ದೇವರಲ್ಲಿ ನೀವಿಟ್ಟಿರುವ ಭರವಸೆ ಎಷ್ಟು ದೃಢವಾದದ್ದಾಗಿದೆ?
“ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿ . . . ತವಕಪಡಿರಿ.”—ಮತ್ತಾಯ 6:33.
1, 2. ಒಬ್ಬ ಯುವ ವ್ಯಕ್ತಿ ತನ್ನ ಉದ್ಯೋಗದ ವಿಷಯದಲ್ಲಿ ಯಾವ ಹೊಂದಾಣಿಕೆಗಳನ್ನು ಮಾಡಿದನು, ಮತ್ತು ಏಕೆ?
ತ ನ್ನ ಸಭೆಯಲ್ಲಿ ತಾನು ಹೆಚ್ಚು ಉಪಯುಕ್ತನಾಗಿರಬೇಕು ಎಂದು ಒಬ್ಬ ಯುವ ವ್ಯಕ್ತಿಗೆ ಅನಿಸಿತು. ಆದರೆ ಅವನ ಐಹಿಕ ಕೆಲಸವು ಅವನ ಕ್ರಮವಾದ ಕೂಟದ ಹಾಜರಿಗೆ ಅಡ್ಡಗಾಲು ಹಾಕುತ್ತಿತ್ತು. ಈ ಸನ್ನಿವೇಶವನ್ನು ಅವನು ಹೇಗೆ ನಿಭಾಯಿಸಿದನು? ಅವನು ತನ್ನ ಜೀವನವನ್ನು ಸರಳೀಕರಿಸಿದನು, ತನ್ನ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟನು ಮತ್ತು ಕಾಲಕ್ರಮೇಣ ತನ್ನ ಕ್ರೈಸ್ತ ಚಟುವಟಿಕೆಗಳಿಗೆ ಅಡ್ಡಗಾಲು ಹಾಕದಿರುವಂಥ ಒಂದು ಉದ್ಯೋಗವನ್ನು ಕಂಡುಕೊಂಡನು. ಇಂದು ಅವನು ಮೊದಲಿಗಿಂತ ಕಡಿಮೆ ಸಂಬಳವನ್ನು ಪಡೆದುಕೊಳ್ಳುತ್ತಾನಾದರೂ ಅವನಿಂದ ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿದೆ ಮತ್ತು ಸಭೆಗೆ ಹೆಚ್ಚು ಬೆಂಬಲವನ್ನು ನೀಡಲು ಸಾಧ್ಯವಾಗುತ್ತಿದೆ.
2 ಆ ಯುವ ವ್ಯಕ್ತಿಯು ಇಂತಹ ಹೊಂದಾಣಿಕೆಗಳನ್ನು ಏಕೆ ಮಾಡಿದನು ಎಂಬುದು ನಿಮಗೆ ಅರ್ಥವಾಗುತ್ತದೋ? ಒಂದುವೇಳೆ ಅವನು ಎದುರಿಸಿದಂಥ ಪರಿಸ್ಥಿತಿಯನ್ನು ನೀವು ಎದುರಿಸುತ್ತಿದ್ದಲ್ಲಿ ಇಂತಹ ಹೊಂದಾಣಿಕೆಗಳನ್ನು ಮಾಡುತ್ತಿದ್ದಿರೋ? ಅನೇಕ ಕ್ರೈಸ್ತರು ಇಂತಹ ಹೊಂದಾಣಿಕೆಗಳನ್ನು ಮಾಡಿದ್ದಾರೆ ಎಂಬುದು ಶ್ಲಾಘಿಸಬೇಕಾದ ವಿಷಯವಾಗಿದೆ, ಮತ್ತು ಅವರು ತಮ್ಮ ಕೃತ್ಯಗಳ ಮೂಲಕ ಯೇಸುವಿನ ಈ ವಾಗ್ದಾನದಲ್ಲಿ ಭರವಸೆಯಿಟ್ಟಿದ್ದೇವೆ ಎಂಬುದನ್ನು ತೋರಿಸಿಕೊಡುತ್ತಾರೆ: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33) ತಮಗೆ ಬೇಕಾದ ಭದ್ರತೆಯನ್ನು ಈ ಲೋಕವಲ್ಲ ಬದಲಿಗೆ ಯೆಹೋವನು ಕೊಡುವನೆಂಬ ಭರವಸೆ ಅವರಿಗಿದೆ.—ಜ್ಞಾನೋಕ್ತಿ 3:23, 26.
3. ದೇವರ ರಾಜ್ಯವನ್ನು ಮೊದಲಾಗಿ ಇಡುವುದು ಇಂದು ಪ್ರಾಯೋಗಿಕವಾಗಿದೆಯೋ ಎಂದು ಕೆಲವರು ಏಕೆ ಆಲೋಚಿಸಬಹುದು?
3 ನಾವು ಜೀವಿಸುತ್ತಿರುವ ಕಷ್ಟಕರ ದಿವಸಗಳ ದೆಸೆಯಿಂದ, ಆ ಯುವ ವ್ಯಕ್ತಿ ಮಾಡಿದ ನಿರ್ಣಯವು ವಿವೇಕಪ್ರದವಾಗಿತ್ತೋ ಎಂದು ಕೆಲವರು ಆಲೋಚಿಸಬಹುದು. ಇಂದು, ಮಾನವಕುಲದ ಒಂದು ಭಾಗವು ಕಡು ಬಡತನದಲ್ಲಿ ಜೀವಿಸುತ್ತಿರುವಾಗ, ಮತ್ತೊಂದು ಭಾಗವು ಹಿಂದೆಂದೂ ಇಲ್ಲದಿದ್ದಷ್ಟು ಸುಖಭೋಗದಲ್ಲಿ ಜೀವಿಸುತ್ತಿದೆ. ಬಡ ದೇಶಗಳಲ್ಲಿರುವ ಹೆಚ್ಚಿನವರು, ತಮ್ಮ ಜೀವನವನ್ನು ಸ್ವಲ್ಪವಾದರೂ ಸುಲಭಗೊಳಿಸಬಹುದಾದ ಯಾವುದೇ ಅವಕಾಶವನ್ನು ಥಟ್ಟನೆ ಬಳಸಿಕೊಳ್ಳಲು ಕಾತುರದಿಂದಿರುವರು. ಮತ್ತೊಂದು ಬದಿಯಲ್ಲಿ, ಹೆಚ್ಚು ಶ್ರೀಮಂತ ದೇಶಗಳಲ್ಲಿ ಜೀವಿಸುತ್ತಿರುವ ವ್ಯಕ್ತಿಗಳು ಶಿಥಿಲವಾದ ಆರ್ಥಿಕತೆ, ಬದಲಾಗುತ್ತಿರುವ ಉದ್ಯೋಗದ ಆವಶ್ಯಕತೆಗಳು ಮತ್ತು ಹೆಚ್ಚೆಚ್ಚು ಸಮಯ ಹಾಗೂ ಶಕ್ತಿಗಾಗಿ ತಗಾದೆಮಾಡುವ ಮಾಲೀಕರ ಸಮ್ಮುಖದಲ್ಲಿ ತಮ್ಮ ಜೀವನದ ಮಟ್ಟವನ್ನು ಕಾಪಾಡಿಕೊಳ್ಳುವ ಒತ್ತಡವನ್ನು ಅನುಭವಿಸುತ್ತಾರೆ. ಜೀವನವನ್ನು ನಡೆಸುವುದರಲ್ಲಿ ಇಷ್ಟೆಲ್ಲ ಒತ್ತಡಗಳು ಒಳಗೂಡಿರುವಾಗ, ‘ಮೊದಲು ದೇವರ ರಾಜ್ಯಕ್ಕಾಗಿ ತವಕಪಡುವುದು ಈಗ ಪ್ರಾಯೋಗಿಕವಾಗಿದೆಯೋ?’ ಎಂದು ಕೆಲವರು ಆಲೋಚಿಸಬಹುದು. ಆ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲಿಕ್ಕಾಗಿ, ಯೇಸು ಯಾರನ್ನು ಸಂಬೋಧಿಸಿ ಮಾತಾಡುತ್ತಿದ್ದನೋ ಆ ಸಭಿಕರನ್ನು ಪರಿಗಣಿಸಿರಿ.
“ಚಿಂತೆಮಾಡುವುದನ್ನು ನಿಲ್ಲಿಸಿರಿ”
4, 5. ದೇವಜನರು ದಿನನಿತ್ಯದ ಆವಶ್ಯಕತೆಗಳ ಬಗ್ಗೆ ಅತಿಯಾಗಿ ಚಿಂತಿಸದೆ ಇರುವುದು ನ್ಯಾಯಸಮ್ಮತವಾಗಿದೆ ಎಂಬುದನ್ನು ಯೇಸು ಹೇಗೆ ದೃಷ್ಟಾಂತಿಸಿ ತೋರಿಸಿದನು?
4 ಯೇಸು ಗಲಿಲಾಯದಲ್ಲಿದ್ದನು ಮತ್ತು ಅನೇಕ ಸ್ಥಳಗಳಿಂದ ಅಲ್ಲಿಗೆ ಬಂದಿದ್ದ ದೊಡ್ಡ ಗುಂಪಿನ ಜನರನ್ನು ಸಂಬೋಧಿಸಿ ಮಾತಾಡುತ್ತಿದ್ದನು. (ಮತ್ತಾಯ 4:25) ಇವರಲ್ಲಿ ಹೆಚ್ಚಿನವರು ಐಶ್ವರ್ಯವಂತರಾಗಿದ್ದಿರಲಿಕ್ಕಿಲ್ಲ, ಬಡವರಾಗಿದ್ದಿರಬೇಕು. ಆದರೂ ಯೇಸು ಅವರಿಗೆ ಪ್ರಾಪಂಚಿಕ ಸಿರಿಸಂಪತ್ತನ್ನು ಗಳಿಸುವುದಕ್ಕೆ ಪ್ರಾಧಾನ್ಯವನ್ನು ಕೊಡಬೇಕಂದಲ್ಲ, ಅದಕ್ಕಿಂತಲೂ ಹೆಚ್ಚು ಅಮೂಲ್ಯವಾದ ಆಧ್ಯಾತ್ಮಿಕ ಐಶ್ವರ್ಯವನ್ನು ಗಂಟುಮಾಡಿಟ್ಟುಕೊಳ್ಳುವಂತೆ ಪ್ರೋತ್ಸಾಹಿಸಿದನು. (ಮತ್ತಾಯ 6:19-21, 24) ಅವನು ಹೇಳಿದ್ದು: “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ [“ಚಿಂತೆಮಾಡುವುದನ್ನು ನಿಲ್ಲಿಸಿರಿ,” NW] ಎಂಬದಾಗಿ ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ.”—ಮತ್ತಾಯ 6:25.
5 ಯೇಸುವಿಗೆ ಕಿವಿಗೊಡುತ್ತಿದ್ದ ಹೆಚ್ಚಿನ ಜನರಿಗೆ ಅವನ ಮಾತುಗಳು ಅಪ್ರಾಯೋಗಿಕವಾಗಿ ಕಂಡುಬಂದಿರಬಹುದು. ತಾವು ಕಷ್ಟಪಟ್ಟು ದುಡಿಯದಿದ್ದಲ್ಲಿ ಜೀವನವನ್ನು ನಡೆಸುವುದು ಕಷ್ಟಕರವಾಗಿರಸಾಧ್ಯವಿದೆ ಎಂಬುದು ಅವರಿಗೆ ತಿಳಿದಿತ್ತು. ಆದರೂ, ಯೇಸು ಅವರಿಗೆ ಹಕ್ಕಿಗಳ ಕುರಿತು ತಿಳಿಸಿದನು. ಹಕ್ಕಿಗಳು ಪ್ರತಿ ದಿನ ಆಹಾರ ಮತ್ತು ಆಶ್ರಯಕ್ಕಾಗಿ ಹುಡುಕಬೇಕಾಗಿರುತ್ತದಾದರೂ, ಯೆಹೋವನು ಅವುಗಳನ್ನು ಪರಾಮರಿಸುತ್ತಾನೆ. ತಮ್ಮ ಸೌಂದರ್ಯದಲ್ಲಿ ಸಕಲ ವೈಭವದಿಂದ ಕೂಡಿದ್ದ ಸೊಲೊಮೋನನಿಗಿಂತಲೂ ಉತ್ತಮವಾಗಿರುವ ಅಡವಿಯ ಹೂವುಗಳನ್ನು ಯೆಹೋವನು ಪರಾಮರಿಸುವ ವಿಧಕ್ಕೂ ಯೇಸು ಸೂಚಿಸುತ್ತಾನೆ. ಯೆಹೋವನು ಹಕ್ಕಿಗಳು ಮತ್ತು ಹೂವುಗಳ ಬಗ್ಗೆ ಚಿಂತೆ ವಹಿಸುವುದಾದರೆ, ನಮ್ಮ ಕುರಿತು ಎಷ್ಟೋ ಹೆಚ್ಚಾಗಿ ಚಿಂತೆ ವಹಿಸುವನಲ್ಲವೇ? (ಮತ್ತಾಯ 6:26-30) ಯೇಸು ಹೇಳಿದಂತೆ, ನಾವು ನಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳಲಿಕ್ಕಾಗಿ ಖರೀದಿಸುವ ಆಹಾರಕ್ಕಿಂತ ಮತ್ತು ನಮ್ಮ ದೇಹಗಳನ್ನು ಮುಚ್ಚಿಕೊಳ್ಳಲಿಕ್ಕಾಗಿ ಪಡೆದುಕೊಳ್ಳುವ ಉಡುಪಿಗಿಂತ ನಮ್ಮ ಪ್ರಾಣ ಮತ್ತು ದೇಹವು ಹೆಚ್ಚು ಪ್ರಾಮುಖ್ಯವಾಗಿದೆ. ನಾವು ಯೆಹೋವನ ಸೇವೆಗೆಂದು ಯೋಗ್ಯವಾದ ಸಮಯವನ್ನು ಬದಿಗಿರಿಸದಷ್ಟು ಪ್ರಮಾಣದಲ್ಲಿ ನಮ್ಮೆಲ್ಲ ಶಕ್ತಿಸಾಮರ್ಥ್ಯಗಳನ್ನು ಅನ್ನವಸ್ತ್ರವನ್ನು ಗಳಿಸಲಿಕ್ಕಾಗಿಯೇ ವ್ಯಯಿಸಿಬಿಡುವುದಾದರೆ, ನಾವು ಜೀವಿಸುವುದರಲ್ಲಿ ಅರ್ಥವೇ ಇರುವುದಿಲ್ಲ.—ಪ್ರಸಂಗಿ 12:13.
ಸಮತೂಕವುಳ್ಳ ದೃಷ್ಟಿಕೋನ
6. (ಎ) ಕ್ರೈಸ್ತರಿಗೆ ಯಾವ ಜವಾಬ್ದಾರಿಯಿದೆ? (ಬಿ) ಕ್ರೈಸ್ತರು ಯಾರ ಮೇಲೆ ತಮ್ಮ ಸಂಪೂರ್ಣ ಭರವಸೆಯನ್ನಿಡುತ್ತಾರೆ?
6 ವಾಸ್ತವದಲ್ಲಿ, ಕೆಲಸ ಮಾಡುವುದನ್ನು ನಿಲ್ಲಿಸಿ ದೇವರು ತಮ್ಮ ಕುಟುಂಬಕ್ಕೆ ಬೇಕಾಗಿರುವುದನ್ನು ಹೇಗಾದರೂ ಒದಗಿಸುವನು ಎಂದು ಕಾದುಕುಳಿತುಕೊಳ್ಳುವಂತೆ ಯೇಸು ತನ್ನ ಕೇಳುಗರನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಹಕ್ಕಿಗಳು ಸಹ ತಮ್ಮ ಮತ್ತು ತಮ್ಮ ಮರಿಗಳ ಹೊಟ್ಟೆಯನ್ನು ತುಂಬಿಸಲಿಕ್ಕಾಗಿ ಆಹಾರವನ್ನು ಹುಡುಕಬೇಕಾಗಿರುತ್ತದೆ. ಆದುದರಿಂದ, ಕ್ರೈಸ್ತರು ಸಹ ತಮ್ಮ ಹೊಟ್ಟೆಪಾಡಿಗಾಗಿ ಕೆಲಸವನ್ನು ಮಾಡಬೇಕಾಗಿತ್ತು. ಅವರು ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಪೂರೈಸಬೇಕಾಗಿತ್ತು. ಆಳುಗಳಾಗಿದ್ದ ಮತ್ತು ದಾಸರಾಗಿದ್ದ ಕ್ರೈಸ್ತರು ತಮ್ಮ ಯಜಮಾನರಿಗಾಗಿ ಕಷ್ಟಪಟ್ಟು ದುಡಿಯಬೇಕಾಗಿತ್ತು. (2 ಥೆಸಲೊನೀಕ 3:10-12; 1 ತಿಮೊಥೆಯ 5:8; 1 ಪೇತ್ರ 2:18) ಅಪೊಸ್ತಲ ಪೌಲನು ತನ್ನ ಖರ್ಚುವೆಚ್ಚಗಳಿಗಾಗಿ ಗುಡಾರಮಾಡುವ ಕೆಲಸವನ್ನು ಆಗಾಗ ಮಾಡಿದನು. (ಅ. ಕೃತ್ಯಗಳು 18:1-4; 1 ಥೆಸಲೊನೀಕ 2:9) ಆದರೂ, ಆ ಐಹಿಕ ಕೆಲಸಗಳು ತಮಗೆ ಭದ್ರತೆಯನ್ನು ನೀಡುತ್ತವೆ ಎಂದು ಆ ಕ್ರೈಸ್ತರು ನೆನಸಲಿಲ್ಲ. ಅವರು ಯೆಹೋವನಲ್ಲಿ ಭರವಸೆಯಿಟ್ಟರು. ಇದರ ಫಲಿತಾಂಶವಾಗಿ, ಅವರು ಇತರರು ಅನುಭವಿಸಿರದ ರೀತಿಯ ಆಂತರಿಕ ಶಾಂತಿಯನ್ನು ಅನುಭವಿಸಿದರು. ಕೀರ್ತನೆಗಾರನು ಹೇಳಿದ್ದು: “ಯೆಹೋವನಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗೆ ಇದ್ದಾರೆ; ಅದು ಕದಲುವದಿಲ್ಲ, ಸದಾ ಸ್ಥಿರವಾಗಿರುತ್ತದೆ.”—ಕೀರ್ತನೆ 125:1.
7. ಯೆಹೋವನಲ್ಲಿ ದೃಢಭರವಸೆಯನ್ನಿಟ್ಟಿರದಂಥ ಒಬ್ಬ ವ್ಯಕ್ತಿಯ ದೃಷ್ಟಿಕೋನ ಎಂಥದ್ದಾಗಿರಬಹುದು?
7 ಯೆಹೋವನಲ್ಲಿ ದೃಢಭರವಸೆಯನ್ನಿಟ್ಟಿರದಂಥ ಒಬ್ಬ ವ್ಯಕ್ತಿಯ ಆಲೋಚನೆಯು ಬೇರೆಯಾಗಿರಬಹುದು. ಅಧಿಕಾಂಶ ಮಂದಿ ಮಾನವರು, ಐಹಿಕ ಸಿರಿಸಂಪತ್ತು ತಮಗೆ ಭದ್ರತೆಯನ್ನು ನೀಡುವ ಪ್ರಮುಖ ಅಂಶವಾಗಿದೆ ಎಂದು ನೆನಸುತ್ತಾರೆ. ಆದುದರಿಂದ, ತಮ್ಮ ಯೌವನಪ್ರಾಯದ ಹೆಚ್ಚಿನ ವರ್ಷಗಳನ್ನು ಉನ್ನತ ಶಿಕ್ಷಣವನ್ನು ಪಡೆಯುವುದರಲ್ಲಿ ವ್ಯಯಿಸುವಂತೆ ಹೆತ್ತವರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಿದ್ದಾರೆ. ಇಂತಹ ಶಿಕ್ಷಣವು ಒಳ್ಳೆಯ ಸಂಬಳವನ್ನು ಕೊಡುವಂಥ ಜೀವನೋದ್ಯೋಗಗಳಿಗೆ ತಮ್ಮ ಮಕ್ಕಳನ್ನು ಸಿದ್ಧಪಡಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿರುತ್ತದೆ. ದುಃಖಕರವಾಗಿ, ಉನ್ನತ ಶಿಕ್ಷಣಕ್ಕೆ ತಾವು ಕೊಟ್ಟ ಇಷ್ಟೆಲ್ಲ ಪ್ರಾಧಾನ್ಯವು ತಮಗೆ ದುಬಾರಿಯಾದ ನಷ್ಟವನ್ನು ಉಂಟುಮಾಡಿದೆ ಎಂಬುದನ್ನು ಕೆಲವು ಕ್ರೈಸ್ತ ಕುಟುಂಬಗಳು ಕಂಡುಕೊಂಡಿವೆ; ಮಕ್ಕಳು ತಮ್ಮ ಆಧ್ಯಾತ್ಮಿಕ ಕೇಂದ್ರೀಕರಣವನ್ನು ಕಳೆದುಕೊಂಡು ಪ್ರಾಪಂಚಿಕ ಗುರಿಗಳನ್ನು ಬೆನ್ನಟ್ಟುವುದರತ್ತ ತಮ್ಮ ಗಮನವನ್ನು ತಿರುಗಿಸಿದ್ದಾರೆ.
8. ಯಾವ ಸಮತೂಕವನ್ನು ಕ್ರೈಸ್ತರು ಕಾಪಾಡಿಕೊಳ್ಳುತ್ತಾರೆ?
8 ಆದುದರಿಂದ, ಯೇಸುವಿನ ಬುದ್ಧಿವಾದವು ಪ್ರಥಮ ಶತಮಾನದಲ್ಲಿ ಎಷ್ಟು ಸೂಕ್ತವಾಗಿತ್ತೋ ಇಂದೂ ಅಷ್ಟೇ ಸೂಕ್ತವಾಗಿದೆ ಎಂಬುದನ್ನು ವಿವೇಕಿಗಳಾದ ಕ್ರೈಸ್ತರು ಗ್ರಹಿಸಿಕೊಳ್ಳುತ್ತಾರೆ ಮತ್ತು ಅವರು ಸಮತೂಕವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಆಧ್ಯಾತ್ಮಿಕ ಜವಾಬ್ದಾರಿಗಳನ್ನು ಪೂರೈಸಲಿಕ್ಕಾಗಿ ಅವರು ತಮ್ಮ ಐಹಿಕ ಕೆಲಸದಲ್ಲಿ ಹೆಚ್ಚಿನ ತಾಸುಗಳನ್ನು ವ್ಯಯಿಸಬೇಕಾಗಿ ಬರುವುದಾದರೂ, ಹಣಸಂಪಾದನೆಯು ಹೆಚ್ಚು ಪ್ರಾಮುಖ್ಯವಾದ ಆಧ್ಯಾತ್ಮಿಕ ವಿಚಾರಗಳನ್ನು ಬದಿಗೊತ್ತುವಂತೆ ಅವರು ಅನುಮತಿಸುವುದಿಲ್ಲ.—ಪ್ರಸಂಗಿ 7:12.
“ಎಂದಿಗೂ ಚಿಂತೆಮಾಡಬೇಡಿರಿ”
9. ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆಯಿಡುವವರಿಗೆ ಯೇಸು ಯಾವ ಪುನರಾಶ್ವಾಸನೆಯನ್ನು ಕೊಡುತ್ತಾನೆ?
9 ತನ್ನ ಪರ್ವತ ಪ್ರಸಂಗದಲ್ಲಿ ಯೇಸು ತನ್ನ ಕೇಳುಗರನ್ನು ಉತ್ತೇಜಿಸಿದ್ದು: “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ [“ಎಂದಿಗೂ ಚಿಂತೆಮಾಡಬೇಡಿರಿ,” NW]. ಇವೆಲ್ಲವುಗಳಿಗಾಗಿ ಅಜ್ಞಾನಿಗಳು [“ಜನಾಂಗಗಳವರು,” NW] ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆ.” (ಮತ್ತಾಯ 6:31, 32) ಎಷ್ಟು ಪ್ರೋತ್ಸಾಹಕರ ಮಾತುಗಳಿವು! ನಾವು ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆಯಿಡುವುದಾದರೆ, ಆತನು ನಮಗೆ ಸದಾ ಬೆಂಬಲವನ್ನು ನೀಡುವನು. ಯೇಸುವಿನ ಮಾತುಗಳು ಗಂಭೀರವಾಗಿವೆ ಕೂಡ. ನಾವು ಪ್ರಾಪಂಚಿಕ ವಿಷಯಗಳಿಗಾಗಿ ‘ತವಕಪಡುವುದಾದರೆ’ ನಮ್ಮ ಯೋಚನೆಯು ‘ಜನಾಂಗಗಳವರಂತೆ,’ ಸತ್ಯ ಕ್ರೈಸ್ತರಲ್ಲದ ಜನರಂತೆ ಇರುವುದು.
10. ಒಬ್ಬ ಯುವ ವ್ಯಕ್ತಿಯು ಸಲಹೆಯನ್ನು ಪಡೆದುಕೊಳ್ಳಲಿಕ್ಕಾಗಿ ಯೇಸುವಿನ ಬಳಿಗೆ ಬಂದಾಗ, ಅವನಲ್ಲಿ ಯಾವುದಕ್ಕಾಗಿ ಹೆಚ್ಚು ಪ್ರೀತಿಯಿತ್ತು ಎಂಬುದನ್ನು ಯೇಸು ಹೇಗೆ ಬಯಲುಪಡಿಸಿದನು?
10 ಒಂದು ಸಂದರ್ಭದಲ್ಲಿ, ನಿತ್ಯಜೀವವನ್ನು ಪಡೆಯಬೇಕಾದರೆ ಏನು ಮಾಡಬೇಕು ಎಂದು ತುಂಬ ಐಶ್ವರ್ಯವಂತನಾಗಿದ್ದ ಒಬ್ಬ ಯುವ ವ್ಯಕ್ತಿಯು ಯೇಸುವನ್ನು ಕೇಳಿದನು. ಯೇಸು ಅವನಿಗೆ ಆ ಸಮಯದಲ್ಲಿ ಅನುಸರಿಸಲ್ಪಡುತ್ತಿದ್ದ ಧರ್ಮಶಾಸ್ತ್ರದ ಆವಶ್ಯಕತೆಗಳ ಕುರಿತಾಗಿ ತಿಳಿಸಿದನು. ಅದಕ್ಕೆ ಆ ಯುವ ವ್ಯಕ್ತಿಯು, “ಇವೆಲ್ಲಕ್ಕೂ ಸರಿಯಾಗಿ ನಡಕೊಂಡಿದ್ದೇನೆ” ಎಂದು ಆತ್ಮವಿಶ್ವಾಸದಿಂದ ನುಡಿದನು ಮತ್ತು “ಇನ್ನೇನು ಕಡಿಮೆಯಾಗಿರಬಹುದು?” ಎಂದು ಯೇಸುವನ್ನು ಕೇಳಿದನು. ಯೇಸು ಕೊಟ್ಟ ಉತ್ತರವು ಅನೇಕರಿಗೆ ಅಪ್ರಾಯೋಗಿಕವಾದದ್ದಾಗಿ ತೋರಿದ್ದಿರಬಹುದು. ಅವನು ಹೇಳಿದ್ದು: “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನು ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು.” (ಮತ್ತಾಯ 19:16-21) ತನ್ನ ಸಿರಿಸಂಪತ್ತನ್ನು ಕಳೆದುಕೊಳ್ಳುವ ವಿಚಾರವನ್ನು ಆಲೋಚಿಸಲೂ ಬಯಸದ ಆ ಯುವ ವ್ಯಕ್ತಿಯು ದುಃಖಿತನಾಗಿ ಹೊರಟುಹೋದನು. ಯೆಹೋವನಿಗಾಗಿ ಅವನಲ್ಲಿ ಎಷ್ಟೇ ಪ್ರೀತಿಯಿದ್ದರೂ, ಅವನ ಆಸ್ತಿಪಾಸ್ತಿಯ ಮೇಲೆ ಅದಕ್ಕಿಂತಲೂ ಹೆಚ್ಚು ಪ್ರೀತಿಯಿತ್ತು.
11, 12. (ಎ) ಐಶ್ವರ್ಯದ ಕುರಿತು ಯೇಸು ಯಾವ ಗಂಭೀರವಾದ ಮಾತುಗಳನ್ನಾಡಿದನು? (ಬಿ) ಯೆಹೋವನನ್ನು ಸೇವಿಸುವುದರಲ್ಲಿ ಆಸ್ತಿಪಾಸ್ತಿ ಹೇಗೆ ಅಡ್ಡಬರಬಲ್ಲದು?
11 ಈ ಘಟನೆಯು ಅನಿರೀಕ್ಷಿತವಾದ ಈ ಮಾತುಗಳನ್ನಾಡುವಂತೆ ಯೇಸುವನ್ನು ಪ್ರಚೋದಿಸಿತು: “ಐಶ್ವರ್ಯವಂತನು ಪರಲೋಕರಾಜ್ಯದಲ್ಲಿ ಸೇರುವದು ಕಷ್ಟ. ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ.” (ಮತ್ತಾಯ 19:23, 24) ಯಾವ ಐಶ್ವರ್ಯವಂತನೂ ದೇವರ ರಾಜ್ಯವನ್ನು ಸೇರುವುದಿಲ್ಲ ಎಂದು ಯೇಸು ಅರ್ಥೈಸಿದನೋ? ಇಲ್ಲ, ಏಕೆಂದರೆ ಅವನು ಮುಂದುವರಿಸುತ್ತಾ ಹೇಳಿದ್ದು: “ದೇವರಿಗೆ ಎಲ್ಲವು ಸಾಧ್ಯ.” (ಮತ್ತಾಯ 19:25, 26) ವಾಸ್ತವದಲ್ಲಿ, ಯೆಹೋವನ ಸಹಾಯದಿಂದ ಆ ಸಮಯದಲ್ಲಿದ್ದ ಕೆಲವು ಐಶ್ವರ್ಯವಂತರು ಅಭಿಷಿಕ್ತ ಕ್ರೈಸ್ತರಾದರು. (1 ತಿಮೊಥೆಯ 6:17) ಆದರೂ, ಯೇಸು ಅನಿರೀಕ್ಷಿತವಾದ ಆ ಮಾತುಗಳನ್ನು ಸಕಾರಣದಿಂದಲೇ ಹೇಳಿದನು. ಅವನು ಒಂದು ಎಚ್ಚರಿಕೆಯನ್ನು ಕೊಡುತ್ತಿದ್ದನು.
12 ಆ ಐಶ್ವರ್ಯವಂತ ಯುವ ವ್ಯಕ್ತಿಯಂತೆ ಒಬ್ಬನು ತನ್ನ ಆಸ್ತಿಪಾಸ್ತಿಗಾಗಿ ಹೆಚ್ಚು ಒಲುಮೆಯನ್ನು ಬೆಳೆಸಿಕೊಳ್ಳುವುದಾದರೆ, ಯೆಹೋವನಿಗೆ ಪೂರ್ಣಹೃದಯದ ಸೇವೆಯನ್ನು ಸಲ್ಲಿಸುವುದು ಅವನಿಗೆ ಕಷ್ಟಕರವಾಗುವುದು. ಇದು, ಈಗಾಗಲೇ ಐಶ್ವರ್ಯವಂತನಾಗಿರುವಂಥ ವ್ಯಕ್ತಿಯ ವಿಷಯದಲ್ಲಿ ಮಾತ್ರವಲ್ಲದೆ ‘ಐಶ್ವರ್ಯವಂತನಾಗಬೇಕೆಂದು ಮನಸ್ಸು ಮಾಡಿರುವವನ’ ವಿಷಯದಲ್ಲಿ ಸಹ ಸತ್ಯವಾಗಿರಸಾಧ್ಯವಿದೆ. (1 ತಿಮೊಥೆಯ 6:9, 10) ಪ್ರಾಪಂಚಿಕ ವಸ್ತುಗಳಲ್ಲಿ ಅತಿಯಾದ ಭರವಸೆಯನ್ನು ಇಡುವ ವ್ಯಕ್ತಿಯಲ್ಲಿ ‘ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯು’ ಕುಂದುವುದು ಸಂಭವನೀಯ. (ಮತ್ತಾಯ 5:3, NW) ಇದರ ಪರಿಣಾಮವಾಗಿ, ತನಗೆ ಯೆಹೋವನ ಬೆಂಬಲವು ಬೇಕಾಗಿದೆ ಎಂದು ಸಹ ಅವನಿಗೆ ಅನಿಸಲಿಕ್ಕಿಲ್ಲ. (ಧರ್ಮೋಪದೇಶಕಾಂಡ 6:10-12) ಅವನು ಸಭೆಯಲ್ಲಿ ವಿಶೇಷ ಉಪಚಾರವನ್ನು ಪಡೆದುಕೊಳ್ಳಬೇಕೆಂದು ನಿರೀಕ್ಷಿಸಬಹುದು. (ಯಾಕೋಬ 2:1-4) ಮತ್ತು ಅವನು ತನ್ನ ಸಮಯದಲ್ಲಿ ಹೆಚ್ಚಿನಾಂಶವನ್ನು, ಯೆಹೋವನನ್ನು ಸೇವಿಸುವುದರಲ್ಲಿ ಅಲ್ಲ ಬದಲಿಗೆ ತನ್ನ ಸಿರಿಸಂಪತ್ತನ್ನು ಆನಂದಿಸುವುದರಲ್ಲಿ ವ್ಯಯಿಸಬಹುದು.
ಸರಿಯಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿರಿ
13. ಲವೊದಿಕೀಯದವರಿಗೆ ಯಾವ ತಪ್ಪಾದ ದೃಷ್ಟಿಕೋನವಿತ್ತು?
13 ಆಸ್ತಿಪಾಸ್ತಿಯ ಬಗ್ಗೆ ತಪ್ಪಾದ ದೃಷ್ಟಿಕೋನವನ್ನು ಹೊಂದಿದ್ದ ಒಂದು ಗುಂಪು ಪ್ರಥಮ ಶತಮಾನದ ಲವೊದಿಕೀಯದಲ್ಲಿದ್ದ ಸಭೆಯಾಗಿತ್ತು. ಯೇಸು ಅವರಿಗೆ ಹೇಳಿದ್ದು: “ನಾನು ಐಶ್ವರ್ಯವಂತನು, ಸಂಪನ್ನನು, ಒಂದರಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬಟ್ಟೆಯಿಲ್ಲದವನು ಆಗಿರುವದನ್ನು ತಿಳಿಯದೆ ಇದ್ದೀ.” ಲವೊದಿಕೀಯದವರನ್ನು ಇಂತಹ ಆಧ್ಯಾತ್ಮಿಕ ದುರ್ಗತಿಗೆ ತಂದದ್ದು ಅವರ ಐಶ್ವರ್ಯವಲ್ಲ. ಬದಲಿಗೆ, ಅವರು ಯೆಹೋವನಲ್ಲಿ ಭರವಸೆಯಿಡದೆ ಐಶ್ವರ್ಯದಲ್ಲಿ ಭರವಸೆಯಿಟ್ಟದ್ದೇ ಇದಕ್ಕೆ ಕಾರಣವಾಗಿತ್ತು. ಇದರ ಫಲಿತಾಂಶವಾಗಿ, ಅವರು ಆಧ್ಯಾತ್ಮಿಕವಾಗಿ ಉಗುರುಬೆಚ್ಚಗಿದ್ದು, ಯೇಸುವಿನ ‘ಬಾಯೊಳಗಿಂದ ಕಾರಲ್ಪಡುವ’ ಸ್ಥಿತಿಯನ್ನು ತಲಪಿದ್ದರು.—ಪ್ರಕಟನೆ 3:14-17.
14. ಇಬ್ರಿಯ ಕ್ರೈಸ್ತರು ಏಕೆ ಪೌಲನ ಶ್ಲಾಘನೆಗೆ ಅರ್ಹರಾಗಿದ್ದರು?
14 ಮತ್ತೊಂದು ಬದಿಯಲ್ಲಿ, ತುಸು ಮುಂಚೆ ಸಂಭವಿಸಿದ ಹಿಂಸೆಯ ಸಮಯದಲ್ಲಿ ಇಬ್ರಿಯ ಕ್ರೈಸ್ತರು ತೋರಿಸಿದ ಮನೋಭಾವಕ್ಕಾಗಿ ಪೌಲನು ಅವರನ್ನು ಶ್ಲಾಘಿಸಿದನು. ಅವನು ಹೇಳಿದ್ದು: “ಬೇಡಿಗಳನ್ನು ಹಾಕಿಸಿಕೊಂಡವರ ಕಷ್ಟವನ್ನು ನೋಡಿ ಅವರ ಸಂಗಡ ನೀವು ದುಃಖಪಟ್ಟದ್ದಲ್ಲದೆ ನಮಗೆ ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟಿರಿ.” (ಇಬ್ರಿಯ 10:34) ಈ ಕ್ರೈಸ್ತರು ತಮ್ಮ ಆಸ್ತಿಪಾಸ್ತಿಯನ್ನು ಕಳೆದುಕೊಂಡದ್ದರಿಂದ ಮಾನಸಿಕವಾಗಿ ತಲ್ಲಣಗೊಳ್ಳಲಿಲ್ಲ. ಅವರು ತಮ್ಮ ಸಂತೋಷವನ್ನು ಕಾಪಾಡಿಕೊಂಡರು, ಏಕೆಂದರೆ ಅವರು ಹೆಚ್ಚು ಅಮೂಲ್ಯವಾದ ಸೊತ್ತನ್ನು, ‘ಉತ್ತಮವೂ ಸ್ಥಿರವೂ ಆಗಿದ್ದ ಆಸ್ತಿಯನ್ನು’ ಬಲವಾಗಿ ಹಿಡಿದುಕೊಂಡಿದ್ದರು. ಅಮೂಲ್ಯವಾದ ಒಂದು ಮುತ್ತನ್ನು ಕೊಂಡುಕೊಳ್ಳಲಿಕ್ಕಾಗಿ ತನ್ನ ಬದುಕನ್ನೆಲ್ಲಾ ಮಾರಿದ ಯೇಸುವಿನ ಸಾಮ್ಯದ ವ್ಯಾಪಾರಿಯಂತೆ, ಏನೇ ತ್ಯಾಗವನ್ನು ಮಾಡಬೇಕಾಗಿರುವುದಾದರೂ ರಾಜ್ಯದ ನಿರೀಕ್ಷೆಯ ಮೇಲಿನ ತಮ್ಮ ಹಿಡಿತವನ್ನು ಸಡಿಲಗೊಳಿಸೆವು ಎಂಬ ದೃಢನಿಶ್ಚಯವನ್ನು ಅವರು ಮಾಡಿದ್ದರು. (ಮತ್ತಾಯ 13:45, 46) ಇದು ಎಂತಹ ಉತ್ತಮ ಮನೋಭಾವವಾಗಿದೆ!
15. ಲೈಬಿರೀಯದಲ್ಲಿದ್ದ ಒಬ್ಬ ಕ್ರೈಸ್ತ ಯುವತಿ ರಾಜ್ಯದ ಅಭಿರುಚಿಗಳಿಗೆ ಹೇಗೆ ಪ್ರಥಮ ಸ್ಥಾನವನ್ನು ಕೊಟ್ಟಳು?
15 ಇಂದು ಅನೇಕರು ಇಂತಹ ಉತ್ತಮ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. ಉದಾಹರಣೆಗೆ, ಲೈಬಿರೀಯದಲ್ಲಿ ಒಬ್ಬ ಕ್ರೈಸ್ತ ಯುವತಿಗೆ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗಮಾಡುವ ಅವಕಾಶವು ಕೊಡಲ್ಪಟ್ಟಿತು. ಅವಳ ದೇಶದಲ್ಲಿ, ಇಂತಹ ಒಂದು ನೀಡಿಕೆಯು ಸುಭದ್ರವಾದ ಭವಿಷ್ಯತ್ತನ್ನು ಕಟ್ಟಲಿಕ್ಕಾಗಿರುವ ಮಾರ್ಗವಾಗಿ ವೀಕ್ಷಿಸಲ್ಪಡುತ್ತದೆ. ಆದರೂ, ಅವಳು ಪಯನೀಯರ್ ಸೇವೆಯನ್ನು ಮಾಡುತ್ತಿದ್ದ ಪೂರ್ಣ ಸಮಯದ ಸೌವಾರ್ತಿಕಳಾಗಿದ್ದಳು ಮತ್ತು ತಾತ್ಕಾಲಿಕ ಸ್ಪೆಷಲ್ ಪಯನೀಯರಳಾಗಿ ಸೇವೆ ಸಲ್ಲಿಸಲು ಆಮಂತ್ರಣವನ್ನು ಪಡೆದುಕೊಂಡಿದ್ದಳು. ಅವಳು ದೇವರ ರಾಜ್ಯವನ್ನು ಪ್ರಥಮವಾಗಿಡುವ ಮತ್ತು ಪೂರ್ಣ ಸಮಯದ ಸೇವೆಯನ್ನು ಮುಂದುವರಿಸುವ ಆಯ್ಕೆಯನ್ನು ಮಾಡಿದಳು. ಅವಳು ತನಗೆ ನೇಮಿಸಲ್ಪಟ್ಟ ಸ್ಥಳಕ್ಕೆ ಹೋಗಿ ಮೂರು ತಿಂಗಳುಗಳಲ್ಲಿ 21 ಬೈಬಲ್ ಅಧ್ಯಯನಗಳನ್ನು ಆರಂಭಿಸಿದಳು. ಮೊದಲು ರಾಜ್ಯಕ್ಕಾಗಿ ತವಕಪಡುವುದು ತಮಗೆ ಸಂಭಾವ್ಯ ಪ್ರಾಪಂಚಿಕ ಅನುಕೂಲತೆಗಳ ನಷ್ಟವನ್ನು ತರುವುದೆಂದು ತಿಳಿದಿರುವುದಾದರೂ ಈ ಯುವ ಸಹೋದರಿಯಂತೆ ಸಾವಿರಾರು ಮಂದಿ ಸಹೋದರ ಸಹೋದರಿಯರು ದೇವರ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡುತ್ತಾರೆ. ಐಹಿಕ ಭೋಗಗಳಿಗೆ ಪ್ರಮುಖತೆ ನೀಡುವ ಪ್ರವೃತ್ತಿಯನ್ನು ಹೊಂದಿರುವ ಈ ಲೋಕದಲ್ಲಿ ಅವರು ಇಂಥ ಮನೋಭಾವವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ? ಅವರು ಅನೇಕ ಉತ್ತಮವಾದ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ನಾವು ಇವುಗಳಲ್ಲಿ ಕೆಲವು ಗುಣಗಳ ಕುರಿತು ಚರ್ಚಿಸೋಣ.
16, 17. (ಎ) ನಾವು ಯೆಹೋವನಲ್ಲಿ ಭರವಸೆಯಿಡಬೇಕಾದರೆ ವಿನಯಶೀಲತೆಯು ಏಕೆ ಪ್ರಾಮುಖ್ಯವಾಗಿದೆ? (ಬಿ) ನಾವು ದೇವರ ವಾಗ್ದಾನಗಳಲ್ಲಿ ಏಕೆ ಭರವಸೆಯನ್ನು ಬೆಳೆಸಿಕೊಳ್ಳಬೇಕು?
16 ವಿನಯಶೀಲತೆ: ಬೈಬಲ್ ಹೀಗೆ ಹೇಳುತ್ತದೆ: ‘ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು. ನೀನೇ ಬುದ್ಧಿವಂತನು ಎಂದೆಣಿಸಬೇಡ.’ (ಜ್ಞಾನೋಕ್ತಿ 3:5-7) ಕೆಲವೊಮ್ಮೆ, ಐಹಿಕ ದೃಷ್ಟಿಯಿಂದ ನೋಡುವಾಗ ಒಂದು ನಿರ್ದಿಷ್ಟ ಮಾರ್ಗಕ್ರಮವು ಪ್ರಾಯೋಗಿಕವಾಗಿ ತೋರಬಹುದು. (ಯೆರೆಮೀಯ 17:9) ಆದರೂ, ಒಬ್ಬ ಪ್ರಾಮಾಣಿಕ ಕ್ರೈಸ್ತನು ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ನೋಡುತ್ತಾನೆ. (ಕೀರ್ತನೆ 48:14) ‘ತನ್ನ ಎಲ್ಲಾ ನಡವಳಿಯಲ್ಲಿ’—ಸಭೆಗೆ ಸಂಬಂಧಪಟ್ಟ ವಿಚಾರಗಳಲ್ಲಿ, ಶಿಕ್ಷಣ ಅಥವಾ ಐಹಿಕ ಕೆಲಸ, ವಿನೋದ ಅಥವಾ ಬೇರಾವುದೇ ವಿಷಯದಲ್ಲಿ—ಅವನು ವಿನಯದಿಂದ ಯೆಹೋವನ ಸಲಹೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ.—ಕೀರ್ತನೆ 73:24.
17 ಯೆಹೋವನ ವಾಗ್ದಾನಗಳಲ್ಲಿ ಭರವಸೆ: ಪೌಲನು ಹೇಳಿದ್ದು: “ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) ಯೆಹೋವನು ತನ್ನ ವಾಗ್ದಾನಗಳನ್ನು ಪೂರೈಸುವ ವಿಷಯದಲ್ಲಿ ನಮಗೆ ಸಂದೇಹಗಳಿರುವುದಾದರೆ, ‘ಈ ಲೋಕವನ್ನು ಪರಿಪೂರ್ಣವಾಗಿ ಅನುಭೋಗಿಸುವುದು’ ಸಮಂಜಸವಾದದ್ದಾಗಿದೆ ಎಂದು ನಮಗೆ ಅನಿಸಬಹುದು. (1 ಕೊರಿಂಥ 7:31) ಅದರ ಬದಲಿಗೆ, ನಮ್ಮ ನಂಬಿಕೆಯು ಬಲವಾಗಿರುವುದಾದರೆ, ನಾವು ಮೊದಲು ರಾಜ್ಯಕ್ಕಾಗಿ ತವಕಪಡಲು ದೃಢನಿಶ್ಚಯವುಳ್ಳವರಾಗಿರುವೆವು. ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳುವುದು ಹೇಗೆ? ಎಡೆಬಿಡದ ಹೃತ್ಪೂರ್ವಕ ಪ್ರಾರ್ಥನೆ ಮತ್ತು ಕ್ರಮವಾದ ವೈಯಕ್ತಿಕ ಅಧ್ಯಯನದ ಮೂಲಕ ಯೆಹೋವನ ಸಮೀಪಕ್ಕೆ ಬರುವಲ್ಲಿ ನಾವು ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಬಲ್ಲೆವು. (ಕೀರ್ತನೆ 1:1-3; ಫಿಲಿಪ್ಪಿ 4:6, 7; ಯಾಕೋಬ 4:8) ರಾಜ ದಾವೀದನಂತೆ ನಾವು ಹೀಗೆ ಪ್ರಾರ್ಥಿಸಸಾಧ್ಯವಿದೆ: ‘ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ; ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ. ಸದ್ಭಕ್ತರಿಗೋಸ್ಕರ ನೀನು ಇಟ್ಟುಕೊಂಡಿರುವ ಮೇಲು ಎಷ್ಟೋ ವಿಶೇಷವಾಗಿದೆ.’—ಕೀರ್ತನೆ 31:14, 19.
18, 19. (ಎ) ಕಾರ್ಯಮಗ್ನತೆಯು ಯೆಹೋವನಲ್ಲಿರುವ ನಮ್ಮ ಭರವಸೆಯನ್ನು ಹೇಗೆ ಬಲಪಡಿಸುತ್ತದೆ? (ಬಿ) ಒಬ್ಬ ಕ್ರೈಸ್ತನು ತ್ಯಾಗಗಳನ್ನು ಮಾಡುವ ಸಿದ್ಧಮನಸ್ಸನ್ನು ಏಕೆ ಹೊಂದಿರಬೇಕು?
18 ಯೆಹೋವನ ಸೇವೆಯಲ್ಲಿ ಶ್ರದ್ಧೆ: “ನೀವು . . . ನಿಮ್ಮ ನಿರೀಕ್ಷೆ ದೃಢಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು [“ಕಾರ್ಯಮಗ್ನತೆಯನ್ನು,” NW] ತೋರಿಸಬೇಕೆಂದು ಅಪೇಕ್ಷಿಸುತ್ತೇವೆ” ಎಂದು ಪೌಲನು ಬರೆದಾಗ, ಯೆಹೋವನ ವಾಗ್ದಾನಗಳಲ್ಲಿ ಭರವಸೆಯಿಡುವುದನ್ನು ಕಾರ್ಯಮಗ್ನತೆಯೊಂದಿಗೆ ಹೋಲಿಸಿದನು. (ಇಬ್ರಿಯ 6:11) ನಾವು ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದಾದರೆ, ಆತನು ನಮಗೆ ಬೆಂಬಲವನ್ನು ನೀಡುವನು. ನಾವು ಪ್ರತಿ ಸಲ ಆ ಬೆಂಬಲವನ್ನು ಪಡೆದುಕೊಳ್ಳುವಾಗ, ಆತನಲ್ಲಿನ ನಮ್ಮ ಭರವಸೆಯು ಇನ್ನಷ್ಟು ಬಲಗೊಳ್ಳುತ್ತದೆ ಮತ್ತು ನಾವು ‘ಸ್ಥಿರಚಿತ್ತರೂ ನಿಶ್ಚಲರೂ’ ಆಗುತ್ತೇವೆ. (1 ಕೊರಿಂಥ 15:58) ನಮ್ಮ ನಂಬಿಕೆಯು ನವಚೈತನ್ಯವನ್ನು ಪಡೆದುಕೊಳ್ಳುತ್ತದೆ ಮತ್ತು ನಮ್ಮ ನಿರೀಕ್ಷೆಯು ದೃಢವಾಗುತ್ತದೆ.—ಎಫೆಸ 3:16-19.
19 ತ್ಯಾಗಗಳನ್ನು ಮಾಡುವುದರಲ್ಲಿ ಸಿದ್ಧಮನಸ್ಸು: ಯೇಸುವನ್ನು ಹಿಂಬಾಲಿಸಲಿಕ್ಕಾಗಿ ಪೌಲನು ಯಶಸ್ವಿದಾಯಕವಾದ ಜೀವನೋದ್ಯೋಗವನ್ನು ಕೈಬಿಟ್ಟನು. ಪ್ರಾಪಂಚಿಕ ದೃಷ್ಟಿಯಿಂದ ಕೆಲವೊಮ್ಮೆ ಕಷ್ಟವನ್ನು ಎದುರಿಸಿದನಾದರೂ, ಅವನು ಸರಿಯಾದ ಆಯ್ಕೆಯನ್ನು ಮಾಡಿದನು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. (1 ಕೊರಿಂಥ 4:11-13) ಯೆಹೋವನು ಸುಖಭೋಗದಿಂದ ಕೂಡಿರುವ ಜೀವನದ ಆಶ್ವಾಸನೆಯನ್ನು ಕೊಡುವುದಿಲ್ಲ, ಮತ್ತು ಕೆಲವೊಮ್ಮೆ ಆತನ ಸೇವಕರು ಕಷ್ಟತೊಂದರೆಗಳನ್ನು ಎದುರಿಸುತ್ತಾರೆ. ನಮ್ಮ ಜೀವನ ಶೈಲಿಯನ್ನು ಸರಳೀಕರಿಸಲು ಮತ್ತು ತ್ಯಾಗಗಳನ್ನು ಮಾಡಲು ನಾವು ತೋರಿಸುವ ಸಿದ್ಧಮನಸ್ಸು, ಯೆಹೋವನನ್ನು ಸೇವಿಸುವುದರಲ್ಲಿ ನಮಗಿರುವ ದೃಢಚಿತ್ತತೆಯು ಎಷ್ಟು ಬಲವಾಗಿದೆ ಎಂಬುದನ್ನು ರುಜುಪಡಿಸುತ್ತದೆ.—1 ತಿಮೊಥೆಯ 6:6-8.
20. ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡುವ ವ್ಯಕ್ತಿಗೆ ತಾಳ್ಮೆ ಮುಖ್ಯ ಏಕೆ?
20 ತಾಳ್ಮೆ: ಶಿಷ್ಯನಾದ ಯಾಕೋಬನು ಜೊತೆ ವಿಶ್ವಾಸಿಗಳನ್ನು ಹೀಗೆ ಉತ್ತೇಜಿಸಿದನು: “ಸಹೋದರರೇ, ಕರ್ತನು ಪ್ರತ್ಯಕ್ಷನಾಗುವ ತನಕ ದೀರ್ಘಶಾಂತಿಯಿಂದಿರಿ,” ಅಥವಾ ತಾಳ್ಮೆಯಿಂದಿರಿ. (ಯಾಕೋಬ 5:7) ವಿಪರೀತ ಚಟುವಟಿಕೆಯಿಂದ ಕೂಡಿರುವ ಈ ಲೋಕದಲ್ಲಿ ತಾಳ್ಮೆಯಿಂದಿರುವುದು ಕಷ್ಟ. ವಿಷಯಗಳು ಕ್ಷಿಪ್ರವಾಗಿ ಸಂಭವಿಸಬೇಕು ಎಂದು ನಾವು ಬಯಸುತ್ತೇವೆ. ಆದರೆ ಪೌಲನು, ‘ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳವರೆಗೂ ಕಾದಿದ್ದಾರೋ’ ಅಂಥವರನ್ನು ಅನುಕರಿಸುವಂತೆ ಉತ್ತೇಜಿಸುತ್ತಾನೆ. (ಇಬ್ರಿಯ 6:12) ಯೆಹೋವನಲ್ಲಿ ಕಾದುಕೊಂಡಿರಲು ಸಿದ್ಧರಾಗಿರಿ. ಪರದೈಸ್ ಭೂಮಿಯಲ್ಲಿ ನಿತ್ಯಜೀವ—ಅದಕ್ಕಾಗಿ ಕಾಯುವುದು ಖಂಡಿತವಾಗಿಯೂ ಸಾರ್ಥಕವಾಗಿದೆ!
21. (ಎ) ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡುವಾಗ ನಾವು ಏನನ್ನು ತೋರಿಸಿಕೊಡುತ್ತೇವೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
21 ಹೌದು, ಮೊದಲು ರಾಜ್ಯಕ್ಕಾಗಿ ತವಕಪಡಿರಿ ಎಂಬ ಯೇಸುವಿನ ಸಲಹೆಯು ಪ್ರಾಯೋಗಿಕವಾದದ್ದಾಗಿದೆ. ನಾವಿದನ್ನು ಮಾಡುವಾಗ, ನಾವು ನಿಜವಾಗಿಯೂ ಯೆಹೋವನಲ್ಲಿ ಭರವಸೆಯಿಟ್ಟಿದ್ದೇವೆ ಮತ್ತು ಒಬ್ಬ ಕ್ರೈಸ್ತನು ಜೀವಿಸಲಿಕ್ಕಾಗಿರುವ ಏಕಮಾತ್ರ ಸುರಕ್ಷಿತ ಮಾರ್ಗವನ್ನು ಆರಿಸಿಕೊಂಡಿದ್ದೇವೆ ಎಂಬುದನ್ನು ತೋರಿಸಿಕೊಡುತ್ತೇವೆ. ಆದರೂ, ಯೇಸು ‘ಮೊದಲು . . . [ದೇವರ] ನೀತಿಗಾಗಿ ತವಕಪಡಿರಿ’ ಎಂದ ಸಹ ಹೇಳಿದನು. ಮುಂದಿನ ಲೇಖನದಲ್ಲಿ, ಈ ಪ್ರೋತ್ಸಾಹನೆಯು ಇಂದು ಏಕೆ ವಿಶೇಷವಾಗಿ ಅವಶ್ಯವಾಗಿದೆ ಎಂಬುದನ್ನು ನಾವು ನೋಡೋಣ.
ನೀವು ವಿವರಿಸಬಲ್ಲಿರೋ?
• ಪ್ರಾಪಂಚಿಕ ವಿಷಯಗಳ ಸಂಬಂಧದಲ್ಲಿ, ಯಾವ ಸಮತೂಕತೆಯನ್ನು ಇಟ್ಟುಕೊಳ್ಳುವಂತೆ ಯೇಸು ಪ್ರೋತ್ಸಾಹಿಸಿದನು?
• ಒಂಟೆ ಮತ್ತು ಸೂಜಿಯ ಕಣ್ಣಿನ ಕುರಿತಾದ ಯೇಸುವಿನ ಸಾಮ್ಯದಿಂದ ನಾವೇನನ್ನು ಕಲಿಯುತ್ತೇವೆ?
• ಮೊದಲು ದೇವರ ರಾಜ್ಯಕ್ಕಾಗಿ ತವಕಪಡುವಂತೆ ಯಾವ ಕ್ರೈಸ್ತ ಗುಣಗಳು ನಮಗೆ ಸಹಾಯಮಾಡುತ್ತವೆ?
[ಪುಟ 21ರಲ್ಲಿರುವ ಚಿತ್ರ]
ಯೇಸುವಿನ ಮಾತುಗಳಿಗೆ ಕಿವಿಗೊಟ್ಟ ಅನೇಕರು ಬಡವರಾಗಿದ್ದರು
[ಪುಟ 23ರಲ್ಲಿರುವ ಚಿತ್ರ]
ಯೇಸುವಿನ ಸಾಮ್ಯದಲ್ಲಿನ ವ್ಯಾಪಾರಿಯು ಅಮೂಲ್ಯವಾದ ಒಂದು ಮುತ್ತಿಗಾಗಿ ತನ್ನ ಬದುಕನ್ನೆಲ್ಲ ತ್ಯಾಗಮಾಡಿದನು
[ಪುಟ 23ರಲ್ಲಿರುವ ಚಿತ್ರ]
ಆ ಐಶ್ವರ್ಯವಂತ ಯುವ ವ್ಯಕ್ತಿಯು ದೇವರಿಗಿಂತ ಹೆಚ್ಚಾಗಿ ತನ್ನ ಆಸ್ತಿಪಾಸ್ತಿಯನ್ನು ಪ್ರೀತಿಸಿದನು
[ಪುಟ 24ರಲ್ಲಿರುವ ಚಿತ್ರ]
ನಾವು ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದಾದರೆ, ಆತನು ನಮಗೆ ಬೆಂಬಲವನ್ನು ನೀಡುವನು