ನಾವು ಪುನಃ ಪುನಃ ಭೇಟಿಮಾಡಬೇಕು
1 ನಿಮಗೆ ಸುವಾರ್ತೆಯ ಕುರಿತು ಪ್ರಥಮ ಬಾರಿ ಯಾರೋ ಒಬ್ಬರು ತಿಳಿಸಿದಾಗಲೇ ನೀವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದಿರೋ? ನೀವು ಹಾಗೆ ಪ್ರತಿಕ್ರಿಯಿಸದಿದ್ದಲ್ಲಿ, ಒಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸುವ ತನಕವೂ ಯೆಹೋವನ ಸಾಕ್ಷಿಗಳು ನಿಮ್ಮನ್ನು ಪುನಃ ಪುನಃ ಭೇಟಿಮಾಡಿದ್ದಕ್ಕಾಗಿ ನೀವು ಆಭಾರಿಯಾಗಿರಬೇಕು. ನಿಮಗೆ ನೇಮಿಸಲ್ಪಟ್ಟಿರುವ ಟೆರಿಟೊರಿಯಲ್ಲಿ ನೀವು ಪದೇ ಪದೇ ಕಾರ್ಯಮಾಡುವಾಗ ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು.
2 ಜನರ ಜೀವಿತಗಳಲ್ಲಿ ಯಾವಾಗಲೂ ಬದಲಾವಣೆಗಳಾಗುತ್ತಿರುತ್ತವೆ. ಅವರು ಹೊಸ ಸಮಸ್ಯೆಗಳನ್ನು ಅಥವಾ ಪರಿಸ್ಥಿತಿಗಳನ್ನು ಎದುರಿಸುತ್ತಾರೆ, ಸಮಾಜದಲ್ಲಿ ಅಥವಾ ಲೋಕದಲ್ಲಿನ ಶಾಂತಿಯನ್ನು ಕದಡುವ ಘಟನೆಗಳ ಕುರಿತು ಕೇಳಿಸಿಕೊಳ್ಳುತ್ತಾರೆ, ಆರ್ಥಿಕ ಕುಸಿತದಿಂದ ಬಳಲಿಬೆಂಡಾಗುತ್ತಾರೆ ಇಲ್ಲವೇ ಕುಟುಂಬದಲ್ಲಿ ಅಸ್ವಸ್ಥತೆ ಅಥವಾ ಮರಣವನ್ನು ಅನುಭವಿಸುತ್ತಾರೆ. ಇಂಥ ವಿಷಯಗಳು, ಈ ಕಷ್ಟದುಃಖಗಳಿಗೆ ಕಾರಣವೇನೆಂಬುದನ್ನು ತಿಳಿದುಕೊಳ್ಳುವಂತೆ ಅವರನ್ನು ಮುನ್ನಡೆಸಬಹುದು. ಜನರ ಮನಸ್ಸನ್ನು ಕುಗ್ಗಿಸುವಂತಹ ಅಂಶಗಳನ್ನು ತಿಳಿದುಕೊಂಡು, ನಾವು ಅವರಿಗೆ ಸಾಂತ್ವನದಾಯಕ ಸಂದೇಶವನ್ನು ನೀಡಬೇಕು.
3 ಇದೊಂದು ರಕ್ಷಣಾ ಕಾರ್ಯವಾಗಿದೆ: ದುರ್ಘಟನೆ ಸಂಭವಿಸಿರುವ ಒಂದು ಸ್ಥಳದಲ್ಲಿನ ರಕ್ಷಣಾ ಕೆಲಸಗಾರರ ಬಗ್ಗೆ ತುಸು ಯೋಚಿಸಿರಿ. ಕೆಲವೇ ಜೀವಂತ ವ್ಯಕ್ತಿಗಳಿರುವ ಸ್ಥಳದಲ್ಲಿ ಕೆಲವರು ಹುಡುಕುತ್ತಿರಬಹುದಾದರೂ, ತಮ್ಮ ಸಹಕಾರ್ಮಿಕರು ಬೇರೆಲ್ಲೋ ಇನ್ನೂ ಹೆಚ್ಚಿನ ವ್ಯಕ್ತಿಗಳನ್ನು ಕಂಡುಕೊಳ್ಳುತ್ತಿದ್ದಾರೆಂಬ ಮಾತ್ರಕ್ಕೆ ಅವರು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ನಮ್ಮ ರಕ್ಷಣಾ ಕಾರ್ಯಾಚರಣೆಯು ಇನ್ನೂ ಪೂರ್ಣಗೊಂಡಿಲ್ಲ. ಪ್ರತಿ ವರ್ಷ, “ಮಹಾ ಸಂಕಟ”ದಿಂದ ಪಾರಾಗಿ ಉಳಿಯಲು ಇಷ್ಟಪಡುವ ನೂರಾರು ಸಾವಿರ ಜನರನ್ನು ಕಂಡುಕೊಳ್ಳಲಾಗುತ್ತಿದೆ.—ಪ್ರಕ. 7:9, 14, NW.
4 “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವುದು.” (ರೋಮಾ. 10:13-15) ಸಾರುವುದರಲ್ಲಿ ಪಟ್ಟುಬಿಡದೆ ಮುಂದುವರಿಯುವ ಅಗತ್ಯವನ್ನು ಈ ಮಾತುಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚೊತ್ತಬೇಕು. ನಾವು ಮೊದಲ ಬಾರಿ ನಮ್ಮ ಟೆರಿಟೊರಿಯನ್ನು ಆವರಿಸಿದಾಗ ಚಿಕ್ಕವರಾಗಿದ್ದ ಮಕ್ಕಳು, ಈಗ ಬೆಳೆದು, ತಮ್ಮ ಭವಿಷ್ಯತ್ತಿನ ಹಾಗೂ ಜೀವಿತದ ಉದ್ದೇಶದ ಕುರಿತು ಸ್ವತಃ ಗಂಭೀರವಾಗಿ ಯೋಚಿಸುವಷ್ಟು ದೊಡ್ಡವರಾಗಿರಬಹುದು. ಯಾರು ಕಿವಿಗೊಡುವರೆಂದು ನಾವು ಹೇಳಸಾಧ್ಯವಿಲ್ಲ. (ಪ್ರಸಂ. 11:6) ಹಿಂದೆ ವಿರೋಧಿಸಿದಂತಹ ಅನೇಕ ಜನರು ಈಗ ಸತ್ಯವನ್ನು ಸ್ವೀಕರಿಸಿದ್ದಾರೆ. ನಮ್ಮ ಕೆಲಸವು ಜನರಿಗೆ ತೀರ್ಪು ಮಾಡುವುದಲ್ಲ, ಬದಲಿಗೆ ಸುವಾರ್ತೆಯನ್ನು ಕೇಳಿಸಿಕೊಳ್ಳಲು ಅವರಿಗೆ ಅವಕಾಶವನ್ನು ಕೊಡುತ್ತಾ ಇರುವುದು ಮತ್ತು ಈ ಹಳೆಯ ಲೋಕದಿಂದ ಅವರನ್ನು ಕಾಪಾಡುವುದೇ ಆಗಿದೆ. ಯೇಸುವಿನ ಆದಿ ಶಿಷ್ಯರು ಮಾಡಿದಂತೆ, ನಾವು ಜನರ ಬಳಿ “ಹೋಗುತ್ತಾ ಇರಬೇಕು” ಮತ್ತು ರಾಜ್ಯದ ಸಂದೇಶದಲ್ಲಿ ಅವರ ಆಸಕ್ತಿಯನ್ನು ಕೆರಳಿಸಲು ಪ್ರಯತ್ನಿಸಬೇಕು.—ಮತ್ತಾ. 10:6, 7, NW.
5 ನಮಗೆ ಸಾರುವುದಕ್ಕೆ ಇನ್ನೂ ಅವಕಾಶವಿರುವುದು ಯೆಹೋವನ ದಯೆಯನ್ನು ತೋರಿಸುತ್ತದೆ. (2 ಪೇತ್ರ 3:9) ನಾವು ಇತರರನ್ನು ಪುನಃ ಪುನಃ ಸಂದೇಶದೊಂದಿಗೆ ಭೇಟಿಯಾಗುವಾಗ, ನಾವು ದೇವರ ಪ್ರೀತಿಯನ್ನು ಎತ್ತಿತೋರಿಸುತ್ತೇವೆ ಮತ್ತು ಈ ರೀತಿಯಲ್ಲಿ ಆತನನ್ನು ಸ್ತುತಿಸುತ್ತೇವೆ.