಕ್ಕಿಸುವ ಸನ್ನಿವೇಶಗಳು ಎದ್ದವು. ಹೇಗೆ?
ಎಚ್ಚರಿಕೆಯಿಂದಿರುವುದನ್ನು ನಿಲ್ಲಿಸಿದವರು
9, 10. (ಎ) ಅಪೊಸ್ತಲರ ಮರಣವನ್ನು ಹಿಂಬಾಲಿಸಿ, ಕ್ರೈಸ್ತರೆಂದು ಹೇಳಿಕೊಂಡವರಲ್ಲಿ ಅನೇಕರು ಎಚ್ಚರದಿಂದಿರಲಿಲ್ಲವೆಂದು ಯಾವ ವಿಕಸನಗಳು ತೋರಿಸುತ್ತವೆ? (ಬಿ) ಪ್ಯಾರಗ್ರಾಫ್ನಲ್ಲಿ ಕೊಡಲ್ಪಟ್ಟಿರುವ ಯಾವ ಶಾಸ್ತ್ರವಚನಗಳಿಗೆ, ಕ್ರೈಸ್ತರೆಂದು ಹೇಳಿಕೊಂಡವರು ಆತ್ಮಿಕವಾಗಿ ದೃಢರಾಗಿ ಉಳಿಯುವಂತೆ ಸಹಾಯಮಾಡಸಾಧ್ಯವಿತ್ತು?
9 ತಾವು ಸಾರಿ ಹೇಳುತ್ತಿದ್ದ ವಿಷಯವನ್ನು ಲೋಕದ ಜನರಿಗೆ ಹೆಚ್ಚು ಸ್ವೀಕರಣೀಯವಾಗಿ ಮಾಡಲು, ಸಭೆಯೊಳಗೆ ಬಂದ ಕೆಲವರು ತಮ್ಮ ನಂಬಿಕೆಗಳನ್ನು ಗ್ರೀಕ್ ತತ್ವಕ್ಕೆ ಅನುಗುಣವಾಗಿ ವ್ಯಕ್ತಪಡಿಸಲಾರಂಭಿಸಿದರು. ಕ್ರಮೇಣವಾಗಿ, ಆತ್ಮದ ಅಮರತ್ವ ಮತ್ತು ತ್ರಯೈಕ್ಯದಂಥ ವಿಧರ್ಮಿ ಬೋಧನೆಗಳು, ಕ್ರೈಸ್ತತ್ವದ ಕಳಂಕಿತ ರೂಪದ ಒಂದು ಭಾಗವಾದವು. ಸಾವಿರ ವರ್ಷಗಳ ರಾಜ್ಯದ ನಿರೀಕ್ಷೆಯ ತೊರೆಯುವಿಕೆಗೆ ಇದು ನಡೆಸಿತು. ಯಾಕೆ? ಆತ್ಮದ ಅಮರತ್ವದಲ್ಲಿ ನಂಬಿಕೆಯನ್ನು ಸ್ವೀಕರಿಸಿದವರು, ಯೇಸುವಿನ ಆಳಿಕೆಯ ಆಶೀರ್ವಾದಗಳೆಲ್ಲವನ್ನು, ಮಾನವ ದೇಹವನ್ನು ಬಿಟ್ಟುಬರುವ ಆತ್ಮವು, ಆತ್ಮ ಲೋಕದಲ್ಲಿ ಪಡೆಯುವುದೆಂದು ತೀರ್ಮಾನಿಸಿದರು. ಆದುದರಿಂದ ರಾಜ್ಯಾಧಿಕಾರದಲ್ಲಿ ಕ್ರಿಸ್ತನ ಸಾನ್ನಿಧ್ಯಕ್ಕಾಗಿ ಎದುರು ನೋಡುವ ಅಗತ್ಯವನ್ನು ಅವರು ಕಾಣಲಿಲ್ಲ.—ಹೋಲಿಸಿ ಗಲಾತ್ಯ 5:7-9; ಕೊಲೊಸ್ಸೆ 2:8; 1 ಥೆಸಲೊನೀಕ 5:21.
10 ಬೇರೆ ಬೆಳವಣಿಗೆಗಳಿಂದ ಈ ಸನ್ನಿವೇಶವು ವೃದ್ಧಿಗೊಳಿಸಲ್ಪಟ್ಟಿತು. ಕ್ರೈಸ್ತ ಮೇಲ್ವಿಚಾರಕರೆಂದು ಹೇಳಿಕೊಂಡ ಕೆಲವರು ತಮ್ಮ ಸಭೆಗಳನ್ನು ತಮಗಾಗಿ ಪ್ರಾಧಾನ್ಯವನ್ನು ಸಂಪಾದಿಸುವ ಒಂದು ವಿಧಾನವಾಗಿ ಉಪಯೋಗಿಸಲು ಆರಂಭಿಸಿದರು. ಶಾಸ್ತ್ರಗಳಿಗೆ ಸಮಾನವಾದ ಯಾ ಅವುಗಳಿಗಿಂತಲೂ ಶ್ರೇಷ್ಠವಾದ ಮೌಲ್ಯವನ್ನು ತಮ್ಮ ಸ್ವಂತ ಅಭಿಪ್ರಾಯಗಳಿಗೆ ಮತ್ತು ಬೋಧನೆಗಳಿಗೆ ಅವರು ಕುತಂತ್ರವಾಗಿ ಕೊಟ್ಟರು. ಅವಕಾಶವು ತನ್ನನ್ನು ಸಾದರಪಡಿಸಿಕೊಂಡಾಗ, ಈ ಧರ್ಮಭ್ರಷ್ಟ ಚರ್ಚ್, ರಾಜ್ಯದ ರಾಜಕೀಯ ಅಭಿರುಚಿಗಳನ್ನು ಪೂರೈಸಲು ಸಹ ತನ್ನನ್ನು ನೀಡಿಕೊಂಡಿತು.—ಅ. ಕೃತ್ಯಗಳು 20:30; 2 ಪೇತ್ರ 2:1, 3.
ಹೆಚ್ಚಿಸಿದ ಎಚ್ಚರದ ಫಲಿತಾಂಶಗಳು
11, 12. ಪ್ರಾಟೆಸ್ಟಂಟ್ ಮತಸುಧಾರಣೆಯು, ಸತ್ಯಾರಾಧನೆಗೆ ಒಂದು ಹಿಂದಿರುಗುವಿಕೆಯನ್ನು ಸೂಚಿಸಲಿಲ್ಲ ಏಕೆ?
11 ರೋಮನ್ ಕ್ಯಾತೊಲಿಕ್ ಚರ್ಚಿನ ವತಿಯಿಂದ ಶತಮಾನಗಳ ದುರುಪಯೋಗಗಳ ಬಳಿಕ, ಕೆಲವು ಮತಸುಧಾರಕರು 16 ನೆಯ ಶತಮಾನದಲ್ಲಿ ಎದುರು ಮಾತಾಡಿದರು. ಆದರೆ ಇದು ನಿಜ ಆರಾಧನೆಯ ಕಡೆಗೊಂದು ಹಿಂದಿರುಗುವಿಕೆಯನ್ನು ಸೂಚಿಸಲಿಲ್ಲ. ಯಾಕೆ ಇಲ್ಲ?
12 ವಿಭಿನ್ನ ಪ್ರಾಟೆಸ್ಟಂಟ್ ಗುಂಪುಗಳು ರೋಮ್ನ ಶಕಿಯ್ತಿಂದ ತಮ್ಮನ್ನು ಬಿಡಿಸಿಕೊಂಡರೂ, ಅವರು ತಮ್ಮೊಂದಿಗೆ ಧರ್ಮಭ್ರಷ್ಟತೆಯ ಅನೇಕ ಮೂಲಭೂತ ಬೋಧನೆಗಳನ್ನು ಮತ್ತು ಆಚರಣೆಗಳನ್ನು—ವೈದಿಕ-ಲೌಕಿಕ ಕಲ್ಪನೆ, ಹಾಗು ತ್ರಯೈಕ್ಯದಲ್ಲಿ ನಂಬಿಕೆ, ಆತ್ಮದ ಅಮರತ್ವ, ಮತ್ತು ಮರಣಾನಂತರ ನಿತ್ಯ ಯಾತನೆ—ಕೊಂಡೊಯ್ದರು. ಮತ್ತು, ರೋಮನ್ ಕ್ಯಾತೊಲಿಕ್ ಚರ್ಚಿನಂತೆ, ರಾಜಕೀಯ ಅಂಶಗಳೊಂದಿಗೆ ನಿಕಟವಾಗಿದ್ದು, ಅವರು ಲೋಕದ ಭಾಗವಾಗಿರುತ್ತಾ ಮುಂದುವರಿದರು. ಆದುದರಿಂದ ಯೇಸು ರಾಜನಾಗಿ ಬರುವ ಯಾವುದೇ ನಿರೀಕ್ಷಣೆಗಳನ್ನು ಅವರು ತಳ್ಳಿಹಾಕುವ ಪ್ರವೃತ್ತಿಯುಳ್ಳವರಾದರು.
13. (ಎ) ಕೆಲವು ಪುರುಷರು ನಿಜವಾಗಿಯೂ ದೇವರ ವಾಕ್ಯವನ್ನು ಅಮೂಲ್ಯವೆಂದೆಣಿಸಿದರೆಂದು ಯಾವುದು ತೋರಿಸುತ್ತದೆ? (ಬಿ) 19ನೆಯ ಶತಮಾನದಲ್ಲಿ, ಕ್ರೈಸ್ತರೆಂದು ಹೇಳಿಕೊಂಡ ಕೆಲವರಿಗೆ ಯಾವ ಘಟನೆಯು ವಿಶೇಷ ಆಸಕ್ತಿಯುಳ್ಳದ್ದಾಗಿ ಪರಿಣಮಿಸಿತು? (ಸಿ) ಅನೇಕರು ಯಾಕೆ ಆಶಾಭಂಗವನ್ನು ಅನುಭವಿಸಿದರು?
13 ಆದರೂ, ಅಪೊಸ್ತಲರ ಮರಣವನ್ನು ಹಿಂಬಾಲಿಸಿ, ಕೊಯ್ಲಿನ ಸಮಯದ ವರೆಗೂ, (ಅವನು ಗೋದಿಗೆ ಹೋಲಿಸಿದ) ರಾಜ್ಯದ ಯಥಾರ್ಥ ಬಾಧ್ಯಸ್ಥರು, ನಕಲು ಕ್ರೈಸ್ತ (ಯಾ, ಹಣಜಿ) ರೊಂದಿಗೆ ಬೆಳೆಯುವುದು ಮುಂದುವರಿಯುವುದು ಎಂದು ಯೇಸು ಮುಂತಿಳಿಸಿದ್ದನು. (ಮತ್ತಾಯ 13:29, 30) ಯಜಮಾನನು ಗೋದಿಯಂತೆ ವೀಕ್ಷಿಸಿದವರೆಲ್ಲರ ಪಟ್ಟಿಯನ್ನು ಯಾವುದೇ ನಿಖರತೆಯಿಂದ ನಾವು ಇಂದು ಮಾಡಸಾಧ್ಯವಿಲ್ಲ. ಆದರೆ ಗಮನಾರ್ಹ ವಿಷಯವೇನೆಂದರೆ, 14, 15 ಮತ್ತು 16 ನೆಯ ಶತಮಾನಗಳಲ್ಲಿ, ತಮ್ಮ ಸ್ವಂತ ಜೀವಿತಗಳನ್ನು ಮತ್ತು ಸ್ವಾತಂತ್ರ್ಯವನ್ನು ಗಂಡಾಂತರಕ್ಕೆ ಹಾಕುತ್ತಾ, ಬೈಬಲನ್ನು ಸಾಮಾನ್ಯ ಮನುಷ್ಯನ ಭಾಷೆಯಲ್ಲಿ ಬರೆಯುವಂತಹ ಕೆಲಸಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಪುರುಷರಿದ್ದರು. ಇತರರು ಬೈಬಲನ್ನು ದೇವರ ವಾಕ್ಯವೆಂದು ಸ್ವೀಕರಿಸಿದ್ದು ಮಾತ್ರವಲ್ಲ ತ್ರಯೈಕ್ಯವನ್ನು ಅಶಾಸ್ತ್ರೀಯವೆಂದು ಹೇಳಿ ನಿರಾಕರಿಸಿದರು ಕೂಡ. ಕೆಲವರು ಆತ್ಮದ ಅಮರತ್ವದಲ್ಲಿ ಮತ್ತು ನರಕಾಗ್ನಿಯಲ್ಲಿ ಯಾತನೆಯ ನಂಬಿಕೆಯನ್ನು ದೇವರ ವಾಕ್ಯದೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಿಲ್ಲದ ಸಂಗತಿಗಳೆಂದು ನಿರಾಕರಿಸಿದರು. ಅಲ್ಲದೆ 19 ನೆಯ ಶತಮಾನದಲ್ಲಿ ಕೂಡ, ಬೈಬಲಿನ ಅಭಿವೃದ್ಧಿಗೊಂಡ ಅಭ್ಯಾಸದ ಕಾರಣದಿಂದಾಗಿ, ಅಮೆರಿಕ, ಜರ್ಮನಿ, ಇಂಗ್ಲೆಂಡ್ ಮತ್ತು ರಷ್ಯಾದಲ್ಲಿದ್ದ ಗುಂಪುಗಳು ಯೇಸುವಿನ ಹಿಂದಿರುಗುವಿಕೆಯ ಸಮಯವು ಹತ್ತಿರವಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಲಾರಂಭಿಸಿದವು. ಆದರೆ ಅವರ ಅಧಿಕಾಂಶ ನಿರೀಕ್ಷಣೆಗಳು ಆಶಾಭಂಗಕ್ಕೆ ನಡೆಸಿದವು. ಯಾಕೆ? ಒಂದು ಗಮನಾರ್ಹ ಅಂಶದ ಮಟ್ಟಿಗಾದರೂ, ಅವರು ಶಾಸ್ತ್ರಗಳ ಮೇಲೆ ಸಾಕಷ್ಟು ಆತುಕೊಳ್ಳದೆ ಮನುಷ್ಯರ ಮೇಲೆ ಅತ್ಯಧಿಕವಾಗಿ ಆತುಕೊಂಡದ್ದರಿಂದ ಹೀಗಾಯಿತು.
ಇವರು ಎಚ್ಚರಿಕೆಯುಳ್ಳವರಾಗಿ ಪರಿಣಮಿಸಿದ ವಿಧ
14. ಸಿ. ಟಿ. ರಸಲ್ ಮತ್ತು ಅವರ ಸಂಗಡಿಗರಿಂದ, ಬೈಬಲ್ ಅಭ್ಯಾಸಕ್ಕಾಗಿ ಬಳಸಲಾದ ಹಾದಿಯನ್ನು ವಿವರಿಸಿ.
14 ಆಮೇಲೆ, 1870 ರಲ್ಲಿ, ಚಾರ್ಲ್ಸ್ ಟೇಜ್ ರಸಲ್ ಮತ್ತು ಅವರ ಸಂಗಡಿಗರಲ್ಲಿ ಕೆಲವರು ಪೆನ್ಸಿಲೇನ್ವಿಯದ ಆ್ಯಲಿಗೆನಿಯಲ್ಲಿ ಬೈಬಲ್ ಅಭ್ಯಾಸಕ್ಕಾಗಿ ಒಂದು ಗುಂಪನ್ನು ರಚಿಸಿದರು. ತಾವು ಸ್ವೀಕರಿಸಿದ ಅನೇಕ ಬೈಬಲ್ ಸತ್ಯಗಳನ್ನು ಅರಿತುಕೊಂಡವರಲ್ಲಿ ಅವರು ಮೊದಲಿಗರಾಗಿರಲಿಲ್ಲ, ಆದರೆ ಅಭ್ಯಾಸ ಮಾಡುವಾಗ, ಕೊಡಲ್ಪಟ್ಟ ಪ್ರಶ್ನೆಯೊಂದರ ಮೇಲಿರುವ ಎಲ್ಲಾ ವಚನಗಳನ್ನು ಜಾಗರೂಕರಾಗಿ ಪರಿಶೀಲಿಸುವುದನ್ನು ಅವರು ಒಂದು ರೂಢಿಯನ್ನಾಗಿ ಮಾಡಿಕೊಂಡರು.a ಅವರ ಉದ್ದೇಶವು, ಮೊದಲೇ ಕಲ್ಪಿಸಿಕೊಂಡ ಒಂದು ವಿಚಾರಕ್ಕೆ ಪ್ರಮಾಣ ವಚನಗಳನ್ನು ಕಂಡುಹಿಡಿಯುವುದಾಗಿರಲಿಲ್ಲ, ಆದರೆ ಅವರು ಮಾಡಿದ ತೀರ್ಮಾನಗಳು ಆ ವಿಷಯದಲ್ಲಿ ಬೈಬಲ್ ಹೇಳುವ ಎಲ್ಲಾ ವಿಷಯಗಳೊಂದಿಗೆ ಹೊಂದಾಣಿಕೆಯಲ್ಲಿವೆ ಎಂಬ ದೃಢತೆಯಿಂದಿರುವುದೇ ಆಗಿತ್ತು.
15. (ಎ) ಸಹೋದರ ರಸಲ್ ಅಲ್ಲದೆ ಇನ್ನಿತರರು ಯಾವ ಗ್ರಹಿಕೆಗೆ ಬಂದಿದ್ದರು? (ಬಿ) ಬೈಬಲ್ ವಿದ್ಯಾರ್ಥಿಗಳು ಇವರಿಂದ ಭಿನ್ನರೆಂದು ಯಾವುದು ಗುರುತಿಸಿತು?
15 ಅವರ ಮುಂಚೆ ಇತರ ಕೆಲವರು ಕ್ರಿಸ್ತನು ಅದೃಶ್ಯವಾಗಿ ಒಬ್ಬ ಆತ್ಮ ಜೀವಿಯಂತೆ ಹಿಂದಿರುಗುವನೆಂದು ಗ್ರಹಿಸಿದ್ದರು. ಕ್ರಿಸ್ತನ ಹಿಂದಿರುಗುವಿಕೆಯ ಉದ್ದೇಶವು, ಭೂಮಿಯನ್ನು ಸುಟ್ಟು, ಎಲ್ಲಾ ಮಾನವ ಜೀವವನ್ನು ಅಳಿಸುವುದಕ್ಕಾಗಿರುವುದಿಲ್ಲ, ಬದಲಾಗಿ, ಭೂಮಿಯಲ್ಲಿರುವ ಎಲ್ಲಾ ಕುಟುಂಬಗಳನ್ನು ಆಶೀರ್ವದಿಸುವುದಕ್ಕಾಗಿರುವುದೆಂದು ಕೆಲವರು ನೋಡಿದ್ದರು. ಅನ್ಯಜನಾಂಗಗಳ ಸಮಯದ ಅಂತ್ಯವನ್ನು 1914ನೇ ವರ್ಷವು ಗುರುತಿಸುವುದೆಂದು ಕೂಡ ಗ್ರಹಿಸಿದ ಕೆಲವರಿದ್ದರು. ಆದರೆ ಸಹೋದರ ರಸಲ್ರೊಂದಿಗೆ ಜತೆಗೂಡಿದ ಬೈಬಲ್ ವಿದ್ಯಾರ್ಥಿಗಳಿಗೆ, ಇವು ದೇವತಾಶಾಸ್ತ್ರದ ಚರ್ಚೆಗಾಗಿರುವ ಅಂಶಗಳಿಗಿಂತಲೂ ಹೆಚ್ಚಿನದ್ದಾಗಿದ್ದವು. ಅವರು ತಮ್ಮ ಜೀವಿತಗಳನ್ನು ಈ ಸತ್ಯಗಳ ಸುತ್ತಲೂ ಕಟ್ಟಿದರು ಮತ್ತು ಆ ಶಕದಲ್ಲಿ ಹಿಂದೆಂದು ಕಂಡಿಲ್ಲದ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಪ್ರಕಟನೆಯನ್ನು ಅವುಗಳಿಗೆ ಕೊಟ್ಟರು.
16. ಇಸವಿ 1914 ರಲ್ಲಿ “ನಾವು ಒಂದು ಪರೀಕ್ಷಾ ಕಾಲದಲ್ಲಿ ಇದ್ದೇವೆ” ಎಂದು ಸಹೋದರ ರಸಲ್ ಯಾಕೆ ಬರೆದರು?
16 ಆದರೂ, ಅವರು ಎಚ್ಚರವಾಗಿರುತ್ತಾ ಇರಬೇಕಾಗಿತ್ತು. ಯಾಕೆ? ಉದಾಹರಣೆಯಾಗಿ, 1914 ಬೈಬಲ್ ಪ್ರವಾದನೆಯಿಂದ ಗುರುತಿಸಲ್ಪಟ್ಟಿದೆ ಎಂದು ಅವರಿಗೆ ತಿಳಿದಿದ್ದರೂ, ಆ ವರ್ಷದಲ್ಲಿ ಏನು ಸಂಭವಿಸುವುದೆಂದು ಅವರಿಗೆ ಖಚಿತವಾಗಿ ತಿಳಿದಿರಲಿಲ್ಲ. ಇದು ಅವರಿಗೊಂದು ಪರೀಕ್ಷೆಯನ್ನು ಸಾದರಪಡಿಸಿತು. ನವಂಬರ 1, 1914ರ ವಾಚ್ ಟವರ್ ನಲ್ಲಿ ಸಹೋದರ ರಸಲ್ ಬರೆದದ್ದು: “ನಾವು ಒಂದು ಪರೀಕ್ಷಾ ಕಾಲದಲ್ಲಿ ಇದ್ದೇವೆಂದು ಜ್ಞಾಪಕದಲ್ಲಿಟ್ಟುಕೊಳ್ಳೋಣ. . . . ಕರ್ತನನ್ನು ಮತ್ತು ಅವನ ಸತ್ಯವನ್ನು ತೊರೆದುಬಿಡುವಂತೆ ಮತ್ತು ಕರ್ತನಿಗಾಗಿ ತ್ಯಾಗಮಾಡುವುದನ್ನು ನಿಲ್ಲಿಸುವಂತೆ ಯಾರನ್ನಾದರೂ ನಡೆಸುವ ಯಾವುದೇ ಕಾರಣವಿದ್ದರೆ, ಆಗ ಕರ್ತನಲ್ಲಿ ಆಸಕ್ತಿಯನ್ನು ಪ್ರೇರಿಸಿದ್ದು ಕೇವಲ ಹೃದಯದಲ್ಲಿರುವ ದೇವರ ಪ್ರೀತಿಯಲ್ಲ, ಬೇರೆ ಯಾವುದೋ ವಿಷಯ; ಬಹುಶಃ ಸಮಯವು ಸ್ವಲ್ಪವಾಗಿದೆಯೆಂಬ ನಿರೀಕ್ಷೆ; ಅರ್ಪಣೆಯು ಒಂದು ನಿಶ್ಚಿತ ಸಮಯಕ್ಕೆ ಮಾತ್ರ ಇತ್ತು ಎಂಬ ಕಾರಣ.”
17. ಎ. ಎಚ್. ಮೆಕ್ಮಿಲನ್, ಮತ್ತು ಅವರಂತಹ ಇತರರು, ಆತ್ಮಿಕ ಸಮತೂಕವನ್ನು ಹೇಗೆ ಕಾಪಾಡಿಕೊಂಡರು?
17 ಕೆಲವರು ಯೆಹೋವನ ಸೇವೆಯನ್ನು ಆ ಸಮಯದಲ್ಲಿ ತೊರೆದುಬಿಟ್ಟರು. ಆದರೆ ಹಾಗೆ ಮಾಡದೆ ಇದ್ದವರಲ್ಲಿ ಒಬ್ಬರು ಸಹೋದರ ಎ. ಎಚ್. ಮೆಕ್ಮಿಲನ್. ವರ್ಷಗಳ ಅನಂತರ ಅವರು ಯಥಾರ್ಥವಾಗಿ ಅಂಗೀಕರಿಸಿದ್ದು: “ಕೆಲವೊಮ್ಮೆ ನಿಶ್ಚಿತ ತಾರೀಖಿನ ಕುರಿತು ನಮ್ಮ ನಿರೀಕ್ಷಣೆಗಳು ಶಾಸ್ತ್ರಗಳು ಕೊಟ್ಟಂಥ ಭರವಸೆಗಿಂತ ಹೆಚ್ಚಾಗಿದ್ದವು.” ಆತ್ಮಿಕ ಸಮತೂಕವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಯಾವುದು ಸಹಾಯ ಮಾಡಿತು? ಅವರು ಹೇಳಿದಂತೆ, “ಆ ನಿರೀಕ್ಷೆಗಳು ನೆರವೇರದೆ ಹೋದಾಗ, ಅದು ದೇವರ ಉದ್ದೇಶಗಳನ್ನು ಬದಲಾಯಿಸಲಿಲ್ಲವೆಂದು,” ಅವರು ಗ್ರಹಿಸಿದರು. ಅವರು ಕೂಡಿಸಿದ್ದು: “ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಬೇಕು ಮತ್ತು ಹೆಚ್ಚಿನ ಜ್ಞಾನೋದಯಕ್ಕಾಗಿ ದೇವರ ವಾಕ್ಯದಲ್ಲಿ ಹುಡುಕುವುದನ್ನು ಮುಂದುವರಿಸಬೇಕೆಂದು ನಾನು ಕಲಿತೆನು.”b ದೀನರಾಗಿ, ದೇವರ ವಾಕ್ಯವು ತಮ್ಮ ದೃಷ್ಟಿಕೋನವನ್ನು ಪುನಃ ಕ್ರಮಪಡಿಸುವಂತೆ ಆರಂಭದ ಬೈಬಲ್ ವಿದ್ಯಾರ್ಥಿಗಳು ಬಿಟ್ಟರು.—2 ತಿಮೊಥೆಯ 3:16, 17.
18. ಲೋಕದ ಭಾಗವಾಗಿರದೆ ಇರುವ ವಿಷಯದಲ್ಲಿ ಕ್ರೈಸ್ತ ಎಚ್ಚರವು ಹೇಗೆ ಪ್ರಗತಿಪರ ಪ್ರಯೋಜನಗಳನ್ನು ಫಲಿಸಿತು?
18 ಹಿಂಬಾಲಿಸಿದ ವರುಷಗಳಲ್ಲಿ, ಅವರು ಎಚ್ಚರದಿಂದ ಇರುತ್ತಿರುವ ಆವಶ್ಯಕತೆಯು ಕಡಿಮೆಯಾಗಲಿಲ್ಲ. ಕ್ರೈಸ್ತರು ಲೋಕದ ಭಾಗವಾಗಿರಬಾರದೆಂದು ಅವರಿಗೆ ನಿಸ್ಸಂದೇಹವಾಗಿ ಗೊತ್ತಿತ್ತು. (ಯೋಹಾನ 17:14; ಯಾಕೋಬ 4:4) ಅದಕ್ಕೆ ಅನುಗುಣವಾಗಿ, ಜನಾಂಗ ಸಂಘವನ್ನು ದೇವರ ರಾಜ್ಯದ ರಾಜಕೀಯ ಅಭಿವ್ಯಕ್ತಿಯೆಂದು ಸಮರ್ಥಿಸುವುದರಲ್ಲಿ ಅವರು ಕ್ರೈಸ್ತಪ್ರಪಂಚದ ಜೊತೆಗೆ ಸೇರಲಿಲ್ಲ. ಆದರೆ 1939ರ ವರೆಗೆ, ಅವರು ಕ್ರೈಸ್ತ ತಾಟಸ್ಥ್ಯದ ವಿವಾದಾಂಶವನ್ನು ಸ್ಪಷ್ಟವಾಗಿಗಿ ಮನಗಾಣಲಿಲ್ಲ.—ನೋಡಿರಿ ದ ವಾಚ್ಟವರ್ ನವಂಬರ್ 1, 1939.
19. ಸಂಸ್ಥೆಯು ಎಚ್ಚರವಾಗಿ ಇರುತ್ತಿದ್ದ ಕಾರಣದಿಂದ ಸಭಾ ಮೇಲ್ವಿಚಾರಣೆಯಲ್ಲಿ ಯಾವ ಪ್ರಯೋಜನಗಳು ಫಲಿಸಿವೆ?
19 ಅವರಲ್ಲಿ ಪುರೋಹಿತ ವರ್ಗವಿರಲಿಲ್ಲವಾದರೂ ಸಭೆಯಲ್ಲಿ ಸಾರುವುದೇ ಅವರಿಂದ ಅಪೇಕ್ಷಿಸತಕ್ಕದಾದ ಕಾರ್ಯವೆಂದು ಎಣಿಸಿಕೊಂಡಿದ್ದ ಕೆಲವು ಚುನಾಯಿತ ಹಿರಿಯರಿದ್ದರು. ಹಾಗಿದ್ದರೂ, ಶಾಸ್ತ್ರವಚನಗಳಿಗೆ ಸರಿಹೊಂದುವ ತೀಕ್ಷೈ ಬಯಕೆಯಿಂದಾಗಿ, ಸಂಸ್ಥೆಯು ಅನೇಕ ಬಾರಿ ದ ವಾಚ್ಟವರ್ನ ಅಂಕಣಗಳ ಮೂಲಕ, ಶಾಸ್ತ್ರವಚನಗಳ ಬೆಳಕಿನಲ್ಲಿ ಹಿರಿಯರ ಪಾತ್ರವನ್ನು ಪುನರ್ವಿಮರ್ಶಿಸಿತು. ಶಾಸ್ತ್ರವಚನಗಳು ಸೂಚಿಸುವುದರೊಂದಿಗೆ ಹೊಂದಿಕೆಯಲ್ಲಿ ವ್ಯವಸ್ಥಿತ ಬದಲಾವಣೆಗಳು ಮಾಡಲ್ಪಟ್ಟವು.
20-22. ಮುಂತಿಳಿಸಲ್ಪಟ್ಟ ಭೌಗೋಲಿಕ ರಾಜ್ಯ ಘೋಷಣೆಯನ್ನು ನೆರವೇರಿಸಲು ಇಡೀ ಸಂಸ್ಥೆಯು ಹೇಗೆ ಪ್ರಗತಿಪರವಾಗಿ ಹೊಂದಿಸಿಕೊಂಡಿತು?
20 ದೇವರ ವಾಕ್ಯವು ನಮ್ಮ ದಿನಕ್ಕಾಗಿ ರೂಪಿಸಿದಂಥ ಕೆಲಸವನ್ನು ಪೂರ್ಣವಾಗಿ ಸಾಧಿಸಲು ಇಡೀ ಸಂಸ್ಥೆಯು ಸಿದ್ಧಗೊಳಿಸಲ್ಪಡುತ್ತಾ ಇತ್ತು. (ಯೆಶಾಯ 61:1, 2) ನಮ್ಮ ದಿನಗಳಲ್ಲಿ ಸುವಾರ್ತೆಯು ಎಷ್ಟು ವ್ಯಾಪಕವಾಗಿ ಸಾರಲ್ಪಡಲಿಕ್ಕಿತ್ತು? ಯೇಸು ಹೇಳಿದ್ದು: “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.” (ಮಾರ್ಕ 13:10) ಮಾನವ ದೃಷ್ಟಿಕೋನದಿಂದ, ಆ ಕೆಲಸವು ಅನೇಕ ವೇಳೆ ಅಸಾಧ್ಯವೆಂದು ತೋರಿದೆ.
21 ಆದರೂ, ಸಭೆಯ ತಲೆಯೋಪಾದಿ ಕ್ರಿಸ್ತನಲ್ಲಿ ಭರವಸೆಯೊಂದಿಗೆ, ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗವು ಮುಂದೆ ಸಾಗಿದೆ. (ಮತ್ತಾಯ 24:45) ನಂಬಿಗಸ್ತಿಕೆಯಿಂದ ಮತ್ತು ದೃಢವಾಗಿ, ಮಾಡಲ್ಪಡಬೇಕಾದ ಕೆಲಸದ ಕುರಿತು ಅವರು ಯೆಹೋವನ ಜನರಿಗೆ ತಿಳಿಯಪಡಿಸಿದ್ದಾರೆ. ಇಸವಿ 1919 ರಿಂದ ಮುಂದಕ್ಕೆ, ಕ್ಷೇತ್ರ ಸೇವೆಗೆ ಹೆಚ್ಚಿನ ಒತ್ತನ್ನು ನೀಡಲಾಯಿತು. ಅನೇಕರಿಗೆ ಮನೆಯಿಂದ ಮನೆಗೆ ಹೋಗುವುದು ಮತ್ತು ಅಪರಿಚಿತರೊಂದಿಗೆ ಮಾತಾಡುವದು ಸುಲಭವಾಗಿರಲಿಲ್ಲ. (ಅ. ಕೃತ್ಯಗಳು 20:20) ಆದರೆ “ನಿರ್ಭೀತರು ಧನ್ಯರು” ಮತ್ತು “ಧೈರ್ಯವಂತರಾಗಿರ್ರಿ” ಗಳಂಥ ಅಭ್ಯಾಸ ಲೇಖನಗಳು ಕೆಲವರಿಗೆ ಯೆಹೋವನಲ್ಲಿ ಭರವಸವನ್ನಿಡುತ್ತ ಕೆಲಸವನ್ನು ಆರಂಭಿಸಲು ಸಹಾಯ ಮಾಡಿದವು.
22 ಇಸವಿ 1922 ರಲ್ಲಿ, “ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ, ರಾಜ ಮತ್ತು ಆತನ ರಾಜ್ಯವನ್ನು” ಎಂಬ ಮನವಿಯು ತಕ್ಕದಾದ ಪ್ರಧಾನತೆಯನ್ನು ಕೊಡಲು ಅಗತ್ಯವಾಗಿದ್ದ ಪ್ರಚೋದನೆಯನ್ನು ಒದಗಿಸಿತು. ಇಸವಿ 1927 ರಿಂದ, ಆ ಶಾಸ್ತ್ರೀಯ ಜವಾಬ್ದಾರಿಯನ್ನು ಸ್ವೀಕರಿಸದ ಹಿರಿಯರು ತೆಗೆದುಹಾಕಲ್ಪಟ್ಟರು. ಸುಮಾರು ಅದೇ ಸಮಯದಲ್ಲಿ, ಪಿಲ್ಗ್ರಿಮ್ಸ್ (ಯಾತ್ರಿಕರು) ಎಂಬ, ಸಂಸ್ಥೆಯ ಸಂಚಾರ ಪ್ರತಿನಿಧಿಗಳನ್ನು, ಪ್ರಾಂತೀಯ ಸೇವಾ ನಿರ್ದೇಶಕರಾಗಿ, ಕ್ಷೇತ್ರ ಸೇವೆಯಲ್ಲಿ ಪ್ರಚಾರಕರಿಗೆ ವೈಯಕ್ತಿಕ ಉಪದೇಶವನ್ನು ಕೊಡುವಂತೆ ನೇಮಿಸಲಾಯಿತು. ಎಲ್ಲರೂ ಪಯನೀಯರ್ ಸೇವೆ ಮಾಡುವುದು ಸಾಧ್ಯವಾಗಿರಲಿಲ್ಲ, ಆದರೆ ವಾರಾಂತ್ಯಗಳಲ್ಲಿ ಅನೇಕರು ಇಡೀ ದಿನಗಳನ್ನು ಸೇವೆಗೆ ಸಮರ್ಪಿಸುತ್ತಿದ್ದರು. ಬೆಳಗ್ಗೆ ಬೇಗನೆ ಪ್ರಾರಂಭಿಸಿ, ಒಂದು ಸ್ಯಾಂಡ್ವಿಚನ್ನು ತಿನ್ನಲು ಮಾತ್ರ ಸ್ವಲ್ಪ ಕಾಲ ಸೇವೆಯನ್ನು ನಿಲ್ಲಿಸಿ, ಆಮೇಲೆ ಸಂಜೆಯವರೆಗೆ ಸೇವೆಯಲ್ಲಿ ಅವರು ಮುಂದುವರಿದರು. ಅವು ದೇವಪ್ರಭುತ್ವ ಬೆಳವಣಿಗೆಯ ಮಹತ್ವಪೂರ್ಣ ಸಮಯಗಳಾಗಿದ್ದವು, ಮತ್ತು ಯೆಹೋವನು ತನ್ನ ಜನರನ್ನು ನಡೆಸಿದ ರೀತಿಯನ್ನು ಪುನರ್ವಿಮರ್ಶಿಸುವ ಮೂಲಕ ನಾವು ಬಹಳವಾಗಿ ಪ್ರಯೋಜನ ಪಡೆಯುತ್ತೇವೆ. ಆತನು ಹಾಗೆ ಮಾಡುತ್ತ ಮುಂದುವರಿಯುತ್ತಾನೆ, ಮತ್ತು ಆತನ ಆಶೀರ್ವಾದದೊಂದಿಗೆ, ಸ್ಥಾಪಿತ ರಾಜ್ಯದ ಸುಸಮಾಚಾರದ ಸಾರುವಿಕೆಯ ಕೆಲಸವನ್ನು ಸಫಲಪೂರ್ಣ ಸಮಾಪ್ತಿಗೆ ತರಲಾಗುವುದು.
ನೀವು ಎಚ್ಚರವಾಗಿ ಇರುತ್ತ ಇದ್ದೀರೊ?
23. ಕ್ರೈಸ್ತ ಪ್ರೀತಿ ಮತ್ತು ಲೋಕದಿಂದ ಪ್ರತ್ಯೇಕತೆಯ ಕುರಿತು, ನಾವು ಎಚ್ಚರವಾಗಿ ಇರುತ್ತಿದ್ದೇವೆ ಎಂಬುದನ್ನು ನಾವು ವೈಯಕ್ತಿಕವಾಗಿ ಹೇಗೆ ಪ್ರದರ್ಶಿಸಸಾಧ್ಯವಿದೆ?
23 ಯೆಹೋವನ ಮಾರ್ಗದರ್ಶನೆಗೆ ಪ್ರತಿಕ್ರಿಯಿಸುತ್ತಾ, ನಮ್ಮನ್ನು ಲೋಕದ ಭಾಗವಾಗಿ ಗುರುತಿಸುವ ರೂಢಿಗಳಿಂದ ಮತ್ತು ಮನೋಭಾವಗಳಿಂದ, ಹೀಗೆ ಅದರೊಂದಿಗೆ ಗತಿಸಿಹೋಗುವ ಅಪಾಯದಿಂದ ಆತನ ಸಂಸ್ಥೆಯು ನಮ್ಮನ್ನು ಎಚ್ಚರಿಸುವುದನ್ನು ಮುಂದುವರಿಸುತ್ತಿದೆ. (1 ಯೋಹಾನ 2:17) ಸರದಿಯಾಗಿ, ಯೆಹೋವನ ಮಾರ್ಗದರ್ಶನಕ್ಕೆ ಪ್ರತಿಕ್ರಿಯಿಸುವ ಮೂಲಕವಾಗಿ ನಾವು ವೈಯಕ್ತಿಕವಾಗಿ ಎಚ್ಚರವಾಗಿ ಇರುತ್ತಿರಬೇಕು. ಒಟ್ಟಿಗೆ ಜೀವಿಸುವ ಮತ್ತು ಕೆಲಸಮಾಡುವ ವಿಷಯದಲ್ಲಿ ಕೂಡ ಯೆಹೋವನು ನಮಗೆ ಉಪದೇಶವನ್ನು ಕೊಡುತ್ತಾನೆ. ಕ್ರೈಸ್ತ ಪ್ರೀತಿಯು ನಿಜವಾಗಿ ಏನನ್ನು ಅರ್ಥೈಸುತ್ತದೊ ಅದಕ್ಕೆ ಗಣ್ಯತೆಯಲ್ಲಿ ಬೆಳೆಯಲು ನಮಗೆ ಆತನ ಸಂಸ್ಥೆಯು ಸಹಾಯ ಮಾಡಿದೆ. (1 ಪೇತ್ರ 4:7, 8) ಮಾನವ ಅಪರಿಪೂರ್ಣತೆಯ ನಡುವೆಯೂ, ಎಚ್ಚರವಾಗಿ ಇರುತ್ತಿರುವುದು ಈ ಸಲಹೆಯನ್ನು ಅನ್ವಯಿಸಲು ನಾವು ಸಂತತವಾಗಿ ಪ್ರಯತ್ನಿಸುವುದನ್ನು ನಮ್ಮಿಂದ ಅಗತ್ಯಪಡಿಸುತ್ತದೆ.
24, 25. ಯಾವ ಮಹತ್ವದ ವಿಷಯಗಳಲ್ಲಿ ನಾವು ಎಚ್ಚರವಾಗಿರುತ್ತಾ ಇರಬೇಕು, ಯಾವ ಪ್ರತೀಕ್ಷೆಯ ವೀಕ್ಷಣೆಯಿಂದ?
24 ಸಮಂಜಸವಾಗಿಯೇ, ನಂಬಿಗಸ್ತನೂ ವಿವೇಕಿಯೂ ಆದ ಆಳು ನಮಗೆ ಮರುಜ್ಞಾಪಿಸಿದ್ದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.” (ಜ್ಞಾನೋಕ್ತಿ 3:5) “ಎಡೆಬಿಡದೆ ಪ್ರಾರ್ಥನೆಮಾಡಿರಿ.” (1 ಥೆಸಲೊನೀಕ 5:17) ನಮ್ಮ ನಿರ್ಣಯಗಳನ್ನು ದೇವರ ವಾಕ್ಯದ ಮೇಲಾಧಾರಿಸಲು ಕಲಿಯುವಂತೆ, ಆ ವಾಕ್ಯವು ‘ನಮ್ಮ ಕಾಲಿಗೆ ದೀಪವೂ ನಮ್ಮ ದಾರಿಗೆ ಬೆಳಕೂ’ ಆಗಿರುವಂತೆ ನಮಗೆ ಸಲಹೆ ಕೊಡಲ್ಪಟ್ಟಿದೆ. (ಕೀರ್ತನೆ 119:105) ಪ್ರೀತಿಪೂರ್ವಕವಾಗಿಯೆ, ನಮ್ಮ ದಿನಕ್ಕಾಗಿ ಯೇಸು ಮುಂತಿಳಿಸಿದ ಕೆಲಸವನ್ನು—ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸ—ನಮ್ಮ ಜೀವಿತಗಳಲ್ಲಿ ಪ್ರಥಮವಾಗಿಡುವಂತೆ ನಾವು ಉತ್ತೇಜಿಸಲ್ಪಟ್ಟಿದ್ದೇವೆ.—ಮತ್ತಾಯ 24:14.
25 ಹೌದು, ನಂಬಿಗಸ್ತನೂ ವಿವೇಕಿಯೂ ಆದ ಆಳು ನಿಶ್ಚಯವಾಗಿಯೂ ಎಚ್ಚರದಿಂದಿದ್ದಾನೆ. ವೈಯಕ್ತಿಕವಾಗಿ ನಾವು ಕೂಡ ಎಚ್ಚರದಿಂದಿರಬೇಕು. ಹಾಗೆ ಮಾಡುವುದರ ಪರಿಣಾಮವಾಗಿ, ಮನುಷ್ಯಕುಮಾರನು ನ್ಯಾಯತೀರ್ಪನ್ನು ವಿಧಿಸಲು ಬರುವಾಗ ಆತನ ಮುಂದೆ ಅನುಗ್ರಹ ಪಡೆದು ನಿಲ್ಲುವವರೊಳಗೆ ನಾವು ಕಂಡುಬರುವಂತಾಗಲಿ.—ಮತ್ತಾಯ 24:30; ಲೂಕ 21:34-36.
[ಅಧ್ಯಯನ ಪ್ರಶ್ನೆಗಳು]
a ಮುನ್ನಡೆಯುವ ನಂಬಿಕೆ (ಇಂಗ್ಲಿಷ್), ಎ. ಎಚ್. ಮೆಕ್ಮಿಲನ್, ಪ್ರೆಂಟಿಸ್ ಹಾಲ್, ಇನ್ಕ್., 1957, ಪುಟಗಳು 19-22.
ಪುನರ್ವಿಮರ್ಶೆಯಲ್ಲಿ
▫ ಮತ್ತಾಯ 24:42 ರಲ್ಲಿ ತೋರಿಸಲ್ಪಟ್ಟಂತೆ, ನಾವು ಎಚ್ಚರವಾಗಿರುತ್ತಾ ಇರಬೇಕಾದ ಅಗತ್ಯವಿದೆ ಯಾಕೆ?
▫ ಯೇಸು ಮತ್ತು ಆತನ ಪ್ರಥಮ ಶತಮಾನದ ಹಿಂಬಾಲಕರು ಆತ್ಮಿಕ ಎಚ್ಚರವನ್ನು ಹೇಗೆ ಕಾಪಾಡಿಕೊಂಡರು?
▫ ಇಸವಿ 1870 ರಿಂದ, ಯೆಹೋವನ ಸೇವಕರು ಎಚ್ಚರದಿಂದಿದ್ದ ಕಾರಣ ಯಾವ ಬೆಳವಣಿಗೆಗಳಾಗಿವೆ?
▫ ವೈಯಕ್ತಿಕವಾಗಿ ನಾವು ಎಚ್ಚರದಿಂದ ಇರುತ್ತಿದ್ದೇವೆಂಬುದಕ್ಕೆ ರುಜುವಾತನ್ನೊದಗಿಸುವುದು ಯಾವುದು?
[ಪುಟ 23 ರಲ್ಲಿರುವ ಚಿತ್ರಗಳು]
ಯೇಸು ತನ್ನ ತಂದೆಯಿಂದ ನೇಮಿಸಲ್ಪಟ್ಟ ಕೆಲಸದಲ್ಲಿ ಕಾರ್ಯನಿರತನಾಗಿದ್ದನು. ಆತನು ಉತ್ಸಾಹ ಪೂರಿತನಾಗಿಯೂ ಪ್ರಾರ್ಥಿಸಿದನು
[ಪುಟ 24 ರಲ್ಲಿರುವ ಚಿತ್ರ]
ಚಾರ್ಲ್ಸ್ ಟೇಜ್ ರಸಲ್ ಅವರ ಅನಂತರದ ವರುಷಗಳಲ್ಲಿ
[ಪುಟ 25 ರಲ್ಲಿರುವ ಚಿತ್ರ]
ಇಡೀ ಭೂಮಿಯಲ್ಲಿ 47,00,000 ಕ್ಕಿಂತಲೂ ಅಧಿಕ ರಾಜ್ಯ ಘೋಷಕರು ಸಕ್ರಿಯರಾಗಿದ್ದಾರೆ