ಕುಟುಂಬ ಕಾಲತಖ್ತೆ—ದಿನದ ವಚನ
1 ಪ್ರೀತಿಯ ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಆಹಾರವನ್ನು ಒದಗಿಸಲು ಪ್ರತಿ ದಿನ ಬಹಳಷ್ಟು ಪ್ರಯಾಸಪಡುತ್ತಾರೆ. ಹಾಗೆಯೇ, ಮಕ್ಕಳಿಗೆ ದೇವರ ವಾಕ್ಯದಿಂದ ಆಧ್ಯಾತ್ಮಿಕ ಪೋಷಣೆಯನ್ನು ಒದಗಿಸುವುದು ಇನ್ನಷ್ಟು ಪ್ರಾಮುಖ್ಯವಾಗಿದೆ. (ಮತ್ತಾ. 4:4) ನಿಮ್ಮ ಮಕ್ಕಳು ಆಧ್ಯಾತ್ಮಿಕ ಆಹಾರದ ಕಡೆಗೆ ಆರೋಗ್ಯಕರ ಬಯಕೆಯನ್ನು ಬೆಳೆಸಿಕೊಳ್ಳುವಂತೆ ಮತ್ತು ಆಧ್ಯಾತ್ಮಿಕವಾಗಿ ‘ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಂತೆ’ ಸಹಾಯಮಾಡಬಲ್ಲ ಒಂದು ವಿಧವು, ಪ್ರತಿನಿತ್ಯ ಕುಟುಂಬವಾಗಿ ದಿನದ ವಚನವನ್ನು ಮತ್ತು ಅದರ ಹೇಳಿಕೆಗಳನ್ನು ಪರಿಗಣಿಸಲು ಸಮಯವನ್ನು ಬದಿಗಿರಿಸುವ ಮೂಲಕವೇ ಆಗಿದೆ. (1 ಪೇತ್ರ 2:2) ನಿಮ್ಮ ಕುಟುಂಬ ಕಾಲತಖ್ತೆಯಲ್ಲಿ ನೀವು ಇದನ್ನು ಯಾವಾಗ ಸೇರಿಸಬಹುದು?
2 ಊಟದ ಸಮಯಗಳಲ್ಲಿ: ದಿನದ ಆರಂಭದಲ್ಲಿಯೇ ವಚನವನ್ನು ಚರ್ಚಿಸುವುದು ಇಡೀ ದಿವಸ ಯೆಹೋವನನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವಂತೆ ನಿಮ್ಮ ಕುಟುಂಬದ ಸದಸ್ಯರಿಗೆ ಸಹಾಯಮಾಡಬಲ್ಲದು. (ಕೀರ್ತ. 16:8) ಒಬ್ಬಾಕೆ ತಾಯಿಯು ಪ್ರತಿ ದಿನ ಬೆಳಗ್ಗಿನ ಉಪಾಹಾರದ ಸಮಯದಲ್ಲಿ ತನ್ನ ಮಗನೊಂದಿಗೆ ದಿನದ ವಚನ ಮತ್ತು ಹೇಳಿಕೆಗಳನ್ನು ಓದಿ ಚರ್ಚಿಸುತ್ತಿದ್ದಳು ಮತ್ತು ಅವನನ್ನು ಶಾಲೆಗೆ ಕಳುಹಿಸುವ ಮುನ್ನ ಅವನೊಂದಿಗೆ ಪ್ರಾರ್ಥಿಸುತ್ತಿದ್ದಳು. ಇದು ಅವನನ್ನು ರಾಷ್ಟ್ರೀಯತೆಯ ವಿವಾದ ಮತ್ತು ಅನೈತಿಕ ಪ್ರಲೋಭನೆಗಳು ಎದುರಾದಾಗ ರಾಜಿಮಾಡಿಕೊಳ್ಳದೆ ಸ್ಥಿರವಾಗಿ ನಿಲ್ಲುವಂತೆ ಬಲಪಡಿಸಿತು. ಅಷ್ಟುಮಾತ್ರವಲ್ಲದೆ, ಶಾಲೆಯಲ್ಲಿ ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಧೈರ್ಯದಿಂದ ಸಾಕ್ಷಿನೀಡಲು ಸಹ ಇದು ಬಲವನ್ನು ಒದಗಿಸಿತು. ಅವನ ಶಾಲೆಯಲ್ಲಿ ಅವನೊಬ್ಬನೇ ಸಾಕ್ಷಿಯಾಗಿದ್ದರೂ, ಅವನಿಗೆಂದೂ ಒಂಟಿ ಭಾವನೆಯಾಗಲಿಲ್ಲ.
3 ಬೆಳಗಿನ ಜಾವ ದಿನದ ವಚನವನ್ನು ಚರ್ಚಿಸುವುದು ನಿಮಗೆ ಪ್ರಾಯೋಗಿಕವಾಗಿಲ್ಲದಿದ್ದರೆ, ದಿನದ ಬೇರಾವುದೇ ಸಮಯದಲ್ಲಿ ನೀವು ಅದನ್ನು ನಿಮ್ಮ ಕುಟುಂಬದೊಂದಿಗೆ ಚರ್ಚಿಸಬಹುದು. ಪ್ರಾಯಶಃ ರಾತ್ರಿಯೂಟದ ಸಮಯದಲ್ಲಿ ಇದನ್ನು ಚರ್ಚಿಸಬಹುದು. ಇದೇ ಸಮಯದಲ್ಲಿ ಕೆಲವರು, ಕ್ಷೇತ್ರ ಸೇವೆಯಲ್ಲಿ ತಮಗಾದ ಅನುಭವಗಳನ್ನು ಮತ್ತು ತಮ್ಮ ವೈಯಕ್ತಿಕ ಬೈಬಲ್ ಓದುವಿಕೆಯಲ್ಲಿ ತಾವು ಆನಂದಿಸಿದ ಅಂಶಗಳನ್ನು ಚರ್ಚಿಸುತ್ತಾರೆ. ಊಟದ ಸಮಯದಲ್ಲಿ ತಾವು ಕಳೆಯುವ ಈ ಸಮಯವು, ಕುಟುಂಬವಾಗಿ ಒಟ್ಟಾಗಿ ತಾವು ಕಳೆಯುವ ಸಂತೋಷಕರ ಸಮಯಗಳಲ್ಲಿ ಒಂದಾಗಿದೆ ಎಂದು ಅನೇಕರು ಬಹಳ ಸಂತೋಷದಿಂದ ನೆನಪಿಸಿಕೊಳ್ಳುತ್ತಾರೆ.
4 ರಾತ್ರಿಯಲ್ಲಿ: ಕೆಲವು ಕುಟುಂಬಗಳಿಗೆ, ದಿನದ ವಚನವನ್ನು ಪರಿಗಣಿಸಲು ಅತ್ಯುತ್ತಮ ಸಮಯವು ರಾತ್ರಿ ಮಲಗಲು ಹೋಗುವುದಕ್ಕೆ ತುಸು ಮುಂಚೆಯೇ ಆಗಿದೆ. ಇದು ಕುಟುಂಬವಾಗಿ ಪ್ರಾರ್ಥಿಸಲು ಸಹ ಅತ್ಯುತ್ತಮ ಸಮಯವಾಗಿದೆ. ನೀವು ಪ್ರತಿನಿತ್ಯ ಯೆಹೋವನ ಕುರಿತು ಮಾತಾಡುವುದನ್ನು ಮತ್ತು ಆತನಿಗೆ ಪ್ರಾರ್ಥಿಸುವುದನ್ನು ನಿಮ್ಮ ಮಕ್ಕಳು ಗಮನಿಸುವಾಗ, ಆತನು ಅವರಿಗೆ ಒಬ್ಬ ನೈಜ ವ್ಯಕ್ತಿಯಾಗುತ್ತಾನೆ.
5 ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಿಕೆಯ ಉತ್ತಮ ಉಪಯೋಗವನ್ನು ಮಾಡುತ್ತಾ, ನಿಮ್ಮ ಮಕ್ಕಳಲ್ಲಿ ಸತ್ಯವನ್ನು ಬೇರೂರಿಸಲು ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಲಿ.