ಭೂಮಿಯ ಅತ್ಯಂತ ದೂರದ ಭಾಗಕ್ಕೆ ಸಾಕ್ಷಿಗಳು
ಇಟಾ
ಟೂಲಿ
ಗೋದಾವ್ನ್
ಗಾಟ್ಹಾಬ್
ಜೂಲ್ಯನೆಹಾಬ್
ಅಂಗ್ಮಾಗ್ಸಾಲಿಕ್
ಟೂಲಿ ಎಂಬುದು, ಭೂಗೋಳ ಶಾಸ್ತ್ರದ್ದಾಗಿರಲಿ ಅಥವಾ ಬೇರೆ ಯಾವುದೇ ಆಗಿರಲಿ, ಒಂದು ಅಂತಿಮ ಗುರಿಯನ್ನು ವರ್ಣಿಸಲಿಕ್ಕಾಗಿ ಪುರಾತನ ಸಮಯಗಳಿಂದಲೂ ಉಪಯೋಗಿಸಲ್ಪಟ್ಟಿರುವ ಒಂದು ಹೆಸರಿನ ಭಾಗವಾಗಿದೆ. ಇಂದು ಲೋಕದ ಅತ್ಯಂತ ದೊಡ್ಡ ದ್ವೀಪವಾಗಿರುವ ಗ್ರೀನ್ಲೆಂಡ್ನ, ತೀರ ಉತ್ತರಕ್ಕಿರುವ ಒಂದು ಸಣ್ಣ ನೆಲಸುನಾಡಿನ ಹೆಸರು ಟೂಲಿಯಾಗಿದೆ. 1910ರಲ್ಲಿ, ಡ್ಯಾನಿಷ್ ಪರಿಶೋಧಕನಾದ ನೂಟ್ ರ್ಯಾಸ್ಮುಸನ್ನು, ಇದನ್ನು ಭೂಗೋಳ ಧ್ರುವದ ಸಮುದ್ರಯಾನಗಳಿಗಾಗಿ ಸರಕುಸರಬರಾಯಿ ತಾಣವನ್ನಾಗಿ ಉಪಯೋಗಿಸಿದಾಗ, ಈ ನೆಲಸುನಾಡು ಹೀಗೆ ಹೆಸರಿಸಲ್ಪಟ್ಟಿತು. ಈಗ ಸಹ ಟೂಲಿಗೆ ಹೋಗುವುದು, ಒಂದು ಆನಂದಕರವಾದ ಪ್ರವಾಸವಾಗಿರುವುದಕ್ಕಿಂತಲೂ ಹೆಚ್ಚಾಗಿ ಒಂದು ವಿಶೇಷ ಕಾರ್ಯಕ್ಕಾಗಿ ಮಾಡುವ ಸಮುದ್ರಯಾನವಾಗಿದೆ.
ಇನ್ನೂ ಟೂಲಿಗೆ ಹೋಗುವ ಸಮುದ್ರಯಾನಗಳಿಗಾಗಿ ಒಂದು ತುರ್ತಿನ ಅಗತ್ಯವಿದೆ. “ಭೂಮಿಯ ಅತ್ಯಂತ ದೂರದ ಭಾಗದ ವರೆಗೂ . . . ನನಗೆ ಸಾಕ್ಷಿಗಳಾಗಿರಿ” ಎಂಬ ಯೇಸುವಿನ ಆಜ್ಞೆಗೆ ಪ್ರತಿಕ್ರಿಯೆಯಲ್ಲಿ, ಭೂಮಿಯ ಮೇಲಿನ ಅತ್ಯಂತ ಉತ್ತರದ ಶಾಶ್ವತ ಮಾನವ ನೆಲಸುನಾಡುಗಳಲ್ಲಿ ಒಂದಾದ ಈ ಸ್ಥಳಕ್ಕೆ, ದೇವರ ರಾಜ್ಯದ ಸುವಾರ್ತೆಯನ್ನು ತರಲು ಯೆಹೋವನ ಸಾಕ್ಷಿಗಳು ಅತ್ಯಾತುರರಾಗಿದ್ದಾರೆ.—ಅ. ಕೃತ್ಯಗಳು 1:8, NW; ಮತ್ತಾಯ 24:14.
‘ನಾವು ಯಾವಾಗ ಟೂಲಿಗೆ ಹೋಗಬಲ್ಲೆವು?’
1955ರಲ್ಲಿ, ಸಾರುವುದರಲ್ಲಿ “ಭೂಮಿಯ ಅತ್ಯಂತ ದೂರದ ಭಾಗದ ವರೆಗೂ” ಒಂದು ಪಾಲನ್ನು ಪಡೆಯಲು ಬಯಸಿದ ಇಬ್ಬರು ಡ್ಯಾನಿಷ್ ಸಾಕ್ಷಿಗಳು, ಗ್ರೀನ್ಲೆಂಡಿಗೆ ಆಗಮಿಸಿದರು. ಇತರರು ತದನಂತರ ಬಂದರು, ಮತ್ತು ಕ್ರಮೇಣವಾಗಿ ಅವರ ಸಾರುವ ಕಾರ್ಯವು, ದಕ್ಷಿಣ ಮತ್ತು ಪಶ್ಚಿಮ ಕಡಲತೀರದಲ್ಲಿ ಮೆಲ್ವಿಲ್ ಬೇಯ ವರೆಗೆ ಹಾಗೂ ಪೂರ್ವ ಕಡಲತೀರದ ಕವಲುದಾರಿಯ ವರೆಗೆ ಆವರಿಸಲ್ಪಟ್ಟಿತು. ಆದರೆ ಆ ದೇಶದ, ಟೂಲಿಯಂತಹ ಬಹು ದೂರದ ಭಾಗಗಳು, ಬಹುಮಟ್ಟಿಗೆ ಕೇವಲ ಪತ್ರ ಅಥವಾ ಟೆಲಿಫೋನ್ಗಳ ಮೂಲಕ ತಲಪಲ್ಪಟ್ಟಿದ್ದವು.
1991ರ ಒಂದು ದಿನ, ಇಬ್ಬರು ಪೂರ್ಣ ಸಮಯದ ಶುಶ್ರೂಷಕರಾದ ಬೋ ಹಾಗೂ ಅವನ ಹೆಂಡತಿ ಹೆಲೆನ್, ಮೆಲ್ವಿಲ್ ಬೇಯ ಕಡೆಗೆ ದೃಷ್ಟಿಹರಿಸುತ್ತಾ ಬಂಡೆಯೊಂದರ ಮೇಲೆ ನಿಂತಿದ್ದರು. ಅವರು ಉತ್ತರ ದಿಕ್ಕಿಗೆ ನೋಡುತ್ತಾ ಆಲೋಚಿಸಿದ್ದು, ‘ಟೂಲಿಯಲ್ಲಿನ ಜನರಿಗೆ ಸುವಾರ್ತೆಯನ್ನು ಕೊಂಡೊಯ್ಯಲಿಕ್ಕಾಗಿ, ಅಲ್ಲಿಯ ವರೆಗೆ ಹೋಗಲು ನಾವು ಯಾವಾಗ ಶಕ್ತರಾಗುವೆವು?’
1993ರಲ್ಲಿ, ಇನ್ನೊಬ್ಬ ಪೂರ್ಣ ಸಮಯದ ಶುಶ್ರೂಷಕನಾದ ವರ್ನರ್, ತನ್ನ 18 ಅಡಿಯ ವೇಗದೋಣಿಯಾದ ಕಾಮನೆಕ್ (ಬೆಳಕು)ನಲ್ಲಿ ಮೆಲ್ವಿಲ್ ಬೇಯನ್ನು ದಾಟುವ ಸಾಹಸಮಾಡಿದನು. ಅವನು ಈಗಾಗಲೇ ಗಾಟ್ಹಾಬ್ನಿಂದ 1,200 ಕಿಲೊಮೀಟರ್ಗಳಷ್ಟು ದೂರದ ಊಪರ್ನವೀಕ್ನ ವರೆಗೆ ಪಯಣಿಸಿದ್ದನು. ಆದರೂ, ಉತ್ತರ ಧ್ರುವದ ನೀರಿನ 400 ಕಿಲೊಮೀಟರ್ಗಳಷ್ಟು ದೊಡ್ಡ ವಿಸ್ತಾರ್ಯದ ಮೆಲ್ವಿಲ್ ಬೇಯನ್ನು ದಾಟುವುದು, ಒಂದು ಸುಲಭವಾದ ಕೆಲಸವಾಗಿರಲಿಲ್ಲ. ವರ್ಷದ ಬಹುಭಾಗ, ಕೊಲ್ಲಿಯು ಮಂಜುಗಡ್ಡೆಯಿಂದ ಆವೃತವಾಗಿರುತ್ತದೆ. ಮಂಜುಗಡ್ಡೆಯ ಕಾರಣದಿಂದ ವರ್ನರನ ವೇಗದೋಣಿಯ ಒಂದು ಇಂಜಿನ್ ಕೆಲಸಮಾಡುವುದನ್ನು ನಿಲ್ಲಿಸಿದಾಗ್ಯೂ, ಈ ಕೊಲ್ಲಿಯನ್ನು ದಾಟುವುದರಲ್ಲಿ ಅವನು ಯಶಸ್ವಿಯಾದನು. ಮತ್ತು ಅವನು ಹಿಂದಿರುಗುವ ಮೊದಲು ಸ್ವಲ್ಪ ಸಾರುವ ಕಾರ್ಯವನ್ನು ಮಾಡಲು ಶಕ್ತನಾದನು.
ಟೂಲಿಗೆ ಹೋಗುವುದು
ಆ ಪ್ರವಾಸದ ನಂತರ, ವರ್ನರ್ ಹೊಸ ಯೋಜನೆಗಳನ್ನು ಮಾಡಲಾರಂಭಿಸಿದನು. ಏಳು ಮೀಟರಿನ, ನಾಲ್ಕು ಶಯನಸ್ಥಳ (ಬರ್ತ್)ಗಳಿದ್ದ, ಮತ್ತು ಅತ್ಯಂತ ಪ್ರಾಮುಖ್ಯವಾಗಿ, ಆಧುನಿಕ ಸಮುದ್ರಯಾನ ಸಲಕರಣೆಯನ್ನು ಹೊಂದಿದ್ದ ಒಂದು ದೋಣಿಯ ಒಡೆಯರಾಗಿದ್ದ, ಆರ್ನ ಮತ್ತು ಕಾರೀನ್ರೊಂದಿಗೆ, ಟೂಲಿಗೆ ಒಂದು ಜೊತೆ ಪ್ರವಾಸಮಾಡುವುದರ ಕುರಿತಾಗಿ ಅವನು ಮಾತಾಡಿದನು. ಆ ದೋಣಿಗಳು ವಸತಿಗಳನ್ನು ಒದಗಿಸುವವು, ಮತ್ತು ಎರಡು ದೋಣಿಗಳು ಒಟ್ಟಿಗೆ ಪ್ರಯಾಣಿಸುತ್ತಿರುವುದರಿಂದ, ಮೆಲ್ವಿಲ್ ಬೇಯನ್ನು ದಾಟುವುದು ಕಡಿಮೆ ಅಪಾಯಕರವಾಗಿರುವುದು. 600 ನಿವಾಸಿಗಳಿರುವ ಮುಖ್ಯ ಪಟ್ಟಣವನ್ನೂ ಆ ಕ್ಷೇತ್ರದಲ್ಲಿನ ಆರು ನೆಲಸುನಾಡುಗಳನ್ನೂ ಆವರಿಸಲು, ಅವರಿಗೆ ಹೆಚ್ಚಿನ ಸಹಾಯದ ಅಗತ್ಯವಿತ್ತು. ಆದುದರಿಂದ ಬೋ ಮತ್ತು ಹೆಲೆನ್ ಹಾಗೂ ಯಾರ್ನ್ ಮತ್ತು ಇಂಗರನ್ನು—ಅವರೆಲ್ಲರೂ ಈ ದೇಶದಲ್ಲಿ ಪ್ರಯಾಣಿಸುವುದರಲ್ಲಿ ಪರಿಚಿತರಾದ ಅನುಭವಸ್ಥ ಶುಶ್ರೂಷಕರು—ಜೊತೆಯಲ್ಲಿ ಬರುವಂತೆ ಅವರು ಆಮಂತ್ರಿಸಿದರು. ಈ ಗುಂಪಿನ ಐವರು ಗ್ರೀನ್ಲೆಂಡ್ ಭಾಷೆಯನ್ನು ಸಹ ಮಾತಾಡುತ್ತಾರೆ.
ಅವರು ಬೈಬಲ್ ಸಾಹಿತ್ಯದ ಸರಬರಾಯಿಗಳನ್ನು ಮುಂದಾಗಿಯೇ ಕಳುಹಿಸಿದರು. ದೋಣಿಗಳು ಸಹ ಸಾಹಿತ್ಯದಿಂದ ಮತ್ತು ಆಹಾರ ಹಾಗೂ ನೀರು, ಇಂಧನ, ಮತ್ತೊಂದು ಎಂಜಿನ್, ಹಾಗೂ ಒಂದು ರಬ್ಬರ್ ಕಿರುದೋಣಿಯ ಆವಶ್ಯಕವಾದ ಒದಗಿಸುವಿಕೆಗಳೊಂದಿಗೆ ಭರ್ತಿಮಾಡಲ್ಪಟ್ಟಿದ್ದವು. ತದನಂತರ, 1994, ಆಗಸ್ಟ್ 5ರಂದು, ಹಲವಾರು ತಿಂಗಳುಗಳ ಸಿದ್ಧತೆಯ ಬಳಿಕ, ಈ ಗುಂಪು ಒಟ್ಟುಗೂಡಿಸಲ್ಪಟ್ಟಿತು ಮತ್ತು ಎರಡೂ ದೋಣಿಗಳು ಸಿದ್ಧವಾಗಿ ಹಾಗೂ ಭರ್ತಿಮಾಡಲ್ಪಟ್ಟು ಇಲುಲಿಸಟ್ ಬಂದರಿನಲ್ಲಿ ನಿಂತಿದ್ದವು. ಉತ್ತರದ ಕಡೆಗೆ ಹೊರಡುವ ಪ್ರಯಾಣವು ಆರಂಭಿಸಲ್ಪಟ್ಟಿತು. ಎರಡು ದೋಣಿಗಳಲ್ಲಿ ತೀರ ಸಣ್ಣದಾದ ಒಂದು ದೋಣಿಯಲ್ಲಿ, ವರ್ನರ್, ಬೋ ಮತ್ತು ಹೆಲೆನ್ ಸಂಚರಿಸಿದರು. “ಪ್ರವಾಸದ ಸಮಯದಲ್ಲಿ ನೀವು ಮಾಡಸಾಧ್ಯವಿರುವ ಏಕಮಾತ್ರ ವಿಷಯವು, ಏನನ್ನಾದರೂ ಹಿಡಿದುಕೊಂಡು ನಿಮ್ಮ ಶಯನಸ್ಥಳದ ಮೇಲೆ ಕುಳಿತುಕೊಳ್ಳುವುದು ಅಥವಾ ಮಲಗುವುದಾಗಿತ್ತು” ಎಂದು ಬೋ ಬರೆಯುತ್ತಾನೆ. ಪ್ರಯಾಣಕ್ಕಾಗಿರುವ ಹಡಗಿನ ದಿನಚರಿಯನ್ನು ನಾವು ಅನುಸರಿಸೋಣ.
“ಪ್ರಶಾಂತವಾದ ಸಮುದ್ರದ ದೀರ್ಘವಾದ ವಿಸ್ತಾರ್ಯಗಳು ಅಲ್ಲಿದ್ದವು. ಪ್ರಭಾಮಯವಾದ ದೃಶ್ಯಪರಂಪರೆಯು ನಮ್ಮ ಕಣ್ಣುಗಳ ಮುಂದೆ ಹೊರಗೆಡವಲ್ಪಟ್ಟಿತು—ಚಂಚಲ ಪ್ರಭೆಯ ಸಮುದ್ರ, ದಟ್ಟವಾದ ಮಂಜಿನ ತೇಪೆಗಳು, ಪ್ರಕಾಶಮಾನವಾದ ಸೂರ್ಯ ಮತ್ತು ನೀಲಾಕಾಶ, ಅತ್ಯಂತ ಮನೋಹರವಾದ ಆಕಾರಗಳಿಂದ ಹಾಗೂ ಬಣ್ಣದ ಛಾಯೆಗಳಿಂದ ಕೂಡಿದ ನೀರ್ಗಲ್ಲ ಗುಡ್ಡಗಳು, ನೀರ್ಗಲ್ಲ ಚಪ್ಪಡಿಯೊಂದರ ಮೇಲೆ ಸ್ವತಃ ಬಿಸಿಲುಕಾಯಿಸಿಕೊಳ್ಳುತ್ತಿರುವ ಒಂದು ಕಂದು ಬಣ್ಣದ ಕಡಲ್ಗುದುರೆ (ವಾಲ್ರಸ್), ಕಪ್ಪನೆಯ ಪರ್ವತ ಇಳುಕಲುಗಳು ಮತ್ತು ಚಿಕ್ಕ ಬಯಲುಗಳಿಂದ ಕೂಡಿರುವ ಕಡಲಂಚು—ಪ್ರಕೃತಿ ದೃಶ್ಯದ ಬದಲಾವಣೆಯು ಅಂತ್ಯರಹಿತವಾಗಿತ್ತು.
“ಅತ್ಯಂತ ಆಸಕ್ತಿಕರವಾದ ಭಾಗವು, ದಾರಿಯುದ್ದಕ್ಕೂ ಇರುವ ನೆಲಸುನಾಡುಗಳನ್ನು ಸಂದರ್ಶಿಸುತ್ತಿದ್ದುದಾಗಿತ್ತು ಎಂಬುದು ನಿಶ್ಚಯ. ಅಲ್ಲಿ ಯಾವಾಗಲೂ ಜನರಿರುತ್ತಿದ್ದರು, ಸಾಮಾನ್ಯವಾಗಿ ಸಂದರ್ಶಕರು ಯಾರಾಗಿದ್ದರು ಎಂಬುದನ್ನು ನೋಡಲಿಕ್ಕಾಗಿ ಮತ್ತು ಅವರನ್ನು ಸ್ವಾಗತಿಸಲಿಕ್ಕಾಗಿ ಮಕ್ಕಳು ಹಡಗಿನ ಇಳಿದಾಣಕ್ಕೆ ಬರುತ್ತಿದ್ದರು. ನಾವು ಬೈಬಲ್ ಸಾಹಿತ್ಯವನ್ನು ವಿತರಿಸಿದೆವು ಮತ್ತು ನಮ್ಮ ಸಂಸ್ಥೆಯ ಕುರಿತಾದ ಒಂದು ವಿಡಿಯೊವನ್ನು ಜನರಿಗೆ ಎರವಲಾಗಿ ಕೊಟ್ಟೆವು. ನಾವು ಅಲ್ಲಿಂದ ಹೊರಡಬೇಕಾಗಿದ್ದ ಸಮಯಕ್ಕೆ ಮೊದಲೇ, ಅನೇಕರು ಅದನ್ನು ನೋಡಲು ಶಕ್ತರಾಗಿದ್ದರು. ಸೌತ್ ಊಪರ್ನವೀಕ್ನಲ್ಲಿ, ನಾವು ಒಳಬರುವುದಕ್ಕೆ ಮೊದಲೇ, ಅನೇಕ ಜನರು ನಮ್ಮ ದೋಣಿಗಳ ಸಮೀಪಕ್ಕೆ ಸಂಚರಿಸಿದ್ದರು. ಆದುದರಿಂದ ಇಡೀ ಸಾಯಂಕಾಲದ ವರೆಗೆ ನಮ್ಮ ಹಡಗಿನಲ್ಲಿ ಅತಿಥಿಗಳಿದ್ದರು ಮತ್ತು ನಾವು ಅನೇಕ ಬೈಬಲ್ ಪ್ರಶ್ನೆಗಳನ್ನು ಉತ್ತರಿಸಿದೆವು.”
ಈಗ, ಪ್ರಯಾಣದ ಮೊದಲ 700 ಕಿಲೊಮೀಟರ್ಗಳ ಬಳಿಕ, ಎರಡು ದೋಣಿಗಳು ಮೆಲ್ವಿಲ್ ಬೇಯನ್ನು ದಾಟಲು ಸಿದ್ಧವಾಗಿದ್ದವು.
ನಿರ್ಣಾಯಕ ಪಂಥಾಹ್ವಾನ
“ಇದು ಪ್ರಯಾಣದ ನಿರ್ಣಾಯಕ ಭಾಗದೋಪಾದಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿತು. ಮತ್ತು ನಾವು ಒಂದೇ ಚಾಚಿನಲ್ಲಿ ದಾಟುವಿಕೆಯನ್ನು ಮಾಡಬೇಕಾಗಿತ್ತು, ಯಾಕೆಂದರೆ ಸಾವಿಸಿವಿಕ್ (ಟೆರಿಟೊರಿಯು ಆರಂಭವಾಗುವ ಹಾಗೂ ಅನ್ಯಥಾ ನಾವು ಆಶ್ರಯವನ್ನು ಕಂಡುಕೊಳ್ಳಸಾಧ್ಯವಿದ್ದ ಸ್ಥಳ) ನೆಲಸುನಾಡು ಇನ್ನೂ ಮಂಜುಗಡ್ಡೆಯಿಂದ ಆವೃತವಾಗಿತ್ತು.
“ಆದುದರಿಂದ ನಾವು ದಾಟುವಿಕೆಯನ್ನು ಆರಂಭಿಸಿದೆವು. ಅಲ್ಲಿ ಬಹಳ ಮಂಜುಗಡ್ಡೆಯು ಇದ್ದುದರಿಂದ, ನಾವು ತೆರೆದ ಸಮುದ್ರದಲ್ಲಿ ತೀರ ದೂರಕ್ಕೆ ಸಂಚರಿಸಿದೆವು. ಸಂತೋಷಕರವಾಗಿ, ನೀರುಗಳು ಪ್ರಶಾಂತವಾಗಿದ್ದವು. ಮೊದಲ ಅನೇಕ ತಾಸುಗಳು ಘಟನಾರಹಿತವಾಗಿದ್ದವು—ಮಹಾಸಾಗರದ ಅನೇಕ ಮೈಲುಗಳ ಮೂಲಕ ನೀರನ್ನು ಭೇದಿಸಿಕೊಂಡು ಸಾಗುತ್ತಿರುವುದು. ಸಾಯಂಕಾಲದಷ್ಟಕ್ಕೆ ಕೇಪ್ ಯಾರ್ಕ್ ನಮ್ಮ ದೃಷ್ಟಿಗೆ ಬಿದ್ದಿತು ಮತ್ತು ದಡಕ್ಕೆ ಹೆಚ್ಚು ಸಮೀಪವಾಗಿ, ಉತ್ತರ ದಿಕ್ಕಿಗೆ ನಿಧಾನವಾಗಿ ತಿರುಗಿದೆವು. ಈಗ ಇಲ್ಲಿ ಪುನಃ ಮಂಜುಗಡ್ಡೆಯಿತ್ತು—ಕಣ್ಣು ನೋಡಸಾಧ್ಯವಿರುವಷ್ಟು ದೂರದ ವರೆಗೆ, ಹಳತಾದ, ದಟ್ಟವಾದ, ಮತ್ತು ಶಿಥಿಲವಾಗುತ್ತಿರುವ ನೀರ್ಗಲ್ಲ ಚಪ್ಪಡಿಗಳು ಇದ್ದವು. ಕೆಲವೊಮ್ಮೆ ಇಕ್ಕಟ್ಟಿನ ದಾರಿಗಳ ಮೂಲಕ ವಿನ್ಯಾಸಿಸುತ್ತಾ, ಬಹು ದೂರದ ವರೆಗೆ ನಾವು ಮಂಜುಗಡ್ಡೆಯ ತುದಿಯನ್ನು ಅನುಸರಿಸಿದೆವು. ಆಗ ಅಲ್ಲಿ ಅಸ್ತಮಿಸುತ್ತಿರುವ ಸೂರ್ಯನ ಬೆಳಕಿನಲ್ಲಿ ವಿಚಿತ್ರವಾಗಿ ಸುಂದರವಾಗಿರುವ, ದಟ್ಟವಾದ ಬೂದುಬಣ್ಣದ ಸಾರನ್ನು ಹೋಲುತ್ತಿರುವ ಮಂಜು ಇತ್ತು. ಮತ್ತು ಅಲೆಗಳು! ಮಂಜು, ಅಲೆಗಳು, ಹಾಗೂ ಮಂಜುಗಡ್ಡೆ ಎಲ್ಲವೂ ಏಕಕಾಲದಲ್ಲಿ—ಇವುಗಳಲ್ಲಿ ಯಾವುದೇ ಒಂದು, ಸಾಮಾನ್ಯವಾಗಿ ಪಂಥಾಹ್ವಾನವನ್ನೊಡ್ಡಲು ಸಾಕಾಗಿದೆ.”
ನಮ್ಮ ಸ್ವಾಗತ
“ನಾವು ಪಿಟುಫಿಕನ್ನು ಸಮೀಪಿಸಿದಂತೆ, ಹೆಚ್ಚು ಪ್ರಶಾಂತವಾದ ನೀರುಗಳನ್ನು ನಾವು ಪ್ರವೇಶಿಸಿದೆವು. ಸೃಷ್ಟಿಯು ಒಂದು ಭಾವಪರವಶಗೊಳಿಸುವ ಸ್ವಾಗತವನ್ನು ನಮಗೆ ನೀಡಿತು: ನೀಲಿ, ನೀಲಾಕಾಶದ ಎತ್ತರದಲ್ಲಿರುವ ಸೂರ್ಯ; ನಮ್ಮ ಮುಂದಿರುವ ಅಗಲವಾದ, ಹೊಳೆಯುವ ಕಾಲುಹೊಳೆ; ಅದರಲ್ಲಿ ಅಲ್ಲಲ್ಲಿ ಚುಕ್ಕೆಗಳಂತೆ ಹರಡಿಕೊಂಡಿರುವ ತೇಲುವ ಮಂಜಿನ ಗುಡ್ಡಗಳಿವೆ; ಮತ್ತು ಇನ್ನೂ ಮುಂದಕ್ಕೆ ಡಂಡಸ್ನಲ್ಲಿ, ಟೂಲಿಯ ಹಿಂದಣ ನಿವೇಶನವಾದ ಬಂಡೆಯ ಛಾಯಾರೂಪದ ವೈಶಿಷ್ಟ್ಯ!” ಉತ್ತರಕ್ಕೆ ಸುಮಾರು 100 ಕಿಲೊಮೀಟರ್ಗಳಷ್ಟು ದೂರಕ್ಕೆ, ಪ್ರಯಾಣಿಕರು ತಮ್ಮ ಕೊನೆಯ ಗಮ್ಯಸ್ಥಾನಕ್ಕೆ ಬಂದರು.
ಅವರು ಈಗ ಮನೆಯಿಂದ ಮನೆಗೆ ಸಾರುವುದನ್ನು ಆರಂಭಿಸಲು ಕಾತುರರಾಗಿದ್ದರು. ಅವರಲ್ಲಿ ಇಬ್ಬರಿಗೆ, ತಮ್ಮ ಮೊದಲ ಮನೆಯಲ್ಲೇ ಒರಟಾದ ಪ್ರತಿಕ್ರಿಯೆಯು ದೊರಕಿತು. “ನಾವು ಡೆನ್ಮಾರ್ಕಿನಲ್ಲಿದ್ದೆವೋ ಎಂಬಂತೆ ನಾವು ನಿರಾಕರಿಸಲ್ಪಟ್ಟೆವು” ಎಂಬುದಾಗಿ ಅವರು ಹೇಳಿದರು. “ಆದರೆ ಹೆಚ್ಚಿನ ಜನರು ನಮಗೆ ಹೃತ್ಪೂರ್ವಕವಾದ ಸ್ವಾಗತವನ್ನು ನೀಡಿದರು. ಜನರು ಆಲೋಚನಾತ್ಮಕರೂ ಒಳ್ಳೆಯ ಜ್ಞಾನಸಾಮಗ್ರಿಯನ್ನು ಸಂಗ್ರಹಿಸಿಕೊಂಡಿರುವವರೂ ಆಗಿದ್ದರು. ಅವರು ನಮ್ಮ ಕುರಿತಾಗಿ ಕೇಳಿದ್ದರು ಮತ್ತು ನಾವು ಅಂತಿಮವಾಗಿ ಅಲ್ಲಿಗೆ ಬಂದುದಕ್ಕಾಗಿ ಅವರು ಸಂತೋಷಗೊಂಡಿದ್ದರೆಂದು ಕೆಲವರು ಹೇಳಿದರು. ಉತ್ತರ ಧ್ರುವಕ್ಕೆ ಸಮುದ್ರಯಾನಗಳನ್ನು ಮಾಡಿದ್ದಂತಹ ಸೀಲ್ ಬೇಟೆಗಾರರು, ಮತ್ತು ಸಂತುಷ್ಟರೂ ಮಿತವ್ಯಯಿಗಳೂ ಮತ್ತು ಆಧುನಿಕ ನಾಗರಿಕತೆಯ ವಿಷಯದಲ್ಲಿ ಕೊಂಚಮಟ್ಟಿಗೆ ಸಂದೇಹದ ನೋಟವುಳ್ಳವರೂ ಆದ ನಾಡಿಗರಂತಹ ಕೆಲವು ಆಶ್ಚರ್ಯಕರ ಜನರನ್ನು ನಾವು ಸಂಧಿಸಿದೆವು.”
ನಂತರದ ಕೆಲವು ದಿನಗಳು ನಮಗೆಲ್ಲರಿಗೂ ಅತ್ಯುತ್ತಮವಾದ ಅನುಭವಗಳನ್ನು ತಂದವು. ಎಲ್ಲಾ ಕಡೆಗಳಲ್ಲೂ ಬೈಬಲ್ ಸಾಹಿತ್ಯವು ಗಣ್ಯತೆಯಿಂದ ಸ್ವೀಕರಿಸಲ್ಪಟ್ಟಿತು. ಹಲವಾರು ಮನೆಗಳಲ್ಲಿ ಸಾಕ್ಷಿಗಳು ನೇರವಾಗಿ ಬೈಬಲ್ ಅಭ್ಯಾಸಗಳನ್ನು ಆರಂಭಿಸಿದರು. ತಾನು ಆಸಕ್ತಿಯನ್ನು ಕಂಡುಕೊಂಡ ಒಂದು ಮನೆಯ ಕುರಿತಾಗಿ ಇಂಗ ತಿಳಿಸುತ್ತಾಳೆ: “ಸ್ವಚ್ಛವೂ ಹಿತಕರವೂ ಆದ, ಒಂದು ಕೋಣೆಯುಳ್ಳ ಮನೆಯು ಅದಾಗಿತ್ತು. ಅನುಕ್ರಮವಾಗಿ ಮೂರು ದಿನಗಳ ವರೆಗೆ, ಅಲ್ಲಿ ವಾಸಿಸುತ್ತಿದ್ದ ಸೌಮ್ಯಸ್ವಭಾವದ ಮನುಷ್ಯನನ್ನು ನಾವು ಸಂದರ್ಶಿಸಿದೆವು ಮತ್ತು ಅವನ ಕುರಿತಾಗಿ ಬಹಳ ಅಕ್ಕರೆಯುಳ್ಳವರಾದೆವು. ತನ್ನ ಮನೆಯ ಹೊರಗಡೆಯಿದ್ದ ತನ್ನ ತೋಡುದೋಣಿಯೊಂದಿಗೆ, ಅವನು ಒಬ್ಬ ನೈಜ ಸೀಲ್ ಬೇಟೆಗಾರನಾಗಿದ್ದನು. ಅವನು ಅನೇಕ ಹಿಮ ಕರಡಿಗಳು, ಕಡಲ್ಗುದುರೆಗಳು, ಮತ್ತು ಸೀಲ್ಗಳನ್ನು ಕೊಂದಿದ್ದನೆಂಬುದು ನಿಶ್ಚಯ. ನಮ್ಮ ಕೊನೆಯ ಸಂದರ್ಶನದಲ್ಲಿ, ನಾವು ಅವನೊಂದಿಗೆ ಒಂದು ಪ್ರಾರ್ಥನೆಯನ್ನು ಮಾಡಿದೆವು, ಮತ್ತು ಅವನ ಕಣ್ಣುಗಳು ಕಂಬನಿಯಿಂದ ತುಂಬಿದ್ದವು. ಈಗ ನಾವು ಎಲ್ಲವನ್ನೂ ಯೆಹೋವನ ಕೈಗಳಲ್ಲಿ ಬಿಟ್ಟು, ಹಿಂದಿರುಗಲಿಕ್ಕಾಗಿರುವ ಸಮಯ ಮತ್ತು ಸಂದರ್ಭಕ್ಕಾಗಿ ನಿರೀಕ್ಷಿಸಬೇಕು.”
ಕೆನಡದ ಎಸ್ಕಿಮೊಗಳು ಟೂಲಿಯನ್ನು ಅನೇಕಾವರ್ತಿ ಸಂದರ್ಶಿಸುತ್ತಾರೆ. ಇಂಗ ವರದಿಸುವುದು: “ಹೆಲೆನ್ ಹಾಗೂ ನಾನು, ಕೆನಡದಿಂದ ಬಂದ ಅನೇಕ ಎಸ್ಕಿಮೊಗಳನ್ನು ಸಂಧಿಸಿದೆವು. ಅವರು ಗ್ರೀನ್ಲೆಂಡಿನ ಜನರೊಂದಿಗೆ ಸಂವಾದ ಮಾಡಸಾಧ್ಯವಿರುವುದು ಆಸಕ್ತಿಕರವಾದ ವಿಚಾರವಾಗಿದೆ; ಉತ್ತರ ಧ್ರುವ ಪ್ರದೇಶದ ಕ್ಷೇತ್ರದಲ್ಲಿರುವ ಜನರು, ಸಂಬಂಧಿತ ಭಾಷೆಗಳನ್ನು ಮಾತಾಡುವಂತೆ ತೋರುತ್ತದೆ. ಕೆನಡದ ಎಸ್ಕಿಮೊಗಳಿಗೆ ತಮ್ಮದೇ ಆದ ಸ್ವಂತ ಲಿಖಿತ ಭಾಷೆಯು ಇರುವುದಾದರೂ, ಅವರು ಗ್ರೀನ್ಲೆಂಡ್ ಭಾಷೆಯಲ್ಲಿರುವ ನಮ್ಮ ಸಾಹಿತ್ಯವನ್ನು ಓದಲು ಶಕ್ತರಾಗಿದ್ದರು. ಇದು ಅವರಿಗಾಗಿ ರೋಮಾಂಚಕ ಸಂದರ್ಭಗಳನ್ನು ತೆರೆಯಬಹುದು.”
ದೋಣಿಯ ಮೂಲಕ 50-60 ಕಿಲೊಮೀಟರ್ಗಳಷ್ಟು ದೂರವಿರುವ ನೆಲಸುನಾಡುಗಳು ಸಹ ಸಂದರ್ಶಿಸಲ್ಪಟ್ಟವು. “ನಾವು ಕೆಕರ್ಟಾಟ್ ನೆಲಸುನಾಡಿಗೆ ಹೋಗುತ್ತಿರುವಾಗ, ನಾರ್ವಾಲ್ (ಸಮುದ್ರ ಸಸ್ತನಿ)ಗಳಿಗಾಗಿ ಬೇಟೆಯಾಡುತ್ತಾ ಇರುವ ಜನರನ್ನು ಕಂಡುಕೊಳ್ಳುವ ನಿರೀಕ್ಷೆಯಿಂದ, ನಾವು ಕಡಲಂಚನ್ನು ನಿಕಟವಾಗಿ ಅನುಸರಿಸಿದೆವು. ನಾವು ನಿರೀಕ್ಷಿಸಿದ್ದಂತೆಯೇ, ಬಂಡೆಯ ಚಾಚುಗಳಲ್ಲಿ ತಮ್ಮ ಗುಡಾರಗಳು ಹಾಗೂ ತೋಡುದೋಣಿಗಳೊಂದಿಗೆ, ತುಪ್ಪುಳುಳ್ಳ ಉಡುಪನ್ನು ಧರಿಸಿದ್ದ, ಮೂರು ಅಥವಾ ನಾಲ್ಕು ಕುಟುಂಬಗಳಿಂದ ರಚಿತವಾಗಿದ್ದ ಒಂದು ಶಿಬಿರವನ್ನು ನಾವು ಕಂಡುಕೊಂಡೆವು. ಈಟಿಗಾಳವನ್ನು ಕೈಯಲ್ಲಿ ಹಿಡಿದುಕೊಂಡು, ತೀವ್ರಾಪೇಕ್ಷಿತವಾದ ನಾರ್ವಾಲ್ಗಳಿಗಾಗಿ ಕಾಯಲು ಬಂಡೆಯೊಂದರ ಮೇಲೆ ಕುಳಿತುಕೊಳ್ಳುತ್ತಾ, ಪುರುಷರು ಸರದಿಗಳನ್ನು ತೆಗೆದುಕೊಂಡರು. ಈಗಾಗಲೇ ಅನೇಕ ದಿನಗಳ ವರೆಗೆ ವ್ಯರ್ಥವಾಗಿ ಕಾದುಕೊಂಡವರಾಗಿದ್ದು, ನಾವು ವೇಲ್ಸ್ಗಳನ್ನು ಬೆದರಿಸಿ ಓಡಿಸಬಹುದೆಂಬ ಕಾರಣದಿಂದ, ಅವರು ನಮ್ಮನ್ನು ನೋಡಿ ಬಹಳ ಸಂತುಷ್ಟರಾಗಿರಲಿಲ್ಲ! ಅವರು ತಮ್ಮ ಸ್ವಂತ ಚಟುವಟಿಕೆಗಳಲ್ಲೇ ಸಂಪೂರ್ಣವಾಗಿ ಕಾರ್ಯಮಗ್ನರಾಗಿದ್ದಂತೆ ತೋರಿತು. ಸ್ತ್ರೀಯರು ಕೆಲವು ಸಾಹಿತ್ಯವನ್ನು ಸ್ವೀಕರಿಸಿದರಾದರೂ, ಇನ್ನೂ ಹೆಚ್ಚಿನ ಸಂಭಾಷಣೆಗಾಗಿ ಇದು ಸೂಕ್ತವಾದ ಕ್ಷಣವಾಗಿರಲಿಲ್ಲ. ಅಂತಿಮವಾಗಿ ನಾವು ಸಾಯಂಕಾಲ 11 ಗಂಟೆಗೆ ಕೆಕರ್ಟಾಟ್ಗೆ ಆಗಮಿಸಿ, ಆ ನೆಲಸುನಾಡಿನಲ್ಲಿದ್ದ ನಮ್ಮ ಕೊನೆಯ ಭೇಟಿಯನ್ನು ಬೆಳಗ್ಗೆ 2 ಗಂಟೆಗೆ ಮುಗಿಸಿದೆವು!”
“ಅಂತಿಮವಾಗಿ ನಾವು ಗ್ರೀನ್ಲೆಂಡಿನ ಅತ್ಯಂತ ಉತ್ತರದ ನೆಲಸುನಾಡಾದ ಸಿಯೊರಪಲುಕನ್ನು ತಲಪಿದೆವು. ಬಂಜರು ಪರಿಸರವೊಂದರಲ್ಲಿನ ಕೆಲವು ಹಸಿರು, ಹುಲ್ಲಿನಿಂದಾವೃತವಾದ ಬಂಡೆಗಳ ಬುಡದ ಬಳಿಯ ಮರಳಿನ ತೀರದಲ್ಲಿ ಇದು ನೆಲೆಸಿದೆ.” ತಮ್ಮ ಸಾರುವ ಕೆಲಸದಲ್ಲಿ, ಸಾಕ್ಷಿಗಳು ಅಕ್ಷರಶಃ ಭೂಮಿಯ ಅತ್ಯಂತ ದೂರದ—ಕಡಿಮೆಪಕ್ಷ ಉತ್ತರ ಭಾಗದ ದಿಕ್ಕಿನಲ್ಲಿ—ಭಾಗಗಳನ್ನು ತಲಪಿದ್ದಾರೆ.
ಪ್ರಯಾಣವು ಪೂರ್ಣಗೊಳಿಸಲ್ಪಟ್ಟದ್ದು
ಸಾಕ್ಷಿಗಳು ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಅವರು ಮನೆಯಿಂದ ಮನೆಗೆ ಹಾಗೂ ಗುಡಾರದಿಂದ ಗುಡಾರಕ್ಕೆ ಸಾರಿದ್ದಾರೆ, ಸಾಹಿತ್ಯಗಳನ್ನು ನೀಡಿದ್ದಾರೆ, ಚಂದಾಗಳನ್ನು ಪಡೆದುಕೊಂಡಿದ್ದಾರೆ, ವಿಡಿಯೊಗಳನ್ನು ತೋರಿಸಿದ್ದಾರೆ, ಗ್ರೀನ್ಲೆಂಡಿನ ಅನೇಕ ಜನರೊಂದಿಗೆ ಮಾತಾಡಿದ್ದಾರೆ, ಮತ್ತು ಬೈಬಲ್ ಅಭ್ಯಾಸಗಳನ್ನು ನಡೆಸಿದ್ದಾರೆ. ಈಗ ಮನೆಗೆ ಹೋಗುವ ಸಮಯವಾಗಿದೆ. “ಆ ಮೋರಿಯುಸಕ್ ನೆಲಸುನಾಡಿನಿಂದ ಹೊರಡಲಿಕ್ಕಾಗಿ, ನಾವು ಆ ಸಾಯಂಕಾಲದಂದು ನಮ್ಮ ಹಡಗಿನ ಸಣ್ಣದೋಣಿಯನ್ನೇರಿದಾಗ, ತಾವು ಪಡೆದುಕೊಂಡಿದ್ದ ಪುಸ್ತಕಗಳನ್ನು ಹಾಗೂ ಬ್ರೋಷರ್ಗಳನ್ನು ಬೀಸುತ್ತಾ, ನಮ್ಮನ್ನು ಬೀಳ್ಕೊಡುವುದಕ್ಕಾಗಿ ಅನೇಕ ಜನರು ಸಮುದ್ರತೀರಕ್ಕೆ ಬಂದಿದ್ದರು.”
ತದನಂತರ, ಕಡಲತೀರದ ಒಂದು ನಿರ್ಜನವಾದ ಭಾಗದಲ್ಲಿ, ಬಹುದೂರದ ಸ್ಥಳವೊಂದರಲ್ಲಿ, ಒಬ್ಬ ಮನುಷ್ಯನು ಬಂಡೆಯೊಂದರ ಮೇಲಿನಿಂದ ಕೈಬೀಸುತ್ತಿರುವುದನ್ನು ಕಂಡು ಸಾಕ್ಷಿಗಳು ಆಶ್ಚರ್ಯಚಕಿತರಾದರು! “ನಿಶ್ಚಯವಾಗಿ, ನಾವು ಅವನನ್ನು ಸಂಧಿಸಲಿಕ್ಕಾಗಿ ದಡಕ್ಕೆ ಹೋದೆವು. ಅವನು ಜರ್ಮನಿಯ ಬರ್ಲಿನ್ನಿಂದ ಬಂದ ಯುವಕನಾಗಿದ್ದು, ತನ್ನ ತೋಡುದೋಣಿಯಲ್ಲಿ ಕಡಲತೀರಕ್ಕೆ ಪ್ರಯಾಣಿಸುತ್ತಿದ್ದು, ಅವನು ಒಂದು ತಿಂಗಳಿನಿಂದ ಪ್ರಯಾಣಿಸುತ್ತಿದ್ದನು. ಜರ್ಮನಿಯಲ್ಲಿ ಅವನು ಯೆಹೋವನ ಸಾಕ್ಷಿಗಳಿಂದ ಕ್ರಮವಾದ ಭೇಟಿಗಳನ್ನು ಪಡೆದಿದ್ದು, ಅವನ ಬಳಿಯಲ್ಲಿ ಅವರ ಅನೇಕ ಪುಸ್ತಕಗಳಿದ್ದವು. ನಾವು ಅವನೊಂದಿಗೆ ಕೆಲವು ತಾಸುಗಳನ್ನು ಕಳೆದೆವು, ಮತ್ತು ಅಂತಹ ಒಂದು ಸ್ಥಳದಲ್ಲಿ ಸಾಕ್ಷಿಗಳನ್ನು ಸಂಧಿಸಲು ಅವನು ನಿಜವಾಗಿಯೂ ಪ್ರಭಾವಿತನಾಗಿದ್ದನು.”
ಮಂಜುಗಡ್ಡೆಯ ಕಾರಣದಿಂದ ಸಂದರ್ಶಿಸಲ್ಪಟ್ಟಿರದ ಸಾವಿಸಿವಿಕ್ ನೆಲಸುನಾಡಿನಲ್ಲಿ, ಹಿಂದಿರುಗುವ ಮಾರ್ಗದಲ್ಲಿ ಪ್ರಯಾಣಿಸುತ್ತಿರುವ ಶುಶ್ರೂಷಕರಿಗೆ ಹಾರ್ದಿಕವಾದ ಸ್ವಾಗತವು ದೊರೆಯಿತು. ಅಲ್ಲಿನ ಕೆಲವು ಜನರು ಕಳೆದ ವರ್ಷ ಸಾಹಿತ್ಯವನ್ನು ಪಡೆದುಕೊಂಡು, ಓದಿದ್ದರು, ಮತ್ತು ಅವರು ಹೆಚ್ಚಿನ ಆತ್ಮಿಕ ಆಹಾರಕ್ಕಾಗಿ ಹಸಿದವರಾಗಿದ್ದರು.
ಹಿಂದಿರುಗುವಾಗ, ಮೆಲ್ವಿಲ್ ಬೇಯ ದಾಟುವಿಕೆಗೆ 14 ತಾಸುಗಳು ತಗಲಿದವು. “ನಾವು ಸೂರ್ಯಾಸ್ತಮಾನವನ್ನು ಕಣ್ಣಾರೆ ಕಂಡೆವು; ಇದು ವಶೀಕರಿಸುವ ಬಣ್ಣಗಳ ಸತತವಾದ ಬದಲಾವಣೆಯೊಂದಿಗೆ, ಇಲ್ಲಿ ಅನೇಕ ತಾಸುಗಳ ಒಂದು ಅನುಭವವಾಗಿದೆ. ತತ್ಕ್ಷಣವೇ ಅದನ್ನು ಹಿಂಬಾಲಿಸುವ ಸೂರ್ಯೋದಯವು ಸಹ ಅನೇಕ ತಾಸುಗಳನ್ನು ತೆಗೆದುಕೊಂಡಿತು. ಸೂರ್ಯಾಸ್ತಮಾನದ ಕೆಂಪು ಮತ್ತು ಕಡುಗೆಂಪು ಬಣ್ಣದ ಬೀಸಣಿಗೆಗಳು, ಈಶಾನ್ಯ ದಿಕ್ಕಿನ ಆಕಾಶವನ್ನು ಇನ್ನೂ ಆವರಿಸಿದ್ದಾಗಲೇ, ದಕ್ಷಿಣ ದಿಕ್ಕಿಗೆ ಸೂರ್ಯನು ಸ್ವಲ್ಪವಾಗಿ ಉದಯಿಸಿದನು. ಇದು ಯಥೋಚಿತವಾಗಿ ವರ್ಣಿಸಲು ಅಥವಾ ಛಾಯಾಚಿತ್ರೀಕರಿಸಲು ಸಹ ಅಸಾಧ್ಯವಾಗಿರುವ ಒಂದು ದೃಶ್ಯವಾಗಿದೆ.” ಈ ಗುಂಪು ಇಡೀ ರಾತ್ರಿ ಎಚ್ಚರವಾಗಿ ಉಳಿದಿತ್ತು.
“ನಾವು ಕುಲೊರ್ಸುವಕನ್ನು ತಲಪಿದಂತೆ, ನಾವು ಬಹಳವಾಗಿ ದಣಿದಿದ್ದೆವು. ಆದರೆ ನಾವು ಸಂತೋಷಿತರೂ ಸಂತೃಪ್ತರೂ ಆಗಿದ್ದೆವು. ನಾವು ಪ್ರಯಾಣವನ್ನು ಯಶಸ್ವಿಕರವಾಗಿ ಪೂರ್ಣಗೊಳಿಸಿದ್ದೆವು! ಪ್ರಯಾಣದ ಉಳಿದ ಭಾಗದಲ್ಲಿ, ಕಡಲತೀರದುದ್ದಕ್ಕೂ ಇದ್ದ ಪಟ್ಟಣಗಳಲ್ಲಿ ಹಾಗೂ ನೆಲಸುನಾಡುಗಳಲ್ಲಿ ನಾವು ಹೆಚ್ಚು ಆಸಕ್ತಿಯನ್ನು ಕಂಡುಕೊಂಡೆವು. ಅನೇಕವೇಳೆ ಪುನರಾವರ್ತಿಸಲ್ಪಟ್ಟ ಪ್ರಶ್ನೆಯು ಹೀಗಿತ್ತು, ‘ನಿಮ್ಮಲ್ಲಿ ಕೆಲವರು ನಮ್ಮೊಂದಿಗೆ ಏಕೆ ಉಳಿಯಬಾರದು? ನೀವು ಇಷ್ಟು ಬೇಗ ಬಿಟ್ಟುಹೋಗುವುದನ್ನು ನೋಡಲು ನಾವು ದುಃಖಿತರಾಗಿದ್ದೇವೆ!’”
ಕಾರ್ಸುಟ್ನಲ್ಲಿನ ಸ್ನೇಹಪರ ಕುಟುಂಬವೊಂದು, ಸಂದರ್ಶಕರಲ್ಲಿ ಐದು ಮಂದಿಯನ್ನು ತಮ್ಮೊಂದಿಗೆ ಒಂದು ಊಟಕ್ಕಾಗಿ ಆಮಂತ್ರಿಸಿತು. “ಆ ಕುಟುಂಬವು, ನಾವು ಆ ರಾತ್ರಿ ಅಲ್ಲಿ ಉಳಿಯುವಂತೆ ಬಯಸಿತು. ಆದರೆ ಇನ್ನೂ 40 ಕಿಲೊಮೀಟರ್ಗಳಷ್ಟು ದೂರದಲ್ಲಿ ಹೆಚ್ಚು ಉತ್ತಮವಾದ ಲಂಗರು ಹಾಕುವ ಸ್ಥಳಗಳಿದ್ದುದರಿಂದ, ನಾವು ಆ ಆಮಂತ್ರಣವನ್ನು ನಿರಾಕರಿಸಿ, ಸಂಚಾರವನ್ನು ಮುಂದುವರಿಸಿದೆವು. ಮರುದಿನ ಮುಂಜಾವದಲ್ಲಿ ನೀರ್ಗಲ್ಲ ದಿಮ್ಮಿಯೊಂದು ತುಂಡಾಗಿತ್ತು, ಹಾಗೂ ನಾವು ಹೋಗಿದ್ದಂತಹ ಸ್ಥಳದಲ್ಲಿನ 14 ದೋಣಿಗಳನ್ನು ಅಲೆಯೊಂದು ಮಗುಚಿಹಾಕಿತೆಂದು ತದನಂತರ ನಮಗೆ ತಿಳಿಯಿತು!”
ಕೊನೆಯದಾಗಿ, ತನ್ನ ಟೂಲಿ ಸಮುದ್ರಯಾನವನ್ನು ಪೂರ್ಣಗೊಳಿಸಿದ ಈ ಗುಂಪು ಇಲುಲಿಸಟ್ಗೆ ಹಿಂದಿರುಗಿತು. ಸುಮಾರು ಅದೇ ಸಮಯದಲ್ಲಿ, ಇತರ ಇಬ್ಬರು ಪ್ರಚಾರಕರು, ಗ್ರೀನ್ಲೆಂಡ್ನ ಪೂರ್ವತೀರದ ಮೇಲಿನ ಪ್ರತ್ಯೇಕ ಭಾಗಗಳನ್ನು ಸಂದರ್ಶಿಸಲಿಕ್ಕಾಗಿ ಪ್ರಯಾಣಿಸಿದ್ದರು. ಆ ಎರಡು ಪ್ರಯಾಣಗಳಲ್ಲಿ, ಪ್ರಚಾರಕರು ಒಟ್ಟಿಗೆ 1,200 ಪುಸ್ತಕಗಳನ್ನು, 2,199 ಬ್ರೋಷರ್ಗಳನ್ನು, 4,224 ಪತ್ರಿಕೆಗಳನ್ನು ವಿತರಿಸಿದರು, ಹಾಗೂ 152 ಚಂದಾಗಳನ್ನು ಅವರು ಪಡೆದರು. ಹೊಸದಾಗಿ ಆಸಕ್ತರಾದ ಅನೇಕ ಜನರೊಂದಿಗೆ ಸಂಪರ್ಕವು, ಈಗ ಟೆಲಿಫೋನ್ ಮತ್ತು ಪತ್ರವ್ಯವಹಾರದ ಮೂಲಕ ನಿರ್ವಹಿಸಲ್ಪಡುತ್ತದೆ.
ಒಳಗೂಡಿರುವ ಸಮಯ, ಶಕ್ತಿ, ಮತ್ತು ಹಣಕಾಸಿನ ಹೊರತಾಗಿ, ‘ಭೂಮಿಯ ಅತ್ಯಂತ ದೂರದ ಭಾಗದ ವರೆಗೂ . . . ನನಗೆ ಸಾಕ್ಷಿಗಳಾಗಿರಿ’ ಎಂಬ ತಮ್ಮ ಯಜಮಾನನ ಆಜ್ಞೆಯನ್ನು ಪೂರೈಸುವುದರಲ್ಲಿ ಯೆಹೋವನ ಸಾಕ್ಷಿಗಳು ಮಹತ್ತಮವಾದ ಆನಂದವನ್ನು ಕಂಡುಕೊಳ್ಳುತ್ತಾರೆ.—ಅ. ಕೃತ್ಯಗಳು 1:8, NW.
[ಪುಟ 28 ರಲ್ಲಿರುವ ಚೌಕ]
ಗ್ರೀನ್ಲೆಂಡ್ನ ಪೂರ್ವ ತೀರದ ಮೇಲೆ
ಪ್ರಚಾರಕರ ಆ ಗುಂಪು ಟೂಲಿಯನ್ನು ತಲಪಿದ ಸುಮಾರು ಅದೇ ಸಮಯದಲ್ಲಿ, ವೆಗೊ ಮತ್ತು ಸಾನ್ಯ ಎಂಬ ಒಬ್ಬ ಸಾಕ್ಷಿ ದಂಪತಿಗಳು, ಸಾಕ್ಷಿಕಾರ್ಯ ನಡೆಸಲ್ಪಟ್ಟಿರದ ಬೇರೊಂದು ಟೆರಿಟೊರಿಗೆ—ಗ್ರೀನ್ಲೆಂಡ್ನ ಪೂರ್ವ ತೀರದ ಮೇಲಿರುವ ಇಟೊಕಾರ್ಟೂಮೀಯಿಟ್ (ಸ್ಕೋರ್ಸ್ಬೀಸೌಂಡ್)ಗೆ—ಪ್ರಯಾಣಿಸಿದರು. ಅಲ್ಲಿಗೆ ಹೋಗಲಿಕ್ಕಾಗಿ ಅವರು ಐಸ್ಲೆಂಡ್ಗೆ ಪ್ರಯಾಣಿಸಿ, ನಂತರ ಗ್ರೀನ್ಲೆಂಡ್ನ ತೀರದ ಮೇಲಿರುವ ಕಾನ್ಸ್ಟ್ಬ್ಲ್ ಪಾಯಿಂಟ್ಗೆ ಒಂದು ವಿಮಾನದಲ್ಲಿ ಹಿಂದಿರುಗಿ ಪ್ರಯಾಣಿಸಿ, ತದನಂತರ ಹೆಲಿಕಾಫ್ಟರ್ನ ಮೂಲಕ ಹೋಗಬೇಕಿತ್ತು.
“ಯೆಹೋವನ ಸಾಕ್ಷಿಗಳು ಇಲ್ಲಿಗೆ ಬಂದದ್ದು ಇದು ಮೊದಲ ಬಾರಿಯಾಗಿತ್ತು” ಎಂದು ಈ ಇಬ್ಬರು ಪಯನೀಯರರು ಹೇಳುತ್ತಾರೆ; ಅವರ ಮಾತೃಭಾಷೆಯು ಗ್ರೀನ್ಲೆಂಡ್ ಭಾಷೆಯಾಗಿದೆ. “ತಮ್ಮ ಪ್ರತ್ಯೇಕವಾಸದ ಹೊರತೂ, ಜನರು ಆಶ್ಚರ್ಯಚಕಿತಗೊಳಿಸುವಷ್ಟು ಒಳ್ಳೆಯ ಜ್ಞಾನಸಾಮಗ್ರಿಯನ್ನು ಸಂಗ್ರಹಿಸಿಕೊಂಡವರಾಗಿದ್ದರು. ಆದರೂ, ಅವರು ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಹ ಸಂತೋಷಗೊಂಡಿದ್ದರು. ಪ್ರತಿಭಾವಂತ ಕಥೆಗಾರರೋಪಾದಿ, ಅವರು ತಮ್ಮ ಸೀಲ್ ಬೇಟೆಗಳ ಕುರಿತಾಗಿ ಮತ್ತು ನಿಸರ್ಗದಲ್ಲಿನ ಇತರ ಅನುಭವಗಳ ಕುರಿತಾಗಿ ನಮಗೆ ಉತ್ಸುಕರಾಗಿ ತಿಳಿಸಿದರು.” ಸಾರುವ ಕೆಲಸಕ್ಕೆ ಅವರು ಹೇಗೆ ಪ್ರತಿಕ್ರಿಯೆ ತೋರಿಸಿದರು?
“ಮನೆಯಿಂದ ಮನೆಗೆ ಸಾರುತ್ತಿರುವಾಗ, ನಾವು ಒಬ್ಬ ಉಪದೇಶಿ (ಕ್ಯಾಟಕ್ಟಿಸ್)ಯಾದ ಜೆ——ಯನ್ನು ಸಂಧಿಸಿದೆವು. ‘ನಿಮ್ಮ ಭೇಟಿಗಳಲ್ಲಿ ನನ್ನನ್ನು ಸೇರಿಸಿದ್ದಕ್ಕಾಗಿ ನಿಮಗೆ ಉಪಕಾರಗಳು’ ಎಂಬುದಾಗಿ ಅವನು ಹೇಳಿದನು. ನಮ್ಮ ಸಾಹಿತ್ಯವನ್ನು ಮತ್ತು ಅದನ್ನು ಉಪಯೋಗಿಸುವ ವಿಧವನ್ನು ನಾವು ಅವನಿಗೆ ತೋರಿಸಿದೆವು. ಮರುದಿನ ಅವನು ನಮ್ಮ ಬಳಿಗೆ ಬಂದು, ಯೆಹೋವ ಎಂಬ ಹೆಸರಿನ ಕುರಿತಾಗಿ ತಿಳಿದುಕೊಳ್ಳಲು ಬಯಸಿದನು. ಅವನ ಸ್ವಂತ ಗ್ರೀನ್ಲೆಂಡ್ ಭಾಷೆಯ ಬೈಬಲಿನಲ್ಲಿನ ಒಂದು ಪಾದಟಿಪ್ಪಣಿಯಲ್ಲಿದ್ದ ವಿವರಣೆಯನ್ನು ನಾವು ಅವನಿಗೆ ತೋರಿಸಿದೆವು. ನಾವು ಅಲ್ಲಿಂದ ಹೊರಟುಹೋದಾಗ, ನಮ್ಮ ಸಂದರ್ಶನಕ್ಕಾಗಿ ತನ್ನ ಉಪಕಾರವನ್ನು ವ್ಯಕ್ತಪಡಿಸಲಿಕ್ಕಾಗಿ, ನುಕ್ನಲ್ಲಿದ್ದ ನಮ್ಮ ಸ್ನೇಹಿತರಿಗೆ ಅವನು ಟೆಲಿಫೋನ್ಮಾಡಿದನು. ಈ ಮನುಷ್ಯನಿಗೆ ಸಹಾಯ ಮಾಡುವುದನ್ನು ನಾವು ಮುಂದುವರಿಸಲು ಪ್ರಯತ್ನಿಸಬೇಕು.
“ನಾವು ಓ——ನನ್ನು ಸಹ ಸಂಧಿಸಿದೆವು. ಅವನು ಯೆಹೋವನ ಸಾಕ್ಷಿಗಳ ಕುರಿತಾಗಿ ತಿಳಿದಿರುವ ಒಬ್ಬ ಶಿಕ್ಷಕನಾಗಿದ್ದನು. ಅವನು 14ರಿಂದ 16 ವರ್ಷ ಪ್ರಾಯದ ವಿದ್ಯಾರ್ಥಿಗಳಿದ್ದ ತನ್ನ ತರಗತಿಯಲ್ಲಿ ಮಾತಾಡುವಂತೆ ನಮಗೆ ಎರಡು ತಾಸುಗಳ ಸಮಯವನ್ನು ಕೊಟ್ಟನು. ಆದುದರಿಂದ ನಾವು ಅವರಿಗೆ ನಮ್ಮ ವಿಡಿಯೊವನ್ನು ತೋರಿಸಿ, ಅವರ ಪ್ರಶ್ನೆಗಳನ್ನು ಉತ್ತರಿಸಿದೆವು. ಯುವಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳುa (ಇಂಗ್ಲಿಷ್) ಮತ್ತು ಇತರ ಪುಸ್ತಕಗಳು ಅತ್ಯಾಸಕ್ತಿಯಿಂದಲೂ ಶೀಘ್ರವಾಗಿಯೂ ಸ್ವೀಕರಿಸಲ್ಪಟ್ಟವು. ತದನಂತರ ನಾವು ಆ ತರಗತಿಯ ಮೂವರು ಹುಡುಗಿಯರನ್ನು ಸಂಧಿಸಿದೆವು. ಅವರಲ್ಲಿ ಅನೇಕ ಪ್ರಶ್ನೆಗಳಿದ್ದವು; ಅವರಲ್ಲಿ ಒಬ್ಬಳು ವಿಶೇಷವಾಗಿ ಆಸಕ್ತಳಾಗಿದ್ದಳು. ‘ಒಬ್ಬ ವ್ಯಕ್ತಿಯು ಹೇಗೆ ಸಾಕ್ಷಿಯಾಗಿ ಪರಿಣಮಿಸುತ್ತಾನೆ?’ ಎಂಬುದಾಗಿ ಅವಳು ಕೇಳಿದಳು. ‘ನಿಮ್ಮಂತಿರುವುದು ನಿಶ್ಚಯವಾಗಿಯೂ ಹಿತಕರವಾಗಿರಲೇಬೇಕು. ನೀವು ಮಾಡುತ್ತಿರುವುದನ್ನು ನನ್ನ ತಂದೆ ಸಹ ಇಷ್ಟಪಡುತ್ತಾರೆ.’ ನಾವು ಅವಳಿಗೆ ಪತ್ರ ಬರೆಯುವ ಆಶ್ವಾಸನೆಯನ್ನು ನೀಡಿದೆವು.
“ಆ ನೆಲಸುನಾಡುಗಳಲ್ಲೊಂದರಲ್ಲಿ, ನಾವು ಇನ್ನೊಬ್ಬ ಉಪದೇಶಿಯಾದ, ಎಮ್—— ಎಂಬುವವನನ್ನು ಸಂಧಿಸಿದೆವು ಮತ್ತು ಒಂದು ಅಭಿರುಚಿದಾಯಕವಾದ ಚರ್ಚೆಯನ್ನು ನಾವು ಮಾಡಿದೆವು. ಹೊರಗೆ ಬೇಟೆಯಾಡುತ್ತಿದ್ದ ಜನರು, ತಾವು ಹಿಂದಿರುಗಿದ ಕೂಡಲೆ ಸಾಧ್ಯವಾದಷ್ಟು ಬೇಗನೆ ನಮ್ಮ ಸಾಹಿತ್ಯವನ್ನು ಪಡೆದುಕೊಳ್ಳುವಂತೆ ತಾನು ಖಚಿತಪಡಿಸಿಕೊಳ್ಳುತ್ತೇನೆಂದು ಅವನು ಹೇಳಿದನು. ಆದುದರಿಂದ ಈಗ ಅವನು ಆ ಬಹುದೂರದ ಸ್ಥಳದಲ್ಲಿರುವ ನಮ್ಮ ‘ಪ್ರಚಾರಕ’ನಾಗಿದ್ದಾನೆ.”
ಅದು ಒಂದು ಸುತ್ತುಬಳಸುವ ಹಾಗೂ ಕಷ್ಟಪರೀಕ್ಷೆಯ ಪ್ರಯಾಣವಾಗಿತ್ತಾದರೂ, ತಮ್ಮ ಪ್ರಯತ್ನಗಳು ಹೇರಳವಾಗಿ ಆಶೀರ್ವದಿಸಲ್ಪಟ್ಟಿದ್ದವು ಎಂಬ ಅನಿಸಿಕೆ ಆ ಇಬ್ಬರು ಪಯನೀಯರರಿಗಾಯಿತು.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ