24ಗಂಟೆಯೂ ನಾವು ಶುಶ್ರೂಷಕರು
1. ಒಂದನೆಯ ಶತಮಾನದ ಕ್ರೈಸ್ತರು 24ಗಂಟೆಯೂ ಶುಶ್ರೂಷಕರಾಗಿದ್ದರು ಎಂದು ಹೇಗೆ ಹೇಳಬಲ್ಲಿರಿ?
1 ಒಂದನೆಯ ಶತಮಾನದ ಹುರುಪಿನ ಶುಶ್ರೂಷಕರು ಜನರು ಸಿಕ್ಕಿದಲ್ಲೆಲ್ಲ “ಎಡೆಬಿಡದೆ” ಸುವಾರ್ತೆ ಸಾರಿದರು. (ಅ. ಕಾ. 5:42) ಮನೆಮನೆ ಸೇವೆಗೆ ಹೊರಟಿದ್ದೇವೆ ಹಾಗಾಗಿ ದಾರಿಯಲ್ಲಿ ಸಿಕ್ಕಿದವರಿಗೆ ಸುವಾರ್ತೆ ಸಾರುವುದು ಬೇಡ ಅಂತ ಅವರು ಯೋಚಿಸುತ್ತಿರಲಿಲ್ಲ. ಆಗತಾನೇ ಕ್ಷೇತ್ರ ಸೇವೆ ಮುಗಿಸಿ ಮಾರುಕಟ್ಟೆಗೆ ಹೋದವರು ಅಲ್ಲಿಯೂ ಅನೌಪಚಾರಿಕ ಸಾಕ್ಷಿ ನೀಡುತ್ತಿದ್ದರು. ಒಂದು ಅವಕಾಶವೂ ಕೈಜಾರದಂತೆ ಪಟ್ಟು ಹಿಡಿದು ಸಾರಿದರು. ಯೇಸುವಿನಂತೆ ಅವರೂ 24ಗಂಟೆ ಶುಶ್ರೂಷಕರಾಗಿದ್ದರು.—ಮಾರ್ಕ 6:31-34.
2. ಯೆಹೋವನ ಸಾಕ್ಷಿಗಳು ಎಂಬ ನಮ್ಮ ಹೆಸರಿಗೆ ತಕ್ಕಂತೆ ಜೀವಿಸುವುದು ಎಂದರೇನು?
2 ಸದಾ ಸಿದ್ಧರು: ಯೆಹೋವನ ಸಾಕ್ಷಿಗಳು ಎಂಬ ನಮ್ಮ ಹೆಸರು ನಾವು ಏನು ಮಾಡುತ್ತೇವೆ ಎನ್ನುವುದನ್ನು ಮಾತ್ರವಲ್ಲ ನಾವು ಯಾರಾಗಿದ್ದೇವೆ ಎನ್ನುವುದನ್ನೂ ತಿಳಿಸುತ್ತದೆ. (ಯೆಶಾ. 43:10-12) ಹಾಗಾಗಿ ಮನೆಮನೆ ಸೇವೆಯಲ್ಲಿ ಮಾತ್ರವಲ್ಲ ಪ್ರತಿಯೊಂದು ಸಂದರ್ಭದಲ್ಲೂ ನಮ್ಮ ನಿರೀಕ್ಷೆಗೆ ಕಾರಣವನ್ನು ಕೇಳುವ ಪ್ರತಿಯೊಬ್ಬರಿಗೆ ಉತ್ತರಕೊಡಲು ಸಿದ್ಧರಿರಬೇಕು. (1 ಪೇತ್ರ 3:15) ಅನೌಪಚಾರಿಕ ಸಾಕ್ಷಿ ಕೊಡಲು ಸಂದರ್ಭ ಹೇಗೆ ಏಳಬಹುದು ಮತ್ತು ಆಗ ನೀವೇನನ್ನು ಹೇಳುವಿರಿ ಎಂದು ಮುಂಚಿತವಾಗಿಯೇ ಯೋಚಿಸುತ್ತೀರಾ? ಆಸಕ್ತಿ ತೋರಿಸುವವರಿಗೆ ನೀಡಲೆಂದು ನಿಮ್ಮೊಟ್ಟಿಗೆ ಯಾವಾಗಲೂ ಸಾಹಿತ್ಯ ಕೊಂಡೊಯ್ಯುತ್ತೀರಾ? (ಜ್ಞಾನೋ. 21:5) ನಿಮ್ಮ ಸಾರುವ ಕೆಲಸ ಬರೇ ಮನೆಮನೆ ಸೇವೆಗೆ ಮಾತ್ರ ಸೀಮಿತವೊ ಅಥವಾ ಅವಕಾಶವಿರುವಲ್ಲಿ ಇತರ ಸಂದರ್ಭದಲ್ಲೂ ಸಾರಲು ನೀವು ಸಿದ್ಧರೊ?
3. ಬೀದಿಗಳಲ್ಲಿ, ಪಾರ್ಕಿಂಗ್ ಸ್ಥಳಗಳಲ್ಲಿ, ಪಾರ್ಕ್ಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಸಾರುವುದನ್ನು ಕಡಿಮೆ ಅಂದಾಜು ಮಾಡಬಾರದು ಏಕೆ?
3 ಸಾರ್ವಜನಿಕ ಸ್ಥಳಗಳಲ್ಲಿ ಸಾರಿರಿ: ಬೀದಿಗಳಲ್ಲಿ, ಬಸ್ ಸ್ಟಾಪ್ಗಳಲ್ಲಿ, ಪಾರ್ಕಿಂಗ್ ಸ್ಥಳಗಳಲ್ಲಿ, ಪಾರ್ಕ್ಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ, ರೈಲ್ ನಿಲ್ದಾಣಗಳಲ್ಲಿ ಹೀಗೆ ಎಲ್ಲೆಲ್ಲೂ ನಾವು ಸಾರುತ್ತೇವೆ. ಇವೆಲ್ಲ ಯಾವುದೋ ಹೊಸ, ಅಪರಿಚಿತ ವಿಧಾನಗಳೋ? ಇಲ್ಲ. ಅಪೊಸ್ತಲ ಪೌಲನು ತಾನು “ಸಾರ್ವಜನಿಕವಾಗಿಯೂ” ಮನೆಮನೆಯಲ್ಲಿಯೂ ಸಾರಿದೆನೆಂದು ಹೇಳಿದನು. (ಅ. ಕಾ. 20:20) ರಾಜ್ಯದ ಸಂದೇಶದೊಂದಿಗೆ ಹೆಚ್ಚೆಚ್ಚು ಜನರನ್ನು ಭೇಟಿಮಾಡಲು ಅತೀ ಪರಿಣಾಮಕಾರಿ ಹಾಗೂ ಪ್ರಧಾನ ವಿಧಾನ ಮನೆಮನೆ ಸೇವೆ. ಹಾಗಿದ್ದರೂ, ಒಂದನೆಯ ಶತಮಾನದ ಶುಶ್ರೂಷಕರ ಗುರಿ ಜನರನ್ನು ಭೇಟಿಮಾಡುವುದಾಗಿತ್ತು, ಮನೆಗಳನ್ನಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸಾರುವುದಾಗಿರಲಿ, ಅನೌಪಚಾರಿಕ ಸಾಕ್ಷಿಕಾರ್ಯವಾಗಿರಲಿa ಅಥವಾ ಮನೆಮನೆ ಸೇವೆಯಾಗಿರಲಿ ಸತ್ಯವನ್ನು ತಿಳಿಸಲು ಅವರು ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸುತ್ತಿದ್ದರು. ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುವುದರಲ್ಲಿ ಅವರಿಗಿದ್ದ ಮನೋಭಾವ ನಮ್ಮಲ್ಲೂ ಇರಲಿ.—2 ತಿಮೊ. 4:5.
[ಪಾದಟಿಪ್ಪಣಿ]
a ಅನೌಪಚಾರಿಕ ಸಾಕ್ಷಿಕಾರ್ಯಕ್ಕೂ ‘ಸಾರ್ವಜನಿಕ ಸ್ಥಳಗಳಲ್ಲಿ ಸಾರುವುದು’ ಎನ್ನುವುದಕ್ಕೂ ವ್ಯತ್ಯಾಸವಿದೆ. ಅನೌಪಚಾರಿಕ ಸಾಕ್ಷಿಕಾರ್ಯ ಅಂದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಭೇಟಿಮಾಡುವವರಿಗೆ ಸುವಾರ್ತೆ ಸಾರುವುದಾಗಿದೆ.