ಪ್ರಾಣವು ಅಮರವಾಗಿದೆಯೆ?
ಮೌನವಾಗಿ, ಸ್ನೇಹಿತರು ಹಾಗೂ ಕುಟುಂಬವು ತೆರೆದ ಶವಪೆಟ್ಟಿಗೆಯ ಬಳಿ ನಡೆಯುತ್ತದೆ. ಅವರು 17 ವರ್ಷ ಪ್ರಾಯದ ಹುಡುಗನೊಬ್ಬನ ದೇಹದ ಕಡೆಗೆ ದಿಟ್ಟಿಸಿನೋಡುತ್ತಾರೆ. ಅವನ ಶಾಲೆಯ ಸ್ನೇಹಿತರು ಅವನನ್ನು ಗುರುತಿಸುವುದಿಲ್ಲ. ಕೀಮೋಥೆರಪಿ ಚಿಕಿತ್ಸೆಯು ಅವನ ಅಧಿಕಾಂಶ ಕೂದಲನ್ನು ಉದುರಿಸಿದೆ; ಕ್ಯಾನ್ಸರ್ ರೋಗವು, ಅವನು ಬಹಳ ತೂಕವನ್ನು ಕಳೆದುಕೊಳ್ಳುವಂತೆ ಮಾಡಿದೆ. ಇದು ನಿಜವಾಗಿಯೂ ಅವರ ಸ್ನೇಹಿತನಾಗಿರಸಾಧ್ಯವಿದೆಯೊ? ಕೆಲವೇ ವಾರಗಳ ಹಿಂದೆ, ಅವನು ಎಷ್ಟೋ ಕಲ್ಪನೆಗಳಿಂದ, ಪ್ರಶ್ನೆಗಳಿಂದ, ಶಕ್ತಿಯಿಂದ—ಜೀವದಿಂದ ಭರಿತನಾಗಿದ್ದನು! ಹುಡುಗನ ತಾಯಿಯು ಕಣ್ಣೀರು ತುಂಬಿಕೊಂಡು ಪುನಃ ಪುನಃ ಹೀಗೆ ಹೇಳುತ್ತಾಳೆ: “ಟಾಮಿ ಈಗ ಹೆಚ್ಚು ಸಂತೋಷಿತನಾಗಿದ್ದಾನೆ. ಟಾಮಿ ಸ್ವರ್ಗದಲ್ಲಿ ತನ್ನೊಂದಿಗೆ ಇರುವಂತೆ ದೇವರು ಬಯಸಿದನು.”
ಈ ಎದೆಯೊಡೆದ ತಾಯಿಯು, ಹೇಗೂ ತನ್ನ ಮಗ ಇನ್ನೂ ಜೀವಿಸುತ್ತಿದ್ದಾನೆ ಎಂಬ ಕಲ್ಪನೆಯಲ್ಲಿ ಸ್ವಲ್ಪಮಟ್ಟಿಗಿನ ನಿರೀಕ್ಷೆ ಹಾಗೂ ದುಃಖೋಪಶಮನವನ್ನು ಕಂಡುಕೊಳ್ಳುತ್ತಾಳೆ. ಪ್ರಾಣವು ಅಮರ, ಅದು ವ್ಯಕ್ತಿತ್ವದ, ಆಲೋಚನೆಗಳ, ಸ್ಮರಣೆಗಳ ಪೀಠ, ಹೀಗೆ “ಸ್ವಯಮತ್ವ”ವೇ ಆಗಿದೆ ಎಂದು ಅವಳಿಗೆ ಚರ್ಚಿನಲ್ಲಿ ಕಲಿಸಲಾಗಿದೆ.a ತನ್ನ ಮಗನ ಪ್ರಾಣವು ಮೃತಪಟ್ಟಿಲ್ಲವೆಂದೇ ಅವಳು ನಂಬುತ್ತಾಳೆ; ಜೀವಿಸುತ್ತಿರುವ ಆತ್ಮಜೀವಿಯಾಗಿರುವ ಅದು ಮರಣದಲ್ಲಿ ಅವನ ದೇಹವನ್ನು ತೊರೆದು, ದೇವರೊಂದಿಗೆ ಹಾಗೂ ದೇವದೂತರೊಂದಿಗೆ ಇರಲಿಕ್ಕಾಗಿ ಸ್ವರ್ಗಕ್ಕೆ ಹೋಗಿದೆ.
ದುರಂತದ ಸಮಯದಲ್ಲಿ, ಮಾನವ ಹೃದಯವು ನಿರೀಕ್ಷೆಯ ಯಾವುದೇ ಕಿರಣಕ್ಕೆ ಪರಿವೆಯಿಲ್ಲದೆ ಅಂಟಿಕೊಳ್ಳುವುದರಿಂದ, ಈ ನಂಬಿಕೆಯು ಇಷ್ಟು ಹೆಚ್ಚಾಗಿ ಮನಸ್ಸಿಗೆ ಏಕೆ ಹಿಡಿಸುತ್ತದೆಂಬ ಕಾರಣವನ್ನು ಅವಲೋಕಿಸುವುದು ಕಷ್ಟಕರವಾಗಿರುವುದಿಲ್ಲ. ದೃಷ್ಟಾಂತಕ್ಕಾಗಿ, ದ ಗಾಸ್ಪೆಲ್ ಆಫ್ ದ ಹಿಯರ್‌ಆಫ್ಟರ್‌ನಲ್ಲಿ, ದೇವತಾಶಾಸ್ತ್ರಜ್ಞ ಜೆ. ಪ್ಯಾಟರ್‌ಸನ್-ಸ್ಮಿತ್ ತಮ್ಮನ್ನು ವ್ಯಕ್ತಪಡಿಸಿಕೊಳ್ಳುವ ವಿಧವನ್ನು ಪರಿಗಣಿಸಿರಿ: “ಮರಣದ ಅನಂತರ ಬರುವ ವಿಷಯಗಳೊಂದಿಗೆ ಮರಣವನ್ನು ಹೋಲಿಸುವಾಗ ಅದು ತೀರ ಅಲ್ಪವಾದ ವಿಷಯವಾಗಿದೆ—ಮರಣವು ನಮಗೆ ಯಾವುದನ್ನು ಪರಿಚಯಿಸುತ್ತದೋ ಆ ಅದ್ಭುತಕರವಾದ, ಅದ್ಭುತಕರವಾದ, ಅದ್ಭುತಕರವಾದ ಲೋಕ.”
ಲೋಕದಾದ್ಯಂತವಾಗಿ ಮತ್ತು ಅನೇಕ ಧರ್ಮಗಳು ಹಾಗೂ ಸಂಸ್ಕೃತಿಗಳಲ್ಲಿ, ಮನುಷ್ಯನು ತನ್ನೊಳಗೆ ಸಾಯದಿರುವ ಒಂದು ಪ್ರಾಣವನ್ನು, ದೇಹವು ಮೃತಪಟ್ಟ ಬಳಿಕವೂ ಜೀವಿಸುತ್ತಾ ಮುಂದುವರಿಯುವ ಪ್ರಜ್ಞೆಯುಳ್ಳ ಆತ್ಮವನ್ನು ಹೊಂದಿದ್ದಾನೆಂದು ಜನರು ನಂಬುತ್ತಾರೆ. ಈ ನಂಬಿಕೆಯು ಕ್ರೈಸ್ತಪ್ರಪಂಚದ ಸಾವಿರಾರು ಧರ್ಮಗಳು ಹಾಗೂ ಪಂಥಗಳಲ್ಲಿ ಬಹುಮಟ್ಟಿಗೆ ವಿಶ್ವವ್ಯಾಪಿಯಾಗಿದೆ. ಯೆಹೂದ್ಯಮತದಲ್ಲಿ ಸಹ ಇದು ಒಂದು ಅಧಿಕೃತ ಸಿದ್ಧಾಂತವಾಗಿದೆ. ಆತ್ಮ, ಅಥವಾ ಪ್ರಾಣವು ಸಮಯದಾರಂಭದಲ್ಲಿ ಸೃಷ್ಟಿಸಲ್ಪಟ್ಟಿತು; ಅದು ಜನನದ ಸಮಯದಲ್ಲಿ ದೇಹದಲ್ಲಿ ಬಂಧಿಸಲ್ಪಡುತ್ತದೆ, ಮತ್ತು ಮರಣದಲ್ಲಿ ಪುನರವತಾರದ ಸತತ ಚಕ್ರವೊಂದರಿಂದ ಇನ್ನೊಂದು ದೇಹಕ್ಕೆ ಸ್ಥಳಾಂತರಿಸುತ್ತದೆ ಎಂದು ಹಿಂದೂಗಳು ನಂಬುತ್ತಾರೆ. ಜನನದ ಸಮಯದಲ್ಲಿ ಪ್ರಾಣವು ಅಸ್ತಿತ್ವಕ್ಕೆ ಬರುತ್ತದೆ ಮತ್ತು ದೇಹವು ಮೃತಪಟ್ಟ ಬಳಿಕ ಜೀವಿಸುತ್ತಾ ಮುಂದುವರಿಯುತ್ತದೆ ಎಂದು ಮುಸ್ಲಿಮರು ನಂಬುತ್ತಾರೆ. ಇದೇ ಮುಖ್ಯವಿಷಯದ ಕುರಿತಾಗಿ ಇತರ ಧರ್ಮಗಳು—ಆಫ್ರಿಕದ ಚೇತನವಾದಿಗಳು, ಶಿಂಟೋ ಧರ್ಮ, ಒಂದು ದೃಷ್ಟಿಕೋನದಲ್ಲಿ ಬೌದ್ಧಧರ್ಮದವರು ಸಹ—ವ್ಯತ್ಯಾಸಗಳನ್ನು ಕಲಿಸುತ್ತವೆ.
ಕೆಲವು ಕ್ಷೋಭೆದಾಯಕ ಪ್ರಶ್ನೆಗಳು
ಅಮರ ಪ್ರಾಣದ ಕಲ್ಪನೆಗೆ, ನಿರ್ವಿವಾದವಾದ ಹಾಗೂ ಬಹುಮಟ್ಟಿಗೆ ವಿಶ್ವವ್ಯಾಪಿಯಾದ ಹಿಡಿತವಿರುವುದಾದರೂ, ಅದು ತೊಂದರೆದಾಯಕವಾದ ಕೆಲವು ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಉದಾಹರಣೆಗಾಗಿ, ಒಬ್ಬ ಪ್ರಿಯ ವ್ಯಕ್ತಿಯು ಒಂದು ಆದರ್ಶಪ್ರಾಯ ಜೀವಿತವನ್ನು ನಡೆಸಿಲ್ಲವಾದರೆ, ಅವನ ಪ್ರಾಣವು ಎಲ್ಲಿಗೆ ಹೋಗುತ್ತದೆ ಎಂಬುದಾಗಿ ಜನರು ಕುತೂಹಲಪಡುತ್ತಾರೆ. ಅವನು ಯಾವುದೊ ಕೀಳುದರ್ಜೆಯ ಜೀವಿತರೂಪವನ್ನು ಪಡೆದು ಪುನರವತರಿಸುವನೊ? ಅಥವಾ ಸ್ವರ್ಗಕ್ಕೆ ಹೋಗಲು ಅರ್ಹನೆಂದು ಪರಿಗಣಿಸಲ್ಪಡುವ ವರೆಗೆ, ಯಾವುದೊ ಬೆಂಕಿಯ ಕಾರ್ಯವಿಧಾನದಿಂದ ಶುದ್ಧೀಕರಿಸಲ್ಪಡುವ ಪರ್ಗೆಟರಿಗೆ ಅವನು ಕಳುಹಿಸಲ್ಪಡುವನೊ? ಇನ್ನೂ ವಿಪರೀತವಾಗಿ, ಅವನಿಗೆ ದಹಿಸುತ್ತಿರುವ ನರಕವೊಂದರಲ್ಲಿ ಸದಾಕಾಲಕ್ಕೂ ಯಾತನೆಯನ್ನು ಅನುಭವಿಸಲಿಕ್ಕಿದೆಯೊ? ಅಥವಾ ಅನೇಕ ಚೇತನವಾದಿ ಧರ್ಮಗಳು ಕಲಿಸುವಂತೆ, ಯಾರು ಶಾಂತಗೊಳಿಸಲ್ಪಡಬೇಕೋ ಆ ಒಬ್ಬ ಆತ್ಮನು ಅವನಾಗಿದ್ದಾನೊ?
ಅಂತಹ ಕಲ್ಪನಾಭಿಪ್ರಾಯಗಳು ಜೀವಿತರಿಗೆ ಪ್ರಯಾಸಕರವಾದ ಸಾಧ್ಯತೆಗಳನ್ನು ಉಂಟುಮಾಡುತ್ತವೆ. ಮೃತರಾದ ನಮ್ಮ ಪ್ರಿಯ ಜನರು ನಮ್ಮ ಮೇಲೆ ಪ್ರತೀಕಾರವನ್ನು ತರುತ್ತಾರೆಂಬ ಭಯದಿಂದ, ಅವರ ಆತ್ಮಗಳನ್ನು ನಾವು ಶಾಂತಗೊಳಿಸಬೇಕಾಗಿದೆಯೊ? ಅತ್ಯಂತ ಭೀಕರವಾದ ಯಾವುದೋ ಪರ್ಗೆಟರಿಯಿಂದ ತಪ್ಪಿಸಿಕೊಳ್ಳುವಂತೆ ಅವರಿಗೆ ನಾವು ಸಹಾಯ ಮಾಡಬೇಕಾಗಿದೆಯೆ? ಅಥವಾ ಅವರು ನರಕದಲ್ಲಿ ಕಷ್ಟಾನುಭವಿಸುತ್ತಿರುವ ಆಲೋಚನೆಯಿಂದಾಗಿ, ನಾವು ನಿಸ್ಸಹಾಯಕ ಭೀತಿಯಿಂದ ಕೇವಲ ತತ್ತರಿಸಬೇಕಾಗಿದೆಯೊ? ಅಥವಾ ಜೀವಿಸುತ್ತಿರುವ ಕೆಲವು ಪ್ರಾಣಿಗಳು ಮೃತರಾದ ಮಾನವರ ಪ್ರಾಣಗಳನ್ನು ಪಡೆದಿವೆಯೋ ಎಂಬಂತೆ ನಾವು ಅವುಗಳನ್ನು ಉಪಚರಿಸಬೇಕಾಗಿದೆಯೊ?
ಸ್ವತಃ ದೇವರ ಕುರಿತಾಗಿ ಏಳುವ ಪ್ರಶ್ನೆಗಳು ಸಹ ಮನಶ್ಶಾಂತಿ ಕೆಡಿಸುವಂತಹವುಗಳಾಗಿವೆ. ದೃಷ್ಟಾಂತಕ್ಕಾಗಿ, ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ತಾಯಿಯಂತೆ, ಅನೇಕ ಹೆತ್ತವರು ಪ್ರಥಮವಾಗಿ, ದೇವರು ತಮ್ಮ ಮಗುವಿನ ಅಮರ ಪ್ರಾಣವನ್ನು ತನ್ನೊಂದಿಗೆ ಇರಿಸಿಕೊಳ್ಳಲಿಕ್ಕಾಗಿ ಸ್ವರ್ಗಕ್ಕೆ “ತೆಗೆದುಕೊಂಡುಹೋದನು” ಎಂಬ ಕಲ್ಪನೆಯಿಂದ ಸಂತೈಸಲ್ಪಡುತ್ತಾರೆ. ಅನೇಕರಾದರೋ ಬೇಗನೆ ಅವರು, ನಿಗದಿತ ಸಮಯಕ್ಕೆ ಮುಂಚೆಯೇ ಮಗುವನ್ನು ಸ್ವರ್ಗಕ್ಕೆ ಸ್ಥಳಾಂತರಿಸಲಿಕ್ಕಾಗಿ, ಆ ಅಮೂಲ್ಯ ಮಗುವನ್ನು ಎದೆಯೊಡೆದ ಹೆತ್ತವರಿಂದ ದೂರಮಾಡುತ್ತಾ, ಒಂದು ಮುಗ್ಧ ಮಗುವಿನ ಮೇಲೆ ಘೋರವಾದ ಅನಾರೋಗ್ಯವನ್ನು ತಂದು, ಅವರನ್ನು ಪೀಡಿಸುವವನು ಎಂತಹ ರೀತಿಯ ದೇವರಾಗಿದ್ದಾನೆಂದು ಕುತೂಹಲಪಡಲಾರಂಭಿಸುತ್ತಾರೆ. ಅಂತಹ ಒಬ್ಬ ದೇವರಲ್ಲಿ ನ್ಯಾಯ, ಪ್ರೀತಿ, ಕರುಣೆಗಳು ಎಲ್ಲಿವೆ? ಕೆಲವರು ಅಂತಹ ಒಬ್ಬ ದೇವರ ವಿವೇಕವನ್ನೂ ಸಂಶಯಿಸುತ್ತಾರೆ. ಹೇಗೂ ಕಾಲಕ್ರಮೇಣವಾಗಿ ಈ ಎಲ್ಲಾ ಪ್ರಾಣಗಳೂ ಸ್ವರ್ಗದಲ್ಲಿ ಜೀವಿಸುವಂತಿದ್ದರೆ, ವಿವೇಕಿಯಾದ ದೇವರೊಬ್ಬನು ಪ್ರಥಮತಃ ಅವರೆಲ್ಲರನ್ನೂ ಏಕೆ ಭೂಮಿಯ ಮೇಲಿಟ್ಟನು? ಎಂದೂ ಅವರು ಕೇಳುತ್ತಾರೆ. ಭೂಮಿಯ ಸೃಷ್ಟಿಯು ವಾಸ್ತವವಾಗಿ ಒಂದು ನಿಷ್ಫಲವಾದ ಪ್ರಯತ್ನವಾಗಿತ್ತೆಂಬುದನ್ನು ಅದು ಅರ್ಥೈಸುವುದಿಲ್ಲವೊ?—ಹೋಲಿಸಿರಿ ಧರ್ಮೋಪದೇಶಕಾಂಡ 32:4; ಕೀರ್ತನೆ 103:8; ಯೆಶಾಯ 45:18; 1 ಯೋಹಾನ 4:8.
ಆದುದರಿಂದ, ಮಾನವ ಪ್ರಾಣದ ಅಮರತ್ವದ ಕುರಿತಾದ ಸಿದ್ಧಾಂತವು, ಅದು ಯಾವುದೇ ರೂಪದಲ್ಲಿ ಕಲಿಸಲ್ಪಟ್ಟಿರಲಿ, ತಬ್ಬಿಬ್ಬುಗೊಳಿಸುವ ಪ್ರಶ್ನೆಗಳನ್ನು—ಅಸಂಬದ್ಧತೆಗಳನ್ನು ಸಹ—ಮೇಲೆ ತರುತ್ತದೆಂಬುದು ಸ್ಪಷ್ಟ. ಏಕೆ? ಸಮಸ್ಯೆಯ ಅಧಿಕಾಂಶ ಭಾಗವು, ಈ ಬೋಧನೆಯ ಮೂಲಾರಂಭಗಳಿಗೆ ಸಂಬಂಧಿಸಿದ್ದಾಗಿದೆ. ಈ ಮೂಲಾರಂಭಗಳನ್ನು ಸಂಕ್ಷಿಪ್ತವಾಗಿ ಪರಿಶೋಧಿಸುವುದು, ನಿಮಗೆ ಜ್ಞಾನೋದಯವನ್ನು ಉಂಟುಮಾಡುವಂತಹದ್ದಾಗಿ ಕಂಡುಬರಬಹುದು; ಹಾಗೂ ಪ್ರಾಣದ ಕುರಿತಾಗಿ ಬೈಬಲ್ ತಾನೇ ಹೇಳುವ ವಿಷಯವನ್ನು ತಿಳಿದುಕೊಳ್ಳಲು ನೀವು ಆಶ್ಚರ್ಯಚಕಿತರಾಗಬಹುದು. ಮರಣದ ನಂತರದ ಜೀವಿತಕ್ಕಾಗಿ, ಲೋಕದ ಧರ್ಮಗಳು ಸರ್ವಸಾಮಾನ್ಯವಾಗಿ ಕಲಿಸುವುದಕ್ಕಿಂತಲೂ ಬಹಳ ಉತ್ತಮವಾದ ನಿರೀಕ್ಷೆಯೊಂದನ್ನು ಅದು ನೀಡುತ್ತದೆ.
[ಅಧ್ಯಯನ ಪ್ರಶ್ನೆಗಳು]
a ಸರ್ವಸಾಮಾನ್ಯವಾಗಿ ಜನರು ಸೋಲ್ ಎಂಬ ಇಂಗ್ಲಿಷ್ ಶಬ್ದವನ್ನು ಕನ್ನಡದ ಆತ್ಮದೊಂದಿಗೆ ಜೊತೆಗೂಡಿಸುವುದಾದರೂ, ಇದರಲ್ಲಿ ಹಾಗೂ ಹಿಂಬಾಲಿಸುವ ಲೇಖನದಲ್ಲಿ ಪ್ರಾಣ ಎಂಬ ಶಬ್ದವು, ಸೋಲ್ ಎಂಬ ಇಂಗ್ಲಿಷ್ ಶಬ್ದವನ್ನು ಭಾಷಾಂತರಿಸಲು ಸುಸಂಗತವಾಗಿಯೇ ಉಪಯೋಗಿಸಲ್ಪಟ್ಟಿದೆ.