ನಿಮ್ಮ ಸಂಬಂಧಿಕರ ಕುರಿತಾಗಿ ಏನು?
1 ನಮ್ಮಲ್ಲಿ ಹೆಚ್ಚಿನವರಿಗೆ ಸತ್ಯದಲ್ಲಿಲ್ಲದಿರುವ ಅನೇಕ ಸಂಬಂಧಿಕರಿದ್ದಾರೆ. ಅಂತಹ ಪ್ರಿಯ ಜನರು, ಜೀವನದ ಮಾರ್ಗದಲ್ಲಿ ನಮ್ಮೊಂದಿಗೆ ಜೊತೆಗೂಡುವಂತೆ ನಾವೆಷ್ಟು ಬಯಸುತ್ತೇವೆ! ಅವರು ನಮ್ಮ ಸ್ವಂತ ಮನೆವಾರ್ತೆಯ ಸದಸ್ಯರಾಗಿರುವಾಗ, ಅವರ ಅನಂತ ಭವಿಷ್ಯತ್ತಿನ ಕುರಿತಾದ ನಮ್ಮ ಚಿಂತೆಯು ಇನ್ನೂ ಹೆಚ್ಚಾಗಿರುತ್ತದೆ. ಅವರು ಸತ್ಯದಲ್ಲಿ ಆಸಕ್ತಿಯನ್ನು ಪಡೆದುಕೊಳ್ಳುವಂತೆ ನಾವು ಅನೇಕ ವರ್ಷಗಳಿಂದ ಪ್ರಯತ್ನಿಸಿರುವುದಾದರೂ, ಸ್ಥಿತಿಯು ನಿರೀಕ್ಷಾಹೀನವೆಂದು ನಾವು ತೀರ್ಮಾನಿಸಬಾರದು.
2 ಯೇಸು ತನ್ನ ಸಾರುವಿಕೆಯನ್ನು ಮಾಡಿದಾಗ, “ಆತನ ಅಣ್ಣತಮ್ಮಂದಿರು ಸಹ ಆತನನ್ನು ನಂಬದೆ ಇದ್ದರು.” (ಯೋಹಾ. 7:5) ಒಂದು ಹಂತದಲ್ಲಿ, ಅವನಿಗೆ ಹುಚ್ಚುಹಿಡಿದಿದೆಯೆಂದು ಅವನ ಸಂಬಂಧಿಕರು ನೆನಸಿದರು. (ಮಾರ್ಕ 3:21) ಆದರೂ, ಯೇಸು ಅವರ ವಿಷಯದಲ್ಲಿ ಬಿಟ್ಟುಕೊಡಲಿಲ್ಲ. ಸಮಯಾನಂತರ, ಅವನ ಸಹೋದರರು ಸತ್ಯವನ್ನು ಸ್ವೀಕರಿಸಿದರು. (ಅ. ಕೃ. 1:14) ಅವನ ಮಲಸಹೋದರನಾದ ಯಾಕೋಬನು, ಕ್ರೈಸ್ತ ಸಭೆಯಲ್ಲಿ ಒಂದು ಸ್ತಂಭವಾಗಿ ಪರಿಣಮಿಸಿದನು. (ಗಲಾ. 1:18, 19; 2:9) ನಿಮ್ಮ ಸಂಬಂಧಿಕರು ಸತ್ಯವನ್ನು ಸ್ವೀಕರಿಸುವುದನ್ನು ನೋಡುವ ಆನಂದವನ್ನು ನೀವು ಪಡೆಯಲಿಚ್ಛಿಸುತ್ತೀರಾದರೆ, ರಾಜ್ಯದ ಸುವಾರ್ತೆಯನ್ನು ಅವರಿಗೆ ತಲಪಿಸಲು ಪ್ರಯತ್ನಿಸುವುದನ್ನು ನಿಲ್ಲಿಸಬೇಡಿರಿ.
3 ಚೈತನ್ಯದಾಯಕರಾಗಿರಿ, ಕಂಗೆಡಿಸುವವರಲ್ಲ: ಯೇಸು ಇತರರಿಗೆ ಸಾರಿದಾಗ, ಅವನ ಕೇಳುಗರಿಗೆ ದಬಾಯಿಸಲ್ಪಟ್ಟ ಅನಿಸಿಕೆಯಲ್ಲ, ಬದಲಾಗಿ ಚೈತನ್ಯಗೊಳಿಸಲ್ಪಟ್ಟ ಅನಿಸಿಕೆಯಾಯಿತು. (ಮತ್ತಾ. 11:28, 29) ಅವರು ಗ್ರಹಿಸಸಾಧ್ಯವಿರದ ಬೋಧನೆಗಳಿಂದ ಅವನು ಅವರನ್ನು ಕಂಗೆಡಿಸಲಿಲ್ಲ. ಸತ್ಯದ ನೀರುಗಳಿಂದ ನಿಮ್ಮ ಸಂಬಂಧಿಕರನ್ನು ಚೈತನ್ಯಗೊಳಿಸಲು, ಅವರಿಗೆ ಒಂದು ಸಲಕ್ಕೆ ಒಂದು ಕಪ್ನಷ್ಟು ನೀರನ್ನು ಕೊಡಿರಿ, ಬಕೆಟ್ ತುಂಬ ನೀರನ್ನಲ್ಲ! ಒಬ್ಬ ಸಂಚರಣ ಮೇಲ್ವಿಚಾರಕನು ಅವಲೋಕಿಸಿದ್ದು: “ಚಿಕ್ಕ ಮತ್ತು ಸ್ಥಿರವಾದ ಗುಟುಕುಗಳಲ್ಲಿ ಸಾಕ್ಷಿನೀಡುವ ಮೂಲಕ, ತಮ್ಮ ಸಂಬಂಧಿಕರಲ್ಲಿ ಕುತೂಹಲವನ್ನು ಎಬ್ಬಿಸುವವರಿಂದ ಅತ್ಯುತ್ತಮ ಫಲಿತಾಂಶಗಳು ಸಾಧಿಸಲ್ಪಡುತ್ತವೆ.” ಈ ರೀತಿಯಲ್ಲಿ, ವಿರೋಧಿಗಳು ಸಹ ಪ್ರಶ್ನೆಗಳನ್ನು ಕೇಳಲು ಆರಂಭಿಸಬಹುದು ಮತ್ತು ಕಟ್ಟಕಡೆಗೆ ಸತ್ಯಕ್ಕಾಗಿ ಒಂದು ದಾಹವನ್ನು ವಿಕಸಿಸಿಕೊಳ್ಳಬಹುದು.—1 ಪೇತ್ರ 2:2; ಹೋಲಿಸಿರಿ 1 ಕೊರಿಂಥ 3:1, 2.
4 ಅನೇಕ ವಿವಾಹಿತ ಕ್ರೈಸ್ತರು, ತಮ್ಮ ಅವಿಶ್ವಾಸಿ ಸಂಗಾತಿಗಳ ಆಸಕ್ತಿಯನ್ನು ಕೆರಳಿಸಬಹುದಾದ ವಿಷಯವಿರುವಂತಹ ಪುಟಕ್ಕೆ ಸಾಹಿತ್ಯವನ್ನು ತೆರೆದಿಡುವ ಮೂಲಕ, ಅವರಿಗೆ ಪರಿಣಾಮಕಾರಿಯಾಗಿ ಸಾಕ್ಷಿ ನೀಡಿದ್ದಾರೆ. ಇದನ್ನು ಮಾಡಿದಂತಹ ಒಬ್ಬ ಸಹೋದರಿಯು, ತನ್ನ ಗಂಡನಿಗೆ ಕೇಳಿಸಬಹುದಾದಷ್ಟು ಅಂತರದಲ್ಲಿ ತನ್ನ ಮಕ್ಕಳೊಂದಿಗೆ ಒಂದು ಅಭ್ಯಾಸವನ್ನೂ ನಡಿಸಿದಳು. ಆಗ ಅವಳು ಅವನಿಗೆ ಪ್ರಯೋಜನ ತರಬಹುದಾದ ವಿವರಣೆಗಳನ್ನು ಕೊಡುತ್ತಿದ್ದಳು. ಕೆಲವೊಮ್ಮೆ ಅವಳು ಅವನಿಗೆ ಹೀಗೆ ಕೇಳುತ್ತಿದ್ದಳು: “ನಾನು ಇಂಥಿಂಥ ವಿಷಯವನ್ನು ಇಂದು ನನ್ನ ಅಭ್ಯಾಸದಲ್ಲಿ ಕಲಿತುಕೊಂಡೆ. ನೀವು ಅದರ ಕುರಿತಾಗಿ ಏನು ನೆನಸುತ್ತೀರಿ?” ಕೊನೆಗೂ ಅವಳ ಗಂಡನು ಸತ್ಯವನ್ನು ಸ್ವೀಕರಿಸಿದನು.
5 ಗೌರವಪೂರ್ಣರಾಗಿರಿ, ತಾಳ್ಮೆಗೆಟ್ಟವರಲ್ಲ: “ಸಂಬಂಧಿಕರಿಗೂ ತಮ್ಮ ಸ್ವಂತ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳು ಇರುವ ಹಕ್ಕಿದೆ” ಎಂದು ಒಬ್ಬ ಪ್ರಚಾರಕಳು ಹೇಳಿಕೆಯನ್ನಿತ್ತಳು. ಆದುದರಿಂದ ಅವರು ತಮ್ಮ ವಿಚಾರಗಳನ್ನು ಹೇಳುವಾಗ, ಅಥವಾ ನಾವು ಅವರೊಂದಿಗೆ ಸತ್ಯದ ಕುರಿತಾಗಿ ಮಾತಾಡಬಾರದೆಂದು ನಿರ್ದಿಷ್ಟವಾಗಿ ನಮ್ಮನ್ನು ಕೇಳಿಕೊಳ್ಳುವಾಗ, ನಾವು ಗೌರವವನ್ನು ತೋರಿಸಬೇಕು. (ಪ್ರಸಂ. 3:7; 1 ಪೇತ್ರ 3:15) ತಾಳ್ಮೆಯಿಂದಿರುವ ಮೂಲಕ ಮತ್ತು ಪ್ರೀತಿಪರರೂ ಒಳ್ಳೆಯ ಕೇಳುಗರೂ ಆಗಿರುವ ಮೂಲಕ, ಒಂದು ನಯವಾದ ಸಾಕ್ಷಿಯನ್ನು ಕೊಡಲು ನಾವು ಸೂಕ್ತವಾದ ಅವಕಾಶಗಳಿಗಾಗಿ ಹುಡುಕಸಾಧ್ಯವಿದೆ. ಅಂತಹ ತಾಳ್ಮೆಯು ಪ್ರತಿಫಲದಾಯಕವಾಗಿರಸಾಧ್ಯವಿದೆ. ಇದನ್ನು, 20 ವರ್ಷಗಳ ವರೆಗೆ ತನ್ನ ಅವಿಶ್ವಾಸಿ ಹೆಂಡತಿಯ ದುರುಪಚಾರವನ್ನು ತಾಳ್ಮೆಯಿಂದ ಸಹಿಸಿಕೊಂಡ ಒಬ್ಬ ಕ್ರೈಸ್ತ ಗಂಡನ ವಿಷಯದಲ್ಲಿ ನೋಡಲಾಯಿತು. ಅವಳು ಬದಲಾಗಲು ಆರಂಭಿಸಿದ ಕೂಡಲೆ ಅವನು ಹೇಳಿದ್ದು: “ದೀರ್ಘಶಾಂತಿಯನ್ನು ಬೆಳೆಸಿಕೊಳ್ಳಲು ನನಗೆ ಸಹಾಯ ಮಾಡಿದ್ದಕ್ಕಾಗಿ ನಾನು ಯೆಹೋವನಿಗೆ ಎಷ್ಟು ಕೃತಜ್ಞನಾಗಿದ್ದೇನೆ. ಯಾಕಂದರೆ ನಾನು ಈಗ ಪರಿಣಾಮವನ್ನು ನೋಡಸಾಧ್ಯವಿದೆ: ನನ್ನ ಹೆಂಡತಿಯು ಜೀವದ ಮಾರ್ಗದಲ್ಲಿ ನಡೆಯಲು ಆರಂಭಿಸಿದ್ದಾಳೆ!”
6 ನಿಮ್ಮ ಸಂಬಂಧಿಕರ ಕುರಿತಾಗಿ ಏನು? ನಿಮ್ಮ ಒಳ್ಳೆಯ ಕ್ರೈಸ್ತ ನಡತೆ ಮತ್ತು ಅವರ ಪರವಾಗಿರುವ ನಿಮ್ಮ ಪ್ರಾರ್ಥನೆಗಳ ಮೂಲಕ, “ನೀವು ಅವರನ್ನು ಯೆಹೋವನ ಕಡೆಗೆ ಒಲಿಸಿಕೊಳ್ಳುವ” ಸಂಭವವಿದೆ.—1 ಪೇತ್ರ 3:1, 2, NW ಪಾದಟಿಪ್ಪಣಿ.