ದುರ್ವಾರ್ತೆಯ ಹೆಚ್ಚಾಗುತ್ತಿರುವ ವ್ಯಾಪ್ತಿ
ದುರ್ವಾರ್ತೆಯನ್ನು ಘೋಷಿಸುವ ಶಿರೋನಾಮಗಳು, ಸುವಾರ್ತೆಯನ್ನು ತಿಳಿಯಪಡಿಸುವ ಶಿರೋನಾಮಗಳಿಗಿಂತ ಹೆಚ್ಚಿನ ವಾಚಕ ಆಸಕ್ತಿಯನ್ನು ಕೆರಳಿಸುತ್ತವೆಂಬುದನ್ನು ನೀವು ಎಂದಾದರೂ ಗಮನಿಸಿದ್ದೀರೊ? ಅದು ಒಂದು ನೈಸರ್ಗಿಕ ವಿಪತ್ತಿನ ಕುರಿತಾದ ವಾರ್ತಾಪತ್ರಿಕೆಯ ಶಿರೋನಾಮವಾಗಿರಲಿ ಅಥವಾ ಒಂದು ಥಳುಕಿನ ಪತ್ರಿಕೆಯ ಮುಖಪುಟದ ಮೇಲೆ ಪ್ರಧಾನವಾಗಿ ಪ್ರದರ್ಶಿಸಲ್ಪಟ್ಟ ಯಾವುದೊ ಸ್ವಾರಸ್ಯಕರವಾದ ಹರಟೆಯಾಗಿರಲಿ, ಸುವಾರ್ತೆಗಿಂತ ದುರ್ವಾರ್ತೆಯು ಹೆಚ್ಚು ಉತ್ತಮವಾಗಿ ಮಾರಾಟವಾಗುವಂತೆ ತೋರುತ್ತದೆ.
ಇಂದು ದುರ್ವಾರ್ತೆಯ ಕೊರತೆ ಇರುವುದಿಲ್ಲ. ಆದರೆ, ಯಾವುದೇ ಸುವಾರ್ತೆಯನ್ನು ಪ್ರತ್ಯೇಕವಾಗಿಡುತ್ತಾ, ದುರ್ವಾರ್ತೆಯನ್ನೇ ಹುಡುಕಿ, ಪತ್ತೆಹಚ್ಚುವಂತೆ ವರದಿಗಾರರು ಮತ್ತು ಪತ್ರಿಕೋದ್ಯೋಗಿಗಳು ತರಬೇತುಗೊಳಿಸಲ್ಪಟ್ಟಿದ್ದಾರೊ ಎಂಬುದಾಗಿ ವ್ಯಕ್ತಿಯೊಬ್ಬನು ಕೆಲವೊಮ್ಮೆ ಕುತೂಹಲಪಡುತ್ತಾನೆ.
ಇತಿಹಾಸದ ಉದ್ದಕ್ಕೂ ಯಥೇಷ್ಟವಾದದ್ದು
ನಿಶ್ಚಯವಾಗಿಯೂ, ಯಾವುದೇ ಸುವಾರ್ತೆಯನ್ನು ಪ್ರಾಧಾನ್ಯದಲ್ಲಿ ಮೀರಿಸುತ್ತಾ, ದುರ್ವಾರ್ತೆಯು ಶತಮಾನಗಳ ಉದ್ದಕ್ಕೂ ಯಥೇಷ್ಟವಾಗಿ ಪರಿಣಮಿಸಿದೆ. ಐತಿಹಾಸಿಕ ದಾಖಲೆಗಳಲ್ಲಿ, ಮಾನವಜಾತಿಯ ಪಾಲಾಗಿ ಪರಿಣಮಿಸಿರುವ ಮಾನವ ಕಷ್ಟಾನುಭವ, ಆಶಾಭಂಗ, ಮತ್ತು ಹತಾಶೆಯ ಕಡೆಗೆ ಪ್ರಮಾಣಗಳು ಭಾರವಾಗಿ ಓಲಿಕೊಂಡಿವೆ.
ಕೆಲವೊಂದು ಉದಾಹರಣೆಗಳನ್ನು ಮಾತ್ರ ನಾವು ಪರಿಗಣಿಸೋಣ. ಸಾಕ್ ಲೆಗ್ರಾನ್ ಅವರಿಂದ ಯೋಜಿಸಲ್ಪಟ್ಟ ಕ್ರಾನಿಕ್ಲ್ ಆಫ್ ದ ವರ್ಲ್ಡ್ ಎಂಬ ಪುಸ್ತಕವು, ವಿಭಿನ್ನ ದಾಖಲೆಗಳನ್ನು ಪ್ರಸ್ತುತಪಡಿಸುತ್ತದೆ. ಪ್ರತಿಯೊಂದು ದಾಖಲೆಯು, ಆ ಘಟನೆಯು ಸಂಭವಿಸಿದ ವಿಶಿಷ್ಟ ತಾರೀಖಿಗಾಗಿ ಬರೆಯಲ್ಪಟ್ಟಿದ್ದರೂ, ಅದು ಘಟನೆಯನ್ನು ವರದಿಸುವ ಒಬ್ಬ ಆಧುನಿಕ ಪತ್ರಿಕೋದ್ಯೋಗಿಯ ಮೂಲಕ ಹೇಳಲ್ಪಡುತ್ತಿದೆಯೊ ಎಂಬಂತಿದೆ. ಚೆನ್ನಾಗಿ ಸಂಶೋಧಿಸಲ್ಪಟ್ಟ ಈ ವರದಿಗಳಿಂದ, ಮನುಷ್ಯನು ಇಲ್ಲಿ, ಭೂಗ್ರಹದ ಮೇಲೆ ತನ್ನ ತೊಂದರೆಯುಕ್ತ ಅಸ್ತಿತ್ವದ ಉದ್ದಕ್ಕೂ ಕೇಳಿರುವ ವ್ಯಾಪಕವಾದ ದುರ್ವಾರ್ತೆಯ ಸೂಕ್ಷ್ಮನಿರೂಪಣೆಯನ್ನು ನಾವು ಪಡೆಯುತ್ತೇವೆ.
ಪ್ರಥಮವಾಗಿ, ಸಾ.ಶ.ಪೂ. 429ರಲ್ಲಿ ಗ್ರೀಸ್ನಿಂದ ಬಂದ ಈ ಆದಿಯ ವರದಿಯನ್ನು ಪರಿಗಣಿಸಿರಿ. ಅದು ಅಥೇನ್ಸ್ ಮತ್ತು ಸ್ಪಾರ್ಟಾದ ನಡುವೆ ಆಗ ನಡೆಯುತ್ತಿದ್ದ ಯುದ್ಧದ ಕುರಿತು ವರದಿಸುತ್ತಿದೆ: “ಪಾಟೆಡಿಯಾದ ಜನರು ತಮ್ಮ ಸತ್ತವರ ದೇಹಗಳನ್ನು ತಿನ್ನುವಂತಹ ಹಸಿವಿನ ಸ್ಥಿತಿಗೆ ಇಳಿಸಲ್ಪಟ್ಟ ತರುವಾಯ, ಮುತ್ತಿಗೆ ಹಾಕುತ್ತಿರುವ ಅಥೇನಿಯರಿಗೆ ಶರಣಾಗತರಾಗುವಂತೆ ಆ ನಗರ ರಾಜ್ಯವು ಒತ್ತಾಯಿಸಲ್ಪಟ್ಟಿದೆ.” ದುರ್ವಾತೆಯೇ ಸರಿ!
ನಮ್ಮ ಸಾಮಾನ್ಯ ಶಕ ಪೂರ್ವ ಮೊದಲನೆಯ ಶತಮಾನದ ಕಡೆಗೆ ಸಾಗುತ್ತಾ, ರೋಮ್, ಕ್ರಿ.ಪೂ. 44, ಮಾರ್ಚ್ 15ರ ದಿನಾಂಕವನ್ನೊಳಗೊಂಡ, ಜೂಲಿಯಸ್ ಸೀಸರ್ನ ಮರಣದ ಸುಸ್ಪಷ್ಟ ವರದಿಯನ್ನು ನಾವು ಕಾಣುತ್ತೇವೆ. “ಜೂಲಿಯಸ್ ಸೀಸರ್ ಕೊಲ್ಲಲ್ಪಟ್ಟಿದ್ದಾನೆ. ಮಾರ್ಚ್ ಹದಿನೈದರ ದಿನವಾದ ಇಂದು, ಶಾಸನ ಸಭೆಯಲ್ಲಿ ಅವನು ಆಸನಾರೂಢನಾದಂತೆ, ಅವನ ಆಪ್ತ ಮಿತ್ರರಲ್ಲಿ ಕೆಲವರನ್ನು ಒಳಗೊಂಡ ಸಂಚುಗಾರರ ಒಂದು ಗುಂಪಿನ ಮೂಲಕ ಅವನು ಇರಿದು ಕೊಲ್ಲಲ್ಪಟ್ಟನು.”
ಹಿಂಬಾಲಿಸಿ ಬಂದ ಶತಮಾನಗಳಲ್ಲಿ, ದುರ್ವಾರ್ತೆಯು ತುಂಬಿತುಳುಕುತ್ತಾ ಮುಂದುವರಿಯಿತು. ತಲ್ಲಣಗೊಳಿಸುವ ಒಂದು ಉದಾಹರಣೆಯು, 1487ರಲ್ಲಿ ಮೆಕ್ಸಿಕೊದಿಂದ ಬಂದ ಈ ಸುದ್ದಿಯಾಗಿದೆ: “ಆ್ಯಸ್ಟೆಕ್ ರಾಜಧಾನಿಯಾದ ಟೆನೋಚ್ಟಿಟ್ಲಾನ್ನಲ್ಲಿ ಎಂದೂ ಕಾಣದ ಅತ್ಯಂತ ಆಡಂಬರದ ಬಲಿಯರ್ಪಣೆಯ ಪ್ರದರ್ಶನದಲ್ಲಿ, ಯುದ್ಧ ದೇವನಾದ ವಿಟ್ಸೀಲೊಪೊಚ್ಟ್ಲಿಗಾಗಿ 20,000 ಜನರ ಅಕ್ಷರಾರ್ಥಕ ಹೃದಯಗಳು ತೆಗೆಯಲ್ಪಟ್ಟವು ಮತ್ತು ಬಲಿಯರ್ಪಿಸಲ್ಪಟ್ಟವು.”
ಮನುಷ್ಯನ ಕ್ರೌರ್ಯವು ದುರ್ವಾರ್ತೆಯನ್ನು ಒದಗಿಸಿದೆ ಮಾತ್ರವಲ್ಲ, ಅವನ ಅಜಾಗರೂಕತೆಯು ದುರ್ವಾರ್ತೆಯನ್ನು ತಂದಿರುವ ಘಟನೆಗಳ ಉದ್ದವಾದ ಪಟ್ಟಿಗೆ ಹೆಚ್ಚನ್ನು ಕೂಡಿಸಿದೆ. ಲಂಡನಿನ ಮಹಾ ಬೆಂಕಿಯು, ಅಂತಹ ಒಂದು ವಿಪತ್ತಾಗಿರುವಂತೆ ತೋರುತ್ತದೆ. ಇಂಗ್ಲೆಂಡ್ನ ಲಂಡನ್ನಿಂದ ಬಂದ, 1666ನೆಯ ಸೆಪ್ಟೆಂಬರ್, ದಿನಾಂಕ 5ರ ವರದಿಯು ಓದುವುದು: “ಕೊನೆಗೆ, ನಾಲ್ಕು ಹಗಲುರಾತ್ರಿಗಳ ತರುವಾಯ, ಲಂಡನಿನ ಬೆಂಕಿಯು ಯಾರ್ಕ್ನ ಡ್ಯೂಕರಿಂದ ನಂದಿಸಲ್ಪಟ್ಟಿದೆ. ಅವರು ಜ್ವಾಲೆಗಳ ಹಾದಿಯಲ್ಲಿದ್ದ ಕಟ್ಟಡಗಳನ್ನು ಬೀಳಿಸಲು ನಾವಿಕ ಸ್ಫೋಟಕ ತಂಡಗಳನ್ನು ಒಳತಂದರು. 87 ಚರ್ಚುಗಳು ಮತ್ತು 13,000ಕ್ಕಿಂತಲೂ ಹೆಚ್ಚಿನ ಮನೆಗಳು ನಾಶವಾಗುವುದರೊಂದಿಗೆ, ಸುಮಾರು 400 ಎಕರೆಗಳು ನೆಲಸಮ ಮಾಡಲ್ಪಟ್ಟಿವೆ. ಅದ್ಭುತಕರವಾಗಿ, ಒಂಬತ್ತು ಜೀವಗಳು ಮಾತ್ರ ನಷ್ಟಪಟ್ಟವು.”
ದುರ್ವಾರ್ತೆಯ ಈ ಉದಾಹರಣೆಗಳಿಗೆ, ಅನೇಕ ಭೂಖಂಡಗಳ ಉದ್ದಕ್ಕೂ ಅತ್ಯುಗ್ರವಾಗಿ ಬೀಸಿರುವ ಸಾಂಕ್ರಾಮಿಕ ರೋಗಗಳನ್ನು—ಉದಾಹರಣೆಗೆ, 1830ಗಳ ಆದಿಭಾಗದ ಕಾಲರ ಸಾಂಕ್ರಾಮಿಕ ರೋಗವನ್ನು—ನಾವು ಕೂಡಿಸಲೇಬೇಕು. ಇದನ್ನು ವರದಿಸುವ ಮುದ್ರಿತ ತಲೆಬರಹವು ಓದುವುದು: “ಕಾಲರದ ಪ್ರೇತವು ಯೂರೋಪಿನ ಉದ್ದಕ್ಕೂ ಸುಳಿದಾಡುತ್ತದೆ.” ಅನುಸರಿಸುವ ವಾಸ್ತವವಾದ ವರದಿಯು ಅತ್ಯಂತ ಕರಾಳ ರೂಪದ ದುರ್ವಾರ್ತೆಯನ್ನು ಚಿತ್ರಿಸುತ್ತದೆ: “1817ರ ತನಕ ಯೂರೋಪಿನಲ್ಲಿ ಅಜ್ಞಾತವಾಗಿದ್ದ ಕಾಲರ, ಏಷ್ಯಾದಿಂದ ಪಶ್ಚಿಮದ ಕಡೆಗೆ ಹರಡುತ್ತಿದೆ. ಈಗಾಗಲೇ ಮಾಸ್ಕೊ ಮತ್ತು ಸೆಂಟ್ ಪೀಟರ್ಸ್ಬರ್ಗ್ನಂತಹ ರಷ್ಯನ್ ನಗರಗಳ ಜನಸಂಖ್ಯೆಯಲ್ಲಿ, ಹತ್ತನೆಯ ಒಂದು ಭಾಗವು ನಾಶವಾಗಿದೆ—ಬಲಿಪಶುಗಳಲ್ಲಿ ಹೆಚ್ಚಿನವರು ನಗರದಲ್ಲಿನ ಬಡವರು.”
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿಕೆ
ಹೀಗೆ, ದಾಖಲಿಸಲ್ಪಟ್ಟಿರುವ ಇತಿಹಾಸದ ಉದ್ದಕ್ಕೂ ದುರ್ವಾರ್ತೆಯು ಒಂದು ವಾಸ್ತವಿಕತೆಯಾಗಿದೆ ಎಂಬುದು ಸತ್ಯವಾಗಿದ್ದರೂ, ದುರ್ವಾರ್ತೆಯು ಹೆಚ್ಚುತ್ತಿದೆ, ಅದು ನಿಜವಾಗಿಯೂ ತೀವ್ರವಾಗಿ ಹೆಚ್ಚುತ್ತಿದೆ ಎಂಬ ಸಾಕ್ಷ್ಯವನ್ನು ಈ 20ನೆಯ ಶತಮಾನದ ಇತ್ತೀಚಿನ ದಶಕಗಳು ಕೊಡುತ್ತವೆ.
ನಿಸ್ಸಂದೇಹವಾಗಿ ಯುದ್ಧದ ಸುದ್ದಿಯು, ನಮ್ಮ ಪ್ರಚಲಿತ ಶತಮಾನವು ಕೇಳಿರುವಂತಹ ಅತ್ಯಂತ ದುರ್ವಾರ್ತೆಯಾಗಿ ಪರಿಣಮಿಸಿದೆ. ಇತಿಹಾಸದಲ್ಲಿನ ಅತ್ಯಂತ ದೊಡ್ಡದಾದ ಎರಡು ಯುದ್ಧಗಳು—Iನೆಯ ಜಾಗತಿಕ ಯುದ್ಧ ಮತ್ತು IIನೆಯ ಜಾಗತಿಕ ಯುದ್ಧ ಎಂಬುದಾಗಿ ಸೂಕ್ತವಾಗಿ ಕರೆಯಲ್ಪಟ್ಟಿದ್ದು—ಖಂಡಿತವಾಗಿಯೂ ಭಯಂಕರವಾದ ಪ್ರಮಾಣದಲ್ಲಿ ವರದಿಸಲ್ಪಟ್ಟ ದುರ್ವಾರ್ತೆಯನ್ನು ಕಂಡವು. ಆದರೆ ಅದು, ನಿಜವಾಗಿಯೂ ಈ ಅಸಂತುಷ್ಟ ಶತಮಾನವು ಒದಗಿಸಿರುವ ದುರ್ವಾರ್ತೆಯ ಕೇವಲ ಒಂದು ಸಣ್ಣ ಮೊತ್ತವಾಗಿದೆ.
ಮನಬಂದಂತೆ ಆರಿಸಿತೆಗೆದ ಕೇವಲ ಕೆಲವು ಶಿರೋನಾಮಗಳನ್ನು ಪರಿಗಣಿಸಿರಿ:
ಸೆಪ್ಟೆಂಬರ್ 1, 1923: ಕಂಪನವು ಟೋಕಿಯೊ ನಗರವನ್ನು ನೆಲಸಮಮಾಡುತ್ತದೆ—3,00,000 ಮಂದಿ ಮೃತಪಟ್ಟಿದ್ದಾರೆ; ಸೆಪ್ಟೆಂಬರ್ 20, 1931: ಬಿಕ್ಕಟ್ಟು—ಬ್ರಿಟನ್ ಪೌಂಡನ್ನು ಅಪಮೌಲ್ಯೀಕರಿಸುತ್ತದೆ; ಜೂನ್ 25, 1950: ಉತ್ತರ ಕೊರಿಯವು ದಕ್ಷಿಣ ಕೊರಿಯದೊಳಗೆ ದಂಡು ಪ್ರವೇಶ ಮಾಡುತ್ತದೆ; ಅಕ್ಟೋಬರ್ 26, 1956: ಹಂಗೆರಿ ದೇಶದವರು ಸೋವಿಯಟ್ ಆಳಿಕೆಯ ವಿರುದ್ಧ ಪ್ರತಿಭಟಿಸುತ್ತಾರೆ; ನವೆಂಬರ್ 22, 1963: ಜಾನ್ ಕೆನಡಿ, ಡಲಸ್ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದಾರೆ; ಆಗಸ್ಟ್ 21, 1968: ರಷ್ಯನ್ ಟ್ಯಾಂಕ್ಗಳು ಪ್ರಾಗ್ ಬಂಡಾಯವನ್ನು ನಿರ್ಮೂಲಮಾಡಲು ಒಳಪ್ರವೇಶಿಸುತ್ತವೆ; ಸೆಪ್ಟೆಂಬರ್ 12, 1970: ಅಪಹರಿಸಲ್ಪಟ್ಟ ಜೆಟ್ ವಿಮಾನಗಳು ಮರುಭೂಮಿಯಲ್ಲಿ ನಾಶಗೊಳಿಸಲ್ಪಟ್ಟವು; ಡಿಸೆಂಬರ್ 25, 1974: ಟ್ರೇಸೀ ಎಂಬ ಪ್ರಚಂಡ ಮಾರುತವು ಡಾರ್ವಿನ್ ಪಟ್ಟಣವನ್ನು ಧ್ವಂಸಗೊಳಿಸುತ್ತದೆ—66 ಜನರು ಮೃತಪಟ್ಟರು; ಎಪ್ರಿಲ್ 17, 1975: ಕಂಬೋಡಿಯ ಕಮ್ಯೂನಿಸ್ಟ್ ಸೇನೆಗಳ ಕೈವಶವಾಗುತ್ತದೆ; ನವೆಂಬರ್ 18, 1978: ಗಯಾನದಲ್ಲಿ ಸಾಮೂಹಿಕ ಆತ್ಮಹತ್ಯೆ; ಅಕ್ಟೋಬರ್ 31, 1984: ಶ್ರೀಮತಿ ಗಾಂಧಿಯವರು ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದಾರೆ; ಜನವರಿ 28, 1986: ಬಾಹ್ಯಾಕಾಶ ನೌಕೆಯು ಆಕಾಶಕ್ಕೆ ಹಾರುವಾಗ ಸ್ಫೋಟಗೊಳ್ಳುತ್ತದೆ; ಎಪ್ರಿಲ್ 26, 1986: ಸೋವಿಯಟ್ ರಿಯಾಕ್ಟರ್ಗೆ ಬೆಂಕಿ ಹತ್ತುತ್ತದೆ; ಅಕ್ಟೋಬರ್ 19, 1987: ಬಂಡವಾಳಪತ್ರದ ಪೇಟೆಯ ಕುಸಿತ; ಮಾರ್ಚ್ 25, 1989: ತೈಲ ಸುರಿತದಿಂದ ಅಲಾಸ್ಕಾ ತೀವ್ರವಾಗಿ ಬಾಧಿಸಲ್ಪಟ್ಟಿದೆ; ಜೂನ್ 4, 1989: ಟೀನ್ಮನ್ ಚೌಕದಲ್ಲಿ ಪ್ರತಿಭಟಿಸುವವರನ್ನು ಸೈನಿಕರು ಕ್ರೂರವಾಗಿ ಕೊಲ್ಲುತ್ತಾರೆ.
ಹೌದು, ಸುವಾರ್ತೆಯು ತುಲನಾತ್ಮಕವಾಗಿ ವಿರಳವಾಗಿರುವಾಗ, ದುರ್ವಾರ್ತೆಯು ಯಾವಾಗಲೂ ಹೇರಳವಾಗಿದೆ ಎಂಬುದನ್ನು ಇತಿಹಾಸವು ತೋರಿಸುತ್ತದೆ. ದುರ್ವಾರ್ತೆಯು ಇತ್ತೀಚಿನ ದಶಕಗಳಲ್ಲಿ ಹೆಚ್ಚಾಗಿರುವಂತೆ, ಪ್ರತಿಯೊಂದು ವರ್ಷವು ದಾಟಿದಂತೆ ಸುವಾರ್ತೆಯು ಕಡಮೆಯಾಗಿದೆ.
ಇದು ಏಕೆ ಹೀಗಿರಬೇಕು? ಅದು ಯಾವಾಗಲೂ ಹಾಗಿರುವುದೊ?
ಮುಂದಿನ ಲೇಖನವು ಈ ಎರಡು ಪ್ರಶ್ನೆಗಳನ್ನು ಸಂಬೋಧಿಸುವುದು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
WHO/League of Red Cross