ಆತ್ಮಿಕವಾಗಿ ಪ್ರಬಲವಾಗಿರುವ ಕುಟುಂಬಗಳು—ಹೇಗೆ ಸಾಧ್ಯ?
1 ಕ್ರೈಸ್ತ ಕುಟುಂಬಗಳು ‘ತಮ್ಮ ಮನೆವಾರ್ತೆಗಳಲ್ಲಿ ದೈವಿಕ ಭಕ್ತಿಯನ್ನು ಆಚರಣೆಗೆ ತರುತ್ತಿರುವುದಕ್ಕಾಗಿ’ ಅವುಗಳನ್ನು ಪ್ರಶಂಸಿಸಲಾಗಿದೆ. (1 ತಿಮೊ. 5:4, NW) ಆದರೂ, ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುವಂಥ ಅನೇಕಾನೇಕ ಕೆಟ್ಟ ಪ್ರಭಾವಗಳು ನಮ್ಮ ಸುತ್ತಲೂ ಇರುವಾಗ, ಆತ್ಮಿಕವಾಗಿ ಪ್ರಬಲವಾಗಿ ಉಳಿಯಲು ಕುಟುಂಬಗಳು ತುಂಬ ಶ್ರಮಿಸುವುದು ಅತ್ಯಾವಶ್ಯಕವಾಗಿದೆ. ಇದನ್ನು ಹೇಗೆ ಮಾಡಸಾಧ್ಯವಿದೆ?
2 ಕ್ರಿಸ್ತನಂತಹ ತಲೆತನವನ್ನು ತೋರಿಸಿರಿ: ಕುಟುಂಬದ ತಲೆಗಳು ತಮ್ಮ ಮನೆವಾರ್ತೆಗಳನ್ನು ಬಲಪಡಿಸುವ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಾಗ, ಯೇಸು ಕ್ರಿಸ್ತನನ್ನು ಅನುಕರಿಸುವ ಅಗತ್ಯವಿದೆ. ತನ್ನ ಯಜ್ಞಾರ್ಪಿತ ಮರಣದ ಮೂಲಕ ಯೇಸು ನಮಗಾಗಿರುವ ತನ್ನ ಪ್ರೀತಿಯನ್ನು ತೋರ್ಪಡಿಸಿದ್ದಲ್ಲದೆ, ಅವನು ಸತತವಾಗಿ ಸಭೆಯನ್ನು ‘ಪೋಷಿಸಿ ಸಂರಕ್ಷಿಸುತ್ತಾನೆ.’ (ಎಫೆ. 5:25-30) ತಮ್ಮ ಕುಟುಂಬಗಳ ದೈನಂದಿನ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವ ಮೂಲಕ ಪ್ರೀತಿಪರ ಹೆತ್ತವರು ಕೋಮಲ ಆರೈಕೆಯ ಈ ಮಾದರಿಯನ್ನು ಅನುಸರಿಸುತ್ತಾರೆ. ಪ್ರತಿವಾರ ಕುಟುಂಬ ಬೈಬಲ್ ಅಧ್ಯಯನವನ್ನು ನಡೆಸುವುದು, ಸಾಧ್ಯವಿರುವಾಗೆಲ್ಲ ಗಾಢವಾದ ಹಾಗೂ ಯೋಗ್ಯ ಅನ್ವಯವುಳ್ಳ ಆತ್ಮಿಕ ಚರ್ಚೆಗಳಲ್ಲಿ ಒಳಗೂಡುವುದು, ಮತ್ತು ಸಮಸ್ಯೆಗಳು ಎದ್ದಾಗ ಅವುಗಳಿಗೆ ಗಮನಕೊಡುವುದು ಸಹ ಇದರಲ್ಲಿ ಒಳಗೂಡಿದೆ.—ಧರ್ಮೋ. 6:6, 7.
3 ಕ್ಷೇತ್ರ ಸೇವೆಯಲ್ಲಿ: ಯೆಹೋವನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಇತರರಿಗೆ ಸಾಕ್ಷಿ ನೀಡುವುದು ತಮ್ಮ ಆರಾಧನೆಯ ಒಂದು ಪ್ರಾಮುಖ್ಯ ಭಾಗವಾಗಿದೆ ಎಂಬುದನ್ನು ಕುಟುಂಬದ ಎಲ್ಲ ಸದಸ್ಯರು ಗಣ್ಯಮಾಡಬೇಕು. (ಯೆಶಾ. 43:10-12) ನಿಮ್ಮ ಮಕ್ಕಳು ಯೆಹೋವನ ನಂಬಿಗಸ್ತ ಸಾಕ್ಷಿಗಳಾಗಿರಬೇಕೆಂದು ಹೆತ್ತವರಾದ ನೀವು ಬಯಸುವಲ್ಲಿ, ಕ್ಷೇತ್ರ ಸೇವೆಗಾಗಿ ಅವರ ಹೃದಯವನ್ನು ಸಿದ್ಧಪಡಿಸಲಿಕ್ಕಾಗಿ ನೀವು ಬಹಳ ಚಿಕ್ಕ ಪ್ರಾಯದಲ್ಲಿಯೇ ಆರಂಭಿಸಬೇಕು. ಸೇವೆಯಲ್ಲಿ ಸ್ವತ್ಯಾಗ ಮನೋಭಾವವುಳ್ಳವರೂ, ಅದರಲ್ಲಿ ಪ್ರತಿವಾರ ಭಾಗವಹಿಸುವವರೂ ಆಗಿರುವ ಅಗತ್ಯ ಏಕಿದೆ ಎಂಬುದರ ಕಾರಣಗಳನ್ನು ಚರ್ಚಿಸಿರಿ. (ಮತ್ತಾ. 22:37-39) ತದನಂತರ ಕ್ಷೇತ್ರ ಸೇವೆಯಲ್ಲಿ ಅವರು ನಿಮ್ಮೊಂದಿಗೆ ಕ್ರಮವಾಗಿ ಪಾಲ್ಗೊಳ್ಳುವಂತೆ ಏರ್ಪಾಡುಗಳನ್ನು ಮಾಡಿರಿ.
4 ಸಾಪ್ತಾಹಿಕ ಕುಟುಂಬ ಅಧ್ಯಯನದ ಸಮಯದಲ್ಲಿ, ಪರಿಣಾಮಕಾರಿಯಾದ ಒಂದು ನಿರೂಪಣೆಯನ್ನು ತಯಾರಿಸಿ, ಪೂರ್ವಾಭಿನಯಿಸಲಿಕ್ಕಾಗಿ ಸ್ವಲ್ಪ ಸಮಯವನ್ನು ಬದಿಗಿರಿಸುವ ಮೂಲಕ ಸಾರುವ ಕಾರ್ಯಕ್ಕಾಗಿ ಗಣ್ಯತೆಯನ್ನು ಬೆಳೆಸಿರಿ. ಶುಶ್ರೂಷೆಯಲ್ಲಿ ನಿಮ್ಮ ಮಕ್ಕಳಿಗೆ ವೈಯಕ್ತಿಕ ತರಬೇತಿಯನ್ನು ನೀಡಿರಿ ಮತ್ತು ಅವರ ಪ್ರಾಯ ಹಾಗೂ ಸಾಮರ್ಥ್ಯಕ್ಕನುಸಾರ ಪ್ರಗತಿಯನ್ನು ಮಾಡಲು ಅವರಿಗೆ ಸಹಾಯಮಾಡಿರಿ. ಸೇವೆಯಲ್ಲಿ ಒಟ್ಟಿಗೆ ಸಮಯವನ್ನು ಕಳೆದ ಬಳಿಕ, ಯೆಹೋವನ ಒಳ್ಳೇತನವನ್ನು ಅವರು ಹೇಗೆ ನೇರವಾಗಿ ನೋಡಿದರು ಎಂಬುದನ್ನು ಚರ್ಚಿಸಿರಿ. ನಂಬಿಕೆಯನ್ನು ಬಲಪಡಿಸುವಂಥ ಅನುಭವಗಳನ್ನು ತಿಳಿಸಿರಿ. ಕುಟುಂಬಗಳು ‘ಕರ್ತನು ದಯಾಳುವೆಂದು ಅನುಭವದಿಂದ ಹೆಚ್ಚೆಚ್ಚು ತಿಳಿದುಕೊಂಡಂತೆ’ ಅವರು ಯೆಹೋವನಿಗೆ ಹೆಚ್ಚು ನಿಕಟರಾಗುವರು; ಇದು ‘ಎಲ್ಲಾ ಕೆಟ್ಟತನವನ್ನು’ ಪ್ರತಿರೋಧಿಸುವಂತೆ ಅವರನ್ನು ಬಲಪಡಿಸುವುದು.—1 ಪೇತ್ರ 2:1-3.
5 ಕೂಟಗಳಲ್ಲಿ: ವಿಶೇಷವಾಗಿ ಕುಟುಂಬದ ಸದಸ್ಯರಲ್ಲಿ ಒಬ್ಬರು ದಣಿದಿರುವಲ್ಲಿ, ನಿರುತ್ತೇಜನಗೊಂಡಿರುವಲ್ಲಿ ಅಥವಾ ಭಾವನಾತ್ಮಕವಾಗಿ ಹತಾಶರಾಗಿರುವಲ್ಲಿ, ಎಲ್ಲ ಕ್ರೈಸ್ತ ಕೂಟಗಳಿಗೆ ಹಾಜರಾಗಲಿಕ್ಕಾಗಿ ಕುಟುಂಬದ ಸದಸ್ಯರೆಲ್ಲರೂ ಪರಸ್ಪರ ಸಹಾಯಮಾಡುವುದು ಎಷ್ಟು ಅತ್ಯುತ್ತಮವಾಗಿರುವುದು! ಒಬ್ಬ ಯುವ ಸಹೋದರಿಯು ಹೇಳಿದ್ದು: “ನನ್ನ ತಂದೆಯವರು ಕೆಲಸದಿಂದ ಮನೆಗೆ ಬರುವಾಗ ತುಂಬ ದಣಿದಿರುತ್ತಾರೆ. ಆದರೆ ಆ ದಿನ ಸಂಜೆ ಕೂಟದಲ್ಲಿ ಚರ್ಚಿಸಲ್ಪಡಲಿರುವಂಥ ಒಂದು ಒಳ್ಳೇ ಅಂಶವನ್ನು ನಾನು ಅವರೊಂದಿಗೆ ಹಂಚಿಕೊಳ್ಳುತ್ತೇನೆ, ಮತ್ತು ಇದು ಅವರು ಕೂಟಕ್ಕೆ ಹೋಗುವಂತೆ ಉತ್ತೇಜಿಸುತ್ತದೆ. ಮತ್ತು ನಾನು ತುಂಬ ದಣಿದಿರುವಾಗ ಅವರು ನನಗೆ ಉತ್ತೇಜನ ನೀಡುತ್ತಾರೆ.”—ಇಬ್ರಿ. 10:24, 25.
6 ಒಟ್ಟಿಗೆ ಕೆಲಸಗಳನ್ನು ಮಾಡುವುದು: ಕುಟುಂಬಗಳು, ಮನೆವಾರ್ತೆಯ ಕರ್ತವ್ಯಗಳನ್ನು ಮುಗಿಸಲಿಕ್ಕಾಗಿ ಸಹಾಯಮಾಡುವಂಥ ಕೆಲಸಗಳನ್ನು ಒಂದುಗೂಡಿ ಮಾಡಬೇಕು. ಚೆನ್ನಾಗಿ ಆಯ್ಕೆಮಾಡಲ್ಪಟ್ಟ ಮನೋರಂಜನೆಗಾಗಿಯೂ ಸಮಯವನ್ನು ಬದಿಗಿರಿಸಬೇಕು. ಪಿಕ್ನಿಕ್ ಹೋಗುವುದು, ವಾಕಿಂಗ್ಗೆ ಹೋಗುವುದು, ಆಟಗಳನ್ನು ಆಡುವುದು, ಮತ್ತು ಸಂಬಂಧಿಕರನ್ನು ಅಥವಾ ಸ್ನೇಹಿತರನ್ನು ಭೇಟಿಮಾಡಲಿಕ್ಕಾಗಿ ಪ್ರಯಾಣಿಸುವುದು, ಸಂತೋಷಭರಿತ ಕ್ಷಣಗಳನ್ನು ಹಾಗೂ ಸವಿನೆನಪುಗಳನ್ನು ಒದಗಿಸುವುದು.—ಪ್ರಸಂ. 3:4.
7 ಸದೃಢವಾದ ಕ್ರೈಸ್ತ ಕುಟುಂಬಗಳು, ತಮ್ಮ ಆತ್ಮಿಕತೆಗೆ ಒಡ್ಡಲ್ಪಡುವಂಥ ದೈನಂದಿನ ಪಂಥಾಹ್ವಾನಗಳನ್ನು ಜಯಿಸುತ್ತವೆ. ಯೆಹೋವನಿಗೆ ಇನ್ನಷ್ಟು ನಿಕಟವಾಗುವ ಮೂಲಕ ಅವು, ಆತನು ಒದಗಿಸುವ ಬಲವನ್ನು ಅನುಭವಿಸುತ್ತವೆ.—ಎಫೆ. 6:10, NW.