ಅವರ ಬೆಳಕು ಆರಿಹೋಗಲಿಲ್ಲ
ಬೈಬಲ್ ಸಮಯಗಳಲ್ಲಿ, ಪ್ರತಿಬಂಧಗಳನ್ನು ಮತ್ತು ಕಷ್ಟಗಳನ್ನು ಅನುಭವಿಸಿದ ಯೆಹೋವನ ನಂಬಿಗಸ್ತ ಸಾಕ್ಷಿಗಳಿದ್ದರು. ಅವರು ವಿರೋಧ ಮತ್ತು ಪ್ರತ್ಯಕ್ಷ ಅಪಜಯಗಳನ್ನು ಎದುರಿಸಿದರು. ಹಾಗಿದ್ದರೂ, ನಿರುತ್ತೇಜನದಿಂದ ಅವರು ಬಿಟ್ಟುಕೊಡಲಿಲ್ಲ. ಕಾರ್ಯತಃ, ಅವರ ಬೆಳಕು ಆರಿಹೋಗಲಿಲ್ಲ.
ಉದಾಹರಣೆಗಾಗಿ, ಯೆಹೂದದ ಧರ್ಮಭ್ರಷ್ಟ ಜನಾಂಗಕ್ಕೆ ದೇವರ ಪ್ರವಾದಿಯಾಗಿರುವ ನಿಯೋಗವನ್ನು ಪ್ರವಾದಿಯಾದ ಯೆರೆಮೀಯನಿಗೆ ಕೊಡಲಾಯಿತು. ಯೆರೂಸಲೇಮಿನ ಮೇಲೆ ಬರಲಿರುವ ನಾಶನದ ಕುರಿತಾಗಿ ಅವನು ಎಚ್ಚರಿಕೆಯನ್ನು ಘೋಷಿಸಿದನು. (ಯೆರೆಮೀಯ 1:11-19) ಫಲಸ್ವರೂಪವಾಗಿ, ತನ್ನನ್ನು ಒಬ್ಬ ದುರ್ಗತಿ ಘೋಷಕನೋಪಾದಿ ವೀಕ್ಷಿಸಿದ ತನ್ನ ಜೊತೆದೇಶೀಯರೊಂದಿಗೆ ಯೆರೆಮೀಯನಿಗೆ ಹಲವಾರು ಘರ್ಷಣೆಗಳಿದ್ದವು.
ದೇವರ ಮನೆಯಲ್ಲಿ ಮುಖ್ಯಾಧಿಕಾರಿಯಾಗಿದ್ದ ಯಾಜಕ ಪಶೂರ್ಹನು, ಯೆರೆಮೀಯನು ಏನನ್ನು ಪ್ರವಾದಿಸಿದನೋ ಅದಕ್ಕಾಗಿ ಆತನನ್ನು ಹೊಡೆದನು ಮತ್ತು ಆತನನ್ನು ಕೋಳಕ್ಕೆ ಹಾಕಿಸಿದನು. ಪ್ರತಿಬಂಧದಂತೆ ತೋರುವ ಇದರಿಂದಾಗಿ, ಯೆರೆಮೀಯನು ಹೇಳಿದ್ದು: “ನಾನು ಹಗಲೆಲ್ಲಾ ಗೇಲಿಗೆ ಗುರಿಯಾಗಿದ್ದೇನೆ, ಎಲ್ಲರೂ ನನ್ನನ್ನು ಅಣಕಿಸುತ್ತಾರೆ. ನಾನು ಮಾತಾಡುವದೆಲ್ಲಾ ಅರಚಾಟವೇ; ಬಲಾತ್ಕಾರ, ಕೊಳ್ಳೆ ಎಂದೇ ಕೂಗಿಕೊಳ್ಳುತ್ತೇನೆ; [ನಾನು ಸಾರುವ] ಯೆಹೋವನ ವಾಕ್ಯವು ನನ್ನನ್ನು ಜನರ ದೂಷಣೆಗೂ ಪರಿಹಾಸಕ್ಕೂ ಗುರಿಮಾಡಿದೆ.” ಹೀಗೆ ಹೇಳುವಷ್ಟರ ಮಟ್ಟಿಗೂ ಪ್ರವಾದಿಯು ನಿರುತ್ತೇಜಿಸಲ್ಪಟ್ಟನು: “ನಾನು ಯೆಹೋವನ ವಿಷಯವನ್ನು ಪ್ರಕಟಿಸೆನು, ಆತನ [ಯೆಹೋವನ] ಹೆಸರಿನಲ್ಲಿ ಇನ್ನು ಮಾತಾಡೆನು.”—ಯೆರೆಮೀಯ 20:1, 2, 7-9.
ಆದಾಗಲೂ, ಯೆರೆಮೀಯನು ನಿರುತ್ತೇಜನಕ್ಕೆ ಬಲಿಬೀಳಲಿಲ್ಲ. “ಯೆಹೋವನ ವಾಕ್ಯ”ದ ಕುರಿತಾಗಿ ಮಾತಾಡುತ್ತಾ ಆತನು ಘೋಷಿಸಿದ್ದು: “ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ; ತಡೆದು ತಡೆದು ಆಯಾಸಗೊಂಡಿದ್ದೇನೆ, ಸಹಿಸಲಾರೆ.” (ಯೆರೆಮೀಯ 20:8, 9) ದೇವರ ತೀರ್ಪುಗಳನ್ನು ಮಾತಾಡಲು ಬಲವಾಗಿ ಪ್ರಚೋದಿಸಲ್ಪಟ್ಟು, ಯೆರೆಮೀಯನು ಪವಿತ್ರಾತ್ಮದಿಂದ ಪೋಷಿಸಲ್ಪಟ್ಟನು ಮತ್ತು ತನ್ನ ನೇಮಕವನ್ನು ಪೂರೈಸಿದನು.
ಅಪೊಸ್ತಲ ಪೌಲನು, ಅವುಗಳಿಗೆ ಮಣಿದಿದ್ದಲ್ಲಿ, ಆತನಿಗೂ ನಿರುತ್ತೇಜಿತನಾಗಲು ಹಲವಾರು ಕಾರಣಗಳಿದ್ದವು. ಆತನು ನೈಸರ್ಗಿಕ ವಿಪತ್ತುಗಳನ್ನು, ಹಡಗುನಷ್ಟ, ಹಿಂಸೆ ಮತ್ತು ಪೆಟ್ಟುಗಳನ್ನು ಸಹಿಸಿದನು. ಇದಕ್ಕೆ ಕೂಡಿಸಿ, ‘ಎಲ್ಲಾ ಸಭೆಗಳ ವಿಷಯವಾದ ಚಿಂತೆಯು ದಿನದಿನ ಅವನನ್ನು ಪೀಡಿಸುತ್ತಿತ್ತು.’ (2 ಕೊರಿಂಥ 11:23-28) ಹೌದು, ಪೌಲನಿಗೆ ದಿನನಿತ್ಯ ಸಮಸ್ಯೆಗಳೊಂದಿಗೆ ವ್ಯವಹರಿಸಲಿಕ್ಕಿತ್ತು; ತಾನು ಸ್ಥಾಪಿಸಲು ಸಹಾಯಮಾಡಿದ ಹೊಸ ಸಭೆಗಳ ಕುರಿತಾಗಿ ಆತನು ಚಿಂತಿಸುತ್ತಿದ್ದನು. ಇನ್ನೂ ಹೆಚ್ಚಾಗಿ, ಅವನು ಅಪರಿಪೂರ್ಣನಾಗಿದ್ದನು ಮತ್ತು ‘ಶರೀರದಲ್ಲಿ ಒಂದು ಶೂಲ,’ ಸಂಭವನೀಯವಾಗಿ ನ್ಯೂನವಾಗುತ್ತಿದ್ದ ಕಣ್ಣಿನದೃಷ್ಟಿಯೊಂದಿಗೆ ಅವನು ಸೆಣಸಾಡಬೇಕಾಗಿತ್ತು. (2 ಕೊರಿಂಥ 12:7; ರೋಮಾಪುರ 7:15; ಗಲಾತ್ಯ 4:15) ಕೆಲವರು ಪೌಲನ ಹಿಂದೆಯೂ ಅವನ ವಿರುದ್ಧವಾಗಿ ಮಾತಾಡಿದರು ಮತ್ತು ಇದು ಅವನ ಕಿವಿಗಳಿಗೆ ತಲಪಿತು.—2 ಕೊರಿಂಥ 10:10.
ಹಾಗಿದ್ದರೂ, ನಿರುತ್ತೇಜನವು ತನ್ನನ್ನು ಜಯಿಸುವಂತೆ ಪೌಲನು ಅನುಮತಿಸಲಿಲ್ಲ. ಇಲ್ಲ, ಅವನು ಒಬ್ಬ ಲೋಕಾತೀತ ಪುರುಷನಾಗಿರಲಿಲ್ಲ. (2 ಕೊರಿಂಥ 11:29, 30) ಅವನ ‘ಆಂತರಿಕ ಬೆಂಕಿ’ಯು ಉರಿಯುತ್ತಾ ಇರುವಂತೆ ಮಾಡಿದಂತಹ ಸಂಗತಿಯೇನು? ಒಂದು ಸಂಗತಿಯೇನಂದರೆ, ಅವನಿಗೆ ಬೆಂಬಲ ನೀಡುವ ಸಂಗಾತಿಗಳಿದ್ದರು, ಅವರಲ್ಲಿ ಕೆಲವರು ಅವನು ಎಲ್ಲಿ ಗೃಹಬಂಧನದಲ್ಲಿ ಇರಿಸಲ್ಪಟ್ಟನೊ, ಆ ರೋಮ್ ಪಟ್ಟಣಕ್ಕೂ ಜೊತೆಯಾಗಿ ಹೋದರು. (ಅ. ಕೃತ್ಯಗಳು 28:14-16) ಎರಡನೆಯದಾಗಿ, ಅಪೊಸ್ತಲನು ತನ್ನ ಪರಿಸ್ಥಿತಿಯನ್ನು ಒಂದು ಸಮತೋಲನದ ರೀತಿಯಲ್ಲಿ ವೀಕ್ಷಿಸಿದನು. ಪೌಲನಲ್ಲ ಅವನ ಹಿಂಸಕರು ಮತ್ತು ವಿರೋಧಿಗಳು ದೂಷ್ಯರಾಗಿದ್ದರು. ತನ್ನ ಭೂಜೀವಿತದ ಅಂತ್ಯದ ಸ್ವಲ್ಪ ಮುಂಚೆ, ಅವನು ತನ್ನ ಶುಶ್ರೂಷೆಯನ್ನು ಒಂದು ಸಕಾರಾತ್ಮಕ ವಿಧದಲ್ಲಿ ಮೌಲ್ಯಮಾಪನ ಮಾಡಿ ಹೇಳಿದ್ದು: “ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ; ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು.”—2 ತಿಮೊಥೆಯ 4:8.
ಎಲ್ಲಕ್ಕಿಂತಲೂ ಮಿಗಿಲಾಗಿ, ಪೌಲನು ಕ್ರಮವಾಗಿ ಯೆಹೋವ ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸಿದನು ಮತ್ತು ‘ಕರ್ತನು ಆತನ ಬಳಿಯಲ್ಲಿ ನಿಂತು ಆತನನ್ನು ಬಲಪಡಿಸಿದನು.’ (2 ತಿಮೊಥೆಯ 4:17) “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ,” ಎಂದನು ಪೌಲನು. (ಫಿಲಿಪ್ಪಿ 4:13) ದೇವರೊಂದಿಗೆ ಮತ್ತು ಜೊತೆ ಕ್ರೈಸ್ತರೊಂದಿಗೆ ಸಂಸರ್ಗದ ಜೊತೆಯಲ್ಲಿ, ತನ್ನ ಶುಶ್ರೂಷೆಯ ಒಂದು ಸಕಾರಾತ್ಮಕ ಮೌಲ್ಯಮಾಪನವು, ಯೆಹೋವನ ಸೇವೆಯಲ್ಲಿ ಮುಂದುವರಿಯುತ್ತಾ ಹೋಗಲು ಪೌಲನಿಗೆ ಸಹಾಯಮಾಡಿತು.
ಹೀಗೆ ಬರೆಯುವಂತೆ ದೇವರು ಪೌಲನನ್ನು ಪ್ರೇರೇಪಿಸಿದನು: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.” (ಗಲಾತ್ಯ 6:7-9) ಏನನ್ನು ಕೊಯ್ಯುವೆವು? ನಿತ್ಯ ಜೀವವನ್ನು. ಹಾಗಾದರೆ, ಯೆರೆಮೀಯ, ಪೌಲ ಮತ್ತು ಶಾಸ್ತ್ರಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಯೆಹೋವನ ಇತರ ಅನೇಕ ನಂಬಿಗಸ್ತ ಸಾಕ್ಷಿಗಳಂತಿರ್ರಿ. ಹೌದು, ಅವರಂತೆ ಇದ್ದು, ನಿರುತ್ತೇಜನಕ್ಕೆ ಬಲಿಬೀಳಬೇಡಿರಿ. ನಿಮ್ಮ ಬೆಳಕು ಆರಿಹೋಗುವಂತೆ ಬಿಡಬೇಡಿ.—ಮತ್ತಾಯ 5:14-16ನ್ನು ಹೋಲಿಸಿರಿ.
[ಪುಟ 25 ರಲ್ಲಿರುವ ಚಿತ್ರಗಳು]
ಪೌಲ ಮತ್ತು ಯೆರೆಮೀಯರು ತಮ್ಮ ಬೆಳಕು ಆರಿಹೋಗುವಂತೆ ಬಿಡಲಿಲ್ಲ