ಕ್ರೈಸ್ತ ಶುಶ್ರೂಷಕರು ಪ್ರಾರ್ಥಿಸಲೇಬೇಕು
1. ಶುಶ್ರೂಷೆಯನ್ನು ಪೂರೈಸಲು ನಮಗೇನು ಅಗತ್ಯ?
1 ನಾವು ನಮ್ಮ ಸ್ವಂತ ಶಕ್ತಿಯಿಂದ ಶುಶ್ರೂಷೆಯನ್ನು ಪೂರೈಸುವುದು ಅಸಾಧ್ಯ. ಅದಕ್ಕಾಗಿ ಯೆಹೋವನೇ ನಮಗೆ ಶಕ್ತಿ ಕೊಡುವನು. (ಫಿಲಿ. 4:13) ಕುರಿಗಳಂಥ ಜನರನ್ನು ಹುಡುಕಲು ಆತನು ತನ್ನ ದೂತರ ಮೂಲಕ ನಮಗೆ ಸಹಾಯ ಕೊಡುತ್ತಾನೆ. (ಪ್ರಕ. 14:6, 7) ನಾವು ಸತ್ಯದ ಬೀಜವನ್ನು ಬಿತ್ತಿ ನೀರು ಹಾಕಿದರೂ ಅದನ್ನು ಬೆಳೆಸುವವನು ಯೆಹೋವನೇ. (1 ಕೊರಿಂ. 3:6, 9) ಆದ್ದರಿಂದ ಕ್ರೈಸ್ತ ಶುಶ್ರೂಷಕರಾದ ನಾವು ನಮ್ಮ ಸ್ವರ್ಗೀಯ ತಂದೆಯ ಮೇಲೆ ಪ್ರಾರ್ಥನೆಯ ಮೂಲಕ ಅವಲಂಬಿಸುವುದು ಎಷ್ಟು ಪ್ರಾಮುಖ್ಯ ಅಲ್ಲವೇ?
2. ನಾವು ಯಾವೆಲ್ಲ ವಿಷಯಗಳಿಗಾಗಿ ಪ್ರಾರ್ಥಿಸಬೇಕು?
2 ನಮಗಾಗಿ: ನಾವು ಸಾರಲಿರುವ ಪ್ರತಿಯೊಂದು ಸಂದರ್ಭದಲ್ಲೂ ಪ್ರಾರ್ಥಿಸಬೇಕು. (ಎಫೆ. 6:18) ಯಾವೆಲ್ಲ ವಿಷಯಗಳಿಗಾಗಿ? ಟೆರಿಟೊರಿಯ ಜನರ ಕಡೆಗೆ ನಮಗೆ ಸಕಾರಾತ್ಮಕ ಮನೋಭಾವವಿರುವಂತೆ ಮತ್ತು ಧೈರ್ಯ ಕೊಡುವಂತೆ ಪ್ರಾರ್ಥಿಸಬಹುದು. (ಅ. ಕಾ. 4:30) ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಳ್ಳುವಂಥ ಸಹೃದಯಿಗಳ ಬಳಿ ನಮ್ಮನ್ನು ನಡೆಸುವಂತೆ ಯೆಹೋವನಿಗೆ ಬಿನ್ನಹಿಸಬಹುದು. ಮನೆಯವರು ಪ್ರಶ್ನೆ ಕೇಳುವಲ್ಲಿ ಸರಿಯಾದ ಉತ್ತರಕೊಡಲು ಯೆಹೋವನ ಸಹಾಯಕ್ಕಾಗಿ ನಾವು ಮೌನವಾಗಿ ಒಂದು ಚಿಕ್ಕ ಪ್ರಾರ್ಥನೆ ಮಾಡಬಹುದು. (ನೆಹೆ. 2:4) ಅನನುಕೂಲ ಪರಿಸ್ಥಿತಿಗಳಿದ್ದರೂ ಸಾಕ್ಷಿಕೊಡಲು ನಮಗೆ ಬೇಕಾಗಿರುವ ವಿವೇಚನೆ ಮತ್ತು ಧೈರ್ಯಕ್ಕಾಗಿ ಬೇಡಬಹುದು. (ಮತ್ತಾ. 10:16; ಅ. ಕಾ. 4:30) ಶುಶ್ರೂಷೆಗೆ ಆದ್ಯತೆ ನೀಡುವಂತೆ ವಿವೇಕಕ್ಕಾಗಿಯೂ ನಾವು ಪ್ರಾರ್ಥಿಸಬಹುದು. (ಯಾಕೋ. 1:5) ಅಷ್ಟೇ ಅಲ್ಲ, ಯೆಹೋವನ ಶುಶ್ರೂಷಕರಾಗಿರಲು ನಮಗಿರುವ ಸದವಕಾಶಕ್ಕಾಗಿ ಕೃತಜ್ಞತೆ ತುಂಬಿದ ಅಭಿವ್ಯಕ್ತಿಗಳನ್ನು ಪ್ರಾರ್ಥನೆಗಳಲ್ಲಿ ಸೇರಿಸುವಾಗಲೂ ಆತನಿಗೆ ಸಂತೋಷವಾಗುತ್ತದೆ.—ಕೊಲೊ. 3:15.
3. ಇತರರಿಗಾಗಿ ಪ್ರಾರ್ಥಿಸುವುದರಿಂದ ಸಾರುವ ಕೆಲಸಕ್ಕೆ ಹೇಗೆ ನೆರವಾಗಬಲ್ಲದು?
3 ಇತರರಿಗಾಗಿ: ನಾವು ‘ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಬೇಕು.’ ಅದರಲ್ಲೂ ಸೂಕ್ತವಾಗಿರುವಾಗೆಲ್ಲ ನಮ್ಮ ಜೊತೆ ಶುಶ್ರೂಷಕರ ಹೆಸರೆತ್ತಿ ಪ್ರಾರ್ಥಿಸಬೇಕು. (ಯಾಕೋ. 5:16; ಅ. ಕಾ. 12:5) ಕ್ಷೀಣಿಸುತ್ತಿರುವ ಆರೋಗ್ಯದಿಂದಾಗಿ ನಿಮಗೆ ಸಾರುವ ಕೆಲಸದಲ್ಲಿ ಹೆಚ್ಚನ್ನು ಮಾಡಲಿಕ್ಕಾಗುತ್ತಿಲ್ಲವೋ? ಹಾಗಿರುವಲ್ಲಿ ಒಳ್ಳೇ ಆರೋಗ್ಯವಿರುವ ಜೊತೆ ಶುಶ್ರೂಷಕರಿಗಾಗಿ ಪ್ರಾರ್ಥಿಸಿರಿ. ಅವರಿಗಾಗಿ ನೀವು ಮಾಡುವ ಪ್ರಾರ್ಥನೆಗಳಿಗೆ ಬಹಳಷ್ಟು ಶಕ್ತಿಯಿದೆ ಎಂದು ಮರೆಯಬೇಡಿ. ಅಧಿಕಾರಿಗಳು ಸಾರುವ ಕೆಲಸದ ಬಗ್ಗೆ ಒಳ್ಳೇ ಮನೋಭಾವ ತಾಳುವಂತೆ ಪ್ರಾರ್ಥಿಸುವುದು ಸಹ ಉಚಿತ. ಏಕೆಂದರೆ ಇದರಿಂದ ನಮ್ಮ ಸಹೋದರರು “ನೆಮ್ಮದಿ ಹಾಗೂ ಪ್ರಶಾಂತತೆಯಿಂದ ಕೂಡಿದ ಜೀವನವನ್ನು ನಡೆಸಲಾಗುವಂತೆ” ಸಹಾಯವಾಗುವುದು.—1 ತಿಮೊ. 2:1, 2.
4. ನಾವೇಕೆ ಪಟ್ಟುಹಿಡಿದು ಪ್ರಾರ್ಥಿಸಬೇಕು?
4 ನಿವಾಸಿತ ಭೂಮಿಯಾದ್ಯಂತ ಸುವಾರ್ತೆಯನ್ನು ಪ್ರಕಟಿಸುವುದು ಒಂದು ಭಾರೀ ಕೆಲಸವೇನೋ ನಿಜ. ಆದರೆ ನಾವು ‘ಪಟ್ಟುಹಿಡಿದು ಪ್ರಾರ್ಥಿಸುವಲ್ಲಿ’ ಯೆಹೋವನ ಸಹಾಯದಿಂದ ಈ ಕೆಲಸವನ್ನು ಪೂರೈಸಬಲ್ಲೆವು.—ರೋಮ. 12:12.