ಯೆಹೋವನ ವಾಕ್ಯವನ್ನು ಪ್ರತಿದಿನವೂ ಪರಿಗಣಿಸಿರಿ!
1 ಪ್ರತಿಯೊಂದು ದಿನವು ನಿಮ್ಮ ನಂಬಿಕೆಗೆ ಹೊಸ ಸವಾಲುಗಳನ್ನು ಒಡ್ಡುತ್ತದೆ. ಲೌಕಿಕ ಪರಿಚಯಸ್ಥನೊಬ್ಬನು ಡೇಟಿಂಗ್ ಮಾಡುವಂತೆ ನಿಮ್ಮನ್ನು ಒತ್ತಾಯಿಸುತ್ತಿರಬಹುದು. ತುಂಬ ಹಣವನ್ನು ಸಂಪಾದಿಸುವಂತಹ ಜೀವನ ವೃತ್ತಿಯನ್ನು ಬೆನ್ನಟ್ಟುವಂತೆ ನಿಮ್ಮ ಶಿಕ್ಷಕನು ಬಯಸಬಹುದು, ಇಲ್ಲವೇ ನೀವು ಓವರ್ಟೈಮ್ ಮಾಡುವಂತೆ ನಿಮ್ಮ ಧಣಿಯು ಇಷ್ಟಪಡಬಹುದು. ನಿಮ್ಮ ಆರೋಗ್ಯವು ಕ್ಷೀಣಿಸುತ್ತಾ ಇರಬಹುದು. ಇಂತಹ ಪರೀಕ್ಷೆಗಳು ನಿಮಗೆ ಯಾವ ಸಮಯದಲ್ಲಾದರೂ ಬರಬಹುದು, ಆದರೆ ಈ ಪರೀಕ್ಷೆಗಳನ್ನು ನೀವು ಒಬ್ಬೊಂಟಿಗರಾಗಿ ಎದುರಿಸಬೇಕಾಗಿಲ್ಲ. ಇವುಗಳನ್ನು ನಿಭಾಯಿಸಲು ನಿಮಗೆ ಬೇಕಾಗಿರುವ ವಿವೇಕವನ್ನು ದಯಪಾಲಿಸಲು ಯೆಹೋವನು ಯಾವಾಗಲೂ ಸಿದ್ಧನಾಗಿದ್ದಾನೆ. ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯಲ್ಲಿರುವ ಬೈಬಲ್ ವಚನ ಮತ್ತು ಹೇಳಿಕೆಗಳನ್ನು ಪರಿಗಣಿಸುವುದು, ನೀವು ಯೆಹೋವನ ವಾಕ್ಯವನ್ನು ಕ್ರಮವಾಗಿ ಗ್ರಹಿಸುವ ವಿಧಗಳಲ್ಲಿ ಒಂದಾಗಿದೆ. ಈ ಏರ್ಪಾಡಿನ ಲಾಭವನ್ನು ನೀವು ಸಂಪೂರ್ಣವಾಗಿ ಪಡೆದುಕೊಳ್ಳುತ್ತೀರೋ?
2 ಸಹಾಯವು ಲಭ್ಯವಿದೆ: ಯೆಶಾಯ 30:20 ಯೆಹೋವನನ್ನು “ಮಹಾ ಉಪದೇಶಕನು” (NW) ಎಂಬುದಾಗಿ ಬಣ್ಣಿಸುತ್ತದೆ. ಆದುದರಿಂದ, ದೇವಜನರು ಸಹಾಯಕ್ಕಾಗಿ ಆತನಲ್ಲಿ ಯಾವಾಗಲೂ ಮೊರೆಯಿಡಬಹುದು. ನಿಮ್ಮ ನಂಬಿಕೆಗೆ ಎದುರಾಗುವ ಪಂಥಾಹ್ವಾನಗಳನ್ನು ನಿಭಾಯಿಸಲು ಅಗತ್ಯವಿರುವುದನ್ನೇ ಆತನು ದಯಪಾಲಿಸುತ್ತಾನೆ. ಹೇಗೆ? ಅದರ ಮುಂದಿನ ವಚನವು ವಿವರಿಸುವುದು: “ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” ಇಂದು ಯೆಹೋವನು ತನ್ನ “ವಾಕ್ಯ”ವನ್ನು ಶಾಸ್ತ್ರವಚನಗಳು ಮತ್ತು ‘ನಂಬಿಗಸ್ತ ಆಳಿನ’ ಪ್ರಕಾಶನಗಳ ಮೂಲಕ ಒದಗಿಸುತ್ತಾನೆ. (ಮತ್ತಾ. 24:45) ಕಾವಲಿನಬುರುಜು ಪತ್ರಿಕೆಯ ಹಿಂದಿನ ಲೇಖನಗಳಲ್ಲಿ ಜ್ಞಾನದ ನಿಧಿಯೇ ಇದೆ. ಮತ್ತು ಇದು ಹೆಚ್ಚುಕಡಿಮೆ ಕ್ರೈಸ್ತ ಜೀವಿತದ ಪ್ರತಿಯೊಂದು ಅಂಶಕ್ಕೂ ಸಂಬಂಧಿಸಿದ್ದಾಗಿರುತ್ತದೆ. ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯಲ್ಲಿ ಉದ್ಧರಿಸಲ್ಪಟ್ಟಿರುವ ಲೇಖನಗಳನ್ನು ಪುನರ್ವಿಮರ್ಶಿಸುವುದು, ಜ್ಞಾನದ ಭಂಡಾರವನ್ನು ವಿಕಸಿಸಲು ನಿಮಗೆ ಸಹಾಯಮಾಡುವುದು. ಇದು ಎಲ್ಲ ರೀತಿಯ ಪರೀಕ್ಷೆಗಳನ್ನು ನಿಭಾಯಿಸುವುದಕ್ಕೂ ತುಂಬ ಪ್ರಯೋಜನಾರ್ಹವಾಗಿದೆ.—ಯೆಶಾ. 48:17.
3 ಇದಕ್ಕಾಗಿ ಸಮಯವನ್ನು ಬದಿಗಿರಿಸಿರಿ: ಒಬ್ಬ ತಾಯಿಗೆ ಬೆಳಗ್ಗಿನ ಸಮಯದಲ್ಲಿ ತುಂಬ ಕೆಲಸವಿರುತ್ತಿತ್ತಾದರೂ, ತನ್ನ ಮಗನು ಬೆಳಗ್ಗಿನ ಉಪಾಹಾರವನ್ನು ಸೇವಿಸುವಾಗ ದಿನದ ವಚನವನ್ನೂ ಹೇಳಿಕೆಗಳನ್ನೂ ಓದುವ ಮತ್ತು ಚರ್ಚಿಸುವ ರೂಢಿಯನ್ನು ಅವಳು ಮಾಡಿಕೊಂಡಿದ್ದಳು. ಅವನು ಪ್ರತಿದಿನ ಶಾಲೆಗೆ ಹೋಗುವ ಮುಂಚೆ ಕೇಳಿಸಿಕೊಳ್ಳುತ್ತಿದ್ದ ಅಂತಿಮ ನುಡಿಗಳು ಪ್ರಾರ್ಥನೆಯೊಂದಿಗಿನ ಈ ಮಾತುಗಳಾಗಿದ್ದವು. ಇವು ಲೈಂಗಿಕ ಒತ್ತಡಗಳನ್ನು ನಿರೋಧಿಸುವಂತೆ, ರಾಷ್ಟ್ರೀಯತೆಯ ಎದುರಿನಲ್ಲಿ ಅಚಲವಾದ ನಿಲುವನ್ನು ತೆಗೆದುಕೊಳ್ಳುವಂತೆ, ಮತ್ತು ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಧೈರ್ಯದಿಂದ ಸಾಕ್ಷಿಯನ್ನು ನೀಡುವಂತೆ ಅವನನ್ನು ಹುರಿದುಂಬಿಸಿದವು. ಇಡೀ ಶಾಲೆಯಲ್ಲಿ ಇವನೊಬ್ಬನೇ ಸಾಕ್ಷಿಯಾಗಿದ್ದನಾದರೂ, ಅವನೆಂದೂ ತಾನು ಒಬ್ಬೊಂಟಿಗನೆಂದು ಭಾವಿಸಲಿಲ್ಲ.
4 ಮಾರ್ಗದರ್ಶನವನ್ನು ಹಾಗೂ ನಿರ್ದೇಶನವನ್ನು ಪಡೆದುಕೊಳ್ಳಲಿಕ್ಕಾಗಿ ಯೆಹೋವನ ಮೇಲೆ ಮತ್ತು ಆತನ ವಾಕ್ಯದ ಮೇಲೆ ಆತುಕೊಳ್ಳಿರಿ. ನೀವು ಹಾಗೆ ಮಾಡುವುದಾದರೆ, ಆತನು ಒಬ್ಬ ಭರವಸಾರ್ಹ ಸ್ನೇಹಿತನೋಪಾದಿ ನಿಮಗೆ ನಿಜ ವ್ಯಕ್ತಿಯಾಗಿ ತೋರುವನು. ಪ್ರತಿದಿನವೂ ಆತನ ಮೊರೆಹೋಗಿರಿ! ದೇವರ ವಾಕ್ಯವನ್ನು ಪ್ರತಿದಿನವೂ ಪರಾಮರ್ಶಿಸುತ್ತಿರುವ ಲಕ್ಷಾಂತರ ಜನರೊಂದಿಗೆ, ನೀವು ‘ನಿಮ್ಮ ಮಹಾ ಉಪದೇಶಕನನ್ನು ಕಣ್ಣಾರೆ ಕಾಣುವಂತಾಗಲಿ.’