ವಿಫಲವಾಗದ ಧೈರ್ಯದ ಮೂಲನು
“ಒಂದು ಬುಸ್ ಅನ್ನುವ ಶಬ್ದವು ನಮ್ಮನ್ನು ನಮ್ಮ ಹಾದಿಯಲ್ಲಿ ಥಟ್ಟನೆ ನಿಲ್ಲುವಂತೆ ಮಾಡಿತು. ಆಮೇಲೆ, ನಮ್ಮ ಎಡ ಬದಿಯಲ್ಲಿದ್ದ ಒಂದು ಪೊದೆಯಿಂದ ಎರಡು ಪಕ್ಷಿಗಳು ನಮ್ಮ ಕಡೆಗೆ ಹರಡಿದ ರೆಕ್ಕೆಗಳೊಂದಿಗೆ ಓಡಿ ಬಂದವು. ನಮ್ಮ ಮುಂದೆ, ನೆಲದಲ್ಲಿದ್ದ ಒಂದು ಸಣ್ಣ ತಗ್ಗಿನಲ್ಲಿ ಎರಡು ಮೊಟ್ಟೆಗಳು ಇದ್ದವು. ಆಕಸ್ಮಿಕವಾಗಿ ತಮ್ಮ ಗೂಡಿನ ಮೇಲೆ ಹೆಜ್ಜೆಯಿಡುವುದರಿಂದ ಪಕ್ಷಿಗಳು ನಮ್ಮನ್ನು ತಡೆದಿದ್ದವು. ನಾವು ಪ್ರತಿ ಬಾರಿ ಹತ್ತಿರ ಹೋಗಿ, ಕಂದು ಬಣ್ಣದ ಕಲೆಗಳಿದ್ದ ಸುಂದರ ಮೊಟ್ಟೆಗಳ ಛಾಯಾಚಿತ್ರವನ್ನು ತೆಗೆಯಲು ಪ್ರಯತ್ನಿಸಿದಾಗಲೆಲ್ಲಾ, ಪಕ್ಷಿಗಳು ತಮ್ಮ ಬೆದರಿಕೆಯ ಪ್ರದರ್ಶನವನ್ನು ಪುನರಾವೃತ್ತಿಸಿದವು. ‘ಎಷ್ಟು ಧೈರ್ಯವುಳ್ಳವುಗಳು,’ ಎಂದು ನಾವು ಯೋಚಿಸಿದೆವು.”
ಒಂದು ಚುಕ್ಕೆ ಡಿಕಾಪ್ ಪಕ್ಷಿಯ ಗೂಡನ್ನು ಸಮೀಪಿಸಿದಾಗ, ನಾಲ್ಕು ವಯಸ್ಕರ ಅನುಭವವು ಅದಾಗಿತ್ತು. ಇನ್ನೂ ಚಿಕ್ಕದಾಗಿರುವ ಒಂದು ಪಕ್ಷಿಯು ಬ್ಲ್ಯಾಕ್‌ಸ್ಮಿತ್ ಪ್ಲೋವರ್ ಆಗಿದೆ. ದಕ್ಷಿಣ ಆಫ್ರಿಕನ್ ಪಕ್ಷಿಗಳಿಗೆ ಪ್ರತಿಯೊಬ್ಬರ ಮಾರ್ಗದರ್ಶಕ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಪಕ್ಷಿಶಾಸ್ತ್ರಜ್ಞರಾದ ಸಿಂಕ್ಲೇರ್ ಮತ್ತು ಮೆಂಡಲ್‌ಸನ್ ವಿವರಿಸುವುದು: “ತಮ್ಮ ಗೂಡನ್ನು ಮತ್ತು ಮರಿಗಳನ್ನು, ಮರಿಹಾಕುವ ಜೊತೆಗಳು ಹುರುಪಿನಿಂದ ಸಂರಕ್ಷಿಸುತ್ತವೆ ಮತ್ತು ಯಾವನೇ ಒಳನುಗ್ಗುವವನ ಸಮೀಪಿಸುವಿಕೆಯಿಂದ ಬಹಳ ಆಕ್ರಮಣ ಪ್ರವೃತ್ತಿಯದಾಗ್ದುತ್ತವೆ. ಅತಿಕ್ರಯಿಸುವವನ ಗಾತ್ರದಿಂದ ಧೈರ್ಯಗೆಡದೆ, ಅವು ಕಠೋರವಾಗಿ ಕೂಗಿ ಹಾರುತ್ತಾ, ಎಚ್ಚರಿಸುವ ಪ್ರಯತ್ನದಿಂದ ಮನುಷ್ಯರ ಕಡೆಗೂ ಭಯರಹಿತವಾಗಿ ಧುಮುಕುತ್ತವೆ.”
ಒಂದೊಂದಾಗಿರುವ ದೊಡ್ಡ ಆನೆಗಳು ಉದ್ದೇಶಪೂರ್ವಕವಾಗಿ ಅಲ್ಲದೆಯೂ ಒಂದು ಬ್ಲ್ಯಾಕ್‌ಸ್ಮಿತ್ ಪ್ಲೋವರ್‌ನ ಗೂಡಿನ ಕಡೆಗೆ ನಡೆಯುವುದನ್ನು—ಮತ್ತು ಪ್ರಕ್ಷಿಯು ಪ್ರದರ್ಶನವನ್ನು ಆರಂಭಿಸುವುದನ್ನು—ಕೆಲವರು ವೀಕ್ಷಿಸಿದ್ದಾರೆ. ಆನೆಗಳು ಸಾಮಾನ್ಯವಾಗಿ ಅಡದ್ಡಾರಿಯನ್ನು ಹಿಡಿಯುವ ಮೂಲಕ ಆದರ ತೋರಿಸುತ್ತವೆ.
ಇಂತಹ ಸ್ಪಷ್ಟ ಧೈರ್ಯವನ್ನು ಪಕ್ಷಿಗಳು ಎಲ್ಲಿಂದ ಪಡೆಯುತ್ತವೆ? ಅವುಗಳನ್ನು ಸೃಷ್ಟಿಸಿದಾತನಿಂದ ಅದು ಉದ್ಭವಿಸುತ್ತದೆ. ಅವುಗಳ ಗೂಡುಗಳಿಗೆ ಯಾ ಚಿಕ್ಕ ಮರಿಗಳಿಗೆ ದೊಡ್ಡ ಪ್ರಾಣಿಗಳು ಹಾನಿಯನ್ನು ಮಾಡುವುದರಿಂದ ತಡೆಯಲು, ಯೆಹೋವನು ಈ ಚಿಕ್ಕ ಜೀವಿಗಳನ್ನು ಸಹಜಪ್ರವೃತ್ತಿಯ ಕೌಶಲದೊಂದಿಗೆ ಯೋಜಿಸಿದ್ದಾನೆ.
ಕ್ರೈಸ್ತರಿಗೆ ಒಂದು ಪಾಠ
ಕೇವಲ ಸಹಜಪ್ರವೃತ್ತಿಯ ಧೈರ್ಯವನ್ನು ಮೀರಿ ಹೋಗುವುದು ಕ್ರೈಸ್ತರಿಗೆ ಅವಶ್ಯವಾದರೂ, ಅವರು ಇದರಿಂದ ಒಂದು ಪಾಠವನ್ನು ಕಲಿಯಬಲ್ಲರು. ದೇವರ ಆಜೆಗ್ಞಳಿಗೆ ಭಯಪಡದೆ ವಿಧೇಯತೆ ತೋರಿಸಿದ ತಮ್ಮ ಯಜಮಾನನಾದ ಯೇಸು ಕ್ರಿಸ್ತನನ್ನು ಅನುಕರಿಸುವಂತೆ ಅವರು ಕೇಳಿಕೊಳ್ಳಲ್ಪಡುತ್ತಾರೆ. (ಇಬ್ರಿಯ 12:1-3) ದೇವರನ್ನು ಸೇವಿಸುವುದರಿಂದ ಹಿಂಜರಿಯುವ ಹೇಡಿಗಳನ್ನು ಬೈಬಲ್ ಖಂಡಿಸುತ್ತದೆ. (ಇಬ್ರಿಯ 10:39; ಪ್ರಕಟನೆ 21:8) ಅದೇ ಸಮಯದಲ್ಲಿ, ಯೆಹೋವನು ನಮ್ಮ ಅಪರಿಪೂರ್ಣ ರಚನೆಯನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಾವು ಕೆಲವೊಮ್ಮೆ ಪಾಪ ಮಾಡಬಹುದೆಂದು ಯಾ ಆತನ ಚಿತ್ತವನ್ನು ಪೂರ್ಣವಾಗಿ ಮಾಡಲು ಬೇಕಾಗಿರುವ ಧೈರ್ಯದ ಕೊರತೆಯುಳ್ಳವರಾಗಿರಬಹುದೆಂದು ಆತನು ಬಲ್ಲವನಾಗಿದ್ದಾನೆ. (ಕೀರ್ತನೆ 103:12-14) ಸರಿಯಾಗಿರುವುದನ್ನು ಮಾಡುವುದರಿಂದ ಭಯವು ಒಬ್ಬ ವ್ಯಕ್ತಿಯನ್ನು ತಡೆದು ಹಿಡಿಯುವುದಾದರೆ, ಅವನು ಏನು ಮಾಡಬಲ್ಲನು?
ತೊಂದರೆಗಳನ್ನು ಎದುರಿಸಲು ಮತ್ತು ದೈವಿಕ ಚಿತ್ತವನ್ನು ಮಾಡುತ್ತಾ ಇರಲು ಬೇಕಾದ ಬಲಕ್ಕಾಗಿ, ಕ್ರೈಸ್ತನೊಬ್ಬನು ಪ್ರಾರ್ಥನಾಪೂರ್ವಕವಾಗಿ ದೇವರ ಕಡೆಗೆ ತಿರುಗಬೇಕು. ಬೈಬಲು ಯೆಹೋವನ ಸಹಾಯದ ಈ ಭರವಸೆ ಕೊಡುವ ವಾಗ್ದಾನವನ್ನು ಹೊಂದಿದೆ: “ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. ಯುವಕರೂ ದಣಿದು ಬಳಲುವರು, ತರುಣರೂ ಸೊರಗಿ ಮುಗ್ಗರಿಸುವರು. ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು.” (ಯೆಶಾಯ 40:29-31) ಅನೇಕ ಅಪರಿಪೂರ್ಣ ಮಾನವರು ಈ ಮಾತುಗಳ ಸತ್ಯವನ್ನು ಅನುಭವಿಸಿದ್ದಾರೆ ಮತ್ತು ‘ದುರ್ಬಲ ಸ್ಥಿತಿಯಿಂದ ಶಕ್ತಿಶಾಲಿಗಳಾಗಿ ಮಾಡಲ್ಪಟ್ಟಿದ್ದಾರೆ.’ (ಇಬ್ರಿಯ 11:34) ಹೀಗೆ ಬರೆದ ಕ್ರೈಸ್ತ ಅಪೊಸ್ತಲ ಪೌಲನು ಒಳ್ಳೆಯ ಮಾದರಿಯಾಗಿದ್ದನು: “ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ ಅನ್ಯಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು.”—2 ತಿಮೊಥೆಯ 4:17.
ಯೇಸು ಕ್ರಿಸ್ತನ ಹಿಂಬಾಲಕರಾಗಲು ಬಯಸುವ ಹೊಸದಾಗಿ ಅಭಿರುಚಿಯಿರುವ ವ್ಯಕ್ತಿಗಳು ಸಹ, ಇಂತಹ ಬಲಪಡಿಸುವ ನೆರವನ್ನು ಅನುಭವಿಸಬಲ್ಲರು. ತನ್ನ ಚರ್ಚಿನ ಖಜಾಂಚಿಯಾಗಿದ್ದ ಮತ್ತು ಪಾಸ್ಟರ್‌ನ ಪಕ್ಕದ ಮನೆಯಲ್ಲಿ ಜೀವಿಸುತ್ತಿದ್ದ ಹೆನ್ರಿ ಎಂಬ ಹೆಸರಿನ ದಕ್ಷಿಣ ಆಫ್ರಿಕದ ಮನುಷ್ಯನನ್ನು ಪರಿಗಣಿಸಿರಿ. ಹೆನ್ರಿ ಸತ್ಯಕ್ಕಾಗಿ ಹುಡುಕುತ್ತಿದ್ದ. ಚರ್ಚಿನ ಸಂಬಂಧದಲ್ಲಿ ಅವನಿಗಿದ್ದ ಒಲವಿನ ಹೊರತೂ, ಒಂದು ದಿನ ಅವನು ಯೆಹೋವನ ಸಾಕ್ಷಿಗಳೊಂದಿಗೆ ಒಂದು ಉಚಿತ ಮನೆ ಬೈಬಲ್ ಅಧ್ಯಯನದ ನೀಡಿಕೆಯನ್ನು ಸ್ವೀಕರಿಸಿದ. ಸಕಾಲದಲ್ಲಿ, ಒಬ್ಬ ಸಾಕ್ಷಿಯಾಗುವ ಬಯಕೆಯನ್ನು ಅವನು ವ್ಯಕ್ತಪಡಿಸಿದ ಮತ್ತು ಆ ಗುರಿಯನ್ನು ತಲಪಲು ಯಾವ ಹೆಜ್ಜೆಗಳನ್ನು ತಾನು ತೆಗೆದುಕೊಳ್ಳಬೇಕಿದೆಯೆಂದು ಕೇಳಿದ. ತನ್ನ ಚರ್ಚಿನಿಂದ ಮೊದಲು ಅವನು ರಾಜೀನಾಮೆ ಪಡೆಯಬೇಕೆಂದು ವಿವರಿಸಲಾಯಿತು. (ಪ್ರಕಟನೆ 18:4) ಪಾಸ್ಟರ್ ಅವನ ನೆರೆಯವನೂ ಸ್ನೇಹಿತನೂ ಆಗಿದ್ದರಿಂದ, ಕೇವಲ ಒಂದು ರಾಜೀನಾಮೆಯ ಪತ್ರವನ್ನು ತಾನು ಬರೆಯಲು ಸಾಧ್ಯವಿಲ್ಲ ಬದಲಿಗೆ ವಿಷಯವನ್ನು ಮುಖಾಮುಖಿಯಾಗಿ ವಿವರಿಸುವ ಅಗತ್ಯವಿದೆ ಎಂದು ಹೆನ್ರಿ ಭಾವಿಸಿದ. ಇದನ್ನು ಅವನು ಧೈರ್ಯವಾಗಿ ಮಾಡಿದ.
ಪಾಸ್ಟರನು ತಲ್ಲಣಗೊಂಡನು ಮತ್ತು ತದನಂತರ ಹೆನ್ರಿಯನ್ನು ಸಂದರ್ಶಿಸಲು, ಆಡಳಿತ ಸಭೆಯ ಅಧ್ಯಕ್ಷನನ್ನು ಮತ್ತು ಚರ್ಚಿನ ಇತರ ಸದಸ್ಯರನ್ನು ಕೊಂಡೊಯ್ದನು. ಅವರ ಅನುಸಾರ, ದೇವರ ಪವಿತ್ರ ಆತ್ಮವನ್ನು ಹೊಂದಿರದ ಧರ್ಮದ ಒಬ್ಬ ಸದಸ್ಯನಾಗಲು ಅವನು ಯಾಕೆ ತಮ್ಮ ಚರ್ಚನ್ನು ಬಿಟ್ಟನೆಂದು ತಿಳಿಯಲು ಅವರು ಬಯಸಿದರು. “ಮೊದಲಲ್ಲಿ, ಅವರಿಗೆ ಉತ್ತರ ನೀಡಲು ನಾನು ಭಯಪಟ್ಟೆ,” ಎಂದು ಹೆನ್ರಿ ವಿವರಿಸಿದನು, “ಯಾಕೆಂದರೆ ಅವರು ನನ್ನ ಮೇಲೆ ಯಾವಾಗಲೂ ಮಹಾ ಪ್ರಭಾವವನ್ನು ಬೀರಿದ್ದರು. ಆದರೆ ಸಹಾಯಕ್ಕಾಗಿ ನಾನು ಯೆಹೋವನಿಗೆ ಪ್ರಾರ್ಥಿಸಿದೆ, ಮತ್ತು ಆತನು ಈ ಪ್ರತಿವಾದವನ್ನು ಮಾಡುವಂತೆ ನನ್ನನ್ನು ಶಕ್ತಗೊಳಿಸಿದನು: ‘ಎಲ್ಲ ಅಂತಾರಾಷ್ಟ್ರೀಯ ಧರ್ಮಗಳಲ್ಲಿ, ಯೆಹೋವ ಎಂಬ ದೇವರ ಹೆಸರನ್ನು ಬಳಸುವ ಏಕೈಕ ಧರ್ಮವು ಯಾವುದು? ಯೆಹೋವನ ಸಾಕ್ಷಿಗಳಲ್ಲವೊ? ದೇವರು ತನ್ನ ನಾಮವನ್ನು ಧರಿಸುವಂತೆ ಅವರನ್ನು ಅನುಮತಿಸಿ, ಅವರಿಗೆ ತನ್ನ ಪವಿತ್ರ ಆತ್ಮವನ್ನು ಕೊಡದೆ ಇರುವನೆಂದು ನೀವು ನೆನಸುತ್ತೀರೊ?’” ಚರ್ಚಿನ ಅಧಿಕಾರಿಗಳು ಇಂತಹ ವಿವೇಚನಾಯುಕ್ತಿಯನ್ನು ತಪ್ಪೆಂದು ಸ್ಥಾಪಿಸಲು ಅಶಕ್ತರಾದರು. ದೇವರು ಒದಗಿಸುವ ಜ್ಞಾನ ಮತ್ತು ಬಲಕ್ಕಾಗಿ ಆಭಾರಿಯಾದ ಹೆನ್ರಿ, ಈಗ ಧೈರ್ಯದಿಂದ ಯೆಹೋವನ ಸಾಕ್ಷಿಗಳೊಂದಿಗೆ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುತ್ತಾನೆ.
ಹೌದು, ಒಬ್ಬ ಸತ್ಯ ಕ್ರೈಸ್ತನಾಗಿರುವುದು ಧೈರ್ಯವನ್ನು ಕೇಳಿಕೊಳ್ಳುತ್ತದೆ. ಈ ಲೋಕದ ಅಂತ್ಯವು ಸಮೀಪಿಸಿದಂತೆ, ನಂಬಿಕೆಯ ಪರೀಕ್ಷೆಗಳು ಹೆಚ್ಚಾಗುವುವು. ಯೆಹೋವನ ಕಡೆಗಿರುವ ಅವರ ಸಮಗ್ರತೆಯನ್ನು ಮುರಿಯಲು ಪ್ರಯತ್ನಿಸುವ ಮೂಲಕ, ಸೈತಾನನು ದೇವರ ಸೇವಕರನ್ನು ಅನಂತ ಜೀವನದ ತಮ್ಮ ಅದ್ಭುತಕರ ನಿರೀಕ್ಷೆಯಿಂದ ವಂಚಿತರನ್ನಾಗಿ ಮಾಡಬಯಸುತ್ತಾನೆ. (ಹೋಲಿಸಿ ಪ್ರಕಟನೆ 2:10.) ಆದರೆ ನಾವು ಎಂದಿಗೂ ಸೋಲನ್ನೊಪ್ಪಬಾರದು. ಭಯದಿಂದಾಗಿ ತಾತ್ಕಾಲಿಕವಾದೊಂದು ತಡೆಯನ್ನು ನಾವು ಅನುಭವಿಸುವುದಾದರೂ, ಚೇತರಿಸಿಕೊಳ್ಳುವಂತೆ ಯೆಹೋವನು ನಮಗೆ ಸಹಾಯ ಮಾಡಬಲ್ಲನು. ಆತನ ಚಿತ್ತವನ್ನು ಮಾಡುತ್ತಾ ಇರಲು, ಬಲಕ್ಕಾಗಿ ಆತನ ಕಡೆಗೆ ನೋಡುತ್ತಾ ಇರ್ರಿ. ಭಯಪಡದ ಪಕ್ಷಿಗಳನ್ನು ಸೃಷ್ಟಿಸಿದಾತನೇ, ವಿಫಲವಾಗದ ಧೈರ್ಯದ ಮೂಲನಾಗಿದ್ದಾನೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ನಿಶ್ಚಯವಾಗಿ, ನಿಜ ಕ್ರೈಸ್ತರು “ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು? ಎಂದು . . . ಧೈರ್ಯವಾಗಿ” ಹೇಳಬೇಕು.—ಇಬ್ರಿಯ 13:6.