ಎಳೆಯರಿಗೆ ಲಭ್ಯವಿರುವ ಒಂದು ಸುಯೋಗ
1 ಈಗ ಹೆತ್ತವರಾಗಿರುವ ಅನೇಕರು, ಸತ್ಯದಲ್ಲಿ ಬೆಳೆಯುತ್ತಿದ್ದ ಮಕ್ಕಳೋಪಾದಿ ಆನಂದಿಸಿದ ಒಂದು ಸುಯೋಗವನ್ನು, ಅಂದರೆ ಪತ್ರಿಕಾ ದಿನದ ಚಟುವಟಿಕೆಯನ್ನು ಬಹಳ ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತಾರೆ. 1949ರಲ್ಲಿ ಈ ಪತ್ರಿಕಾ ದಿನದ ಚಟುವಟಿಕೆಯು ಎಲ್ಲ ಸಭೆಗಳಲ್ಲಿ ವ್ಯವಸ್ಥಾಪಿಸಲ್ಪಟ್ಟಿತ್ತು. ಪ್ರತಿಯೊಬ್ಬರೂ ವಾರದಲ್ಲಿ ಒಂದು ದಿನ, ಬೀದಿಗಳಲ್ಲಿ, ಮನೆಯಿಂದ ಮನೆಗೆ, ಅಂಗಡಿಯಿಂದ ಅಂಗಡಿಗೆ ಮತ್ತು ಇನ್ನಿತರ ವಿಧಗಳಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ವಿತರಿಸುವ ಕೆಲಸದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಕೇಳಿಕೊಳ್ಳಲಾಗಿತ್ತು. ಮುಖ್ಯವಾಗಿ ಎಳೆಯ ಪ್ರಚಾರಕರು ಈ ಕೆಲಸದಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದರು, ಯಾಕೆಂದರೆ ಸಭೆಯಲ್ಲಿರುವ ಪ್ರೌಢರಂತೆ ಇವರಿಗೂ ಪತ್ರಿಕಾ ದಿನದ ಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶವು ಸಿಗುತ್ತಿತ್ತು. ನೀವು ಸಹ ಚಿಕ್ಕವರಾಗಿದ್ದಾಗ ಈ ಕಾರ್ಯದಲ್ಲಿ ಭಾಗವಹಿಸುತ್ತಿದ್ದಿರೋ?
2 ನಿಮ್ಮ ಮಕ್ಕಳನ್ನೂ ಈ ಕಾರ್ಯದಲ್ಲಿ ಒಳಗೂಡಿಸಿರಿ: ಮನೆಬಾಗಲಿನಲ್ಲಿ ಒಂದು ಶಾಸ್ತ್ರೀಯ ಚರ್ಚೆಯನ್ನು ಆರಂಭಿಸಲು ಸಾಧ್ಯವಿಲ್ಲದ ತೀರ ಚಿಕ್ಕ ಮಕ್ಕಳು ಸಹ ಜನರಿಗೆ ಪತ್ರಿಕೆಗಳನ್ನು ನೀಡಬಲ್ಲರು. ಇದಕ್ಕಾಗಿ ಅವರು, ಪತ್ರಿಕೆಯನ್ನು ನೀಡಲು ಕೆಲವು ಚಿಕ್ಕ ವಾಕ್ಯಗಳ ಒಂದು ಸರಳ ನಿರೂಪಣೆಯನ್ನು ಕಲಿತುಕೊಂಡರೆ ಸಾಕು. ಬಹುಶಃ ಮುಖಪುಟದಲ್ಲಿರುವ ಚಿತ್ರದ ಮೇಲೆ ಒಂದು ಸಂಕ್ಷಿಪ್ತ ಹೇಳಿಕೆಯನ್ನು ಈ ಎಳೆಯ ಮಕ್ಕಳು ಕೊಡಬಹುದು. ಅನೇಕ ವ್ಯಕ್ತಿಗಳು ನಮ್ಮ ಎಳೆಯರಿಂದ ಪತ್ರಿಕೆಗಳನ್ನು ಒಡನೆಯೇ ಸ್ವೀಕರಿಸುತ್ತಾರೆ ಮತ್ತು ಅನೇಕ ವೇಳೆ ಈ ಎಳೆಯರ ಯಥಾರ್ಥತೆ ಹಾಗೂ ಒಳ್ಳೆಯ ನಡತೆಯ ಬಗ್ಗೆ ಶ್ಲಾಘಿಸುತ್ತಾರೆ. ಮಕ್ಕಳಿಗೆ ಸ್ವಲ್ಪ ಸಹಾಯವನ್ನು ಕೊಟ್ಟರೆ ಅವರು ಈ ಸೇವೆಯನ್ನು ಬಹಳ ಉತ್ತಮವಾಗಿ ಮಾಡಬಲ್ಲರು ಮತ್ತು ಹೀಗೆ ರಾಜ್ಯದ ಸಂದೇಶವನ್ನು ಸಾರುವುದರಲ್ಲಿ ಅತ್ಯಮೂಲ್ಯ ಕಾಣಿಕೆಯನ್ನು ಕೊಡಬಲ್ಲರು. ಖಂಡಿತವಾಗಿಯೂ, ಮಕ್ಕಳು ಬೆಳೆಯುತ್ತಾ ಹೋದಂತೆ, ಸಾಕ್ಷಿಕಾರ್ಯದಲ್ಲಿ ನೈಪುಣ್ಯವನ್ನು ಸಾಧಿಸುವುದರಲ್ಲಿ ಪ್ರಗತಿ ಮಾಡುತ್ತಾ ಮುಂದುವರಿಯುವಂತೆ ಅವರ ಹೆತ್ತವರು ಸಹಾಯಮಾಡಬೇಕು.
3 ಮಾನ್ವೆಲ್ ಮೂರು ವರ್ಷ ಪ್ರಾಯದವನಾಗಿದ್ದಾಗಲೇ ಮನೆಯಿಂದ ಮನೆಯ ಸೇವೆಯಲ್ಲಿ ಭಾಗವಹಿಸಲು ಆರಂಭಿಸಿದನು. ಅವನ ಹೆತ್ತವರು ಒಂದು ಚುಟುಕಾದ ನಿರೂಪಣೆಯನ್ನು ಅವನಿಗೆ ಬಾಯಿಪಾಠ ಮಾಡಿಸಿದರು. ಅವನು ತನ್ನ ಹೆತ್ತವರೊಂದಿಗೆ ಹುರುಪಿನಿಂದ ಸಾರುತ್ತಾ, ಅನೇಕ ಪತ್ರಿಕೆಗಳನ್ನು, ಬ್ರೋಷರುಗಳನ್ನು ಮತ್ತು ಟ್ರ್ಯಾಕ್ಟ್ಗಳನ್ನು ಜನರಿಗೆ ನೀಡುತ್ತಾನೆ. ಅವನು ಅನೌಪಚಾರಿಕ ಸಾಕ್ಷಿಯನ್ನು ಸಹ ಕೊಡುತ್ತಾನೆ. ಒಂದು ದಿನ ಅವನ ಹೆತ್ತವರು ಆಟ ಆಡಲಿಕ್ಕಾಗಿ ಅವನನ್ನು ಪಾರ್ಕಿಗೆ ಕರೆದುಕೊಂಡು ಹೋದಾಗ, ಅವನು ಅಲ್ಲಿದ್ದ ಜನರಿಗೆ ಕೆಲವು ಟ್ರ್ಯಾಕ್ಟ್ಗಳನ್ನು ನೀಡಲು ಮುಂದಾದನು. ಮಾನ್ವೆಲ್ ಇನ್ನೂ ತೀರ ಚಿಕ್ಕವನಾಗಿದ್ದರೂ, ಶುಶ್ರೂಷೆಗಾಗಿ ಅವನಿಗಿರುವ ಹುರುಪು ಅವನ ಹೆತ್ತವರಿಗೆ ಮತ್ತು ಇಡೀ ಸಭೆಗೆ ಉತ್ತೇಜನದ ಮೂಲವಾಗಿದೆ.—ಜ್ಞಾನೋ. 22:6.
4 ಇಸವಿ 2000ಕ್ಕಾಗಿರುವ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್ (ಇಂಗ್ಲಿಷ್)ನಲ್ಲಿ, ಪ್ರತಿಯೊಂದು ಶನಿವಾರವನ್ನು “ಪತ್ರಿಕಾ ದಿನ”ವಾಗಿ ಗೊತ್ತುಪಡಿಸಲಾಗಿದೆ. ಹೆತ್ತವರೇ, ಈ ಕೆಲಸದಲ್ಲಿ ನೀವು ಪುನಃ ಆಸಕ್ತಿಯನ್ನು ವಹಿಸಿ, ನಿಮ್ಮ ಮಕ್ಕಳು ಈ ಸೇವಾ ಸುಯೋಗದಲ್ಲಿ ಸಾಧ್ಯವಾದಷ್ಟು ಕ್ರಮವಾಗಿ ಭಾಗವಹಿಸುವಂತೆ ನೀವು ಅವರಿಗೆ ಸಹಾಯಮಾಡಿರೆಂದು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.