ಆಶೀರ್ವಾದಗಳು ಅಥವಾ ಶಾಪಗಳು—ಇಂದು ನಮಗಾಗಿರುವ ಮಾದರಿಗಳು
“ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ.”—1 ಕೊರಿಂಥ 10:11.
1. ಒಬ್ಬನು ಒಂದು ಉಪಕರಣವನ್ನು ಪರಿಶೀಲಿಸುವಂತೆಯೇ ಯಾವ ಪರಿಶೀಲನೆಯನ್ನು ನಾವು ಮಾಡಬೇಕು?
ಬಣ್ಣದ ಒಂದು ಲೇಪನದ ಕೆಳಗೆ ಅಗೋಚರವಾಗಿ, ಕಬ್ಬಿಣದಿಂದ ಮಾಡಲ್ಪಟ್ಟ ಒಂದು ಉಪಕರಣವನ್ನು ಕಿಲುಬು ಕೊರೆಯಲು ತೊಡಗಬಲ್ಲದು. ಮೇಲ್ಮೈಯಲ್ಲಿ ಕಿಲುಬು ಗೋಚರವಾಗುವ ಮುಂಚೆ, ಒಂದಿಷ್ಟು ಸಮಯವು ಗತಿಸಿರಬಹುದು. ತದ್ರೀತಿಯಲ್ಲಿ, ಒಬ್ಬನ ಹೃದಯದ ಮನೋಭಾವಗಳು ಹಾಗೂ ಬಯಕೆಗಳು—ಇವು ಗಂಭೀರವಾದ ಪರಿಣಾಮಗಳಲ್ಲಿ ಫಲಿಸುವ ಅಥವಾ ಇತರರಿಂದ ಗಮನಿಸಲ್ಪಡುವುದಕ್ಕಿಂತಲೂ ಬಹಳ ಸಮಯದ ಮುಂಚೆಯೇ ಸವೆಯಲು ತೊಡಗಬಹುದು. ಒಂದು ಉಪಕರಣವು ಕಿಲುಬುಗಟ್ಟುತ್ತಿದೆಯೊ ಇಲ್ಲವೊ ಎಂಬುದನ್ನು ನೋಡಲು, ನಾವು ಅದನ್ನು ವಿವೇಕಯುತವಾಗಿ ಪರಿಶೀಲಿಸುವಂತೆಯೇ, ನಮ್ಮ ಹೃದಯಗಳ ಸೂಕ್ಷ್ಮವಾದ ಪರಿಶೀಲನೆ ಹಾಗೂ ಸಮಯೋಚಿತವಾದ ಪೋಷಣೆಯು ನಮ್ಮ ಕ್ರೈಸ್ತ ಸಮಗ್ರತೆಯನ್ನು ಸಂರಕ್ಷಿಸಬಹುದು. ಬೇರೆ ಮಾತುಗಳಲ್ಲಿ, ನಾವು ದೇವರ ಆಶೀರ್ವಾದಗಳನ್ನು ಪಡೆಯಬಲ್ಲೆವು ಮತ್ತು ದೈವಿಕ ಶಾಪಗಳನ್ನು ದೂರವಿರಿಸಬಲ್ಲೆವು. ಪ್ರಾಚೀನ ಇಸ್ರಾಯೇಲಿನ ಮೇಲೆ ಪ್ರಕಟಿಸಲ್ಪಟ್ಟ ಆಶೀರ್ವಾದಗಳು ಮತ್ತು ಶಾಪಗಳು, ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಯನ್ನು ಎದುರಿಸುತ್ತಿರುವವರಿಗೆ ಕಡಿಮೆ ಅರ್ಥವನ್ನು ಪಡೆದಿದೆ ಎಂದು ಕೆಲವರು ಯೋಚಿಸಬಹುದು. (ಯೆಹೋಶುವ 8:34, 35; ಮತ್ತಾಯ 13:49, 50; 24:3) ಆದರೆ, ವಿಷಯವು ಹಾಗಿರುವುದಿಲ್ಲ. 1 ಕೊರಿಂಥ 10ನೆಯ ಅಧ್ಯಾಯದಲ್ಲಿ ಹೇಳಲಾದಂತೆ, ಇಸ್ರಾಯೇಲನ್ನು ಒಳಗೊಂಡ ಎಚ್ಚರಿಕೆಯ ಮಾದರಿಗಳಿಂದ ನಾವು ಮಹತ್ತರವಾಗಿ ಪ್ರಯೋಜನಪಡೆಯಬಲ್ಲೆವು.
2. ಅರಣ್ಯದಲ್ಲಿ ಇಸ್ರಾಯೇಲಿನ ಅನುಭವಗಳ ಕುರಿತು 1 ಕೊರಿಂಥ 10:5, 6 ಏನನ್ನು ಹೇಳುತ್ತದೆ?
2 ಮೋಶೆಯ ಕೆಳಗಿದ್ದ ಇಸ್ರಾಯೇಲ್ಯರನ್ನು ಅಪೊಸ್ತಲ ಪೌಲನು, ಕ್ರಿಸ್ತನ ಕೆಳಗಿರುವ ಕ್ರೈಸ್ತರೊಂದಿಗೆ ಸಮಾಂತರಗೊಳಿಸುತ್ತಾನೆ. (1 ಕೊರಿಂಥ 10:1-4) ಇಸ್ರಾಯೇಲಿನ ಜನರು ವಾಗ್ದತ್ತ ದೇಶವನ್ನು ಪ್ರವೇಶಿಸಸಾಧ್ಯವಿತ್ತಾದರೂ, “ಅವರೊಳಗೆ ಬಹುಮಂದಿಯ ವಿಷಯದಲ್ಲಿ ದೇವರು ಸಂತೋಷಿಸಲಿಲ್ಲ. ಅವರು ಅಡವಿಯಲ್ಲಿ ಸಂಹರಿಸಲ್ಪಟ್ಟ”ರು. ಆದುದರಿಂದ ಪೌಲನು ಜೊತೆ ಕ್ರೈಸ್ತರಿಗೆ ಹೇಳಿದ್ದು: “ಅವರು ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ.” (1 ಕೊರಿಂಥ 10:5, 6, ಓರೆಅಕ್ಷರಗಳು ನಮ್ಮವು.) ಬಯಕೆಗಳು ಹೃದಯದಲ್ಲಿ ಪೋಷಿಸಲ್ಪಡುತ್ತವೆ, ಆದುದರಿಂದ ಪೌಲನು ಉದಾಹರಿಸುವ ಎಚ್ಚರಿಕೆಯ ಮಾದರಿಗಳಿಗೆ ನಾವು ಗಮನ ಕೊಡುವ ಅಗತ್ಯವಿದೆ.
ವಿಗ್ರಹಾರಾಧನೆಯ ವಿರುದ್ಧ ಎಚ್ಚರಿಕೆ
3. ಬಂಗಾರದ ಬಸವನ ಸಂಬಂಧದಲ್ಲಿ ಇಸ್ರಾಯೇಲ್ಯರು ಹೇಗೆ ಪಾಪಮಾಡಿದರು?
3 ಪೌಲನ ಪ್ರಥಮ ಎಚ್ಚರಿಕೆಯು ಇದಾಗಿದೆ: “ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು; ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು, ಕುಣಿದಾಡುವದಕ್ಕೆ ಎದ್ದರು ಎಂದು ಬರೆದದೆಯಲ್ಲಾ; ನೀವು ವಿಗ್ರಹಾರಾಧಕರಾಗಬೇಡಿರಿ.” (1 ಕೊರಿಂಥ 10:7, ಓರೆಅಕ್ಷರಗಳು ನಮ್ಮವು.) ಈ ಎಚ್ಚರಿಕೆಯ ಮಾದರಿಯು, ಇಸ್ರಾಯೇಲ್ಯರು ಐಗುಪ್ತ್ಯರ ಮಾರ್ಗಗಳಿಗೆ ಮರುಳುವುದರ ಮತ್ತು ವಿಗ್ರಹಾರಾಧನೆಗೆ ಸಂಬಂಧಿಸಿದ ಬಂಗಾರದ ಬಸವನನ್ನು ಮಾಡುವುದರ ಕುರಿತಾಗಿದೆ. (ವಿಮೋಚನಕಾಂಡ, 32ನೆಯ ಅಧ್ಯಾಯ) ಶಿಷ್ಯನಾದ ಸ್ತೆಫನನು ಹೀಗೆ ಹೇಳಿದಾಗ, ಒಳಗೊಂಡಿರುವ ಸಮಸ್ಯೆಯನ್ನು ಸೂಚಿಸಿದನು: “ಆದರೆ ನಮ್ಮ ಪಿತೃಗಳು ಅವನ [ದೇವರ ಪ್ರತಿನಿಧಿಯಾದ ಮೋಶೆಯ] ಮಾತುಗಳನ್ನು ಕೇಳುವದಕ್ಕೆ ಮನಸ್ಸಿಲ್ಲದವರಾಗಿ ಅವನನ್ನು ತಳ್ಳಿಬಿಟ್ಟು ತಿರಿಗಿ ಐಗುಪ್ತದೇಶದ ಕಡೆಗೆ ಮನಸ್ಸಿಟ್ಟರು. ಅವರು ಆರೋನನಿಗೆ—ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ, ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ದೇವರುಗಳನ್ನು ನಮಗೆ ಮಾಡಿಕೊಡು ಎಂದು ಹೇಳಿದರು. ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ ತಮ್ಮ ಕೈಗಳಿಂದ ಮಾಡಿದ ವಸ್ತುಗಳಲ್ಲಿ ಉಲ್ಲಾಸಪಟ್ಟರು.” (ಅ. ಕೃತ್ಯಗಳು 7:39-41) ‘ತಮ್ಮ ಹೃದಯಗಳಲ್ಲಿ’ ಆ ಹಟಮಾರಿ ಇಸ್ರಾಯೇಲ್ಯರು ವಿಗ್ರಹಾರಾಧನೆಗೆ ನಡೆಸಿದ ತಪ್ಪು ಬಯಕೆಗಳಿಗೆ ಇಂಬುಗೊಟ್ಟರೆಂಬುದನ್ನು ಗಮನಿಸಿರಿ. “ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ”ದರು. ಅಷ್ಟೇ ಅಲ್ಲದೆ, ಅವರು “ತಮ್ಮ ಕೈಗಳಿಂದ ಮಾಡಿದ ವಸ್ತುಗಳಲ್ಲಿ ಉಲ್ಲಾಸಪಟ್ಟರು.” ಅಲ್ಲಿ ಸಂಗೀತ, ಗಾಯನ, ನೃತ್ಯ, ತಿನ್ನುವಿಕೆ ಹಾಗೂ ಕುಡಿಯುವಿಕೆಗಳಿದ್ದವು. ಸ್ಪಷ್ಟವಾಗಿಯೇ, ವಿಗ್ರಹಾರಾಧನೆಯು ಆಕರ್ಷಕವೂ ಮನೋರಂಜಕವೂ ಆಗಿತ್ತು.
4, 5. ವಿಗ್ರಹಾರಾಧನೆಯ ಯಾವ ಆಚರಣೆಗಳನ್ನು ನಾವು ತೊರೆಯುವ ಅಗತ್ಯವಿದೆ?
4 ಪ್ರತಿನಿಧಿರೂಪದ ಐಗುಪ್ತ—ಸೈತಾನನ ಲೋಕವು—ಕಾರ್ಯತಃ ಮನೋರಂಜನೆಯನ್ನು ಆರಾಧಿಸುತ್ತದೆ. (1 ಯೋಹಾನ 5:19; ಪ್ರಕಟನೆ 11:8) ಅದು ನಟರನ್ನು, ಗಾಯಕರನ್ನು, ಮತ್ತು ಕ್ರೀಡಾ ತಾರೆಗಳನ್ನು, ಅಷ್ಟೇ ಅಲ್ಲದೆ ಅವರ ನೃತ್ಯ, ಅವರ ಸಂಗೀತ, ವಿನೋದ ಮತ್ತು ಆಹ್ಲಾದಕರವಾದ ಸಮಯಗಳ ಕುರಿತಾದ ಅವರ ಪರಿಕಲ್ಪನೆಗಳನ್ನು ಪೂಜಿಸುತ್ತದೆ. ಯೆಹೋವನನ್ನು ಆರಾಧಿಸುತ್ತಿರುವುದಾಗಿ ಪ್ರತಿಪಾದಿಸುತ್ತಿರುವಾಗಲೂ ತಮ್ಮನ್ನು ಮನೋರಂಜನೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಅನೇಕರು ಶೋಧಿಸಲ್ಪಟ್ಟಿದ್ದಾರೆ. ಕ್ರೈಸ್ತನೊಬ್ಬನು ದುರ್ನಡತೆಗಾಗಿ ತಪ್ಪು ಮನಗಾಣಿಸಲ್ಪಡಬೇಕಾದಾಗ, ಅವನ ಬಲಹೀನಗೊಂಡ ಆತ್ಮಿಕ ಸ್ಥಿತಿಯು ಅನೇಕ ವೇಳೆ ಮದ್ಯಸಾರದ ಪಾನೀಯಗಳನ್ನು ಕುಡಿಯುವುದಕ್ಕೆ, ನೃತ್ಯಕ್ಕೆ, ಮತ್ತು ಯಾವುದೊ ವಿಧದಲ್ಲಿ ವಿಗ್ರಹಾರಾಧನೆಗೆ ಹತ್ತಿರವಿರಬಹುದಾದ ಆಹ್ಲಾದಕರವಾದ ಸಮಯದ ಅನುಭವಕ್ಕೆ ಪತ್ತೆಹಚ್ಚಲ್ಪಡಬಲ್ಲದು. (ವಿಮೋಚನಕಾಂಡ 32:5, 6, 17, 18) ಕೆಲವೊಂದು ಮನೋರಂಜನೆಯು ಹಿತಕರವೂ ಆನಂದದಾಯಕವೂ ಆಗಿದೆ. ಆದರೂ, ಇಂದು ಹೆಚ್ಚಿನ ಲೌಕಿಕ ಸಂಗೀತ, ನೃತ್ಯ, ಚಲನ ಚಿತ್ರಗಳು, ಮತ್ತು ವಿಡಿಯೊಗಳು ಶಾರೀರಿಕ ಬಯಕೆಗಳನ್ನು ಭ್ರಷ್ಟಗೊಳಿಸಲು ನೆರವು ನೀಡುತ್ತವೆ.
5 ಸತ್ಯ ಕ್ರೈಸ್ತರು ವಿಗ್ರಹಗಳ ಆರಾಧನೆಗೆ ಒಳಗಾಗುವುದಿಲ್ಲ. (2 ಕೊರಿಂಥ 6:16; 1 ಯೋಹಾನ 5:21) ನಮ್ಮಲ್ಲಿ ಪ್ರತಿಯೊಬ್ಬರು ವಿಗ್ರಹಾರಾಧನೆಗೆ ಸಂಬಂಧಿಸಿದ ಮನೋರಂಜನೆಗೆ ವ್ಯಸನಿಗಳಾಗಿ, ಲೌಕಿಕವಾದ ವಿಧದಲ್ಲಿ ಆಹ್ಲಾದಕರವಾದ ಸಮಯವನ್ನು ಅನುಭೋಗಿಸುವುದರಲ್ಲಿ ತಲ್ಲೀನರಾಗಿರುವುದರ ಹಾನಿಕಾರಕ ಪರಿಣಾಮಗಳನ್ನು ಅನುಭವಿಸುವುದಕ್ಕೆ ಈಡಾಗದಂತೆ ಅಷ್ಟೇ ಜಾಗರೂಕರಾಗಿರೋಣ. ನಾವು ನಮ್ಮನ್ನು ಲೌಕಿಕ ಪ್ರಭಾವಗಳಿಗೆ ಅಧೀನಪಡಿಸಿಕೊಳ್ಳುವುದಾದರೆ, ಹಾನಿಕಾರಕ ಬಯಕೆಗಳು ಮತ್ತು ಮನೋಭಾವಗಳು ಬಹುಮಟ್ಟಿಗೆ ಮನಸ್ಸು ಹಾಗೂ ಹೃದಯದಲ್ಲಿ ಗ್ರಹಿಸಲಾಗದಂತೆ ಮನೆಮಾಡಬಲ್ಲವು. ಸರಿಪಡಿಸದಿದ್ದಾಗ, ಇವು ಕಟ್ಟಕಡೆಗೆ ಸೈತಾನನ ವ್ಯವಸ್ಥೆಯ ‘ಅಡವಿಯಲ್ಲಿ ಸಂಹರಿಸಲ್ಪಡು’ವುದರಲ್ಲಿ ಪರಿಣಮಿಸಬಲ್ಲವು.
6. ಮನೋರಂಜನೆಯ ಸಂಬಂಧದಲ್ಲಿ ಯಾವ ಸಕಾರಾತ್ಮಕ ಕ್ರಿಯೆಯನ್ನು ನಾವು ತೆಗೆದುಕೊಳ್ಳಬೇಕಾಗಬಹುದು?
6 ಬಂಗಾರದ ಬಸವನ ಘಟನೆಯ ಸಮಯದ ಮೋಶೆಯಂತೆ, ಕಾರ್ಯತಃ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹೇಳುತ್ತಿರುವುದು: “ಯೆಹೋವನ ಪಕ್ಷದವರೆಲ್ಲರು ನನ್ನ ಬಳಿಗೆ.” ಸತ್ಯ ಆರಾಧನೆಗಾಗಿ ನಾವು ದೃಢವಾಗಿ ನಿಲ್ಲುತ್ತೇವೆಂದು ತೋರಿಸಲು ಸಕಾರಾತ್ಮಕ ಕ್ರಿಯೆಯನ್ನು ತೆಗೆದುಕೊಳ್ಳುವುದು ಜೀವರಕ್ಷಕವಾಗಿರಬಲ್ಲದು. ಮೋಶೆಯ ಗೋತ್ರವಾದ ಲೇವಿ, ಹೀನೈಸುವ ಪ್ರಭಾವಗಳನ್ನು ನಿರ್ಮೂಲಗೊಳಿಸಲು ತಡವಿಲ್ಲದೆ ಕಾರ್ಯಮಾಡಿತು. (ಮತ್ತಾಯ 24:45-47; ವಿಮೋಚನಕಾಂಡ 32:26-28) ಹಾಗಾದರೆ, ಮನೋರಂಜನೆ, ಸಂಗೀತ, ವಿಡಿಯೊಗಳಂಥವುಗಳ ವಿಷಯಗಳ ಕುರಿತಾದ ನಿಮ್ಮ ಆಯ್ಕೆಯನ್ನು ಜಾಗರೂಕವಾಗಿ ಪರೀಕ್ಷಿಸಿರಿ. ಅದು ಯಾವುದೊ ವಿಧದಲ್ಲಿ ಭ್ರಷ್ಟವಾಗಿರುವಲ್ಲಿ, ಯೆಹೋವನಿಗಾಗಿ ನಿಮ್ಮ ನಿಲುವನ್ನು ತೆಗೆದುಕೊಳ್ಳಿರಿ. ದೇವರ ಮೇಲೆ ಪ್ರಾರ್ಥನಾಪೂರ್ವಕವಾದ ಅವಲಂಬನೆಯೊಂದಿಗೆ, ಮನೋರಂಜನೆ ಮತ್ತು ಸಂಗೀತದ ನಿಮ್ಮ ಆಯ್ಕೆಯಲ್ಲಿ ಬದಲಾವಣೆಗಳನ್ನು ಮಾಡಿರಿ, ಮತ್ತು ಮೋಶೆಯು ಬಂಗಾರದ ಬಸವನನ್ನು ನಾಶಮಾಡಿದಂತೆಯೇ ಆತ್ಮಿಕವಾಗಿ ಹಾನಿಕಾರಕವಾಗಿರುವ ವಿಷಯವನ್ನು ನಾಶಮಾಡಿರಿ.—ವಿಮೋಚನಕಾಂಡ 32:20; ಧರ್ಮೋಪದೇಶಕಾಂಡ 9:21.
7. ನಾವು ಸಾಂಕೇತಿಕ ಹೃದಯವನ್ನು ಹೇಗೆ ರಕ್ಷಿಸಿಕೊಳ್ಳಬಲ್ಲೆವು?
7 ಹೃದಯದ ಸವೆತವನ್ನು ನಾವು ಹೇಗೆ ಪ್ರತಿರೋಧಿಸಬಲ್ಲೆವು? ದೇವರ ವಾಕ್ಯವನ್ನು ಶ್ರದ್ಧಾಪೂರ್ವಕವಾಗಿ ಅಭ್ಯಸಿಸಿ, ಅದರ ಸತ್ಯಗಳು ನಮ್ಮ ಮನಸ್ಸು ಹಾಗೂ ಹೃದಯಗಳಲ್ಲಿ ಬೇರೂರುವಂತೆ ಬಿಡುವ ಮೂಲಕ. (ರೋಮಾಪುರ 12:1, 2) ನಿಶ್ಚಯವಾಗಿಯೂ, ನಾವು ಕ್ರೈಸ್ತ ಕೂಟಗಳನ್ನು ಕ್ರಮವಾಗಿ ಹಾಜರಾಗಬೇಕು. (ಇಬ್ರಿಯ 10:24, 25) ನಿಷ್ಕ್ರಿಯ ಶ್ರೋತೃವಾಗಿ ಕೂಟಗಳನ್ನು ಹಾಜರಾಗುವುದನ್ನು, ಕಿಲುಬುಗಟ್ಟಿರುವ ಸ್ಥಳವನ್ನು ಬಣ್ಣದಿಂದ ಲೇಪಿಸುವುದಕ್ಕೆ ಹೋಲಿಸಸಾಧ್ಯವಿದೆ. ಇದು ನಮ್ಮನ್ನು ಸ್ವಲ್ಪ ಸಮಯಕ್ಕಾಗಿ ಉಜ್ವಲಗೊಳಿಸಬಹುದು, ಆದರೆ ಒಳಗೂಡಿರುವ ಸಮಸ್ಯೆಯನ್ನು ಅದು ಬಗೆಹರಿಸುವುದಿಲ್ಲ. ಬದಲಿಗೆ, ಮುಂಚಿತವಾದ ತಯಾರಿ, ಮನನ, ಮತ್ತು ಕೂಟಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯ ಮೂಲಕ, ನಮ್ಮ ಸಾಂಕೇತಿಕ ಹೃದಯದ ಗುಪ್ತಸ್ಥಾನಗಳಲ್ಲಿ ಬಳಸಾಡಬಹುದಾದ ಸವೆಯಿಸುವ ಅಂಶಗಳನ್ನು ನಾವು ಪ್ರಯತ್ನಪೂರ್ವಕವಾಗಿ ತೆಗೆಯಬಲ್ಲೆವು. ಇದು ದೇವರ ವಾಕ್ಯಕ್ಕೆ ಬಲವಾಗಿ ಅಂಟಿಕೊಳ್ಳುವಂತೆ ಸಹಾಯ ಮಾಡುವುದು ಮತ್ತು ನಂಬಿಕೆಯ ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ಮತ್ತು “ಸರ್ವಸುಗುಣವುಳ್ಳವ”ರಾಗುವಂತೆ ನಮ್ಮನ್ನು ಬಲಗೊಳಿಸುವುದು.—ಯಾಕೋಬ 1:3, 4; ಜ್ಞಾನೋಕ್ತಿ 15:28.
ಜಾರತ್ವದ ವಿರುದ್ಧ ಎಚ್ಚರಿಕೆ
8-10. (ಎ) ಯಾವ ಎಚ್ಚರಿಕೆಯ ಮಾದರಿಯು 1 ಕೊರಿಂಥ 10:8ರಲ್ಲಿ ಉಲ್ಲೇಖಿಸಲ್ಪಟ್ಟಿದೆ? (ಬಿ) ಮತ್ತಾಯ 5:27, 28ರಲ್ಲಿ ಕಂಡುಕೊಳ್ಳಲ್ಪಡುವ ಯೇಸುವಿನ ಮಾತುಗಳು ಹೇಗೆ ಪ್ರಯೋಜನಕರವಾಗಿ ಅನ್ವಯಿಸಲ್ಪಡಸಾಧ್ಯವಿದೆ?
8 ಪೌಲನ ಮುಂದಿನ ಉದಾಹರಣೆಯಲ್ಲಿ, ನಮಗೆ ಹೀಗೆ ಸಲಹೆ ಕೊಡಲ್ಪಟ್ಟಿದೆ: “ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವಮಾಡದೆ ಇರೋಣ.”a (1 ಕೊರಿಂಥ 10:8) ಇಸ್ರಾಯೇಲ್ಯರು ಸುಳ್ಳು ದೇವರುಗಳಿಗೆ ಅಡ್ಡಬಿದ್ದು, “ಮೋವಾಬ್ ಸ್ತ್ರೀಯರೊಡನೆ ಸಹವಾಸ [“ಅನೈತಿಕ ಸಂಬಂಧಗಳು,” NW]ಮಾಡುವವರಾದ” ಆ ಸಮಯಕ್ಕೆ ಅಪೊಸ್ತಲನು ನಿರ್ದೇಶಿಸುತ್ತಿದ್ದನು. (ಅರಣ್ಯಕಾಂಡ 25:1-9) ಲೈಂಗಿಕ ಅನೈತಿಕತೆಯು ಮಾರಕವಾಗಿದೆ! ಅನೈತಿಕ ಆಲೋಚನೆಗಳು ಮತ್ತು ಬಯಕೆಗಳು ನಿರ್ಬಂಧವಿಲ್ಲದೆ ಮುಂದುವರಿಯುವಂತೆ ಬಿಡುವುದು, ಹೃದಯದ “ಕಿಲುಬುಗಟ್ಟುವಿಕೆಯನ್ನು” ಅನುಮತಿಸುವಂತಿದೆ. ಯೇಸು ಹೇಳಿದ್ದು: “ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.”—ಮತ್ತಾಯ 5:27, 28.
9 ‘ಒಬ್ಬ ಸ್ತ್ರೀಗಾಗಿ ಕಾಮೋದ್ರೇಕವಿರುವಂತೆ ಆಕೆಯನ್ನು ನೋಡುವುದರ’ ಪರಿಣಾಮಗಳಿಗೆ, ನೋಹನ ದಿನದ ಜಲಪ್ರಳಯಕ್ಕೆ ಮೊದಲಿದ್ದ ಅವಿಧೇಯ ದೇವದೂತರ ಕೀಳ್ಮಟ್ಟದ ಯೋಚನೆಯ ಫಲಿತಾಂಶವು ಸಾಕ್ಷಿನೀಡುತ್ತದೆ. (ಆದಿಕಾಂಡ 6:1, 2) ರಾಜ ದಾವೀದನ ಜೀವನದ ಅತ್ಯಂತ ದುರಂತಕರ ಘಟನೆಗಳಲ್ಲಿ ಒಂದು, ಒಬ್ಬ ಸ್ತ್ರೀಯನ್ನು ಅಯೋಗ್ಯವಾಗಿ ನೋಡಲು ಅವನು ಮುಂದುವರಿಸಿದ ಮೂಲಕ ಕೆರಳಿಸಲ್ಪಟ್ಟಿತ್ತೆಂಬುದನ್ನು ಸಹ ಜ್ಞಾಪಿಸಿಕೊಳ್ಳಿರಿ. (2 ಸಮುವೇಲ 11:1-4) ಇದಕ್ಕೆ ವಿರುದ್ಧವಾಗಿ, ನೀತಿವಂತ ವಿವಾಹಿತ ಮನುಷ್ಯನಾದ ಯೋಬನು, ಅನೈತಿಕತೆಯನ್ನು ತೊರೆಯುತ್ತಾ ಮತ್ತು ಸಮಗ್ರತೆಯನ್ನು ಕಾಪಾಡುವವನಾಗಿ ರುಜುವಾಗುತ್ತಾ, ‘ಯುವತಿಯ ಮೇಲೆ ಕಣ್ಣಿಡದಂತೆ ತನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡನು.’ (ಯೋಬ 31:1-3, 6-11) ಕಣ್ಣುಗಳು ಹೃದಯದ ಕಿಟಕಿಗಳಿಗೆ ಹೋಲಿಸಲ್ಪಡಸಾಧ್ಯವಿದೆ. ಮತ್ತು ಒಂದು ಭ್ರಷ್ಟ ಹೃದಯದಿಂದಲೇ ಅನೇಕ ದುಷ್ಟ ವಿಷಯಗಳು ಹೊರಬರುತ್ತವೆ.—ಮಾರ್ಕ 7:20-23.
10 ನಾವು ಯೇಸುವಿನ ಮಾತುಗಳನ್ನು ಅನ್ವಯಿಸುವುದಾದರೆ, ಲಂಪಟ ಸಾಹಿತ್ಯವನ್ನು ಅವಲೋಕಿಸುವ ಅಥವಾ ಜೊತೆ ಕ್ರೈಸ್ತ ವ್ಯಕ್ತಿಯ, ಕೆಲಸದ ಸಂಗಾತಿ, ಅಥವಾ ಬೇರೆ ಯಾರಾದರೊಬ್ಬರ ಕುರಿತಾಗಿ ಅನೈತಿಕ ಆಲೋಚನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕ ನಾವು ತಪ್ಪಾದ ಆಲೋಚನೆಗಳನ್ನು ಸ್ವೇಚ್ಛಾವರ್ತನೆಗೆ ಬಿಟ್ಟುಕೊಡೆವು. ಲೋಹದಿಂದ ಕಿಲುಬು ಸವೆತವನ್ನು ಕೇವಲ ಉಜ್ಜಿಬಿಡುವುದರಿಂದ ತೆಗೆಯಲ್ಪಡುವುದಿಲ್ಲ. ಆದುದರಿಂದ, ಅನೈತಿಕ ವಿಚಾರಗಳನ್ನು ಮತ್ತು ಒಲವುಗಳನ್ನು, ಅವು ಕಡಿಮೆ ಮಹತ್ವದ್ದೊ ಎಂಬಂತೆ ಅವುಗಳನ್ನು ಲಘುವಾಗಿ ಎಣಿಸದಿರಿ. ನಿಮ್ಮನ್ನು ಅನೈತಿಕ ಒಲವುಗಳಿಂದ ದೂರವಿರಿಸಿಕೊಳ್ಳಲು ಶಕ್ತಿಶಾಲಿ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ. (ಹೋಲಿಸಿ ಮತ್ತಾಯ 5:29, 30.) ಪೌಲನು ಜೊತೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸುವುದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ; ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತದೆ.” ಹೌದು ಲೈಂಗಿಕ ಅನೈತಿಕತೆಯಂತಹ ವಿಷಯಗಳ ನಿಮಿತ್ತ, ಆತನ ಶಾಪದ ಅಭಿವ್ಯಕ್ತಿಯೋಪಾದಿ “ದೇವರ ಕೋಪವು ಉಂಟಾಗುತ್ತದೆ.” ಆದುದರಿಂದ ಈ ವಿಷಯಗಳ ಸಂಬಂಧದಲ್ಲಿ ನಮ್ಮ ದೇಹದ ಅಂಗಗಳನ್ನು ನಾವು ‘ಸಾಯಿಸುವ’ ಅಗತ್ಯವಿದೆ.—ಕೊಲೊಸ್ಸೆ 3:5, 6.
ದಂಗೆಕೋರ ದೂರುಗಳ ವಿರುದ್ಧ ಎಚ್ಚರಿಕೆ
11, 12. (ಎ) ಯಾವ ಎಚ್ಚರಿಕೆಯು 1 ಕೊರಿಂಥ 10:9ರಲ್ಲಿ ಕೊಡಲ್ಪಟ್ಟಿದೆ, ಮತ್ತು ಯಾವ ಘಟನೆಯು ಉಲ್ಲೇಖಿಸಲ್ಪಟ್ಟಿತು? (ಬಿ) ಪೌಲನ ಎಚ್ಚರಿಕೆಯು ನಮ್ಮನ್ನು ಹೇಗೆ ಪ್ರಭಾವಿಸಬೇಕು?
11 ಪೌಲನು ಮುಂದೆ ಎಚ್ಚರಿಸುವುದು: “ಅವರಲ್ಲಿ ಕೆಲವರು ಕರ್ತನನ್ನು [“ಯೆಹೋವನನ್ನು,” NW] ಪರೀಕ್ಷಿಸಿ ಸರ್ಪಗಳಿಂದ ನಾಶವಾದಂತೆ ನಾವು ಪರೀಕ್ಷಿಸದೆ ಇರೋಣ.” (1 ಕೊರಿಂಥ 10:9) ಎದೋಮಿನ ಎಲ್ಲೆಯ ಬಳಿ, ಅರಣ್ಯದಲ್ಲಿ ಪ್ರಯಾಣಿಸುತ್ತಿರುವಾಗ, ಇಸ್ರಾಯೇಲ್ಯರು “ದೇವರಿಗೂ ಮೋಶೆಗೂ ವಿರೋಧವಾಗಿ ಮಾತಾಡುತ್ತಾ—ನೀವು ನಮ್ಮನ್ನು ಈ ಮರಳುಕಾಡಿನಲ್ಲಿ ಕೊಲ್ಲಬೇಕೆಂದು ಐಗುಪ್ತದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು”—ಅದ್ಭುತಕರವಾಗಿ ಒದಗಿಸಲ್ಪಟ್ಟ ಮನ್ನವನ್ನು—“ತಿಂದು ತಿಂದು ನಮಗೆ ಬೇಸರವಾಯಿತೆಂದು ಹೇಳುವವರಾದರು.” (ಅರಣ್ಯಕಾಂಡ 21:4, 5) ಸ್ವಲ್ಪ ಯೋಚಿಸಿರಿ! ಆ ಇಸ್ರಾಯೇಲ್ಯರು ಆತನ ಒದಗಿಸುವಿಕೆಗಳನ್ನು ನಿಕೃಷ್ಟವೆಂದು ಕರೆಯುತ್ತಾ, ‘ದೇವರಿಗೆ ವಿರೋಧವಾಗಿ ಮಾತಾಡಿದರು’!
12 ಇಸ್ರಾಯೇಲ್ಯರು ತಮ್ಮ ದೂರುಗಳಿಂದ, ಯೆಹೋವನ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರು. ಶಿಕ್ಷೆಯು ತಡೆದಿಡಲ್ಪಡಲಿಲ್ಲ, ಏಕೆಂದರೆ ಯೆಹೋವನು ಅವರ ಮಧ್ಯದಲ್ಲಿ ವಿಷಭರಿತ ಸರ್ಪಗಳನ್ನು ಕಳುಹಿಸಿದನು ಮತ್ತು ಅನೇಕರು ಸರ್ಪದ ಕಚ್ಚುವಿಕೆಗಳಿಂದ ಸತ್ತರು. ಜನರು ಪಶ್ಚಾತ್ತಾಪಪಟ್ಟು, ಮೋಶೆಯು ಅವರ ಪರವಾಗಿ ಮಧ್ಯಸ್ಥಿಕೆಯನ್ನು ವಹಿಸಿದ ನಂತರ, ಉಪದ್ರವವು ಕೊನೆಗೊಳಿಸಲ್ಪಟ್ಟಿತು. (ಅರಣ್ಯಕಾಂಡ 21:6-9) ಈ ಘಟನೆಯು ವಿಶೇಷವಾಗಿ ದೇವರ ಮತ್ತು ಆತನ ದೇವಪ್ರಭುತ್ವ ಏರ್ಪಾಡುಗಳ ವಿರುದ್ಧ ಒಂದು ದಂಗೆಕೋರ, ದೂರುವ ಮನೋಭಾವವನ್ನು ಪ್ರದರ್ಶಿಸದೆ ಇರುವಂತೆ ಖಂಡಿತವಾಗಿಯೂ ನಮಗೊಂದು ಎಚ್ಚರಿಕೆಯಂತೆ ಕಾರ್ಯಮಾಡಬೇಕು.
ಗುಣುಗುಟ್ಟುವಿಕೆಯ ವಿರುದ್ಧ ಎಚ್ಚರಿಕೆ
13. ಯಾವುದರ ವಿರುದ್ಧವಾಗಿ 1 ಕೊರಿಂಥ 10:10 ಎಚ್ಚರಿಕೆ ನೀಡುತ್ತದೆ, ಮತ್ತು ಯಾವ ದಂಗೆಯು ಪೌಲನ ಮನಸ್ಸಿನಲ್ಲಿತ್ತು?
13 ಅರಣ್ಯದಲ್ಲಿದ್ದ ಇಸ್ರಾಯೇಲ್ಯರನ್ನು ಒಳಗೊಂಡ ತನ್ನ ಅಂತಿಮ ಉದಾಹರಣೆಯನ್ನು ಉದಾಹರಿಸುತ್ತಾ, ಪೌಲನು ಬರೆಯುವುದು: “ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ.” (1 ಕೊರಿಂಥ 10:10) ಕೋರಹ, ದಾತಾನ್, ಅಬೀರಾಮ, ಮತ್ತು ಅವರ ಒಡನಾಡಿಗಳು ದೇವಪ್ರಭುತ್ವವಲ್ಲದ ರೀತಿಯಲ್ಲಿ ಕ್ರಿಯೆಗೈದು, ಮೋಶೆ ಹಾಗೂ ಆರೋನರ ಅಧಿಕಾರವನ್ನು ಪಂಥಾಹ್ವಾನಿಸಿದಾಗ, ದಂಗೆಯು ಹೊರಚಿಮ್ಮಿತು. (ಅರಣ್ಯಕಾಂಡ 16:1-3) ದಂಗೆಕೋರರ ನಾಶನದ ಬಳಿಕ, ಇಸ್ರಾಯೇಲ್ಯರು ಗುಣುಗುಟ್ಟಲು ತೊಡಗಿದರು. ದಂಗೆಕೋರರ ನಾಶನವು ಅನ್ಯಾಯವಾಗಿತ್ತೆಂದು ಅವರು ವಿವೇಚಿಸಲಾರಂಭಿಸಿದ ಕಾರಣದಿಂದಲೇ ಇದು ಆರಂಭಿಸಿತು. ಅರಣ್ಯಕಾಂಡ 16:41 ಹೇಳುವುದು: “ಮರುದಿನ ಇಸ್ರಾಯೇಲ್ಯರ ಸರ್ವಸಮೂಹದವರು ಮೋಶೆ ಆರೋನರ ಮೇಲೆ ಗುಣುಗುಟ್ಟುತ್ತಾ—ನೀವೇ ಯೆಹೋವನ ಜನರನ್ನು ಸಾಯಿಸಿದಿರಿ ಎಂದು ಹೇಳುವವರಾದರು.” ಆ ಸಂದರ್ಭದಲ್ಲಿ ನ್ಯಾಯವು ನಿರ್ವಹಿಸಲ್ಪಟ್ಟ ರೀತಿಯನ್ನು ಅವರು ಟೀಕಿಸಿದ ಕಾರಣ, ದೈವಿಕವಾಗಿ ಕಳುಹಿಸಲ್ಪಟ್ಟ ವಿಪತ್ತಿನಿಂದ 14,700 ಇಸ್ರಾಯೇಲ್ಯರು ಸತ್ತುಹೋದರು.—ಅರಣ್ಯಕಾಂಡ 16:49.
14, 15. (ಎ) ಸಭೆಯೊಳಗೆ ಕುತಂತ್ರದಿಂದ ಸೇರಿಕೊಂಡ “ಭಕ್ತಿಹೀನರ” ಪಾಪಗಳಲ್ಲೊಂದು ಯಾವುದಾಗಿತ್ತು? (ಬಿ) ಕೋರಹನನ್ನು ಒಳಗೊಂಡ ಘಟನೆಯಿಂದ ಏನನ್ನು ಕಲಿಯಸಾಧ್ಯವಿದೆ?
14 ಸಾ.ಶ. ಮೊದಲನೆಯ ಶತಮಾನದಲ್ಲಿ, ಕ್ರೈಸ್ತ ಸಭೆಯೊಳಗೆ ಕುತಂತ್ರದಿಂದ ಸೇರಿಕೊಂಡ “ಭಕ್ತಿಹೀನರು” ಸುಳ್ಳು ಬೋಧಕರಾಗಿ ಅಷ್ಟೇ ಅಲ್ಲದೆ ಗುಣುಗುಟ್ಟುವವರಾಗಿ ರುಜುವಾದರು. ಈ ಪುರುಷರು ಸಭೆಯ ಆತ್ಮಿಕ ಮೇಲ್ವಿಚಾರಣೆಯೊಂದಿಗೆ ನಂಬಿ ವಹಿಸಲ್ಪಟ್ಟಿದ್ದ ಆಗಿನ ಅಭಿಷಿಕ್ತ ಪುರುಷರ “ಪ್ರಭುತ್ವವನ್ನು ಅಸಡ್ಡೆಮಾಡುತ್ತಾ . . . ಮಹಾ ಪದವಿಯವರನ್ನು ದೂಷಿಸು”ತ್ತಿದ್ದರು. ಭಕ್ತಿಹೀನ ಧರ್ಮಭ್ರಷ್ಟರ ಕುರಿತು, ಶಿಷ್ಯನಾದ ಯೂದನು ಹೀಗೂ ಹೇಳಿದನು: “ಇವರು ಗುಣುಗುಟ್ಟುವವರೂ ತಮ್ಮ ಗತಿಯನ್ನು ನಿಂದಿಸುವವರೂ ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ ಆಗಿದ್ದಾರೆ.” (ಯೂದ 3, 4, 8, 16) ಇಂದು, ತಮ್ಮ ಹೃದಯದಲ್ಲಿ ಆತ್ಮಿಕವಾಗಿ ಸವೆಯಿಸುವ ಒಂದು ಮನೋಭಾವವು ವಿಕಸಿಸುವಂತೆ ಅನುಮತಿಸುವ ಕಾರಣ, ಕೆಲವು ವ್ಯಕ್ತಿಗಳು ಗುಣುಗುಟ್ಟುವವರಾಗುತ್ತಾರೆ. ಅನೇಕ ವೇಳೆ ಅವರು ಸಭೆಯಲ್ಲಿ ಮೇಲ್ವಿಚಾರಣೆಯ ಸ್ಥಾನಗಳಲ್ಲಿರುವವರ ಅಪರಿಪೂರ್ಣತೆಗಳ ಮೇಲೆ ಕೇಂದ್ರೀಕರಿಸಿ, ಅವರ ವಿರುದ್ಧ ಗುಣುಗುಟ್ಟಲು ತೊಡಗುತ್ತಾರೆ. ಅವರ ಗುಣುಗುಟ್ಟುವಿಕೆ ಹಾಗೂ ದೂರುವಿಕೆಯು ‘ನಂಬಿಗಸ್ತ ಆಳಿ’ನ ಪ್ರಕಾಶನಗಳನ್ನು ಟೀಕಿಸುವುದಕ್ಕೂ ವಿಸ್ತರಿಸಬಹುದು.
15 ಒಂದು ಶಾಸ್ತ್ರೀಯ ವಿಷಯದ ಕುರಿತು ಪ್ರಾಮಾಣಿಕ ಪ್ರಶ್ನೆಗಳನ್ನು ಕೇಳುವುದು ಯೋಗ್ಯವಾದದ್ದಾಗಿದೆ. ಆದರೆ ಸ್ನೇಹಿತರ ಒಂದು ನಿಕಟ ವೃತ್ತದೊಳಗೆ ವಿಮರ್ಶಾತ್ಮಕ ಚರ್ಚೆಗಳಲ್ಲಿ ಸ್ವತಃ ತೋರಿಬಂದ ಒಂದು ನಕಾರಾತ್ಮಕ ಮನೋಭಾವವನ್ನು ನಾವು ವಿಕಸಿಸಿಕೊಳ್ಳುವುದಾದರೆ ಆಗೇನು? ನಮ್ಮನ್ನು ಹೀಗೆ ಕೇಳಿಕೊಳ್ಳುವುದು ಒಳ್ಳೆಯದಾಗಿರುವುದು, ‘ಗುಣುಗುಟ್ಟುವಿಕೆಯ ಸಂಭವನೀಯ ಪರಿಣಾಮಗಳು ಯಾವುವಾಗಿರುವವು? ಗುಣುಗುಟ್ಟುವುದನ್ನು ನಿಲ್ಲಿಸಿ, ವಿವೇಕಕ್ಕಾಗಿ ದೀನರಾಗಿ ಪ್ರಾರ್ಥಿಸುವುದು ಬಹಳಷ್ಟು ಉತ್ತಮವಾಗಿರಲಿಕ್ಕಿಲ್ಲವೊ?’ (ಯಾಕೋಬ 1:5-8; ಯೂದ 17-21) ಮೋಶೆ ಆರೋನರ ಅಧಿಕಾರದ ವಿರುದ್ಧ ದಂಗೆಯೆದ್ದ ಕೋರಹನು ಮತ್ತು ಅವನ ಬೆಂಬಲಿಗರು, ತಮ್ಮ ದೃಷ್ಟಿಕೋನವು ನ್ಯಾಯಸಮ್ಮತವಾಗಿತ್ತೆಂಬುದರ ಕುರಿತು ಎಷ್ಟೊಂದು ಮನಗಾಣಿಸಲ್ಪಟ್ಟಿರಬಹುದೆಂದರೆ, ಅವರು ತಮ್ಮ ಹೇತುಗಳನ್ನು ಪರೀಕ್ಷಿಸಲಿಲ್ಲ. ಆದರೂ, ಅವರು ಸಂಪೂರ್ಣವಾಗಿ ತಪ್ಪಾಗಿದ್ದರು. ಹಾಗೆಯೇ ಕೋರಹ ಮತ್ತು ಇತರ ದಂಗೆಕೋರರ ನಾಶನದ ಕುರಿತು ಗುಣುಗುಟ್ಟಿದ ಇಸ್ರಾಯೇಲ್ಯರು ತಪ್ಪಾಗಿದ್ದರು. ಇಂತಹ ಮಾದರಿಗಳು, ನಮ್ಮ ಹೇತುಗಳನ್ನು ಪರೀಕ್ಷಿಸುವಂತೆ, ಗುಣುಗುಟ್ಟುವುದನ್ನು ಅಥವಾ ದೂರುವುದನ್ನು ತೊಲಗಿಸುವಂತೆ, ಮತ್ತು ನಮ್ಮನ್ನು ಶುದ್ಧೀಕರಿಸಲು ಯೆಹೋವನನ್ನು ಅನುಮತಿಸಲು ನಮ್ಮನ್ನು ಪ್ರಚೋದಿಸುವಂತೆ ಬಿಡುವುದು ಎಷ್ಟು ವಿವೇಕಯುತವಾಗಿದೆ!—ಕೀರ್ತನೆ 17:1-3.
ಕಲಿಯಿರಿ, ಮತ್ತು ಆಶೀರ್ವಾದಗಳನ್ನು ಅನುಭವಿಸಿರಿ
16. 1 ಕೊರಿಂಥ 10:11, 12ರಲ್ಲಿರುವ ಪ್ರಬೋಧನೆಯ ತಿರುಳೇನು?
16 ದೈವಿಕ ಪ್ರೇರಣೆಯ ಕೆಳಗೆ, ಪೌಲನು ಎಚ್ಚರಿಕೆಯ ಸಂದೇಶಗಳ ಪಟ್ಟಿಯನ್ನು ಈ ಪ್ರಬೋಧನೆಯೊಂದಿಗೆ ಸಮಾಪ್ತಿಗೊಳಿಸುತ್ತಾನೆ: “ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ. ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” (1 ಕೊರಿಂಥ 10:11, 12) ಕ್ರೈಸ್ತ ಸಭೆಯಲ್ಲಿ ನಮ್ಮ ನಿಲುವನ್ನು ನಾವು ಮಾಮೂಲಾಗಿ ಭಾವಿಸದಿರೋಣ.
17. ನಮ್ಮ ಹೃದಯದಲ್ಲಿ ಒಂದು ಅಯೋಗ್ಯವಾದ ಹೇತುವನ್ನು ನಾವು ಗ್ರಹಿಸುವುದಾದರೆ, ನಾವು ಏನು ಮಾಡಬೇಕು?
17 ಕಬ್ಬಿಣಕ್ಕೆ ಕಿಲುಬುಗಟ್ಟುವ ಪ್ರವೃತ್ತಿಯಿರುವಂತೆಯೇ ಪಾಪಮಯ ಆದಾಮನ ಸಂತತಿಯವರಾದ ನಾವು ಕೆಟ್ಟತನದ ಕಡೆಗೆ ಒಂದು ಒಲವನ್ನು ಪಿತ್ರಾರ್ಜಿತವಾಗಿ ಪಡೆದುಕೊಂಡಿದ್ದೇವೆ. (ಆದಿಕಾಂಡ 8:21; ರೋಮಾಪುರ 5:12) ಆದಕಾರಣ, ನಮ್ಮ ಹೃದಯದಲ್ಲಿ ಅಯೋಗ್ಯವಾದೊಂದು ಹೇತುವನ್ನು ನಾವು ಗ್ರಹಿಸುವುದಾದರೆ ನಾವು ನಿರಾಶೆಗೊಳ್ಳಬಾರದು. ಬದಲಿಗೆ ನಾವು ನಿರ್ಣಾಯಕ ಕ್ರಿಯೆಗೈಯೋಣ. ಕಬ್ಬಿಣವು ತೇವವಾದ ಹವಾಮಾನಕ್ಕೆ ಅಥವಾ ತೀಕ್ಷ್ಣವಾದ ಪರಿಸರಕ್ಕೆ ಬಿಡಲ್ಪಟ್ಟಾಗ, ಅದರ ಸವೆತವು ಬಹಳವಾಗಿ ವೃದ್ಧಿಸಲ್ಪಡುತ್ತದೆ. ಅದರ ದುಷ್ಟ ಮನೋರಂಜನೆ, ವ್ಯಾಪಕವಾದ ಅನೈತಿಕತೆ, ಮತ್ತು ಮನಸ್ಸಿನ ನಕಾರಾತ್ಮಕ ಒಲವಿನೊಂದಿಗೆ ಸೇರಿರುವ ಸೈತಾನನ ಲೋಕದ “ವಾಯು”ವಿಗೆ ಬಯಲಾಗುವುದನ್ನು ತೊರೆಯುವ ಅಗತ್ಯ ನಮಗಿದೆ.—ಎಫೆಸ 2:1, 2.
18. ಮಾನವಜಾತಿಯ ತಪ್ಪಾದ ಒಲವುಗಳ ಸಂಬಂಧದಲ್ಲಿ ಯೆಹೋವನು ಏನು ಮಾಡಿದ್ದಾನೆ?
18 ನಾವು ಪಿತ್ರಾರ್ಜಿತವಾಗಿ ಪಡೆದಿರುವ ತಪ್ಪಾದ ಪ್ರವೃತ್ತಿಗಳನ್ನು ಪ್ರತಿರೋಧಿಸುವ ವಿಧಾನವನ್ನು ಯೆಹೋವನು ಮಾನವಜಾತಿಗೆ ಒದಗಿಸಿದ್ದಾನೆ. ಅವನಲ್ಲಿ ನಂಬಿಯನ್ನಿಡುವವರು ನಿತ್ಯಜೀವವನ್ನು ಪಡೆಯಲಿಕ್ಕೋಸ್ಕರ ಆತನು ತನ್ನ ಏಕಜಾತ ಪುತ್ರನನ್ನು ಕೊಟ್ಟನು. (ಯೋಹಾನ 3:16) ನಾವು ಯೇಸುವಿನ ಹೆಜ್ಜೆಗಳನ್ನು ನಿಕಟವಾಗಿ ಅನುಸರಿಸುವುದಾದರೆ ಮತ್ತು ಕ್ರಿಸ್ತನಂತಹ ವ್ಯಕ್ತಿತ್ವವನ್ನು ಪ್ರದರ್ಶಿಸುವುದಾದರೆ, ನಾವು ಇತರರಿಗೆ ಒಂದು ಆಶೀರ್ವಾದವಾಗಿರುವೆವು. (1 ಪೇತ್ರ 2:21) ನಾವು ಶಾಪಗಳನ್ನಲ್ಲ, ಬದಲಿಗೆ ಆಶೀರ್ವಾದಗಳನ್ನೂ ಪಡೆಯುವೆವು.
19. ಶಾಸ್ತ್ರೀಯ ಉದಾಹರಣೆಗಳನ್ನು ಪರಿಗಣಿಸುವುದರಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
19 ಗತಕಾಲದ ಇಸ್ರಾಯೇಲ್ಯರು ತಪ್ಪಿಗೆ ಈಡಾದಂತೆಯೇ ನಾವು ಇಂದು ಈಡಾಗುವುದಾದರೂ, ನಮಗೆ ಮಾರ್ಗದರ್ಶನ ನೀಡಲು ನಮ್ಮಲ್ಲಿ ದೇವರ ಸಂಪೂರ್ಣ ಲಿಖಿತ ವಾಕ್ಯವಿದೆ. ಅದರ ಪುಟಗಳಿಂದ ನಾವು ಮಾನವಜಾತಿಯೊಂದಿಗೆ ಯೆಹೋವನ ವ್ಯವಹಾರಗಳ ಕುರಿತು ಅಷ್ಟೇ ಅಲ್ಲದೆ ಯೇಸುವಿನಲ್ಲಿ—‘ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ’ ಆಗಿರುವವನಲ್ಲಿ—ದೃಷ್ಟಾಂತಿಸಲ್ಪಟ್ಟ ಆತನ ಗುಣಗಳ ಕುರಿತು ನಾವು ಕಲಿಯುತ್ತೇವೆ. (ಇಬ್ರಿಯ 1:1-3; ಯೋಹಾನ 14:9, 10) ಪ್ರಾರ್ಥನೆ ಮತ್ತು ಶಾಸ್ತ್ರಗಳ ಶ್ರದ್ಧಾಪೂರ್ವಕ ಅಧ್ಯಯನದ ಮುಖಾಂತರ, ನಾವು “ಕ್ರಿಸ್ತನ ಮನಸ್ಸ”ನ್ನು ಪಡೆದಿರಸಾಧ್ಯವಿದೆ. (1 ಕೊರಿಂಥ 2:16) ಶೋಧನೆಗಳು ಮತ್ತು ನಮ್ಮ ನಂಬಿಕೆಯ ಇತರ ಪರೀಕ್ಷೆಗಳಿಂದ ನಾವು ಎದುರಿಸಲ್ಪಟ್ಟಾಗ, ಪ್ರಾಚೀನ ಶಾಸ್ತ್ರೀಯ ಮಾದರಿಗಳನ್ನು ಮತ್ತು ವಿಶೇಷವಾಗಿ ಯೇಸು ಕ್ರಿಸ್ತನ ಅತ್ಯುತ್ಕೃಷ್ಟ ಮಾದರಿಯನ್ನು ಪರಿಗಣಿಸುವುದರಿಂದ ನಾವು ಪ್ರಯೋಜನ ಪಡೆಯಬಲ್ಲೆವು. ನಾವು ಹಾಗೆ ಮಾಡುವುದಾದರೆ, ದೈವಿಕ ಶಾಪಗಳ ನೆರವೇರಿಕೆಯನ್ನು ನಾವು ಅನುಭವಿಸಬೇಕಾಗದು. ಬದಲಿಗೆ ನಾವು ಇಂದು ಯೆಹೋವನ ಅನುಗ್ರಹವನ್ನು ಮತ್ತು ಅನಂತಕಾಲಕ್ಕೆ ಆತನ ಆಶೀರ್ವಾದಗಳನ್ನು ಅನುಭವಿಸುವೆವು.
[ಪಾದಟಿಪ್ಪಣಿ]
ನೀವು ಹೇಗೆ ಉತ್ತರಿಸುವಿರಿ?
◻ ವಿಗ್ರಹಾರಾಧಕರಾಗದಿರುವ ಪೌಲನ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ?
◻ ಜಾರತ್ವದ ವಿರುದ್ಧ ನೀಡಲ್ಪಟ್ಟ ಅಪೊಸ್ತಲನ ಎಚ್ಚರಿಕೆಗೆ ಕಿವಿಗೊಡಲು ನಾವು ಏನು ಮಾಡಸಾಧ್ಯವಿದೆ?
◻ ನಾವು ಗುಣುಗುಟ್ಟುವುದನ್ನು ಮತ್ತು ದೂರುವುದನ್ನು ಏಕೆ ತೊರೆಯಬೇಕು?
◻ ನಾವು ಶಾಪಗಳನ್ನಲ್ಲ, ದೈವಿಕ ಆಶೀರ್ವಾದಗಳನ್ನು ಹೇಗೆ ಪಡೆಯಬಲ್ಲೆವು?
[ಪುಟ 18 ರಲ್ಲಿರುವ ಚಿತ್ರ]
ನಾವು ದೈವಿಕ ಆಶೀರ್ವಾದಗಳನ್ನು ಬಯಸುವುದಾದರೆ, ವಿಗ್ರಹಾರಾಧನೆಯನ್ನು ನಾವು ತೊರೆಯಬೇಕು
[ಪುಟ 20 ರಲ್ಲಿರುವ ಚಿತ್ರಗಳು]
ಕಿಲುಬನ್ನು ತೆಗೆದುಬಿಡುವ ಅಗತ್ಯವಿರುವಂತೆಯೇ, ನಮ್ಮ ಹೃದಯಗಳಿಂದ ಅಯೋಗ್ಯವಾದ ಬಯಕೆಗಳನ್ನು ತೆಗೆದುಬಿಡಲು ನಾವು ಸಕಾರಾತ್ಮಕ ಕ್ರಿಯೆಯನ್ನು ತೆಗೆದುಕೊಳ್ಳೋಣ