ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಆಸಕ್ತಿ ತೋರಿಸುವವರ ಟಿಪ್ಪಣಿ ಬರೆದಿಡಿ
“ನಿನ್ನ ವಿಷಯದಲ್ಲಿಯೂ ನಿನ್ನ ಬೋಧನೆಯ ವಿಷಯದಲ್ಲಿಯೂ ಸದಾ ಗಮನಕೊಡುವವನಾಗಿರು.” (1 ತಿಮೊ. 4:16) ಅಪೊಸ್ತಲ ಪೌಲನು ತಿಮೊಥೆಯನಿಗೆ ಕೊಟ್ಟಂಥ ಈ ಪ್ರೇರಿತ ಸಲಹೆಯು ನಾವು ಹೊಸಬರಾಗಿರಲಿ, ಅನುಭವಸ್ಥರಾಗಿರಲಿ ಪ್ರಗತಿಮಾಡಲು ಪ್ರಯತ್ನ ಹಾಕುತ್ತಾ ಇರಬೇಕೆಂದು ಸೂಚಿಸುತ್ತದೆ. ಇದಕ್ಕಾಗಿ ನಮಗೆ ನೆರವಾಗಲು, “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು” ಎಂಬ ಶೀರ್ಷಿಕೆಯ ಹೊಸ ಲೇಖನ ಸರಣಿ ನಮ್ಮ ರಾಜ್ಯ ಸೇವೆಯಲ್ಲಿ ಬರಲಿದೆ. ಪ್ರತಿ ಲೇಖನವು ಒಂದೊಂದು ನಿಪುಣತೆಯ ಕುರಿತು ಚರ್ಚಿಸುತ್ತಾ ಅದನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬ ವಿಷಯದಲ್ಲಿ ಕೆಲವು ಪ್ರಾಯೋಗಿಕ ಸಲಹೆಗಳನ್ನು ನೀಡುವುದು. ಆ ಲೇಖನ ಪ್ರಕಟಗೊಳ್ಳುವ ತಿಂಗಳಲ್ಲಿ, ಚರ್ಚಿಸಲಾಗುವ ನಿಪುಣತೆಯ ಕಡೆಗೆ ವಿಶೇಷ ಗಮನ ಕೊಡುವಂತೆ ಎಲ್ಲರನ್ನು ಉತ್ತೇಜಿಸಲಾಗುತ್ತದೆ. ಆ ತಿಂಗಳು ಮುಗಿದ ನಂತರ ಬರುವ ಸೇವಾ ಕೂಟದ ಭಾಗದಲ್ಲಿ, ಆ ನಿಪುಣತೆಯನ್ನು ಬೆಳೆಸಿಕೊಂಡದ್ದರಿಂದ ನಮಗಾದ ಪ್ರಯೋಜನಗಳ ಕುರಿತು ತಿಳಿಸುವ ಅವಕಾಶವಿರುತ್ತದೆ. ಈ ತಿಂಗಳಲ್ಲಿ ಆಸಕ್ತಿ ತೋರಿಸುವವರ ಟಿಪ್ಪಣಿ ಬರೆದಿಟ್ಟುಕೊಳ್ಳುವುದರ ಕುರಿತು ಕೆಲಸ ಮಾಡುವಂತೆ ಪ್ರೋತ್ಸಾಹಿಸಲಾಗಿದೆ.
ಏಕೆ ಪ್ರಾಮುಖ್ಯ: ನಮಗಿರುವ ಆಜ್ಞೆಯನ್ನು ಪೂರೈಸಬೇಕೆಂದರೆ ಕೇವಲ ಸುವಾರ್ತೆ ಸಾರಿದರೆ ಸಾಲದು, ಅದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕು. ಆಸಕ್ತಿ ತೋರಿಸಿದವರನ್ನು ಪುನಃ ಭೇಟಿ ಮಾಡಬೇಕು ಮತ್ತು ಅವರಿಗೆ ಬೋಧಿಸಬೇಕು. ಹೀಗೆ ಮಾಡುವ ಮೂಲಕ ನಾವು ಬಿತ್ತಿದ ಸತ್ಯದ ಬೀಜಕ್ಕೆ ನೀರೆರೆಯುತ್ತೇವೆ. (ಮತ್ತಾ. 28:19, 20; 1 ಕೊರಿಂ. 3:6-9) ಇದಕ್ಕಾಗಿ, ಮೊದಲು ನಾವು ಆಸಕ್ತನನ್ನು ಮತ್ತೊಮ್ಮೆ ಭೇಟಿಮಾಡಬೇಕು, ಅವನಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದರ ಕುರಿತು ಮಾತಾಡಬೇಕು ಮತ್ತು ಹಿಂದಿನ ಭೇಟಿಯಲ್ಲಾದ ನಮ್ಮ ಸಂಭಾಷಣೆಯ ಆಧಾರದ ಮೇಲೆ ಮಾತುಕತೆಯನ್ನು ಮುಂದುವರಿಸಬೇಕು. ಇದನ್ನೆಲ್ಲ ಮಾಡಲಿಕ್ಕಾಗಿ, ಆಸಕ್ತರನ್ನು ನಾವು ಕಂಡುಕೊಂಡಾಗೆಲ್ಲ ಅವರ ಕುರಿತು ಟಿಪ್ಪಣಿ ಬರೆದಿಟ್ಟುಕೊಳ್ಳುವುದು ಪ್ರಾಮುಖ್ಯ.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ಟಿಪ್ಪಣಿ ಬರೆಯುವಾಗ, ನೀವೇನು ಬರೆಯುತ್ತಿದ್ದೀರೆಂದು ನಿಮ್ಮ ಜೊತೆ ಸೇವೆ ಮಾಡುತ್ತಿರುವವರಿಗೆ ತಿಳಿಸಿ.