ಶಾಸ್ತ್ರವಚನಗಳಿಂದ ನೀವು ವಿವೇಚಿಸುತ್ತೀರೊ?
1 ಯುದ್ಧಕ್ಕೆ ಹೋಗುತ್ತಿರುವ ಒಬ್ಬ ಅನುಭವಸ್ಥ ಸೈನಿಕನು ಸಂಪೂರ್ಣವಾಗಿ ಸಶಸ್ತ್ರನೂ, ರಕ್ಷಿತನೂ ಆಗಿರುವನು. ಒಂದು ದೊಡ್ಡ ನಿರ್ಮಾಣ ಯೋಜನೆಯ ಮೇಲೆ ಕೆಲಸಮಾಡಲು ತಯಾರಿಸುತ್ತಿರುವ ಒಬ್ಬ ನಿಪುಣ ಕರಕುಶಲಿಯು, ಕೆಲಸವನ್ನು ಪೂರ್ಣಗೊಳಿಸಲು ಅವನಿಗೆ ಬೇಕಾದ ಸಾಧನಗಳನ್ನು ಒಯ್ಯುವನು. ಕ್ಷೇತ್ರ ಸೇವೆಯಲ್ಲಿ ತೊಡಗಿರುವ ಯೆಹೋವನ ಒಬ್ಬ ಸೇವಕನು ಕೈಯಲ್ಲಿ ಅವನ “ಕತ್ತಿಯನ್ನು” ಹಿಡಿದಿರುವನು ಮತ್ತು ಅವನಿಗೆ ಅವಕಾಶ ಇರುವಾಗಲ್ಲೆಲ್ಲಾ ಅದನ್ನು ನೈಪುಣ್ಯದಿಂದ ಪ್ರಯೋಗಿಸುವನು. (ಎಫೆ. 6:17) ಇದು ವೈಯಕ್ತಿಕವಾಗಿ ನಿಮ್ಮ ಕುರಿತು ನಿಜವಾಗಿದೆಯೊ? ನೀವು ಸೇವೆಯಲ್ಲಿ ಭಾಗವಹಿಸುವಾಗ, ನಿಮ್ಮ ಕೇಳುಗರ ಹೃದಯವನ್ನು ಪವಿತ್ರಾತ್ಮವು ಸ್ಪರ್ಶಿಸಸಾಧ್ಯವಾಗುವಂತೆ ದೇವರ ವಾಕ್ಯವು ಮಾತಾಡುವಂತೆ ನೀವು ಬಿಡುತ್ತೀರೊ?—ಜ್ಞಾನೋ. 8:1, 6.
2 ಸಾರುವುದು ಯಾವಾಗಲೂ ಒಂದು ಸರಳವಾದ ಕೆಲಸವಲ್ಲ. ಕೆಲವು ಟೆರಿಟೊರಿಯಲ್ಲಿ ಜನರು ಮನೆಯಲ್ಲಿ ಅಪರೂಪವಾಗಿ ಇರುತ್ತಾರೆ, ಮತ್ತು ಮನೆಯಲ್ಲಿ ಇರುವವರು ಅನೇಕ ಬಾರಿ ಕಾರ್ಯಮಗ್ನರಾಗಿದ್ದು, ವಿಸ್ತಾರವಾದ ಬೈಬಲ್ ಚರ್ಚೆಗಳಿಗೆ ಕಡಿಮೆ ಅವಕಾಶವನ್ನು ನೀಡುತ್ತಾರೆ. ಬೈಬಲ್ ನಮ್ಮ ಪ್ರಧಾನ ಪಠ್ಯಪುಸ್ತಕವಾಗಿರುವುದರಿಂದ, ಅದನ್ನು ಸೇವೆಯಲ್ಲಿ ಹೆಚ್ಚಾಗಿ ಉಪಯೋಗಿಸಿ ನಮ್ಮ ಕೇಳುಗರನ್ನು ಅದರ ಪ್ರೇರಿತ ಸಂದೇಶವು ಪ್ರಭಾವಿಸುವಂತೆ ನಾವು ಹೇಗೆ ಅನುಮತಿಸಬಲ್ಲೆವು?
3 ಪ್ರತಿಯೊಂದು ಸಂದರ್ಭದಲ್ಲಿ: ಪ್ರತಿಯೊಂದು ಬಾಗಿಲಿನಲ್ಲಿ, ಮನೆಯವನನ್ನು ಪ್ರಚೋದಿಸಲು ನಾವು ಬೈಬಲನ್ನು ಉಪಯೋಗಿಸಲು ಬಯಸುತ್ತೇವೆ. ನೀಡಲ್ಪಡುತ್ತಿರುವ ಸಾಹಿತ್ಯವು ಯಾವುದೇ ಆಗಿರಲಿ, ನಾವಿದನ್ನು ನೀಡಲು ಸಿದ್ಧರಾಗಿರಬೇಕು. ವ್ಯಕ್ತಿಯು ಕಾರ್ಯಮಗ್ನನಾಗಿದ್ದು, ಬೈಬಲನ್ನು ತೆರೆದು ಒಂದು ಯಾ ಎರಡು ವಚನವನ್ನು ಓದಲು ಸಾಕಷ್ಟು ಸಮಯವಿರದಿದ್ದರೆ, ಸಾಹಿತ್ಯವನ್ನು ನೀಡುವ ಮುಂಚೆ ಒಂದು ವಚನವನ್ನು ನೀವು ಉದ್ಧರಿಸಿ ಯಾ ಅದರ ವಿವರಣೆಯನ್ನು ಕೊಡಬಲ್ಲಿರೊ? ಅದು ತಾನೇ ವ್ಯಕ್ತಿಯು ನಿಂತು ಆಲಿಸುವಂತೆ ಮಾಡಬಹುದು.—ಇಬ್ರಿ. 4:12.
4 ಉದಾಹರಣೆಗೆ, “ರೋಗರಹಿತವಾದ ಒಂದು ಲೋಕ” ಎಂಬ ಲೇಖನವಿರುವ ದಶಂಬರ 8, 1993ರ ಎವೇಕ್! ಪತ್ರಿಕೆಯನ್ನು ನೀವು ಪ್ರದರ್ಶಿಸುವಲ್ಲಿ, ಮುಖಪುಟದಲ್ಲಿರುವ ದೃಷ್ಟಾಂತವನ್ನು ಸೂಚಿಸಿದ ಅನಂತರ, “ರೋಗಕ್ಕೆ ಎಂದಾದರೂ ಒಂದು ಕೊನೆ ಇರುವುದೆಂದು, ಎಲ್ಲರೂ ಹುರುಪುಳ್ಳ ಆರೋಗ್ಯವನ್ನು ಆನಂದಿಸುವ ಒಂದು ಸಮಯ ಇರುವುದೆಂದು ನೀವು ನಂಬುತ್ತೀರೊ? ಎಂಬ ಪ್ರಶ್ನೆಯನ್ನು ಎಬ್ಬಿಸಿರಿ.” ಪ್ರತಿಕ್ರಿಯೆಯು ಏನೇ ಆಗಿರಲಿ, ಯೆಶಾಯ 33:24 ಯಾ ಪ್ರಕಟನೆ 21:4 ರಂಥ ಒಂದು ವಚನವನ್ನು ನೇರವಾಗಿ ನಿಮ್ಮ ಬೈಬಲಿನಿಂದ ನೀವು ಓದಶಕ್ತರಾಗಬಹುದು ಯಾ ವಿವರಿಸಬಹುದು. ಈ ರೀತಿಯಲ್ಲಿ ದೇವರ ವಾಕ್ಯವು ಮಾತಾಡುವಂತೆ ನೀವು ಬಿಡುತ್ತೀರಿ.
5 ಪುನಃ ಸಂದರ್ಶನಗಳಲ್ಲಿ: ಪುನಃ ಸಂದರ್ಶನಗಳನ್ನು ಮಾಡುವ ಮೊದಲು ನಾವು ತಯಾರಿಸಬೇಕು. ಅನೇಕ ಬಾರಿಯಾದರೊ, ಚರ್ಚಿಸಲು ನಾವು ತಯಾರಿಸದ ವಿಷಯಗಳು ಏಳುತ್ತವೆ. ಇಂತಹ ಸಮಯದಲ್ಲಿ ರೀಸನಿಂಗ್ ಫ್ರಾಮ್ ದ ಸ್ಕ್ರಿಪ್ಚರ್ಸ್ ಅಮೂಲ್ಯವಾದ ಒಂದು ಸಾಧನವಾಗಿ ಪರಿಣಮಿಸಬಲ್ಲದು. ರೀಸನಿಂಗ್ ಪುಸ್ತಕದಿಂದ ಬೆಂಬಲಿಸುವ ವಚನಗಳ ನಮ್ಮ ಉದ್ಧರಿಸುವಿಕೆ ಯಾ ಓದುವಿಕೆಯು, ನಾವು ದೇವರ ಶುಶ್ರೂಷಕರೂ, ವಾಕ್ಯದ ಕಲಬೆರಕೆ ಮಾಡದವರೂ ಎಂಬುದನ್ನು ಜನರು ನೋಡುವಂತೆ ಸಹಾಯ ಮಾಡುವುದು.—2 ಕೊರಿಂ. 2:17.
6 ಯಾವ ನಿರ್ದಿಷ್ಟವಾದ ವಿಷಯವೂ ಚರ್ಚಿಸಲ್ಪಟ್ಟಿರದ ಸ್ಥಳದಲ್ಲಿ ಪುನಃ ಭೇಟಿಯಾಗುವಾಗ, “ಯೇಸು ಕ್ರಿಸ್ತನು,” “ಕಡೇ ದಿನಗಳು,” ಯಾ “ಪುನರುತ್ಥಾನ,” ದಂಥ ಒಂದು ಸೂಕ್ತವಾದ ವಿಷಯಕ್ಕೆ ರೀಸನಿಂಗ್ ಪುಸ್ತಕವನ್ನು ನೀವು ತೆರೆದು, ಚರ್ಚೆಯನ್ನು ಆರಂಭಿಸಲು ಉಪಶೀರ್ಷಿಕೆಗಳಲ್ಲಿ ಒಂದನ್ನು ಉಪಯೋಗಿಸಬಹುದು. ಮನೆಯವರು ತಮ್ಮ ಸ್ವಂತ ಬೈಬಲಿನಿಂದ ಕೆಲವೊಂದು ವಚನಗಳನ್ನು ಓದುವಂತೆ ಆಮಂತ್ರಿಸಲ್ಪಡಬಹುದು. ಆ ರೀತಿಯಲ್ಲಿ, ಬೈಬಲ್ ಅವರಿಗೆ ಅಭಿರುಚಿಯುಳ್ಳದ್ದೂ, ಅರ್ಥಭರಿತವೂ ಆಗಿರುವುದು, ಮತ್ತು ಅವರು ನೀತಿಯ ಪ್ರವೃತ್ತಿಯುಳ್ಳವರಾಗಿದ್ದರೆ ಯೆಹೋವನ ಪವಿತ್ರಾತ್ಮವು ಹರಿಯುವುದು.
7 ಸುವಾರ್ತೆಯನ್ನು ಸಾರಲು ಮತ್ತು ದುಷ್ಟರನ್ನು ಎಚ್ಚರಿಸಲು ಇರುವ ನಮ್ಮ ಜವಾಬ್ದಾರಿಯು ಗಂಭೀರವಾದದ್ದು. ಅದು ನಮ್ಮದಲ್ಲ, ಯೆಹೋವನ ಸಂದೇಶವಾಗಿದೆ. ಆತ್ಮದ ಕತಿಯ್ತಾದ ಆತನ ವಾಕ್ಯವು ನಿಮಗೆ ಸಹಾಯ ಮಾಡಲಿ.