ಬೋಧಿಸಲಿಕ್ಕಾಗಿ ಚೆನ್ನಾಗಿ ತಯಾರಾಗಿರ್ರಿ
1. ಬೈಬಲ್ ಅಧ್ಯಯನ ನಡೆಸುವಾಗ ಸತ್ಯಕ್ಕಾಗಿ ಗಣ್ಯತೆಯನ್ನು ಕಟ್ಟುವುದರ ಮೇಲೆ ನಾವೇಕೆ ಗಮನ ಕೊಡಬೇಕು?
1 ಒಂದು ಬೈಬಲ್ ಅಧ್ಯಯನ ನಡೆಸುವಾಗ ವಿದ್ಯಾರ್ಥಿಯು ಯೆಹೋವನನ್ನು ಸೇವಿಸುವಂತೆ ಪ್ರಚೋದಿಸಲ್ಪಡಬೇಕಾದರೆ ನಾವು ಅಧ್ಯಯನಕ್ಕಾಗಿ ಚೆನ್ನಾಗಿ ತಯಾರಿಸುವುದು ಅತ್ಯಾವಶ್ಯಕ. ಬೈಬಲಿನಿಂದ ಕಲಿತ ಸತ್ಯವನ್ನು ಅವನು ಗಣ್ಯಮಾಡುವಂತೆ ನಾವು ಸಹಾಯಮಾಡುವಾಗ ನಮ್ಮ ಪ್ರಯತ್ನಗಳು ಸಾರ್ಥಕವಾಗುತ್ತವೆ. ಇದರಿಂದಾಗಿ ವಿದ್ಯಾರ್ಥಿಯು ದೇವರನ್ನು ಸೇವಿಸಲು ಪ್ರೇರಿಸಲ್ಪಡುವನು. (ಧರ್ಮೋ. 6:5; ಜ್ಞಾನೋ. 4:23; 1 ಕೊರಿಂ. 9:26) ಸತ್ಯವನ್ನು ಗಣ್ಯಮಾಡುವಂತೆ ನಾವು ವಿದ್ಯಾರ್ಥಿಗೆ ಹೇಗೆ ನೆರವಾಗಬಹುದು?
2. ಅಧ್ಯಯನಕ್ಕಾಗಿ ಒಳ್ಳೇ ತಯಾರಿ ಮಾಡಲು ಪ್ರಾರ್ಥನೆಯು ಹೇಗೆ ನೆರವಾಗುತ್ತದೆ?
2 ಪ್ರಾರ್ಥನಾಪೂರ್ವಕ ತಯಾರಿ: ವಿದ್ಯಾರ್ಥಿಯ ಹೃದಯದಲ್ಲಿ ಸತ್ಯದ ಬೀಜ ಬೆಳೆಯುವಂತೆ ಮಾಡುವಾತನು ಯೆಹೋವನೇ. ಆದಕಾರಣ ಅಧ್ಯಯನಕ್ಕಾಗಿ ತಯಾರಿಸುವಾಗ ವಿಶೇಷವಾಗಿ ವಿದ್ಯಾರ್ಥಿಗೋಸ್ಕರ ಮತ್ತು ಅವನ ಅಗತ್ಯಗಳಿಗಾಗಿ ಪ್ರಾರ್ಥಿಸುವುದು ಸೂಕ್ತ. (1 ಕೊರಿಂ. 3:6; ಯಾಕೋ. 1:5) ಇಂಥ ಪ್ರಾರ್ಥನೆ ಯೆಹೋವನ ಚಿತ್ತದ ‘ನಿಷ್ಕೃಷ್ಟ ಜ್ಞಾನವನ್ನು’ ಅವನ ಹೃದಯದಲ್ಲಿ ತುಂಬಲು ಇನ್ನು ಏನೆಲ್ಲಾ ಮಾಡಬೇಕು ಎಂದು ತಿಳಿಯಲು ಸಹ ನೆರವಾಗುತ್ತದೆ.—ಕೊಲೊ. 1:9, 10.
3. ಅಧ್ಯಯನಕ್ಕಾಗಿ ತಯಾರಿಸುವಾಗ ನಾವು ವಿದ್ಯಾರ್ಥಿಯನ್ನು ಹೇಗೆ ಮನಸ್ಸಿನಲ್ಲಿಡಬೇಕು?
3 ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಡಿ: ಪರಿಣಾಮಕಾರಿ ಬೋಧನೆಯಲ್ಲಿ ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಡುವುದು ಅವಶ್ಯವೆಂದು ಯೇಸು ತಿಳಿದಿದ್ದನು. ಕಡಿಮೆಪಕ್ಷ ಇಬ್ಬರು ವ್ಯಕ್ತಿಗಳು ಯೇಸುವಿಗೆ ಒಂದೇ ರೀತಿಯ ಪ್ರಶ್ನೆ ಕೇಳಿದರು. “ಬೋಧಕನೇ, ಏನು ಮಾಡುವುದಾದರೆ ನಾನು ನಿತ್ಯಜೀವಕ್ಕೆ ಬಾಧ್ಯನಾಗುತ್ತೇನೆ?” ಎಂದು. ಆ ಎರಡೂ ಸಂದರ್ಭಗಳಲ್ಲಿ ಯೇಸು ಒಂದೇ ರೀತಿಯ ಉತ್ತರಕೊಡಲಿಲ್ಲ. (ಲೂಕ 10:25-28; 18:18-20) ತದ್ರೀತಿ ನಾವು ಕೂಡ ಅಧ್ಯಯನಕ್ಕಾಗಿ ತಯಾರಿಸುವಾಗ ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಡಬೇಕು. ಹೀಗೆ ಕೇಳಿಕೊಳ್ಳಿ: ಕೊಡಲಾದ ಯಾವ ವಚನಗಳನ್ನು ತೆರೆದು ಓದಬೇಕು? ಎಷ್ಟು ಪ್ಯಾರಗಳನ್ನು ಆವರಿಸಬೇಕು? ಅಧ್ಯಾಯದಲ್ಲಿರುವ ಯಾವ ವಿಷಯವನ್ನು ತಿಳಿಯಲು ಅಥವಾ ನಂಬಲು ಅವನಿಗೆ ಕಷ್ಟವಾಗಬಹುದು? ಅಲ್ಲದೆ ಅವನು ಕೇಳಬಹುದಾದ ಕೆಲವು ಪ್ರಶ್ನೆಗಳನ್ನು ನಾವು ಮುಂಚಿತವಾಗಿಯೇ ಯೋಚಿಸುವಲ್ಲಿ ಹೃದಯ ಸ್ಪರ್ಶಿಸುವ ಉತ್ತರ ಕೊಡಲು ನಾವು ಸಿದ್ಧರಿರುವೆವು.
4. ಒಳ್ಳೇ ತಯಾರಿಯಲ್ಲಿ ಏನೆಲ್ಲಾ ಒಳಗೂಡಿದೆ?
4 ವಿಷಯಭಾಗವನ್ನು ಪುನಃ ತಯಾರಿಸಿ: ಅಧ್ಯಯನ ಭಾಗವನ್ನು ಈ ಮುಂಚೆ ನಾವೆಷ್ಟೇ ಬಾರಿ ತಯಾರಿಸಿರುವುದಾದರೂ ಹೊಸ ವಿದ್ಯಾರ್ಥಿಯೊಂದಿಗೆ ಅದನ್ನು ಅಧ್ಯಯನಿಸುವುದು ಮೊದಲ ಬಾರಿ ಎಂದು ನೆನಪಿಡಿ. ಆದ್ದರಿಂದ ಹೃದಯವನ್ನು ತಲಪಬೇಕಾದರೆ ಪ್ರತಿ ಅಧ್ಯಯನಕ್ಕೂ ಒಳ್ಳೇ ತಯಾರಿ ಅತ್ಯಗತ್ಯ. ಅಧ್ಯಯನಕ್ಕೆ ತಯಾರಿಸುವಂತೆ ನಾವು ವಿದ್ಯಾರ್ಥಿಗೆ ಮಾತ್ರ ಹೇಳುವುದಲ್ಲ ನಾವು ಕೂಡ ತಯಾರಿಸಬೇಕು. ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಟ್ಟು ವಿಷಯಭಾಗವನ್ನು ಮತ್ತು ಕೊಡಲಾದ ವಚನಗಳನ್ನು ಪುನಃ ಪರಿಶೀಲಿಸಿರಿ. ಮುಖ್ಯ ಅಂಶಗಳಿಗೆ ಅಡಿಗೆರೆ ಹಾಕಿರಿ.—ರೋಮ. 2:21, 22.
5. ಯೆಹೋವನನ್ನು ನಾವು ಹೇಗೆ ಅನುಕರಿಸಬಹುದು?
5 ಪ್ರತಿ ಬೈಬಲ್ ವಿದ್ಯಾರ್ಥಿಯ ಪ್ರಗತಿಯ ವಿಷಯದಲ್ಲಿ ಯೆಹೋವನು ತೀವ್ರ ಆಸಕ್ತಿಯುಳ್ಳವನಾಗಿದ್ದಾನೆ. (2 ಪೇತ್ರ 3:9) ಪ್ರತಿಯೊಂದು ಬೈಬಲ್ ಅಧ್ಯಯನಕ್ಕೂ ತಯಾರಿಸಲು ಸಮಯ ತಕ್ಕೊಳ್ಳುವಾಗ ನಾವು ಸಹ ತದ್ರೀತಿಯ ಪ್ರೀತಿಭರಿತ ಕಾಳಜಿಯನ್ನು ತೋರಿಸುತ್ತೇವೆ.