ಸುಳ್ಳಾಡ ಸಾಧ್ಯವಿಲ್ಲದ ದೇವರಿಂದ ಪೋಷಿಸಲ್ಪಟ್ಟದ್ದು
ಮೇರಿ ವಿಲಿಸ್ ಹೇಳಿದಂತೆ
ಲೋಕ ಕುಸಿತದ ಪರಿಣಾಮಗಳು 1932 ರೊಳಗಾಗಿ ಪಶ್ಚಿಮ ಆಸ್ಟ್ರೇಲಿಯದ ಪ್ರತ್ಯೇಕವಾದ ಗ್ರಾಮೀಣ ಪ್ರದೇಶಗಳನ್ನು ಮುಟ್ಟಿದವ್ದು. ಆ ವರ್ಷ, ನಾನು ಕೇವಲ 19 ವರ್ಷದವಳಾಗಿದ್ದಾಗ, ಸುಮಾರು 1,00,000 ಚದರ ಕಿಲೋಮೀಟರುಗಳನ್ನು ಆವರಿಸಿದ ಒಂದು ಸಾರುವ ನೇಮಕವನ್ನು ಎಲೆನ್ ಡೇವಿಸ್ ಮತ್ತು ನಾನು ಪಡೆದೆವು. ನಮ್ಮ ಆರಂಭದ ಬಿಂದುವು ಪಶ್ಚಿಮ ಆಸ್ಟ್ರೇಲಿಯದ ರಾಜಧಾನಿಯಾದ ಪರ್ತ್ನಲ್ಲಿನ ನಮ್ಮ ಮನೆಯ ಸುಮಾರು 950 ಕಿಲೋಮೀಟರುಗಳು ಈಶಾನ್ಯಕ್ಕೆ ಇದ್ದ ವಿಲೂನವೆಂಬ ಸಣ್ಣ ಪಟ್ಟಣವಾಗಿರಲಿತ್ತು.
ಅಲ್ಲಿಗೆ ಹೋಗುವ ನಮ್ಮ ದಾರಿಯಲ್ಲಿ, ಎಲೆನ್ ಮತ್ತು ನಾನು ಒಂದು ಸರಕು ರೈಲು ಗಾಡಿಯ ಡಬ್ಬಿಯಲ್ಲಿ ಒಬ್ಬ ಸ್ನೇಹಪರ ಗಾರ್ಡ್ನೊಂದಿಗೆ ಪಾಲಿಗರಾದೆವು. ಹಳಿಯ ಉದ್ದಕ್ಕೂ ಪ್ರತಿಯೊಂದು ಕವಲುದಾರಿಯಲ್ಲಿ ರೈಲು ನಿಂತಾಗ, ನಮ್ಮ ಇರುವು ಎಷ್ಟು ದೀರ್ಘವಾಗಿರುವುದೆಂದು ಗಾರ್ಡ್ ನಮಗೆ ಸ್ನೇಹಭಾವದಿಂದ ಹೇಳಿದ. ಕೆಳಗಿಳಿದು ಆ ಪ್ರತ್ಯೇಕವಾಗಿರುವ ರೈಲುಹಾದಿಯ ವಸಾಹತುಗಳಲ್ಲಿರುವ ಜನರಿಗೆ ಸಾಕ್ಷಿನೀಡಲು ಇದು ನಮಗೆ ಅವಕಾಶವನ್ನೀಡಿತು. ನಾವು ಕಟ್ಟಕಡೆಗೆ ಗಣಿ ಕೆಲಸದವರಿಂದ ನಿವಾಸಿಸಲ್ಪಟ್ಟ ವಿಲೂನ ಪಟ್ಟಣವನ್ನು ಒಂದು ಧೂಳು ಬಿರುಗಾಳಿಯ ಮಧ್ಯದಲ್ಲಿ ತಲಪಿದೆವು.
ಹಾಗಿದ್ದರೂ, ವಿಲೂನದಲ್ಲಿರುವ ರೈಲು ಕವಲುದಾರಿಯು ಪಟ್ಟಣದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿತ್ತು. ನಮ್ಮಲ್ಲಿ ಒಬ್ಬರೂ ಬಹಳ ಗಟಿಮ್ಟುಟ್ಟಾಗಿರಲಿಲ್ಲ, ಮತ್ತು ನಮ್ಮಲ್ಲಿ ಸಾಹಿತ್ಯದ ಮೂರು ಭಾರವಾದ ಪೆಟ್ಟಿಗೆಗಳು ಅಷ್ಟೇ ಅಲ್ಲದೆ ಎರಡು ಉಡುಪು ಕೈಪೆಟ್ಟಿಗೆಗಳು ಇದ್ದವು. ನಾವು ಏನು ಮಾಡಬೇಕು? ಒಂದು ಕೋಲಿನ ಮೇಲೆ ನಾವು ಒಂದು ಪೆಟ್ಟಿಗೆಯನ್ನು ತೂಗುಹಾಕಿದೆವು, ಮತ್ತು ಪ್ರತಿಯೊಬ್ಬರು ಕೋಲಿನ ಒಂದೊಂದು ತುದಿಯನ್ನು ಹಿಡಿದುಕೊಂಡೆವು. ಈ ರೀತಿಯಲ್ಲಿ ನಾವು ಪೆಟ್ಟಿಗೆಗಳನ್ನು ಒಂದೊಂದಾಗಿ ಹೊತ್ತುಕೊಂಡು ಹೋದೆವು. ಮೂರು ಕಿಲೋಮೀಟರುಗಳನ್ನು ದಾಟಿ ಪಟ್ಟಣದೊಳಗೆ ಮೂರು ಪೆಟ್ಟಿಗೆಗಳನ್ನು ಮತ್ತು ನಮ್ಮ ಉಡುಪು ಕೈಪೆಟ್ಟಿಗೆಗಳನ್ನು ತರಲು ಏಳು ಸುತ್ತು ಪ್ರಯಾಣಗಳನ್ನು ಮಾಡಬೇಕಿತ್ತು. ನಮ್ಮ ಕೈಗಳು ಬಹಳ ನೋಯುತ್ತಿರುವುದರಿಂದ ವಿರಾಮ ತೆಗೆದುಕೊಳ್ಳಲು ನಾವು ಅನೇಕ ಬಾರಿ ನಿಂತೆವು.
ಧೂಳಿ, ನೋಯುವ ಕೈಗಳು, ಮತ್ತು ಬಳಲಿದ ಕಾಲುಗಳ ಹೊರತೂ, ನಾವು ಪಂಥಾಹ್ವಾನದಲ್ಲೂ, ಸಾಹಸದಲ್ಲೂ ಆನಂದಿಸಿದೆವು. ಯೆಹೋವನು ನಮ್ಮೊಂದಿಗೆ ಇದ್ದಾನೆ, ಅತಿ ದೂರದ ಸ್ಥಳಗಳಲ್ಲಿ ಸಾರುವುದಕ್ಕೆ ಈ ಒರಟಾದ ಪೀಠಿಕೆಯನ್ನು ನಿಭಾಯಿಸಲು ನಮ್ಮನ್ನು ಆತನು ಪೋಷಿಸುತ್ತಿದ್ದಾನೆಂದು ನಮಗಿಬ್ಬರಿಗೂ ಅನಿಸಿತು. ನಮ್ಮ ಕೆಲಸದ ಮೇಲೂ ಆತನ ಆಶೀರ್ವಾದವನ್ನು ನಾವು ಬೇಗನೆ ನೋಡಿದೆವು, ಯಾಕೆಂದರೆ ಆ ಪ್ರಯಾಣದಲ್ಲಿ ನಮ್ಮ ಪ್ರಯತ್ನವು ಯುವಕ ಬಾಬ್ ಹಾರ್ನ್ ಎಂಬವನು ಬೈಬಲ್ ಸತ್ಯವನ್ನು ಸ್ವೀಕರಿಸುವುದರಲ್ಲಿ ಫಲಿಸಿತು. ಕೆಲವು ವರ್ಷಗಳನ್ನು ಬಾಬ್ ಬೆತೆಲ್ ಸೇವೆಯಲ್ಲಿ ಕಳೆಯಸಾಧ್ಯವಾದುದಕ್ಕಾಗಿ ನಾವು ಹರ್ಷಿಸುತ್ತೇವೆ, ಮತ್ತು 1982 ರಲ್ಲಿ ಅವನ ಮರಣದ ತನಕ ಸುಮಾರು 50 ವರ್ಷಗಳ ಕಾಲ ಯೆಹೋವನನ್ನು ನಂಬಿಗಸ್ತನಾಗಿ ಸೇವಿಸಲು ಅವನು ಮುಂದುವರಿದನು.
ವಿಲೂನದಿಂದ ಕರಾವಚಿಯ ಮೇಲಿರುವ ಜೆರಲ್ಡ್ಟನ್ಗೆ 725 ಕ್ಕಿಂತಲೂ ಹೆಚ್ಚು ಕಿಲೋಮೀಟರುಗಳ ನಮ್ಮ ಪ್ರಯಾಣದಲ್ಲಿ ನಾವು ವಸಾಹತುಗಳಲ್ಲಿ ಸಾರಿದೆವು. ಅಲ್ಲಿಂದ ನಾವು ಪರ್ತಿಗೆ ಹಿಂದಿರುಗಿ ಪ್ರಯಾಣಿಸಿದೆವು. ಕೆಲವು ರಾತ್ರಿಗಳು ನಾವು ನಿರಲಂಕೃತ ರೈಲುಹಾದಿಯ ಕಾಯುವ ಕೋಣೆಗಳಲ್ಲಿ ಮತ್ತು ಒಮ್ಮೆ ರೈಲುಹಾದಿಯ ಹಳಿಯ ಪಕ್ಕಕ್ಕೆ ಇದ್ದ ಒಂದು ಹುಲ್ಲು ಮೆದೆಯಲ್ಲಿ ಕೂಡ ನಾವು ಮಲಗಿದೆವು.
ಮನೆಯಲ್ಲಿ ತಯಾರಿಸಿದ ಗೋಧಿಯ ಬಿಸ್ಕತ್ತುಗಳಿಂದ ತುಂಬಿದ ಒಂದು ದಿಂಬಿನಚೀಲವನ್ನು ನಮ್ಮೊಂದಿಗೆ ನಾವು ತಂದೆವು. ನಮ್ಮ ಪ್ರಯಾಣದ ಮೊದಲ ಹಂತಕ್ಕಾಗಿ ಇವು ನಮ್ಮ ಮುಖ್ಯ ಆಹಾರವಾಗಿದ್ದವು. ಕೆಲವೊಮ್ಮೆ ನಮ್ಮ ಊಟಗಳನ್ನು ನಾವು ಪಾತ್ರೆಗಳನ್ನು ತೊಳೆಯುವ ಮೂಲಕ ಮತ್ತು ಖಾನಾವಳಿಗಳಲ್ಲಿ ಮತ್ತು ತಂಡದೂಟದ ಕೋಣೆಗಳಲ್ಲಿ ನೆಲವನ್ನು ಉಜ್ಜುವ ಮೂಲಕ ಪಡೆದೆವು. ಇತರ ಸಮಯಗಳಲ್ಲಿ ಬಿಸಿಲಿನಲ್ಲಿ ಬಟಾಣಿಗಳನ್ನು ಯಾ ಅವರೆಯ ಕಾಯಿಗಳನ್ನು ಕೊಯ್ಯುತ್ತಾ ನಾವು ಕೆಲಸಮಾಡುತ್ತಿದ್ದೆವು. ಆಸಕ್ತರು ಬೈಬಲ್ ಸಾಹಿತ್ಯವನ್ನು ಸ್ವೀಕರಿಸಿದುದರಿಂದ ಬಂದ ಕಾಣಿಕೆಗಳು ನಮ್ಮ ವೆಚ್ಚಗಳಿಗೆ ನೆರವು ನೀಡಿದವು.
ಯೆಹೋವನಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಲು ಮತ್ತು ಆ ದಿನಗಳಲ್ಲಿ ಅನೇಕ ಕಷ್ಟಕರ ಸನ್ನಿವೇಶಗಳನ್ನು ಸಂತೋಷಕರವಾಗಿ ನಿಭಾಯಿಸಲು ನನ್ನನ್ನು ಬಲಗೊಳಿಸಿದ್ದು ನನ್ನ ತಾಯಿಯ ಮಾದರಿ ಮತ್ತು ಆಕೆಯಿಂದ ಪಡೆದ ಆರಂಭಿಕ ತರಬೇತಾಗಿತ್ತು.
ಕ್ರೈಸ್ತ ಪರಂಪರೆ
ನನ್ನ ತಾಯಿಗೆ ಸೃಷ್ಟಿಕರ್ತನಲ್ಲಿ ಬಲವಾದ ನಂಬಿಕೆಯಿತ್ತು, ಮತ್ತು ನಾನು ಹಿಂದೆ ಜ್ಞಾಪಿಸಿಕೊಳ್ಳಸಾಧ್ಯವಿರುವಷ್ಟರ ಮಟ್ಟಿಗೆ, ಮಕ್ಕಳಾದ ನಮ್ಮೊಂದಿಗೆ ಆಕೆ ಆತನ ಕುರಿತು ಮಾತಾಡುತ್ತಿದ್ದಳು. ಆದರೂ, ಶಾಲೆಯಲ್ಲಿ ಒಂದು ದುಃಖಕರವಾದ ಅಪಘಾತದಲ್ಲಿ ನಮ್ಮ ಏಳು ವರ್ಷ ಪ್ರಾಯದ ಅಣ್ಣನ ಮರಣದಿಂದ ಆಕೆಯ ನಂಬಿಕೆಯು ತೀವ್ರವಾಗಿ ಪರೀಕ್ಷಿಸಲ್ಪಟ್ಟಿತು. ಆದರೆ ದೇವರ ಕಡೆಗೆ ಕಹಿಯಾದ ಅನಿಸಿಕೆಗಳನ್ನು ಬೆಳೆಸಿಕೊಳ್ಳುವ ಬದಲು, ಬೈಬಲಿನ ಶ್ರದ್ಧಾಪೂರ್ವಕವಾದ ಅಭ್ಯಾಸವನ್ನು ತಾಯಿಯು ಆರಂಭಿಸಿದಳು. ಸಾಧ್ಯವಾದರೆ, ಇಂತಹ ದುರಂತಗಳ ಕಾರಣವನ್ನು ಕಲಿಯಲು ಆಕೆ ಬಯಸಿದಳು. ಬೈಬಲ್ ಸತ್ಯಕ್ಕಾಗಿ ಆಕೆಯ ಅನ್ವೇಷಣೆ ಬಹುಮಾನಿಸಲ್ಪಟ್ಟಿತು, ಮತ್ತು 1920 ಗಳ ಆದಿಭಾಗದಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ಸತ್ಯ ದೇವರಾದ ಯೆಹೋವನಿಗೆ ಆಕೆಯ ಸಮರ್ಪಣೆಯನ್ನು ಆಕೆ ಸಂಕೇತಿಸಿದಳು.
ಆಗಿನಿಂದ ನಮ್ಮೊಂದಿಗೆ ಆಕೆಯ ಚರ್ಚೆಗಳು, ದೇವರ ವಾಗ್ದಾನಗಳು ಎಷ್ಟು ಖಚಿತವಾಗಿದ್ದವು ಎಂಬುದನ್ನು ಅನೇಕ ಬಾರಿ ಒತ್ತಿ ಹೇಳಿದವು. ಏನೇ ಸಂಭವಿಸಲಿ, ‘ದೇವರು ಸುಳ್ಳಾಡಸಾಧ್ಯವಿಲ್ಲ’ ಎಂಬುದನ್ನು ಮನಸ್ಸಿನಲ್ಲಿಡಲು ಆಕೆ ಯಾವಾಗಲೂ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಳು. (ತೀತ 1:2) ಆದಕಾರಣ, ನನ್ನ ತಂಗಿ ಮತ್ತು ನಾನು ಮತ್ತು ನಮ್ಮ ಅಣ್ಣಂದಿರಲ್ಲಿ ಇಬ್ಬರು, ನಮ್ಮ ಕುಟುಂಬಗಳು ಹಾಗೂ ಮೊಮ್ಮಕ್ಕಳೊಂದಿಗೆ ಇಂದು ಯೆಹೋವ ದೇವರ ಸ್ತುತಿಗಾರರಾಗಿದ್ದೇವೆ. ನನ್ನ ತಂಗಿಯ ಗಂಡು ಮಕ್ಕಳಲ್ಲಿ ಇಬ್ಬರು—ಆ್ಯಲನ್ ಮತ್ತು ಪೌಲ್ ಮೇಸನ್, ಸಂಚರಣ ಮೇಲ್ವಿಚಾರಕರಂತೆ ಸೇವೆ ಸಲ್ಲಿಸುತಾರ್ತೆ.
ಸಾರಲು ಆದಿಯ ಬಯಕೆ
ನಾನು ಒಳ್ಳೆಯ ವಿದ್ಯಾರ್ಥಿನಿಯಾಗಿರಲಿಲ್ಲ ಮತ್ತು 1926 ರಲ್ಲಿ ನಾನು 13 ವರ್ಷದವಳಾಗಿದ್ದಾಗ ಶಾಲೆಯನ್ನು ಬಿಟ್ಟುಬಿಟ್ಟೆ. ಆದರೂ, ಬೈಬಲಿನ ಕುರಿತು ಕಲಿತಿದ್ದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಬಲವಾದ ಬಯಕೆಯನ್ನು ನಾನು ಬೆಳೆಸಿಕೊಂಡಿದ್ದೆ. ಯಾರಿಗಾದರೂ ಸಹಾಯ ಮಾಡುವಷ್ಟು ಶಿಕ್ಷಿತಳು ನಾನಾಗಿರಲಿಲ್ಲವೆಂದು ತಂದೆ ನೆನಸಿದರು, ಆದರೆ ತಾಯಿಯು ಹೇಳಿದ್ದು: “ಅವಳು ಜನರಿಗೆ ಸಮೀಪಿಸುತ್ತಿರುವ ಅರ್ಮಗೆದೋನ್ ಯುದ್ಧದ ಕುರಿತು ಮತ್ತು ದೀನರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವರೆಂದು ಮಾತ್ರ ಹೇಳಿದರೂ ಕೂಡ, ಅದು ದೇವರ ರಾಜ್ಯವನ್ನು ಪ್ರಕಟಿಸುವುದು.” ಇಸವಿ 1930ರ ತನಕ ನಾನು ದೀಕ್ಷಾಸ್ನಾನ ಪಡೆಯದಿದ್ದರೂ ಕೂಡ, ನನ್ನ ಆರಂಭಿಕ ಹದಿವಯಸ್ಸಿನಲ್ಲಿ ಮನೆಯಿಂದ ಮನೆಯ ಸಾರುವ ಕೆಲಸದಲ್ಲಿ ಭಾಗವಹಿಸಲು ನಾನು ಆರಂಭಿಸಿದೆ. ನನ್ನ ದೀಕ್ಷಾಸ್ನಾನದ ತರುವಾಯ, ಪರ್ತ್ನ ಸುತ್ತಲೂ ಇರುವ ಪ್ರದೇಶದಲ್ಲಿ ಪೂರ್ಣ ಸಮಯದ ಸೌವಾರ್ತಿಕ ಕೆಲಸವನ್ನು ನಾನು ಪ್ರಾರಂಭಿಸಿದೆ.
ಮುಂದಿನ ವರ್ಷ, 1931 ರಲ್ಲಿ, ಯೆಹೋವನ ಸಾಕ್ಷಿಗಳು ಎಂಬ ನಮ್ಮ ಹೊಸ ಹೆಸರನ್ನುಪಯೋಗಿಸಲು ನಾವು ಆರಂಭಿಸಿದೆವು. ಹಾಗಿದ್ದರೂ, ಅನೇಕ ಮನೆಯವರು ದೇವರ ಈ ಪವಿತ್ರ ನಾಮದ ನಮ್ಮ ಉಪಯೋಗವನ್ನು ಆಕ್ಷೇಪಿಸಿದರು ಮತ್ತು ಕಠೋರವಾಗಿ ಪ್ರತಿಕ್ರಿಯಿಸಿದರು. ಅಹಿತಕರವಾದ ಸನ್ನಿವೇಶಗಳ ಹೊರತೂ ನಾನು ಶುಶ್ರೂಷೆಯಲ್ಲಿ ಮುಂದುವರಿದೆ. ತನ್ನ ಸೇವಕರು ‘ತಾನು ನೀಡುವ ಶಕ್ತಿಯ ಮೇಲೆ ಆಶ್ರಯಿಸ’ಬಲ್ಲರೆಂದು ಆತನು ವಾಗ್ದಾನಿಸುವಾಗ, ದೇವರು ಸುಳ್ಳಾಡುವುದಿಲ್ಲವೆಂಬ ಭರವಸೆಯಿಂದ ನಾನಿದ್ದೆ.—1 ಪೇತ್ರ 4:11; ಫಿಲಿಪ್ಪಿ 4:13.
“ಮಹಾ ಸಮೂಹ” ವನ್ನು ಗುರುತಿಸುವುದು
ಇಸವಿ 1935 ರಲ್ಲಿ, ವಿಶಾಲವಾದ ಆಸ್ಟ್ರೇಲಿಯನ್ ಖಂಡದ ಇನ್ನೊಂದು ಪಕ್ಕಕ್ಕೆ ನೇಮಕವನ್ನು ನಾನು ಪಡೆದೆ. ಹೀಗೆ, ಬಳಿಕ ಅನೇಕ ವರ್ಷಗಳಿಗೆ ಪರ್ತ್ನಲ್ಲಿನ ನನ್ನ ಹಿಂದಿನ ಮನೆಯಿಂದ ಸುಮಾರು 4,000 ಕಿಲೋಮೀಟರುಗಳು ದೂರವಿರುವ ನ್ಯೂ ಸೌತ್ ವೇಲ್ಸ್ ರಾಜ್ಯದ, ನ್ಯೂ ಇಂಗ್ಲೆಡ್ ಜಿಲ್ಲೆಯ ಸುತ್ತಲೂ ನಾನೊಬ್ಬಾಕೆ ಪಯನೀಯರ್ ಶುಶ್ರೂಷಕಳಂತೆ ಸೇವೆಮಾಡಿದೆ.
ಇಸವಿ 1935ರ ತನಕ, ಯೇಸುವಿನ ಮರಣದ ವಾರ್ಷಿಕ ಜ್ಞಾಪಕದಲ್ಲಿ ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾರಸದ ಸಂಕೇತಗಳಲ್ಲಿ ನಾನು ಭಾಗವಹಿಸಿದ್ದೆ. ಇದು ವಿಶೇಷವಾಗಿ ಹುರುಪಿನ ಪೂರ್ಣ ಸಮಯದ ಶುಶ್ರೂಷಕರು ಮಾಡಬೇಕಾಗಿದ್ದ ಯೋಗ್ಯ ಸಂಗತಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನನಗೆ ಸ್ವರ್ಗೀಯ ನಿರೀಕ್ಷೆಯಿತ್ತೆಂದು ನನಗೆಂದೂ ಮನದಟ್ಟಾಗಿದ್ದದ್ದಿಲ್ಲ. ಆಮೇಲೆ 1935 ರಲ್ಲಿ, ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳ ಒಂದು ಮಹಾ ಸಮೂಹವನ್ನು ಕೂಡಿಸಲಾಗುತ್ತಿತ್ತು ಎಂಬುದನ್ನು ನಮಗೆ ಸ್ಪಷ್ಟಮಾಡಲಾಯಿತು. ನಮ್ಮಲ್ಲಿ ಅನೇಕರು ಆ ಮಹಾ ಸಮೂಹದ ಭಾಗವಾಗಿದ್ದೇವೆಂದು ತಿಳಿಯಲು ಹರ್ಷಿಸಿದೆವು, ಮತ್ತು ಸಂಕೇತಗಳಲ್ಲಿ ಭಾಗಿಗಳಾಗುವುದನ್ನು ನಿಲ್ಲಿಸಿದೆವು. (ಯೋಹಾನ 10:16; ಪ್ರಕಟನೆ 7:9) ಯೆಹೋವನು ವಾಗ್ದಾನಿಸಿದ್ದಂತೆಯೇ, ಬೈಬಲ್ ಸತ್ಯವು ಪ್ರಗತಿಪರವಾಗಿ ಹೆಚ್ಚು ಪ್ರಜ್ವಲಿಸುತ್ತಾ ಇತ್ತು.—ಜ್ಞಾನೋಕ್ತಿ 4:18.
ಸಾರುವಿಕೆಯ ನವೀನ ವಿಧಾನಗಳು
ಇಸವಿ 1930 ಗಳ ಮಧ್ಯಭಾಗದಲ್ಲಿ, ನಮ್ಮ ಶುಶ್ರೂಷೆಯಲ್ಲಿ ಫೊನೋಗ್ರಾಫನ್ನುಪಯೋಗಿಸಲು ನಾವು ತೊಡಗಿದೆವು. ಹೀಗೆ, ನಮ್ಮ ಗಟಿಮ್ಟುಟ್ಟಾದ ಸೈಕಲುಗಳಿಗೆ ಭಾರವಾದ ಫೊನೋಗ್ರಾಫ್ಗಳಿಗಾಗಿ ಮಾತ್ರವಲ್ಲ ರೆಕಾರ್ಡ್ಗಳಿಗೂ ನಮ್ಮ ಸಾಹಿತ್ಯದ ಚೀಲಗಳಿಗಾಗಿಯೂ ಸಹ ಮುಂದಿನ ಮತ್ತು ಹಿಂದಿನ ಹೊರಿಗೆಗಳನ್ನು ಜೋಡಿಸಬೇಕಾಗಿತ್ತು. ನನ್ನ ಸೈಕಲ್ ಪೂರ್ಣವಾಗಿ ಹೇರಲ್ಪಟ್ಟಾಗ ಬಹಳ ಜಾಗರೂಕತೆಯನ್ನು ನಾನು ವಹಿಸಬೇಕಿತ್ತು ಯಾಕೆಂದರೆ ಅದು ಬೀಳುವುದಾದರೆ ಅದನ್ನು ಪುನಃ ಮೇಲೆತ್ತುವುದು ನನಗೆ ಬಹಳ ಭಾರವಾಗುತ್ತಿತ್ತು!
ಸುಮಾರು ಆ ಸಮಯಕ್ಕೆ ಮಾಹಿತಿ ನಡಗೆಗಳು ಎಂಬುದಾಗಿ ಕರೆಯಲಾಗುತ್ತಿದ್ದದನ್ನು ಕೂಡ ನಾವು ಆರಂಭಿಸಿದೆವು. ಊರುಗಳ ಮುಖ್ಯ ರಸ್ತೆಗಳ ಉದ್ದಕ್ಕೂ ನಾವು ನಡೆದಂತೆ, ಕಣ್ಸೆಳೆವ ಧ್ಯೇಯ ಮಂತ್ರಗಳನ್ನು ಪ್ರದರ್ಶಿಸಿದ ಪ್ರಕಟನಪತ್ರಗಳನ್ನು ಸ್ಯಾಂಡ್ವಿಚ್ ಗುರುತುಗಳನ್ನು ನಾವು ಧರಿಸಿದೆವು. ವಿಶೇಷವಾಗಿ ನನ್ನನ್ನು ಸೆರೆಹಿಡಿದು ಲಿಜ್ಮೋರ್ ಊರಿನ ಸೆರೆಮನೆಯಲ್ಲಿ ಒಂದು ರಾತ್ರಿ ಬಂಧಿಸಲಾದಾಗ, ಈ ಕೆಲಸವನ್ನು ನಂಬಿಕೆಯ ಅತಿ ಕಠಿನ ಪರೀಕ್ಷೆ ಎಂಬುದಾಗಿ ನಾನು ಕಂಡುಕೊಂಡೆ. ನನ್ನ ಕೂದಲನ್ನೂ ಬಾಚಲು ಬಿಡದೆ ಮರುದಿನ ನ್ಯಾಯಾಲಯದೊಳಗೆ ತರಲ್ಪಟ್ಟಿದ್ದು ಅಪಮಾನಕರವಾಗಿತ್ತು! ಯೆಹೋವನು ತಾನು ವಾಗ್ದಾನಿಸಿದಂತೆಯೇ ನನ್ನನ್ನು ಮತ್ತೊಮ್ಮೆ ಎತ್ತಿಹಿಡಿದನು. ನನ್ನ ಪ್ರಕಟನಪತ್ರವು ತನ್ನ ಧರ್ಮಕ್ಕೆ ಅಪಮಾನಕಾರಕವಾಗಿತ್ತು ಎಂಬುದು ಸೆರೆಹಿಡಿದ ಪೊಲೀಸಿನವನ ಏಕಮಾತ್ರ ಆರೋಪವಾಗಿದ್ದ ಕಾರಣ, ಕೇಸನ್ನು ವಜಾ ಮಾಡಲಾಯಿತು.
ಪುನಃ ಪಶ್ಚಿಮಕ್ಕೆ
ಇಸವಿ 1940 ಗಳ ಆದಿಭಾಗದಲ್ಲಿ, ನನ್ನ ಪಯನೀಯರ್ ಸಾರುವಿಕೆಯು ನನ್ನನ್ನು ಪಶ್ಚಿಮ ಆಸ್ಟ್ರೇಲಿಯದಲ್ಲಿರುವ ಗ್ರಾಮೀಣ ಊರುಗಳಿಗೆ ಪುನಃ ಕೊಂಡೊಯ್ಯಿತು. ಇಲ್ಲಿ ನಾನು ಸ್ಮರಣೀಯ ಅನುಭವಗಳಲ್ಲಿ ಮತ್ತು ಆತ್ಮಿಕ ಆಶೀರ್ವಾದಗಳಲ್ಲಿ ಆನಂದಿಸಲು ಮುಂದುವರಿದೆ. ನಾರ್ಥಮ್ನಲ್ಲಿ ನನ್ನ ನೇಮಕದಲ್ಲಿರುವಾಗ, ಊರಿನ ಹೊರಗೆ ಸುಮಾರು 11 ಕಿಲೊಮೀಟರುಗಳ ದೂರದಲ್ಲಿ ಫ್ಲೋ ಟಿಮಿನ್ಸ್ ಎಂಬ ಒಬ್ಬಾಕೆ ಕಾರ್ಯಮಗ್ನ ಗೃಹಿಣಿಯನ್ನು ನಾನು ಭೇಟಿಯಾದೆ. ರೆಕನ್ಸಿಲಿಏಷನ್ ಎಂಬ ಪುಸ್ತಕವನ್ನು ಅವಳು ಸ್ವೀಕರಿಸಿದಳು, ಮತ್ತು ಬೇಗನೆ ಯೆಹೋವ ದೇವರ ಸಮರ್ಪಿತ ಸಾಕ್ಷಿಯು ಅವಳಾದಳು. ರಾಜ್ಯ ಸೇವೆಯಲ್ಲಿ ಅವಳು ಇನ್ನೂ ಸಕ್ರಿಯಳಾಗಿದ್ದಾಳೆ, ಮತ್ತು ಆಗ ಕೇವಲ ನಾಲ್ಕು ವರ್ಷ ಪ್ರಾಯದವಳಾಗಿದ್ದ ಅವಳ ಮಗಳು ಬೆಳೆದು ಮುಂದೆ ವಿಶೇಷ ಪಯನೀಯರ್ ಶುಶ್ರೂಷಕಳಾದಳು.
ಆದರೆ ಮರೆಯಲಾಗದ ಇತರ ಅನುಭವಗಳೂ ಇದ್ದವು. ಒಮ್ಮೆ ನನ್ನ ಜೊತೆಗಾರ್ತಿ ಮತ್ತು ನಾನು ನಾರ್ಥಮ್ನಲ್ಲಿರುವ ಒಂದು ಸೇತುವೆಯನ್ನು ನಮ್ಮ ಕುದುರೆ ಗಾಡಿಯಲ್ಲಿ ದಾಟುತ್ತಿದ್ದಾಗ, ಕೆಳಗೆ ಏವಾನ್ ನದಿಯ ಸುಳಿ ಸುತ್ತುತ್ತಿರುವ ನೀರುಗಳ ಮೇಲೆ ಭಯಭರಿತ ಸವಾರಿಯನ್ನು ನಮಗೆ ಕೊಡುತ್ತಾ, ಕುದುರೆಯು ಇದ್ದಕ್ಕಿದ್ದಹಾಗೆ ಹತೋಟಿ ಮೀರಿ ಓಡತೊಡಗಿತು. ಸುಮಾರು ಒಂದು ಕಿಲೊಮೀಟರಿಗಿಂತ ಹೆಚ್ಚು ದೂರದ ಅನಂತರ, ಕುದುರೆಯು ನಿಧಾನಿಸಿತು.
ಮದುವೆ ಮತ್ತು ಒಂದು ಕುಟುಂಬ
ಇಸವಿ 1950 ರಲ್ಲಿ, ಅನೇಕ ವರ್ಷಗಳ ಕಾಲ ತಾನೂ ಪಯನೀಯರನಾಗಿದ್ದ ಆರ್ಥರ್ ವಿಲಿಸ್ನನ್ನು ನಾನು ಮದುವೆಯಾದೆ. ಎಲ್ಲಿ ನಾವು ಮಗ ಬೆಂಟ್ಲಿ ಮತ್ತು ಮಗಳು ಯೂನಿಸ್ ನಿಂದ ಆಶೀರ್ವದಿಸಲ್ಪಟ್ಟೆವೊ ಆ ಪಿಂಜೆಲಿ ಎಂಬ ಪಶ್ಚಿಮ ಆಸ್ಟ್ರೇಲಿಯನ್ ಊರಿನಲ್ಲಿ ನಾವು ನೆಲೆಸಿದೆವು. ಮಕ್ಕಳು ಶಾಲೆಯನ್ನು ಮುಗಿಸುವ ಸಮಯದಲ್ಲಿ, ಪುನಃ ಒಬ್ಬ ಪಯನೀಯರನಂತೆ ನಮೂದಿಸಿಕೊಳ್ಳಲು ಆರ್ಥರ್ ನಿರ್ಧರಿಸಿದರು. ಅರ್ಹರಾದ ಕೂಡಲೆ ಕ್ರಮದ ಪಯನೀಯರ್ ಸೇವೆಯನ್ನು ಆರಂಭಿಸಲು ಅವರ ತಂದೆಯ ಒಳ್ಳೆಯ ಮಾದರಿಯು ನಮ್ಮ ಇಬ್ಬರು ಮಕ್ಕಳನ್ನು ಪ್ರೋತ್ಸಾಹಿಸಿತು.
ಆರ್ಥರ್ ಮಕ್ಕಳನ್ನು ಅನೇಕ ಬಾರಿ ದೂರದ ಹಳ್ಳಿ ಪ್ರದೇಶಗಳಿಗೆ ಸಾರಲು ಕೊಂಡೊಯ್ದರು. ಕೆಲವು ಸಂದರ್ಭಗಳಲ್ಲಿ, ಪ್ರತಿ ರಾತ್ರಿ ಹೊರಗೆ ಇಳಿದುಕೊಳ್ಳುತ್ತಾ, ಅವರೊಂದಿಗೆ ಒಂದು ವಾರ ಯಾ ಕೆಲವೊಮ್ಮೆ ಹೆಚ್ಚಿನ ಸಮಯ ಅವರು ಮನೆಯಿಂದ ದೂರವಿರುತ್ತಿದ್ದರು. ಈ ಗೈರುಹಾಜರಿಯ ಸಮಯಗಳಲ್ಲಿ, ಅವರಲ್ಲಿ ಮೂವರೂ ಪಯನೀಯರ್ ಮಾಡುವಂತೆ ಸಾಧ್ಯಗೊಳಿಸುತ್ತಾ, ಕುಟುಂಬದ ಪೀಠೋಪಕರಣ ವ್ಯಾಪಾರವನ್ನು ನೋಡಿಕೊಳ್ಳಲಿಕ್ಕಾಗಿ ನಾನು ಮನೆಯಲ್ಲಿದ್ದೆ.
ಮೂಲ ನಿವಾಸಿಗಳ ಮಧ್ಯೆ ಶುಶ್ರೂಷೆ
ಒಂದು ಬೆಳಗ್ಗೆ ಕುಟುಂಬವು ತನ್ನ ಗ್ರಾಮೀಣ ಸಂಚಾರಗಳಲ್ಲಿ ಒಂದರಿಂದ ಹಿಂದಿರುಗಿದ ಸ್ವಲ್ಪದರಲ್ಲಿಯೇ, ಅನಿರೀಕ್ಷಿತ ಭೇಟಿಕಾರನೊಬ್ಬನು ಮನೆಗೆ ಬಂದನು. ಬಂದವನು ಒಬ್ಬ ಮೂಲ ನಿವಾಸಿಯಾಗಿದ್ದನು. ಅವನು ಕೇಳಿದ್ದು: “ಕ್ರೈಸ್ತ ಸಭೆಗೆ ಹಿಂದಿರುಗಲು ನಾನು ಏನು ಮಾಡಬೇಕು?” ಮೊದಲಿಗೆ ನಾವು ದಿಗ್ಭಮ್ರೆಗೊಂಡೆವು. ಆಮೇಲೆ ಅವನನ್ನು, ಕುಡಿಕತನಕ್ಕಾಗಿ ಕ್ರೈಸ್ತ ಸಭೆಯಿಂದ ಅನೇಕ ವರ್ಷಗಳ ಹಿಂದೆ ಬಹಿಷ್ಕರಿಸಲ್ಪಟ್ಟಿದ್ದ ಒಬ್ಬ ಮನುಷ್ಯನೆಂದು ಆರ್ಥರ್ ಗುರುತಿಸಿದರು. ಹೆಚ್ಚಾದ ಕುಡಿಯುವಿಕೆ ಮತ್ತು ಸಾಲಗಳಿಗೆ ಗುರಿಯಾಗುವ ತಲ್ಲಣಗೊಳಿಸುವ ಪ್ರಖ್ಯಾತಿಯನ್ನು ಅವನು ಆಗಿನಿಂದ ಬೆಳೆಸಿಕೊಂಡಿದ್ದ.
ಯೆಹೋವನ ಸ್ವಚ್ಛ ಸಂಸ್ಥೆಯೊಳಗೆ ಪುನಃಸ್ಥಾಪಿಸಲ್ಪಡಲು ಅವನು ಏನನ್ನು ಮಾಡಬೇಕಾಗಿತ್ತು ಎಂಬುದನ್ನು ಆರ್ಥರ್ ವಿವರಿಸಿದರು. ಅವನು ಹೆಚ್ಚು ಮಾತಾಡದೆ ಸುಮ್ಮನೆ ಹೋಗಿಬಿಟ್ಟನು, ಮತ್ತು ಅವನು ಏನನ್ನು ಮಾಡುವನೆಂದು ನಾವೆಲ್ಲಾ ಕುತೂಹಲಪಟ್ಟೆವು. ಮುಂದಿನ ಕೆಲವು ತಿಂಗಳುಗಳಲ್ಲಿ ನಡೆದ ವಿಷಯವು ನಮಗೆ ತುಂಬಾ ಆಶ್ಚರ್ಯವನ್ನುಂಟುಮಾಡಿತು. ಆ ಮನುಷ್ಯನು ಮಾಡಿದ ಬದಲಾವಣೆಗಳು ಬಹುಮಟ್ಟಿಗೆ ನಂಬಲಸಾಧ್ಯವಾಗಿದ್ದವು! ಅವನು ತನ್ನ ಕುಡಿಯುವ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದದ್ದು ಮಾತ್ರವಲ್ಲ ಜಿಲ್ಲೆಯಲ್ಲಿದ್ದ ಜನರನ್ನು ಸಂದರ್ಶಿಸಿ ಅವನ ಸಾಲಗಳ ಕುರಿತು ಅವರಿಗೆ ಜ್ಞಾಪಕಹುಟ್ಟಿಸಿ, ಮತ್ತು ತದನಂತರ ಸಲ್ಲಿಸಬೇಕಾದದ್ದನ್ನು ಅವನು ಸಲ್ಲಿಸಿದನು! ಇಂದು ಅವನು ಪುನಃ ಒಬ್ಬ ಕ್ರೈಸ್ತ ಸಹೋದರನಾಗಿದ್ದಾನೆ, ಮತ್ತು ಸ್ವಲ್ಪ ಸಮಯಕ್ಕಾಗಿ ಅವನೊಬ್ಬ ಪಯನೀಯರ್ ಶುಶ್ರೂಷಕನಂತೆ ಸೇವೆಮಾಡಿದನು.
ಪಿಂಜೆಲಿಯಲ್ಲಿ ಅನೇಕ ಮೂಲ ನಿವಾಸಿಗಳು ಇದ್ದರು, ಮತ್ತು ದೇವರ ವಾಕ್ಯದ ಸತ್ಯವನ್ನು ಕಲಿಯಲು ಮತ್ತು ಸ್ವೀಕರಿಸಲು ಈ ದೀನ ಜನರಿಗೆ ಸಹಾಯ ಮಾಡುತ್ತಾ, ಅತ್ಯಂತ ತೃಪ್ತಿದಾಯಕ ಶುಶ್ರೂಷೆಯನ್ನು ನಾವು ಅನುಭವಿಸಿದೆವು. ಸತ್ಯವನ್ನು ಕಲಿಯುವುದರಲ್ಲಿ ಆಸ್ಟ್ರೇಲಿಯನ್ ಮೂಲ ನಿವಾಸಿಗಳಲ್ಲಿ ಅನೇಕರಿಗೆ ನೆರವು ನೀಡುವುದರಲ್ಲಿ ನನಗೆ ಒಂದು ಭಾಗವಿದ್ದದ್ದು ನಂಬಿಕೆಯನ್ನು ಎಷ್ಟು ಬಲಪಡಿಸುವಂಥದ್ದಾಗಿದೆ!
ಪಿಂಜೆಲಿಯಲ್ಲಿ ಒಂದು ಸಭೆಯನ್ನು ಪ್ರಾರಂಭಿಸಲಾಯಿತು ಮತ್ತು ಆರಂಭದಲ್ಲಿ ಅದರ ಸದಸ್ಯರಲ್ಲಿ ಹೆಚ್ಚಿನವರು ಮೂಲ ನಿವಾಸಿಗಳಾಗಿದ್ದರು. ಅವರಲ್ಲಿ ಅನೇಕರಿಗೆ ನಾವು ಓದಲು ಮತ್ತು ಬರೆಯಲು ಕಲಿಸಬೇಕಾಗಿತ್ತು. ಆ ಆರಂಭಿಕ ವರ್ಷಗಳಲ್ಲಿ ಅವರ ವಿರುದ್ಧ ಬಹಳಷ್ಟು ಪೂರ್ವಾಗ್ರಹವಿತ್ತು, ಆದರೆ ಅವರ ಸ್ವಚ್ಛ ಜೀವನಕ್ಕಾಗಿ ಮತ್ತು ವಿಶ್ವಾಸಾರ್ಹ ಪ್ರಜೆಗಳಾಗಿರುವುದಕ್ಕಾಗಿ ಊರಿನ ಜನರು ಕ್ರಮೇಣವಾಗಿ ಮೂಲ ನಿವಾಸಿ ಸಾಕ್ಷಿಗಳನ್ನು ಗೌರವಿಸಲು ತೊಡಗಿದರು.
ಯೆಹೋವನ ತಪ್ಪದ ಸಹಾಯ
ದೇವರನ್ನು 57 ವರ್ಷಗಳ ಕಾಲ ನಂಬಿಗಸ್ತಿಕೆಯಿಂದ ಸೇವಿಸಿದ ನನ್ನ ಪ್ರಿಯ ಪತಿಯಾದ ಆರ್ಥರ್, 1986ರ ಆದಿಭಾಗದಲ್ಲಿ ಮರಣ ಹೊಂದಿದರು. ಪಿಂಜೆಲಿಯಲ್ಲಿರುವ ಎಲ್ಲಾ ವ್ಯಾಪಾರಿಗಳಿಂದ ಮತ್ತು ಜಿಲ್ಲೆಯ ಜನರಿಂದ ಅವರು ಚೆನ್ನಾಗಿ ಗೌರವಿಸಲ್ಪಡುತ್ತಿದ್ದರು. ಮತ್ತೊಮ್ಮೆ, ಈ ಅನಿರೀಕ್ಷಿತ ನಷ್ಟವನ್ನು ಸಹಿಸಲು ನನಗೆ ಬಲವನ್ನು ಕೊಡುತ್ತಾ, ಯೆಹೋವನು ನನ್ನನ್ನು ಪೋಷಿಸಿದನು.
ನನ್ನ ಮಗ ಬೆಂಟ್ಲಿ ಮತ್ತು ಅವನ ಪತ್ನಿ ಲಾರ್ನ ಸತ್ಯದಲ್ಲಿ ತಮ್ಮ ಕುಟುಂಬವನ್ನು ಎಲ್ಲಿ ಬೆಳೆಸಿದರೊ ಆ ಪಶ್ಚಿಮ ಆಸ್ಟ್ರೇಲಿಯದ ಉತ್ತರ ಭಾಗದಲ್ಲಿ ಅವನು ಒಬ್ಬ ಹಿರಿಯನಂತೆ ಸೇವೆ ಮಾಡುತ್ತಾನೆ. ನನಗೆ ಮಹಾ ಆನಂದದ ಇನ್ನೊಂದು ಮೂಲವು ಏನಾಗಿದೆಯೆಂದರೆ, ನನ್ನ ಮಗಳಾದ ಯೂನಿಸ್ ಈ ದಿನದ ವರೆಗೆ ಪೂರ್ಣ ಸಮಯದ ಸೇವೆಯಲ್ಲಿ ಮುಂದುವರಿದಿದ್ದಾಳೆ. ಅವಳು ಮತ್ತು ಅವಳ ಗಂಡನಾದ ಜೆಫ್, ಪಯನೀಯರರಾಗಿ ಸೇವೆಮಾಡುತ್ತಾರೆ. ಈಗ ನಾನು ಅವರೊಂದಿಗೆ ಜೀವಿಸುತ್ತೇನೆ ಮತ್ತು ಎಡೆಬಿಡದ ರೀತಿಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಶಕ್ತಳಾಗುವಂತೆ ಆಶೀರ್ವದಿಸಲ್ಪಟ್ಟಿದ್ದೇನೆ.
ಅರ್ವತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯಕ್ಕಾಗಿ, ತನ್ನ ಸೇವಕರನ್ನು ಬಲಪಡಿಸುವ ಮತ್ತು ಅವರು ಎದುರಿಸಬೇಕಾಗುವ ಯಾವುದೇ ಪರಿಸ್ಥಿತಿಗಳನ್ನು ನಿಭಾಯಿಸುವಂತೆ ಅವರಿಗೆ ಸಹಾಯಮಾಡುವ ಯೆಹೋವನ ಪ್ರೀತಿಪರ ವಾಗ್ದಾನದ ನೆರವೇರಿಕೆಯನ್ನು ನಾನು ಅನುಭವಿಸಿದ್ದೇನೆ. ನಾವು ಆತನನ್ನು ಎಂದೂ ಸಂದೇಹಿಸದಿದ್ದರೆ ಯಾ ಆತನು ನಮಗಾಗಿ ಮಾಡಿರುವ ವಿಷಯಗಳಿಗೆ ಕೃತಜ್ಞತೆ ತೋರಿಸಲು ತಪ್ಪದಿದ್ದರೆ, ಆತನು ನಮ್ಮ ಪ್ರತಿಯೊಂದು ಅಗತ್ಯವನ್ನು ಪೂರೈಸುತ್ತಾನೆ. ದೇವರ ಹಸ್ತವನ್ನು ಕಾರ್ಯದಲ್ಲಿ ನಾನು ಅನುಭವಿಸಿದಂತೆ ನನ್ನ ನಂಬಿಕೆಯು ಬಲಗೊಳಿಸಲ್ಪಟ್ಟಿದೆ, ಮತ್ತು ನಾವು ಗ್ರಹಿಸಸಾಧ್ಯವಿರುವುದನ್ನು ಸಹ ಮೀರಿ ತನ್ನ ಆಶೀರ್ವಾದಗಳನ್ನು ಆತನು ಹೇಗೆ ಕೊಡುತ್ತಾನೆಂದು ನಾನು ನೋಡಿದ್ದೇನೆ. (ಮಲಾಕಿ 3:10) ಸತ್ಯವಾಗಿಯೂ, ದೇವರು ಸುಳ್ಳಾಡಸಾಧ್ಯವಿಲ್ಲ!
[ಪುಟ 27 ರಲ್ಲಿರುವ ಚಿತ್ರ]
ಮೇರಿ ವಿಲಿಸ್ 1993 ರಲ್ಲಿ
[ಪುಟ 29 ರಲ್ಲಿರುವ ಚಿತ್ರಗಳು]
ಮೇರಿ ಮತ್ತು ಆರ್ಥರ್ ಅನಂತರದ ವರ್ಷಗಳಲ್ಲಿ