ಸರಿಯಾಗಿ ಓದಲು ಬಾರದವರಿಗೆ ಸಹಾಯ ಮಾಡಿ
1. ಸರಿಯಾಗಿ ಓದಲು ಬಾರದವರಿಗೆ ಬೈಬಲಿನ ಕುರಿತು ಕಲಿಸುವಾಗ ಯಾವ ಸಮಸ್ಯೆಗಳು ಎದುರಾಗುತ್ತವೆ?
1 ಸರಿಯಾಗಿ ಓದಲು ಬಾರದ ಮನೆಯವರಿಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಇರಬಹುದು. ಆದರೆ ಬೈಬಲ್ ಅಥವಾ ಇತರ ಯಾವುದೇ ಪುಸ್ತಕ ಎಂದಾಕ್ಷಣ ಅವರು ಹಿಂದೇಟು ಹಾಕಬಹುದು. ಆದ್ದರಿಂದ ಅಂಥ ಜನರಿಗೆ ಮೊದಲ ಭೇಟಿಯಲ್ಲೇ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಕೊಟ್ಟರೆ ಅಷ್ಟೊಂದು ಪರಿಣಾಮಕಾರಿ ಆಗಲು ಸಾಧ್ಯವಿಲ್ಲ. ಹಾಗಾದರೆ ಅವರಿಗೆ ಆಧ್ಯಾತ್ಮಿಕವಾಗಿ ಸಹಾಯ ಮಾಡುವುದಾದರೂ ಹೇಗೆ? ಇದಕ್ಕೋಸ್ಕರ 20 ದೇಶಗಳ ಅನುಭವಸ್ಥ ಪ್ರಚಾರಕರನ್ನು ಇಂಥ ಸಂದರ್ಭಗಳಲ್ಲಿ ಅವರೇನು ಮಾಡುತ್ತಾರೆಂದು ಕೇಳಲಾಯಿತು. ಅವರು ಕೊಟ್ಟ ಸಲಹೆಗಳನ್ನು ಕೆಳಗೆ ಕೊಡಲಾಗಿದೆ.
2. ಸರಿಯಾಗಿ ಓದಲು ಬಾರದವರಿಗೆ ಸಹಾಯ ಮಾಡಲು ಯಾವ ಸಾಧನಗಳು ಪರಿಣಾಮಕಾರಿಯಾಗಿವೆ?
2 ನಿಮ್ಮ ವಿದ್ಯಾರ್ಥಿಗೆ ಸರಿಯಾಗಿ ಓದಲು ಬಾರದಿದ್ದರೆ ಅಥವಾ ಸ್ವಲ್ಪವೂ ಓದಲು ಬಾರದಿದ್ದರೆ ದೇವರ ಮಾತನ್ನು ಆಲಿಸಿ ಅಥವಾ ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಿಗೆಯಿಂದ ಅಧ್ಯಯನವನ್ನು ಆರಂಭಿಸಬಹುದು. ಅಮೆರಿಕದ ಒಬ್ಬ ಪಯನೀಯರ್ ಈ ಎರಡು ಕಿರುಹೊತ್ತಿಗೆಗಳನ್ನು ತೋರಿಸುತ್ತಾ, ಇವುಗಳಲ್ಲಿ ಯಾವುದರಿಂದ ಅಧ್ಯಯನ ಮಾಡಿದರೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆಂದು ಮನೆಯವನನ್ನೇ ಕೇಳುತ್ತಾನೆ. ಈ ಎರಡು ಸಾಧನಗಳು ತುಂಬಾ ಪರಿಣಾಮಕಾರಿ ಎಂದು ಕೀನ್ಯ ದೇಶದ ಬ್ರಾಂಚ್ ಆಫೀಸ್ ವರದಿಸಿತು. ಏಕೆಂದರೆ ಆಫ್ರಿಕದ ಜನರಿಗೆ ಸಾಮಾನ್ಯವಾಗಿ ಪ್ರಶ್ನೋತ್ತರ ಚರ್ಚೆಗಿಂತ ಕಥೆಗಳ ಮೂಲಕ ವಿಷಯಗಳನ್ನು ಕಲಿಸುವುದಾದರೆ ಚೆನ್ನಾಗಿ ಅರ್ಥವಾಗುತ್ತದೆ. ವಿಷಯಭಾಗವನ್ನು ಓದಿ, ಪ್ರಶ್ನೆ ಕೇಳುವ ವಿಧಾನವನ್ನು ಒಬ್ಬ ವಿದ್ಯಾವಂತನು ಸುಲಭವಾಗಿ ಒಪ್ಪಿಕೊಳ್ಳಬಹುದು. ಆದರೆ ಇದೇ ವಿಧಾನ ಅಲ್ಪಸ್ವಲ್ಪ ಓದು ಬರುವವನನ್ನು ಪೇಚಾಟಕ್ಕೆ ಸಿಕ್ಕಿಸಬಹುದು. ಅನೇಕ ಪ್ರಚಾರಕರು ತಮ್ಮ ವಿದ್ಯಾರ್ಥಿಗೆ ಸ್ವಲ್ಪ ಮಟ್ಟಿಗೆ ಓದಲಿಕ್ಕೆ ಬರುವುದಾದರೆ ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಿಗೆಯಿಂದ ಅಥವಾ ಬೈಬಲ್ ಕಥೆಗಳ ನನ್ನ ಪುಸ್ತಕದಿಂದ ಅಧ್ಯಯನ ಮಾಡುತ್ತಾರೆ.
3. ಓದಲು ಬಾರದವರಿಗೆ ಸತ್ಯವನ್ನು ಪರಿಣಾಮಕಾರಿಯಾಗಿ ಕಲಿಸಲು ಅವರ ಕುರಿತು ಯಾವ ಒಳನೋಟ ನಮಗಿರಬೇಕು?
3 ಶ್ಲಾಘಿಸಿ: ಓದಲು ಬಾರದವರು ಸಂಕೋಚ ಪಡಬಹುದು. ಅನೇಕರಲ್ಲಿ ಕೀಳರಿಮೆ ಮನೆ ಮಾಡಿರಬಹುದು. ಅವರಿಗೆ ಸತ್ಯವನ್ನು ಕಲಿಸಬೇಕೆಂದರೆ ಮೊದಲು ನಿಮ್ಮೊಂದಿಗೆ ಅವರು ನಿಸ್ಸಂಕೋಚದಿಂದಿರುವಂತೆ ನೋಡಿಕೊಳ್ಳಿ. ಓದಲು ಬಾರದವರಲ್ಲಿ ಹೆಚ್ಚಿನವರು ಬುದ್ಧಿವಂತರೂ, ಬೇಗನೆ ಕಲಿಯುವವರೂ ಆಗಿರುತ್ತಾರೆ. ಅವರೊಂದಿಗೆ ಗೌರವದಿಂದ ನಡೆದುಕೊಳ್ಳಿ. (1 ಪೇತ್ರ 3:15) ತಮ್ಮ ಪರಿಶ್ರಮ ವ್ಯರ್ಥವಲ್ಲ ಎಂದನಿಸುವುದಾದರೆ ಖಂಡಿತವಾಗಿಯೂ ಅವರು ಅಧ್ಯಯನವನ್ನು ಮುಂದುವರಿಸುತ್ತಾರೆ, ಆಧ್ಯಾತ್ಮಿಕವಾಗಿ ಪ್ರಗತಿಯನ್ನೂ ಮಾಡುತ್ತಾರೆ. ಆದ್ದರಿಂದ ಸಾಧ್ಯವಾದಾಗೆಲ್ಲಾ ಶ್ಲಾಘಿಸುತ್ತಾ ಇರಿ.
4. ಅಧ್ಯಯನಕ್ಕೆ ಮುಂಚಿತವಾಗಿ ತಯಾರಿಸುವಂತೆ ಅಲ್ಪಸ್ವಲ್ಪ ಓದು ಬರುವವರನ್ನು ಹೇಗೆ ಉತ್ತೇಜಿಸಬಹುದು?
4 ನಿಮ್ಮ ವಿದ್ಯಾರ್ಥಿಗೆ ಅಲ್ಪಸ್ವಲ್ಪವೇ ಓದು ಬಂದರೂ ಅಧ್ಯಯನಕ್ಕಾಗಿ ಮೊದಲೇ ತಯಾರಿಸಲು ಪ್ರೋತ್ಸಾಹಿಸಿ. ದಕ್ಷಿಣ ಆಫ್ರಿಕಾದ ಕೆಲವು ಪ್ರಚಾರಕರು, ತಮ್ಮ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ತಯಾರಿಸಲು ಚೆನ್ನಾಗಿ ಓದಲು ಬರುವ ಅವರ ಕುಟುಂಬ ಸದಸ್ಯನ ಅಥವಾ ಸ್ನೇಹಿತನ ಸಹಾಯ ಕೇಳುವಂತೆ ಪ್ರೋತ್ಸಾಹಿಸುತ್ತಾರೆ. ಬ್ರಿಟನ್ನಿನ ಒಬ್ಬ ಪ್ರಚಾರಕನು, ಅಧ್ಯಯನದಲ್ಲಿ ಕೆಲವು ಪ್ಯಾರಗಳನ್ನು ಚರ್ಚಿಸುವಾಗ ಚೆನ್ನಾಗಿ ತಯಾರಿಸಿ ಅಡಿಗೆರೆ ಹಾಕಿದ ತನ್ನ ಪುಸ್ತಕವನ್ನು ವಿದ್ಯಾರ್ಥಿಗೆ ಕೊಡುತ್ತಾನೆ. ಇದರಿಂದ ವಿದ್ಯಾರ್ಥಿಯು ಚೆನ್ನಾಗಿ ತಯಾರಿಸಿ ಅಡಿಗೆರೆ ಹಾಕಿದರೆ ಅಧ್ಯಯನದಲ್ಲಿ ಉತ್ತರಿಸುವುದು ಎಷ್ಟೊಂದು ಸುಲಭ ಎಂದು ಸ್ವತಃ ತಿಳಿದುಕೊಳ್ಳುತ್ತಾನೆ. ಭಾರತದ ಒಬ್ಬ ಸಹೋದರನು ತನ್ನ ವಿದ್ಯಾರ್ಥಿಗೆ ಮುಂದಿನ ವಾರ ಚರ್ಚಿಸುವ ಅಧ್ಯಯನ ಭಾಗದಲ್ಲಿರುವ ಚಿತ್ರಗಳನ್ನು ನೋಡುವಂತೆ, ಅವುಗಳ ಕುರಿತು ಧ್ಯಾನಿಸುವಂತೆ ಉತ್ತೇಜಿಸುತ್ತಾನೆ.
5. ಅಧ್ಯಯನ ನಡೆಸುವಾಗ ನಾವು ಹೇಗೆ ತಾಳ್ಮೆ ತೋರಿಸಬಹುದು?
5 ತಾಳ್ಮೆ ತೋರಿಸಿ: ನೀವು ಯಾವುದೇ ಸಾಹಿತ್ಯ ಉಪಯೋಗಿಸಿ ಅಧ್ಯಯನ ಮಾಡುತ್ತಿದ್ದರೂ, ಮುಖ್ಯಾಂಶಗಳನ್ನು ಒತ್ತಿ ಹೇಳಿ, ಅವುಗಳನ್ನು ನಿಮ್ಮ ವಿದ್ಯಾರ್ಥಿ ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗಿ. ಮೊದ ಮೊದಲು ಕೇವಲ 10-15 ನಿಮಿಷ ಅಧ್ಯಯನ ನಡೆಸಿದರೆ ಉತ್ತಮ. ಒಂದೇ ಸಾರಿ ಅನೇಕ ಪ್ಯಾರಗಳನ್ನು ಆವರಿಸುವ ಬದಲು ಕೆಲವೇ ಪ್ಯಾರಗಳನ್ನು ಚರ್ಚಿಸಿದರೆ ಸಾಕು. ವಿದ್ಯಾರ್ಥಿ ತುಂಬ ನಿಧಾನವಾಗಿ ಓದುವುದಾದರೆ ತಾಳ್ಮೆಗೆಡಬೇಡಿ. ವಿದ್ಯಾರ್ಥಿಗೆ ಯೆಹೋವನ ಕಡೆಗಿನ ಗಣ್ಯತೆ ಹೆಚ್ಚಿದಂತೆ ಅವನಲ್ಲಿ ಚೆನ್ನಾಗಿ ಓದಲು ಕಲಿಯಬೇಕೆಂಬ ಬಯಕೆಯೂ ಹೆಚ್ಚುತ್ತದೆ. ಯೆಹೋವನ ಕಡೆಗೆ ಗಣ್ಯತೆ ಹೆಚ್ಚಬೇಕೆಂದರೆ, ಆರಂಭದಿಂದಲೇ ನಿಮ್ಮ ವಿದ್ಯಾರ್ಥಿಯನ್ನು ಕೂಟಗಳಿಗೆ ಹಾಜರಾಗುವಂತೆ ಆಮಂತ್ರಿಸಿ.
6. ಓದಲು ಕಲಿಯುವಂತೆ ಜನರಿಗೆ ಹೇಗೆ ಸಹಾಯ ಮಾಡಬಲ್ಲೆವು?
6 ಬೈಬಲ್ ವಿದ್ಯಾರ್ಥಿ ಓದಲು ಕಲಿತರೆ ಬಲು ಬೇಗನೆ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುತ್ತಾನೆ. (ಕೀರ್ತ. 1:1-3) ಅನೇಕರು ತಮ್ಮ ವಿದ್ಯಾರ್ಥಿಗಳಿಗೆ ಓದು-ಬರಹ ಕಲಿಸಲು ಪ್ರತಿ ಅಧ್ಯಯನದ ಕೊನೆಯಲ್ಲಿ ಸ್ವಲ್ಪ ಸಮಯವನ್ನು ಬದಿಗಿಟ್ಟಿದ್ದಾರೆ. ಇದಕ್ಕಾಗಿ ಅವರು ಅಪ್ಲೈ ಯುವರ್ಸೆಲ್ಫ್ ಟು ರೀಡಿಂಗ್ ಆ್ಯಂಡ್ ರೈಟಿಂಗ್ ಕಿರುಹೊತ್ತಿಗೆಯನ್ನು ಉಪಯೋಗಿಸಿದ್ದಾರೆ. ಯಾರ ಭಾಷೆಯಲ್ಲಿ ಈ ಕಿರುಹೊತ್ತಿಗೆ ಲಭ್ಯವಿಲ್ಲವೋ ಅಂಥವರು ಓದು-ಬರಹ ಕಲಿಸಲೆಂದೇ ವಿನ್ಯಾಸಿಸಲಾಗಿರುವ ಇತರ ಪುಸ್ತಕಗಳನ್ನು ಉಪಯೋಗಿಸಿದ್ದಾರೆ. ವಿದ್ಯಾರ್ಥಿ ತನ್ನಿಂದ ಕಲಿಯಲು ಸಾಧ್ಯವಿಲ್ಲ ಎಂದು ನಿರುತ್ಸಾಹಗೊಳ್ಳುವುದಾದರೆ, ಈಗಾಗಲೇ ಅವನು ಕಲಿತಂಥ ವಿಷಯಗಳ ಕುರಿತು ತಿಳಿಸುತ್ತಾ ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿ. ಯೆಹೋವನು ಅವನ ಪ್ರಯತ್ನಗಳನ್ನು ಆಶೀರ್ವದಿಸುತ್ತಾನೆಂಬ ಭರವಸೆ ನೀಡಿ, ಸಹಾಯಕ್ಕಾಗಿ ಪ್ರಾರ್ಥಿಸುವಂತೆ ಪ್ರೋತ್ಸಾಹಿಸಿ. (ಜ್ಞಾನೋ. 16:3; 1 ಯೋಹಾ. 5:14, 15) ಬ್ರಿಟನ್ನಿನ ಕೆಲವು ಪ್ರಚಾರಕರು ತಮ್ಮ ವಿದ್ಯಾರ್ಥಿಗಳು ಹಂತ ಹಂತವಾಗಿ ಮುಟ್ಟಸಾಧ್ಯವಿರುವ ಗುರಿಗಳನ್ನಿಡುವಂತೆ ಪ್ರೋತ್ಸಾಹಿಸುತ್ತಾರೆ. ಮೊದಲು ಅಕ್ಷರಮಾಲೆಗಳನ್ನು ಕಲಿಯುವ, ನಂತರ ಕೆಲವು ನಿರ್ದಿಷ್ಟ ವಚನಗಳನ್ನು ತೆರೆದು ಓದುವ ಮತ್ತು ಕೊನೆಗೆ ಬೈಬಲಾಧಾರಿತ ಸರಳೀಕೃತ ಸಾಹಿತ್ಯಗಳನ್ನು ಓದುವ ಗುರಿಗಳನ್ನಿಡಲು ಅವರು ಪ್ರೋತ್ಸಾಹಿಸುತ್ತಾರೆ. ಜನರಿಗೆ ಓದಲು ಕಲಿಯುವಂತೆ ಸಹಾಯ ಮಾಡಬೇಕೆಂದರೆ ಅವರಿಗೆ ಓದುವುದು ಹೇಗೆಂದು ಕಲಿಸಿದರಷ್ಟೇ ಸಾಲದು, ಅವರಲ್ಲಿ ಆ ಬಯಕೆಯನ್ನೂ ಮೂಡಿಸಬೇಕು.
7. ನಾವು ಸರಿಯಾಗಿ ಓದಲು ಬಾರದವರಿಗೆ ಸತ್ಯವನ್ನು ತಿಳಿಸಲು ಹಿಂದೇಟು ಹಾಕಬಾರದು ಏಕೆ?
7 ಕಡಿಮೆ ವಿದ್ಯಾಭ್ಯಾಸ ಇರುವವರನ್ನು ಯೆಹೋವನು ಕೀಳಾಗಿ ನೋಡುವುದಿಲ್ಲ. (ಯೋಬ 34:19) ಆತನು ಜನರ ಹೃದಯಗಳನ್ನು ನೋಡುತ್ತಾನೆ. (1 ಪೂರ್ವ. 28:9) ಆದ್ದರಿಂದ ಸರಿಯಾಗಿ ಓದಲು ಬಾರದವರಿಗೆ ಸತ್ಯವನ್ನು ತಿಳಿಸಲು ಹಿಂದೇಟು ಹಾಕಬೇಡಿ. ಅಧ್ಯಯನವನ್ನು ಆರಂಭಿಸಲು ನಿಮಗೆ ಅನೇಕ ಅತ್ಯುತ್ತಮ ಸಾಧನಗಳಿವೆ. ಅವುಗಳನ್ನು ಉಪಯೋಗಿಸುತ್ತಾ ಬೈಬಲ್ ಅಧ್ಯಯನ ಆರಂಭಿಸಿ. ಕ್ರಮೇಣ ಬೈಬಲ್ ಬೋಧಿಸುತ್ತದೆ ಪುಸ್ತಕದ ಮೂಲಕ ಅಧ್ಯಯನ ಮಾಡಬಹುದು. ಹೀಗೆ ಬೈಬಲ್ ವಿಷಯಗಳ ಅರ್ಥವನ್ನು ಪೂರ್ತಿಯಾಗಿ ಕಲಿಸಬಹುದು.
ಓದಲು ಬಾರದವರು ಸಂಕೋಚ ಪಡಬಹುದು. ಅನೇಕರಲ್ಲಿ ಕೀಳರಿಮೆ ಮನೆ ಮಾಡಿರಬಹುದು. ಅವರಿಗೆ ಸತ್ಯವನ್ನು ಕಲಿಸಬೇಕೆಂದರೆ ಮೊದಲು ನಿಮ್ಮೊಂದಿಗೆ ಅವರು ನಿಸ್ಸಂಕೋಚದಿಂದಿರುವಂತೆ ನೋಡಿಕೊಳ್ಳಿ