ವಿಲಿಯಮ್ ಟಿಂಡೆಲ್ ದೂರದೃಷ್ಟಿಯ ಮನುಷ್ಯ
ವಿಲಿಯಮ್ ಟಿಂಡೆಲ್, ಇಂಗ್ಲೆಂಡ್ನ “ವೇಲ್ಸ್ನ ಗಡಿಯಲ್ಲಿ,” ಬಹುಶಃ ಗ್ಲಾಸ್ಟರ್ಶರ್ನಲ್ಲಿ ಜನಿಸಿದನಾದರೂ, ನಿಖರವಾದ ಸ್ಥಳ ಮತ್ತು ತಾರೀಖನ್ನು ನಿರ್ಧರಿಸಲು ಸಾಧ್ಯವಿಲ್ಲ. 1994ರ ಅಕ್ಟೋಬರ್ ತಿಂಗಳಿನಲ್ಲಿ, ಇಂಗ್ಲೆಂಡ್ “ನಮಗೆ ಇಂಗ್ಲಿಷ್ ಬೈಬಲನ್ನು ಕೊಟ್ಟ” ಮನುಷ್ಯನ 500ನೆಯ ಜನ್ಮೋತ್ಸವವನ್ನು ಆಚರಿಸಿತು. ಈ ಕೃತಿಗಾಗಿ ಟಿಂಡೆಲ್ ಧರ್ಮಬಲಿಯಾದನು. ಏಕೆ?
ವಿಲಿಯಮ್ ಟಿಂಡೆಲ್ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಅಧ್ಯಯನದಲ್ಲಿ ಅತಿಶಯಿಸಿದನು. 1515ರ ಜುಲೈ ತಿಂಗಳಿನಲ್ಲಿ, 21 ವರ್ಷ ಪ್ರಾಯಕ್ಕಿಂತ ಹೆಚ್ಚಿಲ್ಲದಿದ್ದಾಗ, ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಿಂದ ಅವನು ಕಲಾ ಪ್ರವೀಣ ಪದವಿಯನ್ನು ಪಡೆದನು. 1521ರೊಳಗಾಗಿ ಅವನೊಬ್ಬ ದೀಕ್ಷೆ ಪಡೆದ ರೋಮನ್ ಕ್ಯಾಥೊಲಿಕ್ ಪಾದ್ರಿಯಾಗಿದ್ದನು. ಆ ಸಮಯದಲ್ಲಿ ಮಾರ್ಟಿನ್ ಲೂತರನ ಚಟುವಟಿಕೆಯಿಂದಾಗಿ ಜರ್ಮನಿಯಲ್ಲಿ ಕ್ಯಾಥೊಲಿಕ್ ಮತವು ತುಮುಲದಲ್ಲಿತ್ತು. ಆದರೆ ಇಂಗ್ಲೆಂಡ್, VIIIನೆಯ ಅರಸ ಹೆನ್ರಿ, ರೋಮ್ನೊಂದಿಗೆ 1534ರಲ್ಲಿ ಅಂತಿಮವಾಗಿ ಜಗಳವಾಡುವ ತನಕ, ಒಂದು ಕ್ಯಾಥೊಲಿಕ್ ದೇಶವಾಗಿ ಉಳಿಯಿತು.
ಇಂಗ್ಲಿಷ್, ಟಿಂಡೆಲ್ನ ದಿನದಲ್ಲಿನ ಸಾಮಾನ್ಯ ಭಾಷೆಯಾಗಿದ್ದರೂ, ಎಲ್ಲ ಶಿಕ್ಷಣವು ಲ್ಯಾಟಿನ್ನಲ್ಲಿತ್ತು. ಅದು ಚರ್ಚಿನ ಹಾಗೂ ಬೈಬಲಿನ ಭಾಷೆಯೂ ಆಗಿತ್ತು. 1546ರಲ್ಲಿ, ಜೆರೋಮ್ನ ಐದನೆಯ ಶತಮಾನದ ಲ್ಯಾಟಿನ್ ವಲ್ಗೆಟ್, ವ್ಯಾವರ್ತಕವಾಗಿ ಉಪಯೋಗಿಸಲ್ಪಡಬೇಕೆಂದು ಟ್ರೆಂಟ್ನ ಕೌನ್ಸಿಲ್ ಪುನಃ ಹೇಳಿತು. ಹಾಗಿದ್ದರೂ, ಶಿಕ್ಷಿತರು ಮಾತ್ರ ಅದನ್ನು ಓದಸಾಧ್ಯವಿತ್ತು. ಇಂಗ್ಲೆಂಡ್ನ ಜನರಿಗೆ ಬೈಬಲನ್ನು ಇಂಗ್ಲಿಷ್ನಲ್ಲಿ ಪಡೆಯುವ ಮತ್ತು ಅದನ್ನು ಓದುವ ಸ್ವಾತಂತ್ರ್ಯವನ್ನು ಏಕೆ ನಿರಾಕರಿಸಬೇಕು? “ಜೆರೋಮ್, ಬೈಬಲನ್ನು ತನ್ನ ಮಾತೃಭಾಷೆಯಲ್ಲಿ ಸಹ ಭಾಷಾಂತರಿಸಿದನು: ನಾವು ಸಹ ಏಕೆ ಮಾಡಬಾರದು?” ಎಂಬುದು ಟಿಂಡೆಲ್ನ ವಾದವಾಗಿತ್ತು.
ನಂಬಿಕೆಯ ಒಂದು ಹೆಜ್ಜೆ
ಆಕ್ಸ್ಫರ್ಡ್ನಲ್ಲಿ ತಾನು ಕಳೆದ ಸಮಯ ಮತ್ತು ಕೇಂಬ್ರಿಜ್ನಲ್ಲಿ ಬಹುಶಃ ಹೆಚ್ಚಿನ ಅಧ್ಯಯನಗಳ ನಂತರ, ಗ್ಲಾಸ್ಟರ್ಶರ್ನಲ್ಲಿ ಎರಡು ವರ್ಷಗಳ ಕಾಲ ಜಾನ್ ವಾಲ್ನ್ಷ ಎಳೆಯ ಪುತ್ರರಿಗೆ ಟಿಂಡೆಲ್ ಅಧ್ಯಾಪಕನಾಗಿದ್ದನು. ಈ ಸಮಯಾವಧಿಯಲ್ಲಿ ಬೈಬಲನ್ನು ಇಂಗಿಷ್ಲಿಗೆ ಭಾಷಾಂತರಿಸುವ ತನ್ನ ಬಯಕೆಯನ್ನು ಅವನು ಪೋಷಿಸಿದನು, ಮತ್ತು ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳನ್ನು ಸಮಾಂತರದ ಅಂಕಣಗಳಲ್ಲಿ ಹೊಂದಿದ್ದ ಇರ್ಯಾಸ್ಮಸ್ನ ಹೊಸ ಬೈಬಲ್ ಮೂಲಪಾಠದ ಸಹಾಯದೊಂದಿಗೆ ಅವನಿಗೆ ನಿಸ್ಸಂದೇಹವಾಗಿ ತನ್ನ ಭಾಷಾಂತರಿಸುವ ಕಲೆಗಳನ್ನು ವಿಕಸಿಸುವ ಅವಕಾಶವಿತ್ತು. 1523ರಲ್ಲಿ, ಟಿಂಡೆಲ್ ವಾಲ್ಷ್ ಕುಟುಂಬವನ್ನು ಬಿಟ್ಟು ಲಂಡನ್ಗೆ ಪ್ರಯಾಣಿಸಿದನು. ಅವನ ಉದ್ದೇಶವು, ತನ್ನ ಭಾಷಾಂತರಕ್ಕಾಗಿ ಲಂಡನಿನ ಬಿಷಪನಾದ ಕತ್ಬರ್ಟ್ ಟನ್ಸ್ಟಲ್ನಿಂದ ಅನುಮತಿಯನ್ನು ಪಡೆಯುವುದಾಗಿತ್ತು.
ಟನ್ಸ್ಟಲ್ನ ಮಂಜೂರಾತಿಯು ಅಗತ್ಯವಾಗಿತ್ತು, ಏಕೆಂದರೆ ಆಕ್ಸ್ಫರ್ಡ್ನ ಸಂವಿಧಾನಗಳು ಎಂಬುದಾಗಿ ಜ್ಞಾತವಾಗಿರುವ ಆಕ್ಸ್ಫರ್ಡ್ನ 1408ರ ಒಂದು ಸಿನೊಡ್ನ ನಿಬಂಧನೆಗಳು, ಬಿಷಪಿನ ಅನುಮತಿಯ ಹೊರತು ದೇಶೀಯ ಭಾಷೆಯಲ್ಲಿ ಬೈಬಲನ್ನು ಭಾಷಾಂತರಿಸುವ ಅಥವಾ ಓದುವ ವಿಷಯದ ಮೇಲೆ ನಿಷೇಧವನ್ನು ಒಳಗೊಂಡಿದ್ದವು. ಈ ಪ್ರತಿಬಂಧವನ್ನು ಉಲ್ಲಂಘಿಸಲು ಸಾಹಸಮಾಡಿದ, ಲಾಲರ್ಡ್ಸ್ರೆಂದು ಜ್ಞಾತವಾಗಿದ್ದ ಅನೇಕ ಸಂಚಾರೀ ಪ್ರಚಾರಕರು ಪಾಷಂಡಿಗಳೋಪಾದಿ ಸುಡಲ್ಪಟ್ಟರು. ಈ ಲಾಲರ್ಡ್ಸ್, ವಲ್ಗೆಟ್ನ ಇಂಗ್ಲಿಷ್ ಭಾಷಾಂತರವಾದ ಜಾನ್ ವೈಕ್ಲಿಫ್ನ ಬೈಬಲನ್ನು ಓದಿದರು ಮತ್ತು ಹಂಚಿದರು. ತನ್ನ ಚರ್ಚಿಗಾಗಿ ಮತ್ತು ಇಂಗ್ಲೆಂಡ್ನ ಜನರಿಗಾಗಿ ಗ್ರೀಕ್ನಿಂದ ಕ್ರೈಸ್ತ ಬರಹಗಳನ್ನು ಒಂದು ನವೀನ, ಸಪ್ರಮಾಣವಾದ ಅನುವಾದವಾಗಿ ಭಾಷಾಂತರಿಸುವ ಸಮಯವು ಬಂದಿದೆ ಎಂದು ಟಿಂಡೆಲ್ನಿಗೆ ಅನಿಸಿತು.
ಬಿಷಪ್ ಟನ್ಸ್ಟಲ್, ಇರ್ಯಾಸ್ಮಸನ್ನು ಉತ್ತೇಜಿಸಲು ಬಹಳಷ್ಟನ್ನು ಮಾಡಿದ್ದ ಪಂಡಿತನಾಗಿದ್ದನು. ತನ್ನ ಸ್ವಂತ ಕೌಶಲಗಳ ಸಾಕ್ಷ್ಯವಾಗಿ, ಕಠಿನವಾದ ಗ್ರೀಕ್ ಮೂಲಪಾಠವಾದ ಐಸಾಕ್ರೆಟೀಸ್ನ ಭಾಷಣಗಳಲ್ಲಿ ಒಂದನ್ನು ಟನ್ಸ್ಟಲ್ನ ಸಮ್ಮತಿಗಾಗಿ ಟಿಂಡೆಲ್ ಭಾಷಾಂತರಿಸಿದ್ದನು. ಟನ್ಸ್ಟಲ್ ಸ್ನೇಹವನ್ನೂ ಆಶ್ರಯವನ್ನೂ ನೀಡಿ, ಶಾಸ್ತ್ರಗಳನ್ನು ಭಾಷಾಂತರಿಸಲಿಕ್ಕಾಗಿದ್ದ ತನ್ನ ಪ್ರಸ್ತಾಪವನ್ನು ಸ್ವೀಕರಿಸುವನೆಂಬ ವಿಷಯದಲ್ಲಿ ಟಿಂಡೆಲ್ ಬಹಳ ಆಶಾವಾದಿಯಾಗಿದ್ದನು. ಬಿಷಪನು ಏನು ಮಾಡಲಿದ್ದನು?
ತಿರಸ್ಕಾರ—ಏಕೆ?
ಟಿಂಡೆಲ್ನ ಬಳಿ ಒಂದು ಪರಿಚಯ ಪತ್ರವಿದ್ದರೂ, ಟನ್ಸ್ಟಲ್ ಅವನಿಂದ ಒಂದು ಭೇಟಿಯನ್ನು ಸ್ವೀಕರಿಸಲಿಲ್ಲ. ಆದುದರಿಂದ ಟಿಂಡೆಲನು ಒಂದು ಸಂದರ್ಶನವನ್ನು ಕೋರುತ್ತಾ, ಬರೆಯಬೇಕಾಯಿತು. ಟಿಂಡೆಲನನ್ನು ಭೇಟಿಯಾಗುವುದು ಉಚಿತವೆಂದು ಟನ್ಸ್ಟಲ್ ಕಟ್ಟಕಡೆಗೆ ಎಣಿಸಿದನೊ ಇಲ್ಲವೊ ಎಂಬುದು ತಿಳಿದಿಲ್ಲ, ಆದರೆ ಅವನ ಸಂದೇಶವು, ‘ನನ್ನ ಮನೆ ಪೂರ್ತಿ ತುಂಬಿದೆ’ ಎಂದಾಗಿತ್ತು. ಟನ್ಸ್ಟಲ್ ಅಷ್ಟೊಂದು ಬುದ್ಧಿಪೂರ್ವಕವಾಗಿ ಟಿಂಡೆಲನ ಮುಖಭಂಗವನ್ನು ಏಕೆ ಮಾಡಿದನು?
ಯೂರೋಪಿನ ಭೂಖಂಡದಲ್ಲಿ ಲೂತರನ ಮೂಲಕ ಆಗುತ್ತಿದ್ದ ಸುಧಾರಣಾಕಾರ್ಯವು, ಇಂಗ್ಲೆಂಡ್ನಲ್ಲಿ ಪ್ರತಿಕ್ರಿಯೆಗಳೊಂದಿಗೆ ಕ್ಯಾಥೊಲಿಕ್ ಚರ್ಚಿಗೆ ಮಹಾ ಚಿಂತೆಯನ್ನು ಉಂಟುಮಾಡುತ್ತಿತ್ತು. 1521ರಲ್ಲಿ, VIIIನೆಯ ಅರಸ ಹೆನ್ರಿ, ಲೂತರನ ವಿರುದ್ಧ ಪೋಪನನ್ನು ಸಮರ್ಥಿಸುತ್ತ ಒಂದು ಬಲವುಳ್ಳ ಪ್ರಕರಣ ಗ್ರಂಥವನ್ನು ಪ್ರಕಟಿಸಿದನು. ಕೃತಜ್ಞತೆಯಿಂದ ಪೋಪ್, ಹೆನ್ರಿಗೆ “ಧರ್ಮ ಸಂರಕ್ಷಕ” ಎಂಬ ಬಿರುದನ್ನು ಅನುಗ್ರಹಿಸಿದನು.a ಹೆನ್ರಿಯ ಕಾರ್ಡಿನಲ್ ವುಲ್ಸೀ ಸಹ, ಲೂತರನ ನ್ಯಾಯವಿರುದ್ಧವಾಗಿ ಆಮದು ಮಾಡಲ್ಪಟ್ಟ ಪುಸ್ತಕಗಳನ್ನು ನಾಶಮಾಡುತ್ತಾ, ಸಕ್ರಿಯನಾಗಿದ್ದನು. ಪೋಪ್ಗೆ, ಅರಸನಿಗೆ ಮತ್ತು ತನ್ನ ಕಾರ್ಡಿನಲ್ಗೆ ನಿಷ್ಠಾವಂತನಾದ ಕ್ಯಾಥೊಲಿಕ್ ಬಿಷಪ್ನೋಪಾದಿ, ದಂಗೆಕೋರ ಲೂತರನಿಗೆ ಸಹಾನುಭೂತಿಯುಳ್ಳದ್ದಾಗಿರಬಹುದಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಯಾವುದೇ ವ್ಯಕ್ತಿಯನ್ನು ನಿಗ್ರಹಿಸಲು, ಟನ್ಸ್ಟಲ್ ಕರ್ತವ್ಯಬದ್ಧನಾಗಿದ್ದನು. ಟಿಂಡೆಲ್ ಪ್ರಧಾನ ಸಂದೇಹಾಸ್ಪದವಾದ ವ್ಯಕ್ತಿಯಾಗಿದ್ದನು. ಏಕೆ?
ವಾಲ್ಷ್ ಕುಟುಂಬದೊಂದಿಗೆ ತಾನು ತಂಗಿದ್ದ ಸಮಯದಲ್ಲಿ, ಸ್ಥಳಿಕ ಪಾದ್ರಿಗಳ ಅಜ್ಞಾನ ಮತ್ತು ಮತಾಂಧತೆಯ ವಿರುದ್ಧ ಟಿಂಡೆಲ್ ನಿರ್ಭೀತಿಯಿಂದ ಮಾತಾಡಿದ್ದನು. ಅವರಲ್ಲಿ, ಟಿಂಡೆಲನನ್ನು ಆಕ್ಸ್ಫರ್ಡ್ನಲ್ಲಿ ಅರಿತಿದ್ದ ಜಾನ್ ಸ್ಟೋಕ್ಸ್ಲಿ ಒಬ್ಬನಾಗಿದ್ದನು. ಅವನು ಕೊನೆಗೆ, ಲಂಡನಿನ ಬಿಷಪ್ನೋಪಾದಿ ಕತ್ಬರ್ಟ್ ಟನ್ಸ್ಟಲ್ನ ಸ್ಥಾನಭರ್ತಿಮಾಡಿದನು.
ಟಿಂಡೆಲನಿಗೆ ಬಂದ ವಿರೋಧವು, ಹೀಗೆಂದು ಹೇಳಿದ ಒಬ್ಬ ಉನ್ನತ ವರ್ಗದ ಪಾದ್ರಿಯೊಂದಿಗಿನ ಮುಕಾಬಿಲೆಯಲ್ಲಿ ಸಹ ವ್ಯಕ್ತವಾಗಿದೆ: “ಪೋಪನ ನಿಯಮವಿಲ್ಲದಿರುವುದಕ್ಕಿಂತ ದೇವರ ನಿಯಮವಿಲ್ಲದೆ ಇರುವುದು ನಮಗೆ ಉತ್ತಮವಾಗಿರುವುದು.” ಸ್ಮರಣೀಯ ಶಬ್ದಗಳಲ್ಲಿ ಟಿಂಡೆಲನ ಉತ್ತರವು ಹೀಗಿತ್ತು: ‘ನಾನು ಪೋಪ್ ಮತ್ತು ಅವನ ಎಲ್ಲ ನಿಯಮಗಳನ್ನು ಉಪೇಕ್ಷಿಸುತ್ತೇನೆ. ದೇವರು ನನ್ನ ಜೀವವನ್ನು ಉಳಿಸಿದರೆ, ಕೆಲವೇ ವರ್ಷಗಳೊಳಗೆ, ನೇಗಿಲು ಹೊಡೆಯುವ ಒಬ್ಬ ಹುಡುಗನು ನಿನಗಿಂತ ಹೆಚ್ಚಾಗಿ ಶಾಸ್ತ್ರವಚನವನ್ನು ತಿಳಿಯುವಂತೆ ಮಾಡುವೆನು.’
ಸುಳ್ಳು ಪಾಷಂಡವಾದದ ಆರೋಪಗಳಿಂದ, ಟಿಂಡೆಲ್ ವುಸರ್ಟ್ ಪ್ರಾಂತದ ಆಡಳಿತಗಾರನ ಮುಂದೆ ಹಾಜರಾಗಬೇಕಾಯಿತು. ತಾನು “ಒಂದು ನಾಯಿ”ಯಂತೆ ಉಪಚರಿಸಲ್ಪಟ್ಟೆನೆಂದು ಕೂಡಿಸುತ್ತಾ, “ಅವನು ನನ್ನನ್ನು ಘೋರವಾಗಿ ಬೆದರಿಸಿದನು ಮತ್ತು ನನ್ನನ್ನು ದೂಷಿಸಿದನು,” ಎಂದು ಟಿಂಡೆಲ್ ತದನಂತರ ಜ್ಞಾಪಿಸಿಕೊಂಡನು. ಆದರೆ ಪಾಷಂಡವಾದದ ವಿಷಯವಾಗಿ ಟಿಂಡೆಲನ ಮೇಲೆ ಅಪರಾಧ ಹೊರಿಸಲು ಯಾವ ಸಾಕ್ಷ್ಯವೂ ಇರಲಿಲ್ಲ. ಟನ್ಸ್ಟಲ್ನ ನಿರ್ಧಾರವನ್ನು ಪ್ರಭಾವಿಸಲು ಈ ಎಲ್ಲ ವಿಷಯಗಳು ಗೌಪ್ಯವಾಗಿ ಅವನಿಗೆ ಸಾಗಿಸಲ್ಪಟ್ಟವೆಂದು ಇತಿಹಾಸಕಾರರು ನಂಬುತ್ತಾರೆ.
ಲಂಡನ್ನಲ್ಲಿ ಒಂದು ವರ್ಷವನ್ನು ಕಳೆದ ಬಳಿಕ, ಟಿಂಡೆಲ್ ಕೊನೆಗೊಳಿಸಿದ್ದು: “ಹೊಸ ಒಡಂಬಡಿಕೆಯನ್ನು ಭಾಷಾಂತರಿಸಲು ಟನ್ಸ್ಟಲ್ನ ಅರಮನೆಯಲ್ಲಿ ಸ್ಥಳವಿರಲಿಲ್ಲ, ಆದರೆ . . . ಅದನ್ನು ಮಾಡಲು ಇಡೀ ಇಂಗ್ಲೆಂಡ್ನಲ್ಲೂ ಸ್ಥಳವಿರಲಿಲ್ಲ.” ಅವನು ಹೇಳಿದ್ದು ಸರಿಯಾಗಿತ್ತು. ಲೂತರನ ಕೆಲಸದಿಂದ ಉಂಟಾದ ದಮನದ ವಾತಾವರಣದಲ್ಲಿ, ಇಂಗ್ಲಿಷ್ ಭಾಷೆಯಲ್ಲಿ ಒಂದು ಬೈಬಲನ್ನು ಉತ್ಪಾದಿಸುವ ಸಾಹಸವನ್ನು ಇಂಗ್ಲೆಂಡ್ನಲ್ಲಿನ ಯಾವ ಮುದ್ರಣಕಾರನು ಮಾಡುವನು? ಆದುದರಿಂದ 1524ರಲ್ಲಿ, ಎಂದಿಗೂ ಹಿಂದಿರುಗಲಿಕ್ಕಿರದಂತೆ, ಟಿಂಡೆಲ್ ಇಂಗ್ಲಿಷ್ ಕಡಲಾಲ್ಗುವೆಯನ್ನು ದಾಟಿದನು.
ಯೂರೋಪಿಗೆ ಮತ್ತು ಹೆಚ್ಚಿನ ಸಮಸ್ಯೆಗಳಿಗೆ
ತನ್ನ ಅಮೂಲ್ಯ ಪುಸ್ತಕಗಳೊಂದಿಗೆ ವಿಲಿಯಮ್ ಟಿಂಡೆಲ್ ಜರ್ಮನಿಯಲ್ಲಿ ಆಶ್ರಯವನ್ನು ಕಂಡುಕೊಂಡನು. ಅವನು ತನ್ನೊಂದಿಗೆ ಹಂಫ್ರಿ ಮನ್ಮತ್—ಒಬ್ಬ ಪ್ರಭಾವಶಾಲಿ ಲಂಡನ್ ವ್ಯಾಪಾರಿ—ಕರುಣೆಯಿಂದ ಕೊಟ್ಟಿದ್ದ £10ನ್ನು ತಂದನು. ಆ ಸಮಯಗಳಲ್ಲಿ ಈ ಕೊಡುಗೆಯು, ತಾನು ಭಾಷಾಂತರಿಸಲು ಯೋಜಿಸಿದ್ದ ಗ್ರೀಕ್ ಶಾಸ್ತ್ರಗಳನ್ನು ಮುದ್ರಿಸುವಂತೆ ಟಿಂಡೆಲನನ್ನು ಶಕ್ತನನ್ನಾಗಿಸಲು ಬಹುಮಟ್ಟಿಗೆ ಸಾಕಷ್ಟಾಗಿತ್ತು. ಟಿಂಡೆಲನಿಗೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಲೂತರನಿಗೆ ಸಹಾನುಭೂತಿ ತೋರಿಸಿದನೆಂಬ ಆಪಾದನೆಗಾಗಿ ಮನ್ಮತ್ಗೆ ತರುವಾಯ ದಸ್ತಗಿರಿಯಾಯಿತು. ತನಿಖೆ ನಡೆಸಿ, ಲಂಡನ್ ದುರ್ಗದಲ್ಲಿ ಹಾಕಲ್ಪಟ್ಟ ಮನ್ಮತ್, ಕ್ಷಮೆಗಾಗಿ ಕಾರ್ಡಿನಲ್ ವುಲ್ಸೀಯಲ್ಲಿ ಬೇಡಿಕೊಂಡ ನಂತರವೇ ಬಿಡುಗಡೆಗೊಳಿಸಲ್ಪಟ್ಟನು.
ಜರ್ಮನಿಯಲ್ಲಿ ಟಿಂಡೆಲ್ ನಿಖರವಾಗಿ ಎಲ್ಲಿಗೆ ಹೋದನೆಂಬುದು ಸ್ಪಷ್ಟವಾಗಿಗಿಲ್ಲ. ಕೆಲವು ಪ್ರಮಾಣಗಳು, ಎಲ್ಲಿ ಅವನು ಒಂದು ವರ್ಷವನ್ನು ಕಳೆಯಲು ಹೋದನೊ, ಆ ಹ್ಯಾಂಬರ್ಗ್ಗೆ ಸೂಚಿಸುತ್ತವೆ. ಅವನು ಲೂತರನನ್ನು ಭೇಟಿಯಾದನೊ? ಅವನು ಭೇಟಿಯಾದನೆಂದು ಮನ್ಮತ್ನ ವಿರುದ್ಧವಿರುವ ಆರೋಪವು ಹೇಳುವುದಾದರೂ, ಇದು ಅನಿಶ್ಚಿತವಾಗಿದೆ. ಒಂದು ವಿಷಯವು ನಿಶ್ಚಿತವಾಗಿದೆ: ಟಿಂಡೆಲ್ ಗ್ರೀಕ್ ಶಾಸ್ತ್ರಗಳನ್ನು ಭಾಷಾಂತರಿಸುವುದರಲ್ಲಿ ಬಹಳ ಕಾರ್ಯಮಗ್ನನಾಗಿದ್ದನು. ತನ್ನ ಹಸ್ತಪ್ರತಿಯನ್ನು ಅವನು ಎಲ್ಲಿಂದ ಮುದ್ರಿಸಸಾಧ್ಯವಿತ್ತು? ಈ ಕೆಲಸವನ್ನು ಅವನು ಕಲೋನ್ನಲ್ಲಿದ್ದ ಪೀಟರ್ ಕ್ವೆನ್ಟೆಲ್ಗೆ ವಹಿಸಿದನು.
ವಿರೋಧಿಯಾದ ಜಾನ್ ಡೋಬನೆಕ್, ಅಥವಾ ಕಾಕ್ಲೀಅಸ್ ಎಂದು ಕರೆಯಲ್ಪಡುತ್ತಿದ್ದವನು, ಏನು ಸಂಭವಿಸುತ್ತಿದೆ ಎಂಬುದನ್ನು ಕಂಡುಹಿಡಿದ ತನಕ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ಕಾಕ್ಲೀಅಸ್ ಕೂಡಲೇ ತನ್ನ ಕಂಡುಹಿಡಿತಗಳನ್ನು VIIIನೆಯ ಹೆನ್ರಿಯ ಒಬ್ಬ ಆಪ್ತ ಮಿತ್ರನಿಗೆ ವರದಿಸಿದನು ಮತ್ತು ಅವನು ತಡವಿಲ್ಲದೆ ಟಿಂಡೆಲ್ನ ಭಾಷಾಂತರವನ್ನು ಮುದ್ರಿಸುತ್ತಿದ್ದ ಕ್ವೆನ್ಟೆಲ್ನ ಮುದ್ರಣದ ವಿರುದ್ಧ ಒಂದು ಪ್ರತಿಬಂಧವನ್ನು ಪಡೆದನು.
ಟಿಂಡೆಲ್ ಮತ್ತು ಅವನ ಸಹಾಯಕನಾದ ವಿಲಿಯಮ್ ರಾಯ್, ಮುದ್ರಿಸಲ್ಪಟ್ಟಿದ್ದ ಮತ್ತಾಯನ ಸುವಾರ್ತೆಯ ಪುಟಗಳನ್ನು ತಮ್ಮೊಂದಿಗೆ ತೆಗೆದುಕೊಂಡು, ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಓಡಿಹೋದರು. ರೈನ್ ನದಿಯಿಂದ ವಮ್ಸ್ಗೆ ಅವರು ಪ್ರಯಾಣಿಸಿ, ಅಲ್ಲಿ ತಮ್ಮ ಕೆಲಸವನ್ನು ಮುಗಿಸಿದರು. ಸಕಾಲದಲ್ಲಿ, ಟಿಂಡೆಲನ ಹೊಸ ಒಡಂಬಡಿಕೆ (ಇಂಗ್ಲಿಷ್)ಯ ಪ್ರಥಮ ಮುದ್ರಣದ 6,000 ಪ್ರತಿಗಳು ಉತ್ಪಾದಿಸಲ್ಪಟ್ಟವು.b
ಯಶಸ್ಸು—ವಿರೋಧವಿದ್ದಾಗ್ಯೂ
ಭಾಷಾಂತರಿಸುವುದು ಮತ್ತು ಮುದ್ರಿಸುವುದು ಒಂದು ವಿಷಯವಾಗಿತ್ತು. ಬೈಬಲ್ಗಳನ್ನು ಬ್ರಿಟನ್ಗೆ ಮುಟ್ಟಿಸುವುದು ಇನ್ನೊಂದು ವಿಷಯವಾಗಿತ್ತು. ಚರ್ಚಿನ ನಿಯೋಗಿಗಳು ಮತ್ತು ಐಹಿಕ ಅಧಿಕಾರಿಗಳು ಇಂಗ್ಲಿಷ್ ಕಡಲಾಲ್ಗುವೆಯನ್ನು ದಾಟಿಹೋಗುವ ರವಾನೆ ಸರಕುಗಳನ್ನು ತಡೆಯಲು ನಿಶ್ಚಯಿಸಿದ್ದರು, ಆದರೆ ಸ್ನೇಹಪರ ವ್ಯಾಪಾರಿಗಳಲ್ಲಿ ಇದಕ್ಕೆ ಉತ್ತರವಿತ್ತು. ಬಟ್ಟೆಯ ಮತ್ತು ಇತರ ಸರಕಿನ ಮೂಟೆಗಳಲ್ಲಿ ಅಡಗಿಸಲ್ಪಟ್ಟಿದ್ದ ಸಂಪುಟಗಳು ಇಂಗ್ಲೆಂಡ್ನ ತೀರಗಳಿಗೆ ಮತ್ತು ಸ್ಕಾಟ್ಲೆಂಡ್ನ ವರೆಗೆ ಗುಟ್ಟಾಗಿ ಸಾಗಿಸಲ್ಪಟ್ಟವು. ಟಿಂಡೆಲ್ ಉತ್ತೇಜಿತನಾದನು, ಆದರೆ ಅವನ ಹೋರಾಟವು ಕೇವಲ ಆರಂಭಿಸಿತ್ತು.
1526, ಫೆಬ್ರವರಿ 11ರಂದು, ಕಾರ್ಡಿನಲ್ ವುಲ್ಸೀ, 36 ಬಿಷಪರು ಮತ್ತು ಚರ್ಚಿನ ಇತರ ಅಧಿಕಾರಿಗಳೊಂದಿಗೆ, ಲಂಡನ್ನ ಸೆಂಟ್ ಪೌಲ್ಸ್ ಕತೀಡ್ರಲ್ನ ಬಳಿ, “ಬುಟ್ಟಿತುಂಬ ಪುಸ್ತಕಗಳು ಬೆಂಕಿಯೊಳಗೆ ಹಾಕಲ್ಪಡುವುದನ್ನು ನೋಡಲು” ನೆರೆದರು. ಅವುಗಳಲ್ಲಿ ಟಿಂಡೆಲನ ಅಮೂಲ್ಯ ಭಾಷಾಂತರದ ಕೆಲವು ಪ್ರತಿಗಳು ಸೇರಿದ್ದವು. ಈ ಪ್ರಥಮ ಮುದ್ರಣದ ಬೈಬಲುಗಳಲ್ಲಿ ಕೇವಲ ಎರಡು ಪ್ರತಿಗಳು ಈಗ ಚಾಲ್ತಿಯಲ್ಲಿವೆ. ಸಂಪೂರ್ಣವಾದ ಏಕೈಕ ಪ್ರತಿಯು (ಕೇವಲ ಮುಖಪತ್ರ ಇಲ್ಲದಿರುವ) ಬ್ರಿಟಿಷ್ ಗ್ರಂಥಾಲಯದಲ್ಲಿದೆ. ಹಾಸ್ಯವ್ಯಂಗ್ಯವಾಗಿ, 71 ಪುಟಗಳು ಇಲ್ಲದಿರುವ ಮತ್ತೊಂದು ಬೈಬಲನ್ನು, ಸೆಂಟ್ ಪೌಲ್ಸ್ ಕತೀಡ್ರಲ್ನಲ್ಲಿ ಕಂಡುಹಿಡಿಯಲಾಯಿತು. ಅದು ಅಲ್ಲಿ ಹೇಗೆ ಸೇರಿತು ಎಂಬುದು ಯಾರಿಗೂ ತಿಳಿಯದು.
ಧೈರ್ಯಗೆಡದೆ, ಟಿಂಡೆಲ್ ತನ್ನ ಭಾಷಾಂತರದ ನವೀನ ಆವೃತ್ತಿಗಳ ಉತ್ಪಾದನೆಯನ್ನು ಮುಂದುವರಿಸಿದನು, ಅವು ಕ್ರಮಬದ್ಧವಾಗಿ ಇಂಗ್ಲಿಷ್ ಪಾದ್ರಿಗಳ ಮೂಲಕ ಕಿತ್ತುಕೊಳ್ಳಲ್ಪಟ್ಟವು ಮತ್ತು ಸುಡಲ್ಪಟ್ಟವು. ನಂತರ ಟನ್ಸ್ಟಲ್ ತಂತ್ರಗಳನ್ನು ಬದಲಾಯಿಸಿದನು. ಅವನು, ಟಿಂಡೆಲ್ನ ಮೂಲಕ ಬರೆಯಲ್ಪಟ್ಟ ಯಾವುದೇ ಪುಸ್ತಕಗಳನ್ನು—ಹೊಸ ಒಡಂಬಡಿಕೆ (ಇಂಗ್ಲಿಷ್)ಯನ್ನು ಸೇರಿಸಿ—ಸುಡುವ ಸಲುವಾಗಿ, ಅವುಗಳನ್ನು ಖರೀದಿಸುವಂತೆ ಆಗಸ್ಟೀನ್ ಪ್ಯಾಕಿಂಗ್ಟನ್ ಎಂಬ ಹೆಸರಿನ ವ್ಯಾಪಾರಿಯೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಇದನ್ನು ಟಿಂಡೆಲ್ನೊಂದಿಗೆ ಏರ್ಪಡಿಸಲಾಗಿತ್ತು, ಅವನೊಂದಿಗೆ ಪ್ಯಾಕಿಂಗ್ಟನ್ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದನು. ಹ್ಯಾಲೀಯ ಕ್ರಾನಿಕಲ್ ಹೇಳುವುದು: “ಬಿಷಪನು ಪುಸ್ತಕಗಳನ್ನು ಪಡೆದನು, ಪ್ಯಾಕಿಂಗ್ಟನ್ ಉಪಕಾರಗಳನ್ನು ಪಡೆದನು, ಮತ್ತು ಟಿಂಡೆಲ್ ಹಣವನ್ನು ಪಡೆದನು. ಇದಾದ ಮೇಲೆ ಹೆಚ್ಚಿನ ಹೊಸ ಒಡಂಬಡಿಕೆಗಳು ಮುದ್ರಿಸಲ್ಪಟ್ಟ ತರುವಾಯ, ಅನೇಕ ಬೈಬಲುಗಳು ತೀವ್ರವಾಗಿ ಇಂಗ್ಲೆಂಡಿಗೆ ಬಂದು ತಲಪಿದವು.”
ಪಾದ್ರಿಗಳು ಟಿಂಡೆಲ್ನ ಭಾಷಾಂತರವನ್ನು ಅಷ್ಟು ಕಟುವಾಗಿ ಏಕೆ ವಿರೋಧಿಸಿದರು? ಲ್ಯಾಟಿನ್ ವಲ್ಗೆಟ್ ಪವಿತ್ರ ಮೂಲಪಾಠವನ್ನು ಮರೆಮಾಚಲು ಪ್ರಯತ್ನಿಸಿತಾದರೂ, ಮೂಲಭೂತ ಗ್ರೀಕ್ನಿಂದ ಟಿಂಡೆಲನ ತರ್ಜುಮೆಯು ಮೊದಲ ಬಾರಿಗೆ ಇಂಗ್ಲಿಷ್ ಜನರಿಗೆ ಬೈಬಲಿನ ಸಂದೇಶವನ್ನು ಸ್ಪಷ್ಟವಾಗಿದ ಭಾಷೆಯಲ್ಲಿ ತಿಳಿಯಪಡಿಸಿತು. ಉದಾಹರಣೆಗೆ, 1 ಕೊರಿಂಥ 13ನೆಯ ಅಧ್ಯಾಯದಲ್ಲಿ ಅಗಾಪೆ ಎಂಬ ಗ್ರೀಕ್ ಪದವನ್ನು “ಧರ್ಮಕಾರ್ಯಗಳು” ಎಂಬುದರ ಬದಲು “ಪ್ರೀತಿ” ಎಂಬುದಾಗಿ ಭಾಷಾಂತರಿಸಲು ಟಿಂಡೆಲ್ ಆರಿಸಿಕೊಂಡನು. ಚರ್ಚ್ ಕಟ್ಟಡಗಳನ್ನಲ್ಲ, ಆರಾಧಕರನ್ನು ಒತ್ತಿಹೇಳಲು, “ಚರ್ಚ್”ನ ಬದಲಿಗೆ “ಸಭೆ” ಎಂಬ ಪದದ ವಿಷಯದಲ್ಲಿ ಅವನು ಪಟ್ಟುಹಿಡಿದನು. ಆದರೆ, “ವೈದಿಕ” ಎಂಬುದನ್ನು “ಹಿರಿಯ”ನಿಂದ ಮತ್ತು “ದೇಹದಂಡನೆ ಮಾಡು” ಎಂಬುದರ ಬದಲಿಗೆ “ಪಶ್ಚಾತ್ತಾಪಪಡು” ಎಂಬ ಪದವನ್ನು ಸ್ಥಾನಭರ್ತಿ ಮಾಡಿದಾಗ, ಪಾದ್ರಿಗಳಿಗೆ ಸಹಿಸಲಾರದ ಕೊನೆಯ ನಚ್ಚು ಬಂದಿತು. ಹೀಗೆ ಅದು, ಪಾದ್ರಿಗಳಿಂದ ಅವರು ವಹಿಸಿಕೊಂಡಿದ್ದ ವೈದಿಕ ಅಧಿಕಾರಗಳನ್ನು ತೆಗೆದುಹಾಕಿತು. ಡೇವಿಡ್ ಡ್ಯಾನ್ಯಲ್ ಈ ಸಂಬಂಧದಲ್ಲಿ ಹೇಳುವುದು: “ಪರ್ಗೆಟರಿ ಇರುವುದಿಲ್ಲ; ಶ್ರವಣಗೋಚರ ಪಾಪನಿವೇದನೆ ಮತ್ತು ದೇಹದಂಡನೆಗೆ ಇನ್ನುಮುಂದೆ ಬೈಬಲಿನ ಬೆಂಬಲವಿರುವುದಿಲ್ಲ. ಚರ್ಚಿನ ಸಂಪತ್ತು ಮತ್ತು ಶಕ್ತಿಯ ಎರಡು ಬೆಂಬಲಗಳು ಕುಸಿದವು.” (ವಿಲಿಯಮ್ ಟಿಂಡೆಲ್—ಒಂದು ಜೀವನ ಚರಿತ್ರೆ, ಇಂಗ್ಲಿಷ್) ಟಿಂಡೆಲನ ಭಾಷಾಂತರವು ಸಾದರಪಡಿಸಿದ ಪಂಥಾಹ್ವಾನವು ಅದಾಗಿತ್ತು, ಮತ್ತು ಆಧುನಿಕ ಪಾಂಡಿತ್ಯವು ಸಂಪೂರ್ಣವಾಗಿ ಅವನ ಪದಗಳ ಆಯ್ಕೆಯ ನಿಷ್ಕೃಷ್ಟತೆಯನ್ನು ಅನುಮೋದಿಸುತ್ತದೆ.
ಆ್ಯಂಟ್ವರ್ಪ್, ನಂಬಿಕೆದ್ರೋಹ, ಮತ್ತು ಮರಣ
1526 ಮತ್ತು 1528ರ ನಡುವೆ, ಟಿಂಡೆಲ್ ಆ್ಯಂಟ್ವರ್ಪ್ಗೆ ಹೋದನು, ಅಲ್ಲಿ ಅವನು ಇಂಗ್ಲಿಷ್ ವ್ಯಾಪಾರಿಗಳ ನಡುವೆ ಸುರಕ್ಷಿತ ಅನಿಸಿಕೆಯುಳ್ಳವನಾಗಿರಬಹುದಿತ್ತು. ಅಲ್ಲಿ ಅವನು, ದುಷ್ಟ ಧನಪಿಶಾಚಿಯ ಸಾಮ್ಯ (ಇಂಗ್ಲಿಷ್), ಒಬ್ಬ ಕ್ರೈಸ್ತ ಮನುಷ್ಯನ ವಿಧೇಯತೆ (ಇಂಗ್ಲಿಷ್), ಮತ್ತು ಮಠಾಧಿಪತಿಗಳ ನಡೆವಳಿ (ಇಂಗ್ಲಿಷ್) ಎಂಬ ಪುಸ್ತಕಗಳನ್ನು ಬರೆದನು. ಟಿಂಡೆಲ್ ತನ್ನ ಭಾಷಾಂತರಿಸುವ ಕೆಲಸವನ್ನು ಮುಂದುವರಿಸಿದನು ಮತ್ತು ಹೀಬ್ರು ಶಾಸ್ತ್ರವಚನಗಳ ಒಂದು ಇಂಗ್ಲಿಷ್ ಭಾಷಾಂತರದಲ್ಲಿ ಯೆಹೋವ ಎಂಬ ದೇವರ ನಾಮವನ್ನು ಉಪಯೋಗಿಸಿದವರಲ್ಲಿ ಮೊದಲಿಗನಾಗಿದ್ದನು. ಆ ನಾಮವು 20ಕ್ಕಿಂತಲೂ ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತದೆ.
ಟಿಂಡೆಲ್ ಆ್ಯಂಟ್ವರ್ಪ್ನಲ್ಲಿ ತನ್ನ ಮಿತ್ರ ಹಾಗೂ ಆಶ್ರಯದಾತನಾದ ಥಾಮಸ್ ಪಾಯಿಂಟ್ಸ್ನ ಜೊತೆಗೆ ಉಳಿದಷ್ಟು ಸಮಯ, ಅವನು ವುಲ್ಸೀ ಮತ್ತು ಅವನ ಗುಪ್ತಚಾರರ ಒಳಸಂಚುಗಳಿಂದ ಸುರಕ್ಷಿತನಾಗಿದ್ದನು. ಅವನು ಅಸ್ವಸ್ಥರ ಮತ್ತು ಬಡವರ ಆರೈಕೆಗಾಗಿ ಪ್ರಖ್ಯಾತನಾದನು. ಕೊನೆಗೆ, ಇಂಗ್ಲಿಷನವನಾದ ಹೆನ್ರಿ ಫಿಲಿಪ್ಸ್, ಕುಯುಕ್ತಿಯಿಂದ ಟಿಂಡೆಲನ ಭರವಸೆಯನ್ನು ಗೆದ್ದುಕೊಂಡನು. ಫಲಸ್ವರೂಪವಾಗಿ 1535ರಲ್ಲಿ, ಟಿಂಡೆಲ್ ನಂಬಿಕೆದ್ರೋಹಕ್ಕೆ ಒಳಗಾಗಿ, ಬ್ರಸಲ್ಸ್ನ ಉತ್ತರಕ್ಕೆ ಹತ್ತು ಕಿಲೋಮಿಟರುಗಳ ದೂರದಲ್ಲಿದ್ದ ವಿಲ್ವಾರ್ಡ್ ಕೋಟೆಮನೆಗೆ ಒಯ್ಯಲ್ಪಟ್ಟನು. ಅಲ್ಲಿ ಅವನು 16 ತಿಂಗಳುಗಳ ಕಾಲ ಬಂಧನದಲ್ಲಿಡಲ್ಪಟ್ಟನು.
ಫಿಲಿಪ್ಸ್ನನ್ನು ಯಾರು ಕೆಲಸಕ್ಕೆ ಹಿಡಿದರೆಂಬುದನ್ನು ನಿಶ್ಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ, ಆದರೆ ಸಂದೇಹದ ಬೆರಳು ನೇರವಾಗಿ ಯಾರು ಆಗ ಲಂಡನ್ನಲ್ಲಿ “ಪಾಷಂಡವಾದಿಗಳನ್ನು” ಸುಡುವುದರಲ್ಲಿ ಕಾರ್ಯಮಗ್ನನಾಗಿದ್ದನೊ, ಆ ಬಿಷಪ್ ಸ್ಟೋಕ್ಸ್ಲಿಯನ್ನು ಸೂಚಿಸುತ್ತದೆ. 1539ರಲ್ಲಿ ಅವನ ಮೃತ್ಯುಶಯ್ಯೆಯಲ್ಲಿ ಸ್ಟೋಕ್ಸ್ಲಿ, “ತನ್ನ ಜೀವಮಾನದಲ್ಲಿ ಐವತ್ತು ಪಾಷಂಡವಾದಿಗಳನ್ನು ಸುಟ್ಟುಹಾಕಿದ್ದೆನೆಂದು ಹರ್ಷಿಸಿದನು,” ಎಂಬುದಾಗಿ ದ ಬೈಬಲ್ ಆಫ್ ದ ರೆಫರ್ಮೇಷನ್ ಎಂಬ ಪುಸ್ತಕದಲ್ಲಿ ಡಬ್ಲ್ಯೂ. ಜೆ. ಹೀಟನ್ ಹೇಳುತ್ತಾರೆ. ಆ ಸಂಖ್ಯೆಯಲ್ಲಿ, ಅಕ್ಟೋಬರ್ 1536ರಲ್ಲಿ ಯಾರ ದೇಹವನ್ನು ಬಹಿರಂಗವಾಗಿ ಸುಡುವ ಮೊದಲು ಕತ್ತನ್ನು ಹಿಸುಕಲಾಯಿತೊ, ಆ ವಿಲಿಯಮ್ ಟಿಂಡೆಲ್ ಸೇರಿದ್ದನು.
ಫಿಲಿಪ್ಸ್ ದಾಖಲು ಪಡೆದಿದ್ದ ಕ್ಯಾಥೊಲಿಕ್ ಲೂವ್ಯಾನ್ ವಿಶ್ವವಿದ್ಯಾನಿಲಯದಿಂದ ಮೂರು ಪ್ರಖ್ಯಾತ ದೇವತಾಶಾಸ್ತ್ರಜ್ಞರು, ಟಿಂಡೆಲನ ನ್ಯಾಯವಿಚಾರಣೆಯನ್ನು ಮಾಡಿದ ನಿಯೋಗದಲಿದ್ದರು. ಟಿಂಡೆಲ್ ಪಾಷಂಡವಾದಕ್ಕಾಗಿ ದಂಡಿಸಲ್ಪಡುವುದನ್ನು ಮತ್ತು ತನ್ನ ವೈದಿಕ ಅಧಿಕಾರದಿಂದ ಕಳಚಲ್ಪಡುವುದನ್ನು ನೋಡಲು, ಲೂವ್ಯಾನ್ನಿಂದ ಬಂದ ಮೂವರು ಪಾದ್ರಿಗಳು, ಅವರೊಂದಿಗೆ ಇತರ ಗಣ್ಯಪುರುಷರು ಸಹ ಉಪಸ್ಥಿತರಿದ್ದರು. ಬಹುಶಃ 42ರ ಪ್ರಾಯದಲ್ಲಿ ಅವನ ನಿಧನದಲ್ಲಿ ಎಲ್ಲರೂ ಹರ್ಷಿಸಿದರು.
ಒಂದು ನೂರು ವರ್ಷಗಳಿಗಿಂತಲೂ ಹೆಚ್ಚು ಸಮಯದ ಹಿಂದೆ ಆತ್ಮ ಚರಿತ್ರೆಗಾರನಾದ ರಾಬರ್ಟ್ ಡೀಮೇಅಸ್ ಹೇಳಿದ್ದು, “ಟಿಂಡೆಲ್ ಎಲ್ಲ ಸಮಯಗಳಲ್ಲಿ ತನ್ನ ಭಯರಹಿತ ಪ್ರಾಮಾಣಿಕತೆಗಾಗಿ ಪ್ರಸಿದ್ಧನಾಗಿದ್ದನು.” ಲಂಡನ್ನಲ್ಲಿ ಸ್ಟೋಕ್ಸ್ಲಿಯ ಮೂಲಕ ಸುಡಲ್ಪಟ್ಟ ತನ್ನ ಜೊತೆ ಕೆಲಸಗಾರನಾದ ಜಾನ್ ಫ್ರಿತ್ಗೆ, ಟಿಂಡೆಲ್ ಬರೆದುದು: “ನನ್ನ ಮನಸ್ಸಾಕ್ಷಿಯ ವಿರುದ್ಧವಾಗಿ ದೇವರ ವಾಕ್ಯದ ಒಂದು ಅಕ್ಷರವನ್ನೂ ನಾನು ಎಂದೂ ವ್ಯತ್ಯಾಸಗೊಳಿಸಲಿಲ್ಲ, ಮತ್ತು ಈ ಭೂಮಿಯಲ್ಲಿರುವ ಎಲ್ಲವನ್ನು—ಅದು ಸುಖವಾಗಿರಲಿ, ಘನತೆಯಾಗಿರಲಿ ಅಥವಾ ಐಶ್ವರ್ಯಗಳಾಗಿರಲಿ—ನನಗೆ ಈ ದಿನ ಕೊಟ್ಟರೂ ನಾನು ಹಾಗೆ ಮಾಡೆನು.”
ಹೀಗೆ, ಈ ರೀತಿಯಲ್ಲಿ ವಿಲಿಯಮ್ ಟಿಂಡೆಲ್, ಇಂಗ್ಲೆಂಡ್ನ ಜನರಿಗೆ ತಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಬೈಬಲನ್ನು ನೀಡುವ ಸುಯೋಗಕ್ಕಾಗಿ ತನ್ನ ಜೀವವನ್ನು ತ್ಯಾಗಮಾಡಿದನು. ಎಂತಹ ಬೆಲೆಯನ್ನು ಅವನು ತೆತ್ತನು—ಆದರೆ ಎಂತಹ ಒಂದು ಬೆಲೆಕಟ್ಟಲಾಗದ ಕೊಡುಗೆ!
[ಅಧ್ಯಯನ ಪ್ರಶ್ನೆಗಳು]
a ಫೈಡೆಯಿ ಡೇಫೆನ್ಸಾರ್ ಬೇಗನೆ ರಾಜ್ಯದ ನಾಣ್ಯಗಳ ಮೇಲೆ ಛಾಪಿಸಲಾಯಿತು, ಮತ್ತು ತನ್ನ ಉತ್ತರಾಧಿಕಾರಿಗಳ ಮೇಲೆ ಈ ಬಿರುದು ಅನುಗ್ರಹಿಸಲ್ಪಡಬೇಕೆಂದು ಹೆನ್ರಿ ಕೇಳಿಕೊಂಡನು. ಇಂದು ಅದು ಬ್ರಿಟಿಷ್ ನಾಣ್ಯಗಳಲ್ಲಿರುವ ಪರಮಾಧಿಕಾರಿಯ ತಲೆಯ ಸುತ್ತಲೂ, ಫೈಡ್. ಡೇಫ್., ಎಂಬುದಾಗಿ ಅಥವಾ ಕೇವಲ ಎಫ್.ಡಿ. ಎಂಬುದಾಗಿ ಕಾಣಿಸಿಕೊಳ್ಳುತ್ತದೆ. ಆಸಕ್ತಿಕರವಾಗಿ, “ಧರ್ಮ ಸಂರಕ್ಷಕ,” 1611ರ ಕಿಂಗ್ ಜೇಮ್ಸ್ ವರ್ಷನ್ನಲ್ಲಿ, ಅರಸ ಜೇಮ್ಸ್ಗೆ ಮಾಡಿದ ಅಂಕಿತದಲ್ಲಿ ತರುವಾಯ ಮುದ್ರಿಸಲಾಯಿತು.
b ಈ ಸಂಖ್ಯೆಯು ಅನಿಶ್ಚಿತವಾಗಿದೆ; ಕೆಲವು ಅಧಿಕಾರಿಗಳು 3,000 ಎಂದು ಹೇಳುತ್ತಾರೆ.
[ಪುಟ 29 ರಲ್ಲಿರುವ ಚೌಕ]
ಆರಂಭದ ಭಾಷಾಂತರಗಳು
ಸಾಮಾನ್ಯ ಜನರ ಭಾಷೆಯಲ್ಲಿ ಬೈಬಲಿನ ಭಾಷಾಂತರಕ್ಕಾಗಿ ಟಿಂಡೆಲ್ ಮಾಡಿದ ಮನವಿಯು, ಅನುಚಿತವಾದದ್ದೂ ಪೂರ್ವ ನಿದರ್ಶನವಿಲ್ಲದ್ದೂ ಆಗಿರಲಿಲ್ಲ. ಹತ್ತನೆಯ ಶತಮಾನದಲ್ಲಿ ಆ್ಯಂಗ್ಲೊ-ಸಾಕ್ಸನ್ ಭಾಷೆಯಲ್ಲಿ ಭಾಷಾಂತರವು ಮಾಡಲ್ಪಟ್ಟಿತು. ಲ್ಯಾಟಿನ್ ಭಾಷೆಯಿಂದ ಭಾಷಾಂತರಿಸಲ್ಪಟ್ಟಿದ್ದ ಮುದ್ರಿತ ಬೈಬಲುಗಳು, 15ನೆಯ ಶತಮಾನದ ಕೊನೆಯ ಭಾಗದಲ್ಲಿ, ಯೂರೋಪ್ನಲ್ಲಿ ಯಾವುದೇ ನಿರ್ಬಂಧವಿಲ್ಲದೆ ಚಲಾವಣೆಯಲ್ಲಿದ್ದವು: ಜರ್ಮನ್ (1466), ಇಟ್ಯಾಲಿಯನ್ (1471), ಫ್ರೆಂಚ್ (1474), ಚೆಕ್ (1475), ಡಚ್ (1477), ಮತ್ತು ಕ್ಯಾಟಲನ್ (1478). 1522ರಲ್ಲಿ ಮಾರ್ಟಿನ್ ಲೂತರ್ ಜರ್ಮನ್ ಭಾಷೆಯಲ್ಲಿ ತನ್ನ ಹೊಸ ಒಡಂಬಡಿಕೆಯನ್ನು ಪ್ರಕಟಿಸಿದನು. ಅದನ್ನೇ ಮಾಡುವ ಅನುಮತಿ ಇಂಗ್ಲೆಂಡ್ಗೆ ಏಕೆ ಕೊಡಬಾರದು ಎಂದಷ್ಟೇ ಟಿಂಡೆಲ್ ಕೇಳಿದನು.
[ಪುಟ 26 ರಲ್ಲಿರುವ ಚಿತ್ರ ಕೃಪೆ]
Bible in the background: © The British Library Board; William Tyndale: By kind permission of the Principal, Fellows and Scholars of Hertford College, Oxford