ಆಶೀರ್ವಾದಗಳು ಅಥವಾ ಶಾಪಗಳು—ಆಯ್ಕೆಯೊಂದಿದೆ!
“ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; . . . ನೀವೂ . . . ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ.”—ಧರ್ಮೋಪದೇಶಕಾಂಡ 30:19.
1. ಯಾವ ಸಾಮರ್ಥ್ಯವು ಮಾನವರಿಗೆ ಕೊಡಲಾಯಿತು?
ಯೆಹೋವ ದೇವರು ನಮ್ಮನ್ನು—ತನ್ನ ಬುದ್ಧಿವಂತ ಮಾನವ ಜೀವಿಗಳನ್ನು—ಸ್ವತಂತ್ರ ನೈತಿಕ ಕಾರ್ಯಸ್ಥರಾಗಿರುವಂತೆ ವಿನ್ಯಾಸಿಸಿದನು. ನಾವು ಬರಿಯ ಯಂತ್ರದ ಗೊಂಬೆಗಳಂತೆ ಅಥವಾ ಯಂತ್ರ ಮಾನವರಂತೆ ಸೃಷ್ಟಿಸಲ್ಪಡಲಿಲ್ಲ, ಬದಲಿಗೆ ಆಯ್ಕೆಗಳನ್ನು ಮಾಡುವ ಸುಯೋಗ ಹಾಗೂ ಜವಾಬ್ದಾರಿಯು ನಮಗೆ ಕೊಡಲ್ಪಟ್ಟಿತು. (ಕೀರ್ತನೆ 100:3) ಪ್ರಥಮ ಮಾನವರಾದ ಆದಾಮ ಹವ್ವರು, ತಮ್ಮ ಕ್ರಿಯಾಪಥವನ್ನು ಆರಿಸಿಕೊಳ್ಳಲು ಸ್ವತಂತ್ರರಾಗಿದ್ದರು, ಮತ್ತು ತಮ್ಮ ಆಯ್ಕೆಗಾಗಿ ಅವರು ದೇವರಿಗೆ ಉತ್ತರವಾದಿಯಾಗಿದ್ದರು.
2. ಯಾವ ಆಯ್ಕೆಯನ್ನು ಆದಾಮನು ಮಾಡಿದನು, ಮತ್ತು ಯಾವ ಪರಿಣಾಮದೊಂದಿಗೆ?
2 ಒಂದು ಪ್ರಮೋದವನ ಭೂಮಿಯ ಮೇಲೆ ನಿರಂತರ ಆಶೀರ್ವಾದದ ಮಾನವ ಜೀವಿತಕ್ಕಾಗಿ, ಸೃಷ್ಟಿಕರ್ತನು ಯಥೇಷ್ಟವಾಗಿ ಒದಗಿಸಿದ್ದಾನೆ. ಆ ಉದ್ದೇಶವು ಏಕೆ ಈ ತನಕ ಸಾಧಿಸಲ್ಪಟ್ಟಿಲ್ಲ? ಏಕೆಂದರೆ ಆದಾಮನು ತಪ್ಪು ಆಯ್ಕೆಯನ್ನು ಮಾಡಿದನು. ಆ ಮನುಷ್ಯನಿಗೆ ಯೆಹೋವನು ಈ ಆಜ್ಞೆಯನ್ನು ವಿಧಿಸಿದ್ದನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ಆದಾಮನು ವಿಧೇಯನಾಗಲು ಆರಿಸಿಕೊಂಡಿದ್ದರೆ, ನಮ್ಮ ಪ್ರಥಮ ಹೆತ್ತವರು ಆಶೀರ್ವದಿಸಲ್ಪಟ್ಟಿರುತ್ತಿದ್ದರು. ಅವಿಧೇಯತೆಯು ಮರಣವನ್ನು ತಂದಿತು. (ಆದಿಕಾಂಡ 3:6, 18, 19) ಆದುದರಿಂದ ಆದಾಮನ ಸಕಲ ಸಂತತಿಗಳಿಗೆ ಪಾಪಮರಣಗಳು ಸಾಗಿಸಲ್ಪಟ್ಟಿವೆ.—ರೋಮಾಪುರ 5:12.
ಸಾಧ್ಯಗೊಳಿಸಲ್ಪಟ್ಟ ಆಶೀರ್ವಾದಗಳು
3. ಮಾನವಜಾತಿಗಾಗಿರುವ ತನ್ನ ಉದ್ದೇಶವು ನೆರವೇರಲ್ಪಡುವುದೆಂಬ ಆಶ್ವಾಸನೆಯನ್ನು ದೇವರು ಹೇಗೆ ಒದಗಿಸಿದನು?
3 ಮಾನವಜಾತಿಯನ್ನು ಆಶೀರ್ವದಿಸಲಿಕ್ಕಾಗಿದ್ದ ತನ್ನ ಉದ್ದೇಶವು ಕಟ್ಟಕಡೆಗೆ ನೆರವೇರುವಂತೆ ಮಾಡುವ ಒಂದು ವಿಧಾನವನ್ನು ಯೆಹೋವ ದೇವರು ಸ್ಥಾಪಿಸಿದನು. ಏದೆನ್ ತೋಟದಲ್ಲಿ ಪ್ರವಾದಿಸುತ್ತಾ, ಆತನು ಒಬ್ಬ ಸಂತಾನದ ಕುರಿತು ಸ್ವತಃ ಮುಂತಿಳಿಸಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಅಬ್ರಹಾಮನ ಸಂತತಿಯವನಾದ ಈ ಸಂತಾನದ ಮೂಲಕ, ವಿಧೇಯ ಮಾನವಜಾತಿಗೆ ಆಶೀರ್ವಾದಗಳು ಬರುವವೆಂದು ದೇವರು ತದನಂತರ ವಾಗ್ದಾನಿಸಿದನು.—ಆದಿಕಾಂಡ 22:15-18.
4. ಮಾನವಜಾತಿಯನ್ನು ಆಶೀರ್ವದಿಸಲಿಕ್ಕಾಗಿ ಯೆಹೋವನು ಯಾವ ಏರ್ಪಾಡನ್ನು ಮಾಡಿದ್ದಾನೆ?
4 ಆಶೀರ್ವಾದದ ಆ ವಾಗ್ದತ್ತ ಸಂತಾನ ಯೇಸು ಕ್ರಿಸ್ತನಾಗಿ ಪರಿಣಮಿಸಿದನು. ಮಾನವಜಾತಿಯನ್ನು ಆಶೀರ್ವದಿಸಲಿಕ್ಕಾಗಿದ್ದ ಯೆಹೋವನ ಏರ್ಪಾಡಿನಲ್ಲಿ ಯೇಸುವಿನ ಪಾತ್ರದ ಸಂಬಂಧದಲ್ಲಿ, ಕ್ರೈಸ್ತ ಅಪೊಸ್ತಲ ಪೌಲನು ಬರೆದುದು: “ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” (ರೋಮಾಪುರ 5:8) ಪಾಪಮಯ ಮಾನವಜಾತಿಯಲ್ಲಿ ದೇವರಿಗೆ ವಿಧೇಯರಾಗುವ ಮತ್ತು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೌಲ್ಯವನ್ನು ಸ್ವತಃ ಪಡೆದುಕೊಳ್ಳುವವರಿಂದ ಆಶೀರ್ವಾದಗಳು ಅನುಭವಿಸಲ್ಪಡುವವು. (ಅ. ಕೃತ್ಯಗಳು 4:12) ನೀವು ವಿಧೇಯತೆ ಹಾಗೂ ಆಶೀರ್ವಾದಗಳನ್ನು ಆರಿಸಿಕೊಳ್ಳುವಿರೊ? ಅವಿಧೇಯತೆಯು ಬಹಳ ವಿಭಿನ್ನವಾದ ಯಾವುದೊ ವಿಷಯದಲ್ಲಿ ಪರಿಣಮಿಸುವುದು.
ಶಾಪಗಳ ಕುರಿತೇನು?
5. “ಶಾಪ” ಎಂಬ ಪದದ ಅರ್ಥವೇನು?
5 ಶಾಪವು ಆಶೀರ್ವಾದಕ್ಕೆ ವಿರುದ್ಧವಾದದ್ದಾಗಿದೆ. “ಶಾಪ” ಎಂಬ ಪದದ ಅರ್ಥವು, ಯಾರೊ ಒಬ್ಬನ ಕುರಿತು ಕೆಟ್ಟದಾಗಿ ಮಾತಾಡುವುದು ಅಥವಾ ಅವನ ಪ್ರತಿ ಕೇಡನ್ನು ಪ್ರಕಟಿಸುವುದಾಗಿದೆ. ಹೀಬ್ರು ಪದವಾದ ಖೆಲಲಾ ಮೂಲ ಕ್ರಿಯಾಪದವಾದ ಖಲಾಲ್ ಎಂಬುದರಿಂದ ತೆಗೆಯಲ್ಪಟ್ಟಿದೆ, ಅದರ ಅಕ್ಷರಾರ್ಥವು “ಅಲ್ಪವಾಗಿರು” ಎಂದಾಗಿದೆ. ಆದರೆ, ಸಾಂಕೇತಿಕ ಅರ್ಥದಲ್ಲಿ ಉಪಯೋಗಿಸಲ್ಪಟ್ಟಾಗ, ಅದು ‘ಕೇಡು ಎರಗಲೆಂದು ಹಾರೈಸು’ ಅಥವಾ ‘ತಿರಸ್ಕಾರದಿಂದ ಉಪಚರಿಸು’ ಎಂಬುದನ್ನು ಅರ್ಥೈಸುತ್ತದೆ.—ಯಾಜಕಕಾಂಡ 20:9; 2 ಸಮುವೇಲ 19:43.
6. ಪ್ರಾಚೀನ ಬೇತೇಲಿನ ಬಳಿ ಎಲೀಷನನ್ನು ಒಳಗೊಂಡ ಯಾವ ಘಟನೆಯು ಸಂಭವಿಸಿತು?
6 ಒಂದು ಶಾಪವನ್ನೊಳಗೊಂಡ ತಡವಿಲ್ಲದ ಕ್ರಿಯೆಯ ವಿಷಯದಲ್ಲಿ ಒಂದು ನಾಟಕೀಯ ಉದಾಹರಣೆಯನ್ನು ಪರಿಗಣಿಸಿರಿ. ಇದು, ದೇವರ ಪ್ರವಾದಿಯಾದ ಎಲೀಷನು ಯೆರಿಕೋದಿಂದ ಬೇತೇಲಿನ ಕಡೆಗೆ ನಡೆಯುತ್ತಿದ್ದಾಗ ಸಂಭವಿಸಿತು. ವೃತ್ತಾಂತವು ಹೇಳುವುದು: “ಎಲೀಷನು ಅಲ್ಲಿಂದ ಬೇತೇಲಿಗೆ ಹೊರಟು ಅಲ್ಲಿನ ಗುಡ್ಡವನ್ನು ಹತ್ತುತ್ತಿರುವಾಗ ಆ ಊರಿನ ಹುಡುಗರು ಹೊರಗೆ ಬಂದು—ಬೋಳಮಂಡೆಯವನೇ, ಏರು; ಬೋಳಮಂಡೆಯವನೇ, ಏರು ಎಂದು ಕೂಗಿ ಅವನನ್ನು ಪರಿಹಾಸ್ಯಮಾಡಿದರು. ಅವನು ಅವರ ಕಡೆಗೆ ತಿರುಗಿಕೊಂಡು ಯೆಹೋವನ ಹೆಸರಿನಲ್ಲಿ ಅವರನ್ನು ಶಪಿಸಿದನು. ಕೂಡಲೆ ಕಾಡಿನಿಂದ ಎರಡು ಹೆಣ್ಣು ಕರಡಿಗಳು ಬಂದು ಆ ಹುಡುಗರಲ್ಲಿ ನಾಲ್ವತ್ತೆರಡು ಮಂದಿಯನ್ನು ಹರಿದುಬಿಟ್ಟವು.” (2 ಅರಸುಗಳು 2:23, 24) ಪರಿಹಾಸ್ಯಮಾಡುತ್ತಿದ್ದ ಆ ಮಕ್ಕಳ ಮೇಲೆ ಕೇಡು ಎರಗಲೆಂದು ಹಾರೈಸುವ ಮೂಲಕ, ಎಲೀಷನು ಆ ಶಾಪವನ್ನು ನುಡಿದಾಗ ನಿಖರವಾಗಿ ಏನನ್ನು ಹೇಳಿದನೆಂಬುದು ಪ್ರಕಟಿಸಲ್ಪಟ್ಟಿಲ್ಲ. ಆದರೂ, ಆ ಶಾಬ್ದಿಕ ಪ್ರಕಟನೆಯು ಪರಿಣಾಮಕಾರಿಯಾಗಿತ್ತು, ಏಕೆಂದರೆ ಅದು ದೈವಿಕ ಚಿತ್ತದೊಂದಿಗೆ ಹೊಂದಿಕೆಯಲ್ಲಿ ಕಾರ್ಯಮಾಡುವ ದೇವರ ಪ್ರವಾದಿಯ ಮೂಲಕ, ಯೆಹೋವನ ಹೆಸರಿನಲ್ಲಿ ನುಡಿಯಲ್ಪಟ್ಟಿತು.
7. ಎಲೀಷನನ್ನು ಪರಿಹಾಸ್ಯಮಾಡಿದ ಮಕ್ಕಳಿಗೆ ಏನು ಸಂಭವಿಸಿತು, ಮತ್ತು ಏಕೆ?
7 ಪರಿಹಾಸ್ಯಕ್ಕೆ ಮುಖ್ಯ ಕಾರಣವು, ಎಲೀಷನು ಎಲೀಯನ ಚಿರಪರಿಚಿತ ಅಧಿಕೃತ ನಿಲುವಂಗಿಯನ್ನು ಧರಿಸಿದ್ದನು, ಮತ್ತು ಆ ಪ್ರವಾದಿಯ ಯಾವನೇ ಉತ್ತರಾಧಿಕಾರಿಯು ಆ ಕ್ಷೇತ್ರದಲ್ಲಿರುವುದನ್ನು ಮಕ್ಕಳು ಬಯಸದಿರುವುದೇ ಆಗಿತ್ತೆಂದು ತೋರುತ್ತದೆ. (2 ಅರಸುಗಳು 2:13) ತಾನು ಎಲೀಯನ ಉತ್ತರಾಧಿಕಾರಿಯಾಗಿರುವುದರ ಪಂಥಾಹ್ವಾನವನ್ನು ಉತ್ತರಿಸಲು ಮತ್ತು ಆ ಯುವ ಜನರಿಗೆ ಹಾಗೂ ಅವರ ಹೆತ್ತವರಿಗೆ ಯೆಹೋವನ ಪ್ರವಾದಿಗಾಗಿ ಯೋಗ್ಯವಾದ ಗೌರವವನ್ನು ಕಲಿಸಲು, ಎಲೀಷನು ಪರಿಹಾಸ್ಯಮಾಡುತ್ತಿದ್ದ ಗುಂಪಿನ ಮೇಲೆ ಎಲೀಯನ ದೇವರ ಹೆಸರಿನಲ್ಲಿ ಕೇಡನ್ನು ಹಾರೈಸಿದನು. ಕಾಡಿನೊಳಗಿಂದ ಆ ಎರಡು ಹೆಣ್ಣು ಕರಡಿಗಳು ಬಂದು, ಆ ಪರಿಹಾಸಕರಲ್ಲಿ 42 ಮಂದಿಯನ್ನು ಹರಿದುಬಿಡುವಂತೆ ಮಾಡುವ ಮೂಲಕ, ಎಲೀಷನು ತನ್ನ ಪ್ರವಾದಿಯಾಗಿರುವುದರ ಕುರಿತು ಯೆಹೋವನು ತನ್ನ ಸಮ್ಮತಿಯನ್ನು ಪ್ರದರ್ಶಿಸಿದನು. ಯೆಹೋವನು ಆ ಸಮಯದಲ್ಲಿ ಭೂಮಿಯ ಮೇಲೆ ಉಪಯೋಗಿಸುತ್ತಿದ್ದ ಸಂವಾದದ ಮಾಧ್ಯಮಕ್ಕಾಗಿ ಗೌರವದ ಅವರ ಲಜ್ಜಾಹೀನ ಕೊರತೆಯಿಂದಾಗಿ ಆತನು ನಿರ್ಣಾಯಕವಾಗಿ ವ್ಯವಹರಿಸಿದನು.
8. ಇಸ್ರಾಯೇಲಿನ ಜನರು ಏನನ್ನು ಮಾಡಲು ಒಪ್ಪಿದರು, ಮತ್ತು ಯಾವ ಪ್ರತೀಕ್ಷೆಗಳೊಂದಿಗೆ?
8 ಅನೇಕ ವರ್ಷಗಳ ಮುಂಚೆ, ಇಸ್ರಾಯೇಲ್ಯರು ದೇವರ ಏರ್ಪಾಡುಗಳಿಗಾಗಿ ತದ್ರೀತಿಯ ಗೌರವದ ಕೊರತೆಯನ್ನು ತೋರಿಸಿದರು. ಅದು ವಿಕಾಸಗೊಂಡಿದ್ದು ಹೀಗೆ: ಸಾ.ಶ.ಪೂ. 1513ರಲ್ಲಿ, ಇಸ್ರಾಯೇಲ್ ಜನಾಂಗವನ್ನು ‘ಹದ್ದುಗಳ ರೆಕ್ಕೆಗಳ ಮೇಲೆಯೊ’ ಎಂಬಂತೆ ಐಗುಪ್ತದ ದಾಸತ್ವದಿಂದ ಬಿಡಿಸುವ ಮೂಲಕ, ಯೆಹೋವನು ಅವರಿಗೆ ಅನುಗ್ರಹವನ್ನು ತೋರಿಸಿದನು. ಇದಾದ ಸ್ವಲ್ಪ ಸಮಯದಲ್ಲಿಯೇ, ಅವರು ದೇವರಿಗೆ ವಿಧೇಯರಾಗುವ ಪ್ರತಿಜ್ಞೆಮಾಡಿದರು. ವಿಧೇಯತೆಯು ದೇವರ ಸಮ್ಮತಿಯನ್ನು ಪಡೆಯುವುದಕ್ಕೆ ಹೇಗೆ ಬಿಡಿಸಲಾಗದಂತೆ ಜೋಡಿಸಲ್ಪಟ್ಟಿತ್ತೆಂಬುದನ್ನು ಗಮನಿಸಿರಿ. ಯೆಹೋವನು ಮೋಶೆಯ ಮುಖಾಂತರ ಹೇಳಿದ್ದು: “ಹೀಗಿರಲಾಗಿ ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ.” ತರುವಾಯ, ಜನರು ಹೀಗೆ ಹೇಳುತ್ತಾ, ನಿಶ್ಚಯಾರ್ಥಕವಾಗಿ ಪ್ರತಿಕ್ರಿಯಿಸಿದರು: “ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು.” (ವಿಮೋಚನಕಾಂಡ 19:4, 5, 8; 24:3) ಇಸ್ರಾಯೇಲ್ಯರು ಯೆಹೋವನನ್ನು ಪ್ರೀತಿಸುವುದಾಗಿ ಪ್ರತಿಪಾದಿಸಿದರು, ಆತನಿಗೆ ಸಮರ್ಪಿತರಾಗಿದ್ದರು, ಮತ್ತು ಆತನ ಧ್ವನಿಗೆ ವಿಧೇಯರಾಗಲು ಪ್ರತಿಜ್ಞೆಮಾಡಿದರು. ಹಾಗೆ ಮಾಡುವುದು ಮಹಾ ಆಶೀರ್ವಾದಗಳಲ್ಲಿ ಪರಿಣಮಿಸಲಿತ್ತು.
9, 10. ಮೋಶೆಯು ಸೀನಾಯಿ ಪರ್ವತದ ಮೇಲೆ ಇದ್ದಾಗ, ಇಸ್ರಾಯೇಲ್ಯರು ಏನು ಮಾಡಿದರು, ಮತ್ತು ಯಾವ ಪರಿಣಾಮಗಳೊಂದಿಗೆ?
9 ಆದರೆ, ಆ ಒಪ್ಪಂದದ ಮೂಲಭೂತ ಸೂತ್ರಗಳು ‘ದೇವರ ಬೆರಳಿನ’ (NW) ಮೂಲಕ ಕಲ್ಲಿನಲ್ಲಿ ಕೆತ್ತಲ್ಪಡುವ ಮುಂಚೆ, ದೈವಿಕ ಶಾಪಗಳು ಅಗತ್ಯವಾಗಿ ಪರಿಣಮಿಸಿದವು. (ವಿಮೋಚನಕಾಂಡ 31:18) ಇಂತಹ ದುರಂತಕರ ಪರಿಣಾಮಗಳು ಏಕೆ ಯೋಗ್ಯವಾಗಿದ್ದವು? ಯೆಹೋವನು ನುಡಿದದ್ದೆಲ್ಲವನ್ನು ಮಾಡುವ ಬಯಕೆಯನ್ನು ಇಸ್ರಾಯೇಲ್ಯರು ಸೂಚಿಸಿರಲಿಲ್ಲವೇ? ಹೌದು, ಮಾತಿನಲ್ಲಿ ಅವರು ಆಶೀರ್ವಾದಗಳನ್ನು ಕೋರಿದರು, ಆದರೆ ತಮ್ಮ ಕ್ರಿಯೆಗಳ ಮೂಲಕ ಶಾಪಗಳಿಗೆ ಯೋಗ್ಯವಾಗಿದ್ದ ಮಾರ್ಗವನ್ನು ಅವರು ಆರಿಸಿಕೊಂಡರು.
10 ಮೋಶೆಯು ಸೀನಾಯಿ ಪರ್ವತದ ಮೇಲೆ ದಶಾಜ್ಞೆಗಳನ್ನು ಪಡೆಯುತ್ತಿದ್ದ 40 ದಿನಗಳ ಅವಧಿಯ ಸಮಯದಲ್ಲಿ, ಯೆಹೋವನಿಗೆ ನಿಷ್ಠೆಯ ಸಂಬಂಧದಲ್ಲಿ ತಾವು ಮೊದಲು ಮಾಡಿದ್ದ ವಾಗ್ದಾನವನ್ನು ಇಸ್ರಾಯೇಲ್ಯರು ಮುರಿದುಬಿಟ್ಟರು. ವೃತ್ತಾಂತವು ಹೇಳುವುದು: “ಮೋಶೆ ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಾಯೇಲ್ಯರು ನೋಡಿ ಆರೋನನ ಬಳಿಗೆ ಕೂಡಿಬಂದು—ಏಳು; ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ನಮಗೆ ದೇವರುಗಳನ್ನು ಮಾಡಿಕೊಡು; ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ ಎಂದು ಹೇಳಿದರು.” (ವಿಮೋಚನಕಾಂಡ 32:1) ಇದು, ಯೆಹೋವನು ತನ್ನ ಜನರನ್ನು ನಡೆಸಲು ಮತ್ತು ಮಾರ್ಗದರ್ಶಿಸಲು ಆಗ ಉಪಯೋಗಿಸುತ್ತಿದ್ದ ಮಾನವ ನಿಯೋಗಿಯ ಕಡೆಗೆ ಪ್ರದರ್ಶಿಸಲ್ಪಟ್ಟ ಗೌರವರಹಿತ ಮನೋಭಾವದ ಮತ್ತೊಂದು ಉದಾಹರಣೆಯಾಗಿದೆ. ಇಸ್ರಾಯೇಲ್ಯರು ಐಗುಪ್ತ್ಯರ ಮೂರ್ತಿಪೂಜೆಯನ್ನು ಅನುಕರಿಸುವಂತೆ ಸೆಳೆಯಲ್ಪಟ್ಟರು ಮತ್ತು ಒಂದೇ ದಿನದಲ್ಲಿ ಖಡ್ಗದ ಮೂಲಕ ಸುಮಾರು 3,000 ಜನರು ಕೊಲ್ಲಲ್ಪಟ್ಟಾಗ, ಘೋರ ಪರಿಣಾಮಗಳನ್ನು ಅನುಭವಿಸಿದರು.—ವಿಮೋಚನಕಾಂಡ 32:2-6, 25-29.
ಆಶೀರ್ವಾದಗಳು ಮತ್ತು ಶಾಪಗಳ ಪ್ರಕಟನೆ
11. ಆಶೀರ್ವಾದಗಳು ಮತ್ತು ಶಾಪಗಳ ಸಂಬಂಧದಲ್ಲಿ ಯಾವ ಉಪದೇಶಗಳು ಯೆಹೋಶುವನ ಮೂಲಕ ಕಾರ್ಯರೂಪಕ್ಕೆ ತರಲ್ಪಟ್ಟವು?
11 ಅರಣ್ಯದಲ್ಲಿ ಇಸ್ರಾಯೇಲಿನ 40 ವರ್ಷಗಳ ಪ್ರಯಾಣದ ಕೊನೆಯಲ್ಲಿ, ದೇವರಿಗೆ ವಿಧೇಯತೆಯ ಮಾರ್ಗವನ್ನು ಆರಿಸಿಕೊಳ್ಳುವ ಮೂಲಕ ಅನುಭವಿಸಲ್ಪಡಲಿರುವ ಆಶೀರ್ವಾದಗಳನ್ನು ಮೋಶೆಯು ಪಟ್ಟಿಮಾಡಿದನು. ಇಸ್ರಾಯೇಲ್ಯರು ಯೆಹೋವನಿಗೆ ಅವಿಧೇಯರಾಗಲು ಆರಿಸಿಕೊಳ್ಳುವುದಾದರೆ, ಅವರು ಅನುಭವಿಸಲಿದ್ದ ಶಾಪಗಳನ್ನೂ ಅವನು ನಮೂದಿಸಿದನು. (ಧರ್ಮೋಪದೇಶಕಾಂಡ 27:11–28:10) ಇಸ್ರಾಯೇಲ್, ವಾಗ್ದತ್ತ ದೇಶವನ್ನು ಪ್ರವೇಶಿಸಿದ ಸ್ವಲ್ಪ ಸಮಯದ ನಂತರ, ಈ ಆಶೀರ್ವಾದಗಳು ಮತ್ತು ಶಾಪಗಳನ್ನೊಳಗೊಂಡ ಮೋಶೆಯ ಉಪದೇಶಗಳನ್ನು ಯೆಹೋಶುವನು ಕಾರ್ಯರೂಪಕ್ಕೆ ತಂದನು. ಇಸ್ರಾಯೇಲಿನ ಆರು ಗೋತ್ರಗಳು ಏಬಾಲ್ ಬೆಟ್ಟದ ಕೆಳಗೆ ನಿಂತವು, ಮತ್ತು ಇತರ ಆರು ಗೋತ್ರಗಳು ಗೆರಿಜ್ಜೀಮ್ ಬೆಟ್ಟದ ಎದುರು ಸ್ಥಾನಗಳನ್ನು ತೆಗೆದುಕೊಂಡವು. ಮಧ್ಯದ ಕಣಿವೆಯಲ್ಲಿ ಲೇವಿಯರು ನಿಂತರು. ಸ್ಪಷ್ಟವಾಗಿಯೇ, ಆ ದಿಕ್ಕಿನಲ್ಲಿ ಓದಲ್ಪಟ್ಟ ಶಾಪಗಳು ಅಥವಾ ಕೇಡುಗಳಿಗೆ ಏಬಾಲ್ ಬೆಟ್ಟದ ಮುಂದೆ ನಿಂತಿದ್ದ ಗೋತ್ರಗಳವರು “ಆಮೆನ್!” ಎಂದು ಹೇಳಿದರು. ಗೆರಿಜ್ಜೀಮ್ ಬೆಟ್ಟದ ಕೆಳಗೆ ತಮ್ಮ ದಿಕ್ಕಿನಲ್ಲಿ ಲೇವಿಯರು ಓದಿದ ಆಶೀರ್ವಾದಗಳಿಗೆ ಇತರರು ಪ್ರತಿಕ್ರಿಯಿಸಿದರು.—ಯೆಹೋಶುವ 8:30-35.
12. ಲೇವಿಯರ ಮೂಲಕ ಪ್ರಕಟಿಸಲ್ಪಟ್ಟ ಕೆಲವು ಶಾಪಗಳಾವುವು?
12 ಲೇವಿಯರು ಹೀಗೆ ಹೇಳುವುದನ್ನು ನೀವು ಕೇಳಿಸಿಕೊಳ್ಳುತ್ತೀರೆಂದು ಭಾವಿಸಿರಿ: “ಶಿಲ್ಪಿಯ ಕೆಲಸವಾಗಿರುವ ಮರದ ವಿಗ್ರಹವೂ ಲೋಹವಿಗ್ರಹವೂ ಯೆಹೋವನಿಗೆ ಹೇಯವಾದದ್ದರಿಂದ ಅವನ್ನು ಮಾಡಿಸಿ ಗೋಪ್ಯವಾಗಿ ನಿಲ್ಲಿಸಿಕೊಂಡವನಾದರೂ ಶಾಪಗ್ರಸ್ತ . . . ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತ . . . ಮತ್ತೊಬ್ಬನ ಮೇರೆಯನ್ನು ಸರಿಸಿದವನು ಶಾಪಗ್ರಸ್ತ . . . ಕುರುಡರಿಗೆ ದಾರಿತಪ್ಪಿಸಿದವನು ಶಾಪಗ್ರಸ್ತ . . . ಪರದೇಶಿ, ತಾಯಿತಂದೆಯಿಲ್ಲದವ, ಇವರ ವ್ಯಾಜ್ಯದಲ್ಲಿ ನ್ಯಾಯ ಬಿಟ್ಟು ತೀರ್ಪುಹೇಳಿದವನು ಶಾಪಗ್ರಸ್ತ . . . ಮಲತಾಯಿಯನ್ನು ಸಂಗಮಿಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತ . . . ಪಶುಸಂಗಮಮಾಡಿದವನು ಶಾಪಗ್ರಸ್ತ . . . ತಂದೆಯ ಮಗಳನ್ನಾಗಲಿ ತಾಯಿಯ ಮಗಳನ್ನಾಗಲಿ ಸಂಗಮಿಸಿದವನು ಶಾಪಗ್ರಸ್ತ . . . ಅತ್ತೆಯನ್ನು ಸಂಗಮಿಸಿದವನು ಶಾಪಗ್ರಸ್ತ . . . ರಹಸ್ಯವಾಗಿ ನರಹತ್ಯಮಾಡಿದವನು ಶಾಪಗ್ರಸ್ತ . . . ಹಣತೆಗೆದುಕೊಂಡು ನಿರಪರಾಧಿಯನ್ನು ಕೊಂದವನು ಶಾಪಗ್ರಸ್ತ . . . ಈ ಧರ್ಮಶಾಸ್ತ್ರವಾಕ್ಯಗಳಿಗೆ ಒಡಂಬಟ್ಟು ಕೈಕೊಳ್ಳದೆ ಇರುವವನು ಶಾಪಗ್ರಸ್ತ.” ಪ್ರತಿಯೊಂದು ಶಾಪದ ನಂತರ, ಏಬಾಲ್ ಬೆಟ್ಟದ ಮುಂದೆ ಇದ್ದ ಗೋತ್ರಗಳವರು “ಹೌದು” [“ಆಮೆನ್!” NW] ಎನ್ನುತ್ತಾರೆ.—ಧರ್ಮೋಪದೇಶಕಾಂಡ 27:15-26.
13. ಲೇವಿಯರು ಪ್ರಕಟಿಸಿದ ಕೆಲವೊಂದು ಆಶೀರ್ವಾದಗಳನ್ನು ನೀವು ನಿಮ್ಮ ಸ್ವಂತ ಮಾತುಗಳಲ್ಲಿ ಹೇಗೆ ವ್ಯಕ್ತಪಡಿಸುವಿರಿ?
13 ಲೇವಿಯರು ಕೂಗಿ ಹೇಳಿದಂತೆ, ಪ್ರತಿ ಆಶೀರ್ವಾದಕ್ಕೆ ಗೆರಿಜ್ಜೀಮ್ ಬೆಟ್ಟದ ಮುಂದೆ ಇರುವವರು ನುಡಿಯುವುದನ್ನು ನೀವು ಕೇಳುತ್ತೀರೆಂದು ಈಗ ಭಾವಿಸಿರಿ: “ನಿಮಗೆ ಊರಲ್ಲಿಯೂ ಅಡವಿಯಲ್ಲಿಯೂ ಶುಭವುಂಟಾಗುವದು. ನಿಮ್ಮ ಸಂತಾನ ವ್ಯವಸಾಯಗಳಿಗೂ ದನಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವದು. ನಿಮ್ಮ ಪುಟ್ಟಿಗಳಿಗೂ ಕೊಣವಿಗೆಗಳಿಗೂ ಶುಭವುಂಟಾಗುವದು. ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಶುಭವುಂಟಾಗುವದು.”—ಧರ್ಮೋಪದೇಶಕಾಂಡ 28:3-6.
14. ಯಾವ ಆಧಾರದ ಮೇಲೆ ಇಸ್ರಾಯೇಲ್ಯರು ಆಶೀರ್ವಾದಗಳನ್ನು ಪಡೆಯಲಿದ್ದರು?
14 ಈ ಆಶೀರ್ವಾದಗಳನ್ನು ಪಡೆಯಲಿಕ್ಕೆ ಯಾವುದು ಆಧಾರವಾಗಿತ್ತು? ವೃತ್ತಾಂತವು ಹೇಳುವುದು: “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ ಆತನು ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು. ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಶುಭಗಳೆಲ್ಲಾ ನಿಮಗೆ ಪ್ರಾಪ್ತವಾಗುವವು.” (ಧರ್ಮೋಪದೇಶಕಾಂಡ 28:1, 2) ಹೌದು, ದೈವಿಕ ಆಶೀರ್ವಾದಗಳನ್ನು ಅನುಭವಿಸುವುದರ ಕೀಲಿ ಕೈಯು, ದೇವರಿಗೆ ತೋರಿಸುವ ವಿಧೇಯತೆಯಾಗಿತ್ತು. ಆದರೆ ಇಂದು ನಮ್ಮ ಕುರಿತೇನು? “ಯೆಹೋವನ . . . ಮಾತಿಗೆ ವಿಧೇಯ”ರಾಗುವುದನ್ನು ಮುಂದುವರಿಸುವ ಮೂಲಕ, ನಾವು ವೈಯಕ್ತಿಕವಾಗಿ ಆಶೀರ್ವಾದಗಳನ್ನೂ ಜೀವವನ್ನೂ ಆರಿಸಿಕೊಳ್ಳುವೆವೊ?—ಧರ್ಮೋಪದೇಶಕಾಂಡ 30:19, 20.
ನಿಖರವಾದ ನೋಟವನ್ನು ಪಡೆದುಕೊಳ್ಳುವುದು
15. ಧರ್ಮೋಪದೇಶಕಾಂಡ 28:3ರಲ್ಲಿ ದಾಖಲಿಸಲ್ಪಟ್ಟ ಆಶೀರ್ವಾದದಲ್ಲಿ ಯಾವ ಅತಿಪ್ರಾಮುಖ್ಯವಾದ ತತ್ವವು ಮಾಡಲ್ಪಟ್ಟಿತು, ಮತ್ತು ನಾವು ಅದರಿಂದ ಹೇಗೆ ಪ್ರಯೋಜನಪಡೆಯಬಲ್ಲೆವು?
15 ಯೆಹೋವನಿಗೆ ವಿಧೇಯನಾದ ಕಾರಣ ಒಬ್ಬ ಇಸ್ರಾಯೇಲ್ಯನು ಅನುಭವಿಸಸಾಧ್ಯವಿದ್ದ ಕೆಲವು ಆಶೀರ್ವಾದಗಳ ಮೇಲೆ ನಾವು ಪುನರಾಲೋಚಿಸೋಣ. ಉದಾಹರಣೆಗೆ ಧರ್ಮೋಪದೇಶಕಾಂಡ 28:3 ಹೇಳುವುದು: “ನಿಮಗೆ ಊರಲ್ಲಿಯೂ ಅಡವಿ [“ಹೊಲ,” NW]ಯಲ್ಲಿಯೂ ಶುಭವುಂಟಾಗುವದು.” ದೇವರಿಂದ ಆಶೀರ್ವದಿಸಲ್ಪಡುವುದು ಸ್ಥಳ ಇಲ್ಲವೆ ನೇಮಕದ ಮೇಲೆ ಅವಲಂಬಿಸಿರುವುದಿಲ್ಲ. ಬಹುಶಃ ಕೆಲವರಿಗೆ ತಾವು ಭೌತಿಕವಾಗಿ ಧ್ವಂಸಗೊಂಡ ಕ್ಷೇತ್ರದಲ್ಲಿ ಅಥವಾ ಯುದ್ಧದಿಂದ ಛಿದ್ರಗೊಂಡ ದೇಶವೊಂದರಲ್ಲಿ ಜೀವಿಸುವ ಕಾರಣ, ತಮ್ಮ ಪರಿಸ್ಥಿತಿಗಳಲ್ಲಿ ಸಿಲುಕಿಕೊಂಡಿರುವ ಅನಿಸಿಕೆ ಆಗಬಹುದು. ಇತರರು ಭಿನ್ನವಾದೊಂದು ಸ್ಥಳದಲ್ಲಿ ಯೆಹೋವನ ಸೇವೆಮಾಡಲು ಹಾತೊರೆಯಬಹುದು. ಸಭೆಯಲ್ಲಿ ತಾವು ಶುಶ್ರೂಷಾ ಸೇವಕರು ಅಥವಾ ಹಿರಿಯರೋಪಾದಿ ನೇಮಿಸಲ್ಪಟ್ಟಿಲ್ಲವೆಂಬ ಕಾರಣದಿಂದ ಕೆಲವು ಕ್ರೈಸ್ತ ಪುರುಷರು ನಿರಾಶೆಗೊಳ್ಳಬಹುದು. ಕೆಲವೊಮ್ಮೆ, ತಾವು ಪಯನೀಯರರು ಅಥವಾ ಮಿಷನೆರಿಗಳೋಪಾದಿ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಭಾಗವಹಿಸುವ ಸ್ಥಾನದಲ್ಲಿಲ್ಲವೆಂಬ ಕಾರಣದಿಂದ ಕ್ರೈಸ್ತ ಸ್ತ್ರೀಯರು ಎದೆಗುಂದುತ್ತಾರೆ. ಆದರೂ, ‘ಯೆಹೋವನಿಗೆ ಕಿವಿಗೊಡುವ ಮತ್ತು ಆತನು ಅವಶ್ಯಪಡುವುದನ್ನೆಲ್ಲ ಜಾಗರೂಕವಾಗಿ ಮಾಡುವ’ ಪ್ರತಿಯೊಬ್ಬರೂ, ಈಗ ಮತ್ತು ಎಲ್ಲ ನಿತ್ಯತೆಗೂ ಆಶೀರ್ವದಿಸಲ್ಪಡುವರು.
16. ಧರ್ಮೋಪದೇಶಕಾಂಡ 28:4ರ ಮೂಲತತ್ವವು ಇಂದು ಯೆಹೋವನ ಸಂಸ್ಥೆಯಿಂದ ಹೇಗೆ ಅನುಭವಿಸಲ್ಪಡಲಾಗುತ್ತಿದೆ?
16 ಧರ್ಮೋಪದೇಶಕಾಂಡ 28:4 ಹೇಳುವುದು: “ನಿಮ್ಮ ಸಂತಾನ ವ್ಯವಸಾಯಗಳಿಗೂ ದನಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವದು.” “ನಿಮ್ಮ” ಎಂಬುದಾಗಿ ತರ್ಜುಮೆಮಾಡಲಾದ ಏಕ ಹೀಬ್ರು ಸರ್ವನಾಮದ ಬಳಕೆಯು, ಇದು ಒಬ್ಬ ವಿಧೇಯ ಇಸ್ರಾಯೇಲ್ಯನ ವೈಯಕ್ತಿಕ ಅನುಭವವಾಗಿರುವುದೆಂಬುದನ್ನು ಸೂಚಿಸುತ್ತದೆ. ಇಂದು ಯೆಹೋವನ ವಿಧೇಯ ಸೇವಕರ ಕುರಿತೇನು? ಯೆಹೋವನ ಸಾಕ್ಷಿಗಳ ಸಂಸ್ಥೆಯಲ್ಲಿ ಸಂಭವಿಸುತ್ತಿರುವ ಲೋಕವ್ಯಾಪಕ ವೃದ್ಧಿ ಹಾಗೂ ವಿಸ್ತರಣೆಯು, ರಾಜ್ಯದ ಸುವಾರ್ತೆಯ 50,00,000ಕ್ಕಿಂತಲೂ ಹೆಚ್ಚಿನ ಘೋಷಕರ ಶ್ರದ್ಧಾಪೂರ್ವಕ ಪ್ರಯತ್ನಗಳ ಮೇಲೆ ದೇವರ ಆಶೀರ್ವಾದದ ಫಲಿತಾಂಶವಾಗಿದೆ. (ಮಾರ್ಕ 13:10) ಮತ್ತು ಹೆಚ್ಚಿನ ವೃದ್ಧಿಗಾಗಿರುವ ಸಾಧ್ಯತೆಯು ಸುಸ್ಪಷ್ಟವಾಗಿದೆ ಏಕೆಂದರೆ, 1995ರ ಕರ್ತನ ಸಂಧ್ಯಾ ಭೋಜನದ ಆಚರಣೆಯನ್ನು 1,30,00,000ಕ್ಕಿಂತಲೂ ಹೆಚ್ಚಿನ ಜನರು ಹಾಜರಾದರು. ನೀವು ರಾಜ್ಯದ ಆಶೀರ್ವಾದಗಳನ್ನು ಅನುಭವಿಸುತ್ತಿದ್ದೀರೊ?
ಇಸ್ರಾಯೇಲಿನ ಆಯ್ಕೆಯು ಒಂದು ವ್ಯತ್ಯಾಸವನ್ನುಂಟುಮಾಡಿತು
17. ಆಶೀರ್ವಾದಗಳು ಅಥವಾ ಶಾಪಗಳ ಮೂಲಕ ‘ಬೆನ್ನು ಹಿಡಿಯಲ್ಪಡುವುದು’ ಯಾವುದರ ಮೇಲೆ ಅವಲಂಬಿಸಿತು?
17 ಕಾರ್ಯತಃ, ಆಶೀರ್ವಾದಗಳು ಒಬ್ಬ ವಿಧೇಯ ಇಸ್ರಾಯೇಲ್ಯನನ್ನು ಬೆನ್ನಟ್ಟಲಿದ್ದವು. “ಈ ಎಲ್ಲ ಆಶೀರ್ವಾದಗಳು ನಿಮ್ಮ ಮೇಲೆ ಬರಬೇಕು ಮತ್ತು ನಿಮ್ಮ ಬೆನ್ನು ಹಿಡಿದು ಮುಂದೆ ಹೋಗಬೇಕು” ಎಂಬುದಾಗಿ ವಾಗ್ದಾನಿಸಲಾಗಿತ್ತು. (ಧರ್ಮೋಪದೇಶಕಾಂಡ 28:2, NW) ತದ್ರೀತಿಯಲ್ಲಿ, ಶಾಪಗಳ ಕುರಿತು ಹೀಗೆ ಹೇಳಲಾಗಿತ್ತು: “ಈ ಎಲ್ಲ ಶಾಪಗಳು ಸಹ ನಿಮ್ಮ ಮೇಲೆ ಬರಬೇಕು ಮತ್ತು ನಿಮ್ಮ ಬೆನ್ನು ಹಿಡಿದು ಮುಂದೆ ಹೋಗಬೇಕು.” (ಧರ್ಮೋಪದೇಶಕಾಂಡ 28:15, NW) ನೀವು ಪ್ರಾಚೀನ ಸಮಯಗಳಲ್ಲಿನ ಒಬ್ಬ ಇಸ್ರಾಯೇಲ್ಯ ವ್ಯಕ್ತಿಯಾಗಿದ್ದುದಾದರೆ, ನೀವು ಆಶೀರ್ವಾದಗಳಿಂದ ‘ಬೆನ್ನು ಹಿಡಿ’ಯಲ್ಪಡುತ್ತಿದ್ದಿರೊ ಅಥವಾ ಶಾಪಗಳ ಮೂಲಕವೊ? ಅದು ನೀವು ದೇವರಿಗೆ ವಿಧೇಯರಾದಿರೊ ಇಲ್ಲವೆ ಆತನಿಗೆ ಅವಿಧೇಯರಾದಿರೊ ಎಂಬುದರ ಮೇಲೆ ಅವಲಂಬಿಸಿರುತ್ತಿತ್ತು.
18. ಶಾಪಗಳನ್ನು ಇಸ್ರಾಯೇಲ್ಯರು ಹೇಗೆ ದೂರವಿರಿಸಸಾಧ್ಯವಿತ್ತು?
18 ಧರ್ಮೋಪದೇಶಕಾಂಡ 28:15-68ರಲ್ಲಿ, ಅವಿಧೇಯತೆಯ ವೇದನಾಮಯ ಪರಿಣಾಮಗಳು ಶಾಪಗಳೋಪಾದಿ ಪ್ರಕಟಿಸಲ್ಪಟ್ಟಿವೆ. ಕೆಲವು, ಧರ್ಮೋಪದೇಶಕಾಂಡ 28:3-14ರಲ್ಲಿ ನಮೂದಿಸಲಾದ ವಿಧೇಯತೆಗಾಗಿರುವ ಆಶೀರ್ವಾದಗಳಿಗೆ ನಿಖರವಾಗಿ ವಿರುದ್ಧವಾಗಿವೆ. ಅನೇಕ ವೇಳೆ, ಇಸ್ರಾಯೇಲಿನ ಜನರು ಸುಳ್ಳು ಆರಾಧನೆಯಲ್ಲಿ ತೊಡಗಲು ಆರಿಸಿಕೊಂಡ ಕಾರಣ, ಶಾಪಗಳ ತೀಕ್ಷ್ಣವಾದ ಪರಿಣಾಮಗಳನ್ನು ಅವರು ಅನುಭವಿಸಿದರು. (ಎಜ್ರ 9:7; ಯೆರೆಮೀಯ 6:6-8; 44:2-6) ಎಷ್ಟು ದುರಂತಕರ! ಒಳ್ಳೆಯದು ಮತ್ತು ಕೆಟ್ಟದ್ದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ, ಯೆಹೋವನ ಹಿತಕರವಾದ ನಿಯಮಗಳು ಹಾಗೂ ಮೂಲತತ್ವಗಳಿಗೆ ವಿಧೇಯತೆಯ ಸರಿಯಾದ ಆಯ್ಕೆಯನ್ನು ಮಾಡುವ ಮೂಲಕ ಇಂತಹ ಪರಿಣಾಮಗಳನ್ನು ದೂರವಿರಿಸಸಾಧ್ಯವಿತ್ತು. ಸುಳ್ಳು ಧರ್ಮವನ್ನು ಆಚರಿಸುವುದು, ಲೈಂಗಿಕ ಅನೈತಿಕತೆಯಲ್ಲಿ ತೊಡಗುವುದು, ನಿಷಿದ್ಧ ಅಮಲೌಷಧಗಳನ್ನು ಬಳಸುವುದು, ಮದ್ಯಸಾರದ ಪಾನೀಯಗಳನ್ನು ಮಿತಿಮೀರಿ ಕುಡಿಯುವುದು, ಮತ್ತು ತದ್ರೀತಿಯ ವಿಷಯಗಳಲ್ಲಿ ಬೈಬಲ್ ಮೂಲತತ್ವಗಳಿಗೆ ವಿರುದ್ಧವಾಗಿ ಕಾರ್ಯಮಾಡಲು ಅವರು ಆರಿಸಿಕೊಂಡಿರುವ ಕಾರಣ, ಇಂದು ಅನೇಕರು ವೇದನೆ ಮತ್ತು ದುರಂತವನ್ನು ಅನುಭವಿಸುತ್ತಾರೆ. ಪ್ರಾಚೀನ ಇಸ್ರಾಯೇಲ್ ಮತ್ತು ಯೂದಾಯದಲ್ಲಾದಂತೆ, ಇಂತಹ ಕೆಟ್ಟ ಆಯ್ಕೆಗಳನ್ನು ಮಾಡುವುದು ದೈವಿಕ ಅಸಮ್ಮತಿಯಲ್ಲಿ ಮತ್ತು ಅನಾವಶ್ಯಕವಾದ ಹೃದಯವೇದನೆಯಲ್ಲಿ ಪರಿಣಮಿಸುತ್ತದೆ.—ಯೆಶಾಯ 65:12-14.
19. ಯೂದಾಯ ಮತ್ತು ಇಸ್ರಾಯೇಲ್ ಯೆಹೋವನಿಗೆ ವಿಧೇಯರಾಗಲು ಆರಿಸಿಕೊಂಡಾಗ, ಅವರು ಅನುಭವಿಸಿದ ಪರಿಸ್ಥಿತಿಗಳನ್ನು ವರ್ಣಿಸಿರಿ.
19 ಇಸ್ರಾಯೇಲ್ ಯೆಹೋವನಿಗೆ ವಿಧೇಯವಾದಾಗ ಮಾತ್ರ ಆಶೀರ್ವಾದಗಳು ಹೇರಳವಾಗಿದ್ದವು ಮತ್ತು ನೆಮ್ಮದಿಯು ಎಲ್ಲೆಡೆಯೂ ವ್ಯಾಪಿಸಿತ್ತು. ಉದಾಹರಣೆಗೆ, ರಾಜ ಸೊಲೊಮೋನನ ದಿನಗಳ ಕುರಿತು ನಾವು ಓದುವುದು: “ಇಸ್ರಾಯೇಲ್ಯೆಹೂದ್ಯರು ಸಮುದ್ರತೀರದ ಉಸುಬಿನಷ್ಟು ಅಸಂಖ್ಯರಾಗಿದ್ದರು; ಅವರು ಅನ್ನಪಾನಗಳಲ್ಲಿ ತೃಪ್ತರಾಗಿ ಸಂತೋಷದಿಂದಿದ್ದರು. . . . ಸೊಲೊಮೋನನ ಆಳಿಕೆಯಲ್ಲೆಲ್ಲಾ ದಾನ್ಪಟ್ಟಣ ಮೊದಲುಗೊಂಡು ಬೇರ್ಷೆಬದ ವರೆಗಿರುವ ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.” (1 ಅರಸುಗಳು 4:20-25) ರಾಜ ದಾವೀದನ ಸಮಯದಲ್ಲಿಯೂ—ಯಾವ ಸಮಯವು ದೇವರ ವೈರಿಗಳಿಂದ ಬಹಳಷ್ಟು ವಿರೋಧದಿಂದ ಗುರುತಿಸಲ್ಪಟ್ಟಿತ್ತೊ, ಆಗ—ಸತ್ಯದ ದೇವರಿಗೆ ವಿಧೇಯರಾಗಲು ಅವರು ಆರಿಸಿಕೊಂಡಾಗ, ರಾಷ್ಟ್ರವು ಯೆಹೋವನ ಬೆಂಬಲ ಹಾಗೂ ಆಶೀರ್ವಾದವನ್ನು ಅನುಭವಿಸಿತು.—2 ಸಮುವೇಲ 7:28, 29; 8:1-15.
20. ಮಾನವರ ಸಂಬಂಧದಲ್ಲಿ ಯಾವುದರ ಕುರಿತು ದೇವರು ಭರವಸೆಯಿಂದಿದ್ದಾನೆ?
20 ನೀವು ದೇವರಿಗೆ ವಿಧೇಯರಾಗುವಿರೊ, ಅಥವಾ ಆತನಿಗೆ ಅವಿಧೇಯರಾಗುವಿರೊ? ಇಸ್ರಾಯೇಲ್ಯರಿಗೆ ಒಂದು ಆಯ್ಕೆಯಿತ್ತು. ನಾವೆಲ್ಲರೂ ಆದಾಮನಿಂದ ಪಾಪಪೂರ್ಣ ಒಲವನ್ನು ಪಿತ್ರಾರ್ಜಿತವಾಗಿ ಪಡೆದಿದ್ದರೂ, ನಾವು ಸ್ವತಂತ್ರ ಆಯ್ಕೆಯ ಕೊಡುಗೆಯನ್ನೂ ಪಡೆದಿದ್ದೇವೆ. ಸೈತಾನನು, ಈ ದುಷ್ಟ ಲೋಕ, ಮತ್ತು ನಮ್ಮ ಅಪರಿಪೂರ್ಣತೆಗಳ ಹೊರತೂ, ನಾವು ಸರಿಯಾದ ಆಯ್ಕೆಯನ್ನು ಮಾಡಬಲ್ಲೆವು. ಅಲ್ಲದೆ, ಪ್ರತಿಯೊಂದು ಪರೀಕ್ಷೆ ಹಾಗೂ ಪ್ರಲೋಭನೆಯ ಎದುರಿನಲ್ಲಿ, ಕೇವಲ ಮಾತಿನಲ್ಲಿ ಅಲ್ಲ, ಬದಲಾಗಿ ಕ್ರಿಯೆಯಲ್ಲಿಯೂ ಸರಿಯಾದ ಆಯ್ಕೆಯನ್ನು ಮಾಡುವವರು ಇರುವರೆಂದು ನಮ್ಮ ಸೃಷ್ಟಿಕರ್ತನು ಭರವಸೆಯಿಂದಿದ್ದಾನೆ. (1 ಪೇತ್ರ 5:8-10) ನೀವು ಅವರ ಮಧ್ಯದಲ್ಲಿ ಇರುವಿರೊ?
21. ಮುಂದಿನ ಲೇಖನದಲ್ಲಿ ಯಾವ ವಿಷಯವು ಪರೀಕ್ಷಿಸಲ್ಪಡುವುದು?
21 ಮುಂದಿನ ಲೇಖನದಲ್ಲಿ, ನಾವು ಗತಕಾಲದ ಮಾದರಿಗಳ ಬೆಳಕಿನಲ್ಲಿ ನಮ್ಮ ಮನೋಭಾವಗಳು ಹಾಗೂ ಕ್ರಿಯೆಗಳನ್ನು ತೂಗಿನೋಡಲು ಶಕ್ತರಾಗುವೆವು. ಮೋಶೆಯ ಮುಖಾಂತರ ದೇವರ ಮಾತುಗಳಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಕೃತಜ್ಞತಾಪೂರ್ವಕವಾಗಿ ಪ್ರತಿಕ್ರಿಯಿಸೋಣ: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; . . . ನೀವೂ . . . ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ.”—ಧರ್ಮೋಪದೇಶಕಾಂಡ 30:19.
ನೀವು ಹೇಗೆ ಉತ್ತರಿಸುವಿರಿ?
◻ ಪಾಪಪೂರ್ಣ ಮಾನವರಿಗೆ ಯೆಹೋವನು ಆಶೀರ್ವಾದಗಳನ್ನು ಹೇಗೆ ಸಾಧ್ಯಗೊಳಿಸಿದ್ದಾನೆ?
◻ ಶಾಪಗಳೆಂದರೇನು?
◻ ಇಸ್ರಾಯೇಲ್ಯರು ಶಾಪಗಳ ಬದಲಿಗೆ ಆಶೀರ್ವಾದಗಳನ್ನು ಹೇಗೆ ಪಡೆಯಸಾಧ್ಯವಿತ್ತು?
◻ ದೇವರಿಗೆ ವಿಧೇಯರಾದ ಕಾರಣ ಇಸ್ರಾಯೇಲ್ ರಾಷ್ಟ್ರವು ಯಾವ ಆಶೀರ್ವಾದಗಳನ್ನು ಅನುಭವಿಸಿತು?
[ಪುಟ 15 ರಲ್ಲಿರುವ ಚಿತ್ರ]
ಇಸ್ರಾಯೇಲ್ಯರು ಗೆರಿಜ್ಜೀಮ್ ಬೆಟ್ಟ ಮತ್ತು ಏಬಾಲ್ ಬೆಟ್ಟದ ಮುಂದೆ ಒಟ್ಟುಗೂಡಿದರು
[ಕೃಪೆ]
Pictorial Archive (Near Eastern History) Est.