ನೀವು ನಮ್ಮ ಮಹಾ ಶಿಕ್ಷಕನಿಂದ ಕಲಿಯುತ್ತಿದ್ದೀರೊ?
“ನಾನು ಸ್ಪೆಯ್ನ್ನ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲೊಂದರಲ್ಲಿ ಐದು ವರ್ಷಗಳ ಕಾಲ ನ್ಯಾಯಶಾಸ್ತ್ರವನ್ನು ಅಭ್ಯಸಿಸಿದೆ,” ಎಂದು ಕೂಲ್ಯೊ ವಿವರಿಸಿದಳು. “ಆದರೆ ನಾನು ಬೈಬಲನ್ನು ಅಭ್ಯಸಿಸಲು ತೊಡಗಿದಾಗ ಏನನ್ನು ಕಲಿತೆನೊ ಅದು ಬಹಳ ಶ್ರೇಷ್ಠವಾಗಿತ್ತು. ವಿಶ್ವವಿದ್ಯಾನಿಲಯವು ನನಗೆ ಹೇಗೆ ಅಭ್ಯಸಿಸಬೇಕೆಂದು ಕಲಿಸಿತು; ಬೈಬಲು ನನಗೆ ಹೇಗೆ ಜೀವಿಸಬೇಕೆಂದು ಕಲಿಸಿತು.”
ಬೈಬಲಿನ ಮುಖಾಂತರ, ದೇವರ ಆಲೋಚನೆಗಳಿಗೆ, ಆತನ ತತ್ವಗಳಿಗೆ, ಮತ್ತು ಆತನ ಉಪದೇಶಗಳಿಗೆ ನಮಗೆ ಪ್ರವೇಶವಿದೆ. ಶಾಸ್ತ್ರಗಳು ಯೆಹೋವನನ್ನು “ಮಹಾ ಶಿಕ್ಷಕ” ನೆಂದು ವರ್ಣಿಸುತ್ತವೆ ಯಾಕೆಂದರೆ ವಿಶ್ವದಲ್ಲೇ ಆತನು ಅತ್ಯುತ್ತಮ ಬೋಧಕನಾಗಿದ್ದಾನೆ. (ಯೆಶಾಯ 30:20) ಅಕ್ಷರಶಃ, ಹೀಬ್ರು ವಚನವು ಆತನನ್ನು “ಶಿಕ್ಷಕರು”—ಉತ್ಕೃಷ್ಟತೆಯನ್ನು ಸೂಚಿಸುವ ಒಂದು ಬಹುವಚನ—ಎಂದು ಕರೆಯುತ್ತದೆ. ಯೆಹೋವನಿಂದ ಕಲಿಸಲ್ಪಡುವುದು ಬೇರೆ ಯಾವುದೇ ಬೋಧಕನ ಕೆಳಗೆ ಅಭ್ಯಸಿಸುವುದಕ್ಕಿಂತ ಬಹಳ ಶ್ರೇಷ್ಠವಾಗಿದೆ ಎಂಬುದನ್ನು ಇದು ನಮಗೆ ಜ್ಞಾಪಿಸಬೇಕು.
ಯೆಹೋವನಿಂದ ಪ್ರಾಯೋಗಿಕ ವಿವೇಕ
ದೈವಿಕ ಬೋಧನೆಯು ಇಷ್ಟು ಪ್ರಯೋಜನಕಾರಿಯಾಗಿರುವುದೇಕೆ? ಪ್ರಥಮವಾಗಿ, ಅದರ ಅಮೂಲ್ಯ ಒಳವಿಷಯದಿಂದಲೇ. ಯೆಹೋವನ ಬೋಧನೆ ನಮಗೆ “ಪ್ರಾಯೋಗಿಕ ವಿವೇಕ” ವನ್ನು ಕೊಡುತ್ತದೆ. ಇನ್ನೂ ಮೇಲಾಗಿ, ದೇವದತ್ತ ವಿವೇಕವು, ಅದನ್ನು ಕಾರ್ಯರೂಪಕ್ಕೆ ಹಾಕುವವರನ್ನು “ಜೀವಂತ ಬದುಕಿಸುತ್ತದೆ.”—ಜ್ಞಾನೋಕ್ತಿ 3:21, 22, NW; ಪ್ರಸಂಗಿ 7:12, NW.
ಯೆಹೋವನ ವಿವೇಕವು ಅವನನ್ನು ಅವನ ಜೀವನವಿಡೀ ಸಂರಕ್ಷಿಸಿತ್ತೆಂದು 119 ನೆಯ ಕೀರ್ತನೆಯ ರಚನಕಾರನು ಗ್ರಹಿಸಿದನು. ದೃಷ್ಟಾಂತಕ್ಕೆ, ಅವನು ಹಾಡಿದ್ದು: “ನೀನು ಉಸಿರಿದ ಧರ್ಮಶಾಸ್ತ್ರವು ಸಾವಿರಾರು ಚಿನ್ನಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ. ನಿನ್ನ ಧರ್ಮಶಾಸ್ತ್ರವು ನನಗೆ ಆನಂದಕರವಾಗದಿದ್ದರೆ ನನಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತ್ತಿದ್ದೆನು. ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ; ಸದಾಕಾಲವೂ ಅವೇ ನನಗಿವೆ. ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವದರಿಂದ ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.”—ಕೀರ್ತನೆ 119:72, 92, 98, 99.
ಯೆಹೋವನ ಧರ್ಮಶಾಸ್ತ್ರವು ಇರದಿದ್ದಲ್ಲಿ, ‘ತನಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತ್ತಿದ್ದವನು’ ಕೇವಲ ಕೀರ್ತನೆಗಾರನಾಗಿರುತ್ತಿರಲಿಲ್ಲ. ಸ್ಪೆಯ್ನ್ನ ಒಬ್ಬಾಕೆ ಯುವತಿ ರೋಜಾ, ದೈವಿಕ ತತ್ವಗಳನ್ನು ಅನ್ವಯಿಸಿದ್ದರಿಂದಲೇ ಆಕೆಯ ಜೀವವು ರಕ್ಷಿಸಲ್ಪಟ್ಟಿತ್ತೆಂದು ಮನಗಂಡಿದ್ದಾಳೆ. “26ರ ವಯಸ್ಸಿನೊಳಗಾಗಿ, ನಾನು ಆಗಲೇ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ,” ಎಂದು ಆಕೆ ಜ್ಞಾಪಿಸಿಕೊಳ್ಳುತ್ತಾಳೆ.
ರೋಜಾ ವೇಶ್ಯಾವೃತ್ತಿಯಲ್ಲಿ, ಅಷ್ಟೇ ಅಲ್ಲದೆ ಮದ್ಯಪಾನ ಹಾಗೂ ಅಮಲೌಷಧದ ದುರುಪಯೋಗದಲ್ಲಿ ಒಳಗೊಂಡಿದಳ್ದು. “ಒಂದು ದಿನ, ನಾನು ಹತಾಶೆಯ ತಟ್ಟತಳದಲ್ಲಿದ್ದಾಗ,” ಆಕೆ ಹೇಳುವುದು, “ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಬೈಬಲ್ ನಮಗೆ ಹೇಗೆ ಸಹಾಯ ಮಾಡಬಲ್ಲದೆಂದು, ಒಬ್ಬ ಸಾಕ್ಷಿ ದಂಪತಿಗಳು ನನ್ನೊಂದಿಗೆ ಮಾತಾಡಿದರು. ದೇವರ ವಾಕ್ಯದ ಅಭ್ಯಾಸವನ್ನು ನಾನು ಆರಂಭಿಸಿದೆ, ಅದನ್ನು ಆಕರ್ಷಕವಾಗಿ ಕಂಡುಕೊಂಡೆ. ಒಂದು ತಿಂಗಳಿನೊಳಗೆ, ಜೀವನದಲ್ಲಿ ಸಂಪೂರ್ಣವಾದೊಂದು ಹೊಸ ಆರಂಭವನ್ನು ಮಾಡುವ ಬಲ ನನಗಿತ್ತು. ಜೀವನದಲ್ಲಿ ನನಗೀಗ ಒಂದು ಉದ್ದೇಶವಿದ್ದ ಕಾರಣ, ನನಗೆ ಇನ್ನು ಮುಂದೆ ಮದ್ಯಪಾನ ಯಾ ಅಮಲೌಷಧಗಳ ಆಸರೆ ಬೇಕಾಗಿರಲಿಲ್ಲ. ನಾನು ಯೆಹೋವನ ಸ್ನೇಹಿತೆಯಾಗಲು ಬಹಳಷ್ಟು ಬಯಸಿದ್ದರಿಂದ, ಆತನ ಮಟ್ಟಗಳನುಸಾರ ಜೀವಿಸಲು ನಾನು ನಿರ್ಧರಿಸಿದ್ದೆ. ದೇವರ ವಾಕ್ಯದ ಪ್ರಾಯೋಗಿಕ ವಿವೇಕ ಇರದಿದ್ದರೆ, ಇಷ್ಟರೊಳಗೆ ನಾನು ಆತ್ಮಹತ್ಯೆಯನ್ನು ಮಾಡಿಕೊಂಡಿರುತ್ತಿದ್ದೆ ಎಂಬುದು ನಿಶ್ಚಯ.”
ನಿಜವಾಗಿಯೂ, ಯೆಹೋವನಿಂದ ಬರುವ ವಿವೇಕವು ಜೀವರಕ್ಷಿಸುವಂಥದ್ದಾಗಿದೆ. ಆದುದರಿಂದ, ನಾವು ದೈವಿಕ ಬೋಧನೆಯ ಅಮೂಲ್ಯವಾದ ಒಳವಿಷಯದಿಂದ ಪ್ರಯೋಜನ ಪಡೆಯುವುದು ಮಾತ್ರವಲ್ಲ, ತನ್ನ ಸೇವಕರಿಗೆ ಉಪದೇಶ ನೀಡಲು ಯೆಹೋವನು ಉಪಯೋಗಿಸುವ ವಿಧಾನಗಳಿಂದಲೂ ನಾವು ಪ್ರಯೋಜನ ಪಡೆಯುತ್ತೇವೆ. ದೇವರ ಮಗನಾದ ಯೇಸು ಕ್ರಿಸ್ತನು, ಬೋಧಕರಾಗಿಯೂ ಶಿಷ್ಯರನ್ನು ಮಾಡುವವರಾಗಿಯೂ ಇರುವಂತೆ ನಮ್ಮನ್ನು ಆಜ್ಞಾಪಿಸಿರುವುದರಿಂದ, ಉಪದೇಶವನ್ನು ನೀಡುವ ಅತ್ಯಂತ ಪರಿಣಾಮಕಾರಿ ವಿಧಾನಗಳ ಕುರಿತು ಕಲಿಯಲು ನಾವು ಬಯಸುತ್ತೇವೆ.—ಮತ್ತಾಯ 28:19, 20.
ಯೆಹೋವನ ದೃಷ್ಟಾಂತಗಳ ಉಪಯೋಗ
“ಸಾಮ್ಯವಿಲ್ಲದೆ [ಯೇಸು] ಅವರಿಗೆ ಹೇಳಲಿಲ್ಲ,” ಎಂದು ಮಾರ್ಕನ ಸುವಾರ್ತೆಯು ಹೇಳುತ್ತದೆ. (ಮಾರ್ಕ 4:34) ಯೇಸುವಿನ ಬೋಧನೆಯ ಈ ವೈಶಿಷ್ಟ್ಯವು ಆಶ್ಚರ್ಯಪಡಿಸುವಂಥದ್ದಾಗಿಲ್ಲ. ಅವನು ಇಸ್ರಾಯೇಲ್ಯ ಜನಾಂಗಕ್ಕೆ ಯೆಹೋವನ ಪ್ರವಾದನಾತ್ಮಕ ಸಂದೇಶಗಳು ಒಯ್ಯಲ್ಪಟ್ಟ ವಿಧಗಳಲ್ಲಿ ಒಂದನ್ನು ಕೇವಲ ಅನುಕರಿಸಿದನು. ಇವುಗಳಲ್ಲಿ ಅನೇಕ ಸುಸ್ಪಷ್ಟ ದೃಷ್ಟಾಂತಗಳಿವೆ.—ಯೆಶಾಯ 5:1-7; ಯೆರೆಮೀಯ 18:1-11; ಯೆಹೆಜ್ಕೇಲ 15:2-7; ಹೋಶೇಯ 11:1-4.
ಉದಾಹರಣೆಗೆ, ಮೂರ್ತಿಗಳು ನಿಷ್ಪ್ರಯೋಜಕವಾಗಿವೆ ಎಂದು ನಮಗೆ ಕಲಿಸಲು ಯೆಹೋವನು ಹೇಗೆ ಒಂದು ಶಕ್ತಿಶಾಲಿ ದೃಷ್ಟಾಂತವನ್ನು ಉಪಯೋಗಿಸುತ್ತಾನೆ ಎಂಬುದನ್ನು ಗಮನಿಸಿರಿ. ಯೆಶಾಯ 44:14-17 ಹೇಳುವುದು: “ಅವನು ತನ್ನ ಕೆಲಸಕ್ಕಾಗಿ ದೇವದಾರುಗಳನ್ನು ಕಡಿಯುವನು, . . . ವನವೃಕ್ಷಗಳಲ್ಲಿ ಒಂದನ್ನು ತನಗೋಸ್ಕರ ಸಲಹುವನು; ಅವನು ಪೀತದಾರವನ್ನು ನೆಡಲು . . . ಅದು ಸೌದೆಗಾಗುವದು; ಅವನು ಸ್ವಲ್ಪ ತೆಗೆದು ಕಾಯಿಸಿಕೊಳ್ಳುವನು, ಉರಿಸಿ ರೊಟ್ಟಿಸುಡುವನು; ಅದರಲ್ಲೇ ಒಂದು ದೇವರನ್ನು ಮಾಡಿಕೊಂಡು ಪೂಜಿಸುವನು, ಬೊಂಬೆ ಕೆತ್ತಿ ಅಡ್ಡಬೀಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದು ಮಾಂಸಭೋಜನಕ್ಕೆ ಅನುಕೂಲಿಸುವದು; ಬಾಡುಸುಟ್ಟು ಹಸಿವೆ ತೀರಿಸಿಕೊಳ್ಳುವನು; . . . ಉಳಿದ ಭಾಗವನ್ನು ತನ್ನ ದೇವರನ್ನಾಗಿ ಬೊಂಬೆ ಕೆತ್ತಿ ಅದಕ್ಕೆ ಎರಗಿ ಅಡಬ್ಡಿದ್ದು—ನೀನೇ ನನ್ನ ದೇವರು, ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುವನು.” ಇಂತಹ ದೃಷ್ಟಾಂತಗಳು ಮೂರ್ತಿಪೂಜೆ ಮತ್ತು ಸುಳ್ಳು ಸಿದ್ಧಾಂತಗಳನ್ನು ಪ್ರಾಮಾಣಿಕ ಹೃದಯದವರು ತಿರಸ್ಕರಿಸುವಂತೆ ಸಹಾಯ ಮಾಡುವುದರಲ್ಲಿ ಶಕ್ತಿಶಾಲಿ ಸಲಕರಣೆಗಳಾಗಿವೆ.
ಆತ್ಮ ಅನ್ವೇಷಕ ಪ್ರಶ್ನೆಗಳು
ಯೋಚನೆಯನ್ನು ಕೆರಳಿಸುವ ಪ್ರಶ್ನೆಗಳ ಮೂಲಕ ತನ್ನ ಸೇವಕರಲ್ಲಿ ಕೆಲವರ ಯೋಚನೆಯನ್ನು ಯೆಹೋವನು ಹೇಗೆ ಸರಿಹೊಂದಿಸಿದನು ಎಂಬುದರ ಕುರಿತು ಸಹ ಬೈಬಲಿನಲ್ಲಿ ಉದಾಹರಣೆಗಳಿವೆ. ಮೂಲಪಿತೃವಾದ ಯೋಬನು ಇಂಥವರಲ್ಲಿ ಒಬ್ಬನಾಗಿದ್ದನು. ದೇವರ ಸಂಬಂಧದಲ್ಲಿ ಅವನ ಸ್ವಂತ ಸಣ್ಣತನವನ್ನು ನಿರ್ಧರಿಸುವಂತೆ ಯೆಹೋವನು ತಾಳ್ಮೆಯಿಂದ ಅವನಿಗೆ ಸಹಾಯ ಮಾಡಿದನು. ಯಾವುದನ್ನು ಉತ್ತರಿಸಲು ಯೋಬನು ಆಶಾರಹಿತನಾಗಿ ಅನರ್ಹನಾಗಿದ್ದನೋ ಅಂತಹ ಪ್ರಶ್ನೆಗಳ ಒಂದು ಶ್ರೇಣಿಯ ಮೂಲಕ ಇದನ್ನು ಮಾಡಲಾಯಿತು.
“ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ?” ಎಂದು ಯೆಹೋವನು ಯೋಬನನ್ನು ಕೇಳಿದನು. “ಸಮುದ್ರವು ಗರ್ಭವನ್ನು ಭೇದಿಸಿಕೊಂಡು ಬರಲು ಅದರ ದ್ವಾರಗಳನ್ನು ಮುಚ್ಚಿದವರು ಯಾರು? . . . ನೀನು ಕೃತ್ತಿಕೆಯ ಸರಪಣಿಯನ್ನು ಬಿಗಿದು ಮೃಗಶಿರದ ಬಂಧವನ್ನು ಬಿಚ್ಚುವಿಯಾ? . . . ನಿನ್ನ ಕೈಯೂ ದೇವರ ಕೈಯೂ ಸಮವೂ?” ದೀನವಾಗಿಸುವ ಈ ಪ್ರಶ್ನೆಕೇಳುವಿಕೆಯು, ಬಹಳ ಪ್ರಾಮುಖ್ಯವಾದ ಒಂದು ಪ್ರಶ್ನೆಯನ್ನು ಒಳಗೊಂಡಿತು: “ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದು ನಿರ್ಣಯಿಸುವಿಯೋ?”—ಯೋಬ 38:4, 8, 31; 40:8, 9.
ಈ ಅನ್ವೇಷಕ ಪ್ರಶ್ನೆಗಳು, ತಾನು ತಿಳಿವಳಿಕೆಯಿಲ್ಲದೆ ಮಾತಾಡಿದ್ದೇನೆಂದು ಯೋಬನು ಗ್ರಹಿಸುವಂತೆ ಮಾಡಿದವು. ಆದಕಾರಣ, ಅವನು ಮಾತನ್ನು ಹಿಂದೆಗೆದುಕೊಂಡನು ಮತ್ತು ಪಶ್ಚಾತ್ತಾಪಪಟ್ಟನು. (ಯೋಬ 42:6) ಈ ವಿದ್ಯಮಾನದಲ್ಲಾದಂತೆ, ಸರಿಯಾಗಿ ಆಯ್ದ ಪ್ರಶ್ನೆಗಳು ನಮ್ಮ ಮಕ್ಕಳ ಯಾ ಬೈಬಲ್ ವಿದ್ಯಾರ್ಥಿಗಳ ವಿಷಯದಲ್ಲಿ ತಪ್ಪಾದ ಯೋಚನೆಯನ್ನು ಸರಿಹೊಂದಿಸಲು ಸಹಾಯಮಾಡಬಹುದು.
ಭರವಸೆಯನ್ನು ಕಟ್ಟುವುದು
ಅಯೋಗ್ಯ ಯಾ ಅಸಮರ್ಥ ಎಂದು ಭಾವಿಸುವ ಯಾರಾದರೊಬ್ಬರಿಗೆ ಸಹಾಯ ಮಾಡುವ ಅಗತ್ಯ ನಮಗಿದ್ದರೆ ಆಗೇನು? ಯೆಹೋವನ ಮತ್ತು ಆತನ ಪ್ರವಾದಿಯಾದ ಮೋಶೆಯ ನಡುವಿನ ಒಂದು ಸಂಭಾಷಣೆಯು, ಈ ಸಂಬಂಧದಲ್ಲಿ ಸಹಾಯಕಾರಿಯಾಗಿದೆ. ಫರೋಹನ ಮತ್ತು ಇಸ್ರಾಯೇಲ್ಯರ ಮುಂದೆ ಆತನ ವದನಕನಾಗಿರುವಂತೆ ದೇವರು ಮೋಶೆಯನ್ನು ನೇಮಿಸಿದಾಗ, ಆ ಕೆಲಸವನ್ನು ನಿರ್ವಹಿಸಲು ತಾನು ಅಸಮರ್ಥನೆಂದು ಪ್ರವಾದಿಯು ಎಣಿಸಿದನು. “ನಾನು ಮೊದಲಿನಿಂದಲೂ . . . ವಾಕ್ಜಾತುರ್ಯವಿಲ್ಲದವನು,” ಎಂದು ಅವನು ಹೇಳಿದನು. ಹಾಗಿದ್ದರೂ, ದೇವರು ಉತ್ತರಿಸಿದ್ದು: “ಮನುಷ್ಯರಿಗೆ ಬಾಯಿ ಕೊಟ್ಟವರಾರು? . . . ಯೆಹೋವನಾಗಿರುವ ನಾನಲ್ಲವೇ. ಹೀಗಿರುವದರಿಂದ ನೀನು ಹೊರಟುಹೋಗು; ನಾನು ನಿನ್ನ ಬಾಯಿಗೆ ಸಹಾಯವಾಗಿದ್ದು ನೀನು ಮಾತಾಡಬೇಕಾದದ್ದನ್ನು ಬೋಧಿಸುವೆನು.”—ವಿಮೋಚನಕಾಂಡ 4:10-12.
ಯೆಹೋವನು ಮೋಶೆಯ ಅಣ್ಣನಾದ ಆರೋನನನ್ನು ಅವನ ವದನಕನಾಗಿ ನೇಮಿಸಿದನು, ಮತ್ತು ಅವರು ಐಗುಪ್ತದಲ್ಲಿ ತಮ್ಮ ಕೆಲಸವನ್ನು ಸಾಧಿಸಲು ಮುಂದುವರಿದರು. (ವಿಮೋಚನಕಾಂಡ 4:14-16) ಯೆಹೋವನ ಅನೇಕ ಸಾಕ್ಷಿಗಳು, ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಯಾ ರಸ್ತೆಯ ಸಾಕ್ಷಿಕಾರ್ಯದಲ್ಲಿ ಪ್ರಥಮವಾಗಿ ತೊಡಗುವಾಗ, ಮೋಶೆಯ ಕೊರತೆಯ ಅನಿಸಿಕೆಗಳಲ್ಲಿ ಪಾಲಿಗರಾಗಿದ್ದಾರೆ. ಮೋಶೆಯ ವಿಷಯದಲ್ಲಿ ಸಂಭವಿಸಿದಂತೆ, ನಮಗೆ ಯೆಹೋವನ ಬೆಂಬಲವಿದೆ ಮತ್ತು ನಾವು ಒಬ್ಬ ಅನುಭವಸ್ಥ ಶುಶ್ರೂಷಕನೊಂದಿಗೆ ಜೊತೆಗೂಡಿರುವೆವು ಎಂಬ ತಿಳಿವಳಿಕೆ, ನಮ್ಮ ಹಿಂಜರಿಯುವಿಕೆಯನ್ನು ಜಯಿಸುವಂತೆ ನಮ್ಮನ್ನು ಶಕ್ತಗೊಳಿಸಬಲ್ಲದು. ಬೈಬಲ್ ಪುಸ್ತಕವಾದ ಧರ್ಮೋಪದೇಶಕಾಂಡದ ಉದ್ದಕ್ಕೂ ಕಂಡುಕೊಳ್ಳಲ್ಪಡುವ, ಶಕ್ತಿಶಾಲಿ ಭಾಷಣಗಳನ್ನು ಕೊಡುವ ಮಟ್ಟಿಗೆ ಮೋಶೆಯು ಭರವಸೆಯನ್ನು ಬೆಳೆಸಲು ಶಕ್ತನಾಗಿದ್ದಂತೆಯೇ, ಯೆಹೋವನ ಸಹಾಯದಿಂದ ನಾವು ಸಹ ಮಾತಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಲ್ಲೆವು.
ಒಂದು ಪ್ರತ್ಯಕ್ಷ ನಿದರ್ಶನ
ಇತರರಿಗೆ ಸಹಾಯ ಮಾಡುವ ಒಂದು ಯಥಾರ್ಥವಾದ ಬಯಕೆಯೂ ಅವಶ್ಯವಾಗಿದೆ. ಪ್ರವಾದಿಯಾದ ಯೋನನಲ್ಲಿ ಈ ಗುಣದ ಕೊರತೆಯಿತ್ತು. ಆ ಪಟ್ಟಣದ ಆಸನ್ನವಾಗಿರುವ ನಾಶನದ ಕುರಿತು ನಿನೆವೆಯ ಜನರಿಗೆ ಎಚ್ಚರಿಕೆ ನೀಡಲು ಯೆಹೋವನು ಯೋನನನ್ನು ನೇಮಿಸಿದನು. ಆಶ್ಚರ್ಯಕರವಾಗಿ, ನಿನೆವೆಯ ಜನರು ಪಶ್ಚಾತ್ತಾಪಪಟ್ಟರು. (ಯೋನ 3:5) ಪರಿಣಾಮವಾಗಿ, ಯೆಹೋವನು ವಿಪತ್ತನ್ನು ಮುಂದೂಡಿದನು. ತನ್ನ ಸಾರುವ ಚಳವಳಿಯ ಯಶಸ್ಸಿನಿಂದ ಆನಂದಭರಿತನಾಗುವ ಬದಲಿಗೆ, ತನ್ನ ಭವಿಷ್ಯ ನುಡಿಯು ನೆರವೇರುವುದಿಲ್ಲವೆಂದು ಯೋನನು ಕೋಪಗೊಂಡನು. ಸರಿಯಾದ ಯಥಾದೃಷ್ಟಿಯನ್ನು ಪಡೆಯುವಂತೆ ಯೆಹೋವನು ಅವನಿಗೆ ಹೇಗೆ ಸಹಾಯ ಮಾಡಿದನು?
ಇತರರ ಕುರಿತು ಚಿಂತಿಸುವುದರ ಪ್ರಾಮುಖ್ಯವನ್ನು ಯೋನನಿಗೆ ಕಲಿಸಲು ಯೆಹೋವನು ಒಂದು ಸೋರೆಗಿಡವನ್ನು ಉಪಯೋಗಿಸಿದನು. ಆ ಗಿಡವು ಅದ್ಭುತಕರವಾಗಿ ಒಂದೇ ರಾತ್ರಿಯಲ್ಲಿ ಹುಟ್ಟಿ, ನಿನೆವೆಯ ಹೊರವಲಯಗಳಲ್ಲಿ ಒಂದು ಗುಡಿಸಲನ್ನು ಕಟ್ಟಿಕೊಂಡಿದ್ದ ಯೋನನಿಗೆ ಇಷ್ಟವಾದ ತುಸು ನೆರಳನ್ನು ಒದಗಿಸಿತು. ಈ ಸಾಮಾನ್ಯ ಗಿಡದ ವಿಷಯದಲ್ಲಿ ಯೋನನು “ಬಹು ಸಂತೋಷ” ಪಡಲು ತೊಡಗಿದನು. ಆದರೆ ಆಗ ಯೆಹೋವನು ಆ ಗಿಡವನ್ನು ಹೊಡೆಯುವಂತೆ ಒಂದು ಹುಳುವನ್ನುಂಟು ಮಾಡಿದನು, ಆಗ ಅದು ಒಣಗಿಹೋಯಿತು. ಸೂರ್ಯನಿಗೆ ಮತ್ತು ಬಿಸಿಯಾದ ಗಾಳಿಗೆ ಬಲಿಯಾದ ಯೋನನು ಕೋಪಗೊಂಡು, ಹೇಳಿದ್ದು: “ನಾನು ಬದುಕುವದಕ್ಕಿಂತ ಸಾಯುವದೇ ಲೇಸು.” (ಯೋನ 4:5-8) ಇದರಲ್ಲೆಲ್ಲಾ ಪಾಠವು ಏನಾಗಿತ್ತು?
ಯೆಹೋವನು ಯೋನನೊಂದಿಗೆ ಮಾತಾಡಿ, ಹೇಳಿದ್ದು: “ನೀನು ಆ ಸೋರೆಗಿಡಕ್ಕಾಗಿ ಕಷ್ಟಪಡಲಿಲ್ಲ, ಬೆಳೆಯಿಸಲಿಲ್ಲ; ಅದು ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾಯಿತು; ಇಂಥ ಗಿಡಕ್ಕಾಗಿ ನೀನು ಕನಿಕರಪಟ್ಟಿರುವಲ್ಲಿ ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತು ಸಾವಿರ ನರಪ್ರಾಣಿಗಳೂ ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ.”—ಯೋನ 4:9-11.
ಎಂತಹ ಶಕ್ತಿಶಾಲಿಯಾದ ಪ್ರತ್ಯಕ್ಷ ನಿದರ್ಶನ! ಯೋನನು ಸಾವಿರಾರು ಜನರಿಗಿಂತ ಸೋರೆಗಿಡದಲ್ಲಿ ಅಧಿಕ ಅಭಿರುಚಿಯುಳ್ಳವನಾಗಿದ್ದನು. ದೇವರ ಸೃಷ್ಟಿಯ ಯಾವುದೇ ಭಾಗಕ್ಕಾಗಿ ಚಿಂತೆಯು ಶ್ಲಾಘನೀಯವಾಗಿದ್ದರೂ, ಜನರ ಜೀವಿತಗಳನ್ನು ರಕ್ಷಿಸಲು ಸಹಾಯ ಮಾಡುವುದು ನಮ್ಮ ಅತ್ಯಂತ ಪ್ರಾಮುಖ್ಯ ಕೆಲಸವಾಗಿದೆ.
ತಾಳ್ಮೆಯಿಂದ ಉಪದೇಶಿಸುವುದು
ಯೋನನು ಕಂಡುಹಿಡಿದಂತೆ, ನಮ್ಮ ಶುಶ್ರೂಷೆಯನ್ನು ನೆರವೇರಿಸುವುದು ಯಾವಾಗಲೂ ಸುಲಭವಾಗಿರುವುದಿಲ್ಲ. (2 ತಿಮೊಥೆಯ 4:5) ಆದರೂ, ಇತರರ ಕಡೆಗೆ ತಾಳ್ಮೆಯ ಮನೋಭಾವವು ಸಹಾಯ ಮಾಡುವುದು.
ನಿಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ಒಬ್ಬರು ನಿಧಾನವಾಗಿದ್ದರೆ ಯಾ ಯಾವುದೋ ರೀತಿಯಲ್ಲಿ ವಿವೇಚನಾರಹಿತರಾಗಿದ್ದರೆ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಇಂತಹ ಒಂದು ಸಮಸ್ಯೆಯೊಂದಿಗೆ ಹೇಗೆ ನಿಭಾಯಿಸಬೇಕೆಂದು ನಮ್ಮ ಮಹಾ ಶಿಕ್ಷಕನು ನಮಗೆ ಕಲಿಸುತ್ತಾನೆ. ಸೊದೋಮ್ ಮತ್ತು ಗೊಮೋರಗಳ ಮೇಲೆ ತೂಗುತ್ತಿದ್ದ ನ್ಯಾಯತೀರ್ಪಿನ ಕುರಿತು ಅಬ್ರಹಾಮನು ಪ್ರಶ್ನೆಗಳನ್ನು ಕೇಳುತ್ತಾ ಇದ್ದಾಗ, ಆತನು ಅಸಾಧಾರಣವಾದ ತಾಳ್ಮೆಯನ್ನು ತೋರಿಸಿದನು. “ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ?” ಎಂದು ಅಬ್ರಹಾಮನು ಕೇಳಿದನು. “ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ನೀತಿವಂತರಿದ್ದಾರು,” ಎಂದು ಅಬ್ರಹಾಮನು ಬೇಡಿದನು. “ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯಾ?” ಯೆಹೋವನ ಉತ್ತರವು ಅಬ್ರಹಾಮನನ್ನು ಆ ಸಂಖ್ಯೆ ಹತ್ತಕ್ಕೆ ಇಳಿಯುವ ತನಕ ಬೇಡಿಕೊಳ್ಳುವಂತೆ ಪ್ರೇರಿಸಿತು. ಲೋಟನ ಕುಟುಂಬವು ಮಾತ್ರ ಉಳಿಸಲ್ಪಡಲು ಯೋಗ್ಯವಾಗಿತ್ತೆಂದು ಯೆಹೋವನಿಗೆ ಗೊತ್ತಿತ್ತು, ಮತ್ತು ಲೋಟನ ಕುಟುಂಬವನ್ನು ರಕ್ಷಿಸಲು ಏರ್ಪಾಡನ್ನು ಮಾಡಲಾಗಿತ್ತು. ಯೆಹೋವನ ಕರುಣೆಯ ವಿಸ್ತಾರ್ಯವನ್ನು ಅವನು ಗ್ರಹಿಸುವ ತನಕ ಪ್ರಶ್ನಿಸುತ್ತಾ ಇರುವಂತೆ, ದೇವರು ತಾಳ್ಮೆಯಿಂದ ಅಬ್ರಹಾಮನನ್ನು ಅನುಮತಿಸಿದನು.—ಆದಿಕಾಂಡ 18:20-32.
ಅಬ್ರಹಾಮನ ಸೀಮಿತ ಜ್ಞಾನವನ್ನು ಮತ್ತು ಚಿಂತೆಯ ಅನಿಸಿಕೆಗಳನ್ನು ಯೆಹೋವನು ಪರಿಗಣನೆಗೆ ತೆಗೆದುಕೊಂಡನು. ನಮ್ಮ ವಿದ್ಯಾರ್ಥಿಯ ಇತಿಮಿತಿಗಳನ್ನು ನಾವು ಸಹ ಅರ್ಥಮಾಡಿಕೊಳ್ಳುವುದಾದರೆ, ಪ್ರತ್ಯೇಕವಾದೊಂದು ತತ್ವವನ್ನು ಅರ್ಥಮಾಡಿಕೊಳ್ಳಲು ಯಾ ಸ್ವಭಾವಸಿದ್ಧವಾಗಿರುವ ಒಂದು ಹವ್ಯಾಸವನ್ನು ಜಯಿಸಲು ಅವನು ಹೋರಾಡುವಾಗ, ತಾಳ್ಮೆಯನ್ನು ತೋರಿಸಲು ಅದು ನಮಗೆ ಸಹಾಯಮಾಡುವುದು.
ಯೆಹೋವನಿಂದ ಕಲಿಯುತ್ತಾ ಇರ್ರಿ
ಯೆಹೋವ ದೇವರು ನಿಸ್ಸಂದೇಹವಾಗಿ ಮಹಾ ಶಿಕ್ಷಕನಾಗಿದ್ದಾನೆ. ದೃಷ್ಟಾಂತಗಳು, ಪ್ರಶ್ನೆಗಳು, ಮತ್ತು ಪ್ರತ್ಯಕ್ಷ ನಿದರ್ಶನಗಳಂತಹ ವಿಧಾನಗಳ ಮುಖಾಂತರ, ಆತನು ತಾಳ್ಮೆಯಿಂದ ತಿಳಿವಳಿಕೆಯನ್ನು ನೀಡುತ್ತಾನೆ. ಆತನ ಬೋಧಿಸುವ ವಿಧಾನಗಳನ್ನು ನಾವು ಅನುಕರಿಸುವ ಮಟ್ಟಿಗೆ, ಸ್ವತಃ ನಾವೇ ಉತ್ತಮ ಬೋಧಕರಾಗುವೆವು.
ಇತರರಿಗೆ ಬೋಧಿಸುವವರು ಸ್ವತಃ ತಮಗೆ ಬೋಧನೆ ನೀಡಿಕೊಳ್ಳುವುದನ್ನು ಅಲಕ್ಷಿಸಬಾರದ ಕಾರಣ, ನಾವು “ಯೆಹೋವನಿಂದ ಕಲಿಸಲ್ಪಡಲು” ಮುಂದುವರಿಯಬೇಕು. (ಯೆಶಾಯ 54:13) ಯೆಶಾಯನು ಬರೆದದ್ದು: “ನಿಮ್ಮ ಬೋಧಕನನ್ನು ಕಣ್ಣಾರೆ ಕಾಣುವಿರಿ; ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:20, 21) ಯೆಹೋವನ ಮಾರ್ಗದಲ್ಲಿ ನಡೆಯಲು ಮುಂದುವರಿಯುವುದರಿಂದ ಮತ್ತು ಹಾಗೆ ಮಾಡಲು ಇತರರಿಗೆ ಸಹಾಯ ಮಾಡುವುದರಿಂದ, ನಮ್ಮ ಮಹಾ ಶಿಕ್ಷಕನಿಂದ ಸದಾಕಾಲ ಕಲಿಯುವ ಅಪೂರ್ವ ಸುಯೋಗವನ್ನು ನಾವು ಪಡೆಯಬಲ್ಲೆವು.
[ಪುಟ 28 ರಲ್ಲಿರುವ ಚಿತ್ರ]
ಯೆಹೋವನು ಯೋಬನನ್ನು ಕೇಳಿದ್ದು: “ಹದ್ದು ಮೇಲಕ್ಕೆ ಹಾರಿ ಉನ್ನತದಲ್ಲಿ ಗೂಡುಮಾಡುವದು ನಿನ್ನ ಅಪ್ಪಣೆಯಿಂದಲೋ?”
[ಪುಟ 28 ರಲ್ಲಿರುವ ಚಿತ್ರ]
ಜನರ ಕುರಿತು ಹೆಚ್ಚು ಚಿಂತಿತನಾಗಿರುವಂತೆ ಯೆಹೋವನು ಒಂದು ಸೋರೆಗಿಡದ ಮೂಲಕ ಯೋನನಿಗೆ ಕಲಿಸಿದನು