ಭಯವು ಲೋಕವನ್ನು ಏಕೆ ಬಿಗಿಯಾಗಿ ಹಿಡಿಯುತ್ತದೆ?
ಭಯದಲ್ಲಿ ಜೀವಿಸಲು ಯಾರು ಬಯಸುತ್ತಾರೆ? ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಜೀವ ಯಾ ಸ್ವತ್ತುಗಳಿಗೆ ಯಾವುದೇ ಬೆದರಿಕೆ ಇಲ್ಲದಿರುವ, ಭದ್ರತೆಯನ್ನು ಬಯಸುತ್ತಾನೆ. ಆದಕಾರಣ, ಅನೇಕರು ದುಷ್ಕೃತ್ಯಗಳು ತುಂಬಿರುವ ಪ್ರದೇಶಗಳಿಂದ ಸ್ಥಳಾಂತರಿಸುತ್ತಾರೆ. ಆದರೂ, ಭಯಕ್ಕಾಗಿ ಕಾರಣಗಳು ಎಲ್ಲ ಕಡೆಗಳಲ್ಲಿಯೂ ಇವೆ.
ಅಣ್ವಸ್ತ್ರಗಳಿಂದ ಅಪಾಯಗಳು ಮತ್ತು ರಿಆ್ಯಕ್ಟರ್ ಅಪಘಾತಗಳು ಮಾನವಕುಲಕ್ಕಾಗಿ ಸರ್ವನಾಶದ ಭಯವನ್ನು ಕೆರಳಿಸುತ್ತವೆ. ಗಗನಕ್ಕೇರುತ್ತಿರುವ ಹಿಂಸೆಯು ಭಯವನ್ನು ವರ್ಧಿಸುತ್ತದೆ. ಏಯ್ಡ್ಸ್ ರೋಗವು ಶತಮಾನದ ಅತ್ಯಂತ ಪ್ರಾಣಾಂತಕ ಸಾಂಕ್ರಾಮಿಕವಾಗುವುದೆಂದು ಅನೇಕರು ಭಯಭರಿತರಾಗಿದ್ದಾರೆ. ಭಯದ ಇನ್ನಿತರ ಕಾರಣಗಳಲ್ಲಿ ನಮ್ಮ ಪರಿಸರದ ನಾಶನವೂ ಸೇರಿದೆ. ಈ ಭಯಗಳು ವಿಶೇಷವಾಗಿ ಅರ್ಥಗರ್ಭಿತವಾಗಿವೆಯೊ? ಇಂತಹ ಭಯವಿಲ್ಲದ ಒಂದು ಲೋಕದಲ್ಲಿ ಜೀವಿಸಲು ನಾವು ಎಂದಾದರೂ ನಿರೀಕ್ಷಿಸಬಲ್ಲೆವೊ?
ಲೋಕವ್ಯಾಪಕ ಭಯವು ಅರ್ಥಗರ್ಭಿತ
ಬೈಬಲಿನಲ್ಲಿ ಏನನ್ನು ಮುಂತಿಳಿಸಲಾಗಿತ್ತೊ ಅದರಿಂದಾಗಿ ಇಂದಿನ ವ್ಯಾಪಕವಾದ ಭಯವು ಅರ್ಥಗರ್ಭಿತವಾಗಿದೆ. ಕಡೇ ದಿವಸಗಳ ಕುರಿತಾದ ತನ್ನ ಪ್ರವಾದನೆಯಲ್ಲಿ, ಭಯವನ್ನು ಉಂಟುಮಾಡುವ ಪರಿಸ್ಥಿತಿಗಳನ್ನು ಯೇಸು ಕ್ರಿಸ್ತನು ಉದ್ಧರಿಸಿದನು. ಅವನಂದದ್ದು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು.” “ಅಧರ್ಮವು ಹೆಚ್ಚಾಗು” ವುದರ ಕುರಿತು ಕೂಡ ಯೇಸು ಮಾತಾಡಿದನು. ಇಸವಿ 1914 ರಂದಿನಿಂದ, ಅಸಮಾನವಾದ ಯುದ್ಧಗಳು, ಬರಗಾಲಗಳು, ಭೂಕಂಪಗಳು, ಮತ್ತು ಅಧರ್ಮವು ಮಹಾ ಭೀತಿಯನ್ನು ಮತ್ತು ಜೀವದ ನಷ್ಟವನ್ನು ಫಲಿಸಿವೆ.—ಮತ್ತಾಯ 24:7-14.
ಜನರ ಮನೋಭಾವಗಳು ಕೂಡ ಇಂದು ಭಯವನ್ನು ಹುಟ್ಟಿಸುತ್ತವೆ. ಎರಡನೆಯ ತಿಮೊಥೆಯ 3:1-4 ರಲ್ಲಿ, ಅಪೊಸ್ತಲ ಪೌಲನ ಪ್ರವಾದನಾತ್ಮಕ ಮಾತುಗಳನ್ನು ನಾವು ಓದುತ್ತೇವೆ: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ . . . ಆಗಿರುವರು.” ಈ ಕಡೇ ದಿವಸಗಳಲ್ಲಿ ನಾವು ಇಂತಹ ಜನರಿಂದ ಸುತ್ತುವರಿಯಲ್ಪಟ್ಟಿರುವುದರಿಂದ, ಇಷ್ಟೊಂದು ಭಯ ಇರುವುದರಲ್ಲಿ ಆಶ್ಚರ್ಯವೇನೂ ಇಲ್ಲ!
ಈ ಲೋಕವು ನಿರೀಕ್ಷಿಸಬಲ್ಲ ವಿಷಯ
ಈ ಅವಧಿಯನ್ನು ಯೇಸು ನೋಹನ ಸಮಯದ ಲೋಕದ ಕಡೇ ದಿವಸಗಳಿಗೆ ಹೋಲಿಸಿದನು. ಆಗ ಭಯವು ಬಹಳವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ, ಯಾಕೆಂದರೆ ಬೈಬಲಿನ ಐತಿಹಾಸಿಕ ವರದಿಯು ಹೇಳುವುದು: “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು; ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು.” ಆದಕಾರಣ, “ದೇವರು ನೋಹನಿಗೆ—ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ.” (ಆದಿಕಾಂಡ 6:11, 13) ಆ ದುಷ್ಟ ಲೋಕವು ಎಷ್ಟು ಹಿಂಸಾತ್ಮಕವಾಗಿತ್ತೆಂದರೆ, ಒಂದು ಭೌಗೋಲಿಕ ಜಲಪ್ರಳಯದ ಮೂಲಕ ದೇವರು ಅದಕ್ಕೊಂದು ಅಂತ್ಯವನ್ನು ತಂದನು. ಹಾಗಿದ್ದರೂ, ಪ್ರೀತಿಯಿಂದ ಯೆಹೋವ ದೇವರು ನೀತಿವಂತ ನೋಹನನ್ನು ಮತ್ತು ಅವನ ಕುಟುಂಬವನ್ನು ಕಾಪಾಡಿದನು.—2 ಪೇತ್ರ 2:5.
ಆದುದರಿಂದ ಈ ಪ್ರಸ್ತುತ ಹಿಂಸಾತ್ಮಕ ಲೋಕವು ಏನನ್ನು ನಿರೀಕ್ಷಿಸಬಲ್ಲದು? ಒಳ್ಳೇದು, ಇತರರ ಕ್ಷೇಮಕ್ಕಾಗಿ ಹಿಂಸಾತ್ಮಕವಾದ ಅನಾದರವನ್ನು ದೇವರು ಹೇಸುತ್ತಾನೆ. ಕೀರ್ತನೆಗಾರನ ಮಾತುಗಳಿಂದ ಇದು ಸ್ಪಷ್ಟವಾಗಿಗುತ್ತದೆ: “ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ.” (ಕೀರ್ತನೆ 11:5) ನೋಹನ ದಿನದ ಹಿಂಸಾತ್ಮಕ ಲೋಕಕ್ಕೆ ಒಂದು ಅಂತ್ಯವನ್ನು ಯೆಹೋವನು ತಂದನು. ಹಾಗಿರುವಲ್ಲಿ, ಭಯ ಹುಟ್ಟಿಸುವ ಹಿಂಸೆಯಿಂದ ಬಾಧಿಸಲ್ಪಡುವ ಈ ಲೋಕಕ್ಕೆ ದೇವರು ಅಂತ್ಯವನ್ನು ತರುವನೆಂದು ನಾವು ನಿರೀಕ್ಷಿಸಬಾರದೊ?
ಕ್ರಿಸ್ತನ ಸಾನ್ನಿಧ್ಯದ ಕುರಿತು ಮಾತಾಡಲು ಮತ್ತು ಪ್ರಸ್ತುತ ದುಷ್ಟ ಲೋಕಕ್ಕಾಗಿ ಗಂಡಾಂತರವನ್ನು ಪ್ರವಾದಿಸಲು ಅಪೊಸ್ತಲ ಪೇತ್ರನು ದೈವಿಕವಾಗಿ ಪ್ರೇರೇಪಿಸಲ್ಪಟ್ಟಿದ್ದನು. ಅವನು ಬರೆದದ್ದು: “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಾ.” ಮಾನವಕುಲದ ಮೇಲೆ ಅಪರಿಪೂರ್ಣ ಆಳಿಕೆಯ ವ್ಯವಸ್ಥೆಯನ್ನು ಪ್ರತಿನಿಧಿಸಲು “ಆಕಾಶಗಳು” ಎಂಬ ಪದವನ್ನು ಮತ್ತು ಅನೀತಿಯ ಮಾನವ ಸಮಾಜಕ್ಕಾಗಿ “ಭೂಮಿ” ಎಂಬ ಪದವನ್ನು ಪೇತ್ರನು ಆಮೇಲೆ ಉಪಯೋಗಿಸಿದನು. ಅವನು ಹೇಳುವುದು, “ಹೀಗೆ ಮಾತಾಡುವವರು ಒಂದು ಸಂಗತಿಯನ್ನು ತಿಳಿದರೂ ಬೇಕೆಂದು ಮರೆತುಬಿಡುತ್ತಾರೆ; ಅದೇನಂದರೆ—ಪೂರ್ವಕಾಲದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನಿಂದ ಉಂಟಾಗಿ ನೀರಿನಿಂದ ಆಧಾರಗೊಂಡಿರುವಲ್ಲಿ ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು [ನೋಹನ ದಿನ] ಜಲಪ್ರಲಯದಲ್ಲಿ ನಾಶವಾಯಿತು. ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.”—2 ಪೇತ್ರ 3:3-7.
ಕ್ರಿಸ್ತನು ಮತ್ತು ಅವನ ಶಕ್ತಿಶಾಲಿ ದೇವದೂತರು “ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು. . . . ಅಂಥವರು . . . ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು,” ಎಂದು ಪೌಲನು ಅದೇ ರೀತಿಯ ಒಂದು ಯೋಚನಾಸರಣಿಯಲ್ಲಿ ಸೂಚಿಸಿದನು. (2 ಥೆಸಲೊನೀಕ 1:6-9) ಬೈಬಲಿನ ಕೊನೆಯ ಪುಸ್ತಕವು “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ” ರಾಷ್ಟ್ರಗಳ ಕೂಡಿಸುವಿಕೆಯ ಕುರಿತು ಮಾತಾಡುತ್ತದೆ ಮತ್ತು ಯೆಹೋವನು “ಲೋಕನಾಶಕರನ್ನು ನಾಶಮಾಡು” ವನೆಂದು ನಮಗೆ ಆಶ್ವಾಸನೆ ಕೊಡುತ್ತದೆ.—ಪ್ರಕಟನೆ 11:18; 16:14-16.
ಭಯಕ್ಕಲ್ಲ, ಆನಂದಕ್ಕಾಗಿ ಒಂದು ಸಮಯ
ಈ ಲೋಕಕ್ಕಾಗಿ ಬೈಬಲ್ ಮುಂತಿಳಿಸುವ ವಿಷಯದಿಂದ ಭಯಭೀತರಾಗುವ ಬದಲು, ನೀತಿವಂತ ಜನರಿಗೆ ಆನಂದಪಡಲು ಕಾರಣವಿದೆ. ಈ ದುಷ್ಟ ಲೋಕಕ್ಕೆ ಯೆಹೋವನು ಬೇಗನೆ ಅಂತ್ಯವನ್ನು ತರುವನು, ಆದರೆ ಇದು ನೀತಿಯನ್ನು ಪ್ರೀತಿಸುವವರ ಒಳಿತಿಗಾಗಿ ಮಾಡಲಾಗುವುದು. ಪ್ರಸ್ತುತ ವಿಷಯಗಳ ವ್ಯವಸ್ಥೆಯ ದೈವಿಕ ಅಂತ್ಯವನ್ನು ಯಾವುದು ಹಿಂಬಾಲಿಸುವುದು? ಯಾವುದಕ್ಕಾಗಿ ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿಕೊಟ್ಟನೋ ಆ ದೇವರ ಸ್ವರ್ಗೀಯ ರಾಜ್ಯದ ಕೆಳಗೆ ಒಂದು ಹೊಸ ವ್ಯವಸ್ಥೆಯೇ! ಅವನಂದದ್ದು: “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ಭೂಮಿಯ ಮೇಲೆ ದೇವರ ಚಿತ್ತವು ನೆರವೇರಿದಾಗ, ಯಾವ ಬದಲಾವಣೆಗಳನ್ನು ನಿರೀಕ್ಷಿಸಸಾಧ್ಯವಿದೆ?
ಯುದ್ಧ ಮತ್ತು ಅದರ ಭೀತಿಯು ಕೊನೆಗೊಂಡಿರುವವು. ಕೀರ್ತನೆ 46:9 ಹೇಳುವುದು: “[ಯೆಹೋವ ದೇವರು] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.” ಆಗ ಜನರು “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:4.
ಮಾರಕ ರೋಗಗಳು ಇನ್ನು ಮುಂದೆ ಭಯವನ್ನುಂಟುಮಾಡವು ಮತ್ತು ಜೀವಗಳನ್ನು ತೆಗೆದುಕೊಳ್ಳವು. ದೈವಿಕ ವಾಗ್ದಾನವು: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು,” ಎಂದಾಗಿದೆ. (ಯೆಶಾಯ 33:24) ಆನಂದಕ್ಕಾಗಿ ಎಂತಹ ಒಂದು ಕಾರಣ!
ದುಷ್ಕೃತ್ಯ ಮತ್ತು ಹಿಂಸೆಯೊಂದಿಗೆ ಜೊತೆಗೂಡಿರುವ ಭಯಗಳು ಕೂಡ ಗತಿಸಿಹೋದ ವಿಷಯಗಳಾಗಿರುವುವು. ಕೀರ್ತನೆ 37:10, 11 ವಾಗ್ದಾನಿಸುವುದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”
ಪ್ರಚಲಿತ ದಿನದ ಭಯಗಳು ನಿಜ ಶಾಂತಿ ಮತ್ತು ಭದ್ರತೆಯ ಮೂಲಕ ಹೇಗೆ ಪುನರ್ಭರ್ತಿಮಾಡಲ್ಪಡುವವು? ಒಂದೇ ಒಂದು ನೀತಿಯ ಸರಕಾರದ ಮೂಲಕ—ದೇವರ ರಾಜ್ಯ. ನಮ್ಮ ಸಮಯದ ಕುರಿತು, ದಾನಿಯೇಲ 2:44 ಹೇಳುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಯೆಹೋವನ ನೇಮಿತ ಅರಸನಾದ ಯೇಸು ಕ್ರಿಸ್ತನು, ‘ದೇವರು ಅವನ ಪಾದಗಳ ಕೆಳಗೆ ಎಲ್ಲಾ ವಿರೋಧಿಗಳನ್ನು ಹಾಕುವ ತನಕ ಆಳಬೇಕು.’ (1 ಕೊರಿಂಥ 15:25) ಆನಂದಭರಿತ ಮಾನವರಿಂದ ಅನಂತವಾಗಿ ನಿವಾಸಿಸಲ್ಪಡುವ ಒಂದು ಪ್ರಮೋದವನ ಭೂಮಿಯು ಇರಬೇಕೆಂಬ ದೇವರ ಮೂಲಭೂತ ಉದ್ದೇಶವನ್ನು ಯೇಸುವಿನ ಸಹಸ್ರ ವರ್ಷದಾಳಿಕೆಯು ನೆರವೇರಿಸುವುದು.—ಲೂಕ 23:43; ಪ್ರಕಟನೆ 20:6; 21:1-5.
ಆ ಪ್ರಮೋದವನ ಭೂಮಿಯಲ್ಲಿ, ಏಕೈಕ ಆರೋಗ್ಯಕರವಾದ ಭಯವಿರುವುದು. ಅದು “ಯೆಹೋವನ ಭಯ” ವಾಗಿರುವುದು. (ಜ್ಞಾನೋಕ್ತಿ 1:7) ವಾಸ್ತವವಾಗಿ, ನಾವು ಈ ಭಯವನ್ನು ಈಗಲೂ ಹೊಂದಿರಬೇಕು, ಯಾಕೆಂದರೆ ಅದು ಆತನ ಒಳ್ಳೆಯತನ ಮತ್ತು ಪ್ರೀತಿಯ ದಯೆಯನ್ನು ನಾವು ಗಣ್ಯಮಾಡುವುದರಿಂದ ದೇವರನ್ನು ಅಸಂತುಷ್ಟಗೊಳಿಸುವ ಭಯದೊಂದಿಗೆ ಜೊತೆಸೇರಿರುವ ಆಳವಾದ ಭಯಭಕ್ತಿ ಮತ್ತು ಗೌರವವಾಗಿದೆ. ಈ ಭಯವು ಯೆಹೋವನಲ್ಲಿ ಪೂರ್ಣ ಭರವಸೆಯನ್ನು ಮತ್ತು ಆತನಿಗೆ ನಂಬಿಗಸ್ತ ವಿಧೇಯತೆಯನ್ನು ಅವಶ್ಯಪಡಿಸುತ್ತದೆ.—ಕೀರ್ತನೆ 2:11; 115:11.
ಭಯಂಕರವಾದ ಘಟನೆಗಳು ಈ ದಿನಗಳನ್ನು ಕಡೇ ದಿವಸಗಳೆಂದು ಗುರುತಿಸುತ್ತವೆ. ದೇವರಿಗಾಗಿರುವ ನಮ್ಮ ಪ್ರೀತಿಯನ್ನು ನಾವು ರುಜುಪಡಿಸಿದರೆ, ಭಯಭರಿತರಾಗಿರುವ ಬದಲು ನಾವು ಹರ್ಷಿತರಾಗಿರಬಲ್ಲೆವು. ಈ ಲೋಕದ ದೈವಿಕ ಕೊನೆಗಾಣಿಸುವಿಕೆಯು ಹತ್ತಿರವಿದೆಯೆಂದು ಬೈಬಲ್ ಪ್ರವಾದನೆಗಳು ತೋರಿಸುತ್ತವೆ. ಅದು ಯೆಹೋವ ದೇವರ ವಾಗ್ದಾನಿತ ನೀತಿಯ ಹೊಸ ಲೋಕದ ಮೂಲಕ ಪುನರ್ಭರ್ತಿಗೊಳ್ಳುವುದು. (2 ಪೇತ್ರ 3:13) ನಿಶ್ಚಯವಾಗಿಯೂ, ರಾಜ್ಯದಾಳಿಕೆಯ ಕೆಳಗೆ ಬೇಗನೆ ಅಹಿತಕರವಾದ ಭಯವಿಲ್ಲದ ಒಂದು ಲೋಕವು ಇರುವುದು.
[ಪುಟ 6 ರಲ್ಲಿರುವ ಚೌಕ]
ಏಕೈಕ ಪ್ರತಿಯ ಶಕ್ತಿ
ಪೋಲೆಂಡ್ನ ಒಬ್ಬ ಯುವ ಪುರುಷನಾದ ಟಾಮಾಶ್, ತಾನು ದೇಶವನ್ನು ಬಿಟ್ಟುಓಡುವಂತೆ ಅವನನ್ನು ಮಾಡಿದ ನ್ಯಾಯಸಂಬಂಧವಾದ ತೊಂದರೆಯೊಳಗೆ ಸಿಕ್ಕಿಕೊಂಡನು. ಆರು ತಿಂಗಳುಗಳ ಕಾಲ ಅವನು ಒಂದು ಗುಡಾರದಲ್ಲಿ ಮಲಗುತ್ತಾ ಮತ್ತು ಹಲವಾರು ಉದ್ಯೋಗಗಳಲ್ಲಿ ಕೆಲಸಮಾಡುತ್ತಾ, ಯೂರೋಪಿನಾದ್ಯಂತ ಪ್ರಯಾಣಿಸಿದನು. ಈ ನಡುವೆ, ಒಂದು ಪ್ರಶ್ನೆಯು ಸತತವಾಗಿ ಅವನ ಮನಸ್ಸಿನಲ್ಲಿತ್ತು: ಜೀವಿತದ ಉದ್ದೇಶವೇನು?
ಪೋಲಿಷ್ ಭಾಷೆಯಲ್ಲಿ ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯು ಅವನಿಗೆ ಕೊಡಲ್ಪಟ್ಟಾಗ, ಟಾಮಾಶನ ಪ್ರಶ್ನೆಯು ಉತ್ತರಿಸಲ್ಪಟ್ಟಿತು. ಅದನ್ನು ಅವನು ಹಲವಾರು ಬಾರಿ ಓದಿದನು ಮತ್ತು ಅವನು ಹುಡುಕುತ್ತಾ ಇದ್ದ ಸತ್ಯವನ್ನು ಈ ಪತ್ರಿಕೆಯು ಹೊಂದಿದೆ ಎಂದು ಗುರುತಿಸಿದನು. ಜರ್ಮನಿಯ ಸೆಲ್ಟರ್ಜ್⁄ಟೌನುಸ್ನಲ್ಲಿರುವ ವಾಚ್ ಟವರ್ ಬ್ರಾಂಚ್ ಆಫೀಸಿಗೆ 200 ಕಿಲೋಮೀಟರುಗಳ ಪ್ರಯಾಣವನ್ನು ಟಾಮಾಶ್ ಬೆಳೆಸಿದನು. ಸೋಮವಾರ ಸಂಜೆ ತಲಪುತ್ತಾ, ಅವನು ತನ್ನ ಕಾವಲಿನಬುರುಜು ಪತ್ರಿಕೆಯನ್ನು ಎತ್ತಿಹಿಡಿದು ಅಂದದ್ದು: “ಈ ಪತ್ರಿಕೆಯಲ್ಲಿರುವ ವಿಷಯದ ಕುರಿತು ಹೆಚ್ಚನ್ನು ಯಾರಾದರೂ ವಿವರಿಸುವಂತೆ ನಾನು ಬಯಸುತ್ತೇನೆ. ನಾನು ಏನು ಮಾಡುವ ಅಗತ್ಯವಿದೆ?”
ಆ ಸಂಜೆ, ಯೆಹೋವನ ಸಾಕ್ಷಿಗಳಲ್ಲಿ ಇಬ್ಬರು, ತಮ್ಮ ಸಂಭಾಷಣೆಗೆ ಬೈಬಲನ್ನು ಆಧಾರವಾಗಿ ಉಪಯೋಗಿಸುತ್ತಾ ಜೀವಿತದ ಉದ್ದೇಶದ ಕುರಿತು ಟಾಮಾಶನೊಂದಿಗೆ ಮಾತಾಡಿದರು. ಹೆಚ್ಚನ್ನು ಕಲಿಯಲು ಆತುರನಾಗಿದ್ದ ಟಾಮಾಶ್, ಬೈಬಲನ್ನು ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಅಭ್ಯಸಿಸುತ್ತಾ, ಆ ವಾರದಲ್ಲಿ ಪ್ರತಿಯೊಂದು ದಿನ ಬ್ರಾಂಚ್ ಆಫೀಸಿಗೆ ಹಿಂದಿರುಗಿದನು.
ಪೋಲೆಂಡಿನಲ್ಲಿ ತಾನು ಸಮಸ್ಯೆಗಳನ್ನು ಎದುರಿಸಸಾಧ್ಯವಿದ್ದರೂ, ಅಲ್ಲಿಗೆ ಹಿಂದಿರುಗಲು ಟಾಮಾಶ್ ನಿರ್ಧರಿಸಿದನು. ಹೀಗೆ, ಶುಕ್ರವಾರದಂದು, ಸೆಲ್ಟರ್ಜ್ ಬ್ರಾಂಚ್ ಆಫೀಸಿಗೆ ತಲಪಿದ ಕೇವಲ ನಾಲ್ಕು ದಿನಗಳ ತರುವಾಯ, ಟಾಮಾಶ್ ತನ್ನ ಸ್ವದೇಶಕ್ಕೆ ಹಿಂದಿರುಗಿದನು. ಅವನು ಕೂಡಲೇ ಪೋಲೆಂಡ್ನಲ್ಲಿರುವ ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಸಿಸಲು ಆರಂಭಿಸಿದನು. ಟಾಮಾಶ್ ತೀವ್ರ ಪ್ರಗತಿಯನ್ನು ಮಾಡಿದನು ಮತ್ತು ಅವನು ಕಲಿಯುತ್ತಿದ್ದ ವಿಷಯಗಳ ಕುರಿತು ಇತರರೊಂದಿಗೆ ಹುರುಪಿನಿಂದ ಮಾತಾಡಲು ತೊಡಗಿದನು. ಅಕ್ಟೋಬರ 1993 ರಲ್ಲಿ, ಸೆಲ್ಟರ್ಜ್ಗೆ ಅವನ ಪ್ರಥಮ ಭೇಟಿಯ ಕೇವಲ ನಾಲ್ಕು ತಿಂಗಳುಗಳ ತರುವಾಯ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಂತೆ ಅವನು ದೀಕ್ಷಾಸ್ನಾನ ಪಡೆದುಕೊಂಡನು.
ಜೀವಿತದ ಉದ್ದೇಶವನ್ನು ಕಂಡುಹಿಡಿಯಲು ಕಾವಲಿನಬುರುಜು ಪತ್ರಿಕೆಯ ಕೇವಲ ಒಂದು ಪ್ರತಿಯು ಈ ಯುವ ಪುರುಷನಿಗೆ ಸಹಾಯಮಾಡಿತು!
[ಪುಟ 7 ರಲ್ಲಿರುವ ಚಿತ್ರ]
ಯೇಸು ಕ್ರಿಸ್ತನ ರಾಜ್ಯದಾಳಿಕೆಯ ಕೆಳಗೆ, ಭಯವು ಇನ್ನೆಂದೂ ಲೋಕವನ್ನು ಬಿಗಿಯಾಗಿ ಹಿಡಿಯದು