ಶುಶ್ರೂಷೆಯಲ್ಲಿ ಪ್ರಗತಿಮಾಡುವಂತೆ ನಿಮ್ಮ ಮಕ್ಕಳಿಗೆ ಸಹಾಯಮಾಡಿರಿ
1 ತಮ್ಮ ಮಕ್ಕಳನ್ನು ತೀರ ಚಿಕ್ಕ ಪ್ರಾಯದಿಂದಲೇ ಶುಶ್ರೂಷೆಯಲ್ಲಿ ತರಬೇತುಗೊಳಿಸುವ ಜವಾಬ್ದಾರಿ ಕ್ರೈಸ್ತ ಹೆತ್ತವರಿಗಿದೆ. ಇದನ್ನು ಅನೇಕ ವಿಧಗಳಲ್ಲಿ ಸಾಧಿಸಬಹುದು. ಕೆಲವು ಮಕ್ಕಳು ಓದಶಕ್ತರಾಗುವುದಕ್ಕಿಂತ ಮುಂಚೆಯೇ ಒಂದು ಸೂಕ್ತ ಬೈಬಲ್ ವಚನವನ್ನು ಬಾಯಿಪಾಠವಾಗಿ ಹೇಳಶಕ್ತರು. ಇದು ಕೇಳುಗರ ಮೇಲೆ ಬಲವಾದ ಪ್ರಭಾವವನ್ನು ಬೀರಬಲ್ಲದು. ಮಕ್ಕಳು ದೊಡ್ಡವರಾಗುತ್ತಾ ಹೋದಂತೆ, ಅವರು ಶುಶ್ರೂಷೆಯಲ್ಲಿ ಇನ್ನಷ್ಟು ಹೆಚ್ಚು ವಿಷಯಗಳನ್ನು ಮಾಡಬಲ್ಲರು. ಸಾಕ್ಷಿಕಾರ್ಯದಲ್ಲಿ ನಿಮ್ಮ ಮಕ್ಕಳು ಭಾಗವಹಿಸುವಂತೆ ಹೆತ್ತವರಾದ ನೀವು ಹೇಗೆ ಸಹಾಯಮಾಡಬಲ್ಲಿರಿ? ಒಂದುವೇಳೆ ಈ ಕೆಳಗಿನ ಸಲಹೆಗಳು ನಿಮಗೆ ಸಹಾಯಮಾಡಬಹುದು.
2 ವಂದಿಸಿದ ಬಳಿಕ, ನೀವು ಹೀಗೆ ಹೇಳಬಹುದು:
◼ “ನನ್ನ ಮಗನಾದ [ಅವನ ಹೆಸರನ್ನು ತಿಳಿಸಿ] ನಿಮಗೆ ಒಂದು ಅರ್ಥಭರಿತ ವಚನವನ್ನು ಹೇಳಲು ಬಯಸುತ್ತಾನೆ.” ನಿಮ್ಮ ಮಗನು ಹೀಗೆ ಹೇಳಬಹುದು: “ಕೀರ್ತನೆಯಲ್ಲಿರುವ ಈ ವಚನವು ನನಗೆ ದೇವರ ಹೆಸರನ್ನು ಕಲಿಸಿತು. [ಹುಡುಗನು ಕೀರ್ತನೆ 83:18ನ್ನು ಓದುತ್ತಾನೆ ಇಲ್ಲವೆ ಬಾಯಿಪಾಠವಾಗಿ ಹೇಳುತ್ತಾನೆ.] ಯೆಹೋವ ದೇವರು ನಮಗಾಗಿ ಏನು ಮಾಡಲಿದ್ದಾನೆ ಎಂಬುದನ್ನು ಈ ಪತ್ರಿಕೆ ತಿಳಿಸುತ್ತದೆ. ದಯಮಾಡಿ ಇದನ್ನು ಓದುವಿರಾ?” ಲೋಕವ್ಯಾಪಕವಾದ ಈ ಕೆಲಸವು ಹೇಗೆ ಬೆಂಬಲಿಸಲ್ಪಡುತ್ತಿದೆ ಎಂಬುದನ್ನು ನೀವು ಹೇಳುವ ಮೂಲಕ ಸಂಭಾಷಣೆಯನ್ನು ಕೊನೆಗೊಳಿಸಬಹುದು.
3 ಅಥವಾ ನೀವು ಹೀಗೆ ಹೇಳಬಹುದು:
◼ “ನಮಸ್ಕಾರ, ನಮ್ಮ ಸಮುದಾಯದಲ್ಲಿರುವ ಜನರ ಕಡೆಗೆ ಕಾಳಜಿಯನ್ನು ವ್ಯಕ್ತಪಡಿಸುವಂತೆ ನಾನು ನನ್ನ ಮಗಳಿಗೆ ಕಲಿಸುತ್ತಿದ್ದೇನೆ. ಅವಳು ನಿಮ್ಮೊಂದಿಗೆ ಸಂಕ್ಷಿಪ್ತವಾದ ಒಂದು ಬೈಬಲ್ ಸಂದೇಶವನ್ನು ಹಂಚಿಕೊಳ್ಳಲು ಇಷ್ಟಪಡುತ್ತಾಳೆ.” ಮಗಳು ಹೀಗೆ ಹೇಳಬಹುದು: “ಭವಿಷ್ಯತ್ತಿಗಾಗಿರುವ ಬೈಬಲ್ ನಿರೀಕ್ಷೆಯನ್ನು ಜನರೊಂದಿಗೆ ಹಂಚಿಕೊಳ್ಳುವ ಮೂಲಕ ನಾನು ಅವರಿಗೆ ಸಹಾಯಮಾಡಲು ಬಯಸುತ್ತೇನೆ. [ಹುಡುಗಿಯು ಪ್ರಕಟನೆ 21:4ನ್ನು ಓದುತ್ತಾಳೆ ಇಲ್ಲವೆ ಬಾಯಿಪಾಠವಾಗಿ ಹೇಳುತ್ತಾಳೆ.] ದೇವರ ರಾಜ್ಯವು ನಮಗಾಗಿ ಏನನ್ನು ಮಾಡಲಿದೆ ಎಂಬುದನ್ನು ಈ ಪತ್ರಿಕೆಯು ತಿಳಿಸುತ್ತದೆ. ನೀವೂ ಇದನ್ನು ಓದಿ ಆನಂದಿಸುವಿರಿ ಎಂದು ನಾನು ನೆನಸುತ್ತೇನೆ.”
4 ಕ್ರಮವಾಗಿ ಒಂದು ಸರಳ ನಿರೂಪಣೆಯನ್ನು ಉಪಯೋಗಿಸುವುದು, ಮಕ್ಕಳು ರಾಜ್ಯದ ಸಂದೇಶವನ್ನು ಸಾರುವ ತಮ್ಮ ಸಾಮರ್ಥ್ಯದ ಮೇಲೆ ಭರವಸೆಯನ್ನು ಪಡೆದುಕೊಳ್ಳಲು ಸಹಾಯಮಾಡುತ್ತದೆ. ಪ್ರ್ಯಾಕ್ಟಿಸ್ ಅವಧಿಗಳಲ್ಲಿ ಸ್ಪಷ್ಟವಾಗಿ ಮತ್ತು ಸರಿಯಾದ ಸ್ವರಭಾರದೊಂದಿಗೆ ಮಾತಾಡುವ ವಿಷಯದ ಮೇಲೆ ಗಮನವನ್ನು ನೀಡುವ ಮೂಲಕ, ವಿವಿಧ ಸನ್ನಿವೇಶಗಳಲ್ಲಿ ಹೇಗೆ ಮಾತಾಡಬೇಕೆಂಬುದನ್ನು ಅವರು ಕಲಿತುಕೊಳ್ಳುತ್ತಾರೆ. ಉತ್ತಮವಾದ ಪೂರ್ವ ತಯಾರಿ ಮತ್ತು ಯಥಾರ್ಥವಾದ ಶ್ಲಾಘನೆಯು, ಚಿಕ್ಕ ಮಕ್ಕಳು ತಮ್ಮ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಸಹಾಯಮಾಡುತ್ತದೆ.
5 ಇಂಥ ಉತ್ತೇಜನದಿಂದಾಗಿ ಅನೇಕ ಚಿಕ್ಕ ಮಕ್ಕಳು ಅಸ್ನಾತ ಪ್ರಚಾರಕರಾಗುವ ಅರ್ಹತೆಯನ್ನು ಪಡೆದಿದ್ದಾರೆ. ಕ್ರೈಸ್ತ ಶುಶ್ರೂಷೆಯಲ್ಲಿ ನಮ್ಮ ಮಕ್ಕಳು ಪ್ರಗತಿಮಾಡುವುದನ್ನು ನೋಡುವುದು ಅದೆಷ್ಟು ಆನಂದದಾಯಕವಾಗಿದೆ!—ಕೀರ್ತ. 148:12, 13.