ಕ್ರೈಸ್ತ ಶುಶ್ರೂಷಕರಿಗಾಗಿ ಒಂದು ಏರ್ಪಾಡು
1. ಯಾವ ಹೊಸ ಏರ್ಪಾಡು 1938ರಿಂದ ಆರಂಭವಾಯಿತು? ಅದರ ಉದ್ದೇಶವೇನಾಗಿತ್ತು?
1 ಯೆಹೋವನ ಸಂಘಟನೆ 1938ರಲ್ಲಿ ಹೊಸ ಏರ್ಪಾಡೊಂದನ್ನು ಆರಂಭಿಸಿತು. ಸಭೆಗಳೆಲ್ಲ ಸೇರಿ ಜೋನ್ ಸಮ್ಮೇಳನಗಳನ್ನು (ಈಗ ಸರ್ಕಿಟ್ ಸಮ್ಮೇಳನ) ಹಾಜರಾಗುವ ಏರ್ಪಾಡು ಅದಾಗಿತ್ತು. ಅದರ ಉದ್ದೇಶ? ಜನವರಿ 1939ರ ಇನ್ಫಾರ್ಮೆಂಟ್ (ಈಗ ನಮ್ಮ ರಾಜ್ಯ ಸೇವೆ) ಹೀಗಂದಿತ್ತು: “ದೇವಪ್ರಭುತ್ವಾತ್ಮಕ ಸಂಘಟನೆಯ ಭಾಗವಾಗಿರುವ ಈ ಸಮ್ಮೇಳನಗಳು ಯೆಹೋವನ ರಾಜ್ಯದ ಸೇವೆಯನ್ನು ಪೂರೈಸುವುದಕ್ಕಾಗಿವೆ. ಅವುಗಳಲ್ಲಿ ಸಿಗುವ ನಿರ್ದೇಶನಗಳು ತಮ್ಮ ನೇಮಿತ ಕೆಲಸವನ್ನು ಸರಿಯಾಗಿ ಮಾಡಿಮುಗಿಸಲಿಕ್ಕಾಗಿ ಪ್ರತಿಯೊಬ್ಬರಿಗೂ ಅತ್ಯಗತ್ಯ.” 1938ರಲ್ಲಿ ಬರೇ 58,000ದಷ್ಟಿದ್ದ ರಾಜ್ಯ ಘೋಷಕರು 2009ರಲ್ಲಿ 70,00,000ಕ್ಕಿಂತ ಹೆಚ್ಚಾಗಿದ್ದಾರೆ. ಈ ಬೆಳವಣಿಗೆ ತಾನೇ, ಶುಶ್ರೂಷಕರಿಗೆ “ತಮ್ಮ ನೇಮಿತ ಕೆಲಸವನ್ನು” ಮಾಡಲು ನೆರವಾಗುವ ಉದ್ದೇಶವನ್ನು ಸರ್ಕಿಟ್ ಸಮ್ಮೇಳನಗಳು ಪೂರೈಸುತ್ತಿವೆ ಎಂಬುದಕ್ಕೆ ಸಾಕ್ಷಿ.
2. ಹೊಸ ಸೇವಾ ವರ್ಷದ ಸರ್ಕಿಟ್ ಸಮ್ಮೇಳನದಲ್ಲಿ ನಾವು ಯಾವ ಮಾಹಿತಿ ಪಡೆಯಲಿದ್ದೇವೆ?
2 ಮುಂದಿನ ಸರ್ಕಿಟ್ ಸಮ್ಮೇಳನದ ಮುಖ್ಯ ವಿಷಯ: ಸೆಪ್ಟೆಂಬರ್ ತಿಂಗಳಿನಿಂದ ಆರಂಭವಾಗುವ ಸಮ್ಮೇಳನ ಕಾರ್ಯಕ್ರಮವನ್ನೂ ಅದರಿಂದ ಸಿಗುವ ಪ್ರೋತ್ಸಾಹಕರ ಮಾತುಗಳನ್ನೂ ಕೇಳಲು ನಾವು ಕಾತುರದಿಂದಿದ್ದೇವೆ. ಸರ್ಕಿಟ್ ಸಮ್ಮೇಳನದ ವಿಷಯ “ನೀವು ಲೋಕದ ಭಾಗವಾಗಿಲ್ಲ.” ಇದು ಯೋಹಾನ 15:19ರ ಮೇಲೆ ಆಧರಿತ. ಆ ಸಮ್ಮೇಳನದಲ್ಲಿ ಕ್ರೈಸ್ತ ಶುಶ್ರೂಷಕರಿಗೆ ಖಂಡಿತ ಪ್ರಯೋಜನ ತರುವ ಕೆಲವು ಭಾಷಣಗಳು ಇಲ್ಲಿವೆ. “ಪೂರ್ಣ ಸಮಯದ ಸೇವೆ ನಮ್ಮನ್ನು ಸಂರಕ್ಷಿಸುತ್ತದೆ—ಹೇಗೆ?” ಎಂಬ ಭಾಷಣ ಮತ್ತು ‘ಕಾಡುಮೃಗ, ಮಹಾ ವೇಶ್ಯೆ, ಸಂಚಾರಿ ವರ್ತಕರಿಂದ ಅಶುದ್ಧರಾಗಬೇಡಿ’ ಎಂಬ ವಿಷಯವಿರುವ ಭಾಷಣಮಾಲೆಯನ್ನು ನಾವು ಶನಿವಾರ ಆನಂದಿಸಲಿದ್ದೇವೆ. “ಯೆಹೋವನನ್ನು ಪ್ರೀತಿಸಿ, ಲೋಕವನ್ನಲ್ಲ” ಎಂಬ ಭಾಷಣಮಾಲೆಯನ್ನೂ “‘ಪರದೇಶಿಯರೂ ತಾತ್ಕಾಲಿಕ ನಿವಾಸಿಗಳೂ’ ಆಗಿಯೇ ಉಳಿಯಿರಿ” ಮತ್ತು “ಧೈರ್ಯದಿಂದಿರಿ, ನೀವು ಲೋಕವನ್ನು ಜಯಿಸಬಲ್ಲಿರಿ” ಎಂಬ ಇನ್ನಿತರ ಭಾಷಣಗಳನ್ನೂ ಭಾನುವಾರದಂದು ಕೇಳಲಿದ್ದೇವೆ.
3. ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗುವುದರಿಂದ ಯಾವ ಪ್ರಯೋಜನಗಳನ್ನು ಪಡೆಯುವೆವು?
3 ಒಬ್ಬ ಸಹೋದರಿ ಇತ್ತೀಚಿನ ಸರ್ಕಿಟ್ ಸಮ್ಮೇಳನದಿಂದ ತನಗೆ ಸಿಕ್ಕಿದ ಸಹಾಯದ ಬಗ್ಗೆ ತಿಳಿಸಿದಳು. ಶುಶ್ರೂಷೆಯಲ್ಲಿ ಹಿಂದೆ ಬಿದ್ದಿದ್ದ ಆಕೆ ತನ್ನ ಸನ್ನಿವೇಶಗಳನ್ನು ಪುನಃ ಪರಿಶೀಲಿಸುವಂತೆ ಮತ್ತು “ನೆಪ ಕೊಡುವುದನ್ನು ನಿಲ್ಲಿಸಿ ಸೇವೆಯನ್ನು ಹೆಚ್ಚಿಸುವ” ದೃಢಸಂಕಲ್ಪ ಮಾಡುವಂತೆ ಆ ಕಾರ್ಯಕ್ರಮ ಸಹಾಯಮಾಡಿತೆಂದು ಬರೆದಳು. ಹೊಸ ಸೇವಾ ವರ್ಷದ ಸರ್ಕಿಟ್ ಸಮ್ಮೇಳನವು ನಾವೆಲ್ಲರೂ ಲೋಕವನ್ನು ಪ್ರೀತಿಸದೆ ಯೆಹೋವನನ್ನೇ ಪ್ರೀತಿಸುವಂತೆ ನೆರವಾಗುವುದು ಎಂಬುದರಲ್ಲಿ ಸಂಶಯವೇ ಇಲ್ಲ. (1 ಯೋಹಾ. 2:15-17) ಕ್ರೈಸ್ತ ಶುಶ್ರೂಷಕರಿಗಾಗಿ ಪ್ರೀತಿಯಿಂದ ಮಾಡಲಾಗಿರುವ ಈ ಏರ್ಪಾಡಿನಿಂದ ಪೂರ್ಣ ಪ್ರಯೋಜನ ಪಡೆಯಲು ಆ ಸಮ್ಮೇಳನಕ್ಕೆ ಹಾಜರಾಗಿ ಏಕಾಗ್ರತೆಯಿಂದ ಆಲಿಸಲು ಈಗಲೇ ತಯಾರಿನಡೆಸಿ.