ಯೆಹೋವನ ಸಾಕ್ಷಿಗಳು—ನಿಜ ಸೌವಾರ್ತಿಕರು
1 ಯೇಸು ಕ್ರಿಸ್ತನು, ಸುವಾರ್ತೆಯನ್ನು ಬೋಧಿಸುವ ಹೊಣೆಯನ್ನು ತನ್ನ ಎಲ್ಲ ಶಿಷ್ಯರ ಮೇಲೆ ಹಾಕಿ, ರಾಜ್ಯದ ಸುವಾರ್ತೆಯನ್ನು ಸಾರುವಂತೆ ಅವರಿಗೆ ನಿರ್ದಿಷ್ಟವಾಗಿ ಆದೇಶಿಸಿದನು. (ಮತ್ತಾ. 24:14; ಅ. ಕೃ. 10:42) ಅವನ ಆರಂಭದ ಶಿಷ್ಯರು, ರಾಜ್ಯದ ಕುರಿತು ಆರಾಧನೆಯ ಸ್ಥಳಗಳಲ್ಲಿ ಮಾತ್ರವಲ್ಲ, ಜನರನ್ನು ಸಂಧಿಸಿದಾಗಲೆಲ್ಲ—ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಯಿಂದ ಮನೆಗೆ—ಎಡೆಬಿಡದೆ ಮಾತಾಡಿದಂತೆ, ಈ ವಿಷಯದಲ್ಲಿ ಮಾದರಿಯನ್ನಿಟ್ಟರು. (ಅ. ಕೃ. 5:42; 20:20) ಇಂದು ಯೆಹೋವನ ಸಾಕ್ಷಿಗಳೋಪಾದಿ, ರಾಜ್ಯದ ಸಂದೇಶವನ್ನು 232 ದೇಶಗಳಲ್ಲಿ ಸಾರುತ್ತಾ, ಕಳೆದ ಮೂರು ವರ್ಷಗಳಲ್ಲಿಯೇ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಹೊಸ ಶಿಷ್ಯರಿಗೆ ದೀಕ್ಷಾಸ್ನಾನ ಮಾಡಿಸುತ್ತಾ, ನಾವು ನಿಜ ಕ್ರೈಸ್ತ ಸೌವಾರ್ತಿಕರೆಂದು ತೋರಿಸಿಕೊಟ್ಟಿದ್ದೇವೆ! ನಮ್ಮ ಸೌವಾರ್ತಿಕ ಕೆಲಸವು ಏಕೆ ಇಷ್ಟೊಂದು ಯಶಸ್ವಿಕರವಾಗಿ ಪರಿಣಮಿಸಿದೆ?
2 ಸುವಾರ್ತೆಯು ನಮ್ಮನ್ನು ಹುರಿದುಂಬಿಸುತ್ತದೆ: ಸೌವಾರ್ತಿಕರು, ಸುವಾರ್ತೆಯನ್ನು ಸಾರುವವರು ಇಲ್ಲವೆ ಸುವಾರ್ತೆಯ ಸಂದೇಶವಾಹಕರಾಗಿದ್ದಾರೆ. ಹೀಗಿರುವುದರಿಂದ, ನಮಗೆ ಯೆಹೋವನ ರಾಜ್ಯದ ಕುರಿತು ಪ್ರಕಟಿಸುವ ಉತ್ಸಾಹಕರ ಸುಯೋಗವಿದೆ—ಸಂಕಟಕ್ಕೀಡಾಗಿರುವ ಮಾನವಕುಲಕ್ಕೆ ನೀಡಸಾಧ್ಯವಿರುವ ಏಕಮಾತ್ರ ನಿಜ ಸುವಾರ್ತೆ. ಬರಲಿರುವ ಪ್ರಮೋದವನದಲ್ಲಿ, ನಂಬಿಗಸ್ತ ಮಾನವಕುಲದಿಂದ ರಚಿತವಾದ ಹೊಸ ಭೂಮಿಯನ್ನು ನೀತಿಯುತವಾಗಿ ಆಳಲಿರುವ ಹೊಸ ಆಕಾಶಮಂಡಲದ ಕುರಿತು ನಾವು ಮುಂಚಿತವಾಗಿ ಪಡೆದುಕೊಂಡಿರುವ ಜ್ಞಾನದ ಬಗ್ಗೆ ನಾವು ತೀರ ಅತ್ಯುತ್ಸಾಹಿಗಳಾಗಿದ್ದೇವೆ. (2 ಪೇತ್ರ 3:13, 17) ನಾವು ಮಾತ್ರವೇ ಈ ನಿರೀಕ್ಷೆಯನ್ನು ಅಂಗೀಕರಿಸಿದ್ದೇವೆ, ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ನಾವು ಆತುರರಾಗಿದ್ದೇವೆ.
3 ನಿಜ ಪ್ರೀತಿಯು ನಮ್ಮನ್ನು ಪ್ರಚೋದಿಸುತ್ತದೆ: ಸೌವಾರ್ತಿಕ ಕೆಲಸವು ಜೀವರಕ್ಷಕ ಕೆಲಸವಾಗಿದೆ. (ರೋಮಾ. 1:16) ಆದುದರಿಂದಲೇ ರಾಜ್ಯದ ಸಂದೇಶವನ್ನು ಹರಡಿಸುವುದರಲ್ಲಿ ನಾವು ಮಹಾ ಆನಂದವನ್ನು ಅನುಭವಿಸುತ್ತೇವೆ. ನಿಜ ಸೌವಾರ್ತಿಕರೋಪಾದಿ ನಾವು ಜನರನ್ನು ಪ್ರೀತಿಸುತ್ತೇವೆ, ಮತ್ತು ಅವರೊಂದಿಗೆ—ನಮ್ಮ ಕುಟುಂಬಗಳು, ನೆರೆಯವರು, ಪರಿಚಿತರು, ಮತ್ತು ಸಾಧ್ಯವಿರುವಷ್ಟು ಇತರ ಅನೇಕರೊಂದಿಗೆ—ಸುವಾರ್ತೆಯನ್ನು ಹಂಚಿಕೊಳ್ಳುವಂತೆ ಅದು ನಮ್ಮನ್ನು ಪ್ರೇರಿಸುತ್ತದೆ. ಈ ಕೆಲಸವನ್ನು ಪೂರ್ಣಪ್ರಾಣದಿಂದ ಮಾಡುವುದು, ಇತರರಿಗಾಗಿರುವ ನಮ್ಮ ನಿಜವಾದ ಪ್ರೀತಿಯ ವಿಷಯದಲ್ಲಿ ನಾವು ಮಾಡಸಾಧ್ಯವಿರುವ ಅತ್ಯುತ್ತಮ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ.—1 ಥೆಸ. 2:8.
4 ದೇವರ ಆತ್ಮವು ನಮ್ಮನ್ನು ಸಮರ್ಥಿಸುತ್ತದೆ: ರಾಜ್ಯದ ಬೀಜವನ್ನು ನೆಡುವ ಮತ್ತು ನೀರೆರೆಯುವ ನಮ್ಮ ಕೆಲಸವನ್ನು ನಾವು ಮಾಡುವಾಗ, ‘ಅದನ್ನು ಬೆಳೆಸು’ವವನು ಯೆಹೋವನಾಗಿದ್ದಾನೆಂದು ದೇವರ ವಾಕ್ಯವು ನಮಗೆ ಆಶ್ವಾಸನೆ ನೀಡುತ್ತದೆ. ಇಂದು ನಮ್ಮ ಸಂಸ್ಥೆಯಲ್ಲಿ ಅದು ತಾನೇ ನಿಖರವಾಗಿ ಸಂಭವಿಸುತ್ತಿರುವುದನ್ನು ನಾವು ನೋಡುತ್ತೇವೆ. (1 ಕೊರಿಂ. 3:5-7) ನಮ್ಮ ಸೌವಾರ್ತಿಕ ಚಟುವಟಿಕೆಯಲ್ಲಿ ನಮ್ಮನ್ನು ಸಮರ್ಥಿಸಿ, ಬಹಳಷ್ಟು ಯಶಸ್ಸನ್ನು ಕೊಡುವಂತಹದ್ದು ದೇವರ ಆತ್ಮವೇ.—ಯೋವೇ. 2:28, 29.
5 ಎರಡನೆಯ ತಿಮೊಥೆಯ 4:5ರಲ್ಲಿರುವ “ಸೌವಾರ್ತಿಕನ ಕೆಲಸವನ್ನು ಮಾಡು” ಎಂಬ ಉತ್ತೇಜನದ ನೋಟದಲ್ಲಿ, ಮತ್ತು ಎಲ್ಲ ಜನರಿಗಾಗಿರುವ ನಮ್ಮ ಪ್ರೀತಿಯ ಕಾರಣ—ಯೆಹೋವನು ನಮ್ಮ ಕೆಲಸವನ್ನು ಆಶೀರ್ವದಿಸುತ್ತಾ ಇರುವನೆಂಬ ಭರವಸೆಯೊಂದಿಗೆ—ಪ್ರತಿಯೊಂದು ಸಂದರ್ಭದಲ್ಲಿ ಹುರಿದುಂಬಿಸುವ ರಾಜ್ಯದ ಸುವಾರ್ತೆಯನ್ನು ಹಂಚುವಂತೆ ನಾವು ಪ್ರಚೋದಿಸಲ್ಪಡುವಂತಾಗಲಿ.